ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ, ರುದ್ರಾಕ್ಷೆಯಿಂದ ಇಹವ ಕಂಡೆ. ಅಯ್ಯಾ, ರುದ್ರಾಕ್ಷೆಯಿಂದ ಪರವ ಕಂಡೆ. ಅಯ್ಯಾ, ರುದ್ರಾಕ್ಷೆಯಿಂದ ಗತಿಯ ಕಂಡೆ. ಅಯ್ಯಾ, ರುದ್ರಾಕ್ಷೆಯಿಂದ ಮತಿಯ ಕಂಡೆ ಅಯ್ಯಾ, ರುದ್ರಾಕ್ಷೆಯಿಂದ ಮೋಕ್ಷವ ಕಂಡೆ ಅಯ್ಯಾ, ಇನ್ನ ಬದುಕಿದೆ, ಬದುಕಿದೆನಯ್ಯಾ, ಅಯ್ಯಾ, ಭವಂ ನಾಸ್ತಿಯಾಯಿತ್ತೆನಗೆ. ಅಯ್ಯಾ, ಮಹಾಲಿಂಗ ಕಲ್ಲೇಶ್ವರಾ, ಶ್ರೀಮಹಾರುದ್ರಾಕ್ಷೆಯಿಂದೆ ಕಂಡೆನಯ್ಯಾ, ಎನ್ನ ಕರಸ್ಥಳದಲ್ಲಿ ಮಹಾಗೂಢವಾಗಿರ್ಪ ನಿಮ್ಮ ದಿವ್ಯಮೂರ್ತಿ ಪೆಂಪನು.
--------------
ಹಾವಿನಹಾಳ ಕಲ್ಲಯ್ಯ
ಅಂದಂದಿನ ದಿನವ ಸಂಸಾರವಂದಂದಿಗೆ ಗ್ರಹಿಸುತ್ತಿದೆ. ಎಂದಯ್ಯಾ ನಿಮ್ಮ ನೆನೆವೆ, ಎಂದಯ್ಯಾ ನಿಮ್ಮ ಪೂಜಿಸುವೆ. ಸಮಚಿತ್ತದಿಂದ ನಿಮ್ಮ ನೆನೆವಡೆ, ನಾಳಿಗಿಂದೇ ಲೇಸು ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಅಶನದಾಪ್ಯಾಯನ, ವ್ಯಸನ ಉಳ್ಳನ್ನಕ್ಕ ಆ ನಿಮ್ಮ ನೆನೆವುದು ಹುಸಿಯಯ್ಯಾ. ಆ ನಿಮ್ಮ ಪೂಜಿಸುವುದು ಹುಸಿಯಯ್ಯಾ. ಎನ್ನ ಹಸಿವಿಂಗೆ ನೀನೇ ಓಗರವಾದರೆ, ನಾ ನಿಮ್ಮ ನೆನೆವುದು ದಿಟ ಕಾಣಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಅನುನೇಹದ ಅನುರಚಿಯ ತೋರಲಿಕಾರಿಗೆಯೂ ಬಾರದು. ಅದು ಸಕ್ಕರೆಯಂತುಟಲ್ಲ, ಅದು ತವರಾಜದಂತುಟಲ್ಲ. ಭಾವದ ಸುಖ ಭವಗೆಡಿಸಿತ್ತು. ಮಹಾಲಿಂಗ ಕಲ್ಲೇಶ್ವರದೇವಾ, ನೀನೆ ಬಲ್ಲೆ.
--------------
ಹಾವಿನಹಾಳ ಕಲ್ಲಯ್ಯ
ಅರ್ಚನೆಯಾವರಿಸಿತ್ತಯ್ಯಾ, ಪೂಜನೆ ಪೂರಿತವಾಯಿತ್ತಯ್ಯಾ, ಅಜಪೆ ಅಕ್ಕಾಡಿತ್ತಯ್ಯಾ, ಸಮತೆ ಪರಿಣಾಮಿಸಿತ್ತಯ್ಯಾ, ಮಹಾಲಿಂಗ ಕಲ್ಲೇಶ್ವರಯ್ಯಾ,, ನಿಮ್ಮ ನೆನೆವ ಮನಕ್ಕೆ.
