ಅಥವಾ

ಒಟ್ಟು 9 ಕಡೆಗಳಲ್ಲಿ , 9 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರು ಲೋಕದವರ ನಿದ್ರಾಂಗನೆ ಹೀರಿ ಹಿಂಡಿ ಪ್ರಾಣಕಾರ್ಪಣ್ಯವ ಮಾಡಿ ತಟ್ಟುಗೆಡಹಿದಳು. ಇವಳ ಗೆಲುವವರ ಆರನೂ ಕಾಣೆ, ಇವಳ ಬಾಣಕ್ಕೆ ಗುರಿಯಾಗಿ ಏಳುತ್ತ ಬೀಳುತ್ತ ಐದಾರೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಂಡಜ ಇಪ್ಪತ್ತೊಂದು ಲಕ್ಷ, ಪಿಂಡಜ ಇಪ್ಪತ್ತೊಂದು ಲಕ್ಷ, ಉದ್ಬಿಜ ಇಪ್ಪತ್ತೊಂದು ಲಕ್ಷ, ಜರಾಯುಜ ಇಪ್ಪತ್ತೊಂದು ಲಕ್ಷ, ಇಂತು ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೊಳಗೆ ಒಂದೊಂದು ಜನ್ಮದೊಳಗೆ ಸಹಸ್ರ ಸಹಸ್ರವೇಳೆ ಹುಟ್ಟಿಬಂದ ಅನೇಕ ದುಃಖವಂತಿರಲಿ. ಮುಂದೆ ಮನುಷ್ಯದೇಹವಿಡಿದು ಬಂದ ದುಃಖಮಂ ಪೇಳ್ವೆನದೆಂತೆನೆ : ತಂದೆಯ ವಿಕಾರದದೆಸೆಯಿಂದೆ ಬಂದು ಬಿಂದುರೂಪಾಗಿ, ತಾಯಿಯ ಬಸುರಲ್ಲಿ ನಿಂದು ಒಂಬತ್ತುತಿಂಗಳ ಪರಿಯಂತರ ಅವಯವಂಗಳು ಬಲಿದು ಪಿಂಡವರ್ಧನವಾಗಿ, ಕದ್ದ ಕಳ್ಳನ ಹೆಡಗೈಯಕಟ್ಟಿ ಸೆರೆಮನೆಯಲ್ಲಿ ಕುಳ್ಳಿರಿಸುವಂತೆ, ಗರ್ಭವೆಂಬ ಸೆರೆಮನೆಯಲ್ಲಿ ಶಿಶುವು ಮುಚ್ಚಿದ ಕಣ್ಣು, ಮುಗಿದ ಬಾಯಾಗಿ, ಕುಕ್ಕುಟಾಸನದಲ್ಲಿ ಕುಳ್ಳಿರ್ದು, ಕಡಿವ ಜಂತುಜಂಗುಳಿಯ ಬಾಧೆ, ಸುಡುವ ಜಠರಾಗ್ನಿಯ ಬಾಧೆ, ಎಡದಲ್ಲಿ ಮೂತ್ರದ ತಡಿಕೆಯ ಬಾಧೆ, ಬಲದಲ್ಲಿ ಅಮೇಧ್ಯದ ಹಡಿಕೆಯ ಬಾಧೆ, ಇಂತಿವು ಮೊದಲಾದನಂತಕೋಟಿ ಬಾಧೆಗಳಿಂದೆ ದಿನದಿನಕ್ಕೆ ದುಃಖಮಂಬಡುತಿರ್ದು, ಆ ಮೇಲೆ ಜಾತಿಸ್ಮರತ್ವ ಉದಯವಾಗಿ, ತನ್ನ ಹಿಂದಣ ಧರ್ಮಕರ್ಮಂಗಳ ಪುಣ್ಯಪಾಪಂಗಳ ಅರಹು ಮರಹುಗಳನಾರೈದು ನೋಡಿ, ಹಿಂದರಿಯದ ಪಾಪದ ದೆಸೆಯಿಂದೆ ಈ ಗರ್ಭನರಕಕ್ಕೆ ಬಂದೆ, ಇನ್ನು ಮುಂದೆ ತೆರನೇನೆಂದು ತನ್ನೊಳಗೆ ತಾನೆ ಚಿಂತಿಸಿ ಸರ್ವರಿಗೆ ಪರಮೇಶ್ವರನೇ ಕರ್ತನು, ಸರ್ವರ ಭವಪಾಶಂಗಳ ಛೇದಿಸುವಾತನು ಪರಮೇಶ್ವರನೆಂದರಿದು, ಮನದಲ್ಲಿ ನಿಶ್ಚೈಸಿಕೊಂಡು ಆ ಪರಮೇಶ್ವರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ್ತ ಶಿವಧ್ಯಾನಮಂ ಮಾಳ್ಪ ಸಮಯದಲ್ಲಿ ಕೋಟಿಸಿಡಿಲು ಹೊಯ್ದಂತೆ ವಿಷ್ಣುಪ್ರಸೂತಿಯೆಂಬ ಗಾಳಿ ಬೀಸಲು, ಅದಕಂಡು ಥರಥರನೆ ನಡುಗಿ ಧ್ಯಾನಪಲ್ಲಟವಾಗಿ ದಿಗ್‍ಭ್ರಮಣೆಗೊಂಡು ಊಧ್ರ್ವಮುಖವಾಗಿ ಕುಳಿತಿರ್ದ ಶಿಶುವು ಗಿರ್ರನೆ ತಿರುಗಿ ತಲೆಕೆಳಗಾಗಿ ಕರ್ತಾರನ ಕಂಬೆಚ್ಚಿನಲ್ಲಿ ಚಿನ್ನದ ಸಲಾಕೆ ತೆಗವಂತೆ, ಬಚ್ಚಲಹುಳುವಿನಂದದಿ ಯೋನಿಯೆಂಬ ಸೂಕ್ಷ್ಮದ್ವಾರದಿಂದೆ ಪೊರಮಟ್ಟು ಹುಟ್ಟಿದಲ್ಲಿ ಕೋಟಿಬಾಧೆಗಳಿಂದ ನೊಂದು ಹವ್ವನೆ ಹಾರಿ ಕಡುದುಃಖಮಂಬಟ್ಟು ಪಿಂದಣ ಜಾತಿಸ್ಮರತ್ವ ಕೆಟ್ಟು, ಮತಿ ಮಸುಳಿಸಿ, ತನ್ನ ಮಲಮೂತ್ರಂಗಳಲ್ಲಿ ತಾ ಹೊರಳಾಡಿ ಬಾಲಲೀಲೆಯ ಸುಖದುಃಖಂಗಳನನುಭವಿಸಿ, ಆ ಬಾಲಲೀಲೆಯು ಹಿಂದುಳಿದ ಮೇಲೆ ಯೌವನದ ವಯಸ್ಸೊದಗಿದಲ್ಲಿ, ಕಾಮದಲ್ಲಿ ಕರಗಿ ಕ್ರೋಧದಲ್ಲಿ ಕೊರಗಿ ಮದಮತ್ಸರಂಗಳಲ್ಲಿ ಮುಂದುಗೆಟ್ಟು ನಾನಾ ವ್ಯಾಪಾರವನಂಗೀಕರಿಸಿ ಬಂದ ಯೋನಿಯೆಂದರಿಯದೆ, ಉಂಡ ಮೊಲೆಯೆಂದರಿಯದೆ, ಕಾಮವಿಕಾರ ತಲೆಗೇರಿ ವಿಷಯಾತುರನಾಗಿ, ಈಳಿಗಾರನ ದೆಸೆಯಿಂದ ಈಚಲಮರ ನಿಸ್ಸಾರವಾದಂತೆ, ಸ್ತ್ರೀಯರ ಸಂಗದಿಂದೆ ದೇಹದೊಳಗಣ ಊರ್ಧ್ವಬಿಂದು ಜಾರಿ ಜಾರಿ ಇಳಿದು ಸೋರಿ ಸೋರಿ ಹೋಗಿ ದೇಹವು ನಿಸ್ಸಾರವಾಗಿ, ಯೌವನದ ಬಲಗೆಟ್ಟು ಮುಪ್ಪಾವರಿಸಿ ಅಚೇತನಗೊಂಡು ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾತನಾಗಿ, ಆದ್ಥಿ ವ್ಯಾದ್ಥಿ ವಿಪತ್ತು ರೋಗ ರುಜೆಗಳಿಂದೆ ಬಹು ದುಃಖಬಟ್ಟು, ಎದೆ ಗೂಡುಗಟ್ಟಿ, ಬೆನ್ನು ಬಾಗಿ, ಕಣ್ಣು ಒಳನಟ್ಟು, ಶರೀರ ಎಳತಾಟಗೊಂಡು, ಕಾಲಮೇಲೆ ಕೈಯನೂರಿ ಕೋಲವಿಡಿದು ಏಳುತ್ತ, ನಾನಾ ತೆರದ ದುಃಖಧಾವತಿಯಿಂದೆ ಆತ್ಮ ಕೆಟ್ಟು ನಷ್ಟವಾಗಿ ಹೋಯಿತ್ತು ನೋಡಾ. ಇದ ಕಂಡು ನಾನಂಜಿ ಮರಳಿ ಜನ್ಮಕ್ಕೆ ಬರಲಾರದೆ ನಿಮ್ಮ ಮೊರೆಹೊಕ್ಕೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ರಂಜನಿಪುರದಲ್ಲಿ ಕಪಿ ಉಡವ ಕಚ್ಚಿ ತಿರುಗಾಡುವದ ಕಂಡೆನಯ್ಯ. ಆ ಉಡುವಿನ ಬಾಯೊಳಗೆ ಮೂರುಲೋಕವೆಲ್ಲ ಏಳುತ್ತ ಬೀಳುತ್ತ ಇರ್ಪುದ ಕಂಡೆ. ಆ ಕೋಡಗದಾಟವ ಕಂಡು ಈರೇಳುಲೋಕದ ಪ್ರಾಣಿಗಳು ಬೆರಗಾದುದ ಕಂಡೆ. ಅದಾರಿಗೂ ಸಾಧ್ಯವಲ್ಲ. ಅಷ್ಟರಲ್ಲಿಯೇ ಅರಸನ ಮನೆಯಲ್ಲಿ ಒಂದು ಎಳೆ ಶಿಶು ಹುಟ್ಟಿ, ಕಸ ನೀರು ಹೊರುವ ಗಾಡಿಯ ಕೊಂದು, ಕೋತಿಯ ತಿಂದು, ಉಡವ ನುಂಗಿ, ತ್ರೈಲೋಕದ ಬಂಧನವ ಬಿಡಿಸಿ, ತಂಗಿಯನೊಡಗೂಡಿ, ಅಕ್ಕನ ಸಂಗವ ಮಾಡಿ, ಅರಸಿನ ಅರಮನೆಯಲ್ಲಿ ಆರು ಕಾಣದೆ ಅಡಗಿಹೋಯಿತ್ತು. ಇದರಂದಚಂದವ ನಿಮ್ಮ ಶರಣ ಬಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಂಚೇಂದ್ರಿಯಂಗಳೆಂಬ ಪಂಚವಿಷಯವೆಂಬ ವಿಷಯದೊಳಗೆ ಆಳುತ್ತ ಏಳುತ್ತ ಬೀಳುತ್ತಲಿದೇನೆ, ಓಂ ನಮಃ ಶಿವಾಯ, ಓಂ ನಮಃ ಶಿವಾಯನೆಂಬುತಿದೇನೆ, ಕೂಡಲಸಂಗಮದೇವಾ, ಪರಿಹರಿಸುವರ ಕಾಣೆ.
