ಅಥವಾ

ಒಟ್ಟು 8 ಕಡೆಗಳಲ್ಲಿ , 5 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಆಧಾರ ಧಾರಣವೆಂತೆಂದಡೆ : ಪುಣ್ಯ-ಪಾಪ ಸ್ವರ್ಗ-ನರಕಾದಿಗಳಿಗೆ ಹೇತುಭೂತವಾಗಿಹ ಅನ್ನ ಪಾನಾದಿಗಳಂ ಬಿಟ್ಟು-ಸಿದ್ಧಾಸನದಲ್ಲಿ ಕುಳ್ಳಿರ್ದು, ಮೂಲಬಂಧ ಒಡ್ಡ್ಯಾಣಬಂಧ ಜಾಳಾಂದರಬಂಧಮಂ ಮಾಡಿ ಜಾಗ್ರ ಸ್ವಪ್ನ ಸುಷುಪ್ತಿ ತಲೆದೋರದೆ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಚೇಂದ್ರಿಯಂಗಳಲ್ಲಿ ಮನ ಪವನಮಂ ಸೂಸಲೀಯದೆ, ಏಕಾಗ್ರಚಿತ್ತನಾಗಿ ಮೂಲವಾಯುವಂ ಪಿಡಿದು ಆಕುಂಚನಂ ಮಾಡಿ, ಮೂಲಾಗ್ನಿಯನೆಬ್ಬಿಸಿ, ಆಧಾರಚಕ್ರ ಚತುರ್ದಳಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಪಚ್ಚೆವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಗ್ನಿಯಂ ಪಟುಮಾಡಿ, ಮನಮಂ ಏಕೀಕರಿಸಿ, ಅಲ್ಲಿಂದ ಮೇಲೆ ಸ್ವಾದ್ಥಿಷ್ಠಾನಚಕ್ರದ ಷಡುದಳಪದ್ಮವ ಪೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ [ಆಜ್ಞಾಚಕ್ರದ] ದ್ವಿದಳಪದ್ಮವ ಹೊಕ್ಕು ನೋಡಿ ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು ಜೀವ ಪರಮರಂ ಏಕೀಕರಿಸಿ ಅಲ್ಲಿ ಮಾಣಿಕ್ಯವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಓಂಕಾರಜ್ಯೋತಿಯಂ ಬೆರಸುತ್ತ ಉನ್ಮನಿಯ ಬೆಳಗನೊಳಕೊಂಡು ಕರ್ಣದ್ವಾರದಲ್ಲಿ ಶಂಖ ದುಂದುಬ್ಥಿ ಧ್ವನಿಗಳಂ ಕೇಳುತ್ತ ಪರಮಕಾಷ್ಠಿಯಾಗಿ ತಾನೇ ಜಗತ್ತಾಗಿ ``ಅಣೋರಣೀಯಾನ್ ಮಹತೋ ಮಹೀಯಾನ್'' ``ಏಕಮೇವ ಅದ್ವಿತೀಯಂ'' ಎಂಬ ಶ್ರುತಿಪ್ರಮಾಣದರಿವು ನೆಲೆಗೊಂಡು ಷಡುಚಕ್ರ ಪ್ರಾಪ್ತಿಯಾಗಿ, ಮನ-ಪವನ-ಬಿಂದು-ರವಿ-ಶಶಿ-ಶಿಖಿಗಳನೇಕೀಕರಿಸಿ ಮೇಗಣ ಬಯಲ ಬಾಗಿಲಂ ತೆಗೆದು ಸಹಸ್ರದಳಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸ್ವಾಧಿಷಾ*ನಚಕ್ರದ ಷಡುದಳಪದ್ಮವ ಪೊಕ್ಕು ಸಾಧಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಪಚ್ಚೆಯವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಮನ ಪವನ ಬಿಂದುವಂ ಏಕೀಕರಿಸಿ ನಾಭಿಚಕ್ರಕ್ಕೆ ನೆಗೆದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆವಂಗದ ಮರೆಯಲ್ಲಿದ್ದು ಕಾದುವ ಭಟನು: ಆ(ವಂಗ)ದ ಮರೆಯ ಸತ್ವವೋ ? ತನ್ನ ಹೃದಯದ ಸತ್ವವೋ ? ಒಂದನಹುದು ಒಂದನಲ್ಲಾ, ಎಂದಡೆ ಕ್ರೀ ನಿಃಕ್ರೀಯೆಂಬ ಉಭಯವಿಲ್ಲ. ಎರಡನೊಡಗೂಡಿ ಒಂದನರಿದಿಹೆನೆಂದಡೆ ಸಾಕಾರವೊಂದು ನಿರಾಕಾರವೊಂದು. ಸಾಕಾರವನು ನಿರಾಕಾರವನು ಏಕೀಕರಿಸಿ ಕಂಡೆಹೆನೆಂದಡೆ ಅದು ಒಂದು ದೃಷ್ಟ, ಒಂದು ತನ್ನಷ್ಟ. ಆ ಉಭಯದಂಗ ಒಂದಂಗವಾಗಿ ಕರ್ಪುರದ ಗಿರಿಯಲ್ಲಿ ಉರಿಯುದಿಸಿದ ತೆರನಂತೆ ಉಭಯ ಏಕವಾಗಿಯಲ್ಲದೆ ಭೋಗಬಂಕೇಶ್ವರಲಿಂಗವನರಿಯಬಾರದು.
