ಅಥವಾ

ಒಟ್ಟು 7 ಕಡೆಗಳಲ್ಲಿ , 6 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈರೇಳುಭುವನವನು ಒಡಲೊ?ಗೆ ಇಂಬಿಟ್ಟುಕೊಂಡು ಲಿಂಗರೂಪನಾಗಿ ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಡಿತ್ತು ನೋಡಾ ! ಅಂತಹ ಅಗಮ್ಯ ಅಗೋಚರ ಲಿಂಗವೆಂದರಿದು ಭಕ್ತನು ತಾನು ಹಿಂದೆ ನಡೆದ ಜೂಜು ಬೇಂಟೆ ಚದುರಂಗ ಲೆತ್ತ ಪಗಡೆಯಾಟಂಗಳಂ ಪರಿಹಾಸಕರ ಕೂಡಿಕೊಂಡು ಕೆಲೆದಾಡುವದಂ ಬಿಟ್ಟು ಬಂಧುವ ತೊರೆದು ಮುಂದೆ ಶಿವಪಥದಲ್ಲಿ ನಡೆಯಬಲ್ಲಾತನೇ ಸದ್ಭಕ್ತನಲ್ಲದೆ, ಹಣದಾಸೆಗೆ ಹಂಗಿಗನಾಗಿ ಗುಣದಾಸೆಗೆ ಅಮೇಧ್ಯವ ತಿಂದು ಬಂಧುಗಳ ಬಿಟ್ಟು ಭಕ್ತಿಯಿಲ್ಲವೇ ಉಂಟೇ ಎಂಬ ಪಂಚಮಹಾಪಾತಕರ ಮುಖವ ನೋಡಲಾಗದು ಅವರ ಮಾತ ಕೇಳಲಾಗದು, ಅದೆಂತೆಂದಡೆ; ಕತ್ತೆ ಭಕ್ತನಾದರೆ ಕಿಸುಕುಳವ ತಿಂಬುದ ಮಾಂಬುದೆ ? ಬೆಕ್ಕು ಭಕ್ತನಾದರೆ ಇಲಿಯ ತಿಂಬುದ ಮಾಂಬುದೆ ? ಹಂದಿ ಭಕ್ತನಾದರೆ ಹಡಿಕೆಯ ತಿಂಬುದ ಮಾಂಬುದೆ ? ಶುನಕ ಭಕ್ತನಾದರೆ ಮೂಳೆ ಮಾಂಸವ ತಿಂಬುದ ಮಾಂಬುದೆ ? ಕೋಳಿಯ ತಂದು ಪಂಜರವ ಕೂಡಿ ಅಮೃತಾನ್ನವನಿಕ್ಕಿ ಸಲಹಿದರೆ ಅದು ತಾನೆ ಮತ್ತೆ ತಿಂಬ ಹಡುವಿಂಗೆ ಚಿತ್ತವನಿಕ್ಕುದುಂ ಮಾಂಬುದೆ ? ಇಂತೀ ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಅನಾಚಾರವ ಬಿಟ್ಟು ಸದಾಚಾರದಲ್ಲಿ ನಡೆಯಬೇಕು. ಗುರುವಾದಡೂ ಆಗಲಿ ಭಕ್ತನಾದಡೂ ಆಗಲಿ ತಾನು ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ ಸುರೆ ಮಾಂಸ ಭಂಗಿ ಭವಿಸಂಗ ಭವಿಪಾಕ ಇಂತಿವ ಬಿಡದಿರ್ದವರುಗಳು ಆ ಕತ್ತೆ ಬೆಕ್ಕು ಸೂಕರ ಸೊಣಗ ಕೋಳಿಗಿಂದತ್ತತ್ತ ಕಡೆ ನೋಡಿರೇ. ಚಿನ್ನದ ಬೆಟ್ಟವನೇರಿದವನು ಕಣ್ಣುಕಾಣದಿಪ್ಪಂತೆ ಗಣೆಯನೇರಿದ ಡೊಂಬ ಮೈ ಮರೆದಿಪ್ಪಂತೆ ನಡುನೀರಿಗೆ ಹೋದ ಹರಿಗೋಲು ತಲೆ ಕೆಳಗಾದಂತೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ, ನಾಶಿಕ ಬಣಜಿಗ, ಅಧರ ಒಕ್ಕಲಿಗ, ಕರ್ಣ ಗೊಲ್ಲ, ಕೊರಳು ಕುಂಬಾರ, ಬಾಹು ಪಂಚಾಳ, ಅಂಗೈ ಉಪ್ಪಾರ, ನಖ ನಾಯಿಂದ, ಒಡಲು ಡೊಂಬ, ಬೆನ್ನು ಅಸಗ, ಚರ್ಮ ಬೇಡ, ಪೃಷ್ಠಸ್ಥಾನ ಕಬ್ಬಿಲಿಗ, ಒಳದೊಡೆ ಹೊಲೆಯ, ಮೊಣಕಾಲು ಈಳಿಗ, ಕಣಕಾಲು ಸಮಗಾರ, ಮೇಗಾಲು ಮಚ್ಚಿಗ, ಚಲಪಾದವೆಂಬ ಅಂಗಾಲು ಶುದ್ಧ ಮಾದಿಗ ಕಾಣಿರೊ! ಇಂತೀ ಹದಿನೆಂಟುಜಾತಿ ತನ್ನಲಿ ಉಂಟು. ಇವು ಇಲ್ಲಾಯೆಂದು ಜಾತಿಗೆ ಹೋರುವ ಅಜ್ಞಾನಿಗಳ ನಮ್ಮ ಸೊಡ್ಡಳದೇವರು ಮೆಚ್ಚನಯ್ಯಾ.
