ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅನುವನರಿದು ಅನುಭಾವಿಯಾದ ಕಾರಣ ಸಮ್ಯಗ್‍ಜ್ಞಾನದಿಂದ ತನ್ನನರಿದು, ತನ್ನನೆ ಶಿವಭಾವವಾಗಿ ಕಂಡು ಆ ಶಿವಭಾವದಲ್ಲಿ ತನ್ನಹೃದಯವ ಸಮ್ಮೇಳವ ಮಾಡಿದ ಶರಣನು. ತಾನೆ ಶಿವನ ಪರಮೈಶ್ವರ್ಯಕ್ಕೆ ಭಾಜನವಾಗಿ ಸರ್ವಲೋಕವನು ಶಿವನೊಳಗಡಗಿಸಿದನಾಗಿ, ಆ ಶಿವನ ತನ್ನೊಳಗಡಗಿಸಿ, ಆ ಶಿವನಲ್ಲಿ ಮನವ ನಿಲಿಸಿ ನೆನೆವುತ್ತಿರಲು ಆ ನೆನೆವ ಮನಸಿನ ಲಯಕ್ಕೆ ಭಾಜನವಾದಾತ ಶಿವನೆಂದರಿದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ ಏನೂ ಏನೂ ಇಲ್ಲದಂದು, ಆದಿಕುಳದುತ್ಪತ್ಯವಾಗದಂದು, ಚಂದ್ರಧರ ವೃಷಭವಾಹನರಿಲ್ಲದಂದು, ಕಾಲಸಂಹರ ತ್ರಿಪುರಸಂಹರರಿಲ್ಲದಂದು, ಕಾಮನ ಭಸ್ಮವ ಪೂಸದಂದು ದೇವಿಯರಿಬ್ಬರಿಲ್ಲದಂದು, ಹರಿಯ ಹತ್ತವತಾರದಲ್ಲಿ ತಾರದಂದು, ಬ್ರಹ್ಮನ ಶಿರವ ಹರಿಯದಂದು, ಇವಾವ ಲೀಲೆಯದೋರದಂದು, ನಿಮಗನಂತನಾಮಂಗಳಿಲ್ಲದಂದು, ಅಂದು ನಿಮ್ಮ ಹೆಸರೇನು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ ಜಡೆಯೆಡೆಯಲ್ಲಿ ಗಂಗೆಯನೇಕೆ ಧರಿಸಿದೆ? ಕೆಲದಲ್ಲಿ ಚಂದ್ರಕಲೆಯನೇಕೆ ಸೂಡಿದೆ? ತ್ರಿಶೂಲ ಡಮರುಗವನೇಕೆ ಹಿಡಿದೆ? ವೃಷಭವಾಹನವೇಕೆ ಹೇಳಾ? ಉಮೆಯ ತೊಡೆಯ ಮೇಲೇಕೇರಿಸಿದೆ? ನಡು ನೊಸಲಲ್ಲಿ ಕಿಡಿಗಣ್ಣನೇಕೆ ತಾಳಿದೆ? ವರದಾಭಯ ಹಸ್ತದಿಂದ ಮೃಡನೆಂಬ ಹೆಸರು ಬಂದಿತೆಂದು, ನಿನ್ನ ಬೆಡಗಿನ ಲೀಲೆಯ ಕಂಡು, ಭಕ್ತಿ ಕಂಪಿತನೆಂದರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗ ಶುದ್ಧವಿಲ್ಲದವರೊಳಗೆ ಅತ್ತಿಯ ಹಣ್ಣಿನಂತೆ ಕ್ಷುದ್ರ ಬಿಡಿದು ನೋಡಯ್ಯಾ. ಅಂತರಂಗ ಶುದ್ಧವುಳ್ಳವರೊಳಗೆ ಬಾಳೆಯ ಹಣ್ಣಿನಂತೆ ಸಂಗದಲ್ಲಿ ಇರಬಾರದು ಶರಣರು. ಇದು ಕಾರಣ. ಅಂತರಂಗ ಶುದ್ಧವಿಲ್ಲದವರ ಸಂಗದಲ್ಲಿ ಇರಬಾರದು ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ, ನಾನೀಜಗ ಹುಟ್ಟುವಂದು ಹುಟ್ಟಿದವನಲ್ಲ. ನಾನೀಜಗ ಬೆಳೆವಲ್ಲಿ ಬೆಳೆದವನಲ್ಲ. ನಾನೀಜಗವಳಿವಲ್ಲಿ ಅಳಿವವನಲ್ಲ. ಆಗು ಹೋಗಿನ ಜಗಕ್ಕೆ ಸಾಕ್ಷಿ ಚೈತನ್ಯನು, ನನ್ನಾಧಾರದಲ್ಲಿ ಜಗವಿದೆ. ಈ ಜಗದುತ್ಪತ್ತಿ ಸ್ಥಿತಿಲಯಕ್ಕೆ ನಾನಾಶ್ರಯನು. ಅಯ್ಯಾ, ನನಗೂ ನಿನಗೂ ಸಂಬಂಧವಲ್ಲದೆ ಜಗಕ್ಕೂ ಎನಗೂ ಸಂಬಂಧವಿಲ್ಲ. ನಾ ನಿಮ್ಮಲ್ಲಿ ಹುಟ್ಟಿದ ಕಾರಣ, ನಾ ನಿಮ್ಮಂತೆ ತೋರುವೆನು. ಜಗ ಮಾಯೆಯಲ್ಲಿ ಹುಟ್ಟಿದ ಕಾರಣ, ಜಗ ಮಾಯೆಯಂತೆ ತೋರುವುದು. ಅದು ಕಾರಣ ಈ ದೇಹೇಂದ್ರಿಯಗಳು ನನ್ನವಲ್ಲ. ನಿನ್ನವಲ್ಲವೆಂದರಿದ ಕಾರಣ ಬೇರಾದವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂಗದೊಳಗೆ ಲಿಂಗವಿದೆ, ಲಿಂಗದೊಳಗೆ ಅಂಗವಿದೆ. ಅಂಗ ಲಿಂಗ ಸಂಗದೊಳಗೆ ಪರಮ ಸುಖವಿದೆ. ಪರಮ ಸುಖದೊಳಗೆ ಪ್ರಸಾದವಿದೆ. ಪ್ರಸಾದದೊಳಗೆ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ. ನಿಮ್ಮ ಶರಣನ ನಿಲವಿದೆ.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗ ಶುದ್ಧವಿಲ್ಲದವರು, ಬಹಿರಂಗದಲ್ಲಿ ಸದಾಚಾರ ಸತ್ಕಿ ್ರೀಯೆಯ, ಸರ್ವಜನ ಮೆಚ್ಚುವಂತೆ ಮಾಡುತಿರ್ದರೇನು? ಅದು ಲೋಕರಂಜನೆಯಲ್ಲದೆ ಶಿವ ಮೆಚ್ಚ. ಶಿವಶರಣರು ಮೆಚ್ಚರು. ಬಿತ್ತಿದ ಬೆಳೆಯನುಂಬಂತೆ, ಮಾಡಿದ ಸತ್ಕರ್ಮಫಲವನುಂಬ, ಕೈಕೂಲಿಕಾರಂಗೆ ಮುಕ್ತಿಯುಂಟೆ? ನಿಜಗುರು ಸ್ವತಂತ್ರಸಿದ್ಧಲೀಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಣುವಿಂಗೆ ಅಣುವಾಗಿ, ಮಹತ್ತಿಂಗೆ ಮಹತ್ತಾಗಿ ಪರಿಪೂರ್ಣವಾದ ಪರವೆಂಬ ಪ್ರಸಾದಮೂರ್ತಿಯ ಇರವ ಹೇಳಿಹೆನು ಕೇಳಿರಣ್ಣ. ಮುಂದೆ ತಾರಾ ಬೀಜ, ಹಿಂದೆ ಸುನಾದ ಬೀಜ, ಬಲದಲ್ಲಿ ಆತ್ಮ ಬೀಜ, ಎಡದಲ್ಲಿ ವಿದ್ಯಾ ಬೀಜ, ಎಂಟರಲ್ಲಿ ಅಷ್ಟೆಶ್ವರ್ಯ, ಅಷ್ಟಶಕ್ತಿ ಬೀಜ, ಹದಿನಾರರಲ್ಲಿ ಕಲೆ, ಕಲಾಪತಿಗಳು ಮೂವತ್ತೆರಡರಲ್ಲಿ ವಿಕಲೆ ವಿಃಕಲಾಪತಿಗಳು. ಇಂತೀ ತ್ರಿಮಂಡಲ ಮಧ್ಯದ ಸೂಕ್ಷ ್ಮಕರ್ಣಿಕೆಯಲ್ಲಿಯೆ ಶುದ್ಧ ಪ್ರಸಾದವನು ಮಹಾನುಭಾವರ ಸಂಗದಲ್ಲಿದ್ದರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಜ ಹರಿಗಳರಿತಕ್ಕೆ ಅಗೋಚರವಾದ ನಿಜವನರಿದು ಸಹಜಾತ್ಮನಾದ ಶರಣಂಗೆ, ಏಕವೆಂಬುದು ಅನೇಕವೆಂಬುದು ತೋರದೆ, ಸ್ಥೂಲವೆಂಬುದು ಸೂಕ್ಷ ್ಮವೆಂಬುದು ತೋರದೆ, ಚರಾಚರವು ನಾಸ್ತಿಯಾಗಿ, ಸಮಸ್ತ ಭುವನಂಗಳು ಶೂನ್ಯವಾಗಿ ತೋರದೆ, ನಿಶೂನ್ಯವಾಗಿ ತೋರದೆ, ಜ್ಞಾನರೂಪಾಗಿ ತೋರದೆ, ಮತ್ತೊಂದು ರೂಪಾಗಿಯೂ ತೋರದೆ, ಭೂಮಿ ಜಲ ಅಗ್ನಿ ಮರುದಾಕಾಶ ಚಂದ್ರ ಸೂರ್ಯರೆಂಬವೇನೂ ತೋರದೆ, ಸರ್ವಸಾಕ್ಷಿಯಾದ ಸಮ್ಯಗ್‍ಜ್ಞಾನವೊಂದೇ ಪರಿಪೂರ್ಣವಾಗಿ ತನ್ನ ಸ್ವರೂಪಿನಿಂದ ತೋರುತ್ತಿಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಅಂಗದ ಮೇಲೆ ಲಿಂಗ ಬರಲಾಗಿ, ಕಾಯದ ಗುಣವಳಿದು ಪ್ರಸಾದಕಾಯವಾಯಿತ್ತು. ಲಿಂಗದ ನೆನಹು ನೆಲೆಗೊಂಡು ಮನ ಹಿಂಗದಿರಲು ಮನದ ಮೇಲೆ ಪ್ರಸಾದ ನೆಲೆಗೊಂಡಿತ್ತು. ಲಿಂಗದಲ್ಲಿ ಪ್ರಾಣರತಿಸುಖವಾವರಿಸಿತ್ತಾಗಿ ಪ್ರಾಣದಲ್ಲಿ ಪ್ರಸಾದ ನೆಲೆಗೊಂಡಿತ್ತು. ಸರ್ವೇಂದ್ರಿಯಂಗಳು ಲಿಂಗದಲ್ಲಿ ಸಾವಧಾನಿಗಳಾದ ಕಾರಣ ಇಂದ್ರಿಯಂಗಳಲ್ಲಿಯೂ ಪ್ರಸಾದವೇ ನೆಲೆಗೊಂಡಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಅಂಗದಲ್ಲಿ ಆಯತವಾಯಿತ್ತು. ಮನದಲ್ಲಿ ಸ್ವಾಯತವಾಯಿತ್ತು. ಭಾವದಲ್ಲಿ ಸನ್ನಿಹಿತವಾಯಿತ್ತು. ಆಯತವಾದುದೇ ಸ್ವಾಯತವಾಗಿ, ಸ್ವಾಯತವಾದುದೇ ಸನ್ನಿಹಿತವಾಗಿ, ಸನ್ನಿಹಿತ ಸಮಾಧಾನವಾಗಿ ನಿಂದುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಅವನಿಯ ಪಿಂಡವ ನುಂಗಿ, ಉದಕವ ಪಾನವ ಮಾಡಿ, ಅಗ್ನಿಯ ಮೆಟ್ಟಿ, ವಾಯುವ ಹಿಡಿದು, ಆಕಾಶವನಡರಿ, ಮಹಾದಾಕಾಶದ ಬಯಲೊಳಗೆ ನಿಂದು ನೋಡಲು, ಸರ್ವಶೂನ್ಯನಿರಾಕಾರವೆಂಬ ಬಯಲು ಕಾಣಬಂದಿತ್ತು. ಆ ಬಯಲ ಬೆರಸಿಹೆನೆಂಬ ಬಸವ, ಪ್ರಭು ಮೊದಲಾದ ಗಣಂಗಳ ಮಹಾನುಭಾವ ಸಂಪಾದನೆಯನರಿದು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಬಯಲ ಬೆರಸಿದೆನು.
