ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ನವ ಸವೆವ ಕನ್ನಗತ್ತಿಗೆ ಕನ್ನ ಸವೆಯಿತ್ತೆ ಕೈ ತಟ್ಟಿತೆಂಬಂತೆ, ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು, ಬಳಲುವಣ್ಣಗಳ ಬಾಯ ಟೊಣೆದು, ಇವು ಮೂರು ತನ್ನಿಂದ ಬಲ್ಲಿದರಲ್ಲಿಗೆ ಹೋಗದೆ ಮಾಣವು. ಇವರಲ್ಲಿ ಬನ್ನಬಟ್ಟು ಬಳಲುವ ಕರ್ಮಿಗಳಿಗಿನ್ನೆಲ್ಲಿಯ ಮುಕ್ತಿಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತಾಮಸ ಮುಸುಕಿ ಕಂಗಳ ಕೆಡಿಸಿತ್ತೆನ್ನ, ಭಕ್ತಿ. ಕಾಮವೆಂಬ ಅಗ್ನಿಗೆ ಮುರಿದಿಕ್ಕಿತ್ತೆನ್ನ, ಭಕ್ತಿ. ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ, ಭಕ್ತಿ. ಇದಿರನಾಶ್ರುಸಲು ಹೋುತ್ತೆನ್ನ, ಭಕ್ತಿ. ಹೆಣಮೂಳನು ನಾನು ಕೂಡಲಸಂಗಮದೇವಾ, ಕ್ಷಣ ಹದುಳವಿರದೆ ಬಾಯ ಟೊಣೆದು ಹೋುತ್ತೆನ್ನ, ಭಕ್ತಿ. 272
--------------
ಬಸವಣ್ಣ
ತನುವಿನವಗುಣಂಗಳ ತರಿದೊಟ್ಟಿ, ಮನದ ಮಾಯಾವಿಕಾರದ ಬಾಯ ಟೊಣೆದು, ಕರಣಂಗಳ ಕತ್ತಲೆಯ ಕಡೆಗೊದ್ದು ಎಡಬಲಂಗಳ ತಡಹಿ, ನಡುಮಧ್ಯಮಾರ್ಗವಿಡಿದು ಸುಷುಮ್ನಗಿರಿಯನಡರಿ, ಕಡೆಮೊದಲಿಲ್ಲದೆ ಬೆಳಗಿನೊಳಗಡಗಿ ಬೆಳಗುತಿರ್ದೆನಾಗಿ ನಾನು ಪರಮಶಿವಯೋಗಿಯಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅತ್ತೆ ಮಾಯೆ, ಮಾವ ಸಂಸಾರಿ, ಮೂವರು ಮೈದುನರು ಹುಲಿಯಂತವದಿರು, ನಾಲ್ವರು ನಗೆವೆಣ್ಣು ಕೇಳು ಕೆಳದಿ. ಐವರು ಭಾವದಿರನೊಯ್ವ ದೈವವಿಲ್ಲ. ಆರು ಪ್ರಜೆಯತ್ತಿಗೆಯರ ಮೀರಲಾರೆನು. ತಾಯೆ, ಹೇಳುವಡೆ ಏಳು ಪ್ರಜೆ ತೊತ್ತಿರ ಕಾಹು. ಕರ್ಮವೆಂಬ ಗಂಡನ ಬಾಯ ಟೊಣೆದು, ಹಾದರವನಾಡುವೆನು ಹರನಕೊಡೆ. ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು ಶಿವನೊಡನೆ ಕರಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನೆಂಬ ಸಜ್ಜನ ಗಂಡನ ಮಾಡಿಕೊಂಡೆ.
--------------
ಅಕ್ಕಮಹಾದೇವಿ
ಕರಿಯ ದಾನವನ ಶಿರದಲ್ಲಿ ಮರುಜೆವಣಿಯ ಹಣ್ಣಿಪ್ಪುದ ಕಂಡೆ. ಇರುಹೆ ಬಂದು ಮುತ್ತಲು ಮರುಜೆವಣಿ ಆರಿಗೂ ಕಾಣಬಾರದಯ್ಯ. ಇರುಹಿನ ಬಾಯ ಟೊಣೆದು ಮರುಜೆವಣಿಯ ಹಣ್ಣ ಸವಿಯಬಲ್ಲಾತಂಗೆ ಮರಣವಿನ್ನೆಲ್ಲಿಯದೋ? ಮರಣವ ಗೆಲಿದಾತನನೇ ಮಹಾಲಿಂಗೈಕ್ಯನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->