--------------
ಸೊಡ್ಡಳ ಬಾಚರಸ
ಜಲದೊಳಗಣ ಮತ್ಸ್ಯ, ವನದೊಳಗಣ ಮರ್ಕಟ, ಆಕಾಶದ ಪಕ್ಷಿ, ಇವು ಕೂಡಿ ಮಾತನಾಡುವಲ್ಲಿ, ಶಬರ ಮತ್ಸ್ಯವ ನೋಡಿ, ಜೋಗಿ ವನಚರವ ಕಂಡು, ಅಂಟಿನ ಡೊಂಬ ಹಕ್ಕಿಯ ಕಂಡು, ಇಂತೀ ಮೂವರ ಹಡಹ ಕೆಡಿಸಿತ್ತು. ಕಾರಮಳೆ ಸೋನೆಯೆದ್ದು ಸುರಿಯಿತ್ತು. ಇಂತಿನ್ನಾರ ಕೇಳುವೆ ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ ನೀನೆ ಬಲ್ಲೆ.
--------------
ಶಿವಲೆಂಕ ಮಂಚಣ್ಣ
ಈರೇಳು ಭುವನವನೊಳಕೊಂಡ ಮಹಾಘನಲಿಂಗವು ಶಿವಭಕ್ತನ ಕರಸ್ಥಲದಾಲಯಕ್ಕೆ ಬಂದು, ಪೂಜೆಗೊಂಬ ಪರಿಯ ನೋಡ! ಅಪ್ರಮಾಣ-ಅಗೋಚರವಾದ ಲಿಂಗದಲ್ಲಿ ಸಂಗವ ಬಲ್ಲಾತನೆ ಸದಾಚಾರಸದ್ಭಕ್ತನು! ಹೀಂಗಲ್ಲದೆ ಹಣವಿನಾಸೆಗೆ ಹಂಗಿಗನಾಗಿ, ಜಿಹ್ವಾಲಂಪಟಕ್ಕೆ ಅನಾಚಾರದಲ್ಲಿ ಉದರವ ಹೊರದು ಬದುಕುವಂಥ ಭಂಡರು ಭಕ್ತರಾದವರುಂಟೆ ? ಹೇಳ! ಅಂಥ ಅನಾಚಾರಿ ಶಿವದ್ರೋಹಿಗಳ ಮುಖವ ನೋಡಲಾಗದು! ಅದೆಂತೆಂದಡೆ: ಕತ್ತೆ ಭಕ್ತನಾದಡೆ ಕಿಸುಕಳವ ತಿಂಬುದ ಮಾಣ್ಬುದೆ ? ಹಂದಿ ಭಕ್ತನಾದಡೆ ಹಡಿಕೆಯ ತಿಂಬುದ ಮಾಣ್ಬುದೆ ? ಬೆಕ್ಕು ಭಕ್ತನಾದಡೆ ಇಲಿಯ ತಿಂಬುದ ಮಾಣ್ಬುದೆ ? ಸುನಕಗೆ ಪಂಚಾಮೃತವ ನೀಡಲು ಅಡಗ ತಿಂಬುದ ಮಾಣ್ಬುದೆ ? ಇಂತೀ ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಮರಳಿ ತನ್ನ ಜಾತಿಯ ಕೂಡಿದಡೆ ಆ ಕತ್ತೆ-ಹಂದಿ-ಬೆಕ್ಕು-ಸುನಕಗಿಂದತ್ತತ್ತ ಕಡೆ ಕಾಣಿರೊ! ಹೊನ್ನಬೆಟ್ಟವನೇರಿ ಕಣ್ಣುಕಾಣದಿಪ್ಪಂತೆ, ಗಣಿಯನೇರಿದ ಡೊಂಬ ಮೈಮರದಿಪ್ಪಂತೆ, ಅಂಕವನೇರಿದ ಬಂಟ ಕೈಮರದಿಪ್ಪಂತೆ! ಇಂತಿವರು ಮಾಡುವ ಭಕ್ತಿಯೆಲ್ಲವು ನಡುನೀರೊಳು ಹೋಗುವ ಹರುಗೋಲು ಹೊಡಗೆಡದಂತಾಯಿತ್ತೆಂದಾತನಂಬಿಗರ ಚೌಡಯ್ಯನು!
