ಅಥವಾ

ಒಟ್ಟು 8 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿ, ಅನಾದಿ, ಅನಾಗತ, ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಬಿಂದುಜ, ಭಿನ್ನಾಯುಕ್ತ, ಅವ್ಯಕ್ತ, ಆಮದಾಯುಕ್ತ, ಮಣಿರಣ, ಮಾನ್ಯರಣ, ವಿಶ್ವರಣ, ವಿಶ್ವವಸು, ಅಲಂಕೃತ, ಕೃತಯುಗ, ತ್ರೇತಾಯುಗ, ದ್ವಾಪರ[ಯುಗ], ಕಲಿಯುಗ- ಇಂತೀ ಇಪ್ಪತ್ತೊಂದು ಯುಗಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಪ್ರಥಮ ಯುಗದಲ್ಲಿ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶಂಗಳಿಲ್ಲದಂದು ಆರೂ ಆರೂ ಇಲ್ಲದಂದು, ನಾಮವಿಲ್ಲದಂದು, ಅಂದು ನಿಃಶೂನ್ಯವಾಗಿದ್ದ ಕಾಣ ನಮ್ಮ ಬಸವಣ್ಣ. ಅಂದು ನಿಮ್ಮ ನಾಭಿಕಮಲದಲ್ಲಿ ಜಲಪ್ರಳಯ ಪುಟ್ಟಿತ್ತು. ಆ ಜಲಪ್ರಳಯದಲ್ಲಿ ಒಂದುಗುಳ್ಳೆ ಲಿಂಗಾಕಾರವಾಗಿ ಪುಟ್ಟಿತ್ತು. ಆ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣನು. ಇಪ್ಪತ್ತನೆಯ ಯುಗದಲ್ಲಿ ಓಂಕಾರವೆಂಬ ಮೇವ ಮೇದು, ಮೆಲುಕಿರಿದು, ಪರಮಾರ್ಥವೆಂಬ ಹೆಂಡಿಯನ್ನಿಕ್ಕಿ ನೊಸಲ ಕಣ್ಣತೆರೆದು ನೋಡಲಾಗಿ ಆ ಹೆಂಡಿ ಭಸ್ಮವಾಯಿತ್ತು. ಆ ಭಸ್ಮವನೆ ತೆಗೆದು ತಳಿಯಲಾಗಿ ಭೂಮಂಡಲ ಹೆಪ್ಪಾಯಿತ್ತು ಹೆಪ್ಪಾಗಲಿಕ್ಕಾಗಿ ತೊಡೆಯ ಮೇಲಿದ್ದ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣ. ಹತ್ತೊಂಬತ್ತನೆಯ ಯುಗದಲ್ಲಿ ಏಕಪಾದದ ಮಾಹೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿನೆಂಟನೆಯ ಯುಗದಲ್ಲಿ ಕತ್ತಲೆಯ ಕಾಳೋದರನೆಂಬ ರುದ್ರನ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನೇಳನೆಯ ಯುಗದಲ್ಲಿ ವೇದಪುರಾಣಾಗಮಶಾಸ್ತ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನಾರನೆಯ ಯುಗದಲ್ಲಿ....... ಹದಿನೈದನೆಯ ಯುಗದಲ್ಲಿ ಅಮೃತಮಥನವ ಮಾಡಿದಾತ ನಮ್ಮ ಬಸವಣ್ಣ. ಹದಿನಾಲ್ಕನೆಯ ಯುಗದಲ್ಲಿ ತೆತ್ತೀಸಕೋಟಿ ದೇವರ್ಕಳ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿಮೂರನೆಯ ಯುಗದಲ್ಲಿ ಸೌರಾಷ್ಟ್ರ ಸೋಮೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೆರಡನೆಯ ಯುಗದಲ್ಲಿ ಪಾರ್ವತಿಪರಮೇಶ್ವರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೊಂದನೆಯ ಯುಗದಲ್ಲಿ ಏಕಾದಶ ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹತ್ತನೆಯ ಯುಗದಲ್ಲಿ ದಶವಿಷ್ಣುಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂಬತ್ತನೆಯ ಯುಗದಲ್ಲಿ ನವಬ್ರಹ್ಮರ ನಿರ್ಮಿಸಿದಾತ ನಮ್ಮ ಬಸವಣ್ಣ. ಎಂಟನೆಯ ಯುಗದಲ್ಲಿ ಅಷ್ಟದಿಕ್ಪಾಲರ ನಿರ್ಮಿಸಿದಾತ ನಮ್ಮ ಬಸವಣ್ಣ. ಏಳನೆಯ ಯುಗದಲ್ಲಿ ಸಪ್ತ ಸಮುದ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಆರನೆಯ ಯುಗದಲ್ಲಿ ಷಣ್ಮುಖದೇವರ ನಿರ್ಮಿಸಿದಾತ ನಮ್ಮ ಬಸವಣ್ಣ. ಐದನೆಯ ಯುಗದಲ್ಲಿ ಪಂಚಮುಖದೀಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ನಾಲ್ಕನೆಯ ಯುಗದಲ್ಲಿ ಚತುರ್ಮುಖದ ಬ್ರಹ್ಮನ ನಿರ್ಮಿಸಿದಾತ ನಮ್ಮ ಬಸವಣ್ಣ. ಮೂರನೆಯ ಯುಗದಲ್ಲಿ ಬ್ರಹ್ಮ, ವಿಷ್ಣು, ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಎರಡನೆಯ ಯುಗದಲ್ಲಿ ಸಂಗಯ್ಯನ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂದನೆಯ ಯುಗದಲ್ಲಿ ಪ್ರಭುವೆಂಬ ಜಂಗಮವ ನಿರ್ಮಿಸಿದಾತ ನಮ್ಮ ಬಸವಣ್ಣ. ಇಂತೀ ಇಪ್ಪತ್ತೊಂದು ಯುಗಂಗಳಲ್ಲಿ ಬಸವಣ್ಣನು ತಮ್ಮ ಕರಕಮಲವೆಂಬ ಗರ್ಭದಲ್ಲಿ ಜನಿಸಿದನೆಂದು. ಕಕ್ಕಯ್ಯಗಳು ತಮ್ಮ ಮೋಹದ ಮಗನೆಂದು ಒಕ್ಕುದನಿಕ್ಕಿ ಸಲಹಿದರು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅನಂತ ಅದ್ಭುತ ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ ಅದ್ಭೂತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ ಇಂತೀ ಹದಿನೆಂಟು ಯುಗಂಗಳಲ್ಲಿ ಪುಟ್ಟಿದವಾವೆಂದಡೆ: ಅನಂತವೆಂಬ ಯುಗದಲ್ಲಿ ಸಾಕ್ಷಾತ್ ಸರ್ವಜ್ಞ ತಾನೊಬ್ಬನೆ ಇದ್ದ. ಅದ್ಭುತವೆಂಬ ಯುಗದಲ್ಲಿ ಪಾರ್ವತಿ ಹುಟ್ಟಿದಳು. ತಮಂಧವೆಂಬ ಯುಗದಲ್ಲಿ ನಾರಾಯಣ ಪುಟ್ಟಿದನು. ಆ ನಾರಾಯಣನ ನಾಭಿಯಲ್ಲಿ ಒಂದು ಕಮಲ ಹುಟ್ಟಿತ್ತು. ಆ ಕಮಲದಲ್ಲಿ ಬ್ರಹ್ಮ ಹುಟ್ಟಿದನು. ತಾರಜವೆಂಬ ಯುಗದಲ್ಲಿ ಆ ಬ್ರಹ್ಮಂಗೆ ಅಜನೆಂಬ ಹೆಸರಾಯಿತ್ತು. ತಂಡಜವೆಂಬ ಯುಗದಲ್ಲಿ ಬ್ರಹ್ಮಾಂಡವೆಂಬುದೊಂದು ತತ್ತಿ ಪುಟ್ಟಿತ್ತು. ಭಿನ್ನಜವೆಂಬ ಯುಗದಲ್ಲಿ ಆ ತತ್ತಿ ಭಿನ್ನವಾಯಿತ್ತು. ಭಿನ್ನಾಯುಕ್ತವೆಂಬ ಯುಗದಲ್ಲಿ ಮೇಘ ಪಾರಿಜಾತಂಗಳು ಪುಟ್ಟಿದವು. ನಿಂದಲ್ಲಿ ಭೂಮಿ ಪುಟ್ಟಿತ್ತು. ಅದ್ಭೂತವೆಂಬ ಯುಗದಲ್ಲಿ ಅಷ್ಟ ಕುಲಪರ್ವತಂಗಳು ಪುಟ್ಟಿದುವು. ಅಮದಾಯುಕ್ತವೆಂಬ ಯುಗದಲ್ಲಿ ಸಪ್ತಸಮುದ್ರಂಗಳು ಪುಟ್ಟಿದುವು. ಮಣಿರಣವೆಂಬ ಯುಗದಲ್ಲಿ ಉತ್ತಮ ಮಧ್ಯಮ ಕನಿಷ*ಂಗಳು ಪುಟ್ಟಿದುವು. ಮಾನ್ಯರಣವೆಂಬ ಯುಗದಲ್ಲಿ ನಕ್ಷತ್ರಂಗಳಾಗಿರ್ದ Zõ್ಞರಾಸೀತಿ ಲಕ್ಷಣ ಜೀವರಾಶಿಗಳು ಪುಟ್ಟಿದುವು. ವಿಶ್ವಾರಣವೆಂಬ ಯುಗದಲ್ಲಿ ಚಂದ್ರ ಸೂರ್ಯರು ಪುಟ್ಟಿದರು. ವಿಶ್ವಾವಸುವೆಂಬ ಯುಗದಲ್ಲಿ ದೇವಾದಿ ದೇವರ್ಕ?ು ಪುಟ್ಟಿದರು. ಅಲಂಕೃತವೆಂಬ ಯುಗದಲ್ಲಿ ಕಾಮಾದಿವರಂಗ?ು ಪುಟ್ಟಿದುವು ಕೃತಯುಗದಲ್ಲಿ ದೇವ ದಾನವ ಮಾನವರಿಗೆ ಯುದ್ಧವಾಯಿತ್ತು. ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು. ದ್ವಾಪರಯುಗದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು. ಕಲಿಯುಗದಲ್ಲಿ ಮೌರಿಯ ಕದಂಬರಿಗೆ ಯುದ್ಧವಾಯಿತ್ತು. ಇಂತೀ ಹದಿನೆಂಟು ಯುಗಂಗಳಲ್ಲಿ ರಾಜ್ಯವನಾಳಿದ ಸೂರ್ಯವಂಶದ ಕ್ಷತ್ರಿಯರ ಹೆಸರಾವುವೆಂದಡೆ ಆದಿನಾರಾಯಣ, ಆದಿನಾರಾಯಣನ ಮಗ ಬ್ರಹ್ಮ, ಬ್ರಹ್ಮನ ಮಗ ಭೃಗು, ಭೃಗುವಿನ ಮಗ ಇಂದ್ರ, ಇಂದ್ರನ ಮಗ ನಯನೇಂದ್ರಿಯ, ನಯನೇಂದ್ರಿಯನ ಮಗ ಕಾಲಸ್ವಾಲ, ಕಾಲಸ್ವಾಲನ ಮಗ ದುಂದುಮಹಂತ, ದುಂದುಮಹಂತನ ಮಗ ತ್ರಿಶಂಕು, ತ್ರಿಶಂಕುವಿನ ಮಗ ಹರಿಶ್ಚಂದ್ರ, ಹರಿಶ್ಚಂದ್ರನ ಮಗ ಲೋಹಿತಾಕ್ಷ, ಲೋಹಿತಾಕ್ಷನ ಮಗ ನಳ, ನಳನ ಮಗ ಕೂರ್ಪಸ್ಯ, ಕೂರ್ಪಸ್ಯನ ಮಗ ಪುನೋರಪಿ, ಪುನೋರಪಿಯ ಮಗ ಪರಿತಾಸಿ, ಪರಿತಾಸಿಯ ಮಗ ಅಮರ, ಅಮರನ ಮಗ ಮಾಂಧಾತ, ಮಾಂಧಾತನ ಮಗ ಮಾಗ್ರೀಚ, ಮಾಗ್ರೀಚನ ