ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರ್ಚಿಸಿ ಪೂಜಿಸುವುದಕ್ಕೆ ಅಂಗವಾಗಿ, ಮನ ನೆನೆವುದಕ್ಕೆ ಘನತರವಾಗಿ, ಪೂಜಿಸುವುದಕ್ಕೆ ಪುಣ್ಯಮೂರ್ತಿಯಾಗಿ, ಭಾವ ನೆನೆವುದಕ್ಕೆ ಭವಗೇಡಿಯಾಗಿ, ಉಭಯದಂಗವ ತಾಳಿ ನಿಂದ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಅಹಂಕಾರವರತು ಗುರುವಾಗಿ, ಜಗವರತು ಲಿಂಗವಾಗಿ, ತ್ರಿವಿಧವರತು ಜಂಗಮವಾಗಿ, ಸಕಲೇಂದ್ರಿಯದ ಲಂಪಟವರತು ಭಕ್ತನಾಗಿ ಸಂಸಾರವೆಂಬ ಗಡಬಡೆಯಲ್ಲಿ ಸಿಲುಕದೆ, ಆವ ಸ್ಥಲದಲ್ಲಿ ನಿಂದು ನೋಡಿದಡೂ ಭಾವಶುದ್ಧವಾಗಿ ಗುರುವಿಂಗೆ ಗುರುವಾಗಿ, ಲಿಂಗಕ್ಕೆ ಲಿಂಗವಾಗಿ ಜಂಗಮಕ್ಕೆ ಜಂಗಮವಾಗಿ ಭಕ್ತರ ಯುಕ್ತಿಯ ಮಾರಿಕೊಂಡಿಪ್ಪ ಸದ್ಭಕ್ತ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಅಪ್ಪುವಿನಿಂದ ಸಕಲ ಮಯವೆಲ್ಲವು ಕಲ್ಪಿಸಿ, ಅಪ್ಪುವಿನಿಂದ ಮಲ ನಿರ್ಮಲವೆಂಬುದಾಯಿತ್ತು. ವಸ್ತುವಿನಿಂದ ರೂಪು ನಿರೂಪೆಂಬುದಾಯಿತ್ತು. ಜಲದಿಂದಾದ ಪಂಕವ ಜಲ ತೊಳೆದು ನಿರ್ಮಲವಾದಂತೆ, ನಿರೂಪು ಸ್ವರೂಪನಾಗಿ ಸ್ವರೂಪು ನಿರೂಪನಾಗಿ ಉಭಯವು ನೀನಾಗಿ, ನಾ ಕಂಡು ನುಡಿವುದಕ್ಕೆ ಎನಗೊಂದೆಡೆಯಿಲ್ಲ, ಕಾಲಾಂತಕ ಭೀಮೇಶ್ವರಲಿಂಗವು ನೀನೆಯಾಗಿ.
--------------
ಡಕ್ಕೆಯ ಬೊಮ್ಮಣ್ಣ
ಅಂಗವುಂಟಾದಲ್ಲಿ ಲಿಂಗವನರಿಯಬೇಕು. ಲಿಂಗವುಂಟಾದಲ್ಲಿ ಚೇತನ ಭೂತಹಿತವನರಿಯಬೇಕು. ಆ ಅರಿವು ನೆಲೆಗೊಂಡಲ್ಲಿ ಒಳಗು ಹೊರಗ ವಿಚಾರಸಲಿಲ್ಲ. ಮಹಾರ್ಣವ ಬಲುಜಲವನಿಂಬಿಟ್ಟುಕೊಂಡಂತೆ. ಶರಣಸತಿಯಲ್ಲಿ ಲಿಂಗಕುಲದಲ್ಲಿ ಜಂಗಮಪದದಲ್ಲಿ ಗುರುಸ್ಥಲದಲ್ಲಿ ಕಂಗಳ ಮುಂದೆ ಮಹೇಂದ್ರಜಾಲ ನಿಂದಂತೆ, ನಿಂದ ನಿಲವೆ ಸದ್ಭಕ್ತನಿರವು; ಕಾಲಾಂತಕ ಭೀಮೇಶ್ವರಲಿಂಗದ ನಿಜವಾಸದ ಬೆಳಗು.
--------------
ಡಕ್ಕೆಯ ಬೊಮ್ಮಣ್ಣ
ಅರಿವುಳ್ಳವಂಗೆ ಆರನರಿದೆಹೆನೆಂಬುದೆ ಮಾಯೆ. ಮೂರ ಮರೆದು ಬೇರೊಂದ ಕಂಡೆಹೆನೆಂಬುದೆ ಮಾಯೆ. ನುಡಿಯ ನುಡಿವವರಲ್ಲಿ ಎಡೆ ಮಾತನಾಡಿ ಬೇರೊಂದೆಡೆವುಂಟೆಂಬುದೆ ಮಾಯೆ. ಘಟಮಟವೆಂಬ ಮನೆಯಲ್ಲಿ ಮರವೆಯೆಂಬ ಮಾರಿಯ ಹೊತ್ತು ಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ. ಡಕ್ಕೆಯ ಡಾವರಕ್ಕೆ ಸಿಕ್ಕಿ ನೊಂದೆನು. ಇದರಚ್ಚುಗವ ಬಿಡಿಸು, ಕಾಲಾಂತಕ ಭೀಮೇಶ್ವರಲಿಂಗ.
--------------
ಡಕ್ಕೆಯ ಬೊಮ್ಮಣ್ಣ
ಅಂಗವೆಂಬ ಮೊರದಲ್ಲಿ ವಿಕಾರವೆಂಬ ಕೋಣನನೇರಿ ತಾಯಿ ಬಂದಳಯ್ಯಾ ಮೂರು ಮುಖವಾಗಿ. ಮೂರು ಮುಖದವ್ವೆಯ ಬಾಗಿಲಲ್ಲಿ ಬಾಧೆಬಡುವರೆಲ್ಲರೂ ಹೋದರು ಹೊಲಬುದಪ್ಪಿ ಕಾಲಾಂತಕ ಭೀಮೇಶ್ವರಲಿಂಗವನರಿಯದೆ.
--------------
ಡಕ್ಕೆಯ ಬೊಮ್ಮಣ್ಣ
ಅಪ್ಪುಮಯವೆಲ್ಲವು ಶಕ್ತಿರೂಪು; ಅಸ್ಥಿಮಯವೆಲ್ಲವು ವಸ್ತುರೂಪೆಂಬರು. ಆ ಅಪ್ಪುಮಯದಲ್ಲಿ ಅಸ್ಥಿ ಬಲಿದು ಗಟ್ಟಿಗೊಂಡ ಮತ್ತೆ, ವಸ್ತುಮಯ ಏತರಿಂದಾಯಿತ್ತು? ಇದರ ಬಿನ್ನಾಣದ ಬೆಡಗ ಅಹುದೆನಬಾರದು, ಅಲ್ಲಾಯೆಂದೆನಬಾರದು. ಉದಕದ ಬಹುವರ್ಣದಂತೆ, ಮಾರುತನ ಜೀವದಂತೆ, ಅನಲನ ಕಾಲು ನಾಲಗೆಯಂತೆ, ಹೆರೆಹಿಂಗದ ಮಾಯೆ ಭಾವಿಸಿದಲ್ಲಿಯೆ ನಿಂದಿತ್ತು. ಕಾಲಾಂತಕ ಭೀಮೇಶ್ವರಲಿಂಗವೆಂದಲ್ಲಿ ಹೆರೆಹಿಂಗಿತ್ತು ಮಾಯೆ.
--------------
ಡಕ್ಕೆಯ ಬೊಮ್ಮಣ್ಣ
ಅಂಗಸ್ಥಲವಾರು ಲಿಂಗಸ್ಥಲ ಮೂರು ಪ್ರಾಣಲಿಂಗಸ್ಥಲ ಎರಡು ಕೂಡಿ ಏಕಾದಶವಾಯಿತ್ತು. ದಶಗುಣವೊಂದರಲ್ಲಿ ಅಡಗಿ ಕಾಲಾಂತಕ ಭೀಮೇಶ್ವರಲಿಂಗವೆಂಬ ನಾಮವಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಅಲಗಿನ ಮೊನೆ ಆಯದಲ್ಲಿ ಬಿದ್ದ ಮತ್ತೆ ನೆಲೆಗೊಳ್ಳಬಲ್ಲುದೆ ಪ್ರಾಣ? ಅರಿದು ಮಾಡುವ ಮಾಟ ಅನುಸರಣೆಯಾದಲ್ಲಿ ಅಲಗು ಜಾರಿ ಒರೆ ತಾಗಿದಂತೆ. ಭಕ್ತಿ ಬರುದೊರೆ ಹೋಯಿತು ಕಾಲಾಂತಕ ಭೀಮೇಶ್ವರಲಿಂಗಕ್ಕೆ ದೂರವಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