--------------
ಸ್ವತಂತ್ರ ಸಿದ್ಧಲಿಂಗ
ಅನಂತಕಾಲ ಅಗಲಿದ ನಲ್ಲನ ಕೂಡಿಹೆನೆಂಬ ಸತಿಗೆ ಕೂಡಿದ ಬಳಿಕ ಕೂಡಿಹೆನೆಂಬ ಅವಸ್ಥೆಯುಂಟೆ ಹೇಳಾ?. ಕ್ಷುಧೆಯಡಿಸಿದವ ಭೋಜನವ ಮಾಡಿದ ಬಳಿಕ ಮತ್ತೆ ಭೋಜನವ ಮಾಡಿಹೆನೆಂಬ ಅವಸ್ಥೆಯುಂಟೇ ಹೇಳಾ?. ರುsುಳ ಹತ್ತಿದವ ಉದಕದಲ್ಲಿ ಮುಳುಗಿದ ಬಳಿಕ ಮತ್ತೆ ಉದಕದಲ್ಲಿ ಮುಳುಗಿಹೆನೆಂಬ ಅವಸ್ಥೆಯುಂಟೆ ಹೇಳಾ?. ಶಿವನ ನೆನೆನೆನೆದು ಮನ ಶಿವನಲ್ಲಿ ಲೀಯವಾದ ಬಳಿಕ ಮತ್ತೆ ನೆನೆದಿಹೆನೆಂಬ ಅವಸ್ಥೆಯುಂಟೆ ಹೇಳಾ. ಅನುಪಮ ನಿಜಾನುಭವ ಸಂಧಾನ ನಿಂದ ನಿಜವು ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು.
--------------
ಸ್ವತಂತ್ರ ಸಿದ್ಧಲಿಂಗ
ಅರಿಯಬಾರದು ಕುರುಹಿಲ್ಲವಾಗಿ, ಕುರುಹಿಡಿವ ಪರಿ ಇನ್ನೆಂತೋ? ದೇಶ ಕಾಲಂಗಳಿಂದ ಹವಣಿಸಬಾರದುದ, ಉಪಮಿಸುವ ಪರಿ ಇನ್ನೆಂತೋ? ಶಿವ ಶರಣನೆಂಬೆರಡು ನಾಮವಳಿದೊಂದಾದ ಬಳಿಕ, ಸ್ವಯ ಪರವೆಂಬುದನರಿಯದ ಅಪ್ರಮೇಯ ಬ್ರಹ್ಮಾದ್ಯೈತಂಗೆ ಯೋಗ ವಿಯೋಗ ಜ್ಞಾತೃ ಜ್ಞಾನ ಜ್ಞೇಯವೆಂಬ ವ್ಯವಹಾರವುಂಟೇ? ಬಂಧ ಮುಕ್ತಿ, ಮಾನಾಪಮಾನ, ಸುಖ ದುಃಖ, ಜ್ಞಾನಾಜ್ಞಾನ, ಹೆಚ್ಚು ಕುಂದುಗಳುಂಟೇ? ಸರ್ವಾಕರ ನಿರಾಕಾರ ನಿರ್ಮಲ ಪರಬ್ರಹ್ಮವು ತಾನೇ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ. ಅಂಧಕಾರದ ಗುಹೆಯೊಳಗಿರ್ದವರಂತಿರ್ದರಯ್ಯ ಜೀವರೆಲ್ಲ. ಹೊಲಬುದಪ್ಪಿ ತಿಳಿವಿಲ್ಲದೆ ಕಳವಳಗೊಳುತ್ತಿರ್ದರಯ್ಯ. ಅಡವಿಯ ಹೊಕ್ಕ ಶಿಶುವಿನಂತೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಕರುಣವಾಗುವನ್ನಕ್ಕ, ಬಳಲುತ್ತಿರ್ದರಯ್ಯ ಹೊಲಬರಿಯದೆ.
