ಅಥವಾ

ಒಟ್ಟು 18 ಕಡೆಗಳಲ್ಲಿ , 7 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂಕಾರಂ ನಾದರೂಪಂ ಚ ಒಂಕಾರಂ ಮಂತ್ರರೂಪಕಂ ಒಂಕಾರಂ ವ್ಯಾಪಿ ಸರ್ವತ್ರ ಒಂಕಾರಂ ಗೋಪ್ಯಮಾನನಂ || ಎಂದುದಾಗಿ, ಒಂ ಎಂಬ ಶಬ್ದಕ್ಕೆ ಸಿಲುಕದ ನಿಶ್ಯಬ್ದಮಯಮಪ್ಪ ನಿರಾಲಂಬಮೂರ್ತಿ ಮದ್ಗುರುವೆ ಮನೋಹರ ಗುರುವೆ ವದನ ಮಾರ್ತಾಂಡ ಮಲಹರ ನಿರ್ಮಲ ಗುರುವೆ ನಿರುಪಮ ಗುರುವೆ ನಿರಂಜನ ಗುರುವೆ ನಿತ್ಯಪ್ರಸನ್ನ ಗುರುವೆ ಸತ್ಯಪ್ರಸಾದಿ ಗುರುವೆ ಭಕ್ತರ ಹೃತ್ಕಮಲವಾಸ ನಿವಾಸ ವರ ಮನೋಹರ ಗುರುವೆ ಬಸವಪ್ರಿಯ ಕೂಡಲಸಂಗಮದೇವಾ ಮಾಂ ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಬ್ರಹ್ಮದೇವರಾದಡೆ ಬ್ರಹ್ಮನವಾಹನ ಹಂಸ ಹಂಸನಲ್ಲಿ ಹರ[ಗಿ] ಬೆಳದುಂಡನೆ ? ವಿಷ್ಣು ದೇವರಾದಡೆ ವಿಷ್ಣುವಿನ ವಾಹನ ಗರುಡ ಗರುಡನಲ್ಲಿ ಹರ[ಗಿ] ಬೆಳದುಂಡನೆ ? ಇಂದ್ರ ದೇವರಾದಡೆ ಇಂದ್ರನ ವಾಹನ ಆನೆ ಆನೆಯಲ್ಲಿ ಬಿತ್ತಿ ಬೆಳದುಂಡನೆ ? ಮೈಲಾರ ದೇವರಾದಡೆ ಮೈಲಾರನ ವಾಹನ ಕುದುರೆ ಕುದುರೆಯಲ್ಲಿ ಬಿತ್ತಿ ಬೆಳದುಂಡನೆ ? ಜಿನ್ನ ದೇವರಾದಡೆ ಜಿನ್ನನ ವಾಹನ ಕತ್ತೆ ಕತ್ತೆಯಲ್ಲಿ ಬಿತ್ತಿ ಬೆಳದುಂಡನೆ ? ಭೈರವ ದೇವರಾದಡೆ ಭೈರವನ ವಾಹನ ಚೇಳು ಚೇಳಿನಲ್ಲಿ ಬಿತ್ತಿ ಬೆಳದುಂಡನೆ ? ಗಣೇಶ್ವರ ದೇವರಾದಡೆ ಗಣೇಶ್ವರನ ವಾಹನ ಇಲಿ ಇಲಿಯಲ್ಲಿ ಬಿತ್ತಿ ಬೆಳದುಂಡನೆ ? ದೇವರಲ್ಲವೆನಲಾರೆನು ಮತ್ತೆ ದೇವರೆಂಬುದು ಸತ್ಯ. ಅದೆಂತೆಂದಡೆ ಗಣೇಶಗೆ ಈಶ್ವರನ ಹೆಸರುಂಟು, ಅದು ಹೇಗೆ ಗಣೇಶ್ವರ ? ಮತ್ತೆ ಅದೆಲ್ಲದೆ ಪಾರ್ವತಿಗೆ ಮೋಹದ ಕುಮಾರ. ಅದಲ್ಲದೆ ಜಿತೇಂದ್ರಿ. ಸರ್ವಜಗಕೆ ವಿದ್ಯೆ ಬುದ್ಧಿಯಂ ಕೊಡುವನು, ಅದರಿಂದ ಸತ್ಯನು. ಒಂಕಾರ ವಸ್ತುವೆ ಸಾಕ್ಷಿಯಾಗಿ ಮತ್ತಂ ನಮ್ಮ ಸದಾಶಿವನ ವಾಹನ ಬಸವಣ್ಣ. ಬಸವಣ್ಣನ ಬಿರಿದೆಂತೆಂದರೆ ಸಪ್ತಸಮುದ್ರ ಜಲಪ್ರಳಯಕ್ಕೆ ಹೆಪ್ಪಕೊಟ್ಟ ಕಾರುಣ್ಯದಲ್ಲಿ ಎತ್ತೆಂಬ ಶಬ್ದಾಯಿತ್ತು. ಎತ್ತ ನೋಡಿದಡತ್ತ ತನ್ನಲಿಂದುತ್ಪತ್ಯವಾಯಿತೆಂಬ ಶಬವೆತ್ತಾಯಿತ್ತು. ತನ್ನಿಂದ ಹರಗಿ ಬಿತ್ತಿ ಬೆಳೆಯಲಿಕೆ ಪವಿತ್ರಸ್ವಾಮಿಗೆ ನೈವೇದ್ಯವಾಯಿತ್ತು . ಹಸ್ತಪರುಷವ ಮಾಡಲಿಕೆ ಘನವರುಷ ಪ್ರಸಾದವಾಯಿತ್ತು. ಇಂತಿರ್ದ ನಮ್ಮ ಬಸವನ ಪ್ರಸಾದವನುಂಡು ನನ್ನ ದೇವರು ಹೆಚ್ಚು ತನ್ನ ದೇವರು ಹೆಚ್ಚು ಎಂದು ಕಚ್ಚಾಡುವ ಕುನ್ನಿ ಮೂಕೊರೆ ಮೂಳ ಹೊಲೆಯರಿಗೆ ಏನೆಂಬೆನಯ್ಯಾ ಗುರು ವಿಶ್ವೇಶ್ವರಾ.
--------------
ವರದ ಸೋಮನಾಥ
ಪ್ರಣವದ ಪ್ರಣವವೆ ನಕಾರ, ಪ್ರಣವದ ದಂಡಕವೆ ಮಕಾರ, ಪ್ರಣವದ ಕುಂಡಲಿಯೆ ಶಿಕಾರ, ಪ್ರಣವದ ಅರ್ಧಚಂದ್ರವೆ ವಕಾರ, ಪ್ರಣವದ ಬಿಂದುವೆ ಯಕಾರ. ನಕಾರದ ದಂಡಕವೆ ಮಕಾರ, ನಕಾರದ ಬಲದ ಕೋಡೆ ಶಿಕಾರ, ನಕಾರದ ಎಡದ ಕೋಡೆ ವಕಾರ, ನಕಾರದ ಬಿಂದುವೆ ಯಕಾರ, ನಕಾರದ ತಾರಕವೆ ಒಂಕಾರ. ಮಕಾರದ ದಂಡಕವೆ ನಕಾರ, ಮಕಾರದ ಬಲದ ಕೋಡೆ ಶಿಕಾರ, ಮಕಾರದ ಎಡದ ಕೋಡೆ ವಕಾರ, ಮಕಾರದ ಬಿಂದುವೆ ಯಕಾರ, ಮಕಾರದ ತಾರಕವೆ ಒಂಕಾರ. ಶಿಕಾರದ ದಂಡಕವೆ ನಕಾರ, ಶಿಕಾರದ ಬಲದ ಕೋಡೆ ಮಕಾರ, ಶಿಕಾರದ ಎಡದ ಕೋಡೆ ವಕಾರ, ಶಿಕಾರದ ಬಿಂದುವೆ ಯಕಾರ, ಶಿಕಾರದ ತಾರಕವೆ ಒಂಕಾರ. ವಕಾರದ ದಂಡಕವೆ ನಕಾರ, ವಕಾರದ ಬಲದ ಕೋಡೆ ಮಕಾರ, ವಕಾರದ ಎಡದ ಕೋಡೆ ಶಿಕಾರ, ವಕಾರದ ಬಿಂದುವೆ ಯಕಾರ, ವಕಾರದ ತಾರಕವೆ ಒಂಕಾರ. ಯಾಕಾರದ ದಂಡಕವೆ ನಕಾರ, ಯಕಾರದ ಬಲದ ಕೋಡೆ ಮಕಾರ, ಯಕಾರದ ಎಡದ ಕೋಡೆ ಶಿಕಾರ, ಯಕಾರದ ಬಿಂದುವೆ ವಕಾರ, ಯಕಾರದ ತಾರಕವೆ ಒಂಕಾರ. ಇಂತಪ್ಪ ಮೂವತ್ತಾರು ಮೂಲಪ್ರಣವಂಗಳೆ, ಪ್ರಥಮಗುರು ಬಸವಣ್ಣನಾದುದಂ, ಸೊಡ್ಡಳ ಲಿಂಗದಲ್ಲಿ ಕಂಡು ಸುಖಿಯಾಗಿ, ನಾನು ಬಸವಾ ಬಸವಾ ಎಂದು ಜಪಿಸುತಿರ್ದೆನಯ್ಯಾ.
