ಅಥವಾ
(5) (1) (1) (0) (0) (0) (0) (0) (0) (0) (1) (0) (0) (0) ಅಂ (1) ಅಃ (1) (3) (0) (0) (0) (0) (0) (0) (1) (0) (0) (0) (0) (0) (0) (0) (1) (0) (0) (0) (2) (1) (0) (0) (1) (1) (0) (0) (0) (0) (2) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರಿಯದವಂಗೆ ಅರಿದಿಹೆನೆಂಬ ಬಯಲರೋಗ ಹುಟ್ಟಿ, ಕಾಲುಗೆಟ್ಟು ದೃಷ್ಟಿ ನಷ್ಟವಾಗುತ್ತಿದೆ ನೋಡಾ ! ಅದಕ್ಕೆ ನಾನೊಂದ ಮದ್ದ ಕಂಡೆ. ಹೆಸರಿಲ್ಲದ ಗಿಡ, ಮೂಲವಿಲ್ಲದ ಬೇರು. ಎಲೆ ಹೂ ನಷ್ಟವಾದ ಚಿಗುರಿನ ಕುಲಗೆಟ್ಟು, ಸಹಮೂಲಮಂ ತಂದು, ಆ ಕಲ್ಲಿನಲ್ಲಿ ಇಕ್ಕಿ ನೀರನೆರೆದು, ಆ ಗುಂಡಿನಲ್ಲಿ ಹಾಗರೆಯಲಾಗಿ, ತಟ್ಟೆಯಲ್ಲಿ ಇಕ್ಕುವದಕ್ಕೆ ಮೊದಲೆ, ಮದ್ದಿನ ದೃಷ್ಟ ನಷ್ಟವಾಯಿತ್ತು , ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ.
--------------
ವೈದ್ಯ ಸಂಗಣ್ಣ
ಅಂಗಾಲ ಮೇಲಣ ದೊಡ್ಡಂಗುಷ್ಟ ಮಧ್ಯದಲ್ಲಿ ಪೃಥ್ವಿನಾಡಿ, ನಾಬ್ಥಿ ಮೂತ್ರನಾಳದ ನಾಲ್ಕಂಗುಲ ಮಧ್ಯದಲ್ಲಿ ಅಪ್ಪುನಾಡಿ, ಉಡಸೂತ್ರ ನಾಬ್ಥಿ ಮೊದಲಾದ ಪಂಚಾಂಗುಲ ಮಧ್ಯದ ಮೇಲೆಸೆಯಲ್ಲಿ [ತೇಜನಾಡಿ] ಇಡಾ ಪಿಂಗಳ ಮಧ್ಯದಲ್ಲಿ ವಾಯುನಾಡಿ, ಸುಷುಮ್ನನಾಳದ ಅಂಗುಲ ನಡುಮಧ್ಯದಲ್ಲಿ ಆಕಾಶಕೈದಿದನಾಡಿ, ಇಂತೀ ಪಂಚಪಥವನೈದುವ ನಾಡಿಯಲ್ಲಿ ಆಡುವ ಆತ್ಮನ ವಿವರದ ದೆಸೆಯನರಿದು, ಇಂತೀ ಐದು ಮುಚ್ಚಿ ಮೇಗಳ ಬ್ರಹ್ಮರಂಧ್ರದಲ್ಲಿಯೆಯಿದರೆಮ್ಮ ವೈದ್ಯರು. ನಾದ ಬಿಂದು ಕಳೆಗತೀತ ನೋಡಾ, ಮರುಳಶಂರಪ್ರಿಯ ಸಿದ್ಧರಾಮೇಶ್ವರಲಿಂಗವು.