--------------
ಸ್ವತಂತ್ರ ಸಿದ್ಧಲಿಂಗ
ಅರುಣೋದಯಕ್ಕೆ ಕತ್ತಲೆ ಹರಿದು ಬೆಳಗು ಪಸರಿಸಿದಂತೆ, ಸಮ್ಯಗ್‍ಜ್ಞಾನೋದಯವಾಗಿ, ಅಜ್ಞಾನ ಬೀಜ ಮಲಸಂಸಾರ ತೊಲಗಿ, ಪರಮಾತ್ಮ ತಾನೆಂದರಿದು, ಆ ಅರಿದರಿವು ಕರಿಗೊಂಡು, ಪರಶಿವನೊಡನೆ ಸಮರಸಭಾವಿಯಾದವನೆ ಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂಗ ಲಿಂಗ ಸಂಗವರಿದ ಲಿಂಗದೇಹಿ, ತನ್ನಿಂದ ಹಿರಿದೊಂದೂ ಇಲ್ಲವೆಂದು ತಿಳಿದು ಆ ತಿಳಿವಿನೊಳಗಣ ತಿಳಿವು ತಾನೆ ವಿಶ್ವಾತ್ಮಪತಿಯಾದ ಶಿವನಜ್ಞಾನವೆಂದರಿದು ಆ ಸರ್ವಜ್ಞನಾದ ಶಿವನು ನಿರ್ಮಲದರ್ಪಣದೊಳಗಣ ಪ್ರತಿಬಿಂಬದಂತೆ ಯೋಗಿಯ ಮನವೆಂಬ ದರ್ಪಣದಲ್ಲಿ ತೋರುವ ಚಿದಾಕಾಶರೂಪ ಶಿವನ ಶರಣಜ್ಞಾನಲೋಚನದಿಂದ ಕಂಡು ಕೂಡಿ ಎರಡಳಿದು ನಿಂದನು ನಮ್ಮ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಅಂಬರದಲಾಡುವ ಪಕ್ಷಿ ಕೊಂಬಿನ ಮೇಲಣ ಕೋಡಗವ ನುಂಗಿ ತುಂಬಿಯ ಒಡಲೊಳಡಗಿತ್ತು. ತುಂಬಿ ಅಂಬರದಲಡಗಿ, ಅಂಬರ ತುಂಬಿಯಲಡಗಿ ಎರಡು ಒಂದಾಗಿ ತುಂಬಿಯಂಬರವಿಲ್ಲದೆ ಹೋಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಲ್ಲಿ.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗದಲ್ಲಿದ್ದ ನಿರ್ಮಲ ಪರಂಜ್ಯೋತಿ ಪ್ರಾಣಲಿಂಗವನರಿಯದೆ ಬಹಿರಂಗದಲ್ಲಿ ಬಳಲುತ್ತಿದ್ದರಲ್ಲಾ! ಒಳಗೆ ತೊಳಗಿ ಬೆಳಗಿ ತೋರುವ ಚಿದಾಕಾರ ಪರಬ್ರಹ್ಮ ಪ್ರಾಣಲಿಂಗವನವರೆತ್ತ ಬಲ್ಲರು? ಮಹಾನುಭಾವದಿಂದ ತಿಳಿದು ನೋಡಲು ತನ್ನಲ್ಲಿಯೇ ತೋರುತ್ತಿದೆ. ಹೇಳಿಹೆ ಕೇಳಿಹೆನೆಂದಡೆ ನುಡಿಗೊಳಗಾಗದು. ತಿಳಿದುನೋಡಲು ತಾನಲ್ಲದೆ ಮತ್ತೇನೂ ಇಲ್ಲ. ಅದೇ ಆದಿಪ್ರಾಣಮಯಲಿಂಗ. ತಾನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಅತ್ತಲಿತ್ತ ಹರಿವ ಮನವ ನಿಲಿಸಿ ಸ್ವಸ್ಥಾನಂಗೊಳಿಸಿ, ತತ್ವಾನುಭಾವರಹಸ್ಯದ ಕೀಲನರಿದು, ತತ್ವಮಸಿ ವಾಕ್ಯದ ಮೇಲಣ ಷಡುಸ್ಥಲ ಲಿಂಗವ ತಿಳಿದು, ಆ ಲಿಂಗಕ್ಕೆ ಷಡುಸ್ಥಲಾಂಗವನಾದಿ ಮಾಡಿ, ಆ ಲಿಂಗವನು ಲಿಂಗಮುಖವ ಮಾಡಿದುದೇ, ಸರ್ವಾಂಗಲಿಂಗಿಯ ಮತವು. ಈ ಗುಣವುಳ್ಳ ಷಡುಸ್ಥಲ ಲಿಂಗಾಂಗಿಯೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆ ಬೇರಿಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ ಘ್ರಾಣದಲ್ಲಿ ನಿಂದು ಗಂಧವ ಗ್ರಹಿಸಿ ಗಂಧಪ್ರಸಾದವನೀವುತ್ತಿರ್ಪಿರಯ್ಯ. ಜಿಹ್ವೆಯಲ್ಲಿ ನಿಂದು ರಸವ ಗ್ರಹಿಸಿ ರಸಪ್ರಸಾದವನೀವುತ್ತಿರ್ಪಿರಯ್ಯ. ನೇತ್ರದಲ್ಲಿ ನಿಂದು ರೂಪದ ಗ್ರಹಿಸಿ ರೂಪಪ್ರಸಾದವ ನೀವುತ್ತಿರ್ಪಿರಯ್ಯ. ತ್ವಕ್ಕಿನಲ್ಲಿ ನಿಂದು ಸ್ವರ್ಶನವ ಗ್ರಹಿಸಿ ಸ್ಪರ್ಶನಪ್ರಸಾದವನೀವುತ್ತಿರ್ಪಿರಯ್ಯ. ಶ್ರೋತ್ರದಲ್ಲಿ ನಿಂದು ಶಬ್ದವ ಗ್ರಹಿಸಿ ಶಬ್ದಪ್ರಸಾದವನೀವುತ್ತಿರ್ಪಿರಯ್ಯ. ಮನದಲ್ಲಿ ನಿಂದು ಪರಿಣಾಮವ ಗ್ರಹಿಸಿ ಪರಿಣಾಮಪ್ರಸಾದವ ನೀವುತ್ತಿರ್ಪಿರಯ್ಯ. ಇಂತು ಸರ್ವೇಂದ್ರಿಯಂಗಳಲ್ಲಿ ನಿಂದು, ಸರ್ವಪದಾರ್ಥವ ಗ್ರಹಿಸಿ ಎನಗೆ ಪ್ರಸಾದವ ಕರುಣಿಸುತ್ತಿರ್ಪಿರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂದು ಆದಿಯ ಬಿಂದುವಿಲ್ಲದಂದು, ನಿಮಗೂ ನನಗೂ ಲಿಂಗಾಂಗವೆಂಬ ಹೆಸರಿಲ್ಲದೆ ಇರ್ದೆವೆಂದು, ಆದಿಬಿಂದು ರೂಹಿಸಿದಲ್ಲಿ ಲಿಂಗಾಂಗವೆಂಬ ಹೆಸರು ಬಂದಿತ್ತೆಂದು, ಅಂದು ಆದಿಯಾಗಿ ನೀವಾವಾವ ಲೀಲೆಯ ಧರಿಸಿದಡೆ, ಆ ಲೀಲೆಗೆ ನಾನಾಧಾರವಾದೆ. ನಿಮಗೂ ನನಗೂ ಎಂದೆಂದೂ ಹೆರಹಿಂಗದ ಯೋಗ. ಅದು ನೀವು ಬಲ್ಲಿರಿ, ನಾ ಬಲ್ಲೆನು, ನುಡಿದು ತೋರಲೇಕಿನ್ನು? ಇಂದೆನಗೆ ತನು ಯೋಗವಾದಲ್ಲಿ ನಿಜ ಹೊರತೆ? ``ಶಿವಯೋಗಿ ಶರೀರೇ ಚ ಸದಾ ಸನ್ನಿಹಿತಶ್ಯಿವಃ' ಎಂದುದಾಗಿ, ನಿಮಗೆ ಬೇರೆ ದೇಹವಿಲ್ಲ. ನನ್ನ ದೇಹವೆ ನಿಮ್ಮ ದೇಹವೆಂಬುದಕ್ಕೆ ನೀವೇ ಸಾಕ್ಷಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗ ಸನ್ನಿಹಿತ ಪರಂಜ್ಯೋತಿರ್ಲಿಂಗದಲ್ಲಿ ಧ್ಯಾನನಿಷ*ನಾದ ಯೋಗಿ ಎಲ್ಲಾ ಕಡೆಯಲ್ಲಿ ಪರಿಪೂರ್ಣ ಜ್ಞಾನದೃಷ್ಟಿಯಿಂದ ನೋಡಲು ಪಶ್ಚಿಮಮುಖವಾದ ಪರತತ್ವವೆಂಬ ನಿರ್ಮಲ ದರ್ಪಣದೊಳಗೆ ತನ್ನ ಕಂಡು, ಕಂಡೆನೆಂಬ ಚಿದಹಂಭಾವವಳಿದು ನಿಂದ ನಿಲವೇ ನಿಜ ನಿರ್ವಾಣವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಂಧಕನ ಮುಂದೆ ನೃತ್ಯ ಬಹುರೂಪವನಾಡಿದಡೇನು ಕಂಡು ಪರಿಣಾಮಿಸಬಲ್ಲನೆ ಹೇಳಾ? ಬಧಿರನ ಮುಂದೆ ಸಂಗೀತ ಸಾಹಿತ್ಯವನೋದಿದಡೇನು ಕೇಳಿ ತಿಳಿದು ಪರಿಣಾಮಿಸಬಲ್ಲನೆ ಹೇಳಾ? ಜ್ಞಾನಾನುಭಾವವಿಲ್ಲದವರು ಏನನೋದಿ ಏನ ಕೇಳಿ ಏನು? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವರ ಓದು ಕೇಳಿಕೆ, ಬಧಿರಾಂಧಕರ ಕೇಳಿಕೆ ನೋಟದಂತಾಗಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಅಂಗದಲ್ಲಿ ಲಿಂಗ ಬೆರೆದು, ಲಿಂಗದಲ್ಲಿ ಅಂಗ ಬೆರೆದು ಅಂಗ ಲಿಂಗ ಸಂಗದಿಂದ ಸಹವರ್ತಿಯಾದ ಲಿಂಗಪ್ರಸಾದಿಯ ಇಂಗಿತವನೇನೆಂದು ಹೇಳಬಹುದು? ಲಿಂಗ ನಡೆಯಲು ಒಡನೆ ಪ್ರಸಾದಿ ನಡೆವ ಲಿಂಗ ನೋಡಲು ಒಡನೆ ಪ್ರಸಾದಿ ನೋಡುವ ಲಿಂಗ ಕೇಳಲು ಒಡನೆ ಪ್ರಸಾದಿ ಕೇಳುವ ಲಿಂಗ ಮುಟ್ಟಲು ಒಡನೆ ಪ್ರಸಾದಿ ಮುಟ್ಟುವ ಲಿಂಗ ರುಚಿಸಲು ಒಡನೆ ಪ್ರಸಾದಿ ರುಚಿಸುವ. ಲಿಂಗ ಘ್ರಾಣಿಸಲು ಒಡನೆ ಪ್ರಸಾದಿ ಘ್ರಾಣಿಸುವ. ಇಂತು ಸರ್ವಭೋಗವ ಲಿಂಗದೊಡನೆ ಕೂಡಿ ಭೋಗಿಸಬಲ್ಲ, ನಿಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಚೆನ್ನಬಸವಣ್ಣನು.
--------------
ಸ್ವತಂತ್ರ ಸಿದ್ಧಲಿಂಗ

ಇನ್ನಷ್ಟು ...