--------------
ಸೊಡ್ಡಳ ಬಾಚರಸ
ಹರಿಹರ ಬ್ರಹ್ಮಾದಿಗಳು ಸರಿಯಿಲ್ಲವೆಂದು ಹೇಳುವ ಅಣ್ಣಗಳು ನೀವು ಕೇಳಿರೊ. ಹರಿಹರ ಬ್ರಹ್ಮಾದಿಗಳೊಳಗೆ ಸರಿಯಾಗಿ ಬಂದು, ನಿಮ್ಮ ಅಂತರಂಗದೊಳಗೆ ನಿಂತ ಕಾರಣದಿಂದಾಗಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಸ್ವರ್ಗ ಮತ್ರ್ಯ ಪಾತಾಳ ಈರೇಳು ಭುವನ ಹದಿನಾಲ್ಕು ಲೋಕ, ನಾಲ್ಕು ವರ್ಣ, ಹದಿನೆಂಟು ಜಾತಿ, ನೂರೊಂದು ಕುಲದವರಾದರು. ಭಕ್ತರ ಆಧಾರದಲಿ ನಾವು ಆದಿವಿ, ನೀವು ಆದಿರಿ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬ ವಿಪ್ರನ ಗರ್ಭದಲ್ಲಿ ಹುಟ್ಟಿದ ನಕಾರ ಬ್ರಹ್ಮನೆ ಪೃಥ್ವಿತತ್ವವಾದ, ಮಕಾರ ವಷ್ಣುವೆ ಅಪ್ಪುತತ್ವವಾದ. ಶಿಕಾರ ರುದ್ರನೆ ತೇಜತತ್ವವಾದ, ವಕಾರ ಈಶ್ವರನೆ ವಾಯುತತ್ವವಾದ. ಯಕಾರ ಸದಾಶಿವನೆ ಆಕಾಶ ತತ್ವವಾದ ಅದು ಎಂತೆಂದರೆ : ನಕಾರ ಬ್ರಹ್ಮ , ಮಕಾರ ವಿಷ್ಣು , ಶಿಕಾರ ರುದ್ರ. ಮೂವರು ತ್ರಿಮೂರ್ತಿಗಳು ಕೂಡಲಿಕೆ ಈಶ್ವರನೆಂಬುದೊಂದು ವಿಪ್ರವರ್ಣವಾಯಿತು ಕಾಣಿರೊ. ಆತನ ಸದ್ಯೋಜಾತಮುಖದಲ್ಲಿ ಬ್ರಾಹ್ಮಣ ಹುಟ್ಟಿದ. ಅವರ ಅಂಗದಲ್ಲಿ ಪ್ರಸಾದಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಸ್ಫಟಿಕ ವರ್ಣದ ಪಟ್ಟಿಕೇಶ್ವರನೆಂಬ ಲಿಂಗವಾದ. ಆತನ ಭುಜದಲ್ಲಿ ಕ್ಷತ್ರಿಯ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ವೇತವರ್ಣದ ರಾಮನಾಥಲಿಂಗವಾದ, ಆತನ ಉದರದಲ್ಲಿ ವೈಶ್ಯ ಹುಟ್ಟಿದ ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ಯಾಮವರ್ಣದ ನಗರೇಶ್ವರಲಿಂಗವಾದ. ಆತನ ಪಾದದಲ್ಲಿ ಶೂದ್ರ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ನೀಲವರ್ಣದ ಕಲ್ಲಿನಾಥಲಿಂಗವಾದ. ಇಂತೀ ನಾಲ್ಕುವರ್ಣ ಹದಿನೆಂಟುಜಾತಿ ನೂರೊಂದು ಕುಲದವರು ಅಂತರಂಗದ ಒಳಹೊರಗೆ ಹರಿಹರ ಬ್ರಹ್ಮಾದಿಗಳು ಪೂಜೆಗೊಂಬುವ ದೇವರು ತಾವೆ ಆದರು, ಪೂಜೆ ಮಾಡುವ ಭಕ್ತರು ತಾವೆ ಆದರು. ಅದು ಎಂತೆಂದರೆ : ನಿಮ್ಮ ತಾಯಿಗರ್ಭದಲ್ಲಿ ಶುಕ್ಲ ಶೋಣಿತಗಳು ಎರಡು ಕೂಡಿ ಅಕ್ಷಮೂರ್ತಿಯಾದ. ಆತ್ಮದೊಳಗೆ ಒಂಕಾರ ಪರಬ್ರಹ್ಮವೆಂಬ .....(ಒಂದು ಹಾಳೆ ಕಳೆದಿದೆ) ನರರು ಸುರರು ತೆತ್ತೀಸಕೋಟಿ ದೇವತೆಗಳಿಗೆಲ್ಲ ಪೂಜೆ ಮಾಡುವ ಲಿಂಗ ಒಂದೆಯೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರುಂಟೇನು, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಐವತ್ತೆರಡು ಅಕ್ಷರಕ್ಕೆ ಈ ಪ್ರಣವವೇ ಉತ್ಪತ್ತಿ-ಸ್ಥಿತಿ-ಲಯಸ್ಥಾನ. ಅಜಪೆ ಗಾಯತ್ರಿ ಪ್ರಾಣಾಯಾಮನಕ್ಕೆ ಪ್ರಣವವೇ ಉತ್ಪತ್ತಿ-ಸ್ಥಿತಿ-ಲಯಸ್ಥಾನ. ಅನೇಕ ವೇದಾಗಮ ಶಾಸ್ತ್ರಪುರಾಣಂಗಳಿಗೆ ಪ್ರಣವವೇ ಉತ್ಪತ್ತಿ-ಸ್ಥಿತಿ-ಲಯಸ್ಥಾನ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ ಸಮಸ್ಥ ದೇವರ್ಕಳಿಗೆ ಪ್ರಣವವೇ ಉತ್ಪತ್ತಿ-ಸ್ಥಿತಿ-ಲಯಸ್ಥಾನ. ಪ್ರಣವವೇ ಪರಂಜ್ಯೋತಿ, ಪ್ರಣವವೇ ಪರಮಾನಂದ, ಪ್ರಣವವೇ ಪರಬ್ರಹ್ಮ, ಪ್ರಣವವೇ ಅಖಂಡ ಲೋಕಾದಿಲೋಕಕ್ಕೆ ಮೂಲಪ್ರಣವ ಓಂ ನಮಃಶಿವಾಯ ಪ್ರಣವ. ಓಂ ನಮಃ ಶಿವಾಯ ಪ್ರಣವ ಸಪ್ತಕೋಟಿ ಮಂತ್ರಗಳ ಸಾರ ; ಅನಂತಕೋಟಿ ವೇದಾಗಮಶಾಸ್ತ್ರಪುರಾಣಂಗಳ ಸಾರ. ಇದಕ್ಕೆ ಈಶ್ವರ ಉವಾಚ : ``ಸಪ್ತಕೋಟಿ ಮಹಾಮಂತ್ರ ಚಿತ್ತವ್ಯಾಕುಲ ಕಾರಣಂ | ಏಕಯೇಕಾಕ್ಷರಂ ದೇವೀ ತೂರ್ಯಾತೀತಂ ಮನೋಲಯಃ || ಸಪ್ತಕೋಟಿ ಮಹಾಮಂತ್ರಂ ಉಪಮಂತ್ರಂ ಸನೇಕತಾ | ಓ ಮಿತ್ಯೇಕಾಕ್ಷರಂ ಮೂಲಂ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಚಿತ್ಪಿಂಡಾಗಮೇ : ``ಓಂಕಾರೇ ಬೀಜರೂಪಂ ಚ ವೃಕ್ಷಂ ವಿಶ್ವವಿಶಾಲಯೋಃ | ಓಮಿತ್ಯೇಕಾಕ್ಷರಂ ಬ್ರಹ್ಮ ಓಂಕಾರೇ ವಿಶ್ವಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಅಕಾರೋಕಾರ ಸಂಯೋಗ ಓಂಕಾರಃ ಸ್ವರ ಉಚ್ಯತೇ | ಓಮಿತ್ಯೇಕಾಕ್ಷರಂ ಬ್ರಹ್ಮ ವದಂತಿ ಶಿವಯೋಗಿನಃ ||'' ಇಂತೆಂದುದಾಗಿ, ಇದಕ್ಕೆ ಮಹಾಗಮಸಾರೇ : ``ಓಂಕಾರೇ ತ್ರಿಗುಣಾತ್ಮಾ ಚ ತದರ್ಭೇತಿ ತ್ರಿಯಕ್ಷರಂ | ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಿಯಕ್ಷರಂ || ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ | ಮಕಾರಂತು ಕಲಾಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ ||'' ಇಂತೆಂದುದಾಗಿ, ಇದಕ್ಕೆ ಗೀತಸಾರೇ : ``ಪೃಥಿವಿಶ್ಚಾಗ್ನಿಶ್ಚ ಋಗ್ವೇದೋ ಭೂರಿತ್ಯೇವ ಪಿತಾಮಹಃ | ಅಕಾರೇ ತು ಲಯಂ ಪ್ರಾಪ್ತೇ ಪ್ರಥಮೇ ಪ್ರಣವಾಂಶಿಕೈಃ || ಅಂತರಿಕ್ಷಂ ಯಜುರ್ವೇದಂ ಭುಜೋವಿಷ್ಣುಃ ಸನಾತನವಃ | ಉಕಾರೇತು ಲಯಂ ಪ್ರಾಪ್ತೇ ದ್ವಿತಿಯೈೀ ಪ್ರಣವಾಂಶಿಕೇ || ದಿವಿ ಸೂರ್ಯಂ ಸಾಮವೇದಸ್ಸ್ಯೋರಿತ್ಯೇವ ಮಹೇಶ್ವರಃ | ಮಕಾರೇ ತು ಲಯಂ ಪ್ರಾಪ್ತೇ ತೃತೀಯೇ ಪ್ರಣವಾಂಶಿಕೇ | ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಿಯಕ್ಷರಂ | ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ || ಒಂಕಾರ ಪ್ರಭವಾತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಓಮಿತ್ಯೇಕಾಕ್ಷರಂ ಬ್ರಹ್ಮ ಹೃತ್ಪದ್ಮೇಪಿ ವ್ಯವಸ್ಥಿತಂ | ಸದ್ಯೋದಹತಿ ಪಾಪಾನಿ ದೀರ್ಘೋ ಮೋಕ್ಷಂ ಪ್ರಯಚ್ಛತಿ ||'' ಇಂತೆಂದುದಾಗಿ, ಇದಕ್ಕೆ ಪ್ರಣವೋಪನಿಷತ್ : ಅಕಾರವೆಂಬ ಪ್ರಣವದಲ್ಲಿ - ``ಅಗ್ನಿಶ್ಚ ಋಗ್ವೇದೋ ಭವತಿ | ಒಂ ರುದ್ರೋ ದೇವತಾ | ಅಕಾರೇಚ ಲಯಂ ಪ್ರಾಪ್ತೇ ಪ್ರಥಮಂ ಪ್ರಣವಾಂಶಿಕೇ ||'' ಉಕಾರವೆಂಬ ಪ್ರಣಮದಲ್ಲಿ- ``ಅಂತರಿಕ್ಷಜುರ್ವೇದಾದ್ಭವತಿ | ಓಮೀಶ್ವರೋ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಿಕೇ ||'' ಮಕಾರವೆಂಬ ಪ್ರಣವದಲ್ಲಿ- ``ವಿದ್ಯೇಸ್ಸಾಮವೇದಾ ಭವತಿ | ಓಂ ಸದಾಶಿವೋ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಿಕೇ || ಅಕಾರೇ ಚ ಉಕಾರೇ ಚ ಮಕಾರೇ ಚ ತೃತೀಯಕಂ | ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ || ಓಂಕಾರಪ್ರಭವಾ ವೇದಾ ಓಂಕಾರ ಪ್ರಭವಾತ್ಸ್ವರಾಃ | ಓಂಕಾರಪ್ರಭವಾತ್ಸರ್ವಂ ತ್ರೈಲೋಕ್ಯಂ ಸಚರಾಚರಂ || ಸರ್ವವ್ಯಾಪಕಮೋಂಕಾರಂ ಮಂತ್ರನ್ಯತ್ರ ನ ಭವೇತ್ | ಪ್ರಣವಂ ಹಿ ಪರಂ ಬ್ರಹ್ಮಂ ಪ್ರಣವಂ ಪರಮಂ ಪದಂ | ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ | ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಪ್ರಣಮಂ ನಕಾರರೂಪಂ ಚ | ಓಂಕಾರಂ ಮಂತ್ರರೂಪಕಂ | ಓಂಕಾರಂ ವ್ಯಾಪಿ ಸರ್ವತ್ರ | ಪ್ರಣವಂ ಮಕಾರರೂಪಕಂ || ಪ್ರಣವಂ ಶಿಕಾರರೂಪಂ ಚ | ಪ್ರಣವಂ ವಕಾರರೂಪಕಂ | ಪ್ರಣವಂ ಯಕಾರರೂಪಂ ಚ | ಪ್ರಣವಂ ಷಡಕ್ಷರಮಯಂ | ಇತಿ ಪ್ರಣವ ವಿಜ್ಞೇಯಂ | ಗುಹ್ಯಾದ್ಗುಹ್ಯಂ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಯರ್ಜುವೇದೋಪನಿಷತ್ : ``ಓಮಿತ್ಯೇಕಾಕ್ಷರಂ ಬ್ರಹ್ಮ ನಮಃ ಶಿವಾಯೇತ್ಯ ಜಾಯತ ||'' ಇಂತೆಂದುದಾಗಿ, ಇದಕ್ಕೆ ಶ್ರೀರುದ್ರೇ : ``ಓಂ ನಮಃ ಶಿವಾಯ ಚ ಶಿವ ತರಾ ಯ ಚ ||'' ಇಂತೆಂದುದಾಗಿ, ಇದಕ್ಕೆ ಅಥರ್ವಣವೇದೇ : ``ಓಂಕಾರೋಭ್ಯೋ ಜಗಕ್ಷೇತ್ರಾ | ಯಜಿತಾಂ ಪತಯೇ ನಮೋ ನಮೋ | ಅಕಾರೇಭ್ಯೋ ಬ್ರಹ್ಮಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ | ಉಕಾರೇಭ್ಯೋ ವಿಷ್ಣುಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ | ಮಕಾರೇಭ್ಯೋ ರುದ್ರಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ | ಓಂಕಾರೇಭ್ಯೋ ಅಧ್ವಕ್ಷೇತ್ರಾಯ | ಕ್ಷೇತ್ರಾನಾಂ ಪತಯೇ ನಮೋ ನಮೋ | ನಮಃ ಶಿವಾಯೇಭ್ಯೋ ಸರ್ವ | ಕ್ಷೇತ್ರಾನಾಂ ಪತಯೇ ನಮೋ ನಮೋ ||'' ಇಂತೆಂದುದಾಗಿ, ಪ್ರಣವವ ಬಲ್ಲಾತನೆ ಬ್ರಾಹ್ಮಣನು. ಪ್ರಣವವ ಬಲ್ಲಾತನೆ ವೇದಾಧ್ಯಾಯಿ. ಪ್ರಣವವ ಬಲ್ಲಾತನೆ ಆಗಮಿಕನು. ಪ್ರಣವವ ಬಲ್ಲಾತನೆ ಶಾಸ್ತ್ರಿಕನು. ಪ್ರಣವವ ಬಲ್ಲಾತನೆ ಪುರಾಣಿಕನು. ಪ್ರಣವವ ಬಲ್ಲಾತನೆ ದಿವ್ಯಯೋಗಿ. ಪ್ರಣವವ ಬಲ್ಲಾತನೆ ನಿಜಾನಂದಯೋಗಿ. ಪ್ರಣವವ ಬಲ್ಲಾತನೆ ಪರಮಜ್ಞಾನಿ. ಪ್ರಣವವ ಬಲ್ಲಾತನೆ ಪರಮಯೋಗಿ. ಪ್ರಣವವ ಬಲ್ಲಾತನೆ ಪರಮಾನಂದಯೋಗಿ. ಪ್ರಣವವ ಬಲ್ಲಾತನೆ ನಿಜಯೋಗಿ. ಪ್ರಣವವ ಬಲ್ಲಾತನೆ ಶಿವಯೋಗಿ. ಪ್ರಣವವ ಬಲ್ಲಾತನೆ ಶಿವಾನಂದಯೋಗಿ. ಪ್ರಣವವ ಬಲ್ಲಾತನೆ ಜ್ಞಾನಯೋಗಿ. ಪ್ರಣವವ ಬಲ್ಲಾತನೆ ಜ್ಞಾನಾನಂದಯೋಗಿ. ಪ್ರಣವವ ಬಲ್ಲಾತನೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾನಾ ಜನ್ಮಂಗಳ ತಿರುಗಿ, ಮನುಷ್ಯಜನ್ಮಕ್ಕೆ ಬಂದು, ಪಂಚೇಂದ್ರಿಯವುಳ್ಳ ಅರಿವಿನ ಪುರುಷನಾದ ಮೇಲೆ, ತಮ್ಮ ಆತ್ಮದೊಳಗಿಪ್ಪ ಜ್ಯೋತಿರ್ಲಿಂಗವನು ಕಂಡು, ಆರು ಲಿಂಗವನು ಕಂಡು, ಆರು ಲಿಂಗವನು ಅನುಭವಿಸಿ ನೋಡಿ, ಮೂವತ್ತಾರು ಲಿಂಗದ ಮುದ್ರೆಯನು ಮುಟ್ಟಿ, ಆಧ್ಯಾತ್ಮದ ನೀತಿಯನು ತಿಳಿದು, ಶುದ್ಧಾತ್ಮದೇಹಿಗಳಾದ ಮೇಲೆ ತಮ್ಮ ಜಾತಿಧರ್ಮದ ನೀತಿಶಾಸ್ತ್ರದ ನಿರ್ಣಯವನೆ ಕೇಳಿ, ತಮ್ಮ ಜಾತಿಧರ್ಮದ ವರ್ಣನೆ ಗುರುಹಿರಿಯರನು ಪೂಜೆಯ ಮಾಡಿ, ಹಸಿದು ಬಳಲಿಬಂದವರಿಗೆ ಅನ್ನವನು ನೀಡಿ, ಭಕ್ತಿಯನು ಮಾಡಿ, ಮುಕ್ತಿಯನ್ನು ಪಡೆದರೆ, ತನ್ನಷ್ಟಕ್ಕೇ ಆಯಿತು. ಆ ವಾರ್ತೆ ಕೀರ್ತಿಗಳು ಜಗಜಗಕ್ಕೆ ಕೀರ್ತಿ ಮೆರೆಯಿಪ್ಪುದು ಕಾಣಿರೊ. ಅದು ಎಂತೆಂದರೆ : ತಾನು ಹತ್ತು ಎಂಟು ಸಾವಿರ ಹಣ ಕಾಸುಗಳನು ಗಳಿಸಿ, ಹತ್ತಿರವಿಟ್ಟುಕೊಂಡು ಸತ್ತುಹೋದರೆ, ಆ ಬದುಕು ತನ್ನ ಹೆಂಡಿರು ಮಕ್ಕಳಿಗೆ ಬಾಂಧವರಿಗೆ ಆಯಿತಲ್ಲದೆ, ನೆರೆಮನೆಯವರಿಗೆ ಬಂದೀತೆ ? ಬರಲರಿಯದು. ಅದು ಎಂತೆಂದರೆ : ಇಂತೀ ತಮ್ಮ ಮನೆಯ ಹಿರಿಯರ ಸುದ್ದಿಯನು ಹಿಂದಿಟ್ಟುಕೊಂಡ ನೆರೆಮನೆಯ ಹಿರಿಯರ ಗರ್ವ, ಬಸವಣ್ಣ ದೊಡ್ಡಾತ, ಚೆನ್ನಬಸವಣ್ಣ ದೊಡ್ಡಾತ, ದೇವರ ದಾಸಿಮಯ್ಯ ದೊಡ್ಡಾತ. ಗಣಂಗಳು ದೊಡ್ಡವರೆಂದು ಬರಿಯ ಮಾತಿನ ಮಾಲೆಯ ಕೊಂಡು ಶಾಸ್ತ್ರವನು ಹಿಡಕೊಂಡು ಓದಿ ಹೇಳುವ ಮನುಜರಿಗೆಲ್ಲ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಯಿತೇ ? ಆಗಲರಿಯದು. ಅದು ಎಂತೆಂದರೆ : ಬಸವಣ್ಣ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ಬಸವಣ್ಣನ ಅಷ್ಟಕ್ಕೇ ಆಯಿತು. ಚೆನ್ನಬಸವಣ್ಣ ಭಕ್ಕಿಯನು ಮಾಡಿ, ಮುಕ್ತಿಯನು ಪಡೆದರೆ, ಚೆನ್ನಬಸವಣ್ಣನ ಅಷ್ಟಕ್ಕೇ ಆಯಿತು. ದೇವರದಾಸಿಮಯ್ಯ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ದೇವರದಾಸಿಮಯ್ಯನ ಅಷ್ಟಕ್ಕೆ ಆಯಿತು. ಗಣಂಗಳು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ಗಣಂಗಳ ಅಷ್ಟಕ್ಕೇ ಆಯಿತು. ನಾವು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ, ನಮ್ಮಷ್ಟಕ್ಕೇ ಆಯಿತು. ಅದು ಎಂತೆಂದರೆ : ಬಸವಣ್ಣ ಚೆನ್ನಬಸವಣ್ಣ ದೇವರದಾಸಿಮಯ್ಯ ಗಣಂಗಳೆಲ್ಲರು ದೊಡ್ಡವರೆಂದು ಅವರನ್ನು ಹಾಡಿ ಹರಸಿದರೆ, ಅವರು ನಮಗೆ ಕೊಟ್ಟು ಕೊಂಡು ನಡಸ್ಯಾರೆ ? ನಡೆಸಲರಿಯರು. ಅವರು ದೊಡ್ಡವರೆಂದರೆ, ಅವರು ತಮ್ಮಷ್ಟಕ್ಕೇ. ಅವರು ಚಿಕ್ಕವರಾದರೂ, ಅವರು ತಮ್ಮಷ್ಟಕ್ಕೇ. ನಾವು ದೊಡ್ಡವರಾದರೆ ಅವರಿಗೆ ನಾವು ಕೊಟ್ಟು ಕೊಂಡು ನಡೆಸೇವೆ ? ನಡೆಸಲರಿಯೆವು. ನಾವು ದೊಡ್ಡವರಾದರೆ ನಮ್ಮಷ್ಟಕ್ಕೇ. ವಾನು ಚಿಕ್ಕವರಾದರೆ ನಮ್ಮಷ್ಟಕ್ಕೇ. ಎದು ಎಂತೆಂದರೆ : ಹಿಂದೆ ಹುಟ್ಟಿದ ಹಿರಿಯ ಅಣ್ಣಗಳಾದರೇನು, ಮುಂದೆ ಹುಟ್ಟಿದ ಕಿರಿಯ ತಮ್ಮನಾದರೇನು, ತನ್ನ ಸುದ್ದಿಯನು ತಾನು ಅರಿತು, ಅನ್ಯರ ಹಂಗು ಹರಿದು, ಒಂಕಾರ ಪರಬ್ರಹ್ಮದ ಧ್ಯಾನವನು ಮಾಡಿಕೊಂಡು ಇರಬಲ್ಲರೆ, ಆತನೀಗ ತನ್ನಷ್ಟಕ್ಕೇ. ಹಿರಿಯಾತಂಗೆ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಯಿತು ಕಾಣಿರೊ. ಇಂತೀ ತನ್ನ ಸುದ್ದಿಯ ತಾನು ಅರಿಯದೆ, ನೆರೆಮನೆಯ ಹಿರಿಯರು ಘನವೆಂದು ಕೊಡಾಡುವ ಮರಿ ನಾಯಿಕುನ್ನಿಗಳಿಗೆಲ್ಲ ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಗಲರಿಯದೆಂದು ಇಕ್ಕಿದೆನು ಮುಂಡಿಗೆಯ. ಇದನೆತ್ತುವರುಂಟೇನೊ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಒಮ್ಮೆ ಶಿವನೆಯೆಂದು ನೆನೆದರೆ, ಕಳ್ಳಸುಳ್ಳರಿಗೆಲ್ಲ ಕೈಲಾಸವಾಯಿತೆಂದು ಹೇಳುವ ಅಣ್ಣಗಳಿರಾ, ಕೈಲಾಸಪದವಿ ಆದದ್ದು ಸಹಜ, ಅದೆಂತೆಂದಡೆ : ಒಬ್ಬ ಕಳವು ಮಾಡಿ ಸತ್ತರೆ, ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಒಯ್ಯಬೇಕೆಂದು ಅವಗೆ ಬ್ರಹ್ಮ ಬರೆದ ಕಲ್ಪನೆಯಲ್ಲಿತ್ತು . ಅವರಿಗೆ ಕೈಲಾಸಪದವಿ ಆಯಿತು ಕಾಣಿರೊ. ನೀವು ಕಳ್ಳರಲ್ಲ ಸುಳ್ಳರಲ್ಲ , ಒಳ್ಳೆಯ ಜನರು. ಶಿಲ್ಪಕಾರನ ಕೈಯಲ್ಲಿ ಹುಟ್ಟೆದ ಶಿಲೆಯ ಲಿಂಗವನು ತಂದು, ಶಿರದಲ್ಲಿ ಕಟ್ಟಿಕೊಂಡು ಉಂಬುವಲ್ಲಿ ಶಿವ, ಉಡುವಲ್ಲಿ ಶಿವ, ಕೊಂಬುವಲ್ಲಿ ಶಿವ, ಕೊಡುವಲ್ಲಿ ಶಿವ, ನಡೆವಲ್ಲಿ ಶಿವ, ನುಡಿವಲ್ಲಿ ಶಿವ. ಸರ್ವಾಂಗವೆಲ್ಲ ಶಿವಮಯವಾದ ಮೇಲೆ ನಿಮಗೆ ಶಿವ ಮೆಚ್ಚಿ, ಕೈಲಾಸಕ್ಕೆ ತಕ್ಕೊಂಡು ಹೋದನೆ ? ಹೋಗಲಿಲ್ಲ. ಕಾಲಚಕ್ರದ ಪ್ರಳಯಕ್ಕೆ ಒಳಗಾಗಿ, ಕಾಲ ಬಾಧೆಯೊಳಗೆ ಬಿದ್ದು ಬಳಲುತಿಪ್ಪಿರಿ. ಒಂದು ಅನಂತಕೋಟಿ. ಅದು ಎಂತೆಂದರೆ : ನೆಲುವಿನ ಮೇಲೆ ಇಟ್ಟಿದ್ದ ಹಾಲು ಬೆಣ್ಣೆಯನು ತಕ್ಕೊಂಡು ಸವಿದು ಉಣಲಾರದೆ, ಆಕಾಶವೆಂಬ ಬಯಲಿಗೆ ಬಾಯಿ ತೆರಕೊಂಡು ಕುಳಿತರೆ ಹಾಲು ಕರೆದೀತೆ ? ಕರೆಯಲರಿಯದು. ಅದು ಎಂತೆಂದರೆ :ನಿಮ್ಮ ಅಂತರಂಗವೆಂಬುದ ಅಡಿವಿಡಿದು ಅಳೆದರೆ, ಒಡನೆ ಮೂರಗೇಣಿನ ಒಳಗೆ ಹೊರಗೆ ಕೈಲಾಸವಾಗಿತ್ತು. ಆ ಕೈಲಾಸದಲ್ಲಿ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಈ ಐದುಮಂದಿ ಮಕ್ಕಳನ್ನು ಹಡೆದ ಒಂಕಾರ ಪರಬ್ರಹ್ಮ ದೇವರಿಂದೆ ಆರುಮಂದಿ ದೇವರಾದಲ್ಲಿ ಆಕಾರಾವಂ(?) ಕೋಟಿ ರುದ್ರ ನವಕೋಟಿ ವಿಷ್ಣುಗಳು ಇಂದ್ರಸಭೆ ದೇವಸಭೆ ಶಿವಸಭೆ ನಂದಿನಾಥ ಭೃಂಗಿನಾಥ ಮೊದಲಾದ ಗರುಡ ಗಂಧರ್ವ ಸಿದ್ಧರು ವಿದ್ಯಾಧರರು ಸಮಸ್ತ ಮುನಿಜನಂಗಳೆಲ್ಲ ಇದ್ದರು ಕಾಣಿರೊ. ಇಂತೀ ತಮ್ಮ ಅಂತರಂಗದಲ್ಲಿ ತಿಳಿದು ನೋಡಬಲ್ಲಾತಗೆ ಪಿಂಡಾಂಡವೆಂಬ ಕೈಲಾಸದಲ್ಲಿ ಇದ್ದಂತೆ, ಬ್ರಹ್ಮಾಂಡವೆಂಬ ಕೈಲಾಸದಲ್ಲಿ ಇದ್ದಂತೆ, ಬ್ರಹ್ಮಾಂಡವೆಂಬ ಕೈಲಾಸವಲ್ಲಿಯಿತ್ತು , ಪಿಂಡಾಂಡವೆಂಬ ಕೈಲಾಸವಲ್ಲಿಯಿತ್ತು ಕಾಣಿರೊ. ಅದು ಎಂತೆಂದರೆ : ಕೃತಯುಗದಲ್ಲಿ , ಬ್ರಹ್ಮರಾಕ್ಷಸರು ಪೃಥ್ವಿಯ ಆಧಾರದಲ್ಲಿ ನಿಂದು, ಕೈಲಾಸಕ್ಕೆ ದಾಳಿಯನಿಕ್ಕಿ ಕೋಳು ತಕ್ಕೊಂಡು ಬರುವರು. ಅವರಿಗೆ ಕೈಲಾಸಪದವು ದೊಡ್ಡದಾಗಿತ್ತೆ ? ದೊಡ್ಡದಾಗಿ ಇದ್ದಿಲ್ಲ. ತ್ರೇತಾಯುಗದಲ್ಲಿ, ಕ್ಷತ್ರಿಯರು [ಪೃಥ್ವಿಯ ಆಧಾರದಲ್ಲಿ ನಿಂದು], [ಕೈಲಾಸಕ್ಕೆ ದಾಳಿಯನಿಕ್ಕಲು], ಕೈಲಾಸದೊಡೆಯ ಮರೆಯ ಹೊಕ್ಕ, ಕಾಮುಕ ಋಷಿಯು ಕಣ್ಣು ತೆಗೆದು, ಗರಿಯ ಅಂಬಿಗ ತಲೆಗೆ ಕಟ್ಟಿದರು. ಈಶ್ವರನ ಜಡೆಯೊಳಗಿನ ಗಂಗೆಯನು ಸುಟ್ಟುರುಹಿದ ಮೇಲೆ ಹಾಸಿತ ಮಾಂಸವನು ಹುಟ್ಟಿಸಿಯಿದ್ದರು. ಅವರಿಗೆ ಕೈಲಾಸಪದವು