ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಬ್ದಿಯ ಘೋಷವೆದ್ದು ನಿರ್ಭರ ನಿರ್ವೇಗದಿಂದ ಅಬ್ಬರಿಸಿ ಬರುವಾಗ ಅದನೊಬ್ಬರು ಹಿಡಿದ [ರುಂಟೆ]? ಆಕಾಶದ ಸಿಡಿಲು ಆರ್ಭಟದಿಂದ ಬಡಿವಲ್ಲಿ ತಾಕು ತಡೆಯುಂಟೆ? ಮಹಾದ್ಭುತವಾದ ಅಗ್ನಿಯ ಮುಂದೆ ಸಾರವರತ ತೃಣಕಾಷ್ಟವಿ [ದ್ದುದುಂ]ಟೆ? ತಾ ಸರ್ವಮಯವಾದ ನಿಃಕಳಂಕ ನಿರಂಜನ ಐಕ್ಯಾನುಭಾವಿಗೆ ಅಂಡ ಪಿಂಡ ಬ್ರಹ್ಮಾಂಡ ಅಬ್ದಿ ಆಕಾಶ ಆತ್ಮನೆಂದುಂಟೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಅನಿಮಿಷನ ಕೈಯ ಲಿಂಗವನಲ್ಲಮ ಕೊಂಡುದಿಲ್ಲಾಗಿ, ಆದಿಯಲ್ಲಿ ಬಸವಣ್ಣಂಗೆ ಗುರುಲಿಂಗವಿಲ್ಲಾಗಿ, ಬಸವ-ಚೆನ್ನಬಸವಂಗೆ ಕಾರಣವಿಲ್ಲಾಗಿ, ಇವರಾರೆಂಬುದ ಕೇಳಿದ್ದು ಇಲ್ಲ ಇಲ್ಲಾ ಎಂದನು. ಇವರಿಬ್ಬರ ಸಾಹಿತ್ಯ ಇಲ್ಲೆಂಬುದ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.
--------------
ಘಟ್ಟಿವಾಳಯ್ಯ
ಅರಿವರಿವಿನ ಮುಂದಣ ಅರಿವು ಅದೇನೊ? ಅರಿವಿನ ಎರಡರ ಅರಿವು ನಿಃಪತಿ! ಮಾಯೆಯ ಮುಂದಡಗಿತ್ತಲ್ಲಾ! ಅರಿದಡೆ ಹಿಂದಾಯಿತ್ತು, ಮರೆದಡೆ ಮುಂದಾಯಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿತ್ಯ ಸಾರಾ.
--------------
ಘಟ್ಟಿವಾಳಯ್ಯ
ಅಂಡಜ ಮುಗ್ಧೆಯ ಮಕ್ಕಳಿರಾ, ಕೆಂಡದ ಮಳೆ ಕರೆವಲ್ಲಿ ನಿಮ್ಮ ಹಿಂಡಿರು ಹಳುಹೊಕ್ಕು ಹೋದಿರಲ್ಲಾ! ಜುಗಮವೆಂಬುದಕ್ಕೆ ನಾಚಿರಿ. ನಿಮ್ಮ ಕಂಗಳ ಹಿಂಡಿರ ತಿಂಬಳೆಂಬುದನರಿಯಿರಿ. ಅವಳು ಒಮ್ಮೆ ತಿಂಬಳು ಒಮ್ಮೆ ಕರುಣಿಸಿ ಬಿಡುವಳು. ಅವಳು ತಿಂದು ತಿಂದು ಉಗುಳುವ ಬಾಯೊಳಗಣದೆಲ್ಲಾಜಂಗಮವೆ? ಲೋಕವೆಲ್ಲಾ ಅವಳು. ಅವಳು ವಿರಹಿತವಾದ ಜಂಗಮವಾರೈ ಬಸವಣ್ಣ? ಅವಳು ವಿರಹಿತವಾದ ಭಕ್ತರಾರೈ ಬಸವಣ್ಣ? ಅವಳ ಮಕ್ಕಳು ನಿನ್ನ ಕಯ್ಯಲ್ಲಿ ಆರಾಧಿಸಿಕೊಂಬ ಜಂಗಮ ಕಾಣೈ ಬಸವಣ್ಣಾ! ಅವಳು ವಿರಹಿತವಾದ ಚಿಕ್ಕಯ್ಯಪ್ರಿಯ ಸಿದ್ಧಲಿಂಗನಲ್ಲದಿಲ್ಲ,ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಅಂಗದಲ್ಲಿ ಅರ್ಪಿತವ ಮಾಡಿ ಪ್ರಸಾದಿ ನಾವೆಂಬವಂಗೆ ಹಿಂಗದು ನೋಡಾ! ತನು ಸೂತಕ ಮನ ಸೂತಕ. ಪ್ರಾಣದಲ್ಲಿ ಸಿಲುಕದು ತನುವಿನಲ್ಲಿರದು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಅಸ್ಥಿಗತರು ಚರ್ಮಗತರು ರುಧಿರಗತರು ಮಾಂಸಗತರು ಗತವಾದರೊ ಗತವಾದರೊ! ಅತಿಶಯದ ಅನುಪಮದ ನಿಜವನರಿಯದೆ! ಮನ ಮುಟ್ಟದ ಲಿಂಗವ ಉಳಿ ಮುಟ್ಟಬಲ್ಲುದೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ. ಇಲ್ಲ.
--------------
ಘಟ್ಟಿವಾಳಯ್ಯ
ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ! ನೆನಹಿಂಗೆ ಬಾರದುದ ಕಾಬುದು ಹುಸಿ. ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಅಯ್ಯಾ, ಅಂತರಂಗದಲ್ಲಿ ಅಷ್ಟಮಲಂಗಳಿಗೆ ಮೋಹಿಸಿ, ಬಹಿರಂಗದಲ್ಲಿ ಭಕ್ತಿ-ಜ್ಞಾನ-ವೈರಾಗ್ಯ-ಷಟ್ಸ್ಥಲದ ಸುದ್ದಿಯ ಹೇಳಿ, ದಶಾವತಾರದಾಟವ ತೊಟ್ಟಂತೆ ಗುರುಮುಖವಿಲ್ಲದೆ ವಿಭೂತಿ ರುದ್ರಾಕ್ಷಿ ಶಿವಲಿಂಗ ಲಾಂಛನವ ಧರಿಸಿ, ಒಳಗೆ ಶುದ್ಧವಿಲ್ಲದೆ ಬರಿದೆ ಶಿವಪ್ರಸಾದದ ಸುದ್ಧಿಯ ಹೇಳುವವರಲ್ಲಿ ಅಷ್ಟಾವರಣ ಪರಿಚಾರವಿಲ್ಲ ನೋಡ! ತನ್ನಂತರಂಗ ಬಹಿರಂಗದಲ್ಲಿ ಚಿಜ್ಯೋತಿರ್ಲಿಂಗವೆಂಬ ರಮಣನ ಸದ್ಗುರುಮುಖದಿಂ ಕೂಡಿ ಎರಡಳಿದು, ಆ ಲಿಂಗದ ಚಿಚ್ಚೆತನ್ಯವೆ ನಿರಂಜನ ಜಂಗಮವೆಂದು ಆ ಜಂಗಮವೆ ತಾನೆಂದರಿದು, ತನ್ನ ಚಿತ್ಕಳೆಯ ಚಿದ್ವಿಭೂತಿ-ರುದ್ರಾಕ್ಷಿ, ಲಾಂಛನ, ತನ್ನ ಪರಮಾನುಭಾವನೆ ಮಹಾಮಂತ್ರ, ತನ್ನ ನಿಜಾನಂದವೆ ಪಾದೋದಕ-ಪ್ರಸಾದ, ತನ್ನ ಸತ್ಯ ಸದಾಚಾರ ನಡೆನುಡಿಯೆ ಪರಮ ಕೈಲಾಸ! ಇಂತು ಪ್ರಮಥರು ಆಚರಿಸಿದ ಭೇದವ ತಿಳಿಯದೆ ಬರಿದೆ ಅಹಂಕರಿಸಿ ಗುರುಸ್ಥಲ, ಚರಸ್ಥಲ, ಪರಸ್ಥಲ, ಶಿವಭಕ್ತಿ, ಶಿವಭಕ್ತ, ಶಿವಶರಣ, ಶಿವಪ್ರಸಾದಿಗಳೆಂದು ವಾಗದ್ವೆ ೈತವ ನುಡಿವವರಲ್ಲಿ ಪರತತ್ತ್ವಸ್ವರೂಪ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ!
