ಅಥವಾ

ಒಟ್ಟು 11 ಕಡೆಗಳಲ್ಲಿ , 4 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊಟ್ಟೆ ಮೊಟ್ಟೆ ಪತ್ರೆಯ ತಂದು ಒಟ್ಟಿ, ಪೂಜಿಸಿದ[ಡೇ]ನು ಮನಶುದ್ಧವಿಲ್ಲದನ್ನಕ್ಕರ ? ಮನಮಗ್ನವಾಗಿ ಶಿವಧ್ಯಾನದಲ್ಲಿ ಕೂಡಿ, ಒಂದೇ ದಳವ ಧರಿಸಿದರೆ ಶಿವನು ಒಲಿಯನೆ? ಇಂತು ಪೂಜೆಯ ಮಾಡುವುದಕ್ಕಿಂತಲು ಅದೇ ತೊಪ್ಪಲನು ಕುದಿಸಿ ಪಾಕವ ಮಾಡಿದಲ್ಲಿ ಆ ಲಿಂಗವು ತೃಪ್ತಿಯಾಯಿತ್ತು. ಬರಿದೆ ಲಿಂಗವ ಪೂಜಿಸಿ ಜಂಗಮಕ್ಕೆ ಅನ್ನವ ಕೊಡದೆ, ಲಿಂಗದ ಮುಖವು ಜಂಗಮವು ಎಂದು ತಿಳಿಯದೆ, ತನು-ಮನ-ಧನವನು ಗುರು-ಲಿಂಗ-ಜಂಗಮಕ್ಕೆ ಸವೆಸದೆ, ಬಾಗಿಲಿಗೆ ಕಾವಲಿಕ್ಕಿ, ಹೆಂಡಿರು ಮಕ್ಕಳು ಕೂಡಿಕೊಂಡು, ತನ್ನ ತಾನೇ ತಿಂಬುವಂಥ ನೀಚ ಹೊಲೆಯರ ಮೂಗ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ, ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಗುರುಕಾರುಣ್ಯದ ಮಹಾಸಂಪಾದನೆಯಲ್ಲಿ ಅತ್ಯಂತ ವಿಶೇಷ ಸ್ಥಲವೆ ಗಳವು. ಮಹಾಲಿಂಗ ಸಂಪಾದನೆಯಲ್ಲಿ, ತ್ರಿವಿಧ ಸಂಪಾದನೆಯಲ್ಲಿ, ಶರೀರಾರ್ಥ ಮಹಾರ್ಥದಲ್ಲಿ, ನಾದಬಿಂದು ಸಂಪಾದನೆಯಲ್ಲಿ, ಮಾರ್ಗಕ್ರಿಯಾ ಸಂಪಾದನೆಯಲ್ಲಿ, ಭಕ್ತಿ ಸಂಪಾದನೆಯಲ್ಲಿ, ಭಾವ ನಿಷ್ಠೆಯಲ್ಲಿ, ಅರ್ಪಿತ ನಿಷ್ಠೆಯಲ್ಲಿ ಆ ಗಳವೆ ಘನಸ್ಥಳ. ಅತ್ಯಂತ ವಿಶೇಷಸ್ಥಳವಾಗಿ ಗಳದಲ್ಲಿ ಧರಿಸಿದರೆ ಕೂಡಲಚೆನ್ನಸಂಗಯ್ಯನ[ಲ್ಲಿ ಇದೇ ಕ್ರಮ].
