ಅಥವಾ
(6) (13) (1) (2) (0) (0) (0) (0) (0) (0) (0) (3) (0) (0) ಅಂ (1) ಅಃ (1) (1) (0) (2) (1) (0) (2) (0) (1) (0) (0) (0) (0) (0) (0) (0) (6) (0) (1) (0) (4) (5) (0) (5) (2) (3) (0) (2) (0) (0) (0) (3) (0) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೆಡಗು : ಕೊಡಲಿ ಪಿಡಿದಲ್ಲದೇ ಕಾಡು ಕಡಿಯದು. ಆ ಕಾಡ ಕಡಿದಲ್ಲದೆ ಕಲ್ಪವೃಕ್ಷದ ವನವು ಕಾಣದು. ಆ ಕಲ್ಪವೃಕ್ಷದ ವನವ ಕಂಡಡೂ, ಆ ಕಲ್ಪವೃಕ್ಷದ ವನವನಳಿದಲ್ಲದೆ ಕದಳಿಯು ಸಿಗದು. ಆ ಕದಳಿಯ ಸುಲಿದು ಒಳಪೊಕ್ಕಲ್ಲದೆ ನಿಜವು ತಿಳಿಯದು. ಆ ನಿಜವು ತಿಳಿದಲ್ಲದೆ ನಿರ್ಬಯಲು ತಾನಾಗದು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಬೈಲ ಬ್ರಹ್ಮವು ತನ್ನ ಬೈಲಿನೊಳಗೆ ತಾನೆ ಬೈಲುರೂಪವಾಗಿ ಬೈಲಾದುದು ತಾನೆ | ಪಲ್ಲ | ಜಾರನೋರ್ವಗೆ ಸುತರು ನೂರೆಂಟು ಹುಟ್ಟಿಹರು ಚೋರತನಕ್ಕೆ ಬಿದ್ದು ಹೋರುವ ತಾನೆ ಚೋರತನಕೆ ಬಿದ್ದು ಹೋರುವ ಮಕ್ಕಳ ಜಾರ ತಾ ಕೊಂದು ಅಳಿವನು ತಾನೆ. | 1 | ಪುಂಡಪುಂಡರು ಕೂಡಿ ದಂಡೆತ್ತಿ ಬರುವರು ಕಂಡಕಂಡ್ಹಂಗೆ ಕಡಿದಾಡಿ ತಾನೆ. ಕಂಡಕಂಡ್ಹಂಗೆ ಕಡಿದಾಡಿ ಆ ದಂಡು ಬಂಡಾಟವಾಗಿ ಹೋಗುದು ತಾನೆ. | 2 | ಇರವಿಯ ದಂಡೆದ್ದು ಧರೆಯೆಲ್ಲ ಮುತ್ತುವುದು ನರರಿರುವುದಕ್ಕೆ ನೆಲೆಯಿಲ್ಲ ತಾನೆ. ನರರಿರುವುದಕ್ಕೆ ನೆಲೆಯಿಲ್ಲದಂತಾಗಿ ಧರೆ ಉರಿದಿರಿವಿ ಅಳಿವುದು ತಾನೆ. | 3 | ಇದ್ದ ದೈವಗಳೆಲ್ಲ ಬಿದ್ದುರುಳಿ ಹೋದಾವು ಸುದ್ದಿ ಕೇಳೋರ್ವ ಬರುವನು ತಾನೆ ಸುದ್ದಿ ಕೇಳೋರ್ವ ಬಂದು ತಾ ಮಾಡಿದ ಬುದ್ಧಿಂದ ಸೀಮಾ ನೇಮವು ತಾನೆ. | 4 | ಮಾಡಿದ ನೇಮ ಸೀಮಾ ಮಾಡಿದಂತಿರದೆ ತಾ ಕೂಡೋದು ಜಾತಿಸಂಕರ ತಾನೆ ಕೂಡೋದು ಜಾತಿಸಂಕರವಾಗಲು ರೂಢಿಯೊಳಗೆ ಮಹಾಶ್ಚರ್ಯವು ತಾನೆ. | 5 | ಹಿಂದೆ ಬಸವರಾಜ ಬಂದು ತೋರಿದ ಮಹತ್ವಕ್ಕೆ ಅಂದೇ ಆಯಿತು ವಿಘ್ನ ಪ್ರಮಥರಿಗೆ ತಾನೆ ಅಂದಾದ ವಿಘ್ನಕ್ಕೆ ಪ್ರಮಥರು ತಾವೆಲ್ಲಾ ಮುಂದಾಗುವದು ಸೂಚಿಸಿದರು ತಾನೆ. | 6 | ಮುಂದಾದುದು ತಾನೆ ಮುಂದೇನಾಗುವದು ಅದ ರಂದವ ಅರಿಯದೆ ಉಳುವಿಟ್ಟರು ತಾನೆ ಅಂದವರಿಯದೆ ತಾವು ಉಳುವಿಟ್ಟು ಹೋದ ಕಾರಣ ಬಂದುಹೋಗುವದು ಭವವುಂಟು ತಾನೆ. | 7 | ಚನ್ನಣ್ಣ ಬರುವದು ಬಿನ್ನಣ ಮುಂದುಂಟು ಚನ್ನಣ್ಣನಿಂದೇನಾಗುವದು ತಾನೆ ಚನ್ನಣ್ಣನಿಂದೇನಾಗದಿರಲು ಆಗ ತನ್ನ ತಾ ತಿಳಿದು ನಿಜವಹ ತಾನೆ | 8 | ಆರು ಕೂಡಿಸಿದರೆ ಕೂಡದು ಆರು ಅಗಲಿಸಿದರೆ ಅಗಲದು ಆರಿಗೆ ಆರಾಗಿ ಮೀರುವದು ತಾನೆ ಆರಿಗೆ ಆರಾಗಿ ಮೀರುವ ಮಾತಿಗೆ ಘೋರಾಟವಾಯಿತು ಬಹುಜನ್ಮ ತಾನೆ | 9 | ಒಂದೊಂದು ಜೀವದಿಂದೆ ಮುಂದೊಮ್ಮೆ ಸರ್ವಜೀವವು ಹೊಂದಿ ಹೋಗುವದು ಲಯವಾಗಿ ತಾನೆ ಹೊಂದಿ ಹೋಗುವದು ಲಯವಾಗಿ ಅದರೊಳ್ ಬಂದುಳಿದು ಹಲವಾಗುವದು ತಾನೆ | 10 | ನಿಷೆ* ನೆಲೆಗೊಳಿಸಿ ನಿಷೆ*ಯೊಳ್ ಅಳಿವರು ನಿಷೆ* ಉಳ್ಳವರು ನಿಜವಲ್ಲ ತಾನೆ ನಿಷೆ*ಯುಳ್ಳವರು ನಿಜವಲ್ಲ ಇದರಂತೆ ದುಷ್ಟರು ದುಷ್ಟರೊಳ್ ಅಳಿವರು ತಾನೆ | 11 | ಅಳಿದದ್ದು ಅಳಿವುದು ಉಳಿದದ್ದು ಉಳಿವುದು ಇಳೆಯು ನೀರೊಳ್ ಕರಗುವದು ತಾನೆ ಇಳೆಯು ನೀರೊಳು ಕರಗಿದ ಕಾಲಕ್ಕೆ ಬಲವಂತನೊಬ್ಬನು ಬರುವನು ತಾನೆ | 12 | ಬಲವಂತ ಬಂದಾಗ ನೆಲಜಲ ನೆಲಮಾಡಲು ಹಲವುಕಾಲ ಮತ್ತಾಗುವದು ತಾನೆ ಹಲವುಕಾಲ ಮತ್ತಾಗುವದು ಈ ಪರಿ ನೆಲೆಯೊಳಳಿವು ಸಾಕಾರಕ್ಕೆ ತಾನೆ | 13 | ಆರಾರ ವ್ಯಾಳ್ಯಕ್ಕೆ ಮೀರುವದು ಈ ಭೂಮಿ ನೀರೊಳು ಕೂಡಿ ನೀರಾಗುವದು ತಾನೆ ನೀರೊಳು ಕೂಡಿ ನೀರಾಗಿರಲು ಆ ನೀರು ನೀರರ್ತು ಅಗ್ನಿ ಆಗುವದು ತಾನೆ | 14 | ಅನಲಾನ ಉರಿನುಂಗಿ ಅನಿಲಾನ ಒಳಕೊಂಡು ಅನುವಾಯಿತು ಆಕಾಶ ಆತ್ಮನೊಳು ತಾನೆ ಅನುವಾಯಿತು ಆತ್ಮನೊಳು ಆಕಾಶ ಆ ಆತ್ಮ ಚಿನುಮಯನೊಳಗೆ ತನುಮಯ ತಾನೆ | 15 | ಲೀಲವನುಳಿದು ತಾ ಲೀಲವಾಗಲು ಮಹಾಂತ ಮೂಲೋಕವೆಲ್ಲಾ ಸಾಲೋಕ್ಯ ತಾನೆ ಮೂಲೋಕವೆಲ್ಲಾ ಸಾಲೋಕ್ಯವೆಲ್ಲುಂಟು ಲೀಲ ಮೇಲಾಗಿ ತಾನಹನು ತಾನೆ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಬಂದದ್ದು ಅತಿಗಳೆಯದೆ, ಬಾರದ್ದು ಬಯಸದೆ ಷಡ್ರಸವನೊಂದುಮಾಡಿಕೊಂಡು ಸವಿದುಂಡು ಚಿಂತೆಗೆಟ್ಟು ಸಂತೋಷವು ಅಳವಟ್ಟು ನಗಿಗೆ ಹಗೆಗೆ ಒಂದಾಗಿ, ಝಗಝಗನೆ ಹೊಳೆದು ವೈರಾಗ್ಯವೇ ಆರೋಗ್ಯವಾಗಿ ಭವರೋಗಬ್ಯಾನಿಗೆ ನೆಲಿಯಾಗಿ ಸತ್ತು ಸತ್ತು ಹೋಯಿತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಬಂದು ಬಂದದ್ದರಿಯರಿದೆ, ಹೋಗಿ ಹೋದದ್ದರಿಯದೆ, ಇದ್ದು ಇದ್ದದ್ದರಿಯದೆ, ನೊಂದು ನೊಂದದ್ದರಿಯದೆ, ಕೆಟ್ಟು ಕೆಟ್ಟದ್ದರಿಯದೆ, ಎಂಬತ್ನಾಲ್ಕುಲಕ್ಷ ಜೀವರಾಶಿ, ಯೋನಿದ್ವಾರದಲ್ಲಿ ತಿರುತಿರುಗಿ ಬಂದದ್ದನ್ನರಿಯದೆ, ಏನೂ ಏನರಿಯದ್ಹಾಂಗೆ ಅರಿತು ಅರಿಯದ್ಹಾಂಗೆ ಇರ್ದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಬ್ರಹ್ಮನೆಂಬ ಪೂಜಾರಿಗೆ ಬ್ರಹ್ಮನೇ ಅಧಿದೈವನಾಗಿ ಪೂರ್ವದಿಕ್ಕಿನೊಳು ಭಕ್ತಿಸ್ಥಲವೆನಿಸಿತ್ತು. ವಿಷ್ಣುನೆಂಬ ಪೂಜಾರಿಗೆ ವಿಷ್ಣುವೆ ಅಧಿದೈವನಾಗಿ ಪಶ್ಚಿಮದಿಕ್ಕಿನೊಳು ಮಹೇಶ್ವರಸ್ಥಲವೆನಿಸಿತ್ತು. ರುದ್ರನೆಂಬ ಪೂಜಾರಿಗೆ ರುದ್ರನೇ ಅಧಿದೈವನಾಗಿ ದಕ್ಷಿಣದಿಕ್ಕಿನೊಳು ಪ್ರಸಾದಿಸ್ಥಲವೆನಿಸಿತ್ತು. ಈಶ್ವರನೆಂಬ ಪೂಜಾರಿಗೆ ಈಶ್ವರನೇ ಅಧಿದೈವನಾಗಿ ಉತ್ತರದಿಕ್ಕಿನೊಳು ಪ್ರಾಣಲಿಂಗಿಸ್ಥಲವೆನಿಸಿತ್ತು. ಸದಾಶಿವನೆಂಬ ಪೂಜಾರಿಗೆ ಸದಾಶಿವನೇ ಅಧಿದೈವನಾಗಿ ಊಧ್ರ್ವದಿಕ್ಕಿನೊಳು ಶರಣಸ್ಥಲವೆನಿಸಿತ್ತು. ಮಹಾದೇವನೆಂಬ ಪೂಜಾರಿಗೆ ಮಹಾದೇವನೇ ಅಧಿದೈವನಾಗಿ ಪಾತಾಳದಿಕ್ಕಿನೊಳು ಐಕ್ಯಸ್ಥಲವೆನಿಸಿತ್ತು. ಇಂತು ತತ್ವವನೆ ಅರಿತು ನನ್ನ ನಾ ಮರೆತು ನಿನ್ನೊಳು ಬೆರೆತೆನಾಗಿ ನೀ ನಾನೆಂಬ ಉಭಯ ಭೇದವನಳಿಸಿ ಸಂದಿಲ್ಲದೆ ಒಂದಾಗಿ ತೋರ್ದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