ಅಥವಾ

ಒಟ್ಟು 88 ಕಡೆಗಳಲ್ಲಿ , 30 ವಚನಕಾರರು , 67 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಣ್ಣು ದೇಹ, ಹೊನ್ನು ಪ್ರಾಣ, ಹೆಣ್ಣು ಸಕಲಪ್ರಪಂಚು. ಈ ಮೂರರೊಳಗೆ ಒಂದ ಬಿಟ್ಟೊಂದ ಹಿಡಿದೆಹೆನೆಂದಡೆ, ಹಿಂಗಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಲಿಂಗವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಅರಿವೆಂಬ ಸೂತಕಕ್ಕೆ ಮುಂದೆ ಒಂದ ಕಂಡೆಹೆನೆಂಬ ಒಡಲಸೂತಕ ಹರಿಯಬೇಕು. ಸೂತಕ ನಿಹಿತವಾದಲ್ಲಿ, ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ಕಂಡು ಕೊಟ್ಟೆಹೆನೆಂಬುದು ಖಂಡಿತಂಗಲ್ಲದೆ ಪರಿಪೂರ್ಣಂಗುಂಟೆ ? ಉಂಡು ತೇಗಿಹೆನೆಂಬುದು ನಿತ್ಯತೃಪ್ತಂಗುಂಟೆ ? ಒಂದನರಿದು ಒಂದ ಮರೆದೆನೆಂದು ಸಂದೇಹಕ್ಕೊಳಗಾದವಂಗೆ` ಲಿಂಗವಿಲ್ಲ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮಂಗಳದ ಮನೆಯಲ್ಲಿ ಸಂಗ ತನಗಾನಂದ ಸಂಗವೆ ನೆಲೆಮನೆಯು, ನಿತ್ಯವಾಗಿಪ್ಪ ಶ್ವೇತ ಜಲದಲಿಪ್ಪ ರೀತಿ ಸಂಖ್ಯೆಯನರಿದು, ಧಾತುವನು ಅತಿಗಳೆದು, ತೂಗಿ ತೂಗಿ ಆಡಿವೋದಾತನು ಮೀರಿ ಕಂಡನು. ಒಂದ ತೋರಿದನು ಅತಿಶಯವ ಲೋಕಕೆಲ್ಲಾ, ನಿರ್ಲೋಕ ನಿರ್ನಾಮ ನಿತ್ಯನು. ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತೋರಿದನು ಸಾಯುಜ್ಯಪದವ ಮೀರಿ.
--------------
ಸಿದ್ಧರಾಮೇಶ್ವರ
ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ. ಮಡಿಲಡಗ ಮಚ್ಚಿದಾತನ ಅಚ್ಚಲಿಂಗವಂತನೆಂಬೆ. (ಈ ಒಡಲಡಗು ಮಡಿಲಡಗಿನೊಳಗೆ ಒಂದ ಮಚ್ಚದಿದ್ದರೆ ?) ಉತ್ಪತ್ತಿ ಪ್ರಳಯ ತಪ್ಪದು. ಶ್ರೀಗುರು ಮಹಾಲಿಂಗದಲ್ಲಿ ಒಡಲಡಗ ಮಚ್ಚಿ ಅಚ್ಚಭವಿಯಾದ ಶರಣನೊಬ್ಬನೆ_ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಗುರುವ ಕುರಿತು ಮಾಡುವಲ್ಲಿ ಬ್ರಹ್ಮನ ಭಜನೆಯ ಹರಿಯಬೇಕು. ಲಿಂಗವ ಕುರಿತು ಮಾಡುವಲ್ಲಿ ವಿಷ್ಣುವಿನ ಸಂತೋಷಕ್ಕೆ ಸಿಕ್ಕದಿರಬೇಕು. ಜಂಗಮವ ಕುರಿತು ಮಾಡುವಲ್ಲಿ ರುದ್ರನ ಪಾಶವ ಹೊದ್ದದಿರಬೇಕು. ಒಂದನರಿದು ಒಂದ ಮರೆದು ಸಂದಿಲ್ಲದ ಸುಖ ಜಂಗಮ ದಾಸೋಹದಲ್ಲಿ ಸಂಗನಬಸವಣ್ಣ ನಿತ್ಯ ಚಂದೇಶ್ವರಲಿಂಗಕ್ಕೆ ತಲುಪಿ.
