ಅಥವಾ

ಒಟ್ಟು 49 ಕಡೆಗಳಲ್ಲಿ , 18 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿಸ್ಥಲದ ವರ್ಮವನು ಲೋಕಕ್ಕೆ ನಿಶ್ಚಿಂತವ ಮಾಡಿ ತೋರಿದ ಬಸವಣ್ಣ. ತನ್ನ ಪದದುನ್ನತವ ಏಕೈಕಸದ್ಭಾವರಿಗಿತ್ತ ಎನ್ನ ಗುರು ಚೆನ್ನಬಸವಣ್ಣನು. ಬಸವ, ಚೆನ್ನಬಸವನೆಂಬ ಮಹಾಸಮುದ್ರದೊಳಗೆ ಹರುಷಿತನಾದೆನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದಾನಿ ಮುನ್ನಾನಲ್ಲ, ಏನು ಗುಣವೆನ್ನಲ್ಲಿ? ನೀ ಕಾಡಲ್ಕೆ ಎನಗೆ ತೆರಹಿಲ್ಲವ್ವಾ. ದಾನವನು ಬೇಡಿದೆನು ಭಕ್ತಿ ಬ್ಥಿಕ್ಷವ ನೀಡಿ ಅನಾದನಾದನು ಚೆನ್ನಬಸವಣ್ಣನು. ಕೇಳೆಲೆಗೆ ಮಾಯೆ, ನೀ ನನ್ನತ್ತ ಹೊದ್ದದಿರು ಗಾರುಮಾಡುವರು ನಿನ್ನನೆನ್ನ ನಿರ್ಮಾಯರು. ಕಾರುಣ್ಯಕರ ಕಪಿಲಸಿದ್ಧಮಲ್ಲೇಶ್ವರನ ಭಾವಶುದ್ಧದ ಸತ್ವವನು ವಿಡಿದು.
--------------
ಸಿದ್ಧರಾಮೇಶ್ವರ
ಪಚ್ಚೆಯಗಿರಿ ಪ್ರಭೆಯೇರಿ ನಿಚ್ಚ ವಿನಯದ ಸುಖವ ಕಂಡು ಅನುಭವದ ಹೆಣ್ಣಿಗೆ [ಧವಳೆ]ವರ್ಣವನೇಕೀಕರಿಸಲು ನಿಚ್ಚಲನುವಾಯಿತ್ತಯ್ಯಾ ಅಚ್ಚ ಆರೆಸಳ ಪೀಠ. ಆ ಪೀಠದಲ್ಲಿ ವೀರದಾಸಯ್ಯನೆಂಬವ ಗುರುವಿಡಿದು ನಡೆಯೆ ನೀರಾಟ ನಿಂದು ನೆಲೆಗೊಂಡನಯ್ಯ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.
--------------
ಸಿದ್ಧರಾಮೇಶ್ವರ
ಎಸಳೆಸಳಹೊಸದು ನೋಡುವ ಯೋಗಿಗಳು ಬಸವನೈಕ್ಯವನು ಕಾಣದಾದರು. ರೂಪ ನಿರೀಕ್ಷಿಸುವ ಯೋಗಿಗಳು ಬಸವನೈಕ್ಯವ ಕಾಣದಾದರು. ಸಂಗಯ್ಯಾ, ನಿಮ್ಮ ಬಸವನೈಕ್ಯವ ಬಲ್ಲಾತ ಚೆನ್ನಬಸವಣ್ಣನು.
--------------
ನೀಲಮ್ಮ
ಎನ್ನ ತನುವ ನಿರ್ಮಲ ಮಾಡಿದನಯ್ಯಾ, ಬಸವಣ್ಣನು. ಎನ್ನ ಮನವ ನಿರ್ಮಲ ಮಾಡಿದನಯ್ಯಾ, ಚೆನ್ನಬಸವಣ್ಣನು. ಎನ್ನ ಪ್ರಾಣವ ನಿರ್ಮಲ ಮಾಡಿದನಯ್ಯಾ, ಪ್ರಭುದೇವರು. ಇಂತೆನ್ನ ತನುಮನಪ್ರಾಣವ ನಿರ್ಮಲ ಮಾಡಿ, ತಮ್ಮೊಳಿಂಬಿಟ್ಟುಕೊಂಡ ಕಾರಣ, ಕಾಮಧೂಮ ಧೂಳೇಶ್ವರಾ ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಾದಾರ ಧೂಳಯ್ಯ
ಬಿತ್ತದೆ ಬೆಳೆಯದೆ ಬೆಳೆದ ಹೆಬ್ಬೆಳಸಿನ ರಾಶಿಯ ನೋಡಾ, ಸುಗಂಧ ಬಂಧುರದಂತೆ ಹುಟ್ಟುತ್ತವೆ ಪರಿಮಳ ! ಆದಿ ಅನಾದಿಯಿಲ್ಲದ ಮುನ್ನ ತನ್ನಿಂದವೆ ತಾನಾಗಿರ್ದ ಕಾರಣ ಮುಟ್ಟದೆ ತಟ್ಟದೆ ಗುರುಕಾರುಣ್ಯವ ಪಡೆದು, ಲಿಂಗ ಸಯವಾಗಿ, ಎನಗೆ ಗತಿಪಥವ ತೋರಿಸಬೇಕೆಂದು ಆಗಾದನು, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
--------------
ಬಸವಣ್ಣ
ಎನ್ನ ಕಕ್ಷೆಯಲ್ಲಿ ಸ್ವಾಯತವಾದನಯ್ಯಾ ಶಂಕರದಾಸಿಮಯ್ಯನು. ಎನ್ನ ಕರಸ್ಥಲದಲ್ಲಿ ಸ್ವಾಯತವಾದನಯ್ಯಾ ಉರಿಲಿಂಗಪೆದ್ದಯ್ಯನು. ಎನ್ನ ಉರಸೆಜ್ಜೆಯಲ್ಲಿ ಸ್ವಾಯತವಾದನಯ್ಯ ಘಟ್ಟಿವಾಳ ಮದ್ದಯ್ಯನು. ಎನ್ನ ಅಮಳೋಕ್ಯದಲ್ಲಿ ಸ್ವಾಯತವಾದನಯ್ಯಾ ಅಜಗಣಯ್ಯನು. ಎನ್ನ ಮುಖಸೆಜ್ಜೆಯಲ್ಲಿ ಸ್ವಾಯತವಾದನಯ್ಯಾ ನಿಜಗುಣದೇವರು. ಎನ್ನ ಶಿಖೆಯಲ್ಲಿ ಸ್ವಾಯತವಾದನಯ್ಯಾ ಅನಿಮಿಷದೇವರು. ಎನ್ನ ಘ್ರಾಣದಲ್ಲಿ ಸ್ವಾಯತವಾದನಯ್ಯಾ ಏಕೋರಾಮಿತಂದೆಗಳು. ಎನ್ನ ಜಿಹ್ವೆಯಲ್ಲಿ ಸ್ವಾಯತವಾದನಯ್ಯಾ ಪಂಡಿತಾರಾಧ್ಯರು. ಎನ್ನ ನೇತ್ರದಲ್ಲಿ ಸ್ವಾಯತವಾದನಯ್ಯಾ ರೇವಣಸಿದ್ದೇಶ್ವರದೇವರು. ಎನ್ನ ತ್ವಕ್ಕಿನಲ್ಲಿ ಸ್ವಾಯತವಾದನಯ್ಯಾ ಸಿದ್ಧರಾಮೇಶ್ವರದೇರು. ಎನ್ನ ಶ್ರೋತ್ರದಲ್ಲಿ ಸ್ವಾಯತವಾದನಯ್ಯಾ ಮರುಳಸಿದ್ಧೇಶ್ವರದೇವರು. ಎನ್ನ ಹೃದಯದಲ್ಲಿ ಸ್ವಾಯತವಾದನಯ್ಯಾ ಪ್ರಭುದೇವರು. ಎನ್ನ ಭ್ರೂಮಧ್ಯದಲ್ಲಿ ಸ್ವಾಯತವಾದನಯ್ಯಾ ಚೆನ್ನಬಸವಣ್ಣನು. ಎನ್ನ ಬ್ರಹ್ಮರಂಧ್ರದಲ್ಲಿ ಸ್ವಾಯತವಾದನಯ್ಯಾ ಸಂಗನಬಸವಣ್ಣನು. ಎನ್ನ ಉತ್ತಮಾಂಗದಲ್ಲಿ ಸ್ವಾಯತವಾದನಯ್ಯಾ ಮಡಿವಾಳಯ್ಯನು. ಎನ್ನ ಲಲಾಟದಲ್ಲಿ ಸ್ವಾಯತವಾದನಯ್ಯಾ ಸೊಡ್ಡಳ ಬಾಚರಸರು. ಎನ್ನ ಪಶ್ಚಿಮದಲ್ಲಿ ಸ್ವಾಯತವಾದನಯ್ಯಾ ಕಿನ್ನರ ಬ್ರಹ್ಮಯ್ಯನು. ಎನ್ನ ಸರ್ವಾಂಗದಲ್ಲಿ ಸ್ವಾಯತವಾದನಯ್ಯಾ ಗಣಂಗಳು. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಹಾವಿನಹಾಳ ಕಲ್ಲಯ್ಯ
ಕೇಳು ಕೇಳಾ, ಎಲೆ ಅಯ್ಯಾ, ಬಸವಣ್ಣನು ಅನಿಮಿಷಂಗೆ ಲಿಂಗವ ಕೊಟ್ಟ ಕಾರಣ ಮತ್ರ್ಯಕ್ಕೆ ಬಂದೆನೆಂಬರು. ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ ಜೈನ ಚಾರ್ವಾಕ ಕಾಳಾಮುಖ ಎನಿಸುವ ಷಡ್ದರ್ಶನಾಗಳು ಹೆಚ್ಚಿ, ವಿಭೂತಿ ರುದ್ರಾಕ್ಷಿ ಪಂಚಾಕ್ಷರವನರಿಯದೆ ನರಕಕ್ಕೆ ಭಾಜನವಾಗಿ ಪೋಪರೆಂದು, ದೇವರು ನಂದಿಕೇಶ್ವರನ ಮುಖವ ನೋಡಲು, ಆ ಪ್ರಶ್ನೆಯಿಂದ ಬಂದನಯ್ಯಾ ಬಸವಣ್ಣ ಪರಹಿತಾರ್ಥನಾಗಿ. ದೇವರು ದೇವಿಯರಿಗೆ ಪ್ರಣವಾರ್ಥವ ಬೋಧಿಸುವಾಗ ದೇವಿಯರ ಮುಡಿಯಲ್ಲಿ ಹೊನ್ನ ತುಂಬಿಯಾಗಿ ಷಣ್ಮುಖ ಕೇಳಿದ ಪ್ರಶ್ನೆಯಿಂದ ಬಂದನೆಂಬರಯ್ಯಾ, ಚೆನ್ನಬಸವಣ್ಣನು. ಸಟೆ ಸಟೆ! ಆ ನುಡಿಯ ಕೇಳಲಾಗದು. ಅದೇನು ಕಾರಣವೆಂದಡೆ: ಷಡ್ವಿಧಸ್ಥಲಕ್ಕೆ ಸ್ಥಾಪನಾಚಾರ್ಯನಾಗಿ ಸಕಲ ಪ್ರಮರ್ಥರ್ಗೆ ವೀರಶೈವವ ಪ್ರತಿಷೆ*ಯ ಮಾಡಲೋಸ್ಕರ ಬಂದನಯ್ಯಾ ಚೆನ್ನಬಸವಣ್ಣನು. ದೇವರ ಸಭೆಯಲ್ಲಿ ನಿರಂಜನನೆಂಬ ಗಣೇಶ್ವರನು ಮಾಯಾಕೋಳಾಹಳನೆಂದು ಹೊಗಳಿಸಿಕೊಂಡು ಬರಲಾಗಿ ಆ ಸಮಯದಲ್ಲಿ ದೇವಿಯರು ದೇವರ ಮಾಯಾಕೋಳಾಹಳನಾದ ಪರಿಯಾವುದೆಂದು ಬೆಸಗೊಳಲು, ಆ ಪ್ರಶ್ನೆಯಿಂದ ಪ್ರಭುದೇವರು ಮತ್ರ್ಯಕ್ಕೆ ಬಂದರೆಂಬರಯ್ಯಾ. ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಸುಜ್ಞಾನಿ ನಿರಹಂಕಾರರ ಭಕ್ತಿಗೋಸ್ಕರ ಪ್ರತ್ಯಕ್ಷವಾಗಿ ಬಸವಾದಿ ಪ್ರಮಥರ್ಗೆ ಬೋಧಿಸಿ, ತನ್ನ ನಿಜಪದವ ತೋರಬಂದರಯ್ಯಾ ಪ್ರಭುದೇವರು. ದಕ್ಷಸಂಹಾರದಿಂದ ಬರುವಾಗ ಗುಪ್ತಗಣೇಶ್ವರನ ನಿರಿ ಸೋಂಕಲು, ಆ ಪ್ರಶ್ನೆಯಿಂದ ಬಂದನೆಂಬರಯ್ಯಾ ಮಡಿವಾಳನು. ಸಟೆ ಸಟೆ! ಆ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಬಿಜ್ಜಳ ಪರವಾದಿಗಳ ಸಂಹರಿಸಲೋಸ್ಕರ ಬಸವಣ್ಣನ ನಿಮಿತ್ತವಾಗಿ ಬಂದನಯ್ಯಾ ಮಡಿವಾಳ ಮಾಚಯ್ಯಗಳು. ಇಂತಿವರು ಮುಖ್ಯವಾದ ಏಳುನೂರು ಎಪ್ಪತ್ತು ಅಮರಗಣಂಗಳಿಗೆ ವಾಸನಾಧರ್ಮವೆಂದಡೆ ಅಘೋರ ನರಕ ತಪ್ಪದಯ್ಯಾ. ಇವರು ಮುಖ್ಯವಾದ ಪ್ರಮಥ ಗಣಂಗಳಿಗೆ ಶಾಪವೆಂದು ಕಲ್ಪಸಿದಡೆ, ನಾಯಕ ನರಕ ತಪ್ಪದು, ಎಲೆ ಶಿವನೆ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮಾಣೆ
--------------
ಸಿದ್ಧರಾಮೇಶ್ವರ
ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ. ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ. ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ. ಭೈರವನು ಭಯಂಕರಹರನ ಮಗನೆಂಬ ಭವಹರಗುರುದ್ರೋಹಿಗಳು ನೀವು ಕೇಳಿರೆ. ಅಜಾತನ ಚರಿತ್ರ ಪವಿತ್ರ. ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ, ಆದಿಯ ಲಿಂಗ ಅನಾದಿಯ ಶರಣ ಗುರುವಿನ ಗುರು ಪರಮಗುರುವರ[ನ] ತೋರಿದೆನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು
--------------
ಅಲ್ಲಮಪ್ರಭುದೇವರು
ಎನ್ನ ಜ್ಞಾನಾತ್ಮನ ಚೇತನನಯ್ಯ ಪ್ರಭುದೇವರು. ಎನ್ನ ಪರಮಾತ್ಮನ ಚೇತನನಯ್ಯ ಸಿದ್ಧರಾಮೇಶ್ವರದೇವರು. ಎನ್ನ ಚಿನ್ಮಯಾತ್ಮನ ಚೇತನನಯ್ಯ ಬಸವಣ್ಣನು. ಎನ್ನ ನಿರ್ಮಲಾತ್ಮನ ಚೇತನನಯ್ಯ ಷಟ್ಸ್ಥಲಬ್ರಹ್ಮಿ ಚೆನ್ನಬಸವಣ್ಣನು. ಎನ್ನ ಮಹಾತ್ಮನ ಚೇತನನಯ್ಯ ಸಂಗನಬಸವಣ್ಣನ ನಿಜಸುಖಿ ಅಪ್ಪಣ್ಣನು. ಎನ್ನ ಜೀವಾತ್ಮನ ಚೇತನನಯ್ಯ ಮಡಿವಾಳ ಮಾಚಯ್ಯನು. ಎನ್ನ ಅಂತರಾತ್ಮನ ಚೇತನನಯ್ಯ ಸೊಡ್ಡಳ ಬಾಚರಸರು. ಎನ್ನ ಅರಿವಿನ ಚೇತನಾತ್ಮಕನಯ್ಯ ಕಿನ್ನರ ಬೊಮ್ಮಯ್ಯನು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣರ ಕರುಣವ ಪಡೆದೆನಾಗಿ, ಎನ್ನ ಕರ್ಮ ನಿರ್ಮೂಲವಾಯಿತ್ತಯ್ಯ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಕುಂಕುಮದ ಗಿರಿ ಕೊನೆಯೇರಿ ಬೆಳೆಯೆ, ಆಯತವಿಡಿದು ಸುಖವ ಕಂಡು ಅನುಭವದವಳಿಗೆ [ಪಚ್ಚವರ್ಣ್ವ] ಸುಖವನೇಕೀಕರಿಸಿ ನೋಡಲು ಆಯತವಾಯಿತ್ತಯ್ಯಾ ಕುಂಕುದಮ [ಹನ್ನೆರಡಸಳ] ಪೀಠ, ಆ ಪೀಠದಲ್ಲಿ ವೀರಭೃತ್ಯನೆಂಬವ ನಿಂದು, ಜಂಗಮವಿಡಿದು ನಡೆಯೆ, ಅನಿಲಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು, ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.
--------------
ಸಿದ್ಧರಾಮೇಶ್ವರ
ಅಂಧಕಾರದ ಗಿರಿ ಅರಿವೇರಿತು ಅನುವಿಡಿದು ಸುಖವ ಕಂಡು ಅನುಭವದವಳಿಗೆ ಕೆಂಪುವರ್ಣ ಸುಖವನೇಕೀಕರಿಸಿ ನೋಡಲು ಆಯತವಾಯಿತ್ತು ಈ ಅಂಧಕಾರದ ಎರಡೆಸಳಪೀಠ ಆ ಪೀಠದಲ್ಲಿ ಸಮಯಾಚಾರಿಯೆಂಬವ ನಿಂದು ಪರಿಣಾಮವಿಡಿದು ನಡೆಯೆ, ಆತ್ಮನ ಗುಣ ಕೆಟ್ಟು ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ, ಚೆನ್ನಬಸವಣ್ಣನ ಧರ್ಮಂ ಬದುಕಿದೆನು
--------------
ಸಿದ್ಧರಾಮೇಶ್ವರ
ಗುರುಸಂಬಂಧಿ ಗುರುಭಕ್ತಯ್ಯನು. ಲಿಂಗಸಂಬಂಧಿ ಪ್ರಭುದೇವರು. ಜಂಗಮಸಂಬಂಧಿ ಸಿದ್ಧರಾಮನು. ಪ್ರಸಾದಸಂಬಂಧಿ ಮರುಳಶಂಕರದೇವರು. ಪ್ರಾಣಲಿಂಗಸಂಬಂಧಿ ಅನಿಮಿಷದೇವರು. ಶರಣಸಂಬಂಧಿ ಘಟ್ಟಿವಾಳಯ್ಯನು. ಐಕ್ಯಸಂಬಂಧಿ ಅಜಗಣ್ಣಯ್ಯನು. ಸರ್ವಾಚಾರಸಂಬಂಧಿ ಚೆನ್ನಬಸವಣ್ಣನು. ಇಂತಿವರಸಂಬಂಧ ಎನ್ನ ಸರ್ವಾಂಗದಲ್ಲಿ ನಿಂದು ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ ನಿಜನಿವಾಸಿಯಾಗಿದ್ದೆನು.
