ಅಥವಾ

ಒಟ್ಟು 82 ಕಡೆಗಳಲ್ಲಿ , 2 ವಚನಕಾರರು , 82 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯ ಮನೆಯ ಮಧ್ಯದಲ್ಲಿ ಮನೋವಿಕಾರದ ಮಾನಿನಿ ಹುಟ್ಟಿದಳು. ಹಗಲಿಗೆ ಹಾದರಗಿತ್ತಿ, ಇರುಳಿಗೆ ಸಜ್ಜನೆಯಾಗಿ ಪುರುಷನ ಒಡಗೂಡಿಪ್ಪಳು. ಅವಳಂಗದ ಬಸುರ ಯೋನಿಯ ಕಂಗಳು, ಮನದ ಮೊಲೆ ವಿಪರೀತದ ಮಂಡೆಯ ತುರುಬು ತುಡುಕಿತ್ತು ಮೂರಡಿಯಲ್ಲಿ. ಅವಳ ಒಡಗೂಡುವರನಾರೆಂದಲ್ಲಿ ನಿನ್ನ ನೀ ತಿಳಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಗೋವು ಮೊದಲು ಚತುಃಪಾದಿ ಜೀವಂಗಳು ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ ಬೀಡಿಂಗೆ ಹೋಹಂತೆ, ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ. ಬಂದುದ ಮರೆದ ಬಂಧಜೀವಿಗ ನಾನಾಗಿ ಜೀವಕಾಯದ ಸಂದ ಬಿಡಿಸು. ಬಿಂದು ನಿಲುವ ಅಂದವ ಹೇಳು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮಲೆಯ ಮಂದಿರದ ಕಾಳವ್ವೆಯ ಉದರದಲ್ಲಿ ಮೂವರು ಪುರೋಹಿತರು ಬಂದರು. ಒಬ್ಬ ಇಹದಲ್ಲಿ ಗುಣವ ಬಲ್ಲವ; ಒಬ್ಬ ಪರದಲ್ಲಿ ಗುಣವ ಬಲ್ಲವ; ಮತ್ತೊಬ್ಬ ಇಹಪರ ಉಭಯ ತಾ ಸಹಿತಾಗಿ ಮೂರ ನೆನೆದು ಅರಿಯ. ಅರಿಯದವನ ತೋಳಿನ ಕೊಡಗೂಸು, ಕಾಳವ್ವೆಯ ಕತ್ತಲೆಯಲ್ಲಿ ತಳ್ಳಿ, ಮಲೆಗೆ ಕಿಚ್ಚ ಹಚ್ಚಿ, ಮಂದಿರವ ಹಿರಿದುಹಾಕಿ, ಪುರೋಹಿತರ ಕಣ್ಣ ಕಳೆದು ಕೊಡಗೂಸು ಕೊಡನೊಳಗಾದಳು. ಇಂತಿವರಡಿಯ ಭೇದವನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಹಿತ್ತಿಲ ಬಾಗಿಲಲ್ಲಿ ಹೋಹ ಹೆತ್ತ ತಾಯ ಮಗ ಕೊಂದು ಸತ್ತಳೆಂದು ಅಳುತ್ತಿದ್ದ. ಸತ್ತವಳೆದ್ದು ಮಗನಕ್ಕೆಯ ಮಾಣಿಸಿ ಮೊತ್ತದ ಬಂಧುಗಳೆಲ್ಲಾರು ಮತ್ತಿವರು ಬದುಕಿದರೆಂದು ಅಳುತ್ತಿದ್ದರು. ಇಂತೀ ಚಿತ್ತದ ಭೇದವನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮರೆಯಲ್ಲಿದ್ದ ಸಂಚ ತೆರ ದರುಶನವಾಗಲಾಗಿ ಆಶ್ಚರಿಯೆಂಬುದು ಬಿಟ್ಟಿತ್ತು. ಅಂಗದ ಮೇಲಣ ಲಿಂಗ ನೆನಹಿಂಗೆ ನಿಲಲಾಗಿ ಕುರುಹೆಂಬಭಾವವಡಗಿತ್ತು. ಸರ್ವೇಂದ್ರಿಯಂಗಳು ಹಿಂಗಿ ಏಕಭಾವ ಸಲೆಸಂದು ಉಭಯದಂಗ ಲೇಪವಾದುದು ಕಾಲಾಂತಕ ಭೀಮೇಶ್ವರಲಿಂಗ ದ್ವಂದ್ವವಳಿದು ನಿಂದಸ್ಥಲ.
--------------
ಡಕ್ಕೆಯ ಬೊಮ್ಮಣ್ಣ
ಕೊಲೆ ಹೊಲೆ ಪಾರದ್ವಾರವ ಪಾತಕ ಮಾಡುವರೊಳಗಿಟ್ಟು ಕೊಂಡು ಘನಲಿಂಗದ ಮುದ್ರೆಯನಿಕ್ಕಿ ಹೊಲೆದೊಳೆದೆವೆಂದು ಕಲಹಕ್ಕೆ ಇದಿರಹ ಕುಲುಮೆಗಾರರಿಗೇಕೆ ಮೂರಕ್ಷರದ ಒಲವರ? ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸೂತೆಯಲ್ಲಿ ಬೀಜ ಹುಟ್ಟಿದಡೆ ಅದೇತಕ್ಕೆ ಬಾತೆ? ಪಾಷಾಣದ ಕೈಯಲ್ಲಿ ಈಶ ರೂಪ ಧರಿಸಿದಡೆ ಅದು ನೆಲೆಗಳೆದ ತಟಾಕದ ತೂಬು. ಆ ಪಥವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಊರೆಲ್ಲರೂ ಕೂಡಿಕೊಂಡು ತಿಂದರು ದನವ. ಆ ಖಂಡವನೊಲ್ಲದೆ ಕಾಲ ಕೊಳಗು ತಲೆಯ ಕೊಂಬು ಬೇಯಿಸಿ ತಿಂಬ ಶರಣ. ತಿಂಬ ಕೊಂಬು ಕೊಳಗು ಅವನಂಗವ ನುಂಗಿತ್ತು. ಅಂಗ ಸುಸಂಗ ಲೀಯವಾಯಿತ್ತು. ಲೀಯ ನಿಜದಲ್ಲಿ ನಿಂದು ನಿರ್ಲೇಪವಾಯಿತ್ತು. ಆ ಗುಣವೇತರಿಂದ ಆಯಿತ್ತು ಎಂಬುದನರಿ ನಿನ್ನ ನೀ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಾಳಿಯ ಹೊಲದ ಓಣಿಯ ದಾರಿಯಲ್ಲಿ ಮೂವರು ಕಳ್ಳರು ಕಟ್ಟಿ ಬೆಳ್ಳನೊಬ್ಬನ ಆ ಕಳ್ಳರು ಹಿಡಿಯಲಾಗಿ ಬೆಳ್ಳನ ಬೆಳುವೆ ತಾಗಿ, ಕಳ್ಳರು ಮೈಮರೆದು, ಮೂರು ಹಳ್ಳದಲ್ಲಿ ಬಿದ್ದರು. ಬಿದ್ದು ಸಾವರ ಕೊಲ್ಲಲೊಲ್ಲದೆ ಬೆಳ್ಳನಲ್ಲಿಯೆ ಅಡಗಿದ. ಅಡಗಿದವನಾರೆಂದರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮೂಲದ ಮೊಳೆಯ ಮುರಿದಲ್ಲಿ ಬೇರೊಂದು ಮರ ಶಾಖೆ ಫಲವುಂಟೆ? ಅರಿವು ಸಂಬಂಧ ನೆರೆ ನಿಂದಲ್ಲಿ ಕ್ರಿಯೆ ನೆರೆ ಮಾಡುವುದಕ್ಕೆ ಬೇರೊಂದೊಡಲುಂಟೆ? ತನ್ನಯ ಶಂಕೆ ಅನ್ಯರ ಮಚ್ಚು ಇದು ಭಿನ್ನಭಾವ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಭಕ್ತಿಜ್ಞಾನ ವೈರಾಗ್ಯದಿಂದ ಅರಿಯಬೇಕೆಂಬುದು ಭಕ್ತಿಯೊ ಜ್ಞಾನವೊ ವೈರಾಗ್ಯವೊ? ಮೂರಿಕ್ಕೆ ಬೇರೊಂದೆಡೆಯುಂಟೆ? ಅದರ ಎಡೆ ಗುಡಿಯ ತೋರು, ಬರಿಯ ಮಾತಿನ ಮಾಲೆ ಬೇಡ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸದ್ಗತಿಯ ತೋರುವ ಗುರುವಿಂಗೆ ರಾಜಸ ತಾಮಸವುಂಟೆ? ಕೆಡದ ಜ್ಯೋತಿಗೆ ಪಡಿಕುಡಿಗೆ ಎಣ್ಣೆ ಉಂಟೆ? ಆ ಬಿಡುಮುಡಿಯ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ನಾಮ ಘಟ್ಟಿಸಿಯಲ್ಲದೆ ಕರೆದಡೆ ನುಡಿಯಬಾರದು. ಕ್ರೀ ಶುದ್ಧತೆಯಾಗಿ ನಿಂದಲ್ಲದೆ ಅರಿಯಬಾರದು. ಅರಿವಿಂಗೆ ಆಶ್ರಯಿಸುವುದಕ್ಕೆ ಒಡಲಿಲ್ಲ. ಅರಿವು ಕುರುಹಿನಲ್ಲಿ ವಿಶ್ರಮಿಸಿ ಹಣ್ಣಿನ ಸಿಪ್ಪೆಯ ಮರೆಯಲ್ಲಿ ಭಿನ್ನರುಚಿ ನಿಂದು ಸವಿದಾಗ ಸಿಪ್ಪೆ ನಿಂದು ರಸವೊಪ್ಪಿತ್ತು. ಆ ಚಿತ್ತವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸಂಪಗೆಯ ತಂಬೆಲರಿನಲ್ಲಿ ಒಂದು ಭೃಂಗ ತತ್ತಿಯನಿಕ್ಕಿತ್ತು. ತನ್ನ ಬಾಳು ಕುಸುಮದ ವಾಸನೆ ಬಲಿವನ್ನಕ್ಕ ತುಂಬಿಯಿದ್ದಿತ್ತು. ವಾಸನೆ ತೋರಿ ತುಂಬಿ ಸತ್ತು ಮರಿ ಹಾರಿ ಹೋಯಿತ್ತು. ಆ ಮರಿಯ ಅರಿವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಬಿತ್ತು ಅಂಕುರವ ನುಂಗಿಪ್ಪಾಗ ಅಂಕುರ ಆ ಬಿತ್ತ ತನ್ನಯ ಸಂಕೇತದಲ್ಲಿ ಇರಿಸಿಕೊಂಡು ಇಹಾಗೆ ಉಭಯದ ಭೇದ ಎಲ್ಲಿ ಅಡಗಿತ್ತು ಹೇಳಿರಣ್ಣಾ. ಅರುಹಿಸಿಕೊಂಬ ಕುರುಹು; ಆ ಅರುಹಿನಲ್ಲಿ ಕುರುಹಿನ ಕಳೆ ನಿಂದ ತೆರಪಾವುದು? ಅರುಹಿಸಿಕೊಂಬ ಅರಿವು ತೋರಿಸಿಕೊಂಬ ಕುರುಹಿನ ಕಳೆ ಬೇರೊಂದೆಡೆ ತೆರಪಿಲ್ಲ, ಅದು ತಾನೆ ನಿಶ್ಚಯ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಇನ್ನಷ್ಟು ... -->