ಅಥವಾ

ಒಟ್ಟು 14 ಕಡೆಗಳಲ್ಲಿ , 6 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು : ಭಕ್ತ ದಾರು ? ಭವಿ ದಾರು ? ಎಂದಡೆ, ಎಲಾ, ಯಾವ ಕುಲ[ದವ]ನಾದಡೆ ಸರಿಯೋ ? ಯಾವ ದೇವರು ಆದರೆ ಸರಿಯೋ ? ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು ಹೇಳುವುದು ಶ್ರುತಿವಾಕ್ಯ. ಇದರೊಳಗೆ ಏಕದೈವವನು ಪಿಡಿದು ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ, ಕ್ರಿಯಾಚಾರದಿಂ ನಡೆದು, ನೀತಿಗಳನೋದಿ, ನಿರ್ಮಳಚಿತ್ತನಾದಡೆ ಭಕ್ತ. ಇದಂ ಮರೆದು, ಹಲವು ಕಾಲ ಲಿಂಗಧ್ಯಾನ, ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ, ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ, ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು], ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ, ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು, ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ] ಲಿಂಗದೇಹಿಕನಾದಡೆಯು ಬ್ರಾಹ್ಮಣನಾದೆಡೆಯು, ಇವನೇ ಭವಿ. ಇಂತಾ ಭಕ್ತ ಭವಿಗಳ ನೆಲೆಯ ತಿಳಿದು ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ ಪೋದರು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ದೇಹದೊಡನೆ ತ್ರಿದೋಷಗಳು, ವಾತ ಪಿತ್ತ ಶ್ಲೇಷ್ಮ-ಇವು ಮೂರುಕೂಡಿ ದೇಹ ಹುಟ್ಟಿತು. ಇದರ ವಿವರವು : ವಾತ 81, ಪಿತ್ತ 64, ಶ್ಲೇಷ 215. ಇವು ಕೂಡಿ 360 ವ್ಯಾಧಿಗಳಾದವು. ಇವು ಶಿವನ ಅಪ್ಪಣೆಯಿಂದ ಬಂದುವಲ್ಲದೆ, ಮನುಷ್ಯನ ಯತ್ನವಿಲ್ಲವು. ಅದಕ್ಕೆ ಮನುಷ್ಯರು ವೈದ್ಯವ ಮಾಡಿದಡೆ ಲೋಕ ಏಕೆ ಸಾವುದು ? ಅದಕ್ಕೆ ಸೊಕ್ಕಿದವರಿಗೆ, ಗುರುತಲ್ಪಕರಿಗೆ, ಭಕ್ತರ ನಿಂದ್ಯವ ಮಾಡಿದವರಿಗೆ, ತಂದೆಗೆ ಮಗ ಬೈದರೆ, ಅತ್ತೆಗೆ ಸೊಸೆ ಸೊಕ್ಕಿ ನುಡಿದಡೆ, ಅನಾಚಾರಿಗಳಿಗೆ, ಆಸೆಯ ಕೊಟ್ಟು ಭಾಷೆಗೆ ತಪ್ಪಿದವರಿಗೆ, ಶಿವಸದ್ವರ್ತನೆ ಸದ್ಧರ್ಮ ಸದಾಚಾರವಿಲ್ಲದವರಿಗೆ ಈ ವ್ಯಾಧಿಗಳು ಕಾಡುತ್ತಿಹವು. ತಲೆಶೂಲೆ, ಪಕ್ಕಶೂಲೆ, ಜ್ವರ, ಉರಿ -ಇವು ಕಣ್ಣಿಗೆ ಕಾಣಿಸದೆ ಬಂದಂಥ ವ್ಯಾಧಿಗಳು ; ಶಿವನ ಅಂಶಿಕವು. ತದ್ದು ತುರಿ ಕೆಮ್ಮು ಭಗದಳ ಕುಷ* ಗಂಡಮಾಲೆ ಕುರು ಬಾವು ಹುಣ್ಣುಗಳು ಕಣ್ಣಿಗೆ ಕಾಣಿಸುವಂಥ ಬೇನೆಗಳು ; ಪಾರ್ವತಿಯ ಅಂಶಿಕವು. ಇವು ಎಲ್ಲ ವ್ಯಾಧಿಗಳು ಅವರಿಗೆ ತಕ್ಕಷ್ಟು ಶಿಕ್ಷೆ ಮಾಡಿಸುತ್ತಿಹವು. ಮತ್ತೆ ಗುರುಮಾರ್ಗಾಚಾರವಿಡಿದು ಆಚರಿಸುವ ಪ್ರಸಾದಿಗಳಿಗೆ ಅವೇ ವ್ಯಾಧಿಗಳು ಹಿತವಾಗಿಹವು. ಮತ್ತೆ ಸರ್ಪ ಕಚ್ಚಿದಡೆ, ಸ್ತ್ರೀಯು ಹಡೆಯಲಾರದಿದ್ದಡೆ, ಯಾವ ಕುಲದವನಾಗಲಿ ವಿಚಾರಿಸದೆ ಅವರು ಮಂತ್ರಿಸಿದ ಉದಕವ ಕುಡಿವುದು. ಮತ್ತೆ ಅವರ ಕುಲಕ್ಕೆ ಭಕ್ತರ ಕುಲಕ್ಕೆ ಹೇಸುವುದು. ಅನ್ಯಕುಲದ ವೈದ್ಯನ ಕೈಯಲ್ಲಿ ಮದ್ದು ಮಾಡಿಸಿಕೊಂಬರು. ಭಕ್ತರು ಅಡುಗೆಯ ಮಾಡಿದಡೆ, ಯಾವ ಕುಲವೆಂಬರು ? ಅವರಿಗೆ ಎಂದೆಂದಿಗೂ ಮುಕ್ತಿಯಿಲ್ಲವಯ್ಯಾ. ಮತ್ತೆ ಪ್ರಸಾದವ ಕೊಂಬುವರು ಮದ್ದು ಕೇಳಲಾಗದು. ಅದೇನುಕಾರಣವೆಂದಡೆ- ಪ್ರಸಾದಕ್ಕಿಂತ ಮದ್ದು ಹಿತವಾಯಿತಲ್ಲ ! ಶಿವಮಂತ್ರ ಕಾಯಕ್ಕೆ ಅನ್ಯರ ಕೈಯಲ್ಲಿ ಮಂತ್ರಿಸಿ ಕೇಳಲಾಗದು. ಅದೇನು ಕಾರಣವೆಂದಡೆ - ಶಿವಮಂತ್ರಕ್ಕಿಂತ ಅನ್ಯರ ಮಂತ್ರ ಅಧಿಕವಾಯಿತ್ತಲ್ಲ ! ಮತ್ತೆ ವೈದ್ಯಕಾರನಿಂದ ಮಂತ್ರಗಾರನಿಂದ ಮನುಷ್ಯರ ಪ್ರಾಣ ಉಳಿವುದೆಂದು ಯಾವ ಶಾಸ್ತ್ರ ಹೇಳುತ್ತದೆ ? ಯಾವ ಆಗಮ ಸಾರುತ್ತದೆ ? ಹೇಳಿರಿ. ಅರಿಯದಿದ್ದಡೆ ಕೇಳಿರಿ : ಭಕ್ತಗಣಂಗಳು ಪಾದೋದಕ ಪ್ರಸಾದ ವಿಭೂತಿ ಶಿವಮಂತ್ರಗಳಿಂದೆ ಲೆಕ್ಕವಿಲ್ಲದೆ ಹೋಹ ಪ್ರಾಣವ ಪಡೆದರು - ಎಂದು ಬಸವೇಶ್ವರ ಪುರಾಣದಲ್ಲಿ ಕೂಗ್ಯಾಡುತ್ತದೆ. ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಆವಿನ ಕೆಚ್ಚಲೊಳಗೆ ಉಣ್ಣೆಯಿದ್ದು ಹಾಲು ಬಿಟ್ಟು ರಕ್ತವ ಸೇವಿಸುವಂತಾಯಿತ್ತು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಂದಿನವರಿಗೆ ಪರುಷವಿಪ್ಪುದು ಇಂದಿನವರಿಗೆ ಪರುಷವೇಕಿಲ್ಲ ? ದಯದಿಂದ ಕರುಣಿಸಿ ಸ್ವಾಮಿ. ಕೇಳಯ್ಯ ಮಗನೆ : ಲಾಂಛನಧಾರಿಗಳು ಸ್ವಯಪಾಕ ಭಿಕ್ಷಕ್ಕೆ ಬಂದ ವೇಳೆಯಲ್ಲಿ ಗೋದಿಯ ಬೀಸುವಗೆ ಆ ಹಿಟ್ಟು ಬಿಟ್ಟು ಕಡೆಯಲಿದ್ದ ಹಿಟ್ಟು ನೀಡುವವರಿಗೆ ಎಲ್ಲಿಹುದೊ ಪರುಷ ? ಲಾಂಛನಧಾರಿಗಳು ಧಾನ್ಯ ಭಿಕ್ಷಕ್ಕೆ ಬಂದಡೆ ಘನವ ಮಾಡಿಕೊಳ್ಳಿರಿ ಎಂಬವರಿಗೆ ಎಲ್ಲಿಹುದೊ ಪರುಷ ? ಶಿವಯೋಗಿ ಲಿಂಗಾರ್ಪಿತ ಭಿಕ್ಷಕ್ಕೆ ಬಂದಡೆ ಸುಮ್ಮನಿಹರು. ಇದು ಭಿಕ್ಷವೇಳೆಯೆ ? ಎಂಬವರಿಗೆ ಎಲ್ಲಿಹುದೊ ಪರುಷ ? ಮತ್ತಂ, ಹಬ್ಬವ ಮಾಡುವಾಗ ಭಿಕ್ಷಕ್ಕೆ ಬಂದಡೆ ತಂಗಳ ನೀಡಿ ಕಳಿಸುವವರಿಗೆ ಎಲ್ಲಿಹುದೊ ಪರುಷ ? ಪರುಷ ಎಲ್ಲಿಹುದು ಎಂದಡೆ : ಜಂಗಮವು ಮನೆಗೆ ಬಂದಡೆ ಬಂದ ಬರವ, ನಿಂದ ನಿಲವ ಅರಿತವರಿಗೆ ಅದೇ ಪರುಷ. ಯಾವ ವೇಳೆಯಾಗಲಿ, ಯಾವ ಹೊತ್ತಾಗಲಿ ಜಂಗಮವು ಭಿಕ್ಷಕ್ಕೆ ಬರಲು ಹಿಂದಕ್ಕೆ ತಿರುಗಗೊಡ[ದ]ವರನ್ನೆಲ್ಲ ಸುಖವಬಡಿಸುವುದೇ ಪರುಷ. ಸಮಸ್ತ ಒಡವೆಯೆಲ್ಲವನು ಎನ್ನ ಒಡವೆಯಲ್ಲವೆಂದವರಲ್ಲಿ ಅದೇ ಪರುಷ. ತನ್ನ ಪ್ರಪಂಚಿನ ಪುತ್ರ ಮಿತ್ರ ಕಳತ್ರರಿಗೆ ಮಾಡುವ ಹಾಗೆ ಗುರು-ಲಿಂಗ-ಜಂಗಮಕ್ಕೆ, ಕೇವಲ ಸದ್ಭಕ್ತಿಗೆ ಭಕ್ತಿಯ ಮಾಡಿದವರಿಗೆ ಅದೇ ಪರುಷ. ಹೀಗೆ ಮಾಡಿದವರಿಗೆ ಅಂದೇನು ಇಂದೇನು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ
--------------
ಗಣದಾಸಿ ವೀರಣ್ಣ
ಶರಣನ ನಡೆ ಅಂತಿಂತೆನಬೇಡ. ಶರಣ ಮಾದರ ಚೆನ್ನಯ್ಯನ ನಡೆ ಯಾವ ಆಗದಲ್ಲಿ ಹೇಳಿತ್ತು? ಶರಣ ಡೋಹರ ಕಕ್ಕಯ್ಯನ ನಡೆ ಯಾವ ವೇದದಲ್ಲಿ ಹೇಳಿತ್ತು? ನಡೆದ ಆಚರಣೆಯೆ ಸಚ್ಛೀಲ; ನುಡಿದ ವಾಕ್ಯವೆ ನಡೆ ಮೋಕ್ಷಪ್ರದಾಯಕ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ವಿದ್ಯಾಯಾಂ ರಮತೇ ಯಸ್ಮಾನ್ಮಾಯಾಂ ಹೇಯಾ ಶ್ವವದ್ರಹೇತ್ | ಅನೇನೈವ ನಿರುಕ್ತೇನ ವೀರಮಾಹೇಶ್ವರಃ ಸ್ಮೃತಃ || ಇಂತೆಂದು ಯಾವ ಕಾರಣದಿಂದೆ ಜ್ಞಾನ[ದ]ಲ್ಲಿ ರಮಿಸುತ್ತಿದಪನು, ಅದು ಕಾರಣದ ದೆಸೆ[ಯಿ]ಂದೆ ಜಿಗುಪ್ಸಾ ಸ್ವರೂಪವಾದಂಥ ಮಾಯೆಯನು ಶುನಿಯ ಕಂಡ ಹಂಗೆ ಬಿಡುವುದು. ಈ ನಿರ್ವಚನದಿಂದವೆ ವೀರಮಾಹೇಶ್ವರನೆಂದು ಹೇಳಲ್ಪಟ್ಟನಯ್ಯಾ, ಮದ್ಗುರು ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಭಕ್ತರಲ್ಲದವರನಾಸೆಗೈದಡೆ ಕಕ್ಕುಲತೆಯಲ್ಲದೆ ಕಾರ್ಯವಲ್ಲ. ಆಸೆಗೈದಡೆ, ಆಸೆಗೈವುದು ಭಕ್ತರನು. ಆಸೆಗೈದು ಬಂದ ಶಿವಂಗೆ ಸುತನ ಕೊಟ್ಟರು, ಧನವ ಕೊಟ್ಟರು, ಮನವ ಕೊಟ್ಟರು, ಅಸುವ ಕೊಟ್ಟರು. ಶರಣನ ಪರಿ ಯಾವ ಲೋಕದೊಳಗೂ ಇಲ್ಲ. ಶರಣಭರಿತಲಿಂಗವಾಗಿ ಬೇಡಿದ್ದ ಕೊಡುವರಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
`ವಿದ್ಯಾಯಾಂ ಶಿವರೂಪಾಯಾಂ ವಿಶೇಷಾದ್ರಮಣಂ ಯತಃ | ತಸ್ಮಾದೇತೇ ಮಹಾಭಾಗಾ ವೀರಶೈವಾ ಇತಿ ಸ್ಮೃತಾಃ' ಇಂತೆಂದು ಶಿವಸ್ವರೂಪವಾದಂಥ ಜ್ಞಾನದಲ್ಲಿ ಯಾವ ಕಾರಣದಿಂದ ಆಗಿ ವಿನೋದಿಸುತ್ತಿಹರು, ಅದು ಕಾರಣದ ದೆಸೆಯಿಂದೆ ಈ ಷಡ್ಗುಣೈಶ್ವರ್ಯವುಳ್ಳವರು ವೀರಶೈವರೆಂದು ನೆನೆಯಲ್ಪಟ್ಟಂಥ ವರಯ್ಯ ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಮೊದಲು ಹುಸಿ, ಲಾಭ ದಿಟವೆ? ನಿರೀಕ್ಷಣೆಯಿಲ್ಲದೆ ಪರೀಕ್ಷೆ ಉಂಟೆ? ಈ ಯಾವ ಸರದಂಗವ, ಗವರೇಶ್ವರಲಿಂಗ ನೀನೇ ಬಲ್ಲೆ?
--------------
ಮೇದರ ಕೇತಯ್ಯ
-->