ಅಥವಾ

ಒಟ್ಟು 66 ಕಡೆಗಳಲ್ಲಿ , 20 ವಚನಕಾರರು , 63 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಣಮ:ಪ್ರಾಣವಾಯುವಿನ ನೆಲೆಯನರಿದು ಬಿಡಬಲ್ಲರೆ, ಪ್ರಣಮ:ಓಂಕಾರದ ಶ್ರುತಿಯ ಮೂಲಾಂಕುರವನರಿಯಬಲ್ಲರೆ ಪ್ರಣಮ:ಐವತ್ತೆರಡಕ್ಷರದ ಲಿಪಿಯ ತಿಳಿದುನೋಡಿ ಓದಬಲ್ಲರೆ, ಪ್ರಣಮ, ನಾದಬಿಂದು ಕಲಾತೀತನಾಗಬಲ್ಲರೆ_ ಇದು ಕಾರಣ, ಕೂಡಲಚೆನ್ನಸಂಗಾ, ನಿಮ್ಮ ಶರಣರು ಸಹಸ್ರವೇದಿಗಳಾದ ಕಾರಣ ಪ್ರಣಮಪ್ರತಿಷ್ಠಾಚಾರ್ಯರು. ಅವರಿಗೆ ಮಿಗೆ ಮಿಗೆ ನಮೋ ನಮೋ ಎಂಬೆನು.
--------------
ಚನ್ನಬಸವಣ್ಣ
ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ನವನಾಳ ಬಿಂದು ಪವನ ಹೃದಯಕಮಲ ಮಧ್ಯದ ದಳವ ಮೆಟ್ಟಿ, ಗಳಿಗೆ ಗಳಿಗೆಗೆ ಚರಿಸುವ ಪರಮಹಂಸನ ಆರಿಗೆಯೂ ಅರಿಯಬಾರದು_ಘಮ್ಮುಘಮ್ಮೆನೆ ಸುತ್ತುವನಲ್ಲದೆ ! ಅದೆಂತೆಂದಡೆ: ``ಪೂರ್ವದಲೇ ಭವೇತ್ ಭಕ್ತಿರಾಗ್ನೇಯಾಂ ಚ ಕ್ಷುಧೈವ ಚ ದಕ್ಷಿಣೇ ಕ್ರೋಧಮುತ್ಪನ್ನಂ ನೈರುತ್ಯಾಂ ಸತ್ಯಮೇವ ಚ ಪಶ್ಚಿಮೇ ತು ಭವೇತ್ ನಿದ್ರಾ ವಾಯವ್ಯಾಂ ಗಮನಸ್ತಥಾ ಉತ್ತರಾಯಾಂ ಧರ್ಮಶೀಲಾವೈಶಾನ್ಯಾಂ ವಿಷಯಸ್ತಥಾ ಅಷ್ಟದಲೇಷು ಮಧ್ಯಸ್ಥಮಾನಚಂದಮಚಲಂ ಶಿವಃ_ಎಂದುದಾಗಿ ಇಂದು ಅಷ್ಟದಳವ ಮೆಟ್ಟಿ ಚರಿಸುವ ಆ ಪರಮಹಂಸನ ತಲೆಗಿಂಬ ಮಾಡಿ ನಿಲಿಸಬಲ್ಲ ನಿಮ್ಮ ಶರಣ ಚನ್ನಬಸವಣ್ಣಂಗೆ ನಾನು ನಮೋ ನಮೋ ಎಂಬೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅರಿಯಬಲ್ಲಡೆ ವಿರಕ್ತನೆಂಬೆನು. ಆಚಾರವನರಿದಡೆ ಅಭೇದ್ಯನೆಂಬೆನು. ಸ್ತುತಿ ನಿಂದೆಗೆ ಹೊರಗಾದಡೆ ಸುಮ್ಮಾನಿ ಎಂಬೆನು. ಘನತತ್ವವನರಿದು ಶಿಶುಕಂಡ ಕನಸಿನಂತೆ ಇದ್ದಡೆ ಶಿವಜ್ಞಾನಿ ಎಂಬೆನಯ್ಯಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ನಿಮ್ಮ ಮುಟ್ಟಲರಿಯದರ ಕಂಡಡೆ, ಅಯ್ಯ ಎಂತೆಂಬೆನವರ ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ ಅರಿವವರದಾರಯ್ಯಾ ಏನೆಂಬೆ ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು, ಕೂಡಲಸಂಗಮದೇವಾ, ಅವರನಯ್ಯ ಎಂಬೆನು.
--------------
ಬಸವಣ್ಣ
ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ ? ಎಲ್ಲಿ ಸ್ಥಾವರವಿದ್ದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು. ಲಿಂಗಕ್ಕಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಲಿಂಗವುಂಟೆ ? ಗುರುವಿಂಗಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಗುರುವುಂಟೆ ? ಎಲ್ಲಿ ಜಂಗಮವಿದ್ದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಅನುಭಾವ ಸನ್ನಹಿತವಾಗಿಹುದು. ಇಂತಿವರ ಭೇದವ ಬಸವಣ್ಣ ಬಲ್ಲನು. ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯೊಳೆದ್ದು, ನಮೋ ನಮೋ ಎಂಬೆನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ? ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ? ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ತೊರೆಯುದಕವ ಕೆರೆಯುಂಡು ತೃಪ್ತವಾಗಲು ಆ ಕೆರೆಯುದಕವ ಹಲವು ಕೆಲವು ಸ್ಥಾವರ ಜಂಗಮಗಳುಂಡು ತೃಪ್ತಿವಡೆವಂತೆ, ಪ್ರಭುದೇವರ ತೃಪ್ತಿ ಅಸಂಖ್ಯಾತಮಹಾಗಣಂಗಳೆಲ್ಲಕ್ಕೆ ತೃಪ್ತಿಯಾಯಿತ್ತು ನೋಡಾ. ಬಸುರುವೆಂಡತಿ ಉಂಡಲ್ಲಿ ಒಡಲ ಶಿಶು ತೃಪ್ತಿಯಾದಂತೆ, ಸಚರಾಚರವೆಲ್ಲವು ತೃಪ್ತಿಯಾದವು ನೋಡಾ. ಕೂಡಲಸಂಗಮದೇವಾ, ನಿಮ್ಮ ಶರಣ ಪ್ರಭುದೇವರ ಪ್ರಸಾದಮಹಿಮೆಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ಕಟ್ಟರಸಿಲ್ಲದ ರಾಜ್ಯದಂತೆ, ಜೀವನಿಲ್ಲದ ಕಾಯದಂತೆ ದೇವನಿಲ್ಲದ ದೇಗುಲದಂತೆ, ಪತಿಯಿಲ್ಲದ ಸತಿಯ ಶೃಂಗಾರದಂತೆ, ಗುರುವಾಜ್ಞೆಯಿಲ್ಲದೆ ತನ್ನ ಮನಕ್ಕೆ ತೋರಿದ ಹಾಂಗೆ ಮಾಡಿದ ಭಕ್ತಿ ಶಿವನ ಮುಟ್ಟದು ನೋಡಾ. ಶ್ರೀಗುರುವಿನ ವಾಕ್ಯದಿಂದಹುದೆಂದುದನು ಅಲ್ಲ ಎಂದು ಉದಾಸಿನದಿಂದ ಮಾಡಿದ ಭಕ್ತಿ ಅದು ಕರ್ಮಕ್ಕೆ ಗುರಿ ನೋಡಾ. ಶ್ರೀಗುರುವಾಜ್ಞೆವಿಡಿದು ಆಚರಿಸುವ ಸತ್ಯ ಸಾತ್ವಿಕ ಭಕ್ತಿ ಸದ್ಯೋನ್ಮುಕ್ತಿಗೆ ಕಾರಣ ನೋಡಾ. ಏಕೋಭಾವದ ನಿಷ್ಠೆ ಭವದ ವ್ಯಾಕಲುವನೆಬ್ಬಟ್ಟುವುದು ನೋಡಾ. ಅಹುದೋ ಅಲ್ಲವೋ ಎಂಬ ಮನದ ಸಂದೇಹದ ಕೀಲ ಕಳೆದು ಶಿವಲಿಂಗದೊಳಗೊಂದು ಮಾಡಿ ಬಂಧ ಮೋಕ್ಷ ಕರ್ಮಂಗಳ ಒತ್ತಿ ಒರಸುವುದು ನೋಡಾ. ಇಂದುಧರನೊಳಗೆ ಬೆರಸಿದ ಅಚಲಿತ ಮಹೇಶ್ವರಂಗೆ ನಮೋ ನಮೋ ಎಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಂಗಮವ ಕಾಣುತ ಅಹಂಕಾರದೊಳಗಿಪ್ಪ ಅನಿತ್ಯದೇಹಿಯನೇನೆಂಬೆ ಶಿವನೇ ! ಲಿಂಗಸ್ಥಲಕ್ಕೆ ಸಲ್ಲರು, ಗುರು ಹೇಳಿತ್ತ ಮರೆದರು. ಭಸ್ಮಾಂಗಮಾಗತಂ ದೃಷ್ಟಾ ಆಸನಂ ಚ ಪರಿತ್ಯಜೇತ್ ಸ್ವಧರ್ಮಃ ಪಿತೃಧರ್ಮಶ್ಚ ಸರ್ವಧರ್ಮೋ ವಿನಶ್ಯತಿ ಕುಲೀನಮಕುಲಿನಂ ವಾ ಭೂತಿರುದ್ರಾಕ್ಷಧಾರಿಣಂ ದೃಷ್ಟ್ವೋನ್ನತಾಸನೇ ತಿಷ್ಠನ್ ಶ್ವಾನಯೋ ನಿಷು ಜಾಯತೇ ಇದು ಕಾರಣ ಕೂಡಲಚೆನ್ನಸಂಗಾ ಭಸ್ಮಾಂಗಿಯ ಕಂಡರೆ, ನಮೋ ನಮೋ ಎಂಬೆನು.
