ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ ಐವರನೆತ್ತಿ ನುಂಗಿದ ಅವಿರಳ ಪರಬ್ರಹ್ಮ ನೋಡಾ. ಆ ಪರಬ್ರಹ್ಮವ ನುಂಗಿದನು ನಿರವಯ. ನಿರವಯವ ನುಂಗಿದ ನಿರಾಳ. ನಿರಾಳವ ನುಂಗಿದ ನಿತ್ಯ ನಿರಂಜನ ಪರವಸ್ತು ನೋಡಾ. ಇವರೆಲ್ಲರ ನುಂಗಿದ ಪರವಸ್ತು ಎನ್ನ ನುಂಗಿತ್ತಾಗಿ, ಆ ಪರವಸ್ತುವ ನಾನು ನುಂಗಿದೆನಾಗಿ, ನಿಃಶಬ್ದಮಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನ್ಯವೆಂಬ ಪಂಚಬ್ರಹ್ಮವೇ ಮೊದಲಾದ ಪಂಚಮುಖದ ರುದ್ರಾಕ್ಷಿ. ಆ ರುದ್ರಾಕ್ಷಿಯ ಹಸ್ತ ತೋಳು ಕರ್ಣ ಕಂಠ ಮಸ್ತಕದಲ್ಲಿ ಧರಿಸಿಪ್ಪ ಶಿವಭಕ್ತನೇ ರುದ್ರನು. ಆತನ ದರ್ಶನದಿಂದ ಭವರೋಗ ದುರಿತ ಇರಲಮ್ಮವು ನೋಡಾ. `ಓಂ ಅತ ಏವ ರುದ್ರಾಕ್ಷಧಾರಣಾತ್ ರುದ್ರಃ' ಎಂದುದಾಗಿ ರುದ್ರಪದವಿಯನೀವ ರುದ್ರಾಕ್ಷಿಯಂ ಧರಿಸಿಪ್ಪ ಭಕ್ತರಿಗೆ ಶರಣೆಂಬೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ ಪರಶಿವನ ಪಂಚಮುಖವೆ ಪಂಚಕಳಸವೆಂದಿಕ್ಕಿ, ಹಸೆ-ಹಂದರದ ನಡುವೆ, ಶಿವಗಣಂಗಳ ಮಧ್ಯದಲ್ಲಿ ದೀಕ್ಷವನಿತ್ತು, ದೀಕ್ಷವೆಂಬೆರಡಕ್ಷರದ ವರ್ಮವನರುಹಿದ. ದೀಕಾರವೆ ಲಿಂಗಸಂಬಂಧವೆಂದು, ಕ್ಷಕಾರವೆ ಮಲತ್ರಯಂಗಳ ಕಳೆವುದೆಂದು ಅರುಹಿದ. ಸಾಕ್ಷಿ :``ದೀಯತೇ ಲಿಂಗಸಂಬಂಧಃ ಕ್ಷೀಯತೇ ಚ ಮಲತ್ರಯಂ | ದೀಯತೇ ಕ್ಷೀಯತೇ ಚೈವ ಶಿವದೀಕ್ಷಾಭಿಧೀಯತೇ ||'' ಎಂದುದಾಗಿ, ದೀಕ್ಷದ ವರ್ಮವನರುಹಿ, ಅರುಹೆಂಬ ಸೂತ್ರವ ಹಿಡಿಸಿ, ಮರವೆಂಬ ಮಾಯವ ಕಳೆದು, ಹಸ್ತಮಸ್ತಕ ಸಂಯೋಗ ಮಾಡಿ, ನೆತ್ತಿಯೊಳಿಹ ಪರಬ್ರಹ್ಮವಸ್ತುವ ಇಂತೆನ್ನ ಕರ ಉರ ಶಿರ ಮನ ಜ್ಞಾನದೊಳು ನೆಲೆಗೊಳಿಸಿ, ಪ್ರಣವಮಂತ್ರವ ಕರ್ಣದಲ್ಲಿ ಹೇಳಿ, ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದ ಗುರು ಪರಮಾತ್ಮನಲ್ಲದೆ ನರನೆನಬಹುದೇ ? ಎನಲಾಗದು. ಎಂದರೆ ಕುಂಭೀ ನಾಯಕ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸ್ಥೂಲ ಸೂಕ್ಷ್ಮವೆಂಬ ಶಬ್ದಪರಿಭಾವ ತಲೆದೋರದೆ, ಸಂಗ ಮಹಾಸಂಗದ ವರ್ಮದಾಸೋಹ ಹೃದಯಕ್ಕೆ ಸಾಹಿತ್ಯವಾದ ಭಕ್ತಂಗೆ ಅರ್ಪಿತ ಅನರ್ಪಿತವೆಂಬ ಸಂಕಲ್ಪ ವಿಕಲ್ಪವಿರಹಿತ, ಮತ್ತೆ ಅರ್ಪಿಸಬಲ್ಲನಾಗಿ. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯವೆಂಬ ಪಂಚವಕ್ತ್ರವನು ಊಧ್ರ್ವಮುಖಕ್ಕೆ ತಂದು, ಅರ್ಪಿಸಬಲ್ಲನಾಗಿ ಗುರುಪ್ರಸಾದಿ. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮ ಇಂತೀ ಅಷ್ಟತನುವನು ದಾಸೋಹದಲ್ಲಿ ಅರ್ಪಿಸಬಲ್ಲನಾಗಿ ಜಂಗಮಪ್ರಸಾದಿ. ಹೊರಗೆ ಭಜಿಸಲಿಲ್ಲ, ಒಳಗೆ ನೆನೆಯಲಿಲ್ಲ. ಸರ್ವಾಂಗಲಿಂಗಿಯಾಗಿಹ ಲಿಂಗಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಮಹಾಪ್ರಸಾದಿ.
--------------
ಚನ್ನಬಸವಣ್ಣ
-->