ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆಂಡತಿ, ಗಂಡನ ಒಡೆಯರೆಂದು ಕೂಡಿಕೊಂಡು ಉಂಡೆಹೆನೆಂಬ ಜಗಭಂಡೆಯ ನೋಡಾ. ಕೂಟಕ್ಕೆ ಪುರುಷನಾಗಿ ನೇಮಕ್ಕೆ ಒಡೆತನವುಂಟೆ? ಇಂತೀ ಜಾರೆಯ ನೇಮ ಮೂತ್ರದ ದ್ವಾರಕ್ಕೆ ಈಡು. ಇಂತೀ ಸಂಸಾರದ ಘಾತಕತನದ ವ್ರತ ಮೀಸಲ ಶುನಕ ಮುಟ್ಟಿದಂತೆ ಅದು ಏಲೇಶ್ವರಲಿಂಗಕ್ಕೆ ದೂರ.
--------------
ಏಲೇಶ್ವರ ಕೇತಯ್ಯ
ಆವ ಜ್ಞಾನಿಯಾದಡೇನು ದೇಹಾವಸಾನದ್ಲಯ ಭಾವದಂತೆ ತಪ್ಪಲರಿಯದು ನೋಡಾ. ಆವ ಜ್ಞಾನಿಯಾದಡೇನು ಭಾವವೆಂಬುದು ಜನ್ಮಕ್ಕೆ ಈಡು, ನಿರ್ಭಾವವೆಂಬುದು ಜನ್ಮಕ್ಕೆ ಕಾಡುಗಿಚ್ಚು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
`ಇಕ್ಕಿದ ಹರಿಗೆ ತೊಲದ ಕಂಭ'ವೆಂದು ಬಿರಿದನಿಕ್ಕಿ ಹುಯ್ಯಲ ಕಂಡು ಓಡಿ ಬರುವಂಗೆ ಆ ಬಿರಿದೇತಕಯ್ಯ? ಬತ್ತೀಸಾಯುಧದ ಸಾಧನೆಯ ಕಲಿತು ಕಾಳಗದಲ್ಲಿ ಕೈಮರೆದು ಘಾಯವಡೆದಂಗೆ ಆ ಸಾಧನೆ ಏತಕಯ್ಯ? ಕತ್ತಲೆಗಂಜಿ ಕರದಲ್ಲಿ ಜ್ಯೋತಿಯಂ ಪಿಡಿದು ಹಾಳುಗುಳಿಯಲ್ಲಿ ಬೀಳುವಂಗೆ ಆ ಜ್ಯೋತಿಯೇತಕಯ್ಯ? ಆದ್ಯರ ವಚನಂಗಳ ಸದಾಕಾಲದಲ್ಲಿ ಓದಿ ಶಿವತತ್ವ ಆತ್ಮತತ್ವ ವಿದ್ಯಾತತ್ವವನರಿದು ಆರಕ್ಕೆ ಆರ ನೆಲೆಮಾಡಿ ಮೂರಕ್ಕೆ ಮೂರ ಸಂಬಂಧಿಸಿ ಐದಕ್ಕೆ ಇನ್ನು ಪ್ರತಿಯಿಲ್ಲವೆಂದು ಅರಿದ ವಿರಕ್ತರು ಪುರಾತನರಂತೆ ಸಮ್ಯಜ್ಞಾನ ಕ್ರೀಯಿಂದಲೆ ಆದರಿಸುವುದು, ಭಕ್ತ ವಿರಕ್ತರ ಆಚರಣೆಯೆಲ್ಲಾ ಒಂದೇ. ಅದು ಹೇಗೆಂದರೆ ಭಕ್ತಂಗೆ ಬಹಿರಂಗದ ದಾಸೋಹ. ವಿರಕ್ತಂಗೆ ಅಂತರಂಗದ ದಾಸೋಹ. ಈ ಆಚರಣೆಯನತಿಗಳೆದು ಮನ ಬಂದ ಪರಿಯಲ್ಲಿ ನಡೆದು ಕೆಡುವಂಗೆ ಆದ್ಯರ ವಚನವೇತಕಯ್ಯ? ಆದ್ಯರ ವಚನವೆಂಬುದು ಸಂತೆಯಮಾತೆ? ಪುಂಡರ ಪುರಾಣವೇ? ಲೋಕದ ಜನರ ಮೆಚ್ಚಿಸುವ ಬೀದಿಯ ಮಾತೆ? ಶಿವ ಶಿವ ನೀವು ಶಿವಶರಣರ ಕೂಡಾಡಿ ವಚನಂಗಳ ಕಲಿತು ಆ ವಚನಂಗಳ ನಿಮ್ಮ ಊಟದ ವೆಚ್ಚಕ್ಕೆ ಈಡು ಮಾಡಿಕೊಂಡಿರಲ್ಲದೆ ಮುಂದಣ ಮುಕ್ತಿಯ ಪದವ ಕಾಣದೇ ಹೋದಿರಲ್ಲಾ? ಇದು ಕಾರಣ- ಶಿವಜ್ಞಾನೋದಯವಾದ ಲಿಂಗಾಂಗಿಗಳಿಗೆ ಎನ್ನ ನುಡಿ ಮೈಗಂದೆಯಂ ತುರಿಸಿದಂತೆ ಹಾಲು ಸಕ್ಕರೆಯನುಂಡಂತೆ ಸವಿದೋರುತ್ತದೆ. ವೇಷಧಾರಿ ವಿಶ್ವಾಸಘಾತುಕರಿಗೆ ಎನ್ನ ನುಡಿ ಅಲಗಿನ ಮೊನೆಯಂತೆ ಇರಿಯುತ್ತಿದೆಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮಾಡಬಾರದು ಮಾಡಬಾರದು ಪರಸ್ತ್ರೀಸಂಗವ. ನೋಡಬಾರದು ನೋಡಬಾರದು ದೃಷ್ಟಿಯನ್ನೆತ್ತಿ ಪರದ್ರವ್ಯವ. ಕೂಡಬಾರದು ಕೂಡಬಾರದು ಕುಲವಿಲ್ಲದವನ್ನಲ್ಲಿ. ಆಡಬಾರದು ಆಡಬಾರದು ದುರ್ವಿಷಯಗಳಲ್ಲಿ. ಮಾಡಿ ನೋಡಿ ಕೂಡಿ ಆಡಿದಡೆ ಈಡು ನೋಡಾ, ಯಮ ಮಾಡಿದ ಪುಳುಗೊಂಡಕ್ಕೆ, ಎಲೆ ಬಿಲ್ಲೇಶಾ, ಕಪಿಲಸಿದ್ಧಮಲ್ಲಿಕಾರ್ಜುನರ್ಯನ ಸಾನ್ನಿಧ್ಯದಲ್ಲಿ ಕೇದಾರ ಗುರು ಸಾಕ್ಷಿಯಾಗಿ.
--------------
ಸಿದ್ಧರಾಮೇಶ್ವರ
ತನುವಿನಿಂದ ಕಂಡೆಹೆನೆಂದಡೆ ರೂಪಿನ ಜಡ. ಮನದಿಂದ ಕಂಡೆಹೆನೆಂದಡೆ ಕರಣಂಗಳ ಹೊಲ. ಘನದಿಂದ ಕಂಡೆಹೆನೆಂದಡೆ ನಿರಾಳದ ಬಯಲು. ಇನ್ನೇತರಿಂದ ಅರಿವಿನ ಈಡು ಎನಗೆ. ಅನಾಥರ ನಾಥಾ, ಕರುಣಿಸು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->