ಅಥವಾ

ಒಟ್ಟು 18 ಕಡೆಗಳಲ್ಲಿ , 9 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ ಅಮೃತದೇಹಿಗೆ ಹಸಿವು ತೃಷೆಯೆ ? ಆ ಅಮೃತವೆ ಆಹಾರ, ಆ ಅಮೃತವೆ ಸೇವನೆ, ಬೇರೊಂದು ವಸ್ತುವುಂಟೆ ? ಇಲ್ಲ. ಅಮೃತವೇ ಸರ್ವಪ್ರಯೋಗಕ್ಕೆ. ಇದಕ್ಕೆ ಕಟ್ಟಳೆಯುಂಟೆ ? ಕಾಲವುಂಟೆ ? ಆಜ್ಞೆ ಉಂಟೆ ? ಬೇರೆ ಕರ್ತರುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಶ್ರೀಗುರುಲಿಂಗದಲ್ಲಿ ಜನಿಸಿ, ಶಿವಲಿಂಗದಲ್ಲಿ ಬೆಳೆದು ಜಂಗಮಲಿಂಗದಲ್ಲಿ ವರ್ತಿಸಿ, ಪ್ರಸಾದಲಿಂಗದಲ್ಲಿ ಪರಿಣಾಮಿಸಿ, ಗುರು ಲಿಂಗ ಜಂಗಮ ಪ್ರಸಾದ ಒಂದೆಂದರಿದು ಆ ಚತುರ್ವಿಧ ಏಕವಾದ ಲಿಂಗವೇ ಪ್ರಾಣ, ಪ್ರಾಣವೇ ಲಿಂಗ ಲಿಂಗವೇ ಅಂಗ, ಅಂಗವೆ ಲಿಂಗವಾದ ಲಿಂಗಸ್ವಾಯತವಾದ ಲಿಂಗೈಕ್ಯಂಗೆ ಜಪ ಧ್ಯಾನ ತಪಕ್ಕೆ ಅರ್ಚನೆಗೆ ಪೂಜನೆಗೆ ಆಗಮವುಂಟೆ ? ಕಾಲವುಂಟೆ ? ಕರ್ಮವುಂಟೆ ? ಕಲ್ಪಿತವುಂಟೆ ? ಇಲ್ಲ. ಸರ್ವವೂ ಲಿಂಗಮಯ. ಆ ಲಿಂಗವಂತಂಗೆ ನಡೆದುದೇ ಆಗಮ, ಪೂಜಿಸಿದುದೇ ಕಾಲ ಮಾಡಿದುದೇ ಕ್ರಿಯೆ, ನುಡಿದುದೇ ಜಪ, ನೆನೆದುದೇ ಧ್ಯಾನ ವರ್ತಿಸಿದುದೇ ತಪಸ್ಸು. ಇದಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ರವಿ, ಶಶಿ, ಆತ್ಮ ಮನೋವಾಕ್ಕಾಯ ಹೊನ್ನು ಹೆಣ್ಣು ಮಣ್ಣು ಮೊದಲಾದ ಸರ್ವಪದಾರ್ಥವನರ್ಪಿಸಿ, ಗುರು ಲಿಂಗ ಜಂಗಮದ ಪ್ರಸನ್ನತೆಯ ಪಡೆದ ಮಹಾಪ್ರಸಾದಿಗೆ ಸರ್ವವೂ ಪ್ರಸಾದವಲ್ಲದೆ ಮತ್ತೊಂದಿಲ್ಲ. ಆ ಪ್ರಸಾದಿಗೆ ಪದಾರ್ಥವೆಂಬ ಪ್ರಸಾದವೆಂಬ ಭೇದವುಂಟೆ ? ಅರ್ಪಿತವೆಂಬ ಅನರ್ಪಿತವೆಂಬ ಸಂದೇಹವುಂಟೆ ? ಕೊಡುವಲ್ಲಿ ಕೊಂಬಲ್ಲಿ ಸೀಮೆಯುಂಟೆ ? ನಿಸ್ಸೀಮಪ್ರಸಾದಿಗೆ ಸರ್ವವೂ ಪ್ರಸಾದ. ಆ ಭೋಗಕ್ಕೆ ಮೇರೆ ಉಂಟೆ ? ಅವಧಿಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ವೇದ ಶಾಸ್ತ್ರ ಆಗಮ ಪುರಾಣ ಮೊದಲಾದ ಸರ್ವವಿದ್ಯಂಗಳ ತಾತ್ಪರ್ಯ ಮರ್ಮ ಕಳೆಗಳನರಿದ ಮಹಾಜ್ಞಾತೃವಿಂಗೆ ಆ ಮಹಾಜ್ಞಾನವೇ ದೇಹ, ಆ ಮಹಾಜ್ಞೇಯವೇ ಪ್ರಾಣ. ಈ ಮಹತ್ತಪ್ಪ ಜ್ಞಾತೃ ಜ್ಞಾನ ಜ್ಞೇಯ ಒಂದಾದ ಮಹಾಬೆಳಗಿನ ಸುಖಸ್ವರೂಪಂಗೆ ಮತ್ರ್ಯ ಸ್ವರ್ಗ ದೇವಲೋಕವೆಂಬ ಫಲಪದದಾಸೆಯುಂಟೆ ? ಇಲ್ಲ. ನಿರಂತರ ತೇಜೋಮಯ ಸುಖಸ್ವರೂಪನು ವಿದ್ಯಾಸ್ವರೂಪನು ನಿತ್ಯಾನಂದಸ್ವರೂಪನು. ಆ ಮಹಾಮಹಿಮನ ಮಹಾಸುಖಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಆ ಮಹಾನುಭಾವಿ ತಾನೆ ಕೇವಲ ಜ್ಯೋತಿರ್ಮಯಲಿಂಗವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
--------------
ಉರಿಲಿಂಗಪೆದ್ದಿ
ಅಯ್ಯಾ ಎನೆಗೆ ಬಸವಪ್ರಿಯನೆಂದರೂ ನೀನೆ, ಕೂಡಲ ಚೆನ್ನಬಸವಣ್ಣನೆಂದರೂ ನೀನೆ, ಗುರುವೆಂದರೂ ನೀನೆ, ಲಿಂಗವೆಂದರೂ ನೀನೆ, ಜಂಗಮವೆಂದರೂ ನೀನೆ, ಪ್ರಸಾದವೆಂದರೂ ನೀನೆ. ಅದೇನು ಕಾರಣವೆಂದರೆ, ನೀ ಮಾಡಲಾಗಿ ಅವೆಲ್ಲವು ನಾಮರೂಪಿಗೆ ಬಂದವು. ಅದು ಕಾರಣ, ನಾನೆಂದರೆ ಅಂಗ, ನೀನೆಂದರೆ ಪ್ರಾಣ. ಈ ಉಭಯವನು ನೀವೆ ಅರುಹಿದಿರಾಗಿ, ಇನ್ನು ಭಿನ್ನವಿಟ್ಟು ನೋಡಿದೆನಾದರೆ, ಚನ್ನಮಲ್ಲೇಶ್ವರ ನೀವೆ ಬಲ್ಲಿರಿ. ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಲ್ಲಿ ಏಕವಾದ ಕಾರಣ, ಎನಗೆ ಭವವಿಲ್ಲ, ಬಂಧನವಿಲ್ಲ, ಅದಕ್ಕೆ ನೀವೇ ಸಾಕ್ಷಿ.
--------------
ಹಡಪದ ಅಪ್ಪಣ್ಣ
ಸಟೆಯ ದಿಟವಮಾಡಿ ಕಂಡು ಸ್ವಭಾವವಾಗಿ ಸದ್ಭಾವದಿಂ ಲಿಂಗವಾಗಿ ಲಿಂಗವನು ಭಕ್ತಿಯಿಂದ ಪೂಜಿಸಿ ಲಿಂಗದಲ್ಲಿ ವರವ ಪಡೆದು, ಶಿವಪದವ ಪಡೆದರು ಪುರಾತನರು. ಅದೆಂತೆನಲು ಕೇಳಿರೆ: ಬಳ್ಳ ಲಿಂಗವೆ? ಅಲ್ಲ, ಅದು ಸಟೆ, ಸದ್ಭಾವದಿಂ ಲಿಂಗವಾಯಿತ್ತು, ಬಳ್ಳೇಶ್ವರ ಮಲ್ಲಯ್ಯಗಳಿಂದ. ಆಡಿನ ಹಿಕ್ಕೆ ಲಿಂಗವೆ? ಅಲ್ಲ, ಅದು ಸಟೆ. ಸದ್ಭಾವದಿಂ ಲಿಂಗವಾಯಿತ್ತು, ಗೊಲ್ಲಾಳರಾಯನಿಂದ. ನರಮಾಂಸವ ಭಕ್ಷಿಸುವೆನೆಂಬವ ಜಂಗಮವೆ? ಅಲ್ಲ, ಅದು ಸಟೆ. ಸದ್ಭಾವದಿಂ ಭಾವಿಸೆ ಜಂಗಮವಾಗಿ ಕೇವಲ ಲಿಂಗವಾಯಿತ್ತು ಸಿರಿಯಾಳನಿಂದ. ಸತ್ತ ಕರುವ ಹೊತ್ತು ಮಾದಾರನಾಗಿಬರುವುದು ಜಂಗಮಲಕ್ಷಣವೇ? ಅಲ್ಲ, ಅದು ಸಟೆ. ಸದ್ಭಾವದಿಂ ಭಾವಿಸೆ ಜಂಗಮ ಲಿಂಗವಾಯಿತ್ತು ಕೆಂಭಾವಿಯ ಭೋಗಣ್ಣನಿಂದ. ಡೊಂಬಿತಿ ಗುರುವೆ? ಅಲ್ಲ, ಅದೂ ಸಟೆ. ಸದ್ಭಾವದಿಂ ಭಾವಿಸೆ ಲಿಂಗವಾಯಿತ್ತು ಗುರುಭಕ್ತಯ್ಯಂಗಳಿಂದ. ಇಂತು ಸಟೆಯ ದಿಟವ ಮಾಡಿ ದಿಟವಾದರು, ಸದ್ಭಕ್ತರಾದರು, ಕೇವಲ ಲಿಂಗವ ಮಾಡಿದರು. ದಿಟ ಶಿವನ ಸಟೆಯ ಮಾಡಿ ಕಂಡು ಸನತ್ಕುಮಾರನೊಂಟೆಯಾದನು. ದಿಟ ಶಿವನ ಸಟೆಯ ಮಾಡಿ ಕಂಡು ಬ್ರಹ್ಮ ತನ್ನ ಶಿರವ ಹೋಗಾಡಿಕೊಂಡನು. ದಿಟ ಶಿವನ ಸಟೆಯ ಮಾಡಿ ಕಂಡು ದಕ್ಷನು ತನ್ನ ಶಿರವ ಹೋಗಾಡಿಕೊಂಡನು. ದಿಟ ಶಿವನ ಸಟೆಯ ಮಾಡಿ ಕಂಡು ನರಸಿಂಹನು ವಧೆಗೊಳಗಾದನು. ಈ ಮಹಾ ತಪ್ಪುಗಳನ್ನು ಮಾಡಿ ದೋಷಿಗಳಾದರು. ಮಹಾಲಿಂಗದ ಸದ್ಭಕ್ತರು, ಮಹಾಶರಣಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು. ಸಟೆಯ ದಿಟವ ಮಾಡುವ ಶಕ್ತಿಯಿಲ್ಲ ಎಮ್ಮ ಸದ್ಭಕ್ತರಂತೆ. ಅದಂತಿರಲಿ, ದಿಟವ ಸಟೆಯ ಮಾಡಿ ದೋಷಿಗಳಾದಿರಿ ಅಭಕ್ತರಂತೆ. ಅದಂತಿರಲಿ, ಸಟೆಯ ದಿಟವ ಮಾಡಬೇಡ, ದಿಟವ ಸಟೆಯ ಮಾಡಬೇಡ. ಸಹಜಸ್ವಭಾವ ನಿತ್ಯಸತ್ಯವಹ ತಾತ್ಪರ್ಯವನೆ ವಿಶ್ವಾಸವ ಮಾಡಿ, ನಂಬಿ ಭಕ್ತಿಯಿಂ ಪೂಜಿಸಿ ಅವಿಶ್ವಾಸದಿಂ ಕೆಡಬೇಡ, ಕೆಡಬೇಡ. ಸಹಜವಹ ದೃಷ್ಟವಹ ಪರಶಿವನು ಶ್ರೀಗುರು ವಿಶ್ವಾಸವಂ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ. ಆ ಪರಶಿವನು ಶ್ರೀಗುರುಲಿಂಗವು ಏಕವಾದ ಲಿಂಗವು ವಿಶ್ವಾಸವ ಮಾಡಿ ನಂಬಿರಣ್ಣಾ, ಮತ್ತೆಯೂ ನಂಬಿರಣ್ಣಾ. ಆ ಪರಶಿವಮೂರ್ತಿ ಜಂಗಮವು ವಿಶ್ವಾಸವ ಮಾಡಿ ನಂಗಿರಣ್ಣಾ, ಮತ್ತೆಯೂ ನಂಬಿರಣ್ಣಾ. ಕೇವಲವಿಶ್ವಾಸವ ಮಾಡಿ ಪ್ರಸಾದವ ಪಡೆದು ಮುಕ್ತರಾಗಿ, ಇದು ದೃಷ್ಟ. ಅವಿಶ್ವಾಸದಿ ಕೆಡದಿರಿ ಕೆಡದಿರಿ. ಸರ್ವಸದ್ಭಾವವಿಶ್ವಾಸದಿಂ ಬದುಕಿರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವ ನಂಬಿರಣ್ಣಾ.
--------------
ಉರಿಲಿಂಗಪೆದ್ದಿ
ಏಕತತ್ತ್ವ ತ್ರಿತತ್ತ್ವ ಪಂಚತತ್ತ್ವ ಪಂಚವಿಂಶತಿತತ್ತ್ವ ಷಟ್‍ತ್ರಿಂಶತ್ ತತ್ತ್ವ ಇಂತೀ ತತ್ತ್ವ ಂಗಳೆಲ್ಲವನೂ ಗರ್ಭೀಕರಿಸಿಕೊಂಡಿಪ್ಪ ಈ ತತ್ತ್ವಂಗಳೆಲ್ಲವಕ್ಕೆಯೂ ಅಧಿಕವಾಗಿಪ್ಪ ಮಹಾತತ್ತ್ವವೂ `ನ ಗುರೋರಧಿಕಂ ನ ಗುರೋರಧಿಕಂ' ಎಂದುದಾಗಿ `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ 'ಅದ್ವೈತಂ ತ್ರಿಷು ಲೋಕೇಷು ನಾದ್ವೈತಂ ಗುರುಣಾ ಸಹ' ಎಂದುದಾಗಿ `ಗುರುದೇವೋ ಮಹಾದೇವೋ' ಎಂದುದಾಗಿ ಶ್ರೀಗುರುತತ್ತ್ವವೇ ಪರತತ್ತ್ವವು. ಶಿವ ಶಿವಾ ಸಕಲವೇದ ಶಾಸ್ತ್ರಪುರಾಣ ಆಗಮ ಅಷ್ಟಾದಶವಿದ್ಯಂಗಳು ಸರ್ವವಿದ್ಯಂಗಳು ಸಪ್ತಕೋಟಿಮಹಾಮಂತ್ರಂಗಳು ಉಪಮಂತ್ರಂಗಳು ಅನಂತಕೋಟಿಗಳನೂ ಗರ್ಭೀಕರಿಸಿಕೊಂಡಿಪ್ಪ ಇವಕೆ ಮಾತೃಸ್ಥಾನವಾಗಿ, ಇವಕೆ ಉತ್ಪತ್ತಿ ಸ್ಥಿತಿ ಲಯ ಕಾರಣಂಗಳಿಗೆ ಕಾರಣವಾಗಿಪ್ಪ ಮಹಾತತ್ತ್ವ ಮಹಾಮಂತ್ರರಾಜನು, ಶ್ರೀಮೂಲಮಂತ್ರವು. ಈ ಮಹಾತತ್ವ್ತವು ಏಕವಾದ ಮಹಾಲಿಂಗವು. ಈ ಮಹಾಲಿಂಗವೆ ಅಂಗವಾಗಿಪ್ಪ ಮಹತ್ತಪ್ಪ ಮಹಾಸದ್ಭಕ್ತನು. ಆತನೇ ತತ್ತ್ವಜ್ಞನು, ಆತನೇ ತತ್ತ್ವಮಯನು, ಆತನೇ ತತ್ತ್ವಮೂರ್ತಿ. ಈ ಮಹಾಮಂತ್ರ ಮುಖೋದ್ಗತವಾದ ಮಹಾಭಕ್ತನು. ಆತನೇ ವೇದವಿತ್ತು, ಆತನೇ ಶಾಸ್ತ್ರಜ್ಞನು, ಆತನೇ ಪುರಾಣಿಕನು, ಆತನೇ ಆಗಮಜ್ಞನು, ಆತನೇ ಸರ್ವಜ್ಞನು. ಈ ಮಹಾಘನ ಮಹತ್ತನೊಳಕೊಂಡ ಸದ್ಭಕ್ತಂಗೆ ಇತರ ತತ್ತ್ವಂಗಳನೂ ಇತರ ದೇವತೆಗಳನೂ ಇತರ ದೇವದಾನವಮಾನವರುಗಳನೂ ಇತರ ಮಂತ್ರಂಗಳನೂ ಇತರ ಪದಂಗಳನೂ ಸರಿ ಎನಬಹುದೆ ? ಶಿವ ಶಿವಾ ಸರಿ ಎಂದಡೆ ಮಹಾದೋಷವು. ಈ ಮಹಾಭಕ್ತನೇ ಉಪಮಾತೀತನು ವಾಙ್ಮನೋತೀತನು. ಈ ಮಹಾದೇವನ ಭಕ್ತನೇ ಮಹಾದೇವನು. ಈ ಮಹಾಭಕ್ತನ ಪೂಜೆಯೇ ಶಿವಲಿಂಗಪೂಜೆ. ಈ ಮಹಾಭಕ್ತನ ಪದವೇ ಪರಮಪದವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಲಚಕ್ರದ ವಚನ : ಏಕಂ ಏಕವಾದ ವಸ್ತುವ ಲೋಕಾಲೋಕಂಗಳರಿಯವು ಸ್ಥೂಲ ಸೂಕ್ಷ್ಮವೆನುತಿರ್ಪರೆಲ್ಲರೂ, ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ ಭೂತಪ್ರಾಣಿಗಳವರೆತ್ತ ಬಲ್ಲರು ಆತನ ಘನವ. ಚಿಟುಕು ಮುನ್ನೂರರವತ್ತು ಕೂಡಿದಡೆ ಒಂದು ವಿಘಳಿಗೆ, ಆ ವಿಘಳಿಗೆ ಅರುವತ್ತು ಕೂಡಿದೊಡೆ ಒಂದು ಘಳಿಗೆ, ಆ ಘಳಿಗೆ ಅರುವತ್ತು ಕೂಡಿದೊಡೆ ಒಂದು ದಿನ. ದಿನ ಮೂವತ್ತು ಕೂಡಿದೊಡೆ ಒಂದು ಮಾಸ ಮಾಸ ಹನ್ನೆರಡು ಕೂಡಿದೊಡೆ ಒಂದು ವರುಷ ವರುಷ ಅರುವತ್ತು ಕೂಡಿದೊಡೆ ಒಂದು ಸಂವತ್ಸರ_ ಇಂತೀ ಕಾಲಚಕ್ರಂಗಳು ಈ ಪರಿಧಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ. ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಳೆಯೊಳು, ತಿರುಗಿ ಬರುತ್ತಿಹವು ಕಾಣಿರೆ. ಕೃತಯುಗ ಹದಿನೇಳು ಲಕ್ಷವು ಇಪ್ಪತ್ತೆಂಟುಸಾವಿರವರ್ಷ ವರ್ತಿಸಿ ನಿಂದಿತ್ತು. ತ್ರೇತಾಯುಗ ಹನ್ನೆರಡು ಲಕ್ಷವು ತೊಂಬತ್ತಾರುಸಾವಿರ ವರ್ಷ ವರ್ತಿಸಿ ನಿಂದಿತ್ತು. ದ್ವಾಪರಯುಗ ಎಂಟು ಲಕ್ಷವು ಅರುವತ್ತುನಾಲ್ಕುಸಾವಿರ ವರ್ಷ ವರ್ತಿಸಿ ನಿಂದಿತ್ತು. ಕಲಿಯುಗ ನಾಲ್ಕುಲಕ್ಷವು ಮೂವತ್ತೆರಡುಸಾವಿರ ವರ್ಷ ವರ್ತಿಸಿ ನಿಂದಿತ್ತು. _ಇಂತೀ ನಾಲ್ಕು ಯುಗಂಗಳು ಕೂಡಿ ಒಂದಾಗಿ ಮೇಳಯಿಸಿದೊಡೆ, ನಾಲ್ವತ್ತು ಮೂರು ಲಕ್ಷವು ಇಪ್ಪತ್ತುಸಾವಿರ ವರುಷ ಕಟ್ಟಳೆಯಾಯಿತ್ತು. ಈ ನಾಲ್ಕುಯುಗಂಗಳು ಇಪ್ಪತ್ತೊಂದು ಬಾರಿ ತಿರುಗಿದಡೆ ಸುರಪತಿಗೆ ಪರಮಾಯು, ಬ್ರಹ್ಮಂಗೆ ಜಾವ, ಅಷ್ಟಾಶಿತಿ ಸಹಸ್ರ ಋಷಿಯರು ಸಾವಿರಬಾರಿ ತಿರುಗಿದಡೆ ಬ್ರಹ್ಮಂಗೆ ಆಯುಷ್ಯ ನೂರಪ್ಪುದು, ವಿಷ್ಣುವಿಂಗೆ ಜಾವಪ್ಪುದು. ಆ ವಿಷ್ಣುವಿನ ಒಂದು ದಿನ(ಜಾವ?)ದೊಳಗೆ ನಾಲ್ಕು ಬಾರಿ ಹುಟ್ಟಿ ನಾಲ್ಕು ಬಾರಿ ಹೊಂದುವ ಬ್ರಹ್ಮನು, ಆ(ದಿ) ವಿಷ್ಣುವಿನ ಒಂದು ದಿನವಪ್ಪುದು, (ಅಂಥ ವಿಷ್ಣುವಿನ ಒಂದು ದಿನದಲ್ಲಿ) ಸಮಸ್ತ ಈರೇಳು ಭುವನಂಗಳೆಲ್ಲ ಭೂತಸಂಹಾರ , ಅಂಥಾ ಭೂತಸಂಹಾರಗಳು ಹದಿನೆಂಟು ಲಕ್ಷವು ಇಪ್ಪತ್ತೆಂಟುಸಹಸ್ರ ವರುಷ ತಿರುಗಲು ಪೃಥ್ವಿಯೆಲ್ಲಾ ಜಲಪ್ರಳಯ. ಅಂಥಾ ಜಲಪ್ರಳಯವೆಂಟು ಬಾರಿ ತಿರುಗಿದಡೆ ವಿಷ್ಣುವಿಂಗೆ ಮರಣ, ರುದ್ರಂಗೆ ನಿಮಿಷ. ಅಂಥಾ ರುದ್ರನ ಒಂದು ನಿಮಿಷದಲ್ಲಿ ಅತಳ ವಿತಳ ಸುತಳ ಮಹೀತಳ ರಸಾತಳ ತಳಾತಳ ಪಾತಾಳ_ ಇಂತು ಕೆಳಗೇಳು ಭುವನಂಗಳು, ಮೇಲೆ, ಸತ್ಯಲೋಕ ಜನರ್ಲೋಕ ತಪೋಲೋಕ ಮಹರ್ಲೋಕ, ಸ್ವರ್ಲೋಕ ಭುವರ್ಲೋಕ ಭೂಲೋಕ ಮೊದಲಾಗಿ_ಇಂತೀ ಲೋಕಾಲೋಕಂಗಳೆಲ್ಲ ಮುಳುಗಿ ಮಹಾಪ್ರಳಯವಾದಲ್ಲಿ ರುದ್ರಲೋಕವೊಂದುಳಿಯೆ, ಆ ರುದ್ರಂಗೆ ಒಂದುದಿನ. ಅಂಥಾದಿನ ಮುನ್ನೂರರವತ್ತು ಕೂಡಿದಡೆ ಒಂದು ವರುಷ. ಅಂಥಾ ವರುಷ ಶತಕೋಟಿ ಕೂಡಿದಡೆ ರುದ್ರಂಗೆ ಪರಮಾಯು. ಅಂಥಾ ರುದ್ರರು ಅನೇಕರು ಹೋದರಲ್ಲಾ, ಮತ್ತಂ ಪಶುಪತಿ, ಶಂಕರ, ಶಶಿಧರ, ಸದಾಶಿವ, ಗೌರೀಪತಿ, ಮಹಾದೇವ ಈಶ್ವರರೆಂಬವರು ಆ ದಿನದಲ್ಲಿ ಇವರು ಪ್ರಮಥಗಣೇಶ್ವರರು, ತಪೋರಾಜ್ಯವನುಂಬರು. ತಪಕ್ಕೆ ಬಿಜಯಂಗೈವರು ಆ ರುದ್ರರು. ಲೋಕಾಲೋಕಂಗಳು ಕೂಡಿ ಭೂತ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು. ಬಳಿಕ ಶೂನ್ಯವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು ಬಳಿಕ ಕಾಳಾಂಧರ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು_ಬಳಿಕ ಮಹಾ ಪ್ರಕಾಶದ ಬೆಳಗು. ಇಂತಹ ಕಾಲಂಗಳು ಈ ಪರಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ ! ಅಂತಹ ಕಾಲಂಗಳೂ ಅರಿಯವು, ಅಂತಹ ದಿನಂಗಳೂ ಅರಿಯವು ಅಂತಹ ದೇವತೆಗಳೂ ಅರಿಯರು,_ ಅಪ್ರಮಾಣ ಅಗಮ್ಯ ಅಗೋಚರ ಉಪಮಿಸಬಾರದು ಅಂತಿಂತೆನಲಿಲ್ಲ ಗುಹೇಶ್ವರಲಿಂಗ ನಿರಂಜನ ನಿರಾಳ ! ನಿರಾಮಯ !
--------------
ಅಲ್ಲಮಪ್ರಭುದೇವರು
ನೀರು ನೀರು ಕೂಡಿ, ಕ್ಷೀರ ಕ್ಷೀರವ ಕೂಡಿ, ಅಗ್ನಿ ಅಗ್ನಿಯ ಕೂಡಿದಂತೆ. ತನ್ನೊಳಗೆ ಶಿವನು, ಶಿವನೊಳಗೆ ತಾನು ಅಡಗಿ ಏಕವಾದ ಮತ್ತೆ, ತಾ ಶಿವನಾದೆನೆಂಬ ಅಹಂಭಾವವಿಲ್ಲ ನೋಡಯ್ಯಾ. ಸರ್ವಾತ್ಮರೆಂಬ ಪರತತ್ವ ತಾನಾದ ಮತ್ತೆ, ಭೇದಾಭೇದ ಶಂಕೆಯೆಂಬುದು ಏನೂ ಇಲ್ಲ ನೋಡಯ್ಯಾ. ನಿತ್ಯ ನಿರ್ವಿಕಾರ ನಿಸ್ಸೀಮ ವ್ಯೋಮಾತೀತ ನಿರ್ವಿಕಲ್ಪ ನಿಜ ತಾನಾದ ಮತ್ತೆ, ಭೂಮ್ಯಾದಿ ಭೂತ ಗ್ರಹ ನಕ್ಷತ್ರ ದೇವ ಮನುಷ್ಯ ತಿರ್ಯಗ್ಜಾತಿಗಳೆಂಬವೇನೂ ಇಲ್ಲ ನೋಡಾ. ಸತ್ತು ಚಿತ್ತು ಆನಂದಲಕ್ಷಣವಿದೆಂಬ ಜ್ಞಾನಶೂನ್ಯವಾಗಿ ಶಬ್ದಮುಗ್ಧವಾದ ಮತ್ತೆ ಪರಬ್ರಹ್ಮಅಪರಬ್ರಹ್ಮವೆಂಬ ನಾಮವು ಇಲ್ಲ. ತಾನಲ್ಲದೆ ಮತ್ತೇನೂ ಇಲ್ಲ ನೋಡಾ. ``ಜಲೇ ಜಲಮಿವ ನ್ಯಸ್ತಂ ವಹ್ನೌ ವಹ್ನಿರಿವಾರ್ಪಿತಃ ಪರಬ್ರಹ್ಮಣಿ ಲೀನಾತ್ಮನ ವಿಭಾಗೇನ ದೃಶ್ಯತೇ' ಇಂತೆಂದುದಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾದ ಲಿಂಗೈಕ್ಯನಿರವು.
