ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಣ್ಣವಿಲ್ಲದೆ ಚಿನ್ನ ನಾಮಕ್ಕರ್ಹನಾದ ಪರಿ ಇನ್ನೆಂತಯ್ಯಾ. ಹೂವೊಣಗಿ ವಾಸನೆ ಮುಡಿದ ಠಾವಿನಲ್ಲಿ ವಾಸನೆ ನಿಂದುಲ್ಲವೆ? ಅಯ್ಯಾ. ಕ್ರೀಶುದ್ಧವಾದದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಂಗವು ಭಾವಶುದ್ಧವಾಗಿರ್ಪನು.
--------------
ಸಿದ್ಧರಾಮೇಶ್ವರ
ಬಯಸುವೆನಯ್ಯಾ ನಿನ್ನವರ ಸಂಗವ ಎಳಸುವೆನಯ್ಯಾ ನಿನ್ನವರ ಸಂಗಕ್ಕೆ ಬಯಕೆ ಬೇರನ್ಯಕ್ಕೆಳಸದಂತೆ ಹರುಷಿತನ ಮಾಡಯ್ಯಾ ಭಕ್ತಿಯೊಳಗೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಡವರ ಭೋಜನ ಭೋಗಿಸಿದವ ಭವಾನೀಪುತ್ರ ನೋಡಯ್ಯಾ. ಕಡವರನ ಎಡೆಗೊಂಡವ ವಿಷ್ಣುವಿನ ವಂಶದವ ನೋಡಯ್ಯಾ. ಬಡವರ ಭೋಜನ ಅಮೃತ ಸೇವನೆ; ಕಡವರನಮೃತ ಸುರಾಪಾನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಭಕ್ತಿಯ. ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಜ್ಞಾನವ. ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ. ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮಗೂ ಎನಗೂ ಬಸವಣ್ಣನೆ ಶಿವಪಥಿಕನಯ್ಯಾ.
--------------
ಸಿದ್ಧರಾಮೇಶ್ವರ
ಬಸವಣ್ಣನ ಮನೆಯ ಸ್ವಾನಂದ ನೋಡಿದಡೆ, ಎನ್ನ ಮನ ಬೇಸರವಾಗದೆ ಶಿವದಾಸನೆಂದು ಜೀವನ್ಮುಕ್ತನೆಂದು ಹೊಗಳುವೆನಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನ ಪ್ರಭುವೆ
--------------
ಸಿದ್ಧರಾಮೇಶ್ವರ
ಬ್ರಹ್ಮ ಪೂಜಿಸುವ, ವಿಷ್ಣು ಪೂಜಿಸುವ, ಇಂದ್ರ ಪೂಜಿಸುವ, ರವಿ ಪೂಜಿಸುವ, ಚಂದ್ರ ಪೂಜಿಸುವ- ಅಂದಂಂಗೆ ಬಂದ ಸುಖದುಃಖಗಳನುಣ್ಕಪ್ಪರು. ಅದು ಕಾರಣ, ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ. ಪ್ರಾಸಾದಂಗಪ್ರಾಣಿಗಳಿಗೆ ಭವವಿಲ್ಲ, ಸಂದಿಲ್ಲ ; ಇದು ನಿಶ್ಚಯ, ನಂಬು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಾಣೆ.
--------------
ಸಿದ್ಧರಾಮೇಶ್ವರ
ಬಸವಣ್ಣನ ಸಮತೆ ಎನಗಾಗದಯ್ಯಾ. ಅಯ್ಯಾ, ಲಿಂಗಸ್ಥಲ-ಜಂಗಮಸ್ಥಲ-ಪ್ರಸಾದಸ್ಥಲ ನಿನಗಾಗದಯ್ಯಾ. ತ್ರಿವಿಧ ಸಕೀಲಸಂಬಂಧವನರಿದಡೆ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ, ಇತ್ತ ಬಾ ಎಂದೆತ್ತಿಕೊಳ್ಳನೆ ಅಯ್ಯ!
--------------
ಸಿದ್ಧರಾಮೇಶ್ವರ
ಬ್ರಹ್ಮನಾದಡಾಗಲಿ, ವಿಷ್ಣುವಾದಡಾಗಲಿ, ಇಂದ್ರನಾದಡಾಗಲಿ, ಚಂದ್ರನಾದಡಾಗಲಿ, ಎಮ್ಮ ಶಿವಶರಣರ ನೋವು ಎನ್ನ ನೋವು ನೋಡಾ. `ಅವರನೊರಸುವೆನುರುಹುವೆ'ಯೆಂದು ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ನೊಸಲ ಕಣ್ಣಿಂಗೆ ಬೆಸನನಿತ್ತಡೆ, ನಿಲಬಲ್ಲ ಗರುವರನಾರನೂ ಕಾಣೆ.
--------------
ಸಿದ್ಧರಾಮೇಶ್ವರ
ಬ್ರಹ್ಮನ ಪೂಜಿಸಿ ಸೃಷ್ಟಿಗೊಳಗಾಗುವುದ ಬಲ್ಲೆ. ರುದ್ರನ ಪೂಜಿಸಿ ಲಯಕ್ಕೊಳಗಾಗುವುದ ಬಲ್ಲೆ. ನಮ್ಮಿಷ್ಟಲಿಂಗಮೂರ್ತಿಯ ಪೂಜಿಸಿ ಲಿಂಗವಾಗಿ ಸರ್ವವಳಿವುದ ಬಲ್ಲೆ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬಾರ[ದೆ] ಗಂಡ, ಬಡವಾ[ದೆ] ಉಣ್ಣ್ಲದ್ವೆ ಗಂಡ, ಉಪವಾಸವಿ[ದ್ದೆ] ನನ್ನ ಕಣ್ಣ ನೀರು ನಿನ್ನ ಕಣ್ಣ ತಾಗಲೊ ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಬಗೆಬಗೆದು ನೋಡಿದಡೆ ದೇಹವೆಲ್ಲ ಮೂರು ಮಾತ್ರೆಯಿಂದಾದುವಯ್ಯಾ. ಸ್ಥೂಲದೇಹ ಅಕಾರಪ್ರಣವ, ಸೂಕ್ಷ್ಮದೇಹ ಉಕಾರ ಪ್ರಣವ, ಕಾರಣದೇಹ ಮಕಾರಪ್ರಣವ, ಮೂರು ಮಾತ್ರೆ ಏಕವಾದಲ್ಲಿ ಓಂಕಾರವಾಯಿತ್ತು. ತತ್ಪ್ರಣವಕ್ಕೆ ಸಾಕ್ಷಿಯಾಗಿ ನಿಂದೆ; ನಿಂದೆನೆಂಬುದಕ್ಕೆ ಅನಿರ್ವಾಚ್ಯ ಪ್ರಣವವಾದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬಾಣನವನೊಬ್ಬ ಲಿಂಗಪೂಜಕ. ಮಾದಾರ ಚೆನ್ನಯ್ಯನವನೊಬ್ಬ ಲಿಂಗಪೂಜಕ. ಈ ಕಪಿಲಸಿದ್ಧಮಲ್ಲಿಕಾರ್ಜುನನ ಮಹಾಮಂದಿರದಲ್ಲಿ ನಾನೊಬ್ಬ ಲಿಂಗಪೂಜಕ.
--------------
ಸಿದ್ಧರಾಮೇಶ್ವರ
ಬೇಡಿ ಉಂಡವ ಬೇಡದುದ ಬೇಡನೆ ಅಯ್ಯಾ? ಬೇಡಲಾರದವ ಬೇಡದುದ ಬೇಡನಯ್ಯಾ. ಕಾಡಿದ ಜಂಗಮ ಈಡಾಡಿದನಯ್ಯಾ ಭಕ್ತನ. ಬೇಡದ ಜಂಗಮ ಭಕ್ತನ ಕೂಡಿಕೊಂಡ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬಹುಪರಿಯ ಪುಷ್ಪದಲಿ ಹೊಸಪರಿಯ ಜಲದಲ್ಲಿ ಎಸೆದಿಪ್ಪ ಲೋಕ ಬ್ರಹ್ಮಾಂಡಗಳ ಮುಸುಕಿಪ್ಪ ಶಕ್ತಿಯ ಹಸಿಯ ಮಸ್ತಕದಲ್ಲಿ ಒಸೆದು ಅರ್ಚಿಪನಾತ ಪರಮಯೋಗಿ. ಸಾಗರದ ಮೇಲಿಪ್ಪ ಯೋಗಪಂಚಮದಲ್ಲಿ ಭೋಗಿಪನು ನಿತ್ಯತೃಪ್ತನಾಗಿ. ಮೇಲಿಪ್ಪ ಕಳೆಗಳಲಿ ತೋರಿಪ್ಪ ಸತ್ವದಲ್ಲಿ ತಾನಿಪ್ಪನೈ ಗುರು ಶ್ರೀ ಕಪಿಲಸಿದ್ಧಮಲ್ಲೇಶ್ವರಾ.