ದೊಡ್ಡದಾಗಿ ಇತ್ತೆ ? ದೊಡ್ಡದಾಗಿ ಇದ್ದಿಲ್ಲ. ದ್ವಾಪರಯುಗದಲ್ಲಿ , ಸೋಮಕ್ಷತ್ರಿಯರು ಪೃಥ್ವಿಯ ಆಧಾರದಲ್ಲಿ ನಿಂದು, ಇಂದ್ರಪದದಲ್ಲಿ ಇದ್ದಂಥ ಶ್ವೇತವರ್ಣದ ಆನೆಯನು ತಂದು, ತಾಯಿಗೆ ನೋಂಪಿಯ ನುತಿಸಿದರೆ, ಅವರಿಗೆ ಕೈಲಾಸಪದವಿ ದೊಡ್ಡದಾಗಿ ಇತ್ತೆ ? ದೊಡ್ಡದಾಗಿ ಇದ್ದಿಲ್ಲ. ಕಲಿಯುಗದಲ್ಲಿ ಹುಟ್ಟಿದ ಮನುಜರನು ಕೈಲಾಸಕೆ ಅಟ್ಟಿದರೇನು ಒಮ್ಮೆ ಶಿವನೆಯೆಂದು ನೆನೆದರೆ, ಕೈಲಾಸಪದವಿ ಆದೀತೆಂದು ಬಹಿರಂಗದಲ್ಲಿ ಹೇಳುವ ಮಾತುಗಳೇ ಬಹಳ. ಅಂತರಂಗವಿಡಿದು ಹೋದವರು ಒಬ್ಬರು ಇಬ್ಬರು ಕಾಣಿರೊ. ಅದು ಎಂತೆಂದರೆ : ಬ್ರಹ್ಮ ಬರೆದ ಕಲ್ಪನೆಯಿಂದ ಕೈಲಾಸಪದವಿಯಾಗಬೇಕೆಂದು ಇದ್ದರೆ, ಎಂದೆಂದೂ ಶಿವನೆಯೆಂದು ನೆನೆಯದೆ, ಜಟ್ಟಿಂಗ ಮೈಲಾರ ಜಿನ ಭೈರವವೆಂಬ ಕೆಟ್ಟದೇವರ ಪೂಜೆಯ ಮಾಡಿದರೇನು ಅವನೂ ಬ್ರಹ್ಮ ಬರೆದ ಕಲ್ಪನೆಯಿದ್ದು, ಸತ್ತುಹೋಗುವಾಗ, ಅವನ ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಹೋದನು. ಬ್ರಹ್ಮ ಬರೆದ ಕಲ್ಪನೆಯಲ್ಲಿ ಅವಗೆ ಕೈಲಾಸಪದವು ಇಲ್ಲದಿದ್ದರೆ, ಜಟ್ಟಿಂಗ ಮೈಲಾರ ಜಿನ ಭೈರವ ದೇವರುಗಳೆಂಬ ಕೆಟ್ಟದೇವರ ಪೂಜೆಯ ಬಿಟ್ಟು, ಎಷ್ಟುದಿನ ಶಿವನೆಯೆಂದು ನೆನೆದರೇನು, ಅವನು ಬ್ರಹ್ಮ ಬರೆದ ಕಲ್ಪನೆಯಲ್ಲಿದ್ದು, ಸತ್ತುಹೋಗುವಾಗ ಅವನನು ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಹೋದನೆ ? ಹೋಗಲಿಲ್ಲ. ಅದು ಎಂತೆಂದರೆ : ಕಾಲಚಕ್ರವೆಂಬ ಪ್ರಳಯಕ್ಕೊಳಗಾಗಿ, ಕಾಲನ ಬಾಧೆಯಲ್ಲಿ ಬಿದ್ದು ಹೊರಳಾಡುತ್ತಿದ್ದರು ಕಾಣಿರೊ. ಅದು ಎಂತೆಂದರೆ : ಬ್ರಹ್ಮ ಬರೆದ ಕಲ್ಪನೆ ಹೊರತಾಗಿ, ಶಿವನನು ನೆನೆದು ಕೈಲಾಸ ಕಂಡೆವೆಂದು ಕಲೆ ಕೆಳಗಾಗಿ ಕಾಲು ಮೇಲ್ಮಾಡಿ ತಪವ ಮಾಡಿದರೆ, ಕೈಲಾಸ ಪದ ಆಗದೆಂದು ಇಕ್ಕುವೆನು ಮುಂಡಿಗೆಯ. ಇದನು ಎತ್ತುವರುಂಟೆ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಆದಿ ಅನಾದಿಯ ಕೂಡಿದ ಮಹಿಮಂಗೆ ಆಧಾರವೆ ಆಚಾರಸ್ಥಲ, ಸ್ಪರ್ಶನವೆ ಗುರುಸ್ಥಲ. ಮಣಿಪೂರಕವೆ ಲಿಂಗಸ್ಥಲ, ಅನಾಹತವೆ ಜಂಗಮಸ್ಥಲ. ವಿಶುದ್ಧಿಯೆ ಪ್ರಸಾದಿಸ್ಥಲ, ಆಜ್ಞೇಯವೆ ಆನಂದಸ್ಥಲ. ಇಂತೀ ಆರು ಸ್ಥಲಂಗಳ ಮೇಳವಾಯಿತ್ತು. ಮೇಲಣ ಮೂರುಸ್ಥಲಂಗಳ ಮೀರಲರಿಯದೆ ಸಂಪರ್ಕವ ಮಾಡುವ ಅಣ್ಣಗಳಿಗೆ ನಾಲ್ಕು ವೇದ, ಹದಿನೆಂಟು ಪುರಾಣ, ಇಪ್ಪತ್ತೆಂಟು ದಿವ್ಯಾಗಮ, ಮೂವತ್ತೆರಡು ಉಪನಿಷತ್ತು, ಆರು ಶಾಸ್ತ್ರ, ಮೂವತ್ತೆರಡು ರಾಗ, ಅರುವತ್ತಾರು ಮಿಶ್ರಾರ್ಪಣ. ಇಂತೀ ಹನ್ನೆರಡು ಸಾವಿರ ಗೀತಪ್ರಬಂಧಕ್ಕೆ ಮುಖ್ಯವಾದ ಬೀಜ ಒಂದೇ ಒಂಕಾರ ಕಾಣಿಭೋ ! ಆ ಒಂಕಾರಕ್ಕೆ ಸೋಕರ ಸೋಹಂ ಎಂಬ ಮಹಾವೃಕ್ಷ. ಅದು ಮಹಾಸಾಜದಿಂದ ವೃಕ್ಷವಾಯಿತ್ತು. ಆ ಸಾಜವೇನು ವೃಕ್ಷವೆ ? ಅಲ್ಲ. ಬೀಜವೇ ಅಹಂ. ಈ ಉಭಯವಿಲ್ಲದೆ ನಿರೂಪಿಸುತ್ತಿರ್ದ ಎಂದುದಾಗಿ ಭವಿಯೊಳಗೆ ಅಡಗಿರ್ದ ಭಕ್ತ, ಆ ಭಕ್ತನೊಳಗೆ ಅಡಗಿರ್ದ ಮಾಹೇಶ್ವರ, ಆ ಮಾಹೇಶ್ವರನೊಳಗೆ ಅಡಗಿರ್ದ ಪ್ರಸಾದಿ, ಆ ಪ್ರಸಾದಿಯೊಳಗೆ ಅಡಗಿರ್ದ ಪ್ರಾಣಲಿಂಗಿ, ಆ ಪ್ರಾಣಲಿಂಗಿಯೊಳಗೆ ಅಡಗಿರ್ದ ಶರಣ ಆ ಶರಣನೊಳಗೆ ಅಡಗಿರ್ದ ಗುರು, ಆ ಗುರುವಿನೊಳಗೆ ಅಡಗಿರ್ದ ಲಿಂಗ, ಆ ಲಿಂಗದೊಳಗೆ ಅಡಗಿರ್ದ ಜಂಗಮ, ಆ ಜಂಗಮದೊಳಗೆ ಅಡಗಿರ್ದ ನಿತ್ಯಮುಕ್ತಿ,, ಆ ನಿತ್ಯಮುಕ್ತಿಯೊಳಗೆ ಅಡಗಿರ್ದ ನಿರಾಳವೆಂಬ ಮಹಾಪ್ರಕಾಶ. ಇವು ಅಡಗಿರ್ದವು ನಿರ್ವಯಲೆಂಬ ದೇಗುಲದೊಳು. ಆ ದೇಗುಲವ ಹೊಕ್ಕು, ಭಾಗಿಲವಂ ತಟ್ಟಿ, ಮೇಗಳ ಶಿಖರವ ಹತ್ತಿ ನೋಡಲಾಗಿ, ಬೆಳಗು ನಿಬ್ಬೆಳಗು ನಿರ್ಲೇಪ ನಿಃಕಾಯವಾದ ಲಿಂಗೈಕ್ಯನ ಕರಣಪ್ರಸಾದಕ್ಕೆ ಆನು ಅಂಗೈಸಿ ಬಂದೆನಯ್ಯಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಲಿಂಗದೇವರ ಪಾದದ ನೆನೆವ ನಿತ್ಯಮಾಡಿ, ಹೇಮದ ಕೂಟದ ಹಿರಿಯರುಗಳು ಆಶೀರ್ವಾದ ಬಿನ್ನಹ. ಅಂಗದ ಮೇಲೆ ಲಿಂಗವನು ಕಟ್ಟಿ ಶಿವಭಕ್ತರಾದ ಮೇಲೆ ಭವಿಗಳು ಇದ್ದಲ್ಲಿ ಶಿವಶಾಸ್ತ್ರವ ಓದಿ, ಭವಿಗಳ ಪಂಕ್ತಿಯಲ್ಲಿ ಅನ್ನವನು ಉಣಲಾಗದೆಂದು ಬರಿಯ ಮಾತಿನ ಬಣಬೆಯ ಹಿಡಕೊಂಡು ತಿರುಗುವ ನರಗುರಿಗಳು, ಆಧಾರಚಕ್ರದಲ್ಲಿ ಬ್ರಹ್ಮನೆಂಬೊ ಭವಿ ಹುಟ್ಟಿ, ಹೊರಗೆ ಪೃಥ್ವಿತತ್ವದ ಸ್ವಾಧಿಷ್ಟದಲ್ಲಿ ವಿಷ್ಣುವೆಂಬೊ ಭವಿ ಹುಟ್ಟಿ, ಒಳಗೆ ಅಪ್ಪುತತ್ವದ ಹೊರಗೆ ಅಪ್ಪುತತ್ವದ ಮಣಿಪೂರಕದಲ್ಲಿ ರುದ್ರನೆಂಬೊ ಭವಿ ಹುಟ್ಟಿ, ಒಳಗೆ ತೇಜತತ್ವದ ಹೊರಗೆ ತೇಜತತ್ವದ ಅನಾಹತದಲ್ಲಿ ಈಶ್ವರನೆಂಬೊ ಭವಿ ಹುಟ್ಟಿ, ಒಳಗೆ ವಾಯುತತ್ವದ ಹೊರಗೆ ವಾಯುತತ್ವದ ವಿಶುದ್ಧಿಯಲ್ಲಿ ಸದಾಶಿವನೆಂಬ ಭವಿ ಹುಟ್ಟಿ, ಒಳಗೆ ಆಕಾಶತತ್ವದ ಹೊರಗೆ ಆಕಾಶತತ್ವದ ಅಗ್ನಿಯಿಂದ ಪರಬ್ರಹ್ಮನೆಂಬೊ ಭವಿ ಹುಟ್ಟಿ. ಇಂತೀ ಇವರು ಆರುಮಂದಿ ಭವಿಗಳು. ಭಕ್ತನ ಅಂತರಂಗದೊಳು ಹುಟ್ಟಿ, ಅಂತರಂಗದೊಳು ಬೆಳೆದು, ಬೇರೊಂದು ವಿಷ್ಣುಲಿಂಗವಾಗಿ ಬಂದು ಪೂಜೆಗೊಂಬುತಿದರು ಕಾಣಿರೊ. ಅದು ಎಂತೆಂದರೆ : ಬ್ರಹ್ಮನೆಂಬ ಭವಿ, ವಿಷ್ಣುವೆಂಬ ಭವಿ, ರುದ್ರನೆಂಬ ಭವಿ. ಇಂತಿವರು ಮೂರುಮಂದಿ ಭವಿಗಳು ಒಂದುಗೂಡಲಿಕೆ ಈಶ್ವರನೆಂಬ ಲಿಂಗಾಕಾರ ಭವಿಯಾಯಿತು ಕಾಣಿರೊ. ಆ ಲಿಂಗದ ರೂಪನು ನೋಡಿ, ಶಿಲ್ಪಕಾರರು ತಮ್ಮ ಹೊಟ್ಟೆಕಿಚ್ಚಿಗೆ ಕಟೆದಿಟ್ಟು ಮಾರುವ ಶಿಲೆಯ ಲಿಂಗವ ತಂದು, ಶಿರದಲ್ಲಿ ಕಟ್ಟಿ, ಕರದಲ್ಲಿ ಪೂಜೆ ಮಾಡಿ ಶಿವಭಕ್ತರೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳ ಅಂತರಂಗದೊಳು ಕಾಮವೆಂಬೊ ಭವಿ, ಕ್ರೋಧವೆಂಬೊ ಭವಿ, ಲೋಭವೆಂಬೊ ಭವಿ, ಮೋಹವೆಂಬೊ ಭವಿ, ಮದವೆಂಬೊ ಭವಿ, ಮತ್ಸರವೆಂಬೊ ಭವಿ. ಇಂತೀ [ಈ]ರಾರು ಹನ್ನೆರಡುಮಂದಿ ಭವಿಗಳನು ಹತ್ತೇಲಿಯಿಟ್ಟುಕೊಂಡು, ಕೂಡಿಯುಂಡು ಕುಲವನರಸುವಂಥ ಕೋತಿಗಳು ಮಾಡಿದ ಭಕ್ತಿ ಏನಾಯಿತೆಂದರೆ, ಅಜ್ಜಿಗೆ ಅರಸಿನ ಚಿಂತೆಯಾದರೆ, ಮಗಳಿಗೆ ಮಿಂಡಗಾರನ ಚಿಂತೆಯನು ಮಾಡಿಕೊಂಡು, ಹಲವು ಮಿಂಡಗಾರಗೆ ಸೆರಗುಹಾಸಿ ಮಾಡಿಕೊಂಡು ಹೋದಂತಾದೀತು ಕಾಣಿರೊ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬೊ ವಿಪ್ರನ ಗರ್ಭದಲ್ಲಿ ನಕಾರವೆಂಬೊ ಅಕ್ಷರ ಹುಟ್ಟಿ, ಸದ್ಯೋಜಾತಮುಖದಲ್ಲಿ ಬ್ರಹ್ಮನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಹುಟ್ಟಿಸಬೇಕೆಂದು ಚಿಂತೆಯನು ತಾಳಿ, ಪೃಥ್ವಿತತ್ವವೆಂಬೊ ಆದಿ ಆಧಾರ ಬುಡವಾಗಿಯಿದ್ದ ಕಾಣಿರೊ. ಮಕಾರವೆಂಬೊ ಅಕ್ಷರ ಹುಟ್ಟಿ, ವಾಮದೇವಮುಖದಲ್ಲಿ ವಿಷ್ಣುವೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ರಕ್ಷಿಸಬೇಕೆಂಬೊ ಚಿಂತೆಯನು ತಾಳಿ, ಅಪ್ಪುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಶಿಕಾರವೆಂಬೊ ಅಕ್ಷರ ಹುಟ್ಟಿ, ಅಘೋರಮುಖದಲ್ಲಿ ರುದ್ರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಭಕ್ಷಿಸಬೇಕೆಂಬೊ ಚಿಂತೆಯನು ತಾಳಿ, ತೇಜತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ವಕಾರವೆಂಬೊ ಅಕ್ಷರ ಹುಟ್ಟಿ, ತತ್ಪುರುಷಮುಖದಲ್ಲಿ ಈಶ್ವರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ಅಂಗದೊಳಗೆ ಪ್ರಾಣಲಿಂಗವಾಗಿ ಪೂಜೆಗೊಳಬೇಕೆಂಬ ಚಿಂತೆಯನು ತಾಳಿ, ವಾಯುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಯಕಾರವಂಬೊ ಅಕ್ಷರ ಹುಟ್ಟಿ, ಈಶಾನ್ಯಮುಖದಲ್ಲಿ ಸದಾಶಿವನೆಂಬ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ತನ್ನ ಅಂತರಂಗದೊಳಗೆ ಇಂಬಿಟ್ಟು ಇರಬೇಕೆಂಬ ಚಿಂತೆಯನು