--------------
ಚನ್ನಬಸವಣ್ಣ
ಕೂಡಿದ ಧನವೆಲ್ಲವನು ಗುರುಲಿಂಗಜಂಗಮಕ್ಕೆ ವಂಚನೆಯ ಮಾಡಿ ಒಳಗಿಟ್ಟುಕೊಂಡು, ನೆಲನ ತೋಡಿ ಬಚ್ಚಿಟ್ಟುಕೊಂಡು. ಹಲವು ತೆರದ ಆಭರಣಂಗಳ ಮಾಡಿಸಿ, ಕರ ಚರಣ ಉರ ಕರ್ಣಂಗಳೊಳಗಿಟ್ಟುಕೊಂಡು, ಮತ್ತಿಷ್ಟು ಬದುಕಾಗಲೆಂದು ತನ್ನ ಕೈಯೊಳಗಿನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡುವ ಲಿಂಗಪೂಜಕನ ಪರಿ ಎಂತೆಂದೊಡೆ; ಆ ಭಕ್ತನು ಪಂಚಾಬ್ಥಿಷೇಕದಿಂದ ಲಿಂಗಕ್ಕೆ ಮಜ್ಜನವ ನೀಡಿದಡೆ ಲಿಂಗದ ಚಿತ್ತದಲ್ಲಿ ಸುಣ್ಣ ನೀರನೆತ್ತಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ವಿಭೂತಿಯ ಧರಿಸಿದಡೆ ಲಿಂಗದ ಚಿತ್ತದಲ್ಲಿ ಬೂದಿಯ ಬೊಕ್ಕಣವ ಕಟ್ಟಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಗಂಧವ ಧರಿಸಿದರೆ ಲಿಂಗದ ಚಿತ್ತದಲ್ಲಿ ಚಂಡಿಟ್ಟು ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಅಕ್ಷತೆಯನೇರಿಸಿದರೆ ಲಿಂಗದ ಚಿತ್ತದಲ್ಲಿ ಕಲ್ಲು ಹೊರಿಸಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ಪುಷ್ಪವ ಧರಿಸಿದರೆ ಲಿಂಗದ ಚಿತ್ತದಲ್ಲಿ ಬೆನ್ನ ಮೇಲೆ ಹೇರು ಹೊರಿಸಿದಂತಾಯಿತ್ತಯ್ಯಾ ! ಆ ಭಕ್ತನು ಧೂಪವ ಬೀಸಿದರೆ ಲಿಂಗದ ಚಿತ್ತದಲ್ಲಿ ಅರವನಿಕ್ಕಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ದೀಪಾರತಿಯನೆತ್ತಿದರೆ ಲಿಂಗದ ಚಿತ್ತದಲ್ಲಿ ಪಂಜುಗಳ್ಳರು ಬಂದು ಮೋರೆಯ ಸುಟ್ಟು ಬಾ[ದ್ಥಿ]ಸಿದಂತಾಯಿತ್ತಯ್ಯಾ ! ಆ ಭಕ್ತನು ಸ್ತೋತ್ರಮಂತ್ರವ ನುಡಿದರೆ ಲಿಂಗದ ಚಿತ್ತದಲ್ಲಿ ಕರ್ಣದೊಳಗೆ ತೊಣಚಿ ಹೊಕ್ಕು ಗೋಳಿಟ್ಟು ಬಾದ್ಥಿಸಿದಂತಾಯಿತ್ತಯ್ಯಾ ! ಇಂತಪ್ಪ ಲಿಂಗಬಾಧಕರನು ಲಿಂಗಪೂಜಕರೆನಬಹುದೆ ? ಆತನ ಅಂಗಳವ ಮೆಟ್ಟಬಹುದೆ ? ಇದರ ಇಂಗಿತವ ನಿಜಭಾವವುಳ್ಳ ಶರಣರು ನೀವೇ ತಿಳಿದು ನೋಡಿರೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಿರ್ಮಲವಾದ ಕುಸುಮವನೆತ್ತಿ ಧರಿಸುವರು. ಸ್ಥಾವರ ಜಂಗಮದ ಪೂಜೆಗೆ ಸಕಲ ಭಕ್ತರುಗಳು ನಲುವಿಂದೆ ಮಲದಲ್ಲಿ ಬಿದ್ದ ಕುಸುಮವನು ಹೇಸಿ ನೋಡರು. ಸದುಹೃದಯನುಳ್ಳ ಭಕ್ತನ ಕರಣೇಂದ್ರಿಯವಿಷಯವೆಂಬ ಚಿತ್ಕುಸುಮವನೆತ್ತಿ, ಸತ್ತುಚಿತ್ತಾನಂದಲಿಂಗಕ್ಕೆ ಧರಿಸಿದರೆ ಪರಿಣಾಮವಾಗುವದು. ಮಲತ್ರಯದಲ್ಲಿ ಬಿದ್ದ ಮನುಜನ ಕರಣೇಂದ್ರಿಯ ವಿಷಯಗೂಡಿ ಮಾಡುವ ಪೂಜೆಗೆ ದೂರದಿಂದತ್ತ ನಿಲುಕದಿರ್ದ ನಮ್ಮ ಗುರು ನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಮಿ ಮಜ್ಜನಕ್ಕೆ ನೀಡಿದರೆ ರಕ್ತದ ಧಾರೆ. ಕ್ರೋಧಿ ಪುಷ್ಪವನರ್ಪಿಸಿದರೆ ಕತ್ತಿಯ ಮೊನೆ. ಲೋಭಿ ರುದ್ರಾಕ್ಷೆಯ ಧರಿಸಿದರೆ ಗಿರಿಕೆ. ಮೋಹಿ ವಿಭೂತಿಯ ಧರಿಸಿದರೆ ಸುಣ್ಣದ ಗರ್ತ ಮದಿ ಲಿಂಗವ ಕಟ್ಟಿದರೆ ಎತ್ತುಗಲ್ಲು. ಮತ್ಸರಿ ಪಾದೋದಕ ಪ್ರಸಾದವ ಕೊಂಡರೆ ಕಾಳಕೂಟದ ವಿಷ. ಕೂಡಲಚೆನ್ನಸಂಗಮದೇವರಲ್ಲಿ ಮದಮತ್ಸರವ ಬಿಟ್ಟವರು ಅಪೂರ್ವ
--------------
ಚನ್ನಬಸವಣ್ಣ
ಜಾತಿ ಧರ್ಮ ನೀತಿಯ ಬಿಟ್ಟು ವಿಜಾತಿಗಳ ಎಂಜಲುತಿಂಬ ಪಾಪಕರ್ಮಿಗಳಾದಡಾಗಲಿ, ಸರ್ವಪಾಪವ ಬಿಟ್ಟಾತನಾದಡಾಗಲಿ, ರುದ್ರಾಕ್ಷಿಮಾಲೆಯ ಕೊರಳಲ್ಲಿ ಧರಿಸಿದರೆ ಪರಮಪವಿತ್ರನೆನಿಸಿ ಹರನ ಕೈಲಾಸದಲ್ಲಿಪ್ಪನು ನೋಡಾ. ಅದೆಂತೆಂದೊಡೆ :ಸ್ಕಂದಪುರಾಣೇ- ``ರುದ್ರಾಕ್ಷಮಾಲಿಕಾಂ ಕಂಠೇ ಧಾರಯೇತ್ ಭಕ್ತಿವರ್ಧಿತಃ | ಪಾಪಕರ್ಮಾಪಿ ಯೋ ಮರ್ತ್ಯೋ ರುದ್ರಲೋಕೇ ಮಹೀಯತೇ || ಸೋಚ್ಛಿಷ್ಟೋ ವಾಪಿ ಕರ್ಮಸ್ಥೋ ಯುಕ್ತೋ ವಾ ಸರ್ವಪಾತಕೈ ಃ | ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||'' ಎಂದುದಾಗಿ, ಇಂತಪ್ಪ ರುದ್ರಾಕ್ಷಿಯು ನೀನೆ ಅಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅನಾದಿ ನಿರವಯಲಿಂಗದಲ್ಲಡಗಿರ್ದ ಅವಿರಳ ಪ್ರಕಾಶವೇ ಬಹಿರ್ಗತಿಯ ಬಂದು ನಿಂದಲ್ಲಿ ಚಿತ್ತೆಂದೆನಿಸಿತ್ತು. ಆ ಚಿತ್ತಿನಿಂದ ಚಿನ್ನಾದ, ಬಿದ್ಬಿಂದು, ಚಿತ್ಕಲೆಯೆಂಬ ತ್ರಯಾಕ್ಷರಗಳುದಯವಾದವು. ಆ ತ್ರಿವಿಧಪ್ರಣವವೇ ಚಿದ್ಭಸ್ತವ. ಆ ಚಿದ್ಭಸ್ತವವೆಂಬ ಚಿದ್ಭಸ್ಮವ ಧರಿಸಿದರೆ ಘನ ನಿರಂಜನ ಚನ್ನಬಸವಲಿಂಗವಾಗಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೆಲ ಗಗನಕ್ಕೆ ನಿಲುಕದ ಗಂಭೀರ ಮಹಾಘನ ಪರಬ್ರಹ್ಮಮೂರುತಿ ಕರಸ್ಥಲದಲ್ಲಿ ಬಂದಿರಲು, ಭವಿಬೆರಸಿದುದಕವ ಮಜ್ಜನಕ್ಕೆರೆದರೆ ಗುರುದ್ರೋಹ. ಭವಿಬೆಳೆದ ಪತ್ರಿ ಪುಷ್ಪಂಗಳ ಧರಿಸಿದರೆ ಲಿಂಗದ್ರೋಹ. ಭವಿಬೆರಸಿದ ಗಂಧಾಕ್ಷತೆ ಪರಿಮಳದ್ರವ್ಯಂಗಳ ಧರಿಸಿದರೆ ಜಂಗಮದ್ರೋಹ. ಭವಿಬೆರಸಿದ ಪಾಕಪದಾರ್ಥವನರ್ಪಿಸಿದರೆ ಪ್ರಸಾದದ್ರೋಹ. ಭವಿಸೋಂಕಿದ ಹಾಲು ತುಪ್ಪ ಸಕ್ಕರೆ ಮಧು ಮೊಸರು ಮೊದಲಾದವನರ್ಪಿದರೆ ಪಾದೋದಕದ್ರೋಹ. ಇಂತು ಪಂಚವಿಧವನರಿಯದೆ ಪಂಚಮಹಾಪಾತಕಕ್ಕಿಳಿವ ಪಾಶಬದ್ಧರಿಗೆ ದೂರವಾಗಿಪ್ಪ ನಮ್ಮ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
-->