--------------
ನುಲಿಯ ಚಂದಯ್ಯ
ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ, ಆ ಲಿಂಗ ಕಾಯಕ್ಕೋ, ಜೀವಕ್ಕೋ ? ಕಾಯಕ್ಕೆಂದಡೆ ಕಾಯದೊಳಗಾಗಿ ಪೂಜಿಸಿಕೊಂಬುದು. ಜೀವಕ್ಕೆಂದಡೆ ನಾನಾ ಭವಂಗಳಲ್ಲಿ ಬಪ್ಪುದು. ಆ ಲಿಂಗ ಉಭಯಕ್ಕೆಂದಡೆ ಇನ್ನಾವುದು ಹೇಳಾ ? ಅಂಗಕ್ಕೆ ಲಿಂಗವಾದಡೆ ಬಣ್ಣ ಬಂಗಾರದಂತೆ ಇರಬೇಕು. ಜೀವಕ್ಕೆ ಲಿಂಗವಾದಡೆ ಅನಲ ಅನಿಲನಂತೆ ಇರಬೇಕು. ಉತ್ಪತ್ಯಕ್ಕೂ ನಷ್ಟಕ್ಕೂ ಉಭಯದ ಒಡಲನರಿತಲ್ಲಿ, ಅದು ಅಂಗಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯದ ಸಂಗದಿಂದ ಆತ್ಮನು ಭವಕ್ಕೆ ಬಪ್ಪುದೊ ? ಆತ್ಮನ ಸಂಗದಿಂದ ಕಾಯ ಲಯಕ್ಕೊಳಗಪ್ಪುದೊ ? ಕಾಯ ಜೀವದಿಂದಳಿವೊ ? ಜೀವ ಕಾಯದಿಂದಳಿವೋ ? ಅಲ್ಲ, ಉಭಯವೂ ಏಕಸ್ಥದಿಂದ ಪ್ರಳಯವೋ ? ಎಂಬುದ ಅಂತಸ್ಥದಿಂದ ತಿಳಿದು, ಕಾಯಕ್ಕೂ ಜೀವಕ್ಕೂ ಭೇದವುಂಟೆಂದಡೆ, ಒಂದ ಬಿಟ್ಟೊಂದು ಇರದು. ಇಲ್ಲಾ ಎಂದೆಡೆ ಆತ್ಮ ವಾಯುಸ್ವರೂಪ, ಘಟ ಸಾಕಾರಸ್ವರೂಪ, ಗುಣ-ಗಂಧ, ಕುಸುಮ-ಗಂಧ, ತಿಲ-ಸಾರದ ಸಂಗದಂತೆ. ಇಂತೀ ಉಭಯಭಾವದ ಭೇದವನರಿದ ಪರಮ[ಸುಖ] ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು, ಎನಗಾಯಿತ್ತು ನೋಡಾ ಬಸವಣ್ಣಾ ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ನಿನ್ನ ಪೂರ್ವಾಪರಸಂಗವ ಮಾಡಬಂದಡೆ ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು ದಿಟವಾಯಿತ್ತು ನೋಡಾ ಬಸವಣ್ಣಾ. