ಅಥವಾ

ಒಟ್ಟು 66 ಕಡೆಗಳಲ್ಲಿ , 11 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆಂಬ ಮಂಟಪದ ನೆಳಲಲ್ಲಿ ನೆನೆಹೆಂಬ ಜಾÕನಜ್ಯೋತಿಯ ಬೆಳಗನಿಟ್ಟು ಘನಪುರುಷ ಪವಡಿಸೈದಾನೆ, ಎಲೆ ಅವ್ವಾ. ಅದನೊಂದೆರಡೆನ್ನದೆ ಮೂರು ಬಾಗಿಲ ಮುಚ್ಚಿ ನಾಲ್ಕ ಮುಟ್ಟದೆ ಐದ ತಟ್ಟದೆ ಇರು ಕಂಡಾ, ಎಲೆ ಅವ್ವಾ. ಆರೇಳೆಂಟೆಂಬ ವಿಹಂಗಸಂಕುಳದ ಉಲುಹು ಪ್ರಬಲವಾದಡೆ, ಕಪಿಲಸಿದ್ಧಮಲ್ಲಿಕಾರ್ಜುನನು ನಿದ್ರೆಗೆಟ್ಟಲ್ಲಿರನು.
--------------
ಸಿದ್ಧರಾಮೇಶ್ವರ
ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ, ಸಂದು ಭೇದವಳಿವ ಪರಿ ಎಂತು ಹೇಳಾ ಅಂಗದಲ್ಲಿ ಸಂಗವ ಮಾಡಿಹೆನೆಂದಡೆ, ಮುಂದುಗೆಡಿಸಿ ಕಾಡುವನು ಶಿವನು. ಕಾಮವೆಂಬ ಬಯಕೆಯಲ್ಲಿ ಅಳಲಿಸುವ ಬಳಲಿಸುವ ಶಿವನು. ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ, ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು. ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು. ಕೂಡಲಸಂಗಮದೇವರ ಬೆರಸುವಡೆ, ಬ್ಥಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.
--------------
ಬಸವಣ್ಣ
ನಲ್ಲನ ನೋಟದ ಬೇಟದ ಕೂಟದ ಪರಿಯ ನಾನೇನೆಂದು ಹೇಳುವೆ? ವಿಪರೀತ ಕೆಳದಿ. ಕೂಟದ ಸುಖದಲ್ಲಿ ನೋಟ ಕಂಬೆಳಗಾದಡೆ ಬೇಟ ಬೇರುಂಟೆ? ಹೇಳು ಅವ್ವಾ. ನೋಡಿದ ದೃಷ್ಟಿ ಎವೆಗುಂದದೆ? ಮೋಹದ ಪರಿ ಎಂತುಂಟು? ಹೇಳಾ ಅವ್ವಾ. ನೋಟ ಬೇಟ ಕೂಟ ಸಮಸುಖ ಸಮರತಿಯಾದಡೆ ಕಪಿಲಸಿದ್ಧಮಲ್ಲಿನಾಥಯ್ಯಾ ಬೇರಿಲ್ಲವವ್ವಾ.
--------------
ಸಿದ್ಧರಾಮೇಶ್ವರ
ಹೆತ್ತ ತಾಯಿ ನೀನೆ ಅವ್ವಾ; ನನ್ನ ಹತ್ತಿರ ಬಂದಾಕೆ ನೀನೆ ಅವ್ವಾ; ಲಿಂಗದ ಮೊತ್ತವಾದಾಕೆ ನೀನೆ ಅವ್ವಾ; ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ರಾಣಿ ನೀನೆ ಅವ್ವಾ. ಇದರನುಭಾವವ ತಿಳಿದಾತನೆ ಜಂಗಮ; ಇದರನುಭಾವವ ಕೇಳಿದಾತನೆ ಭಕ್ತ ನೋಡವ್ವಾ; ಆತ ಪ್ರಾಣಲಿಂಗಿಯವ್ವಾ.
--------------
ಸಿದ್ಧರಾಮೇಶ್ವರ
ಕಾಮ ಬಲ್ಲಿದನೆಂದಡೆ ಉರುಹಿ ಭಸ್ಮವ ಮಾಡಿದ. ಕಾಲ ಬಲ್ಲಿದನೆಂದಡೆ ಕೆಡಹಿ ತುಳಿದ. ಎಲೆ ಅವ್ವಾ, ನೀನು ಕೇಳಾ ತಾಯೆ. ಬ್ರಹ್ಮ ಬಲ್ಲಿದನೆಂದಡೆ ಶಿರವ ಚಿವುಟಿಯಾಡಿದ. ಎಲೆ ಅವ್ವಾ ನೀನು ಕೇಳಾ ತಾಯೆ. ವಿಷ್ಣು ಬಲ್ಲಿದನೆಂದಡೆ ಆಕಳ ಕಾಯ್ದಿರಿಸಿದ. ತ್ರಿಪುರದ ಕೋಟೆ ಬಲ್ಲಿತ್ತೆಂದಡೆ ನೊಸಲಕಂಗಳಲುರುಹಿದನವ್ವಾ. ಇದು ಕಾರಣ, ಚೆನ್ನಮಲ್ಲಿಕಾರ್ಜುನ ಗಂಡನೆನಗೆ, ಜನನ ಮರಣಕ್ಕೊಳಗಾಗದ ಬಲುಹನೇನ ಬಣ್ಣಿಪೆನವ್ವಾ.
--------------
ಅಕ್ಕಮಹಾದೇವಿ
ಗುರು ಶಿಷ್ಯಾನಂದವ ಮನಸಿಗೆ ಬಂದಂತೆ ಹೇಳುವೆನು ಎಲೆ ಅವ್ವಾ. ಬಾಲನ ಮಾತಿಗೆ ಮಾತೆಪಿತರಿಗೆ ಪ್ರೀತಿಯಪ್ಪಂತೆ ಎನ್ನ ಮಾತ ಆಲಿಸುವವರು ಶಿವಭಕ್ತರು, ಎನ್ನ ಮಾತಾ ಪಿತರು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನೀನು ತಾನು ಹಿಡಿಯದುದೆಲ್ಲವ ತೇಜದಲುಡಿಸಿ ಹೆರರಿಗೆ ಭಾಜನ ಮಾಡಿದೆಯವ್ವ ನೀನಿವನಲ್ಲಿದ್ದು ಉಣ್ಣದೆ ಹೋದೆ ಮಗಳೆ. ಅವ್ವಾ, ಇಂತು ಬರಿದಾಗಿ ಬರಿದಾತನ ಕೂಡಿದೆ ಕಪಿಲಸಿದ್ಧಮಲ್ಲಿನಾಥನನೆಯವ್ವಾ.
--------------
ಸಿದ್ಧರಾಮೇಶ್ವರ
ಬರು ಮನವಾದೀತೆಂದು ಬೇರುವೋದಳು ನೋಡಾ ಅವ್ವಾ. ಕಮ್ಮರಿವರಿವಳು ನೋಡಾ ಅವ್ವಾ. ಸಮಧಾತುವಿಲ್ಲ ನೋಡೆಮಗೆ. ಮದ್ದು ಕುತ್ತದೊಳಗಾದಂತೆ ಮಹಾಲಿಂಗ ಗಜೇಶ್ವರದೇವರ ಒಲವು ನೋಡಾಅವ್ವಾ.
--------------
ಗಜೇಶ ಮಸಣಯ್ಯ
ನಾ ಮುನ್ನ ಉಳಿದೆ ಕಳೆದೆ ಮಿಂಡರ ನೀ ಹೋಗಿ ತಾರಗೆ ಅವ್ವಾ. ಚಿತ್ತವು ಮನವು ಹೋಗಿ ನಾನವನ ಹತ್ತಿದ ಮನವ ತರಲಿಕಾರೆನಹೊ. ಅಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ ನಾನೀಗ ಏಗೆಯ್ದರೂ ಬಿಡಲಾರೆನವ್ವ.
--------------
ಸಿದ್ಧರಾಮೇಶ್ವರ
ಅವ್ವಾ, ನಾನು ಸೀರೆಯನುಡಲಮ್ಮೆನು. ಅಲ್ಲಿ ಗಂಡೆಣೆ ಇದ್ದೂದೆಂದೆಲೆ ಅವ್ವಾ. ಅವ್ವಾ, ಬೇಟದ ರತಿಯಲ್ಲಿ ಹುಟ್ಟಿ ಬೆಳೆದುದಯವಾದಳು. ಅವ್ವಾ, ಇಂದೆನ್ನ ಮಹಾಲಿಂಗ ಗಜೇಶ್ವರನುಳಿದನೆಂದಟ್ಟಿದಡೆ ಅವ್ವಾ, ನಾನು ಮುತ್ತಲಮ್ಮೆ ಅಲ್ಲಿ ಪ್ರತಿಬಿಂಬವಿದ್ದೂದೆಂದು.
