ಅಥವಾ

ಒಟ್ಟು 263 ಕಡೆಗಳಲ್ಲಿ , 55 ವಚನಕಾರರು , 188 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು, ಆ ಬಾವಿಯೊಳಗೆ ಕಬ್ಬುನದ ಅದಿರು ಹುಟ್ಟಿ ಸಿದ್ಧರಸವ ನುಂಗಿತ್ತು. ಇದ್ದವನ ಸುದ್ದಿಯ ಸತ್ತವ ಹೇಳಿ, ಕಾಣದವ ಕೇಳಿ ಹೋದ, ಸದಾಶಿವಮೂರ್ತಿಲಿಂಗ ಬಚ್ಚಬರಿಯ ಬಯಲು.
--------------
ಅರಿವಿನ ಮಾರಿತಂದೆ
ಕರ್ಮ ನಾಸ್ತಿ ಎಂಬೆ, ಅಸ್ತಿ ನಾಸ್ತಿ (ಅನಾಸ್ತಿ ?) ಎಂಬೆ. ಜಾÕನ [ದ] ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ. ಸಂಗಡ ಸಹಿತ ಕರಸ್ಥಲಕ್ಕೆ ಬಂದು, ನೀನು ಬಯಲಾಗೆಯಲ್ಲಾ, ಎನ್ನನೂ ಬಯಲು ಮಾಡೆ_ಗುಹೇಶ್ವರಾ,
--------------
ಅಲ್ಲಮಪ್ರಭುದೇವರು
ಗಾಳಿ ಗಂಧವನಪ್ಪಿದಂತೆ, ಬಯಲು ಬಯಲನಪ್ಪಿದಂತೆ, ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ, ಶರಣ ಲಿಂಗವನಪ್ಪಿ, ಮಹಾಲಿಂಗವೇ ತಾನು ತಾನಾಗಿ, ನಿರ್ವಯಲಾದನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬ್ರಹ್ಮಾಂಡದ ಬಯಲ ಪಸರಿಸಿ, ಹಿಡಿವರೆ ಬಯಲಾವುದುಂಟು ಹೇಳಿರಣ್ಣಾ ? ಕಂಗಳ ಮುಂದಣ ಕತ್ತಲೆ ಹರಿವುದಕ್ಕೆ ಜ್ಯೋತಿ ಆವುದುಂಟು ಹೇಳಿರಣ್ಣಾ ? ಇಂಗಿತವನರಿದ ಬಳಿಕ, ತ್ರಿವಿಧಕ್ಕೆ ತ್ರಿವಿಧವನಿತ್ತು ತ್ರಿವಿಧವನರಿದು, ತ್ರಿವಿಧವ ಮರೆದು, ಕಲಿಯುಗದ ಕತ್ತಲೆಯ ದಾಂಟಿ, ತನ್ನ ಭವವ ದಾಂಟಿದವಂಗೆ, ಬ್ರಹ್ಮಾಂಡದ ಬಯಲು ಕೈವಶವಾಯಿತ್ತು. ಕಂಗಳ ಮುಂದಣ ಕತ್ತಲೆ ಹರಿದುಹೋಯಿತ್ತು, ನಿಮ್ಮ ಸಂಗಸುಖದೊಳಗಿಪ್ಪ ಲಿಂಗೈಕ್ಯಂಗೆ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯ ಪಂಚತತ್ವಂಗಳ ಪಡೆವ ತತ್ವ ಪ್ರತ್ಯಕ್ಷವಾಗದ ಮುನ್ನ, ಪದ್ಮಜಾಂಡವ ಧರಿಸಿಪ್ಪ ಕಮಠ-ದಿಕ್ಕರಿಗಳಿಲ್ಲದ ಮುನ್ನ, ನಿರ್ಮಲಾಕಾಶವೇ ಸಾಕಾರವಾಗಿ ನಿರಂಜನವೆಂಬ ಪ್ರಣವವಾಯಿತ್ತಯ್ಯ ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ಹ್ರೂಂಕಾರ ಮಂಟಪದಲ್ಲಿ ಮೂರ್ತಿಗೊಂಡಿತಯ್ಯ. ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ತನ್ನ ನಿರಂಜನ ಶಕ್ತಿಯ ನಸುನೆನಹಿಂದ ಹಂಕಾರ ಚಕ್ಷುವೆಂಬ ಕುಹರಿಯಲ್ಲಿ ಶುದ್ಧಪ್ರಸಾದವೆಂಬ ಮೊಳೆದೋರಿತ್ತಯ್ಯ. ಆ ಶುದ್ಧ ಪ್ರಸಾದವೆಂಬ ಮೊಳೆ ತನ್ನ ಶೂನ್ಯಶಕ್ತಿಯ ಸೆಜ್ಜೆಯಿಂದ ಕರ್ಣಿಕಾಪ್ರಕಾಶ ಪಂಚನಾದವನುಳ್ಳ ಷೋಡಶ ಕಲಾಪುಂಜರಂಜಿತವಪ್ಪ ಹನ್ನೊಂದನೂರುದಳದ ಪತ್ರದಲ್ಲಿ ಪ್ರಣವಚಿತ್ರವೊಪ್ಪಿತ್ತಿಪ್ಪ ಹ್ರೀಂಕಾರ ಸಿಂಹಾಸನದ ಮೇಲೆ ಸಿದ್ಧಪ್ರಸಾದವೆಂಬ ಎಳವೆರೆ ತಳಿರಾಯಿತ್ತಯ್ಯ. ಆ ಸಿದ್ಧಪ್ರಸಾದವೆಂಬ ಎಳವೆರೆ ತನ್ನ ಶಾಂತಶಕ್ತಿಯ ಚಲನೆಯಿಂದ ಮೂರುಬಟ್ಟೆಯ ಮೇಲಿಪ್ಪ ಎರಡುಮಂಟಪದ ಮಧ್ಯದಲ್ಲಿ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ಬೀಗಿ ಬೆಳೆಯಿತ್ತಯ್ಯ. ಆ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ತನ್ನ ಚಿಚ್ಛಕ್ತಿಯ ಲೀಲಾವಿನೋದದಿಂದ ಪಂಚಶಕ್ತಿಗಳೆಂಬ ನಾಲ್ಕೊಂದು ಹೂವಾಯಿತು. ಆ ಹೂಗಳ ಮಹಾಕೂಟದಿಂದ ಪಂಚಲಿಂಗಗಳೆಂಬ ಪಂಚಪ್ರಕಾರದ ಮೂರೆರಡು ಹಣ್ಣಾಯಿತು. ಆ ಹಣ್ಣುಗಳ ಆದ್ಯಂತಮಂ ಪಿಡಿದು ಸದ್ಯೋನ್ಮುಕ್ತಿಯಾಗಬೇಕೆಂದು ಸದಾಕಾಲದಲ್ಲಿ ಬಯಸುತ್ತಿಪ್ಪ ಮಹಾಶಿವಶರಣನು ತಿಳಿದು ನೋಡಿ ಕಂಡು ಆರುನೆಲೆಯ ನಿಚ್ಚಣಿಗೆಯ ಆ ತರುಲತೆಗೆ ಸೇರಿಸಿ ಜ್ಞಾನ ಕ್ರೀಗಳೆಂಬ ದೃಢದಿಂದೇರಿ ನಾಲ್ಕೆಲೆಯ ಪೀತವರ್ಣದ ಹಣ್ಣ ಸುಚಿತ್ತವೆಂಬ ಹಸ್ತದಲ್ಲಿ ಪಿಡಿದು ಆರೆಲೆಯ ನೀಲವರ್ಣದ ಹಣ್ಣ ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದು ಹತ್ತೆಲೆಯ ಸ್ಫಟಿಕವರ್ಣದ ಹಣ್ಣ ನಿರಹಂಕಾರವೆಂಬ ಹಸ್ತದಲ್ಲಿ ಪಿಡಿದು ಹನ್ನೆರೆಡೆಲೆಯ ಸುವರ್ಣವರ್ಣದ ಹಣ್ಣ ಸುಮನನೆಂಬ ಹಸ್ತದಲ್ಲಿ ಪಿಡಿದು ಹದಿನಾರೆಲೆಯ ಮಿಂಚುವರ್ಣದ ಹಣ್ಣ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಆಸನಸ್ಥಿರವಾಗಿ ಕಣ್ಮುಚ್ಚಿ ಜ್ಞಾನಚಕ್ಷುವಿನಿಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ರೇಚಕ ಪೂರಕ ಕುಂಭಕಂಗೈದು ಪೆಣ್ದುಂಬಿಯ ನಾದ ವೀಣಾನಾದ ಘಂಟನಾದ ಭೇರೀನಾದ ಮೇಘನಾದ ಪ್ರಣವನಾದ ದಿವ್ಯನಾದ ಸಿಂಹನಾದಂಗಳಂ ಕೇಳಿ ಹರುಷಂಗೊಂಡು ಆ ಫಲಂಗಳಂ ಮನವೆಂಬ ಹಸ್ತದಿಂ ಮಡಿಲುದುಂಬಿ ಮಾಯಾಕೋಲಾಹಲನಾಗಿ ಪಂಚಭೂತಂಗಳ ಸಂಚವ ಕೆಡಿಸಿ ದಶವಾಯುಗಳ ಹೆಸಗೆಡಿಸಿ ಅಷ್ಟಮದಂಗಳ ಹಿಟ್ಟುಗುಟ್ಟಿ ಅಂತಃಕರಣಂಗಳ ಚಿಂತೆಗೊಳಗುಮಾಡಿ ಮೂಲಹಂಕಾರವ ಮುಂದುಗೆಡಿಸಿ ಸಪ್ತವ್ಯಸನಂಗಳ ತೊತ್ತಳದುಳಿದು ಜ್ಞಾನೇಂದ್ರಿಯಂಗಳ ನೆನಹುಗೆಡಿಸಿ ಕರ್ಮೇಂದ್ರಿಯಂಗಳ ಕಾಲಮುರಿದು ತನ್ಮಾತ್ರೆಯಂಗಳ ತೋಳಕೊಯ್ದು, ಅರಿಷಡ್ವರ್ಗಂಗಳ ಕೊರಳನರಿದು ಸ್ಫಟಿಕದ ಪುತ್ಥಳಿಯಂತೆ ನಿಜಸ್ವರೂಪಮಾಗಿ- ಎರಡೆಸಳ ಕಮಲಕರ್ಣಿಕಾಗ್ರದಲ್ಲಿಪ್ಪ ಪರಬ್ರಹ್ಮದ ಶ್ವೇತಮಾಣಿಕ್ಯವರ್ಣದ ದ್ವಿಪಾದಮಂ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಓಂಕಾರವೆಂಬ ಮಂತ್ರದಿಂದ ಸಂತೈಸಿ ನೀರ ನೀರು ಕೂಡಿದಂತೆ ಪರಬ್ರಹ್ಮವನೊಡಗೂಡಿ ಆ ಪರಬ್ರಹ್ಮವೆ ತಾನೆಯಾಗಿ ಬ್ರಹ್ಮರಂಧ್ರವೆಂಬ ಶಾಂಭವಲೋಕದಲ್ಲಿಪ್ಪ ನಿಷ್ಕಲ ಪರಬ್ರಹ್ಮದ ನಿರಾಕಾರಪಾದಮಂ ನಿರ್ಭಾವವೆಂಬ ಹಸ್ತದಿಂ ಪಿಡಿದು ಪಂಚಪ್ರಸಾದವೆಂಬ ಮಂತ್ರದಿಂ ಸಂತೈಸಿ ಕ್ಷೀರಕ್ಷೀರವ ಕೂಡಿದಂತೆ ನಿಷ್ಕಲಬ್ರಹ್ಮವನೊಡಗೂಡಿ ಆ ನಿಷ್ಕಲಬ್ರಹ್ಮವೇ ತಾನೆಯಾಗಿ ಮೂರುಮಂಟಪದ ಮಧ್ಯದ ಕುಸುಮಪೀಠದಲ್ಲಿಪ್ಪ ಶೂನ್ಯಬ್ರಹ್ಮದ ಶೂನ್ಯಪಾದಮಂ ನಿಷ್ಕಲವೆಂಬ ಹಸ್ತದಿಂ ಪಿಡಿದು ಕ್ಷಕಾರವೆಂಬ ಮಂತ್ರದಿಂ ಸಂತೈಸಿ ಘೃತಘೃತವ ಕೂಡಿದಂತೆ ಶೂನ್ಯಬ್ರಹ್ಮವನೊಡಗೂಡಿ ಆ ಶೂನ್ಯಬ್ರಹ್ಮವೇ ತಾನೆಯಾಗಿ- `ನಿಶಬ್ದಂ ಬ್ರಹ್ಮ ಉಚ್ಯತೇ' ಎಂಬ ಒಂಬತ್ತು ನೆಲೆಯ ಮಂಟಪದೊಳಿಪ್ಪ ನಿರಂಜನಬ್ರಹ್ಮದ ನಿರಂಜನಪಾದಮಂ ಶೂನ್ಯವೆಂಬ ಹಸ್ತದಿಂ ಪಿಡಿದು ಹ್ರೂಂಕಾರವೆಂಬ ಮಂತ್ರದಿಂ ಸಂತೈಸಿ ಬಯಲ ಬಯಲು ಬೆರಸಿದಂತೆ ನಿರಂಜನಬ್ರಹ್ಮವೇ ತಾನೆಯಾಗಿ- ಮಹಾಗುರು ಸಿದ್ಧಲಿಂಗಪ್ರಭುವಿನ ಗರ್ಭಾಬ್ಧಿಯಲ್ಲಿ ಜನಿಸಿದ ಬಾಲಕಿಯಯ್ಯ ನಾನು. ಎನ್ನ ಹೃದಯಕಮಲೆಂಟು ಮಂಟಪದ ಚತುಷ್ಪಟ್ಟಿಕಾ ಮಧ್ಯದ ಪದ್ಮಪೀಠದಲ್ಲಿ ಎನ್ನ ತಂದೆ ಸುಸ್ಥಿರವಾಗಿ ಎನಗೆ ಷಟ್ಸ ್ಥಲಮಾರ್ಗ-ಪುರಾತರ ವಚನಾನುಭಾವ- ಭಕ್ತಿ ಜ್ಞಾನ ವೈರಾಗ್ಯವೆಂಬ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಿದನಯ್ಯ. ಆ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಲೊಡನೆ ಎನ್ನ ಬಾಲತ್ವಂ ಕೆಟ್ಟು ಯೌವನಂ ಬಳೆದು ಬೆಡಗು ಕುಡಿವರಿದು ಮೀಟು ಜವ್ವನೆಯಾದೆನಯ್ಯ ನಾನು. ಎನಗೆ ನಿಜಮೋಕ್ಷವೆಂಬ ಮನ್ಮಥವಿಕಾರವು ಎನ್ನನಂಡಲೆದು ಆಳ್ದು ನಿಂದಲ್ಲಿ ನಿಲಲೀಸದಯ್ಯ. ಅನಂತಕೋಟಿ ಸೋಮಸೂರ್ಯ ಪ್ರಕಾಶವನುಳ್ಳ ಪರಂಜ್ಯೋತಿಲಿಂಗವೆ ಎನಗೆ ಶಿವಾನಂದ ಭಕ್ತಿಯೆಂಬ ತಾಲಿಬಂದಿಯ ಕಟ್ಟು ಸುಮಂತ್ರವಲ್ಲದೆ ಕುಮಂತ್ರವ ನುಡಿಯೆನೆಂಬ ಕಂಠಮಾಲೆಯಂ ಧರಿಸು. ಅರ್ಪಿತವಲ್ಲದೆ ಅನರ್ಪಿತವ ಪರಿಮಳಿಸೆನೆಂಬ ಮೌಕ್ತಿಕದ ಕಟ್ಟಾಣಿ ಮೂಗುತಿಯನಿಕ್ಕು. ಸುಶಬ್ಧವಲ್ಲದೆ ಅಪಶಬ್ದವ ಕೇಳೆನೆಂಬ ರತ್ನದ ಕರ್ಣಾಭರಣಂಗಳಂ ತೊಡಿಸು. ಶರಣತ್ವವನಲ್ಲದೆ ಜೀವತ್ವವನೊಲ್ಲೆನೆಂಬ ತ್ರಿಪುಂಡ್ರಮಂ ಧರಿಸು. ಕ್ರೀಯಲ್ಲದೆ ನಿಷ್ಕಿ ್ರೀಯ ಮಾಡೆನೆಂಬ ಮೌಕ್ತಿಕದ ಬಟ್ಟನಿಕ್ಕು. ನಿಮ್ಮವರಿಗಲ್ಲದೆ ಅನ್ಯರಿಗೆರಗೆನೆಂಬ ಕನಕಲತೆಯ ಬಾಸಿಂಗಮಂ ಕಟ್ಟು. ಸಮ್ಯಜ್ಞಾನವಲ್ಲದ ಅಜ್ಞಾನವ ಹೊದ್ದೆನೆಂಬ ನವ್ಯದುಕೂಲವನುಡಿಸು. ಲಿಂಗಾಣತಿಯಿಂದ ಬಂದುದನಲ್ಲದೆ ಅಂಗಗತಿಯಿಂದ ಬಂದುದಂ ಮುಟ್ಟೆನೆಂಬ ರತ್ನದ ಕಂಕಣವಂ ಕಟ್ಟು. ಶರಣಸಂಗವಲ್ಲದೆ ಪರಸಂಗಮಂ ಮಾಡೆನೆಂಬ ಪರಿಮಳವಂ ಲೇಪಿಸು. ಶಿವಪದವಲ್ಲದೆ ಚತುರ್ವಿಧಪದಂಗಳ ಬಯಸೆನೆಂಬ ಹಾಲು ತುಪ್ಪಮಂ ಕುಡಿಸು. ಪ್ರಸಾದವಲ್ಲದೆ ಬ್ಥಿನ್ನರುಚಿಯಂ ನೆನೆಯೆನೆಂಬ ತಾಂಬೂಲವನಿತ್ತು ಸಿಂಗರಂಗೆಯ್ಯ. ನಿನ್ನ ಕರುಣಪ್ರಸಾದವೆಂಬ ವಸವಂತ ಚಪ್ಪರದಲ್ಲಿ ಪ್ರಮಥಗಣಂಗಳ ಮಧ್ಯದಲ್ಲಿ ಎನ್ನ ಮದುವೆಯಾಗಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ? ಊರೊಳಗೆ ಬ್ರಾಹ್ಮಣಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ ? ಎಲ್ಲಿ ನೋಡಿದಡೆ ಬಯಲೊಂದೆ; ಭಿತ್ತಿಯಿಂದ ಒಳಹೊರಗೆಂಬನಾಮವೈಸೆ. ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
--------------
ಬೊಂತಾದೇವಿ
ಮಂಗಳ ಮಣ್ಣ ಬೆರಸದಂತೆ, ಬಯಲು ಮೂರ್ತಿಯಾಗದಂತೆ, ಬಿಸಿಲು ಮಳೆಯಲ್ಲಿ ನಾಂದದಂತೆ, ಗಾಳಿ ಧೂಳ ಹತ್ತದಂತೆ, ಸಿದ್ಧಸೋಮನಾಥಲಿಂಗಾ ನಿಮ್ಮ ಶರಣ ಬಳಸಿ ಬೇರಿಪ್ಪ.
--------------
ಅಮುಗಿದೇವಯ್ಯ
ಏನೆಂದೂ ಎನಲಿಲ್ಲ; ನುಡಿದು ಹೇಳಲಿಕ್ಕಿಲ್ಲ. ನಿಜದಲ್ಲಿ ನಿಂದ ಬೆರಗ ಕುರುಹ ಹರಿವುದೆ ಮರುಳೆ? ಹರಿದು ಹತ್ತುವುದೆ ಮರುಳೆ ಬಯಲು? ಅದು ತನ್ನಲ್ಲಿ ತಾನಾದ ಬಯಲು; ತಾನಾದ ಘನವು. ಇನ್ನೇನನರಸಲಿಲ್ಲ. ಅದು ಮುನ್ನವೆ ತಾನಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ. ಆತನ ವಿದ್ಯಾ ಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ, ಆತನ ಶಾಂತಿ ಸೈರಣೆಯಿಂದ ಹುಟ್ಟಿದಾತ ವಿಷ್ಣು, ಆತನ ಕೋಪ ಕ್ರೋಧದಿಂದ ಹುಟ್ಟಿದಾತ ರುದ್ರ, ಈ ಮೂವರ ಪೀಠವಂತಿರಲಿ, ಆ ಶರಣನನರಿದು ಶರಣೆನುತ್ತಿದ್ದೆನು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅರಿವರತು ಕುರುಹು ನಷ್ಟವಾದ ಬಳಿಕ ಕುರುಹಿನ ಬಣ್ಣ ಅಂಗದ ಮೇಲೇಕೊ ಘಟ್ಟಿವಾಳಂಗೆ ? ಅರಿವನಾರು ? ಅರುಹಿಸಿಕೊಂಬನಾರು ? ಬರಿಯ ಬಯಲು ಕಾಣಾ, ಕೂಡಲಚೆನ್ನಸಂಗಾ ನಿಮ್ಮ ಶರಣ ಘಟ್ಟಿವಾಳನಲ್ಲದೆ ನೆರೆ ಅರಿವರಾರೊ ?