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯದ ವ್ಯಾದ್ಥಿಯ ಚಿಕಿತ್ಸೆಯನಾರು ಅರಿಯರಲ್ಲಾ ! ತನುವಿಂಗೆ ವಾತ, ಪೈತ್ಯ, ಶ್ಲೇಷ್ಮ , ಆತ್ಮಂಗೆ ಆಣವ, ಮಾಯಾ, ಕಾರ್ಮಿಕ. ಇಂತೀ ತ್ರಿವಿಧ ಮಲತ್ರಯದ ರೋಗರುಜೆಯಡಸಿ, ಬಂಧನದಲ್ಲಿ ಸಾವುತ್ತಿದೆ ಅಂಗ. ಈ ರೋಗ ನಿರೋಗವಹುದಕ್ಕೆ ನಾ ಮೂರು ಬೇರ ತಂದೆ. ಒಂದ ಅಂಗದಲ್ಲಿ ಮರ್ದಿಸಿ, ಒಂದು ಆತ್ಮನಲ್ಲಿ ಮಥನಿಸಿ, ಒಂದ ಅರಿವಿನಲ್ಲಿ ಪಾನವ ಮಾಡಿ, ಈ ರೋಗ ಹರಿವುದು. ಇದಕ್ಕನುಪಾನ ಇದಿರೆಡೆಯಿಲ್ಲ , ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ಎನ್ನ ತಗರು ಆರು ಸನ್ನೆಗೆ ಏರದು, ಮೂರು ಸನ್ನೆಗೆ ಓಡದು. ಲೆಕ್ಕವಿಲ್ಲದ ಸನ್ನೆಗೆ ದ್ಥಿಕ್ಕರಿಸಿ ನಿಲುವದು. ಕುಟಿಲ ಕವಳವನೊಲ್ಲದು. ಮದ್ದು ಮರುಡೆ ಬೆಳುವೆಯ ಗುಣ ಗಾಳಿಯ ಲೆಕ್ಕಿಸದು. ಇಂತೀ ಅರಿಗುರಿಯ ಕೋಡ ಕಿತ್ತು ಒಂದ ಹಿಂದಕ್ಕಿರಿಸಿ, ಒಂದ ಹಿಡಿದಾಡ ಬಂದೆ. ಆ ಕೋಡಿನಲ್ಲಿ ನಾನಾ ವರ್ಣದ ಶಬ್ದದ ಉಲುಹು. ಇಂತಿವೆಲ್ಲವ ಒಂದುಂಗುರದಲ್ಲಿ ಸೇರಿಸಿ ಅಂಗುಲಿಗಳಲ್ಲಿ ಮುಟ್ಟಿಯಾಡುತ್ತ ಬಂದೆ, ಮೇಖಲೇಶ್ವರಲಿಂಗದಲ್ಲಿ ಲೀಯವಾದ ಶರಣರ ನೋಡಿಹೆನೆಂದು
--------------
ಕಲಕೇತಯ್ಯ
ಒಂದ ಹಿಡಿವಲ್ಲಿ ಸತ್ತಿಗೆಯವ, ಇದಿರ ಉಭಯದ ಸಂದ ಕಡಿವಲ್ಲಿ ಕೊಡಲಿಯವ. ಹಿಂದುಮುಂದಣ ತಮವನೊಂದುಗೂಡಿ, ಕೆಡಿಸುವುದಕ್ಕೆ ಪಂಜಿನವ. ಇದು ಅಂದು ಬಂದ ಬೆಸದ ಕಾಯಕ, ಐಘಂಟೇಶ್ವರಲಿಂಗವಿದ್ದಲ್ಲಿಯೆ ಬೆಸನಿಲ್ಲದಿರಬೇಕು.
