ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಭಕ್ತನ ಕಂಡಲ್ಲಿ ಪಾಪ ಕೇಡುವುದು ಉಪಪಾತಕ ಕೋಟೀನಾಂ ಬ್ರಹ್ಮಹತ್ಯಶತಾನಿ ಚ ದಹತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಂ ಎಂದು, ಪ್ರಿಯಸಂಭಾಷಣೆಯಿಂದ ಕಾಮಿತ ಫಲವಪ್ಪುದು. ಆ ಪ್ರಸಾದಮಹಿಮನ ಪ್ರಸಾದದಿಂದ ಕೇವಲ ಮುಕ್ತಿಯಪ್ಪುದು. ಇದು ಸತ್ಯ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಂಗಮಕ್ಕೆ ಮಾಡಿ ಗತಿಯ ಪಡೆದೆಹೆನೆಂಬ ಬೆವಹಾರದ ಭಕ್ತರು ನೀವು ಕೇಳಿರಯ್ಯಾ. ಜಂಗಮಕ್ಕೆ ಮಾಡಿ, ಗತಿಯ ಪಡೆದೆಹೆನೆಂಬ, ಭಕ್ತಿವ್ಯರ್ಥರು ನೀವು ಕೇಳಿರಯ್ಯಾ. ಅಗ್ನಿಮುಖದಲ್ಲಿ ಪಾಕವಾದ ಸಸಿ ತೆನೆಯಪ್ಪುದೆ ಶಶಿಧರಂಗೆ ಮಾಡಿದಡೆ ಫಲವಪ್ಪುದು, ಆ ಫಲದಾಯಕನೆ ಮರಳಿ ಭವಕ್ಕೆ ಬಹನು. ಜಂಗಮಕ್ಕೆ ಮಾಡಿದಡೆ ಫಲವಿಲ್ಲ, ಮರಳಿ ಭವವಿಲ್ಲ. ಕಿಚ್ಚಿನ ಕಣಜದಲ್ಲಿ ಬೀಜವ ತುಂಬಿ ಬಿತ್ತುವ ದಿನಕ್ಕರೆಸಿದಡುಂಟೆ, ಕೂಡಲಸಂಗಮದೇವಾ
--------------
ಬಸವಣ್ಣ
ಹರ ತ್ರಿಪುರದಹನದಲ್ಲಿ [ಈಕ್ಷಿಸಿ] ನೋಡಲಾಕ್ಷಣ ನಯನಜಲದೊರೆದು ಉದಯವಾದ ಶ್ರೀರುದ್ರಾಕ್ಷಿ. ಪರಮ ಮುನಿಗಳಿಗೆ ಮೋಕ್ಷಾರ್ಥವನೀವ ಶ್ರೀರುದ್ರಾಕ್ಷಿ. ಧರೆಯ ಸದ್ಭಕ್ತರುಗಳ ಪಾಲನಮಾಡಿ ತೋರುವ ಶ್ರೀರುದ್ರಾಕ್ಷಿ, ಕರ್ಮಶರಧಿಯ ನಿಟ್ಟೊರಸುವುದಕ್ಕೆ ಶ್ರೀರುದ್ರಾಕ್ಷಿ. ದರುಶನವ ಮಾಡಿದರೆ ಲಕ್ಷಪುಣ್ಯ, ಸ್ಪರುಶನವ ಮಾಡಿದರೆ ಕೋಟಿಫಲಂ, ಧರಿಸಿದಡಂ ದಶಶತಕೋಟಿ ಫಲಂ ಇನಿತು ಫಲವಪ್ಪುದು ಶ್ರೀ ರುದ್ರಾಕ್ಷಿಯಿಂ. ಸಾಕ್ಷಿ : ``ಲಕ್ಷಂ ತದ್ದರ್ಶನಾತ್ಪುಣ್ಯಂ ಕೋಟಿಃ ಸಂಸ್ಪರ್ಶನಾದಪಿ | ದಶಕೋಟಿ ಶತಂ ಪುಣ್ಯಂ ಧಾರಣಾತ್ ಲಭತೇ ನರಃ ||'' ಹೀಗೆನಿಸುವ ರುದ್ರಾಕ್ಷಿಯ ಧರಿಸಿ, ರುದ್ರಪದವಿಯನೈದುವುದು ತಪ್ಪದು ನೋಡಾ ! ಅದು ಹೇಗೆಂದರೆ :ಆವನೊಬ್ಬನು ಕೊರಳಲ್ಲಿ ರುದ್ರಾಕ್ಷಿಯ ಧರಿಸೆ ಅವನ ಕುಲಕೋಟಿ ಸಹವಾಗಿ ಶಿವಲೋಕವನೈದರೆ ? ಅದಕೆ ಶ್ರುತಿ ದೃಷ್ಟವುಂಟೇಯೆಂದರೆ ಉಂಟು. ಸಾಕ್ಷಿ : ``ರುದ್ರಾಕ್ಷಾಶ್ರಿತಕಂಠಶ್ಚ ಗೃಹೇ ತಿಷ*ತಿ ಯೋ ನರಃ | ಕುಲೈಕಂ ವಿಂಶಯುಕ್ತಂ ಚ ಶಿವಲೋಕೇ ಮಹೀಯತೇ ||'' ಎಂದೆನಿಸುವ ರುದ್ರಾಕ್ಷಿಯ ಮೂಲ ಬ್ರಹ್ಮನೆಂದಿತ್ತು ಪೌರಾಣ. ರುದ್ರಾಕ್ಷಿಯ ಗಳ ವಿಷ್ಣುವೆಂದಿತ್ತು ಪೌರಾಣ. ರುದ್ರಾಕ್ಷಿಯ ಮುಖ ಸದಾಶಿವನೆಂದಿತ್ತು ಪೌರಾಣ. ರುದ್ರಾಕ್ಷಿಯ ಸರ್ವಾಂಗವೆಲ್ಲ ಸರ್ವದೇವರೆಂದಿತ್ತು ಪೌರಾಣ. ಸಾಕ್ಷಿ :``ರುದ್ರಾಕ್ಷಿಮೂಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ | ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||'' ಎಂದೆನಿಸುವ ರುದ್ರಾಕ್ಷಿಯ ಧರಿಸಿ ರುದ್ರನಾಗಿದ್ದೆನು. `ಅತಏವ ರುದ್ರಾಕ್ಷಿಧಾರಣಂ ರುದ್ರಾ'ಯೆಂದಿತ್ತು ವೇದ. ರುದ್ರಾಕ್ಷಿಯ ಧರಿಸಿ ಶುದ್ಧಚಿದ್ರೂಪನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->