--------------
ಬಸವಣ್ಣ
ತಾನು ಈಶನೆಂಬುದನು ತಾನರಿದು, ಮಾನೀಶನೆಂಬುದನು ತಾನರಿದು. ತಾನೆ ತಾನಾಗುವ ಸಕೀಲವನರಿಯದೆ ಧ್ಯಾನಧಾರಣಸಮಾಧಿ ಯೋಗಾಂಗವೆಂಬ ಯೋಗಧ್ಯಾನದಿಂದ ಅರಿಯ[ಬ]ಹುದೆ ಸ್ವಯಂಭು[ವ] ? ಯೋಗಿ ದೇಹರಹಿತ, ಈ ದೇಹವಿಡದೇ ವಿದೇಹಿಯಾಗುವ ಸಕೀಲಸಂಜ್ಞೆಯ ಅರಿಯಬಲ್ಲಂಥ ಗುರುವಿನ ಕೃಪೆ ದೊರಕೊಳ್ಳುವತನಕ ಮನದಿಂದಲರಿಯಲುಂಟೆ ? ಗುರುವಿನ ಕೃಪೆ ದೊರಕೊಳ್ಳುವತನಕ ಮನದಿಂದಲರಿಯಲುಂಟೆ ? ತನ್ನ ಘನವು ಆ ಮನವು ಮದಾವಸ್ಥೆಯಲ್ಲಿ ಮಗ್ನವಹುದಲ್ಲದೆ ಮಾಣದು ನೋಡಾ. ಅದು ಮೂರುಗುಣ, ಅದು ತ್ರಿಪುಟಿ ಮಾಯಾ. ಜಾಗ್ರತದಲ್ಲಿದ್ದ ವರ್ತನೆ ಸ್ವಪ್ನದಲ್ಲಿಲ್ಲ. ಸ್ವಪ್ನದಲ್ಲಿದ್ದ ವರ್ತನೆ ಸುಷುಪ್ತಿಯಲ್ಲಿಲ್ಲ. ಈ ಮನ ತಾನು ಹುಟ್ಟುಗುರುಡು ಮೊದಲಿಂಗೆ ಹುಸಿ ವಿಲಕ್ಷಣಾದಿ ಶಿವನೆತ್ತ, ಲಕ್ಷದಿಂದ ಅರಿಯಬೇಕೆಂಬ ಮನವೆತ್ತ, ಹೋಗುತ್ತ, ನೀನತ್ತ. ಈ ಮನಸು ತಾನು ಮೊದಲಿಂಗಲ್ಲದೆ ಹುಸಿಯೆಂದರಿಯದೆ ನದಿಯ ಸುಳಿಯಲ್ಲಿ ಬಿದ್ದ ಹುಳದಂತೆ ಮುಳುಗುತ್ತ ಏಳುತ್ತ ತಿರುಗುವವರಿಗೆಲ್ಲ ತನ್ನ ನಿಜವು ತನ್ನವೆಂದರ್ಥವಾಗುವುದೆ ? ಅದು ತಮ್ಮ ಇಚ್ಫೆ. ಇದನರಿಯದೆ ಮನ ಸಮಾಧಿಯ ಮಾಡಬೇಕೆಂಬ ಮಹಾಗಣಂಗಳು ಇಂತಿವರಲ್ಲ. ಮಹಾಗಣಂಗಳು ಮಹಾಜ್ಞಾನಿಗಳು ಇಂತಿವರಲ್ಲ. ಮತ್ರ್ಯದಲ್ಲಿ ಎನ್ನದೊಂದು ವಂಶವೆಂದಾತ ನಮ್ಮ ವೀರ ಸದ್ಗುರು ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ವ್ಯಾಧನಂತೆ ಜಾಲಗಾರನಂತೆ ಹೇಮಚೋರನಂತೆ ಇಂತೀ ಗಾಹುಗಳ್ಳರಂತೆ ಮಾತಿನಲ್ಲಿ ಬ್ರಹ್ಮವ ನುಡಿದು ಸರ್ವ ಸಂಸಾರದಲಿ ಏಳುತ್ತ ಮುಳುಗುತ್ತ ಬೇವುತ್ತ ನೋವುತ್ತ ಮತ್ತೆ ಬ್ರಹ್ಮದ ಸುಮ್ಮಾನದ ಸುಖಿಗಳೆಂತಪ್ಪರೊ? ಇಂತು ನುಡಿಯಬಾರದು ಸಮಯವ ಬಿಡಬಾರದು ಕ್ರೀಯ ಅರಿದು ಮರೆಯಬಾರದು ಜ್ಞಾನವ. ಇಂತೀ ಭೇದವನರಿದು ಹರಿದವಗಲ್ಲದೆ ಕಾಲಕರ್ಮವಿರಹಿತ ತ್ರಿಪುರಾಂತಕ ಲಿಂಗವು ಸಾಧ್ಯವಿಲ್ಲ.
