ಅಥವಾ

ಒಟ್ಟು 12 ಕಡೆಗಳಲ್ಲಿ , 8 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿಯೆಂಬುದು ಬಾರಿ ಬಾಯ ಧಾರೆ, ಅದೆಂತೆಂದಡೆ: ಕಂಗಳಿನ ವರಿಯದಂತೆ ಸುತ್ತಲರಿದು; ಮಧ್ಯಾಹ್ನದ ಆದಿತ್ಯನಂತೆ ನೋಡಲರಿದು, ಪಾಪಿಯ ಕೂಸಿನಂತೆ ಎತ್ತಲರಿದು, ಒಳು(ವಾಳಿರಿ)ಗುದುರಿಯಂತೆ ಒ(ಹ ರಿ)ತ್ತಲರಿದು, ಸಜ್ಜನವುಳ್ಳ ಸತಿಯಂತೆ ಉಳಿಯಲರಿದು, ಪಾದರಸದಂತೆ ಹಿಡಿಯಲರಿದು, ಮೊದಲುಗೆಟ್ಟ ಹರದನಂತೆ ಕೆತ್ತಿಕೊಂಡಿಹುದು, ಭಕ್ತಿಯ ಮುಖ ಎತ್ತಲೆಂದರಿಯಬಾರದು. ಇದು ಕಾರಣ_ಕೂಡಲಚೆನ್ನಸಂಗಯ್ಯ ಹಿಡಿಯಬಲ್ಲವರಿಗಳವಟ್ಟಿತ್ತು ಹೊಡೆ(ಹಿಡಿರಿ)ಯಲರಿಯದವರಿಗೆ ವಿಗುರ್ಬಣೆಯಾಗಿತ್ತು.
--------------
ಚನ್ನಬಸವಣ್ಣ
ಸರ್ವಸುಯಿಧಾನಿ ಎಂದೆನಿಸಿಕೊಳ್ಳಬಲ್ಲಡೆ, ಬಂದ ಕಾಮ ಕ್ರೋಧವ ಲಿಂಗಕ್ಕರ್ಪಿತವ ಮಾಡಬೇಕು. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನ ಹೊರಳಿ ಹೋಗಬಾರದು! ಶಿವಾಚಾರದ ಧಾರೆ ಮೇರೆ ಮುಟ್ಟದ ಮುನ್ನ, ಅರ್ಪಿತವ ಮಾಡಬಲ್ಲಡೆ; ಭಿನ್ನಭಾವವೆಲ್ಲಿಯದೊ_ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಶಿವಾಚಾರವೆಂಬುದೊಂದು ಬಾಳಬಾಯ ಧಾರೆ; ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು, ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು. ಬಿಚ್ಚಿ ಬೇರಾದಡೆ ಮೆಚ್ಚ ನಮ್ಮ ಕೂಡಲಸಂಗಮದೇವ
--------------
ಬಸವಣ್ಣ
ಕಾಯದ ಕಳವಳವ ಗೆಲಿದಡೇನೊ, ಮಾಯದ ತಲೆಯನರಿಯದನ್ನಕ್ಕರ ? ಮಾಯೆಯ ತಲೆಯನರಿದಡೇನೊ, ಜ್ಞಾನದ ನೆಲೆಯನರಿಯದನ್ನಕ್ಕರ ? ಜ್ಞಾನದ ನೆಲೆಯನರಿದಡೇನೊ, ತಾನು ತಾನಾಗದನ್ನಕ್ಕರ ? ತಾನು ತಾನಾದ ಶರಣರ ನಿಲವಿಂಗೆ ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಆಳುತನದ ಮಾತನಾಡದಿರೆಲವೊ ಮೇಲೆ ಕಾರ್ಯದಿಮ್ಮಿತ್ತಣ್ಣಾ. ಅಲಗಿನ ಮೊನೆಯ ಧಾರೆ ಮಿಂಚುವಾಗ ಕೊಡದೆ ಕೊಂಕದೆ ನಿಲಬೇಕಯ್ಯ. ಬಂಟ ಬೆಟ್ಟ ಭಕ್ತಿಯೊಂದೆ ಕಂಡಯ್ಯ. ಚೆನ್ನಮಲ್ಲಿಕಾರ್ಜುನನಂತಲ್ಲದೊಲ್ಲ.
--------------
ಅಕ್ಕಮಹಾದೇವಿ
ಕಾಮಿ ಮಜ್ಜನಕ್ಕೆ ನೀಡಿದರೆ ರಕ್ತದ ಧಾರೆ. ಕ್ರೋಧಿ ಪುಷ್ಪವನರ್ಪಿಸಿದರೆ ಕತ್ತಿಯ ಮೊನೆ. ಲೋಭಿ ರುದ್ರಾಕ್ಷೆಯ ಧರಿಸಿದರೆ ಗಿರಿಕೆ. ಮೋಹಿ ವಿಭೂತಿಯ ಧರಿಸಿದರೆ ಸುಣ್ಣದ ಗರ್ತ ಮದಿ ಲಿಂಗವ ಕಟ್ಟಿದರೆ ಎತ್ತುಗಲ್ಲು. ಮತ್ಸರಿ ಪಾದೋದಕ ಪ್ರಸಾದವ ಕೊಂಡರೆ ಕಾಳಕೂಟದ ವಿಷ. ಕೂಡಲಚೆನ್ನಸಂಗಮದೇವರಲ್ಲಿ ಮದಮತ್ಸರವ ಬಿಟ್ಟವರು ಅಪೂರ್ವ
--------------
ಚನ್ನಬಸವಣ್ಣ
ಧಾರೆ ಮೊನೆ ಕಟ್ಟಿದಂತೆ, ಮೀರಿ ತಾಗಬಲ್ಲುದೆ ಅಸಿಕೂರಲಗು ? ನಿಪುಣ ಕ್ರೀಭಾವ ಶುದ್ಧವಾಗಿಯಿದ್ದವಂಗೆ ಬೇರೆ ಇಂದ್ರಿಯಂಗಳು ಗತಿಗೆಡಿಸಬಲ್ಲವೆ ? ಅವು, ಅರ್ಕೇಶ್ವರಲಿಂಗನ ಗೊತ್ತ ಮುಟ್ಟಲರಿಯವು.