--------------
ಸ್ವತಂತ್ರ ಸಿದ್ಧಲಿಂಗ
ಉರಗನ ಫಣಾಮಣಿಯ ಬೆಳಗಿನಲ್ಲಿ ನಿಂದ ಪ್ರಸದಿ ಕರಿಯ ಕೊಂದು ಹರಿಯ ಬೆಳಗಿನಲ್ಲಿ ನಿಂದ ಪ್ರಸಾದಿ. ಶಿರದ ಮೇಲೆ ನಿಂದ ಗಂಗೆಯ ಬೆಳಗಿನಲ್ಲಿ ನಿಂದ ಪ್ರಸಾದಿ. ಉರಮಧ್ಯದಲ್ಲಿಪ್ಪ ಪರಂಜ್ಯೋತಿಯ ಬೆಳಗಿನಲ್ಲಿ ನಿಂದ ಪ್ರಸಾದಿ. ಪೂರ್ವಪಶ್ಚಿಮ ಏಕವಾದ ಬೆಳಗಿನಲ್ಲಿ ನಿಂದ ಪ್ರಸಾದಿ. ಇಂತೀ ಘನವನೆಲ್ಲ ಒಳಕೊಂಡ ಮಹಾಬೆಳಗಿನಲ್ಲಿ ನಿಂದ ಪ್ರಸಾದಿ. ಅಯ್ಯಾ ಚೆನ್ನಮಲ್ಲೇಶ್ವರಾ, ಆ ಪ್ರಸಾದಿಯ ಪ್ರಸಾದವ ಕೊಂಡು ನಾ ಉರಿಯುಂಡ ಕರ್ಪುರದಂತಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕಾಣಬಾರದ ಘನವೆಂದು, ಜಗವೆಲ್ಲ ಹೇಳುತ್ತಿದೆ. ಈ ಕಾಣಬಾರದ ಘನವ ನಾನಾರ ಕೇಳಲಯ್ಯ! ಗುರು ಹೇಳಲಿಲ್ಲ, ಲಿಂಗ ಹೇಳಲಿಲ್ಲ, ಜಂಗಮ ಹೇಳಲಿಲ್ಲ. ಅದು ಹೇಗೆ ಎಂದರೆ:ಗುರು ಒಂದು ಲಿಂಗವ ಕೊಟ್ಟು, ತನ್ನ ಅಂಗದ ಕುರಿತು, ಆ ಲಿಂಗಕ್ಕೆ ಬೆಲೆಯ ತಕ್ಕೊಂಡು ಹೋದನಲ್ಲದೆ, ಆ ಕಾಣಬಾರದ ಘನವ ಹೇಳಿದುದು ಇಲ್ಲ. ಇದ ಲಿಂಗವೆಂದು ಪೂಜಿಸಿದರೆ, ಕಂಗಳ ಕಾಮ ಘನವಾಯಿತ್ತಲ್ಲ ! ಎರಡರ ಸಂಗಸುಖವ ಹೇಳಲರಿಯದೆ, ಜಂಗಮವೆಂದು ಪೂಜೆಯ ಮಾಡಿದರೆ, ಈ ಜಗದೊಳಗೆ ಹುಟ್ಟಿದ ಪದಾರ್ಥಕ್ಕೆ ಒಡೆಯನಾದನಲ್ಲದೆ, ಈ ಕಾಣಬಾರದ ಘನವ, ಹೇಳಿದುದಿಲ್ಲ. ಅದೇನು ಕಾರಣವೆಂದರೆ: ಆ ಕಾಣಬಾರದ ಘನವ, ತಾನೊಬ್ಬ ಕೇಳಲು ಬಾರದು, ತಾನೊಬ್ಬರಿಗೆ ಹೇಳಲು ಬಾರದು. ಏಕೆ? ನಾಮರೂಪಿಲ್ಲವಾಗಿ, ನುಡಿಯಿಲ್ಲ. ಇಂತಪ್ಪ ಘನ ತಾನೆ, ಒಂದು ರೂಪ ತೊಟ್ಟು, ತನ್ನ ಲೀಲೆಯ ಎಲ್ಲ ಶರಣರೊಳು ನಟಿಸಿ, ತನ್ನ ತಾನೆ ಸಾಕಾರ ನಿರಾಕಾರವಾಗಿ, ಏಕವಾದ ಭೇದವನರಿಯದೆ ಈ ಲೋಕದಲ್ಲಿ ಇದ್ದರೇನು? ಆ ಲೋಕದಲ್ಲಿ ಹೋದರೇನು? ಹದಿನಾಲ್ಕುಲೋಕವು ತಾನೆಯಾದ ಚಿನ್ಮಯನ ಹೇಳಿಹೆನೆಂದರೆ ಎನ್ನಳವಲ್ಲ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಕಾಮದಿಂದ ಕರಗನು, ಕ್ರೋಧದಿಂದ ಕೊರಗನು. ಲೋಭ ಮೋಹಂಗಳಿಂದತಿ ನೋವನಲ್ಲ ನೋಡಾ, ಭಕ್ತನು. ಮದ ಮತ್ಸರಗಳಿಂದ ಬೆದಬೆದನೆ ಬೇವವನಲ್ಲ; ಅಹಂಕಾರ ಮಮಕಾರಗಳಿಂದ ಮತಿಮಂದನಲ್ಲ ನೋಡಾ, ಭಕ್ತನು ಆಕಾರ ನಿರಾಕಾರ ಏಕವಾದ ಏಕಮೇವ ಪರಬ್ರಹ್ಮವು ತಾನೇ ನೋಡಾ, ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದಯ, ಮಧ್ಯಾಹ್ನ ಅಸ್ತಮಯವೆಂಬ ತ್ರಿಕಾಲದಲ್ಲಿ ತ್ರಿವಿಧ ಪೂಜೆಯ ಮಾಡಬೇಕೆಂಬರು, ಈ ತ್ರಿವಿಧದ ನೆಲೆಯನರಿಯರು. ಲಿಂಗಲಿಂಗವೆಂದು ಲಿಂಗವನೆ ಅರ್ಚಿಸಿ, ಲಿಂಗವನೆ ಪೂಜಿಸಿ, ಅಂಗ ಭಿನ್ನವಾಯಿತ್ತು. ಆರಾರಿಗೆಂದರೆ, ಸ್ವರ್ಗ, ಮತ್ರ್ಯ, ಪಾತಾಳದವರೆಗೆ ಮೂರುಲೋಕವು ಸೆರೆಸೂರೆಹೋಯಿತ್ತು. ಗುರುಲಿಂಗಜಂಗಮ ತ್ರಿವಿಧವು ಏಕವಾದ ಭೇದವ ನಿಮ್ಮ ಶರಣರೇ ಬಲ್ಲರಲ್ಲದೆ, ಈ ಮರಣಬಾಧೆಗೊಳಗಾಗುವ ಮತ್ರ್ಯರೆತ್ತ ಬಲ್ಲರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯಾ, ಅದೇನು ಕಾರಣವೆಂದಡೆ, ಕಂಗಳ ಕತ್ತಲೆಯನೆ ಹರಿದಿರಿ ಮನದ ಕಾಳಿಕೆಯನೆ ಹಿಂಗಿಸಿದಿರಿ ಮಾತಿನ ಮೊದಲನೆ ಹರಿದಿರಿ ಜ್ಯೋತಿಯ ಬೆಳಗನೆ ತೋರಿದಿರಿ ಮಾತು ಮಥನವ ಕೆಡಿಸಿದಿರಿ. ವ್ಯಾಕುಳವನೆ ಬಿಡಿಸಿ, ವಿವೇಕಿಯ ಮಾಡಿ, ನಿಮ್ಮ ಪಾದದಲ್ಲಿ ಏಕವಾದ ಕಾರಣದಿಂದ ನಾ ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ ಎನ್ನಂಗದ ಮೇಲಿಪ್ಪ ಲಿಂಗವು ಕರ್ಪುರದಂತಾಯಿತ್ತು. ಎನ್ನ ಪ್ರಾಣದ ಮೇಲಿಪ್ಪ ಲಿಂಗವು ಪರಂಜ್ಯೋತಿಯಂತಾಯಿತ್ತು. ಎನ್ನ ನಿಃಪ್ರಾಣದ ಮೇಲಿಪ್ಪ ಲಿಂಗವು ನಿರಂಜನದಂತಾಯಿತ್ತು. ಈ ತ್ರಿವಿಧವು ಏಕವಾದ ಭೇದವ ಹೇಳಿಹೆನು ಕೇಳಿರಣ್ಣಾ ! ಎನ್ನ ಅಂಗದ ಮೇಲಿದ ಕರ್ಪುರದಂತಿರ್ದ ಲಿಂಗ, ಪ್ರಾಣದ ಮೇಲಿಪ್ಪ ಪರಂಜ್ಯೋತಿ ಲಿಂಗವ ಬೆರೆಯಿತ್ತು . ಎನ್ನ ಪ್ರಾಮದ ಮೇಲಿಪ್ಪ ಪರಂಜ್ಯೋತಿ ಲಿಂಗ, ನಿಃಪ್ರಾಣದ ಮೇಲಿಪ್ಪ ನಿರಂಜನ ಲಿಂಗವ ಬೆರೆಯಿತ್ತು. ಈ ತ್ರಿವಿಧವು ಏಕವಾದ ಮೇಲೆ, ಒಂದಲ್ಲದೆ ಎರಡುಂಟೆ ? ಇದಕ್ಕೆ ಸಂದೇಹ ಬೇರಿಲ್ಲವಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕಾಯಪ್ರಸಾದ ಒಂದೆಡೆಯಲ್ಲಿ, ಜೀವಪ್ರಸಾದ ಒಂದೆಡೆಯಲ್ಲಿ, ವ್ಯಾಪಾರ ಪ್ರಸಾದ ಒಂದೆಡೆಯಲ್ಲಿ, ನಿತ್ಯಪ್ರಸಾದ ಒಂದೆಡೆಯಲ್ಲಿ, ವಚನಪ್ರಸಾದ ಒಂದೆಡೆಯಲ್ಲಿ, ಅರ್ಥ ಪ್ರಾಣ ಅಭಿಮಾನ ಒಂದೆಡೆಯಲ್ಲಿ, ಅಖಂಡಿತವೆನಿಸಿ ತಾ ಲಿಂಗಪ್ರಸಾದ ಒಂದೆಡೆಯಲ್ಲಿ. ಇಂತಿವೆಲ್ಲವೂ ಏಕವಾದ ಪ್ರಸಾದಿಯ ಪ್ರಸಾದದಿಂದ ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಯಾದೆನಯ್ಯಾ.