--------------
ಘಟ್ಟಿವಾಳಯ್ಯ
ಅಯ್ಯಾ, ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ನಿತ್ಯ ನಿರಂಜನ ಗುರು-ಲಿಂಗ-ಜಂಗಮ ಶಿವಶರಣರ ಸತ್ಯ ಸನ್ಮಾರ್ಗದ ಗೊತ್ತಿನ ಮರ್ಯಾದೆಯನರಿಯದೆ ಮತ್ರ್ಯದ ಜಡಜೀವಿ ಭವಿಪ್ರಾಣಿಗಳ ಹಾಂಗೆ ಗುಹ್ಯಲಂಪಟಕಿಚ್ಛೆಸಿ ದಾಸಿ ವೇಶಿ ಸೂಳೆ ರಂಡೆ ತೊತ್ತುಗೌಡಿಯರ ಪಟ್ಟ ಉಡಿಕೆ ಸೋವಿಯೆಂದು ಮಾಡಿಕೊಂಡು ಭುಂಜಿಸಿ, ಷಟ್ಸ ್ಥಲ ಬ್ರಹ್ಮಾನುಭಾವವ ಕೇಳಿ ಹೇಳುವ ಮೂಳ ಬೊಕ್ಕಿಯರ ಕಂಡು ಎನ್ನ ಮನ ನಾಚಿತ್ತು ಕಾಣೆ! ಅವ್ವ ನೀಲವ್ವನ ಮೋಹದ ಮಗಳೆ! ಅಪ್ಪ ಬಸವಣ್ಣನ ಸುಚಿತ್ತದ ಪು[ತ್ರಿಯೆ]! ನಿಷ್ಕಳಂಕ ಸದ್ಗುರುಪ್ರಭುದೇವರ ಸತ್ಯದ ಸೊಸೆಯೆ! ಅಣ್ಣ ಮಡಿವಾಳಪ್ಪನ ಭಾವ, ಚನ್ನಮಲ್ಲಿಕಾರ್ಜುನನರ್ಧಾಂಗಿಯೆ! ಚಿಕ್ಕಯ್ಯಪ್ರಿಯ ಸಿದ್ಧಲಿಂಗನೊಡಹುಟ್ಟಿದವಳೆ! ಎನ್ನಕ್ಕ ಮಹಾದೇವಿ ಕೇಳವ್ವ! ಮತ್ರ್ಯದ ಜಡಜೀವಿ ಭ್ರಷ್ಟರ ಬಾಳಿವೆ ಎಂದೆ!
--------------
ಘಟ್ಟಿವಾಳಯ್ಯ
ಅಷ್ಟವಿಧಾರ್ಚನೆ ಷೋಡಶೋಪಚಾರ ಹುಸಿ ಕಾಣಿರೇ. ಗಾಣದೆತ್ತಿನಂತೆ ಮೆಟ್ಟಿದ ಹಜ್ಜೆಯ ಮೆಟ್ಟುವ ಭಕ್ತನ ಪರಿಯ ನೋಡಾ! ಕೊಂಬಲ್ಲಿ ಐದುವನು, ಕೊಡುವಲ್ಲಿ ನಾಲ್ಕುವನು ಒಂಬತ್ತರಿಂದಲ್ಲಿ ಭಕ್ತಿಭಾಗಕ್ಕಿನ್ನೆಂತೋ? ಮೂರ್ತಿವಿಡಿದು ಮೂರ್ತಿಯನರಿಯರು. ಮಾರುವರು ಗುರುಲಿಂಗವನು ತ್ರಿವಿಧಕ್ಕೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಅಖಂಡಿತ ಅಪ್ರತಿಮ ಅದ್ವಯ ಸತ್ಯನಿತ್ಯ ಸಚ್ಚಿದಾನಂದ ಸ್ವರೂಪಮಪ್ಪ ಜ್ಯೋತಿರ್ಲಿಂಗದೊಳಗೆ ತಾನೆಂಬ ಕುರುಹಳಿದು ಅನನ್ಯ ಪರಿಪೂರ್ಣವಾಗಿಪ್ಪ ಮಹಾಮಹಿಮಂಗೆ ತಾನೆಂಬುದಿಲ್ಲ, ಇದಿರೆಂಬುದಿಲ್ಲ, ಏನೆಂಬುದು ಮುನ್ನವೇ ಇಲ್ಲ. ಆ ಭಾವ ನಷ್ಟವಾದಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ನಾನೂ ಇಲ್ಲ, ನೀನೂ ಇಲ್ಲ.