--------------
ಮಧುವಯ್ಯ
ಸುರಗಿಯಲ್ಲಿ ತಟ್ಟುಚ್ಚಿರಿದ ಮತ್ತೆ ಧಾರೆ ಮೊನೆತಾಗಿತಲ್ಲಾ ಎಂಬೀ ಹೆಡ್ಡರ ಮಾತ ಕೇಳಲಾಗದು. ಅರಿವ ಗ್ರಹಿಸಿದ ಚಿತ್ತಕ್ಕೆ ಮರವೆಗೆ ತೆರನುಂಟೆ? ನಿಷೆ*ಯಲ್ಲಿ ನಿಷೆ* ಹುಟ್ಟಿದ ಮತ್ತೆ ನಿಷೆ*ಯಾಚರಣೆ ಘಟ್ಟಿಸದು. ಎಲ್ಲಕ್ಕೆ ಶರಣೆಂದು ಎಲ್ಲರಾಲಯದಲ್ಲಿ ಭಿಕ್ಷವ ತೆಗೆದುಕೊಂಡು, ಸಲ್ಲಲಿತ ಭಾವದಲ್ಲಿಪ್ಪ ಶರಣಂಗೆ ಗೋಣಿಯ ಮರೆಯ ಸಿಕ್ಕುದೊಡಕಿಲ್ಲ. ಕೇಟೇಶ್ವರಲಿಂಗವು ತಾನು ತಾನಾದ ಶರಣ.
--------------
ಬೊಕ್ಕಸದ ಚಿಕ್ಕಣ್ಣ
ಕೋಪಿ ಮಜ್ಜನಕ್ಕೆರೆದಡೆ ರಕ್ತದ ಧಾರೆ, ಪಾಪಿ ಹೂವನೇರಿಸಿದಡೆ ಮಸೆದಡ್ಡಾಯುಧದ ಗಾಯ. ಕೂಪವರನಾರನೂ ಕಾಣೆನು ಮಾದಾರ ಚೆನ್ನಯ್ಯನಲ್ಲದೆ, ಕೂಪವರನಾರನೂ ಕಾಣೆನು ಡೋಹರ ಕಕ್ಕಯ್ಯನಲ್ಲದೆ, ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ. ನಿನ್ನಪತ್ತಿಗರಿವರಯ್ಯಾ, ಕೂಡಲಸಂಗಯ್ಯಾ.
--------------
ಬಸವಣ್ಣ
ಶರಣ ಸಂಜೆ ಮುಂಜಾವದ ಕತ್ತಲೆಯನಳಿದುಳಿದನಾಗಿ ಕಾಲೋಚಿತವನರಿದು ಕೊಂಬ. ಗೋಣಿಯ ತೆರೆಯ ಹರಿದು ವಂಕ ಮೂರ ಹರಿದು ದಾಂಟಿ, ಜಾತಿ-ವಿಜಾತಿಯನರಿದು, ಕರಣೇಂದ್ರಿಯಂಗಳಲ್ಲಾಳದೆ, ತೆರಣಿಯ ಕರಣವನರಿತು ಗೂಡನಿಕ್ಕಿರೆ, ಧಾರೆ ಸುರಿವುದು ಕಂಡು ವೀರಧಾರುಣಿಯ ಮೇಲೆ ಎರೆದುದ ನಿ............ಯ ಬೆಂಬಳಿಯನರಿತು ಮುಸುಕಿಕ್ಕಿಕೊಂಡು ಭಿಕ್ಷಕ್ಕೆ ಹೋಗಿ [ಕೇಳಲು] ಚಾಟಿ ಹರಿಯಿತ್ತು ಕೇಟೇಶ್ವರಲಿಂಗದಲ್ಲಿ.
--------------
ಬೊಕ್ಕಸದ ಚಿಕ್ಕಣ್ಣ
ಎವೆ ಎವೆ ಹಳಚದೆ ಮೊಲೆಯ ಮೇಲಣ ಗಾಯ ಬಿಳಿಯ ರಕ್ತದ ಧಾರೆ ಸುರಿದಲ್ಲಿ ಸಸಿವಸರೆ ಬಸವಂತವೆಸೆದನವ್ವಾ. ಅಪ್ಪಿನ ಸೋಂಕಿನ ಸುಖ ಅಚ್ಚುಗವಳಿದುಳಿದಡೆ ಮಹಾಲಿಂಗ ಗಜೇಶ್ವರದೇವ ನಿರಾಸನಾಗಿರ್ದನವ್ವಾ.
--------------
ಗಜೇಶ ಮಸಣಯ್ಯ
ಮೋಟಮರದ ಹಾಟ ಕುಡಿದವರು ದೊನ್ನಿ ತುಪ್ಪವನುಣಲಿಲ್ಲ. ಉಂಡವರು ಹಾಟ ಧಾರೆ ಹನಿಯ ಕಾಣದೆ ತಲೆಕೆಳಗಾಗಿ ಕಾಲುಮೇಲಾಗಿ ನಡೆವರು. ಹಾಟ ಕುಡಿದು ಸತ್ತವರು ಜೀರರ ಸಂಕಣ್ಣನ ಕುಲದವರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->