--------------
ಸಿದ್ಧರಾಮೇಶ್ವರ
ಬಂದು ಬಂದು ಹೋಗರಾ, ಮನವೆ. ನಿಂದು ನಿಂದು ನಡೆಯರಾ, ಮನವೆ. ಬಂದು ಬಂದು ನೀನಿಂಧುದರ ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸು, ಮನವೆ.
--------------
ಸಿದ್ಧರಾಮೇಶ್ವರ
ಬಸವಾ ಬಸವಾ ಎಂಬ ಶಬ್ದವಡಗಿತ್ತು. ಬಸವಾ ಬಸವಾ ಎಂಬ ಕಂಬ ಮುರಿಯಿತ್ತು. ಬಸವಾ ಬಸವಾ ಎಂಬ ಮಾಟ ನಷ್ಟವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ 
--------------
ಸಿದ್ಧರಾಮೇಶ್ವರ
ಬಯಸರು ಬಯಸರು ಅನ್ಯೋನ್ಯವನು. ನೀನು ಬಯಸಿದಂತಾಗದದು, ನಿಬ್ಬಯಕೆಯು ತನುವಿನೊಳಗಳವಡಲು ಮನ ಮಹಾ ಸಾಯುಜ್ಯಪದವ ಮೀರಿಪ್ಪುದೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಸವಣ್ಣ ಬಸವಣ್ಣ ಭಕ್ತಿ ಬೀಜ ನಷ್ಟ. ಬಸವಣ್ಣ ಬಸವಣ್ಣ ಬಸವಣ್ಣ ಮುಕ್ತಿಬೀಜ ನಷ್ಟ. ಬಸವಣ್ಣ ಮೋಕ್ಷವೆಂಬುದು ಮುನ್ನವೆ ಅಡಗಿತ್ತು. ಬಸವಣ್ಣ ತೋರದೆ ಬೀರದೆ ಹೋದೆಹೆನೆಂಬೆ, ಮಹಾಜ್ಞಾನಿ ಬಸವಣ್ಣಾ, ನೀನೆಲ್ಲಿಯಡಗಿದೆಯೊ ಕಪಿಲಸಿದ್ಧಮಲ್ಲಿನಾಥ ಬಸವಾ?
--------------
ಸಿದ್ಧರಾಮೇಶ್ವರ
ಬಲ್ಲೆ ಬಲ್ಲೆ ನಿನ್ನ, ಜನನ ಮರಣಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ ನಿನ್ನ, ಕಾಲಕಲ್ಪಿತಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ, ನೀನು ಮಹಾನಿತ್ಯ ಮಂಗಳನೆಂಬುದ. ಬಲ್ಲೆ ಬಲ್ಲೆ, ನೀನು ಸತ್ಯಶುದ್ಧದೇವನೆಂಬುದ. ಬಲ್ಲೆ ಬಲ್ಲೆ, ನೀನು ಫಲಪದವ ಮೀರಿದನೆಂಬುದ. ಬಲ್ಲೆ ಬಲ್ಲೆ, ನೀನು ಉರುತರ ಲೋಕಪ್ರಕಾಶನೆಂಬುದ. ಬಲ್ಲೆ ಬಲ್ಲೆ, ನೀನು ಪರಿಭವಕ್ಕೆ ಬಾರನೆಂಬುದ. ಬಲ್ಲೆ ಬಲ್ಲೆ, ನೀನು ಕಾಲನ ಕಮ್ಮಟಕ್ಕೆ ಸಲ್ಲನೆಂಬುದ. ಎನ್ನ ಬಲ್ಲತನಕ್ಕೆ ಮಂಗಳವನೀಯೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದ್ವಾರಂಗಳಲ್ಲಿ ತಪ್ಪದೆ ಬಪ್ಪಾಗ ಆನು ನಿನ್ನೊಡನೆ ಬಾರದೆ ಉಳಿದುದುಂಟೆ? ಆನೇನು