--------------
ಚನ್ನಬಸವಣ್ಣ
ನಿರ್ವಾಹವಾಯಿತ್ತಯ್ಯಾ ಬಸವಣ್ಣಂಗೆ ಕಪ್ಪಡಿಯ ಸಂಗಯ್ಯನಲ್ಲಿ. ಅಕ್ಕನಾಗಾಯಿ ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ ಮೊಗವಾಡದ ಕೇಶಿರಾಜ ಕೋಲಶಾಂತಯ್ಯ ಮೊದಲಾದ ಶಿವಗಣಂಗಳೆಲ್ಲರೂ ಬಸವರಾಜನ ಬಯಲ ಬೆರಸಿದರು. ಆ ಬಯಲ ಪ್ರಸಾದದಿಂದ, ನಿರುಪಮ ಪ್ರಭುದೇವರು ಕದಳಿಯಲ್ಲಿ ಬಯಲಾದರು. ಆ ಬಯಲ ಪ್ರಸಾದದಿಂದ, ಮೋಳಿಗೆಯ ಮಾರಯ್ಯ ಕಕ್ಕಯ್ಯ ಪಡಿಹಾರಿ ಉತ್ತಣ್ಣ ಕನ್ನದ ಮಾರಣ್ಣ ಕಲಕೇತ ಬೊಮ್ಮಣ್ಣ ನುಲಿಯ ಚಂದಯ್ಯ ಹೆಂಡದ ಮಾರಯ್ಯ ಶಂಕರ ದಾಸಿಮಯ್ಯ ಏಕಾಂತ ರಾಮಯ್ಯ ಮೇದರ ಕೇತಯ್ಯ ಮೊದಲಾದ ಏಳುನೂರೆಪ್ಪತ್ತು ಅಮರಗಣಂಗಳ ದಂಡು, ಕೈಲಾಸಕ್ಕೆ ನಡೆಯಿತ್ತು, ಬಂದ ಮಣಿಹ ಪೂರೈಸಿತ್ತು. ಸಂದ ಪುರಾತನರೆಲ್ಲರು ಎನ್ನ ಮನದ ಮೈಲಿಗೆಯ ಕಳೆದ ಕಾರಣ, ಕಲಿದೇವರದೇವಯ್ಯಾ, ಇವರೆಲ್ಲರ ಒಕ್ಕಮಿಕ್ಕಪ್ರಸಾದದ ಬಯಲು ಎನಗಾಯಿತ್ತು.
--------------
ಮಡಿವಾಳ ಮಾಚಿದೇವ
ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ. ನಾದ ಬಿಂದು ಮಹೇಶ್ವರಸ್ಥಲ. ಕಳೆ ಬೆಳಗು ಪ್ರಸಾದಿಸ್ಥಲ. ಅರಿವು ನಿರವಯವು ಪ್ರಾಣಲಿಂಗಿಸ್ಥಲ. ಜ್ಞಾನ ಸುಜ್ಞಾನ ಶರಣಸ್ಥಲ. ಭಾವವಿಲ್ಲದ ಬಯಲು ಬಯಲಿಲ್ಲದ ಭಾವ ಆಗಮ್ಯದ ಐಕ್ಯಸ್ಥಲ_ ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ. `ಇಲ್ಲ' `ಇಲ್ಲ' ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು !
--------------
ಅಲ್ಲಮಪ್ರಭುದೇವರು
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ, ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು. ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು ! ನೋಡಿದಡೆ ಮೂರ್ತಿ ಹಿಡಿದಡೆ ಬಯಲು ! ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ. ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ ಲೀಲಾಮೂಲದ ಪ್ರಥಮ ಭಿತ್ತಿ.
--------------
ಅಲ್ಲಮಪ್ರಭುದೇವರು
ಬಯಲು ನಲುಗಿ ಬಯಲು ನಿಂದು ಬಯಲರುಹಿಸಿ, ಬಯಲಿಂಗೆ ಬಯಲು ಬಲಿದು, ಬಯಲಿಂದೆ ಬಯಲಳಿದು, ಬಯಲು ಬಯಲ ಕೂಡಿ ನಿರ್ವಯಲು ಹುಟ್ಟಿ ಬಯಲಸಮರಸದಲ್ಲಿ ಬಯಲು ನಿರ್ವಯಲಾಗಿ ನಿರವಯವಾಯಿತ್ತು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->