--------------
ವೈದ್ಯ ಸಂಗಣ್ಣ
ಅಸ್ಥಿ ಮಾಂಸ ಶುಕ್ಲ ಶೋಣಿತವುಳ್ಳನ್ನಕ್ಕ ಆರಿಗೂ ಅದಿವ್ಯಾದ್ಥಿಯ ತಾಪತ್ರಯದ ತನುತ್ರಯದ ಕೂಟಸ್ಥ ಬಿಡದು. ರೋಗವನರಿದು ವೈದ್ಯವ ಮಾಡಿಹೆನೆಂದಡೆ, ತನು ಪ್ರಮಾಣು, ಪೈತ್ಯಪ್ರಮಾಣು, ವಾತಪ್ರಮಾಣು, ಶ್ಲೇಷ್ಮಪ್ರಮಾಣು, ಆತ್ಮತತ್ವಪ್ರಮಾಣು, ಚಂದ್ರ ಸೂರ್ಯ ಬಿಂದು ಪ್ರಮಾಣು, ಮಿಕ್ಕಾದ ಸರ್ವಾಂಗ ಪ್ರಮಾಣ ಹೇಳಿಹೆನೆಂದಡೆ, ಮರೀಚಿಕಾಜಲದಂತೆ, ಸುರಚಾಪದಂತೆ, ಆಕಾಶದ ಪರಿಬಣ್ಣದಂತೆ, ಇಂತೀ ಶರೀರದ ತೆರ. ಅಲ್ಪಾಂತರ ತಿರುಗುವನ್ನಕ್ಕರ ಶರೀರ ಸಿಕ್ಕುಹುದಲ್ಲದೆ, ಮತ್ತೆಯೂ ಆತ್ಮನ ಕಟ್ಟಿಕೊಂಡಿಹೆನೆಂದಡೆ ಸತ್ವವುಂಟೆ ? ವ್ಯಾದ್ಥಿಯಲ್ಲಿ ಹೊಂದುವ ತೆರನಾದಡೆ, ಬ್ರಹ್ಮಂಗೆ ಸೃಷ್ಟಿಯಿಲ್ಲ, ವಿಷ್ಣುವಿಂಗೆ ಸ್ಥಿತಿ ಇಲ್ಲ, ರುದ್ರಂಗೆ ಲಯವಿಲ್ಲ. ಇಂತೀ ಕರ್ಮಕಾಂಡದಲ್ಲಿ ಪ್ರಾಪ್ತಿ, ವರ್ಮಕಾಂಡದಲ್ಲಿ ಸರ್ವ, ಜ್ಞಾನಕಾಂಡದಲ್ಲಿ ತ್ರಿವಿಧವಳಿದ ಮಹದೊಡಗೂಟ. ಇಂತೀ ಜಗದಲ್ಲಿ ಒಂದನಹುದು, ಒಂದನಲ್ಲಾ ಎಂದಡೆ, ಅಮೃತಕ್ಕೂ ಸುರಾಪಾನಕ್ಕೂ ಸರಿಯೆಂದು ಮಾರುವನ ತೆರದಂತೆ, ಆರಾರ ತೆರನನು ನೋಡಿ ಸುಖಿಯಾಗಿ, ತನ್ನನರಿವರಲ್ಲಿ ಮನಮುಕ್ತವಾಗಿ ಉಭಯವಳಿದು ಒಡಗೂಡಬೇಕು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಕಳುಹಿದಂತೆ ಮಾಡಿ, ಭಕ್ತಿಗೆ ಖೋಡಿ ಇಲ್ಲದೆ ಸತ್ಯವನೊಡಗೂಡಬೇಕು.
--------------
ವೈದ್ಯ ಸಂಗಣ್ಣ
ಅಷ್ಟೋತ್ತರಶತವ್ಯಾಧಿಗಳ ಧರಿಸಿಕೊಂಡಿಪ್ಪುದು ಆತ್ಮನೊ, ಘಟನೊ ? ಆತ್ಮನೆಂದಡೆ ಸಾಯದು ಚಿತ್ತ , ಘಟವೆಂದಡೆ ಆತ್ಮನಿಲ್ಲದೆ ಅರಿಯದು ದೇಹ. ಇಂತೀ ಒಂದ ಕಳೆದು, ಒಂದಕ್ಕೆ ಔಷಧಿಯ ಕೊಟ್ಟಿಹನೆಂದಡೆ, ಆ ಎರಡರ ಸಂಗದಿಂದ ರುಜೆ ಪ್ರಮಾಣು. ಇಂತೀ ಶರೀರಾತ್ಮ ಆದಿಯಾಗಿ ಬಂದ ವ್ಯಾಧಿಗೆ ನಾನೊಂದು ಔಷಧಿಯ ಭೇದವ ಹೇಳಿಹೆ. ಆಧಾರದಲ್ಲಿಪ್ಪ, ಮೂಲಿಕೆಯ ಬೇರನರದು, ಐದಿಂದ್ರಿಯವ ಕೂಡಿಕೊಂಡು. ಮೂರು ಮುಟ್ಟದ ತಟ್ಟೆಯಲ್ಲಿ ಬೇಗ ತೆಗೆದುಕೊಳ್ಳಿ. ಆ ಮದು ವಾಂತಿಗೆ ಸಲ್ಲ, ವಿರೋಚನವಿಲ್ಲ. ನಾನಾ ವೈದ್ಯರ ಭೇದಗಾಹಿನ ಕ್ರಮವಲ್ಲ. ಇದು ಸಿದ್ಧಾಂತ ಮೂಲಿಕೆ, ಇದ ಸಾಧಿಸಿಕೊಳ್ಳಿ. ಎಂದೆಂದಿಗೂ ರುಜೆಯಿಲ್ಲ, ಸಂದುಸಂಶಯವಿಲ್ಲ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ.
--------------
ವೈದ್ಯ ಸಂಗಣ್ಣ
ಅಪ್ಪು ತನುವಿನ ಶ್ರೇಷ*ವಾಗಲಾಗಿ, ವಾತ ಪಿತ್ತ ಶ್ಲೇಷ್ಮ ಬಲಿಯಿತ್ತು. ಮಜ್ಜೆ ಮಾಂಸ ನರ ಅಸ್ಥಿಗಳಲ್ಲಿ ವೇಧಿಸಿತ್ತು. ಆ ವೇಧನೆಯಿಂದ ಸರ್ವಾಂಗವ ದಹಿಸಿ, ದ್ವಾರದ್ವಾರಂಗಳಲ್ಲಿ ಮುಚ್ಚಿ, ಅಗ್ನಿಯ ಗುಣ ಒಂದು, ಅಪ್ಪುವಿನ ಗುಣವೈದು. ಇಂತೀ ಗುಣ ಶರೀರದಲ್ಲಿ ಲಕ್ಷಿಸಲಾಗಿ ಜೀರ್ಣಿಸದೆ, ಆ ಜೀವನ ಪ್ರಮಾಣಿಸಿ ಕಲ್ಪನೆ ತೀರುವನ್ನಕ್ಕ ದೇಹದ ದರ್ಪಗೆಡಿಸಿ, ಇಪ್ಪುದ ಸೋದಿಸಿಕೊಂಡು, ತ್ರೈಮಲ ಲಕ್ಷಣವ ಸೋಧಿಸಿಕೊಂಡು, ವೈದ್ಯ ಪ್ರಯೋಗದಿಂದ ಆತ್ಮನ ಭೇದಿಸಿಕೊಂಡು, ಹಂಸನು ಇಹ ಇರವೆಂಬ ತೆರನ ತಿಳಿದು, ರಸ ನಾಲಗೆಯಲ್ಲಿ, ಗಂಧ ನಾಸಿಕದಲ್ಲಿ , ರೂಪು ಕಂಗಳಲ್ಲಿ, ಶಬ ಕಿವಿಗಳಲ್ಲಿ, ಸ್ಪರುಶನ ಕೈಗಳಲ್ಲಿ , ಇಂತಿ ಪಂಚೇಂದ್ರಿಯಂಗಳಲ್ಲಿ ಉಷ್ಣ ಶೈಕ್ಯವಪ್ಪುದನರಿದು, ನಾಲಿಗೆಯಲ್ಲಿ ದ್ರವವನರಿದು, ನಾಸಿಕದಲ್ಲಿ ಗಂಧವ ಸೂಸುವ ವಾಯುವಶೈತ್ಯವನರಿದು, ಕರ್ಣವಾಸದಲ್ಲಿ ಶಬ್ದ ಸೂತ್ರಗೆಟ್ಟು, ನೇತ್ರದಲ್ಲಿ ಕಪೋತ ಸಿಕ್ಕಿ, ಶ್ವೇತವಿಹಿತವಾಗಿ ಗರ್ಭೀಕರಿಸಿದ ಮತ್ತೆ ವೈದ್ಯದಲೇತರ ಗುಣ. ಇಂದ್ರಿಯಗುಣರೋಗಕ್ಕೆ ಜ್ಞಾನವೈದ್ಯ ನೋಡಾ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಾ.
--------------
ವೈದ್ಯ ಸಂಗಣ್ಣ