ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅನಂತಾನಂತಕಾಲ ನಿತ್ಯವೆಂಬಿರಿ ಸಂಸಾರ. ಸಂಸಾರವೆಂಬುದು ಹುಸಿ ಕಂಡಾ ಎಲವೋ! ಇಂದಿನಿಂದಿನ ಸುಖ ಇಂದಿಂಗೆ ಪರಿಣಾಮ. ದಿನದಿನದ ಸುಖ ಹುಸಿ ಕಂಡಾ ಎಲ್ಲವೊ! ಘನಘನವೆಂಬ ರೂಪಿಂಗೆ ರತಿಯಿಲ್ಲಯ್ಯಾ. ಮಹಾಲಿಂಗ ಗಜೇಶ್ವರನಲ್ಲಿ ತಿಳಿದು ನೋಡಾ ಎಲ್ಲವೊ!
--------------
ಗಜೇಶ ಮಸಣಯ್ಯ
ಅವ್ವಾ, ನಾನು ಸೀರೆಯನುಡಲಮ್ಮೆನು. ಅಲ್ಲಿ ಗಂಡೆಣೆ ಇದ್ದೂದೆಂದೆಲೆ ಅವ್ವಾ. ಅವ್ವಾ, ಬೇಟದ ರತಿಯಲ್ಲಿ ಹುಟ್ಟಿ ಬೆಳೆದುದಯವಾದಳು. ಅವ್ವಾ, ಇಂದೆನ್ನ ಮಹಾಲಿಂಗ ಗಜೇಶ್ವರನುಳಿದನೆಂದಟ್ಟಿದಡೆ ಅವ್ವಾ, ನಾನು ಮುತ್ತಲಮ್ಮೆ ಅಲ್ಲಿ ಪ್ರತಿಬಿಂಬವಿದ್ದೂದೆಂದು.
--------------
ಗಜೇಶ ಮಸಣಯ್ಯ
ಅರಳಿದ ಪುಷ್ಪ, ಪರಿಮಳಿಸದಿಹುದೆ ಅಯ್ಯಾ? ತುಂಬಿದ ಸಾಗರ, ತೆರೆನೊರೆಗಳಾಡದಿಹುದೆ ಅಯ್ಯಾ? ಆಕಾಶವ ಮುಟ್ಟುವವ, ಅಟ್ಟಗೋಲ ಹಿಡಿವನೆ ಅಯ್ಯಾ? ಪರದಲ್ಲಿ ಪರಿಣಾಮಿಯಾದ ಶರಣ, ಕರ್ಮ ಪೂಜೆ ಫಲವನತಿಗಳೆಯದಿಹನೆ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಅಖಂಡ ಪರಿಪೂರ್ಣ ಲಿಂಗ ತಾನೆಯಾದ ಶರಣಂಗೆ ಲಿಂಗವೆಂಬುದೇನು ಹೇಳಾ? ಲಿಂಗ ಹೊರಗೊ ಒಳಗೊ ಎಂದು ಶಂಕಿಸಿ ನುಡಿವ ಶಂಕಿತರಂತಿರಲಿ. ಮುನ್ನ ಮುನ್ನವೆ ಮಹಾಲಿಂಗವಾದ ಬಳಿಕ ಮತ್ತೇನೆಂದುನೆನೆಯಲಿಲ್ಲ. ಮಹಾಲಿಂಗ ಗಜೇಶ್ವರನಲ್ಲಿ ನಿಜೈಕ್ಯವಾದ ಶರಣಂಗೆ ಮುಂದೆ ಒಂದೂ ಇಲ್ಲ, ಮಾಣು.
--------------
ಗಜೇಶ ಮಸಣಯ್ಯ
ಅಪ್ಪಿನ ಸೋಂಕಿನ ಸುಖವನಗಲುವ ಮನಕ್ಕಿಂದ ಬಂಜೆಯಾಗಿಪ್ಪುದು ಕರಸುಖ ನೋಡವ್ವಾ. ಕಂಗಳ ನೋಟ ಮನಕ್ಕೆ ಸೈರಿಸದು, ಎಣೆಗೊಂಡು ಬಡವಾದ ಪರಿಯ ನೋಡವ್ವಾ. ತುಪ್ಪುಳನಿಕ್ಕಿದ ಹಂಸೆಯಂತಾದೆನವ್ವಾ ಮಹಾಲಿಂಗ ಗಜೇಶ್ವರನುಳಿದಡೆ.
--------------
ಗಜೇಶ ಮಸಣಯ್ಯ
ಅಹುದಹುದು, ಲಿಂಗವಿಲ್ಲದೆ ಶಿಷ್ಯನನರಿಯಬಲ್ಲ ಗುರು, ಲಿಂಗವಿಲ್ಲದೆ ಗುರುವನರಿಯಬಲ್ಲ ಶಿಷ್ಯ. ಗುರುವನರಿಯಬಲ್ಲ ಶಿಷ್ಯ, ಶಿಷ್ಯನನರಿಯಬಲ್ಲ ಗುರು, ಇವರಿಬ್ಬರ ಭೇದವ ನೀನೆ ಬಲ್ಲೆ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಅಗಲಲಿಲ್ಲದ ನಲ್ಲನನಗಲಿ ನೆರೆದೆಹೆನೆಂಬ ಕಾಮಿನಿಯರ ಭಂಗವ ನೋಡಾ! ಆ ನಮ್ಮ ನಲ್ಲನ ಅನುವಿನೊಳಿರ್ದು ನೆರೆದೆಹೆನೆಂಬ ಭರವೆನಗವ್ವಾ ಮಹಾಲಿಂಗ ಗಜೇಶ್ವರದೇವರನಗಲುವಡೆ ನಾನೇನು ಕಲ್ಲುಮನದವಳೆ ಅವ್ವಾ
--------------
ಗಜೇಶ ಮಸಣಯ್ಯ
ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯಲ್ಲಿ ಲಿಂಗವುಂಟೆ? `ಸ್ವಯಮಾತ್ಮ ಪರೋಲಿಂಗ' ವೆಂದುಲಿವ ಬೀದಿಯ ಭಂಡರ ಮಾತ ಕೇಳಲಾಗದು. ತಿಲಕುಸುಮ ಪರಿಮಳದಂತೆ ಒಳ ಹೊರಗು ಪರಿಪೂರ್ಣ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಅಂಗಸಂಗದಲ್ಲಿದ್ದು ಬಂದುದನೆ ಕಂಡು ಹಾವು ಹಸು ಮಗುವಿನಂತೆ ಆದೆ ನೋಡವ್ವಾ. ಕಂಗಳ ನೋಟದ ಸುಖಕ್ಕೆ ಮನವನೊಪ್ಪಿಸುವೆ. ಪತಂಗದ ಬೆಸನಿಯಂತೆ ಆದೆ ನೋಡವ್ವಾ. ಮದಾಳಿಯ ನಾಸಿಕದಂತೆ ಸುಳಿದು ಸುಖಬಡುವೆ. ಮಹಾಲಿಂಗ ಗಜೇಶ್ವರಾ ನಿನ್ನ ವಿನಯ ನೋಡವ್ವಾ.
--------------
ಗಜೇಶ ಮಸಣಯ್ಯ