ಭೇದವಾಗಿಪ್ಪೆನೆಲೆ ಅಯ್ಯಾ. ಸಂದು ಸವೆದು ಹಂಗು ಹರಿದು ಲೀಯ ಒಳಗಾಗಿದ್ದ ಎನ್ನ ನೋಡದೆ ಇಪ್ಪುದು ಅದಾವ ಗರುವತನ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಸವನ ಹಾಡದರ, ಬಸವನ ಹೊಗಳದರ ಬಸವಾಕ್ಷರತ್ರಯದ ಜಪವಿಲ್ಲದ ದೆಸೆಗೇಡಿ ಮನುಜರ ಎನ್ನತ್ತ ತೋರದಿರಯ್ಯಾ, ತಂದೆ ವಿಷಮಾಕ್ಷ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಬಂದೊಮ್ಮೆ ಜಪಿಸುವುದಾಗದಿರೆ, ನಿಂದೊಮ್ಮೆ ನೆನೆಯಬೇಕು ನೋಡಾ, ಮಂತ್ರ ಮೂರನು. ಬಂದೊಮ್ಮೆ ಜಪಿಸುವುದಾಗದಿರೆ, ನಿಂದೊಮ್ಮೆ ನೋಡಬೇಕು ನೋಡಾ, ಕಪಿಲಸಿದ್ಧಮ್ಲಕಾರ್ಜುಲಿಂಗವ.
--------------
ಸಿದ್ಧರಾಮೇಶ್ವರ
ಬಸವಣ್ಣನ ನೆನೆದು ಮಾಡುವ ಭಕ್ತಿ ನಡೆವುದಯ್ಯಾ; ಬಸವಣ್ಣನ ನೆನೆಯದೆ ಮಾಡುವ ಭಕ್ತಿ ಎಳತಟವಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಬಿಳಿಯ ತತ್ತಿಯೊಳಗೆ ಹಲವು ಬ್ರಹ್ಮಾಂಡವೈ, ಒಲವಿಂದಪ್ಪವವು ಸಮತೆ. ತಾಯ ಹಲವು ತತ್ತಿಯನಿಟ್ಟು ಮರಳಿ ಆಡುತ್ತಿಪ್ಪುದದು ಕರುಣ ಸಮತೆಯ ಸಾಕ್ಷಿಯೆನಿಪ ಭಕ್ತಿ. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನು ಇಂಥ ಸಕಲವನು ಧರಿಸಿ ಶರಣರ ಕರದಲಿ.
--------------
ಸಿದ್ಧರಾಮೇಶ್ವರ
ಬೇಡ ಬೇಡಯ್ಯ ಕಾಡಲಾಗದು ಎನ್ನ ರೂಢೀಶ ನೀನೆನ್ನ ತಡಿಗೆ ಚಾಚಾ. ಗಾಡಿಗತನದಿಂದ ನೋಯಿಸಿದಡೆ ನೋಡಿ ಮೊರೆಯಿಡುವೆನೈ ಬಸವಣ್ಣಂಗೆ. ಆರೂಢನೆ ನಿಮ್ಮ ಗಾರುಮಾಡಿಸುವರೆಮ್ಮವರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬಂದಲ್ಲುಪಚರಿಸುವುದಲ್ಲದೆ, ನಿಂದ ನಿಂದಲ್ಲುಪಚರಿಸುವುದು ಭಕ್ತಿಯ ಕೊಂಕು ನೋಡಯ್ಯಾ. ಉಪಚಾರಕ್ಕೆ ಬಂದಾತ ಜಂಗಮನ ನೋಡಯ್ಯಾ; ಉಪಚರಿಸಿದವ ಭಕ್ತನಲ್ಲ. ಅನುಭವಕ್ಕೆ ಬಂದಿಹನಯ್ಯಾ ಜಂಗಮನು, ಅನುಭವಕ್ಕೆ ಮಾಡುವನಯ್ಯಾ ಉಪಚಾರವ ಭಕ್ತನು, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...