--------------
ಗಜೇಶ ಮಸಣಯ್ಯ
ದಿವದಿವಸಾನು ಅವಸ್ಥಾತ್ರಯದೊಳಾಲೋಚನೆಯಂಗೆಯ್ಯುತಿರ್ದೆನವ್ವಾ. ಕೆಳದಿಯರೊಂದಾಗಿ ಬೆಳುದಿಂಗಳೊಳು ನಿಂದು ಕಳವಳಗೊಂಡು ಸುಳುಹನಾಲಿಸುತಿರ್ದೆನವ್ವ, ಎನ್ನಂಗಳ ಮುಂದೆ ಆತ ಸನ್ನಿಹಿತ ಬಂದರೆ ನೋತ ಫಲ ಸಂಭವಿಸಿತ್ತೆನಗವ್ವ. ಕಾಯದಣಿವಂತೆ ಮಾಡಿ ಮುಂದುಗೊಂಡಿಪ್ಪೆ, ಮನದಣಿವಂತೆ ನೋಡಿ ಮುಂದುಗೊಂಡಿಪ್ಪೆ, ಪ್ರಾಣದಣಿವಂತೆ ನೀಡಿ ಮುಂದುಗೊಂಡಿಪ್ಪೆನವ್ವ. ಭಾವದಣಿವಂತೆ ಸಮಸುಖಾನಂದದೊಳೋಲಾಡುತ್ತ ಮುಂದುಗೊಂಡಿಪ್ಪೆ. ಗುರುನಿರಂಜನ ಚನ್ನಬಸವಲಿಂಗ ಶರಣರೆನ್ನ ಮನೆಗೆ ಬರುವಂತೆ ಮಾಡಾ ಎಲೆ ಅವ್ವಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೇಳು ಕೇಳೆನ್ನ ಭಾಷೆ, ಅರಿದು ಕಂಡಾ ಅವ್ವಾ, ನಲ್ಲನೊಮ್ಮೆ ತೋರಿದಡೆ ಎನ್ನ ಸರಿಹರಿ ನೋಡಿದೆ ಅವ್ವಾ. ಕಪಿಲಸಿದ್ಧಮಲ್ಲಿನಾಥ ರೂಪಂಬಿಟ್ಟು ಅಗಮ್ಯನಾದಡೆ ಅಗಮ್ಯ ರೂಪಂಬಿಡಿಸಿ ಹಿಡಿವೆನೆ ಅವ್ವಾ.
--------------
ಸಿದ್ಧರಾಮೇಶ್ವರ
ಸರ್ವಜನ ಸನುಮತವೆಂಬ ಮಾತು ಸಾಮಾನ್ಯವೆ ಅವ್ವಾ ? ತಾ ಮೆಚ್ಚ; ಕಲಿಯಾಗಿಪ್ಪವರ ಕೆಲ ಮೆಚ್ಚ. ಸುಖಿಯಾಗಿಪ್ಪವರ ಒಬ್ಬರನಾದಡೂ ಕಾಣೆನವ್ವಾ. ತಾ ಸತ್ತು ಹೆರರ ಕೊಂದವಸ್ಥೆಯ ಚಂದವ ಚಂದ್ರಮತಿಯಲ್ಲಿ ಕಂಡೆನು. ಇಂದು ಕಂಡೆನು ಮಹಾಲಿಂಗ ಮಸಣಯ್ಯಗಳಲ್ಲಿ ಗಜೇಶ್ವರದೇವರು ಮಾಡಿತ್ತ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ, ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ. ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ, ಶಬ್ದಸಂದಣಿಗೆ ಹಂಗಿಲ್ಲ ನೋಡಾ. ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ ! ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
--------------
ಅಲ್ಲಮಪ್ರಭುದೇವರು
ಆತನ ನೋಡಿದಂದು ದೆಸೆಗಳ ಮರೆದೆನಿನ್ನೆಂತವ್ವಾ. ಅವ್ವಾ ಅವ್ವಾ ಆತನ ನುಡಿಸಿದಡೆ ಮೈಯೆಲ್ಲಾ ಬೆವತುದಿನ್ನೆಂತವ್ವಾ. ಅವ್ವಾ ಅವ್ವಾ ಆತನ ಕೈಯ ಹಿಡಿದಡೆ ಎನ್ನ ನಿರಿಗಳು ಸಡಿಲಿದವಿನ್ನೆಂತವ್ವಾ. ಇಂದೆಮ್ಮ ಮಹಾಲಿಂಗ ಗಜೇಶ್ವರನನಪ್ಪಿದೆನೆಂದಡೆ ನಾನಪ್ಪ ಮರೆದೆನಿನ್ನೆಂತವ್ವಾ.
--------------
ಗಜೇಶ ಮಸಣಯ್ಯ
ಇನ್ನಷ್ಟು ... -->