--------------
ಹಾವಿನಹಾಳ ಕಲ್ಲಯ್ಯ
ಅಂಗದ ಮೇಲೆ ಲಿಂಗವುಂಟೆಂದು ಆಗವೆಲ್ಲ ಬೆಬ್ಬನೆ ಬೆರೆತು ಬೀಗಿ ನುಡಿವರು. ಅಂಗವೇ ಲಿಂಗವನರಿಯದು ಲಿಂಗವೇ ಅಂಗವನರಿಯದು. ಅಂಗವಾವುದು, ಲಿಂಗವಾವುದು, ಸಂಗಸಂಬಂಧವಾವುದೆಂದೆರಿಯರು. ಅಂಗಗುಣವಳಿದು ಆಚಾರವಳಪಟ್ಟು ನಿಂದಂಗವೆ ಅಂಗ. ಲಿಂಗವಾವುದೆನಲು, ಪಾಷಾಣಗುಣವಿಡಿದ ಭ್ರಮೆಯಳಿದು, ಭಾವವಳಿದು, ಲಿಂಗಸಂಬಂಧವುಳಿದುದೆ [ಲಿಂಗ] ಲಿಂಗಸಂಬಂಧವಾವುದೆನಲು ಸಂಸಾರವಿಡಿದು ವರ್ತಿಸುವ ಭ್ರಾಂತವಳಿದು ಜ್ಞಾನಸಂಬಂಧವನರಿಯದಿದ್ದಡೆ, ಅಂಗ ಬಿದ್ದು, ಲಿಂಗ ಉಳಿದು, ಸಂಬಂಧಚೈತನ್ಯ ಹಿಂಗಿಹೋದಲ್ಲಿ ಭಂಗ ಹೊದ್ದಿತ್ತು, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ, ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ. ಈಸುವನರಿಯದೆ ವೇಷವ ಧರಿಸಿ, ಲೋಚು ಬೋಳಾದಡೆ ಮಹಾಲಿಂಗ ಕಲ್ಲೇಶ್ವರದೇವರು ನಗುವರು.
--------------
ಹಾವಿನಹಾಳ ಕಲ್ಲಯ್ಯ
ಅರಳಿದ ಪುಷ್ಪ ಪರಿಮಳಿಸದಿಹುದೆ? ತುಂಬಿದ ಸಾಗರ ನೊರೆತೊರೆಯಾಡದಿಪ್ಪುದೆ? ಆಕಾಶವ ಮುಟ್ಟುವ ದೋಂಟಿಗೋಲವಿಡಿವನೆ? ಪರಮಪರಿಣಾಮಿ, ಕರ್ಮವನತಿಗಳೆಯದಿಹನೆ, ಮಹಾಲಿಂಗ ಕಲ್ಲೇಶ್ವರಾ?
--------------
ಹಾವಿನಹಾಳ ಕಲ್ಲಯ್ಯ
ಅತ್ಯಾಶೆಯೆಂಬುದೆ ಪಾಪ, ಬೇರೆ ಪಾಪೆಂಬುದಿಲ್ಲ, ಕಂಡಿರೆ ಅಯ್ಯಾ! ಪರಿಣಾಮವೆಂಬುದೆ ಪರಮಾನಂದ, ಬೇರೆ ಪರಲೋಕವಿಲ್ಲ, ಕಂಡಿರೆ ಅಯ್ಯಾ! ಇಹಪರದಾಶೆಯಿಲ್ಲದಿಹುದೆ ಶಿವಯೋಗ. ಮಹಾಲಿಂಗ ಕಲ್ಲೇಶ್ವರ ಬಲ್ಲ, ಸಿದ್ಧರಾಮನ ಪರಿಯ.