--------------
ಅಂಬಿಗರ ಚೌಡಯ್ಯ
ಹುಸಿಯಂಕುರವಾಯಿತ್ತು, ಡೊಂಬ ಡೋಹರರಲ್ಲಿ. ಹುಸಿ ಎಲೆ ಹೂವಾಯಿತ್ತು, ದಾಸಿ ವೇಶಿಯರಲ್ಲಿ. ಹುಸಿ ಕಾಯಿ ಹಣ್ಣಾಯಿತ್ತು, ಭವಿಭಕ್ತರಲ್ಲಿ. ಹುಸಿ ಕೊಳತಿತ್ತು, ಜಂಗಮದಲ್ಲಿ. ಹುಸಿ ಮರಣವಾಯಿತ್ತು ಸತ್ಪುರುಷರಲ್ಲಿ. ಇಂತಪ್ಪ ಹುಸಿಯ ಬಿಟ್ಟಾತನೆ ಪಶುಪತಿಯಾಗಿರ್ದ ಕಾಣಾ, ಮಹಾಲಿಂಗ ಚೆನ್ನರಾಮಾ.
--------------
ಮೈದುನ ರಾಮಯ್ಯ
ಉಂಬ ಕೂಳಿಗೆ ಉಪದೇಶವ ಮಾಡುವ ಚುಂಬಕರು ಹೆಚ್ಚಿ, ಭಕ್ತಿಯಪಥವ ಕೆಡಿಸಿದರು. ಡೊಂಬ ಡೋಹರ ಹೊಲೆಯರು ಮಾದಿಗರು. ಉಪದೇಶವಿಲ್ಲದವರು ಪಿಂಬೇರ ಅನಾಚಾರಿಯ ಆರಾಧಿಸಿ, ಶಂಭುವಿನ ಸರಿಯೆಂದು ಅವರೊಳಗೆ ಹಲವರು ಕೊಂಬನೂದುವ, ಸೊಣಕನ ಕೊರಳಲ್ಲಿ ಬಾರ ಕವಡೆಯ ಕಟ್ಟಿಕೊಂಡು ನಾಯಾಗಿ ಬೊಗಳುವರು. ಕಂಬದ ಬೊಂಬೆಯ ಮಾಡಿ ಮೈಲಾರ ಭೈರವ ಆಯಿರ (?) ಧೂಳಕೇತನೆಂಬ ಕಾಳುದೈವವ ಊರೂರದಪ್ಪದೆ ತಿರಿದುತಿಂಬ ಡಂಭಕರ ಕೈಯಲ್ಲಿ ಉಪದೇಶವ ಕೊಂಡವರು, ಗುರುಲಿಂಗಜಂಗಮದ ಹೊಲಬನರಿಯದೆ ಭಂಗಿತರಾದರು. ಅಂಗದ ಮೇಲಣ ಸೂತಕ ಹಿಂಗದು. ಅನ್ಯದೈವದ ಜಾತ್ರೆಗೆ ಹೋಗಿ, ನಾಡನರಕದಲ್ಲಿ ಬೆರಣಿಯ ಮಾಡುವ ನಾನಾ ಜಾತಿಗಳು ಹರಕೆಯ ಹಿಂಗಿಸದೆ, ಗುರುಕಾರುಣ್ಯವ ಕೊಟ್ಟವಂಗೆ ಕುಂಭಿನಿಪಾತಕ ತಪ್ಪದೆಂದ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಅಯ್ಯಾ, ನಾವು ಪರಮವಿರಕ್ತರು, ಪಟ್ಟದೊಡೆಯರು, ಅತೀತ ಚರಮೂರ್ತಿಗಳೆಂದು ಶಂಖ ಗಿಳಿಲು ದಂಡಾಗ್ರವ ಪಿಡಿದು, ಕಾವಿ ಕಾಷಾಯಾಂಬರವ ಹೊದ್ದು, ಮಹಾಘನಲಿಂಗ ಚರಮೂರ್ತಿಗಳೆಂದು ಚೆನ್ನಾಗಿ ನುಡಿದುಕೊಂಬ ತೊನ್ನ ಹೊಲೆ ಮಾದಿಗರ ಪ್ರಸಂಗಕ್ಕೆ ಮನವೆಳಸದೆ, ಮುಖವೆತ್ತಿ ನೋಡದೆ, ಶಬ್ದಮುಗ್ಧನಾಗಿ ಸುಮ್ಮನೆ ಕುಳಿತಿರ್ದನು ಕಾಣಾ ನಿಮ್ಮ ಶರಣ. ಅದೇನು ಕಾರಣವೆಂದಡೆ: ತನ್ನ ತಾನಾರೆಂದರಿಯದೆ, ತನ್ನ ಇಷ್ಟ ಮಹಾಘನಲಿಂಗದ ಗೊತ್ತ ಮುಟ್ಟದೆ, ತನುಮನಧನವೆಂಬ ತ್ರಿವಿಧಪ್ರಸಾದವನರ್ಪಿಸಿ, ತ್ರಿವಿಧ ಪ್ರಸಾದವ ಗರ್ಭೀಕರಿಸಿಕೊಂಡ ಪ್ರಸನ್ನ ಪ್ರಸಾದವ ಸ್ವೀಕರಿಸಿ, ಪರತತ್ವ ಪ್ರಸಾದಮೂರ್ತಿ ತಾನಾಗಲರಿಯದೆ, ಉಚ್ಚಂಗಿ ದುರ್ಗಿಗೆ ಬಿಟ್ಟ ಪೋತರಾಜನಂತೆ ಮಾರು ಮಾರು ಜಡೆ ಮುಡಿ ಗಡ್ಡಗಳ ಬಿಟ್ಟುಕೊಂಡು, ಡೊಂಬ ಜಾತಿಕಾರರಂತೆ ವೇಷವ ತೊಟ್ಟು, ಸಂಸ್ಕøತಾದಿ ಪ್ರಕೃತಾಂತ್ಯಮಾದ ನಾನಾ ಶಾಸ್ತ್ರವ ಹೇಳಿ, ಸುಡುಗಾಡಸಿದ್ಧಯ್ಯಗಳಂತೆ ಕುಟಿಲ ಕುಹಕ ಯಂತ್ರ ತಂತ್ರಗಳ ಕಟ್ಟುತ, ಪುರಜನರ ಮೆಚ್ಚಿಸಬೇಕೆಂದು ಅಯ್ಯಾ, ನಾವು ಕೆರೆ ಬಾವಿ ಮಠಮಾನ್ಯ ಮದುವೆ ಮಾಂಗಲ್ಯ ದೀಕ್ಷಾಪಟ್ಟ ಪ್ರಯೋಜನ ಔತಣ ಅನ್ಯಕ್ಷೇತ್ರ ಅರವಟ್ಟಿಗೆ ದಾಸೋಹ ಪುರಾಣ ಪುಸ್ತಕ ಮಾಡಿಸಬೇಕೆಂದು ಗುರುಲಿಂಗಜಂಗಮಕ್ಕಲ್ಲದೆ ನಿರಾಭಾರಿ ವೀರಶೈವಕ್ಕೆ ಹೊರಗಾಗಿ, ನಾನಾ ದೇಶವ ತಿರುಗಿ, ಹುಸಿಯ ಬೊಗಳಿ, ವ್ಯಾಪಾರದ ಮರೆಯಿಂದ ನಡುವೂರ ಬೀದಿ ನಡುವೆ ಕುಳಿತು, ಪರರೊಡವೆಯ ಅಪಹರಿಸುವ ಸೆಟ್ಟಿ ಮುಂತಾದ ಸಮಸ್ತ ಕಳ್ಳರ ಮಕ್ಕಳ ಕಾಡಿ ಬೇಡಿ, ಅವರು ಕೊಟ್ಟರೆ ಹೊಗಳಿ, ಕೊಡದಿರ್ದಡೆ ಬೊಗಳಿ, ಆ ಭ್ರಷ್ಟ ಹೊಲೆ ಮಾದಿಗರು ಕೊಟ್ಟ ದ್ರವ್ಯಂಗಳ ಕೊಂಡುಬಂದು ಚೋರರೊಯ್ವರೆಂದು ಮಠದೊಳಗೆ ಮಡಗಿಕೊಂಡಂಥ ದುರ್ಗುಣ ದುರಾಚಾರಿಗಳ ಶ್ರೀಗುರು ಲಿಂಗ ಜಂಗಮವೆಂದು ಕರೆತಂದು, ತೀರ್ಥ ಪ್ರಸಾದವ ತೆಗೆದುಕೊಂಬವರಿಗೆ ಇಪ್ಪತ್ತೆಂಟುಕೋಟಿಯುಗ ಪರಿಯಂತರದಲ್ಲಿ ನರಕ ಕೊಂಡದಲ್ಲಿಕ್ಕುವ ಕಾಣಾ, ನಿಮ್ಮ ಶರಣ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
-->