ಅಥವಾ

ಒಟ್ಟು 112 ಕಡೆಗಳಲ್ಲಿ , 15 ವಚನಕಾರರು , 68 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು, ಬಹಿರಂಗದಲ್ಲಿ ಹಳಿದಾಡುವರೇನಯ್ಯ ? ಬಹಿರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು ಅಂತರಂಗದಲ್ಲಿ ಹಳಿದಾಡುವರೇನಯ್ಯ ? ಅಂತರಂಗ ಬಹಿರಂಗದಲ್ಲಿ ಸಂಶಯವಿಲ್ಲದೆ ಬಹಿರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಇಷ್ಟಲಿಂಗಕ್ಕೆ ಅರ್ಪಿಸಿ, ಪ್ರಾಣಲಿಂಗದಲ್ಲಿ ಕೂಡಿದ್ದೇ ಭಕ್ತಿಯೆಂಬೆನಯ್ಯ. ಅಂತರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಭಾವಲಿಂಗದಲ್ಲಿ ಕೂಡಿದ್ದೇ ಸದ್ಭಕ್ತಿಯೆಂಬೆನಯ್ಯ. ಭಕ್ತಿ ಸದ್ಭಕ್ತಿಯೆಂಬ ಭೇದವನು ಅರಿತಾತನೇ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಥನ ಬ್ರಹ್ಮಾಂಡದಲ್ಲಿ ಮಥನಿಸುವ ಭೇದವನು ಸುಚಿತ್ತದಿಂದವೆ ಕಂಡೆ. ಸಾಕ್ಷಾತ್ ಉರುತರ ಕೈವಲ್ಯ ಪರಮ ಸೀಮೆಯ ಮೀರಿ ಒಡಲಿಪ್ಪುದದು ನಿತ್ಯ ಸಾನಂದದಾ ಆನಂದಸ್ಥಾನದಲ್ಲಿ. ಆನಿಪ್ಪ ಲೋಕದಲ್ಲಿ ತಾನಿಪ್ಪ ನಿಷ್ಕಳದ ಪುಷ್ಕರದಲ್ಲಿ ಸ್ವಾನುಭಾವ ದೀಕ್ಷೆ ನಾನಿಪ್ಪ ಸಂಯೋಗ ಮೂಱಱ ಮೇಲಿಪ್ಪ ಮುಕ್ತ್ಯಾಂಗನೆಯರ ಕೂಟ ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರ
--------------
ಸಿದ್ಧರಾಮೇಶ್ವರ
ಎನ್ನ ಪಂಚಾಕ್ಷರವ ಇಷ್ಟಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಸಪ್ತದಶಾಕ್ಷರವ ಪ್ರಾಣಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ತ್ರಿವಿಧಾಕ್ಷರವ ಭಾವಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಷಡಿಂದ್ರಿಯಂಗಳ ಷಡ್ವಿಧಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ನವಚಕ್ರಂಗಳ ನವವಿಧಲಿಂಗಕ್ಷೇತ್ರ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಅನ್ನಮಯವ ಪ್ರಸಾದ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಪ್ರಾಣಮಯವ ಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಮನೋಮಯವ ಶಿವಧ್ಯಾನ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ವಿಜ್ಞಾನಮಯವ ಜ್ಞಾನ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಆನಂದಮಯವ ಶಿವಾನಂದಮಯವಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಷಡ್‍ಧಾತುಗಳ ಷಡಕ್ಷರ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಇಂತೀ ಬಸವಣ್ಣನೇ ಎನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಪರಿಪೂರ್ಣನಾಗಿ ಬಸವಣ್ಣನೇ ಇಷ್ಟವಾಗಿ ತೊಳಗಿ ಬೆಳಗುತ್ತಿಪ್ಪ ಭೇದವನು ಬೋಳಬಸವೇಶ್ವರನೆನಗೆ ಅರುಹಿಕೊಟ್ಟು ಸಿದ್ಧೇಶ್ವರನೆಂಬ ಚಿದಬ್ಧಿಯೊಳಗೆ ಮುಳುಗಿಸಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಉಭಯಭಾವವನರಿಯದೆ ಶಿವಶಿವ ಎನುತಿರ್ದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ದೇವರಾಜ್ಯದಲ್ಲಿ, ಧಾರೆಯ ಭೋಜನ ಅರಮನೆಯ ಓಲಗದೊಳಗೆ ಹೊಂಪುಳಿವರಿವುತ್ತ ನಾಲ್ಕೂದಿಕ್ಕಿನಲ್ಲಿ ನಾಲ್ವರ ಫಣಿಯ ಬೆಳಗು. ಜಾಣಭಾಷೆಯಲ್ಲಿ ಮಧ್ಯದಲೊಬ್ಬಳು, ಆಣತಿಯ ಸರವು. ಮಹಾದೇವಿ ಗಾಂಧಾರಿಯನು ತೋರಿ, ಒದವಿಸಿದ ಮಧುಮಾಧವಿಯನು ಭೋಜ ಗದ್ಯವನೋದಲು, ಶಿವನು ಕೇಳುತ್ತಿರೆ ಬಾಣಸಿಗ ಹಡಪದವನೆ ಬಲ್ಲನು ಕಾಣಾ. ಕೊಂಕಿಲ್ಲದೆ ಶಬುದ ರಸಭೇದವನು ರಾಣಿ ಬಲ್ಲಳು. ಕುಮುದ ಪಾತ್ರವಿಧಾಂತ ಮಾವಟಿಗ ಭೇದವನು ಮೇಲೆ ಅಂಗರಿಕನು ದೀವಟಿಗೆ ಧಾರೆವಟ್ಟದ ಜಾಣನು ಅಲ್ಲಿ ಚಂಬಕನ ಕಹಳೆ ಭೋರೆಂದು ಬಾರಿಸಿ ಪ್ರತಾಪದ ಕದಳಿಗೆ ಎದೆ ದಲ್ಲಣ. ಆರುಬಣ್ಣದ ವಸ್ತುವ ಮೂರು ಬಣ್ಣಕ್ಕೆ ತಂದು, ಕೇವಣಿಸಿದನು ಕಮಠ ಸುರಥ ಕವಾಹಾರದಾರದ ಖೂಳರ ನಾಲ್ವರ ಬಯಕೆಯನು, ದೇವ ಬಳ್ಳೇಶ್ವರನ ಕನ್ನಡ ವಿಪರೀತ.
--------------
ಬಳ್ಳೇಶ ಮಲ್ಲಯ್ಯ
ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಡಲು, ಅಷ್ಟತನು ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ_ ಕೆಟ್ಟನಲ್ಲಾ, ಅನಾಚಾರಿಯೆಂದು ಮುಟ್ಟರು ನೋಡಾ, ಮುಟ್ಟದ ಭೇದವನು, ವಿಖಂಡಿಸಿದ ಭಾವವನು; ಭಾವವ್ರತಗೇಡಿಗಳು ತಾವೆತ್ತ ಬಲ್ಲರು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ತಂದೆಯ ಸದಾಚಾರ ಮಕ್ಕಳೆಂಬರು, ಗುರುಮಾರ್ಗಾಚಾರ ಶಿಷ್ಯನದೆಂಬರು. ಮೇಲು ಪಂಕ್ತಿಯ ಕಾಣರು ನೋಡಾ. ತತ್ವದ ಮೇಲು ಪಂಕ್ತಿ ಅತ್ತಲೆ ಉಳಿಯಿತ್ತು. ಕತ್ತಲೆಯ ಮರೆಯಲ್ಲಿ ಕಾಣರು ನೋಡಾ. ತತ್ವದ ಹಾದಿಯನು, ಭಕ್ತಿಯ ಭೇದವನು, ಇವರೆತ್ತ ಬಲ್ಲರಯ್ಯಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಪಂಚಾಂಗವ ಬರೆದು ಓದಿ ಮುಹೂರ್ತವ ಹೇಳುವರ ಕಂಡೆ. ಪಂಚಾಂಗವ ಪಿಡಿದು ಮುಹೂರ್ತವ ಕೇಳುವರ ಕಂಡೆ. ಪಂಚಾಂಗದ ಅಕ್ಷರವ ಕಲಿತು ಹೇಳುವರ ಕಂಡೆ. ಆ ಅಕ್ಷರವ ಕಲಿತು ಎಣಿಸುವರ ಕಂಡೆ. ಪಂಚಾಂಗದ ಭೇದವನು ಆರೂ ಅರಿಯರು. ಅರಿಯದೆ ನುಂಗಿ ಅಕ್ಷರವನಡಗಿಸಿ ಮರುಳನಂತೆ ಕಾಯಕವ ಮಾಡುತ್ತಿರ್ಪರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯಾ ನೀನಿಲ್ಲದಿದ್ದರೆ ಎನಗೆ ಮುನ್ನ ನಾಮ ರೂಪುಂಟೆ ? ನೀ ಮಾಡಲಾನಾದೆನಯ್ಯಾ. ಅದು ಕಾರಣವಾಗಿ ನಾ ಬಂದ ಬಂದ ಭವಾಂತರದಲ್ಲಿ ನೀವು ಬರುತ್ತಿದಿರಾಗಿ, ಇನ್ನೆನ್ನ ಗುರುತಂದೆಗೆ ಬಳಲಿಕೆ ಆಗುತಿದೆ ಎಂದು ನಾ ನೋಡಲಾಗಿ, ನೀವೆನ್ನ ಭವವ ಕೊಂಡಿರಾಗಿ. ಇದು ಕಾರಣ, ಅಂದಂದಿಗೆ ನೂರು ತುಂಬಿತ್ತೆಂಬ ಭೇದವನು ನೀವೆ ತೋರಿದಿರಿ. ಇದನರಿದರಿದು ನಾನು ಹಿಂದಣ ಭವವ ಹರಿದು, ಮುಂದಣ ಭಾವ ಬಯಕೆಯ ಮುಗ್ಧವ ಮಾಡಿ, ಹೊಂದದ ಬಟ್ಟೆಯನೆ ಹೊಂದಿ, ಸದಮಳಾನಂದ ಚೆನ್ನಮಲ್ಲೇಶ್ವರನ ನಂಬಿ ಕೆಟ್ಟು, ಬಟ್ಟಬಯಲಾದೆನಯ್ಯಾ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಎಲ್ಲಾ ಭಕ್ತಿಯ ಭೇದವನು, ಎಲ್ಲಾ ಕೂಟದ ಭೇದವನು, ಎಲ್ಲಾ ಶೀಲದ ಭೇದವನು, ನಾನು ನಿನಗೆ ಬಿನ್ನೈಸುವೆ ಕೇಳಯ್ಯಾ. ನೀನು ಕರ್ತನಾಗಿ, ನಾನು ಭೃತ್ಯನಾಗಿ ಅವಧರಿಸಯ್ಯಾ. ಎಲ್ಲಾ ಭೇದಂಗಳನು ಬಸವಣ್ಣ ಮಾಡಿದನು. ನಿಜಸ್ವಾಯತವನು ಬಸವಣ್ಣ ಮಾಡಿದನು. ಜಂಗಮಸ್ವಾಯತವನು ಬಸವಣ್ಣ ಮಾಡಿದನು. ಎನ್ನ ಸರ್ವಾಂಗಸ್ವಾಯತವನು ಬಸವಣ್ಣ ಮಾಡಿದನು. ಕಾರಣ, ಆ ಬಸವಣ್ಣನ ನೆನೆನೆನೆದು ಬದುಕಿದೆನು ಕಾಣಾ ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಮಂಗಳಾಂಗನ ಬೆಳಗು ಹೊಂಗಹ ಭೇದವನು ಜಂಗಮಸ್ಥಾವರದೊಳೇಕವೆಂದು ಂಗ ಸಂಗದಲ್ಲಿದ್ದ ಮಂಗಳ ಪ್ರಸಾದ ತೆಂಗ ಮೂಲನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆ ಅಕ್ಷರದಾನು ಭೇದಕ್ಕೆ ಅರಿಯನು, ಆದರಿಂದಲಾದ ಬಿಂದುಗಳೆಲ್ಲ ಅನ್ನರೂಪು. ಆಮೋದದಕ್ಷರದ ಭೇದವನು ಅರುಹಿದಾತನೆ ಗುರುವಕ್ಕು ಅಯ್ಯಾ, ಶ್ರೀ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಎನ್ನ ಅಷ್ಟಾಕ್ಷರಸ್ವರೂಪವನೊಳಕೊಂಡೆನ್ನ ತನುವಿನಲ್ಲಿ ಸಂಗವಾದನಯ್ಯ ಬಸವಣ್ಣ. ಎನ್ನ ಷಡಾಕ್ಷರಸ್ವರೂಪವನೊಳಕೊಂಡೆನ್ನ ನಯನದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಎನ್ನ ಪಂಚಾಕ್ಷರಸ್ವರೂಪವನೊಳಕೊಂಡೆನ್ನ ಪ್ರಾಣದಲ್ಲಿ ಸಂಗವಾದನಯ್ಯ ಪ್ರಭುದೇವರು. ಇಂತೀ ತನು ಮನ ಪ್ರಾಣವೆ ಸಚ್ಚಿದಾನಂದ ಬ್ರಹ್ಮವು. ಆ ಸಚ್ಚಿದಾನಂದ ಬ್ರಹ್ಮವೆ ಎನ್ನ ಭಾವ ಮನ ಕರಣಂಗಳೊಳಗೆ ತಳತಳನೆ ಹೊಳಹುತ್ತಿಪ್ಪ ಭೇದವನು ಸಿದ್ಧೇಶ್ವರನೆನಗೆ ಅರುಹಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಸಮುದ್ರದೊಳಗೆ ಮುಳುಗಿದ ವಾರಿಕಲ್ಲಿನಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಗುರು ಮುಟ್ಟಿ ಲಿಂಗವಾಯಿತ್ತೈಸೆ, ಅದು ಬಿದ್ದಿತ್ತು, ಹೋಯಿತ್ತೆಂಬ ಅಜ್ಞಾನವ ನೋಡಾ, ಕಟ್ಟುವಠಾವನು, ಮುಟ್ಟುವ ಭೇದವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ
--------------
ಚನ್ನಬಸವಣ್ಣ
ಸೊಡರು ಕೆಟ್ಟಡೆ ದೃಷ್ಟಿಯಡಗಿಪ್ಪ ಭೇದವನು ಒಡಲು ಕೆಟ್ಟಡೆ ಜೀವವಾವೆಡೆಯಲಡಗೂದು? ಈ ಮರೆಯೆಡೆಯಣ ಭೇದವ ಭೇದಿಸಬಲ್ಲಡೆ ಪೊಡವಿಗೆ ಗುರುವಪ್ಪನೆಂದು ಮುಡಿಗೆಯನಿಕ್ಕಿದೆ ಪರಸಮಯಕ್ಕೆಂದು, ರಾಮನಾಥ.
--------------
ಜೇಡರ ದಾಸಿಮಯ್ಯ
ಆದಿಯಕ್ಷರ ಸೊಮ್ಮಿನಾನತದ ಭೇದವನು ನಾದಮಧ್ಯದೊಳಗೆ ಭೇದಿಸಿತ್ತು. ಆದ್ಯಂತ ಶೂನ್ಯ ಕಪಿಲಸಿದ್ಧಮಲ್ಲೇಶ್ವರನ ಆಮೋದದಾ ಮನೆಯಲಿತ್ತು ತೋರಿ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->