ತಾಳಿ, ಆಕಾಶತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಅದು ಎಂತೆಂದಡೆ : ಇಂತೀ ಇಪ್ಪತ್ತೈದು ತತ್ವಗಳ ಆಧಾರದಲ್ಲಿ ಹುಟ್ಟಿದ ಭಕ್ತರೆಂಬ ಕೊಂಬೆಗಳು ಮಾಡಿದ ಭಕ್ತಿಯೆನಗಾಯಿತು ಅಂದರೆ, ಪೃಥ್ವಿತತ್ವದ ಆಧಾರದಲ್ಲಿ ಹುಟ್ಟಿದ ಕಸಕಡ್ಡಿಗಳೆಲ್ಲ ಕುಸುಕಿಂದ ಹರಕೊಂಡು ತಿಂದು ಹರಿಹೋದಂತೆ ಕಾಣಿರೊ. ಅದು ಎಂತೆಂದರೆ : ಭವಿಗಳ ಆಧಾರದಲ್ಲಿ ಭಕ್ತರೆಂಬ ಕೊಂಬೆಗಳು ಹುಟ್ಟಿ ಪೃಥ್ವಿತತ್ವವೆಂಬೊ ಭವಿಯ ಹುಟ್ಟಿಸೆಂದರೆ ಹುಟ್ಟಿಸಲಿಲ್ಲ. ಅಪ್ಪುತತ್ವವೆಂಬೊ ಭವಿಯ ರಕ್ಷಿಸಿಯೆಂದರೆ, ರಕ್ಷಿಸಿಯಿದ್ದಿಲ್ಲ. ತೇಜತತ್ವಯೆಂಬೊ ಭವಿಯ ಭಕ್ಷಿಸಿಯೆಂದರೆ, ಭಕ್ಷಿಸಿಯಿದ್ದಿಲ್ಲ. ವಾಯುತತ್ವವೆಂಬೊ ಭವಿಯ ಅಂಗದೊಳಗೆ ಲಿಂಗವಾಗಿ ಪೂಜೆಗೊಂಡಿದ್ದರೆ ಪೂಜೆಗೊಂಡಿದ್ದಿಲ್ಲಾ. ಆಕಾಶತತ್ವಯೆಂಬೊ ಭವಿಯನು ತಮ್ಮ ಅಂತರಂಗದೊಳಗೆ ಮರೆಯೊಳಗೆ ಇಂಬಿಟ್ಟುಕೊಂಡು ಇರಲಾರದ ಅಜ್ಞಾನಿಗಳು. ಪೃಥ್ವಿತತ್ವವೆಂಬೊ ಭವಿ ಆಧಾರದಲ್ಲಿ ಹುಟ್ಟಿ, ಭವಿ ಆಧಾರದಲ್ಲಿ ಬೆಳೆದು, ಆಕಾಶತತ್ವವೆಂಬೊ ಭವಿಯ ಅಂತರಂಗದ ಮರೆಯಲ್ಲಿ ಅಡಗಿಕೊಂಡಿದ ಅಜ್ಞಾನಿಗಳು. ಬ್ರಹ್ಮನೆಂಬೊ ಭವಿ, ವಿಷ್ಣುವೆಂಬೊ ಭವಿ, ರುದ್ರನೆಂಬೊ ಭವಿ. ಮೂವರು ತ್ರಿಮೂರ್ತಿಗಳು ಕೂಡಿ ಏಕಮೂರ್ತಿಯಾದ ಆಕಾರಲಿಂಗವನು ತಂದು, ತಮ್ಮ ಶಿರದಲ್ಲಿ ಕಟ್ಟಿಕೊಂಡು ಶಿವಭಕ್ತನೆ ಹೆಚ್ಚು, ಭವಿ ಕಡಿಮೆಯೆಂದು ಕೈಯಲ್ಲಿ ಕಂಜರದ ಬಾಕನೆ ಹಿಡಿದುಕೊಂಡು, ಕೆಂಜಡೆಯ ಬಿಟ್ಟುಕೊಂಡು, ವೀರಗಾಸೆಯಂತೆ ಕುಣಿದಾಡಿ, ಕೂಗಿ ಕೂಗಿ ಹೇಳುವ ಕುನ್ನಿಗಳು ಮಾಡಿದ ಭಕ್ತಿಯೇನಾಯಿತೆಂದರೆ, ಕೈಲಾಸದ ನಾಯಿಗಳು ಕೈಮೈಯನ್ನ ಹರಕೊಂಡು, ವೈಹಾಳಿಯ ಬಯಲಿಗೆ ಹೋಗಿ, ಒದರಿದರೆ, ಸತ್ತಂತಾಯಿತೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರಾರುಂಟೊ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಮರಲ್ದುಮಾ ಪ್ರಣವಂ ಪಂಚಪ್ರಕಾರಮಾದಪುದೆಂತೆನೆ ಸಾಕಲ್ಯಪ್ರಣವವೆಂದು, ಶಾಂಭವಪ್ರಣವವೆಂದು, ಸೌಖ್ಯಪ್ರಣವವೆಂದು, ಸಾವಶ್ಯಪ್ರಣವವೆಂದು, ಸಾಯುಜ್ಯಪ್ರಣವವೆಂದು ಸದಾಶಿವನ ಪಂಚಮುಖಂಗಳಲ್ಲಿ ಪೊರೆಪೊಣ್ಮಿದವಿವರೊಳ್ಮೊದಲ ಸಾಕಲ್ಯಪ್ರಣವಕ್ಕೆ ವಿವರಂ- ಅಕಾರಂ ಉಕಾರಂ ಮಕಾರಂ ಎಂದು ತ್ರಿವಿಧಂ. ಈ ತ್ರಿಮಾತ್ರಾಂತರ್ಗತವಾಗಿರ್ಪುದು ಶುದ್ಧ ಶಿವ ಶಬ್ದ ವಾಚ್ಯವಾದದಾಖ್ಯವೆನಿಪ ಹಕಾರಂ. ಅಕಾರಂ ಉಕಾರಂ ಈ ಎರಡುಂ ಕೂಡಿದುದೆ ಒಕಾರಂ. ಈ ಮಂತ್ರಮೂರ್ತಿಗೆ ಅಕಾರವೆ ಬಲಂ ಉಕಾರವೆ ಎಡಂ ಮಕಾರವೆ ಮಧ್ಯದೇಹಂ. ಈ ಮೂರು ಕೂಡಿ ಓಂ ಎಂದು ಮೂರ್ತಿಯಾಯಿತ್ತು. ತ್ರಿವಿಧಾತ್ಮಕ ಶರೀರಕ್ಕೆ ಹಕಾರವೆ ಶುದ್ಧ ಚೈತನ್ಯಬ್ರಹ್ಮವೆನಿಸಿತ್ತು. ಅಕಾರಕ್ಕೆ ಬ್ರಹ್ಮನಧಿದೇವತೆ. ಉಕಾರಕ್ಕೆ ವಿಷ್ಣುವಧಿದೇವತೆ. ಮಕಾರಕ್ಕೆ ರುದ್ರನಧಿದೇವತೆ. ಒಕಾರಕ್ಕ ಸದಾಶಿವನಧಿದೇವತೆ. ನಾದಾತ್ಮಕಮಾದ ಹಕಾರವೆ ಪರಶಿವಸ್ವರೂಪಂ. ಈ ತೆರನಾದ ಆ ಉ ಮ ಒ ಹ ಎಂಬೀ ಪಂಚಾಕ್ಷರಂಗಳ್ಪಂಚ ದೇವತಾಸ್ವರೂಪಂಗಳೀ ಸಕಲಂಗೂಡಿ ಓಂ ಎಂಬುದೆ ಸಾಕಲ್ಯಪ್ರಣವಂ. ಇದೊಂದೆ ಬ್ರಹ್ಮಂ. ಮತ್ತಂ, ಪಂಚಮ ಸಂಜ್ಞಿತವಾದ ಉಕಾರಂ ಪ್ರಥಮಸಂಜ್ಞಿತವಾದ ಅಕಾರಮಂ ಕೂಡೆ ಒ ಎಂದಾಯಿತ್ತದೆ ತೃತೀಯಸಂಜ್ಞಿತಮಕಾರಾಂತರ್ಗತವನುಳ್ಳ ಹಕಾರವೆನಿಸಿತ್ತಿಂತು ಅ ಉ ಮ ಒ ಎಂಬ ಚತುರಕ್ಷರಂಗೂಡಿದ ಹ ಎಂಬ ಶಿವಬೀಜವೆ ಸಾಕಲ್ಯಪ್ರಣವವೆನಿಸಿತ್ತೀ ಸಾಕಲ್ಯಪ್ರಣವವೆ ಸದಾಶಿವನ ಪೂರ್ವಮುಖದಲ್ಲಿ ಉದ್ಧ ೃತವಾಯಿತ್ತೀ ಪ್ರಣವಬ್ರಹ್ಮಕ್ಕೆ ಮತ್ತೊಂದು ಸಾಕಲ್ಯಾಭಿಧಾನಮನುಂಟು ಮಾಳ್ಪುದೆಂತೆನೆ ಶಿವತತ್ವಬೀಜಕ್ಕೆ ಸದಾಶಿವತತ್ವ ಭೇದವಾದ ಮತ್ತೊಂದು ಶುದ್ಧಾಭಿಧಾನವಾದುದೆಂದು ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->