--------------
ನಾಗಲಾಂಬಿಕೆ
ಎನ್ನ ಕಾಯದ ಕದಳಿಯೆ ಸಂಗನಬಸವಣ್ಣನು, ಎನ್ನ ಜೀವದ ಸುಮನವೆ ಚೆನ್ನಬಸವಣ್ಣನು. ಎನ್ನ ಭಾವದ ಬಲುಹೆ ಪ್ರಭುದೇವರು, ಎನ್ನ ತನುವಿನ ಮೂರ್ತಿಯೆ ಚಂದಯ್ಯನು, ಎನ್ನ ಮನದ ನಿಶ್ಚಯವೆ ಮಡಿವಾಳಯ್ಯನು, ಎನ್ನ ಪ್ರಾಣದ ಪರಿಣಾಮವೆ ಹಡಪದಪ್ಪಣ್ಣನು, ಎನ್ನ ಅರುಹಿನ ನೈಷೆ*ಯೆ ಸೊಡ್ಡಳ ಬಾಚರಸನು, ಎನ್ನಾಚಾರದ ದೃಢವೇ ಮೋಳಿಗೆಯ ಮಾರಯ್ಯನು, ಎನ್ನ ನೋಟದ ನಿಬ್ಬೆರಗೆ ಅನುಮಿಷದೇವರು, ಎನ್ನ ಶ್ರೋತ್ರದ ಕೇಳಿಕೆಯೆ ಮರುಳಶಂಕರದೇವರು, ಎನ್ನ ಹೃದಯದ ಜ್ಯೋತಿಯೆ ಘಟ್ಟಿವಾಳಯ್ಯನು, ಎನ್ನಂತರಂಗದ ಬೆಳಗೆ ಅಜಗಣ್ಣಯ್ಯನು, ಎನ್ನ ಬಹಿರಂಗದ ನಿರಾಳವೆ ನಿಜಗುಣದೇವರು, ಎನ್ನ ಸರ್ವಾಂಗದ ಕಳೆಯೆ ಸಿದ್ಧರಾಮಯ್ಯನು, ಎನ್ನ ಗತಿಮತಿಚೈತನ್ಯವೇ ಏಳ್ನೂರೆಪ್ಪತ್ತಮರಗಣಂಗಳು. ಭೋಗಬಂಕೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಶ್ರೀ ಮುಕ್ತಿರಾಮೇಶ್ವರ
ಆದಿಯಾಧಾರದಲ್ಲಿ ಆದಿಯಿಲ್ಲದ ಮುನ್ನ, ಅನಾದಿ ಸಂಸಿದ್ಧನಯ್ಯಾ ಬಸವಣ್ಣನು. ಲೋಕವೀರೇಳರ ಆಕಾರವಿಲ್ಲದಲ್ಲಿ, ಏಕೈಕರೂಪನಯ್ಯಾ ಚೆನ್ನಬಸವಣ್ಣನು. ಸಾಕಾರದಿಂದತ್ತ ನಿರ್ಮಾಯ ಬಂದನು, ಲೋಕಪಾವನಮೂರ್ತಿ ಪ್ರಭುರಾಯನು. ಇಂತೆನ್ನ ಭವದ ಬೇರ ಹರಿದು ಹದುಳ ಮಾಡಿ ಶರಣರೊಳಗಿರಿಸಿದ ಗುರು ಇಂತು ಮೂವರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->