--------------
ಘಟ್ಟಿವಾಳಯ್ಯ
ಅರಿವೆಂಬ ಅಲಗಿಂಗೆ ಕುರುಹಿನ ಮೋಹಳ ನೋಡಾ! ಒರೆ ಹರಿದು ಒಳಗನಿರಿಯಲು ಬಲ್ಲುವರಿಲ್ಲ. ಶಂಕೆ ಸಮ್ಯಕ್ಕಿಲ್ಲಾಗಿ ಅಂತಿಂತೆನಲಿಲ್ಲ. ಅಂಕವ ಕಾಣದೆ ಬೇಳುವೆಗೊಳಗಾದಿರಲ್ಲಾ ನಿರ್ಲೇಪವಹ ಅಂಕಕ್ಕೆ ಹರಿವರಿವುದೆ ಗೆಲವು? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂಬೆನು.
--------------
ಘಟ್ಟಿವಾಳಯ್ಯ
ಅವನಿ ಅಂಬರ ಉದಯಿಸದಂದು ಒಂದು ತುಂಬಿದ ಕೊಡನ ಕಂಡೆ. ಆ ಕೊಡನನೆತ್ತಿದವರಿಲ್ಲ, ಇಳುಹಿದವರಿಲ್ಲ. ಆ ಕೊಡ ತುಳುಕಿದಲ್ಲಿ ಒಂದು ಬಿಂದು ಕೆಲಕ್ಕೆ ಸಿಡಿಯಿತ್ತ ಕಂಡೆ. ಆ ಬಿಂದುವಿನಲ್ಲಿ ಅನಂತ ದೇವತಾಮೂರ್ತಿಗಳು ಹುಟ್ಟಿತ್ತ ಕಂಡೆ ಇದು ಕಾರಣ, ಚಿಕ್ಕಯ್ಯಪ್ರಿಯ ಸಿದ್ಧಲಿಂಗನ ಲೀಲಾಮೂಲವ ಕಂಡು ಇಲ್ಲ ಇಲ್ಲವೆನುತಿರ್ದೆನು.
--------------
ಘಟ್ಟಿವಾಳಯ್ಯ
ಅರ್ತಿಗೆ ಕಟ್ಟಿದ ಲಿಂಗ ಕೈಯೊಳಗಾಯಿತ್ತು. ನಿಶ್ಚಯದ ಲಿಂಗ ಆರ ಗೊತ್ತಿಗೂ ಸಿಕ್ಕದು. ಆ ಘನಲಿಂಗ ಉಳ್ಳನ್ನಕ್ಕ ನಾ ಜಂಗಮ, ನೀವು ಜಂಗುಳಿಗಳು. ಎನಗಿನ್ನಾವ ಭೀತಿಯಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಅಂಗವ ಬಂಧಿಸಿದಲ್ಲಿ ನಾ ನೊಂದುದಿಲ್ಲ. ಅದು ಮಲದೇಹ, ಮಾಯೆಯ ಸೊಮ್ಮು. ಲಿಂಗವ ತೆಗೆದೆಹೆನೆಂದಡೆ ಅದು ಜಗದ ಕುರುಹು; ಅದು ನನ್ನದಲ್ಲ. ಆ ಗುಣ ನಿಮ್ಮ ಸಂದೇಹಕ್ಕೊಳಗಾಯಿತ್ತು. ಎನಗಿನ್ನಾವ ಉಭಯದ ಹಂಗಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