--------------
ಶ್ರೀ ಮುಕ್ತಿರಾಮೇಶ್ವರ
ಗುರುವಾದರು ಕೇಳಲೆಬೇಕು ಲಿಂಗವಾದರು ಕೇಳಲೆಬೇಕು ಜಂಗಮವಾದರು ಕೇಳಲೆಬೇಕು ಪಾದೋದಕವಾದರು ಕೇಳಲೆಬೇಕು ಪ್ರಸಾದವಾದರು ಕೇಳಲೆಬೇಕು ಕೇಳದೆ ಹುಸಿ ಕೊಲೆ ಕಳವು ಪಾರದ್ವಾರ ಪರಧನ ಪರಸತಿಗಳಿಪುವ ಭಕ್ತ ಜಂಗಮವೊಂದೇಯೆಂದು ಏಕೀಕರಿಸಿ ನುಡಿದರೆ ಆ ಭಕ್ತ ಭಕ್ತಸ್ಥಳಕ್ಕೆ ಸಲ್ಲ ಆ ಜಂಗಮ ಮುಕ್ತಿಸ್ಥಳಕ್ಕೆ ಸಲ್ಲ ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ ಇವರು ಕಾಗೆಯ ಬಳಗವೆಂದೆ
--------------
ಚನ್ನಬಸವಣ್ಣ
ಮುಕ್ತಿಯೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಪ್ರಸಾದಸಾಹಿತ್ಯವಾಗದು. ಪರವೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಜಂಗಮಸಾಹಿತ್ಯವಾಗದು. ಲಿಂಗವ ಬೆರಸಿಹೆನೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶಿವಲಿಂಗಸಾಹಿತ್ಯವಾಗದು. ವಿಶೇಷ ತತ್ವ ಉಂಟೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶ್ರೀಗುರುಸಾಹಿತ್ಯವಾಗದು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ_ ಇಂತೀ ಚದುರ್ವಿಧಲಿಂಗ ಏಕೀಕರಿಸಿ ಪ್ರಾಣಲಿಂಗವಾದ ಮಹಾಮಹಿಮಂಗೆ ಕಾಮಿಸಲಿಲ್ಲ, ಕಲ್ಪಿಸಲಿಲ್ಲ, ಭಾವಿಸಲಿಲ್ಲ ಚಿಂತಿಸಲಿಲ್ಲ. ಆತ ನಿಶ್ಚಿಂತ ಪರಮಸುಖಿ, ಆತನಿರ್ದುದೆ ಕೈಲಾಸ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕುಂಭದ ಅಪ್ಪುವಿನ ಸಂಗದಲ್ಲಿ ತಂಡುಲವ ಹಾಕಿ ಅಗ್ನಿಘಟದಿಂದ ಬೇಯಿಸಲಿಕ್ಕಾಗಿ, ಒಂದೊಂದು ತಂಡುಲ ಹಿಂಗಿ ಬೆಂದಿತ್ತೆ? ಆ ಅಪ್ಪು ಬೇರೆ ಬೇರೆ ಸಂಗವ ಮಾಡಿತ್ತೆ? ಆ ಅಗ್ನಿ ತಂಡುಲಕ್ಕೊಂದೊಂದು ಬಾರಿ ಉರಿಯಿತ್ತೆ? ಇಂತೀ ವಿವರಂಗಳ ಭೇದವನರಿತು ಅಂಗದಲ್ಲಿ ಆರು ಸ್ಥಲವನಂಗೀಕರಿಸಿದಲ್ಲಿ ಬೇರೊಂದೊಂದರಲ್ಲಿ ಹಿಂಗಿ ನೋಡಿಹೆನೆಂದಡೆ ಮೂರಕ್ಕಾರು ಆರಕ್ಕೆ ಮೂವತ್ತಾರು ಮತ್ತಿವರೊಳಗಾದ ಗುಣ ನಾಮಾತೀತಕ್ಕೆ ಅತೀತವಾಗಿಪ್ಪುದು. ಇಂತೀ ಸ್ಥಲಂಗಳನಹುದೆಂದೊಪ್ಪದೆ, ಅಲ್ಲಾ ಎಂದು ಬಿಡದೆ, ಅಲ್ಲಿಯ ಸ್ಥಲವಲ್ಲಿಯೆ ಏಕೀಕರಿಸಿ, ಅಲ್ಲಿಯ ಭಾವವ ತೋರಿದಲ್ಲಿಯೆ ಲೇಪಮಾಡಿ, ಹಿಡಿದಡೆ ಹಿಡಿತೆಗೆ ಬಾರದೆ, ಬಿಟ್ಟಡೆ ಹರವರಿಯಲ್ಲಿ ಹರಿಯದೆ, ವಸ್ತುಕದಲ್ಲಿ ವರ್ಣಕ ತೋರಿ ಆ ವರ್ಣಕಕ್ಕೆ ವಸ್ತುಕ ಅಧೀನವಾಗಿಪ್ಪ ಉಭಯಸ್ಥಲವನರಿದಲ್ಲಿ ವಿಶ್ವಸ್ಥಲ ನಾಶವಾಗಿ ಸದ್ಯೋಜಾತಲಿಂಗ ವಿನಾಶನವಾಗಬೇಕು.