--------------
ಹಾವಿನಹಾಳ ಕಲ್ಲಯ್ಯ
ಅಯ್ಯಾ ವಿಪ್ರರೆಂಬವರು ಮಾತಂಗಿಯ ಮಕ್ಕಳೆಂಬುದಕ್ಕೆ ಇದೇ ದೃಷ್ಟ. ಮತ್ತೆ ವಿಚಾರಿಸಿ ಕೇಳಿದಡೆ ಹೇಳುವೆನು : ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು, ಕಡಿದು ಹಂಚಿ ತಿಂದರಂದು ಗೋಮಾಂಸವ. ಬಿಡದೆ ಅತ್ಯಂತ ಉಜ್ಞಕ್ರಮವೆಂದು ಹೋತನ ಕೊಂದು, ಚಿಕ್ಕ ಚಿಕ್ಕವಾಗಿ ಕಡಿಮೆ ಭಕ್ಷಿಸಿದುದ ಕಂಡು, ಮಿಕ್ಕ ಹದಿನೇಳುಜಾತಿ ವಿಪ್ರರ ಕೈಯಲನುಗ್ರಹವ ಪಡೆದು, ತಿನಕಲಿತರಯ್ಯಾ. ಶ್ವಪಚೋಪಿ ವಿಪ್ರ ಸಮೋ ಜಾತಿಭೇದಂ ನ ಕಾರಯೇತ್| ಅಜಹತ್ಯೋಪದೇಶೀನಾಂ ವರ್ಣನಾಂ ಬ್ರಾಹ್ಮಣೋ ಗುರುಃ|| ಎಂಬುದಾಗಿ, ಕಿರಿಕಿರಿದ ತಿಂದ ದ್ವಿಜರು ನೆರೆದು ವೈಕುಂಠಕ್ಕೆ ಹೋಹರೆ? ನೆರೆಯಲೊಂದ ತಿಂದ ವ್ಯಾಧ ದ್ವಿಜರಿಂದಧಿಕ. `ಭರ್ಗೋ ದೇವಸ್ಯ ಧೀಮಹಿ' ಎಂಬ ದಿವ್ಯಮಂತ್ರವನೋದಿ, ನಿರ್ಬುದ್ಧಿಯಾದಿರಿ. ಶಿವಪಥವನರಿಯದೆ ಬರುದೊರೆವೋದಿರಿ. ಆದಡೀ ನರಕಕ್ಕೆ ಭಾಜನವಾದಿರಿ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣಂಗೆ ಸರಿಯೆ ಜಗದನ್ಯಾಯಿಗಳು.
--------------
ಹಾವಿನಹಾಳ ಕಲ್ಲಯ್ಯ
ಅಂದಂದಿನ ದಿನಕ್ಕೆ ಬಂದ ದಂದುಗಕ್ಕೆ ಮನನಾಚದ ಪರಿಯ ನೋಡಾ! ಕಂದದೀ ಮನವು, ಕುಂದದೀ ಮನವು ಲಿಂಗದೇವನ ಒಲವು ಎಯ್ದದೆಂದು ಮರುಗುವ ಪರಿಯ ನೋಡಾ! ಮಹಾಲಿಂಗ ಕಲ್ಲೇಶ್ವರಯ್ಯಾ, ಈ ಬೆಂದ ಮನವು, ಹೇಸದ ಪರಿಯ ನೋಡಾ!
--------------
ಹಾವಿನಹಾಳ ಕಲ್ಲಯ್ಯ
ಅರ್ಧನಾರಿಯಾಗಿದ್ದ ಉಮಾದೇವಿ ಬೇರೆ ಮತ್ತೊಬ್ಬರೊಡನುಂಬಳೆ? ಗಂಡಂಗೆ ತೆರಹಿಲ್ಲದ ವಧು ಪರಿವಿರೋಧಿಯಾಗಿ, ಬೇರೆ ಮತ್ತೊಬ್ಬರೊಡನುಂಬ ಪರಿಯೆಂತೊ? ಮನ ಪುನರ್ಜಾತನಾಗಿ, ಪ್ರಾಣಲಿಂಗ ಪ್ರಸಾದಿಯಾದ ಪ್ರಸಾದಿಗ್ರಾಹಕ ಪ್ರಸಾದಿ, ಇದರೊಡನೆ ಭುಂಜಿಸುವ ಪರಿಯಿನ್ನೆಂತೊ? ಒಂದಾಗಿ ಭೋಜನವ ಮಾಡಿದಲ್ಲಿ, ಸಜ್ಜನಸ್ಥಲ ಬೆಂದಿತ್ತು, ಗುರುವಚನ ನೊಂದಿತ್ತು, ಜಂಗಮ ನಾಚಿತ್ತು, ಪ್ರಸಾದ ಹೇಸಿತ್ತು, ಅವಧಾನವಡಗಿತ್ತು, ಭಕ್ತಿ ಮೀಸಲಳಿದು ಬೀಸರವೋಯಿತ್ತು, ಪ್ರದೀಪಿಕೆ : ಭಕ್ತೋಭಕ್ತಸ್ಯ ಸಂಯೋಗಾನ್ನ ಭುಂಜಿಯಾತ್ಮವಾನ್ ಸಃ| ತಥಾಪಿ ಭುಂಜನಾದ್ದೇವಿ ಪ್ರಸಾದತ್ರಯನಾಶನಂ|| ಇಂತೆಂದುದಾಗಿ, ಇದು ಕಾರಣ, ಒಂದೆನಲಮ್ಮೆ ಬೇರೆನಲಮ್ಮೆ. ನಿಮ್ಮ ಶರಣರೊಕ್ಕುದ ಕೊಂಬೆ ಕಾಣಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಅರಿವ ಬೈಚಿಟ್ಟುಕೊಂಡು ಮರೆಯಮಾನವರಂತೆ, ಕುರುಹಿನ ಹೆಸರಲ್ಲಿ ಕರೆದಡೆ ಓ ಎನುತಿಪ್ಪವರು, ಅವರು ನರರೆ ಅಯ್ಯಾ? ಕುರುಹಿಲ್ಲ ಲಿಂಗಕ್ಕೆ, ತೆರಹಿಲ್ಲ ಶರಣಂಗೆ. ಬರಿಯ ಸಂಸಾರವ ಬಳಸಿಯೂ ಬಳಸದಂತಿಪ್ಪವರು ಅವರು ನರರೆ ಅಲ್ಲ, ಮಹಾಲಿಂಗ ಕಲ್ಲೇಶ್ವರಾ ನಿಮ್ಮ ಶರಣರು.
--------------
ಹಾವಿನಹಾಳ ಕಲ್ಲಯ್ಯ
ಅರ್ಥವೆಂಬುದೆ ಪಾಪ, ಬೇರೆ ಪಾಪವಿಲ್ಲ ಕಂಡನಯ್ಯಾ. ಪರಿಣಾಮವೆಂಬುದೆ ಪುಣ್ಯ, ಬೇರೆ ಪುಣ್ಯವಿಲ್ಲ ಕಂಡಯ್ಯಾ. ಪಪುಣ್ಯಗಳನತಿಗಳೆದ ಉಳುಮೆ, ಶಿವಯೋಗ. ಮಹಾಲಿಂಗ ಕಲ್ಲೇಶ್ವರನು ಬಲ್ಲ ಸಿದ್ಧರಾಮನ ಪರಿಯ.
--------------
ಹಾವಿನಹಾಳ ಕಲ್ಲಯ್ಯ
ಅಂತರಂಗದಲ್ಲಿ ಅರಿವ ತೋರಿ, ಬಹಿರಂಗದಲ್ಲಿ ಕುರುಹ ತೋರಿ, ಉಭಯ ತನ್ನ ಹಿತವಹ ನಿಜನಿವಾಸವ ತೋರಿ ರಕ್ಷಿಸುವ ಪರಮಪಾವನಮೂರ್ತಿ ಶ್ರೀಗುರುವನೆಂದು ಕಾಂಬೆನೋ! ಎನ್ನ ಸುತ್ತಿ ಮುತ್ತಿದ ಭವಪಾಶವ ಹರಿದು, ಎನ್ನ ಮುಸುಕಿಹ ಅಜ್ಞಾನ ತಿಮಿರವ ಪರಿಹರಿಸುವ, ಸಂವಿತ್ಸ ರೂಪನಾದ ಮಹಾಮಹಿಮ ಶ್ರೀಗುರುವನೆಂದೀಕ್ಷಿಸುವೆನೊ, ಮಹಾಲಿಂಗ ಕಲ್ಲೇಶ್ವರಾ!
--------------
ಹಾವಿನಹಾಳ ಕಲ್ಲಯ್ಯ