--------------
ಸತ್ತಿಗೆ ಕಾಯಕದ ಮಾರಯ್ಯ
ಒಂದ ಬಿಟ್ಟು ಒಂದನರಿದೆಹೆನೆಂಬನ್ನಕ್ಕ ಮರದ ಸಂದಿನ ಬೊಂಬೆಯೆ? ಅರಿವುದು ಕುರುಹೊ ಅರಿವೊರಿ ಸುಡುವುದು ಮರನೊ ಬೆಂಕಿಯೊರಿ ಎರಡರ ಹೆಚ್ಚು ಕುಂದ ತಿಳಿದು ಹೇಳೆಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಒಂದು ಬೀಜವ ಬಿತ್ತಿದಡೆ ಮೂರುಫಲವಾಯಿತ್ತು. ಆ ಫಲ ಬಲಿದು ಬೆಳೆದ ಮತ್ತೆ, ಒಂದ ಉದಯದಲ್ಲಿ ಕೊಯ್ದೆ, ಒಂದ ಮಧ್ಯಾಹ್ನದಲ್ಲಿ ಕೊಯ್ದೆ, ಒಂದ ಹೊತ್ತು ಸಂದ ಮತ್ತೆ ಕೊಯ್ದೆ. ಈ ಮೂರರೆಯನೊಂದು ಮಾಡಿ ಮೆಟ್ಟಿಸಿದೆ. ಭಕ್ತಿಜ್ಞಾನವೈರಾಗ್ಯವೆಂಬ ಎತ್ತಿನ ಕೈಯಲ್ಲಿ ತೂರಿದೆ ಕೊಂಗವನೆತ್ತಿ ಅಂಗವೆಂಬ ಹೊಳ್ಳು ಹಾರಿತ್ತು. ಸಂಸಾರವೆಂಬ ಚೊಳ್ಳು ನಿತ್ಯಾನಿತ್ಯ ವಿವೇಕವೆಂಬ ಕೊಳಗವ ಹಿಡಿದಳೆಯಲಾಗಿ, ನೂರೊಂದು ಕೊಳಗವಾಯಿತ್ತು. ಹೆಡಗೆಗೆ ಅಳವಡಿಸುವಾಗ ಐವತ್ತೊಂದು ಕೊಳಗವಾಯಿತ್ತು. ನಡುಮನೆಯಲ್ಲಿ ಸುರಿವಾಗ ಇಪ್ಪತ್ತೈದು ಕೊಳಗವಾಯಿತ್ತು. ಪಡುವಣ ಕೋಣೆಯಲ್ಲಿ ಮಡಗಿರಿಸುವಾಗ, ಪಡಿಯ ನೋಡಲಾಗಿ ಐಗಳವಾಯಿತ್ತು. ಅದು ಬಿಡುಬಿಸಿಲಿನಲ್ಲಿ ಒಣಗೆ, ಅದು ಪಡಿಪುಚ್ಚಕ್ಕೆ ಮೂಗಳವಾಯಿತ್ತು. ಆ ಮೂಗಳವ ನಡುಮೊರದಲ್ಲಿ ಸುರಿಯೆ, ಪಡಿಗಣಿಸುವಾಗ ಒಕ್ಕುಳವಾಯಿತ್ತು. ಈ ಒಕ್ಕುಳವ ಕುಟ್ಟಿ, ಮಿಕ್ಕುದ ಕೇರೆ ಮತ್ತೆ ಒಬ್ಬಳವಾಯಿತ್ತು. ಒಬ್ಬಳವ ಕುಡಿಕೆಯಲ್ಲಿ ಹೊಯ್ದು ನಿರುತದಿಂ ನೋಡೆ, ಮೂರು ಮಾನವ ನುಂಗಿ, ಒಂದು ಮಾನವಾಯಿತ್ತು. ಒಂದು ಮಾನವನಟ್ಟು ಕುಡಿಕೆಯಲ್ಲಿ ಕುಸುರೆ ಕೂಳೊಡೆದು ಬಾಲಗೋಗರವಾಯಿತ್ತು. ಉಂಡವರತ್ತ, ನಾನಿತ್ತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಕಲಜ್ಞಾನಸಂಪನ್ನ ಕಲೆಯನರಿತೆನೆಂಬ ಅರುಹಿರಿಯರು ಹೇಳಿರಣ್ಣಾ. ಸಕಲ ಅರ್ಪಿತದಲ್ಲಿ ಲಿಂಗಮುಖವಾಗಿ ಇರಬೇಕೆಂಬ ಸಂದೇಹಿಗಳು ಹೇಳಿರಣ್ಣಾ. ಇಂದ್ರಿಯಂಗಳ ಮುಖದಿಂದ ಲಿಂಗವನರಿಯಬೇಕೋ? ಲಿಂಗದ ಮುಖದಿಂದ ಇಂದ್ರಿಯಂಗಳನರಿಯಬೇಕೊ? ಒಂದ ಬಿಟ್ಟು ಒಂದನರಿತಲ್ಲಿ ಹಿಂಗಬಾರದ ತೊಡಕು. ಉಭಯದ ಸಂದೇಹ ನಿಂದಲ್ಲಿ ಸದಾಶಿವಮೂರ್ತಿಲಿಂಗವನರಿತುದು.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->