--------------
ಅವಸರದ ರೇಕಣ್ಣ
ಅಷ್ಟತನುಮೂರ್ತಿ ಕೂಡಿ ನಿಂದು, ವಸ್ತುವನರಿಯಬೇಕೆಂದು, ತತ್ವ ಇಪ್ಪತ್ತೈದು ಕೂಡಿ ನಿಂದು, ವಸ್ತುವನರಿಯಬೇಕೆಂಬುದು, ಶತ ಏಕವನರಸಿ ಒಂದುಗೂಡಿ ವಸ್ತುವನರಿಯಬೇಕೆಂಬುದು, ತಾಪತ್ರಯವಾರು, ತನುತ್ರಯ ಮೂರು, ದಶವಾಯುವಿನಲ್ಲಿ ಸೂಸುವ ಆತ್ಮನ ಮುಕ್ತವ ಮಾಡಿ ವಸ್ತುವನರಿಯಬೇಕೆಂಬುದು, ಅಷ್ಟಮದಂಗಳ ಹಿಟ್ಟುಗುಟ್ಟಿ, ವಸ್ತುವ ಕಾಣಬೇಕೆಂಬುದು, ಷಟ್ಸ್ಥಲವನಾಚರಿಸಿ ನಿಂದು ವಸ್ತುವ ಒಡಗೂಡಿ ಅರಿಯಬೇಕೆಂಬುದು, ಬ್ರಹ್ಮನ ಉತ್ಪತ್ಯಕ್ಕೆ ಹುಟ್ಟದೆ, ವಿಷ್ಣುವಿನ ಸ್ಥಿತಿಗೊಳಗಾಗದೆ, ರುದ್ರನ ಲಯಕ್ಕೆ ಸಿಕ್ಕದೆ, ನಿಜದಲ್ಲಿ ನಿಂದು ವಸ್ತುವನರಿಯಬೇಕೆಂಬುದು ಅದೇನು ಹೇಳಾ? ಆ ಗುಣ ಸ್ವಾದೋದಕ ಮೇಘದಲ್ಲಿ ಏರಿ ಧರೆಗೆಯ್ದಿದಂತೆ, ಆ ಅಪ್ಪುವಿನಿಂದ ತರು, ಸಸಿ ಸಕಲಜೀವಂಗಳಿಗೆ ಸುಖವನೆಯ್ದಿಸುವಂತೆ, ಎಂಬುದನರಿದು ವರ್ತನಕ್ಕೆ ಕ್ರೀ, ಕ್ರೀಗೆ ನಾನಾ ಭೇದ, ನಾನಾ ಭೇದಕ್ಕೆ ವಿಶ್ವಮಯ ಸ್ಥಲಂಗಳಾಗಿ, ಸ್ಥಲ ಏಕೀಕರಿಸಿ ನಿಂದುದು ಮಹಾಜ್ಞಾನ. ಆ ಮಹಾಜ್ಞಾನವನೇಕೀಕರಿಸಿ ನಿಂದುದು ದಿವ್ಯಜ್ಞಾನ. ಆ ಜ್ಞಾನ ಸುಳುಹುದೋರದೆ ನಿಂದುದು ಪ್ರಾಣಲಿಂಗಿಯ ಭಾವ. ಆ ಭಾವ ನಿರ್ಭಾವವಾದುದು ಐಕ್ಯಾನುಭಾವ. ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ ಸಂದನಳಿದು ನಿಂದ ನಿಜ.
--------------
ಮೋಳಿಗೆ ಮಾರಯ್ಯ
-->