--------------
ಚನ್ನಬಸವಣ್ಣ
ಹರಿ ಬ್ರಹ್ಮ ಇಂದ್ರ ಚಂದ್ರ ರವಿ ಕಾಲ ಕಾಮ ದಕ್ಷ ಇವರೊಳಗಾದ ಸಮಸ್ತ ದೇವ ದಾನವ ಮಾನವರೆಲ್ಲರು ಶಿವಲಿಂಗದೇವರನಾರಾಧಿಸಿಹೆವೆಂದು, ಜಪ ಧ್ಯಾನ ಮೌನಾದಿ ತಪ ನಾನಾವ್ರತ ನೇಮಂಗಳಂ ಕೈಕೊಂಡು, ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ ಅನೇಕ ಫಲಪದಮುಕ್ತಿಯಂ ಪಡೆದು ಭೋಗಿಸಿ ಸುಖಿಯಾಗಿರುತಿಹುದಕ್ಕೆ ಸಂಶಯವೇಕೆ ? ಶ್ರುತ ದೃಷ್ಟ ಅನುಮಾನದಿಂ ತಿಳಿದುನೋಡಿ ಅದಕೇನೂ ಸಂದೇಹಂ ಬಡಲಿಲ್ಲಯ್ಯಾ. ಎರಡಿಲ್ಲದೆ ಏಕವಾದ, ಭಿನ್ನದೋರದೆ ಶಿವನಂಗವಾದ ಶಿವಭಕ್ತನು ಇದರಂತೆ ಅಲ್ಲ. ಜಪ ತಪ ಧ್ಯಾನ ಮೌನ ನಾನಾವ್ರತನಿಯಮಂಗಳಂ ಕೈಕೊಂಡು ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ ಅನೇಕ ಫಲಪದಮುಕ್ತಿಯ ಪಡೆದಹೆವೆಂದು ಅಲ್ಪಾಸೆವಿಡಿದು ಭ್ರಮೆಗೊಳಗಾದ ಮರ್ಕಟಮನದ ಪರಿಯ ನೋಡಾ ! ಶಿವಶಿವ ಮಹಾದೇವಾ ಮಹಾವಸ್ತುವಿನಲ್ಲಿ ಭೇದವಿಲ್ಲದಿಪ್ಪ ಅಭೇದ್ಯ ಶರಣಂಗೆ ಜಪದ ನೇಮವೆಲ್ಲಿಯದು ? ಜಪದ ಫಲ ಕೈಸಾರಿದಂಗೆ ಧ್ಯಾನಮೌನವೆಲ್ಲಿಯದು ? ಧ್ಯಾನದೇಹ ಅಳವಟ್ಟು ಅನಂದಿಪಂಗೆ ತಪದ ತಗಹೆಲ್ಲಿಯದು ? ಇಹ-ಪರವೆಂಬ ಇದ್ದೆಸೆಗೆಟ್ಟಂಗೆ ವ್ರತನೇಮದ ನೋಂಪಿಯ ಸೂತಕವೆಲ್ಲಿಯದು ? ಉದ್ಯಾಪನೆಯಂ ಮಾಡಿ ಮಹಾಪುರುಷನಂ ಪಡೆದು ತೆರಹಿಲ್ಲದೆ ಪತಿಭಕ್ತಿಯ ಮಾಡುವ ಸಜ್ಜನ ಸತಿಗೆ ಅರ್ಚನೆ ಪೂಜನೆಯಂ ಮಾಡುವ ದಂದುಗವೆಲ್ಲಿಯದೊ ? ತನು ಮನ ಧನ ಮುಂತಾದುವೆಲ್ಲವು ಶಿವನೊಡವೆಯೆಂದು ಮಾಡುವ ಸದ್ಭಕ್ತಂಗೆ ಆವಾಗಲೂ ಶಿವನ ಸೇವೆಯ ಮಾಡುವ ಕೈಗಳಿಗೆ ಮಣಿಯ ಹಿಡಿದು ತಿರುಹಬೇಕೆಂಬ ಕೋಟಲೆಯೇಕೆ ? ಅನುಶ್ರುತವು ನೆನೆವ ಮನದ ನೆನಹ ಬಿಡಿಸಿ ಎಣಿಕೆಗಿಕ್ಕಿ ಸಂದೇಹಿಸುವ ಸಂಚಲವೇಕೆ ? ಅನಿಮಿಷನಾಗಿ ನೋಡುವ ದೃಷ್ಟಿಗೆ, ಎವೆಯ ಮರೆ ಮಾಡಿಕೊಂಡು ಕಣ್ಣುಮುಚ್ಚಲೇತಕ್ಕೆ ? ಕಣ್ಣು ಮನ ಕೈ (ಈ) ತ್ರಿಸ್ಥಾನದಲ್ಲಿರಿಸಲರಿಯದೆ ಭೇದವ ಮಾಡಿ ಅಗಲಿಸುವ ಜಪ ತಾನೇಕೆ ? ಪರಿಪೂರ್ಣವಾಗಿಹ ಸರ್ವಪದವನೀವ ಸ್ವತಂತ್ರ ಪರಾತ್ಪರವಸ್ತುವನಗಲಿ ದೂರಕಿಕ್ಕಿ, ಎಡೆದೆರಹ ಮಾಡಿ ಖಂಡಿಸಿ (ಕಂಡಹೆ)ನೆಂಬ ಧ್ಯಾನಮನವೇಕೆ ? ಸಮರ್ಥತೆಯನುಳ್ಳ ಮಹಾಪದದೊಳಗಿದ್ದು, ಅಲ್ಪಪದವ ಸಾಧಿಸೇನೆಂದು ಕಾಯವ ದಂಡಿಸಿ ಆತ್ಮನಿಗ್ರಹವ ಮಾಡಿ, ಬಟ್ಟೆಗುತ್ತಗೆತನವ ಹಣ್ಣಿ, ತಗಹಿನಲ್ಲಿ ಕುಳ್ಳಿರ್ದು ಬೇಡಿಕೊಂಬ ತಪ ತಾನೇಕೆ ? ಮುಟ್ಟಿತ್ತೆಲ್ಲ ಪವಿತ್ರ, ನೋಡಿತ್ತೆಲ್ಲ ಪಾವನ, ನಿರ್ಮಾಯನೆಂಬ ನಿರ್ಮಳಾಂಗ ನಿತ್ಯಶುದ್ಧದಾಸೋಹದೊಳಿರುತ ಸೂತಕ ಬಿಡದೆಂದು, ಜಡಕ್ರೀಯಿಂದ ಭಾಷೆಗೊಡಲ ಗುರಿಮಾಡಿ ಮೀಸಲಾಗಿಹ ಪ್ರಾಣವನಿರಿದುಕೊಂಡು ಸಾವ ಸಂಕಲ್ಪ ವ್ರತನೇಮವೇಕೆ ? ಪೂಜೆಯು ಪೂಜ್ಯನು ಪೂಜಿಸುವವ_ ಈ ತ್ರಿವಿಧದೋಜೆಯ ಸೂತ್ರಾತ್ಮಕ ತಾನೆ ಎಂಬ ಹವಣನರಿದು, ಅರಿವಿಂಗಾಶ್ರಯವಾಗಿರಲರಿಯದೆ; ನಾನಾ ಪರಿಯಿಂದ ಒಲಿಸಿ ಮೆಚ್ಚಿಸಿ ಸ್ವರ್ಗಾದಿ ಭೋಗ ಧರ್ಮಕರ್ಮವನುಂಬ ಕೈಕೂಲಿಕಾರಕರ್ಮಿಗಳಂತೆ ಮಾಡುವ ಅರ್ಚನೆ ಪೂಜನೆಯ ಆಯಸವೇಕೆ ? ಜಪದ ಜಾಡ್ಯದ ಜಂಜಡದವನಲ್ಲ, ಧ್ಯಾನಮೌನದಿಂದ ಬಿಗಿದು ಬೆರೆತಿಹ ಬಂಧನದವನಲ್ಲ. ತಪದ ದಂಡನೆಯ ತಗಹಿನವನಲ್ಲ, ವ್ರತನೇಮದ ಸೂತಕಿಯಲ್ಲ, ಅರ್ಚನೆ ಪೂಜನೆಯ ಫಲ[ಗ್ರಾಹ]ಕನಲ್ಲ, ಹರಕೆಗೆ ಹವಣಿಸಿ ಬೆರೆತಹನಲ್ಲ, ನೆವದಿಂದ ತದ್ದಿನವ ಮಾಡಬೇಕೆಂಬ ಉದ್ದೇಶಿಯಲ್ಲ, ವರುಷಕ್ಕೊಂದು ತಿಥಿಯೆಂದು ಕೂಡಿ ಮಾಡುವ ಕೀರ್ತಿವಾರ್ತೆಗೆ ಮುಯ್ಯಾನುವನಲ್ಲ, ಮಿಕ್ಕಾದ ಕಿರುಕುಳ ಬಾಧೆ ಆಧಿವಿಡಿಯದ ಸಹಜಸಂತೋಷಿ, ಸರ್ವಾಂಗದೊಳ್ ತನ್ಮಯನಾಗಿರುತ್ತ, ಭಿನ್ನವೇಕೆ ? ಹಾಲ ಸಾಗರದೊಳಗೋಲಾಡುತಿರ್ದು ಓರೆಯಾವಿನ ಬೆನ್ನ ಹರಿವನಲ್ಲ, ಪರುಷದ ಗಿರಿ ಕೈಸಾರಿರಲು; ನಾಡ ಮಣ್ಣ ಕೂಡಲಿಕ್ಕಿ ತೊಳೆದು ಹಾಗವ ಸಾಧಿಸಬೇಕೆಂಬ ಧಾವತಿಯವನಲ್ಲ, ಅತ್ಯಂತ ಸ್ನೇಹದಿಂದ ನೆನಹಿನಲ್ಲಿ ಮನಕ್ಕೆ ಬಂದು ನೆಲೆಗೊಂಡಿರುತ್ತಿರಲು `ಆಹಾ ಪುಣ್ಯವೆ' ಎಂದು ಕ್ರೀಡಿಸುವ ರತಿಸುಖವಂ ಬಿಟ್ಟು ನೆನಹಿನ ಆಸೆಯಿಂದ ತೊಳಲಿ ಬಳಲುವ ಮರಹಿನವನಲ್ಲ. ಕೆಲವು ಮತದವರಂತೆ ಕಂಡಹೆನೆಂದರಿಸಿ ಆಡುವನಲ್ಲ ಕೆಲವು ಮತದವರಂತೆ ತೆರಪಿಟ್ಟು ಅರಸುವನಲ್ಲ ತಾನಲ್ಲದನ್ಯವಿಲ್ಲವೆಂದು ಅಹಂಕರಿಸಿ ಬೆರೆವವನಲ್ಲ. ಮತ್ತೆ ಉಳಿದಾದ ಕಾಕುಮತದ ಸೊಗಸಿಗೆಳಸನಾಗಿ, ಹೊಲಬುಗೆಡುವನಲ್ಲ. ಹೊತ್ತುದ ಹುಸಿ ಮಾಡಿ ಮತ್ತೆ ಉಂಟೆಂದು ಭೇದವ ಮಾಡುವ ದುಷ್ಟದುಷ್ಕರ್ಮಿಗಳ ಪರಿಯವನಲ್ಲ. ಮಾಡಿಹೆನೆಂಬ ಸಂಸಾರದ ಬಂಧನದವನಲ್ಲ. ಮಾಡಲೊಲ್ಲೆನೆಂಬ ವಿಕಳವಾವರಿಸಿಹ ವೈರಾಗ್ಯದ ಉದಾಸೀನದವನಲ್ಲ. ಋತುವುಳ್ಳ ಸತಿಯ ರತಿಕೂಟದಂತೆ ಮುಂದೆ ಅಗಲಿಸುವ ಕಷ್ಟದ ಸುಖವನೊಲುವನಲ್ಲ. ಋತುವರತ ಸತಿಯ ರತಿಕೂಟದಂತೆ ಅಗಲಿಕೆಯಿಲ್ಲದ ಸುಖದ ಸಂಯೋಗದ ನೆಲೆಯನರಿದಾತಂಗೆ; ಮಾಡುವಾತ ತಾನು ಮಾಡಿಸಿಕೊಂಬಾತ ತಾನು ಸೋಹ ದಾಸೋಹ ತಾನೆಂದು ಬೇರೆನ್ನದೆ ದಾತೃ ಭೋಕ್ತೃ ಶಿವನೊಬ್ಬನಲ್ಲದೆ, ಬೇರೆ ಬೇರೆ ತಮತಮಗೆ ಒಡೆಯರುಂಟೆ ? ಇಲ್ಲ. ಆದಿ ಪರಶಿವ ತಾನೆ ಎಂದು ಮಾಡುವ ಮಾಟ, ಸಟೆಯಿಲ್ಲದೆ ದಿಟ ಘಟಿಸಿ ಸಯವಾಗಿ ನಿಂದು ನಿರಾಶೆಯ ಕುಳ(ನಿರಾಕುಳರಿ)ದ ಅನುವನರಿತು ನಿಜವೆಡೆಗೊಂಡ ನಿಲವ ಪ್ರಮಾಣಿಸಿ ಕಾಬಂತೆ, ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ? ಮಾಡಬೇಕೆಂಬ ಅರಿವಿನ ಕಣ್ದೆರೆಸಿದವರಾರು ? ಮಾಡುವೆನೆಂದು ನೆನೆವ ಚೇತನದ ಪ್ರಾಣವ ತಂದಿರಿಸಿದವರಾರು ? ಮಾಡಿಹೆನೆಂಬ, ಮಾಡಬೇಕೆಂಬ, ಮಾಡುವ_ ಇವನೆಲ್ಲವ ಅರಿವಡಿಸಿಕೊಂಡಿಹ ಕಾಯವ ರೂಪಿಸಿದರಾರು ? ಆದಿಯಿಂದವೆ ನುಡಿದು ನಡೆದು ರೂಪಾಗಿ ಪ್ರಭಾವಿಸಿ ವ್ಯಾಪಾರಕ್ಕೆ ಸಂದೆವೆಂಬ ಹವಣಗಾರರು