--------------
ಚನ್ನಬಸವಣ್ಣ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ವಾಙõïಮಾನಸಾಗೋಚರವೆಂದು ಹೇಳುತ್ತೈದಾವೆ ವಾಕ್ಯಂಗಳು. ಅದಂತಿರಲಿ, ಐತಿಹಾಸಿಕರು ಪೌರಾಣಿಕರು ಆಗಮಿಕರು ಅರಿದರಾದಡೆ ದೃಶ್ಯನೆಂಬರೆ ಶಿವನನು? ಅದೃಶ್ಯನೆಂಬರೆ ಶಿವನನು? ವಾಙõïಮಾನಸಾಗೋಚರನೆಂಬರೆ ಶಿವನನು? `ಅತ್ಯತಿಷ್ಠದ್ದಶಾಂಗುಲಂ `ಏಕ ಏವ ಪುರುಷಃ ಎಂಬ ಶ್ರುತಿಯಿರಲು ಮತ್ತಚಿತ್ತನೆ ಶರಣನು? ಅಣುವಿನೊಳಗಣುವಾಗಿ, ಮಹತ್ತಿನೊಳಗೆ ಮಹತ್ತಾಗಿ, ಇಹಪರವೆಂಬ ಸಂದ ಹರಿದು, ಅಧ್ಯಕ್ಷತನಕ್ಕೆ ಕಾರಣಿಕನಾಗಿ ಇಹಲೋಕವೆ ಪರ, ಪರವೆ ಇಹಲೋಕ. ಅದು ಹೇಗೆಂದಡೆ: ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ [ನಿತ್ಯಂ]ನ ಸಂಶಯಃ ಎಂಬ ಆಗಮವಾಕ್ಯವನರಿದು, ಗುರುವಿಂಗೆ ತನುಮುಟ್ಟಿ, ತ್ರಿವಿಧಲಿಂಗಕ್ಕೆ ಮನಮುಟ್ಟಿ, ತ್ರಿವಿಧಜಂಗಮಕ್ಕೆ ಧನಮುಟ್ಟಿ, ತ್ರಿವಿಧ ನಿವೇದಿಸಿ, ಆ ಗುರುವಿಂ ಶುದ್ಧ[ಪ್ರಸಾದವ] ಆ ಲಿಂಗದಿಂ ಸಿದ್ಧನಪ್ರಸಾದವಫ ಅ ಜಂಗಮದಿಂ ಪ್ರಸಿದ್ಧ[ಪ್ರಸಾದವ]ನವಗ್ರಹಿಸಿ ಈ ಲಿಂಗಾರ್ಚನೆಯ ಸ್ವಾನುಭಾವದಿಂದೇಕವ ಮಾಡಿ ಅರ್ಚಿಸಲಲ್ಲಿ ಶರಣರು ಸ್ವತಂತ್ರರು. ಅಂಗದಾಸೆಯಲ್ಲಿ ಹರಿವುದ ಬಿಟ್ಟ ನಿಸ್ಸಂಗಿಗಳು. ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣ ಪಂಚೇಂದ್ರಿಯಂಗಳ ಶಿವನ ಮುಖವೆಂದರಿದು ಅನ್ಯಸಂಗಂಗಳಿಗೆ ಎಳಸಿ ಬಳಸಿ ಬಣ್ಣಕರಪ್ಪರೆ ಶರಣರು? ಲಿಂಗಾರ್ಚನವಿಹೀನಸ್ತು ದ್ವಿಜೋ[s]ಪಿ ಶ್ವಪಚಾಧಮಃ ಲಿಂಗಾರ್ಚನಪರೋ ನಿತ್ಯಂ ಶ್ವಪಚೋ[s]ಪಿ ದ್ವಿಜೋತ್ತಮಃ ಎಂದುದಾಗಿ, ಅಮ್ಮ ಶರಣರಿಗೆ ಸರಿ ಉಂಟೆ ಲೋಕದೊಳಗೆ? ಶೂನ್ಯವೆನಿಸುವ ವಸ್ತುವ ರೂಹಿಂಗೆ ತಂದು ನೆರೆದು ತಾನೆ ರೂಪಾಗಬಲ್ಲ ಶರಣನು. ಆತನ ಮಹಾಮಹಿಮೆಗೆ ನಮೋ ನಮೋ ಎಂಬೆನು ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇದು ಕಾರಣ, ಸರ್ವಾಂಗೋದ್ಧೂಳನವೆ ಅದ್ಥಿಕ ನೋಡಾ. ಆತನ ರೋಮರೋಮಂಗಳೆಲ್ಲವು ಲಿಂಗಮಯ ನೋಡಾ. ಆತನು ಪವಿತ್ರಕಾಯನು ನೋಡಾ. ಆತನು ಸ್ವಯಂಜ್ಯೋತಿಸ್ವರೂಪನು ನೋಡಾ. ಆತನು ಶುದ್ಧ ನಿರ್ಮಲನು ನೋಡಾ. ಆ ಪರಶಿವಸ್ವರೂಪಂಗೆ ನಮೋನಮೋ ಎಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲೋಕದಿಚ್ಛೆಯ ನಡೆವವನಲ್ಲ, ಲೋಕದಿಚ್ಛೆಯ ನುಡಿವವನಲ್ಲ, ಲೋಕವಿರಹಿತ ಶರಣ, ಶರಣವಿರಹಿತ ಲೋಕವೆಂಬುದು ಕಾಣಬಂದಿತ್ತು ನೋಡಾ. ಲಿಂಗವೆ ಗೂಡಾಗಿ, ಜಂಗಮವೆ ಸ್ವಾಯತವಾಗಿ ಪ್ರಸಾದವೆ ಪ್ರಾಣವಾಗಿ ಪರಿಣಾಮದಲ್ಲಿ ಇಪ್ಪ ನೋಡಯ್ಯಾ. ಕೂಡಲಸಂಗಮದೇವಾ, ನಿಮ್ಮ ಶರಣ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ಅನಿಮಿಷನಲ್ಲಮಯ್ಯ, ಮರುಳಶಂಕರಯ್ಯ, ಕೋಲಶಾಂತಯ್ಯ, ಮಾದಾರ ಧೂಳಯ್ಯ, ಮಿಂಡಮಲ್ಲಿನಾಥ, ಚೆನ್ನಬಸವಣ್ಣ, ಚೇರಮರಾಯ, ತೆಲುಗ ಜೊಮ್ಮಣ್ಣ, ಕಿನ್ನರಯ್ಯ, ಹಲಾಯುಧ, ದಾಸಿಮಯ್ಯ, ಭಂಡಾರಿ, ಬಸವರಾಜ ಮುಖ್ಯವಾದ ಚೆನ್ನಮಲ್ಲಿಕಾರ್ಜುನನ ಶರಣರಿಗೆ ನಮೋ ನಮೋ ಎಂಬೆನು.
--------------
ಅಕ್ಕಮಹಾದೇವಿ
ತನುವಿನೊಳಗಿದ್ದು ತನುವ ಗೆದ್ದಳು, ಮನದೊಳಗಿದ್ದು ಮನವ ಗೆದ್ದಳು, ವಿಷಯದೊಳಗಿದ್ದು ವಿಷಯಂಗಳ ಗೆದ್ದಳು, ಅಂಗಸುಖವ ತೊರೆದು ಭವವ ಗೆದ್ದಳು, ಕೂಡಲಚೆನ್ನಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು.
--------------
ಚನ್ನಬಸವಣ್ಣ
ಇನ್ನಷ್ಟು ... -->