--------------
ಶಂಕರದಾಸಿಮಯ್ಯ
ಶಿವಪ್ರಸಾದವ ಬೀಸರವೋಗಬಾರದೆಂದು ಎಚ್ಚರಿಕೆ ಅವಧಾನದಿಂದರ್ಪಿಸಿ ಪ್ರಕ್ಷಾಳನ ಲೇಹ್ಯ ಅಂಗಲೇಪನದಿಂದ ಅವಧಾನವ ಮಾಡುತಿಪ್ಪ ಪರಮ ವಿರಕ್ತರೇ ಪದಾರ್ಥವಂ ತಂದು ಕರದಲ್ಲಿ ಕೊಟ್ಟರೇನ ಮಾಡುವಿರಯ್ಯ? ಭಕ್ತರು ಕ್ರೀವಿಡಿದು ಪದಾರ್ಥವ ಪರಿಯಾಣದಲ್ಲಿ ತಂದರೆ ಭಕ್ತಿ ಭಕ್ತಿಯಿಂದ ವೈಯಾರದಲ್ಲಿ ಪ್ರಸಾದವ ಸಲಿಸುವುದೇ ಎನ್ನ ಕ್ರೀಗೆ ಸಂದಿತು. ಅದಲ್ಲದೆ ಎನ್ನ ಕರಪಾತ್ರೆಗೆ ತಂದು ಭಿಕ್ಷವ ನೀಡಿದರೆ ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ. ಅದು ಎನ್ನ ಜ್ಞಾನಕ್ಕೆ ಸಂದಿತು. ಅದು ಹೇಗೆಂದೊಡೆ ಹರಿಶಬ್ದವ ಕೇಳೆನೆಂದು ಭಾಷೆಯಂ ಮಾಡಿದ ಶಿವಭಕ್ತೆ ಸತ್ಯಕ್ಕನ ಮನೆಗೆ ಶಿವನು ಜಂಗಮವಾಗಿ ಭಿಕ್ಷಕ್ಕೆ ಬಂದು `ಹರಿ' ಎನ್ನಲೊಡನೆ ಹರನ ಬಾಯ ಹುಟ್ಟಿನಲ್ಲಿ ತಿವಿದಳು. ಅದು ಅವಳ ಭಾಷೆಗೆ ಸಂದಿತು. ಅವಳು ಶಿವದ್ರೋಹಿಯೇ? ಅಲ್ಲ. ನಾನು ಸಂಸಾರ ಸಾಗರದಲ್ಲಿ ಬಿದ್ದು ಏಳುತ್ತ ಮುಳುಗುತ್ತ ಕುಟುಕುನೀರ ಕುಡಿಯುವ ಸಮಯದಲ್ಲಿ ಶಿವನ ಕೃಪೆಯಿಂದ ನನ್ನಿಂದ ನಾನೇ ತಿಳಿದು ನೋಡಿ ಎಚ್ಚತ್ತು ಮೂರು ಪಾಶಂಗಳ ಕುಣಿಕೆಯ ಕಳೆದು ಭೋಗ ಭುಕ್ತ್ಯಾದಿಗಳನತಿಗಳೆದು ಅಹಂಕಾರ ಮಮಕಾರಗಳನಳಿದು ಉಪಾಧಿಕೆ ಒಡಲಾಶೆಯಂ ಕೆಡೆಮೆಟ್ಟಿ ಪೊಡವಿಯ ಸ್ನೇಹಮಂ ಹುಡಿಗುಟ್ಟಿ ಉಟ್ಟುದ ತೊರೆದು ಊರ ಹಂಗಿಲ್ಲದೆ ನಿರ್ವಾಣಿಯಾಗಿ ನಿಜಮುಕ್ತಿ ಸೋಪಾನವಾಗಿಪ್ಪ ಕರಪಾತ್ರೆ ಎಂಬ ಬಿರಿದು ಬಸವಾದಿಪ್ರಮಥರರಿಕೆಯಾಗಿ ಶಿವನ ಮುಂದೆ ಕಡುಗಲಿಯಾಗಿ ನಾನು ಕಟ್ಟದೆ ಆ ಬಿರುದಿಂಗೆ ಹಿಂದು ಮುಂದಾದರೆ ಶಿವನು ಮೂಗುಕೊಯ್ದು ಕನ್ನಡಿಯ ತೋರಿ ಅಣಕವಾಡಿ ನಗುತಿಪ್ಪನೆಂದು ನಾನು ಕರಪಾತ್ರೆಯಲ್ಲಿ ಸಂದೇಹವಿಲ್ಲದೆ ಸಲಿಸುತ್ತಿಪ್ಪೆನು. ಆ ಸಮಯದಲ್ಲಿ ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ ಇದು ಎನ್ನ ಸಮ್ಯಜ್ಞಾನದ ಬಿರುದಿಗೆ ಸಂದಿತು. ನಾನು ಪ್ರಸಾದದ್ರೋಹಿಯೆ? ಅಲ್ಲ. ಇಂತಲ್ಲದೆ. ನಾನು ಮನಸ್ಸಿಗೆ ಬಂದಂತೆ ಉಂಡುಟ್ಟಾಡಿ ರೂಪ ರಸ ಗಂಧವೆಂಬ ತ್ರಿವಿಧಪ್ರಸಾದದಲ್ಲಿ ಉದಾಸೀನವ ಮಾಡಲಮ್ಮೆನು. ಮಾಡಿದೆನಾದಡೆ ವರಾಹ ಕುಕ್ಕುಟನ ಬಸುರಲ್ಲಿ ಬಪ್ಪುದು ತಪ್ಪದು. ಇದ ಕಡೆಮುಟ್ಟಿ ನಡೆಸು ನಡೆಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮೂರುಲೋಕದ ಧೀರೆ ನಿದ್ರಾಂಗನೆ, ಎಲ್ಲರನೂ ಹಿಂಡಿ ಹೀರಿ ಪ್ರಾಣಾಕರ್ಷಣೆಯ ಮಾಡಿ, ಕಟ್ಟಿ ಕೆಡಹಿದಳಲ್ಲಾ ! ಇವಳ ಗೆಲುವ ಧೀರನಾರುವನೂ ಕಾಣೆ ಇವಳ ಬಾಣಕ್ಕೆ ಗುರಿಯಾಗಿ ಏಳುತ್ತ ಬೀಳುತ್ತಲಿದ್ದರು ಎಲ್ಲರೂ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಾಲ ಕಂಡ ಬೆಕ್ಕು ಮೆಲ್ಲುಲಿ ತೆಗೆದು ಕುಡಿವುತ್ತಿರಲು, ಬಾಲನಿಗಿರ್ದ ಹಾಲ ಬೆಕ್ಕು ಕುಡಿವುತ್ತಿದೆಯೆಂದು ನಾರಿ ಕಂಡು, ಗುದಿಗೆಯಲಿ ಹೊಡೆದರೆ, ಏಳುತ್ತ ಬೀಳುತ್ತ ಕಾಲ್ಗೆಡೆದು ಓಡುವಂತೆ, ಏನ ಹೇಳುವೆಯಯ್ಯ ? ಮತ್ರ್ಯದ ಮನುಜರು ಕರಣಂಗಳ ಹರಿಯ ಬಿಟ್ಟು, ತಮ್ಮ ಬಾಳುವೆಯ ಮರೆದು, ಕಾಲನ ಬಾಯಲ್ಲಿ ಅಳುತ್ತ ಮುಳುಗುತ್ತಲಿಪ್ಪುದನಾರೂ ಅರಿಯರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
-->