ಬರಿಯ ವಳಾವಳಿಯಿಂದ, ನಾ ಮಾಡಿದಹೆನೆಂದು ಪ್ರತಿಜ್ಞೆಯಂ ಕೈಕೊಂಡು, ಇಲ್ಲದುದನುಂಟುಮಾಡಿ, ಪಡೆದು ಸಾಧಿಸೆಹೆನೆಂಬ ಬಯಕೆಯ ಸಂಭ್ರಮದಾಯಸ ತಲೆಗೇರಿ, ಉಬ್ಬಿ ಹರಿದಾಡುವ, ಅವಿಚಾರದ ಮನದ, ಮರವೆ ಬಲಿದ ಇರವಿನ ಪರಿಯ ನೋಡಾ ! ಶಿವ ಮಹಾದೇವಾ. ಶಿವ ತನ್ನ ಲೀಲಾ ವಿನೋದಕ್ಕೆ ಸಕಲವನು ರೂಪಿಸಿ ಆಗುಮಾಡಿಕೊಂಡಿರುತ್ತಿರಲು, ಹುಚ್ಚುಗೊಂಡಂತೆ ಎಲ್ಲವೂ ನನ್ನಿಂದಾಯಿತು, ನಾ ಮಾಡಿದೆನೆಂದು ಉಲಿವ ದೇಹಿಯ ಇನ್ನೇನೆನಬಹುದಯ್ಯ ? ಅವರಿಂದಾದ ಒಡವೆಯ ಅವರಿಗೆ ಈವುದು, ಉಪಚರಿಯವೆ ? ನದಿಯುದಕವ ನದಿಗರ್ಪಿಸುವಂತೆ ಒಡೆಯಂಗೊಡವೆಯನರ್ಪಿಸಿ ತಾ ಶುದ್ಧನಾಗಿ ನಡೆನುಡಿಯಲ್ಲಿ ಕವಲುದೋರದೆ ತನ್ನಲ್ಲಿ ತಾನೆ ತಿಳಿದು, ಘನವೆಡೆಗೊಂಡ ಮಹಾನುಭಾವಿಗಳು; ಎಲ್ಲವನಳವಡಿಸಿಕೊಂಡಿಹ ಕಾಯವ ಗುರುವೆಂದೆ ಸಾಧಿಸಿದ ನೆನೆವ ಚೇತನದ ಪ್ರಾಣವ ಲಿಂಗವೆಂದೆ ಭಾವಿಸಿದ ಅರಿವಿನ ಜ್ಞಾನವ ಜಂಗಮವೆಂದೆ ಅರಿದ ನಮ್ಮ ಕೂಡಲಚೆನ್ನಸಂಗಮದೇವರು.
--------------
ಚನ್ನಬಸವಣ್ಣ
ಏಕತತ್ವ ತ್ರಿತತ್ವ ಪಂಚತತ್ವ ಪಂಚವಿಂಶತಿತತ್ವ ಷಟ್ತ್ರಿಂಶತ್ ತತ್ವವ ಗರ್ಭೀಕರಿಸಿಕೊಂಡಿಪ್ಪಾತನು ಅಜಗಣ್ಣನೆ. ತತ್ವವೆಲ್ಲಕ್ಕಧಿಕವಾಗಿಪ್ಪಾತನು ಅಜಗಣ್ಣನೆ, ಮಹಾತತ್ವವು ಅಜಗಣ್ಣನೆ, ಶ್ರೀಗುರುತತ್ವವು ಅಜಗಣ್ಣನೆ, ಪರತತ್ವವು ಅಜಗಣ್ಣನೆ. ಶಿವಶಿವಾ ಹರಹರಾ, ಸಕಲವೇದಶಾಸ್ತ್ರಪುರಾಣಾಗಮ ಅಷ್ಟಾದಶ ವಿದ್ಯಂಗಳು ಸರ್ವ ವಿದ್ಯಂಗಳು ಸಪ್ತಕೋಟಿ ಮಹಾಮಂತ್ರಂಗಳು ಉಪಮಂತ್ರವನಂತಕೋಟಿಗಳಿಗೆ ಮಾತೃಸ್ಥಾನವಾದಾತನು ಅಜಗಣ್ಣನೆ. ಲಯ ಕಾಲ ಸ್ಥಿತಿಗಳಿಗೆ ಕಾರಣವಾಗಿರ್ಪಾತನು ಅಜಗಣ್ಣನೆ. ಮಂತ್ರರಾಜನು ಅಜಗಣ್ಣನೆ, ಮೂಲಮಂತ್ರವು ಅಜಗಣ್ಣನೆ. ಏಕವಾದ ಮಹಾಲಿಂಗವು ಅಜಗಣ್ಣನೆ, ಮಹಾಲಿಂಗವಾಗಿಪ್ಪಾತನು ಅಜಗಣ್ಣನೆ. ಮಹಾಸದ್ಭಕ್ತನು ಅಜಗಣ್ಣನವ್ವಾ. ತತ್ವಜ್ಞಾನ ಅಜಗಣ್ಣನೆ, ತತ್ವಮಯನು ಅಜಗಣ್ಣನೆ. ಮಹಾಮಂತ್ರ ಮುಖೋದ್ಗತವಾದಾತನು ಅಜಗಣ್ಣನೆ. ಮಹಾಲಿಂಗೈಕ್ಯನು ಅಜಗಣ್ಣನೆ. ಆತನೆ ಮಹಾಘನಮಹತ್ತನೊಳಕೊಂಡಿರ್ಪನಾಗಿ ಶಿವಶಿವಾ, ಸದ್ಭಕ್ತ ಅಜಗಣ್ಣ ಗುರುವಿಂಗೆ ಪೂಜೆ ಅರ್ಚನೆ ಭಜನೆಗಳಿಲ್ಲವಾಗಿ ಉಪಮಾತೀತ ಅಜಗಣ್ಣನು, ವಾಙ್ಮನಕ್ಕತೀತ ಅಜಗಣ್ಣನು. ಮಹಾಗುರುವ ಕಾಣದೆ ನಾನೆಂತು ತಾಳುವೆನವ್ವಾ ? ಬ್ರಹ್ಮರಂಧ್ರದಲ್ಲಿ ಗುರುಮೂರ್ತಿಯಾಗಿಪ್ಪ ಪರಮಾತ್ಮನು ಅಜಗಣ್ಣನೆ. ಭ್ರೂಮಧ್ಯದಲ್ಲಿಲಿಂಗಮೂರ್ತಿಯಾಗಿಪ್ಪಾತನು ಅಜಗಣ್ಣನೆ. ಹೃದಯದಲ್ಲಿ ಜಂಗಮಮೂರ್ತಿಯಾಗಿಪ್ಪಾತನು ಅಜಗಣ್ಣನೆ ಇಂತಪ್ಪ ಅಜಗಣ್ಣನೇನಡಗಿಸಿದನವ್ವಾ. ಧ್ಯಾನಿಸಿ ನೆನೆದಡೆ ಶೋಕಿಸಿದರೆಂಬರೆಲೆ ಅವ್ವಾ. ಈ ಅಜಗಣ್ಣತಂದೆಯನಗಲಿ ನಾನೆಂತು ಸೈರಿಸುವೆನೆಲೆ ಸತ್ಯಕ್ಕ ತಾಯೆ ಆಹಾ ?
--------------
ಮುಕ್ತಾಯಕ್ಕ
ಇನ್ನಷ್ಟು ... -->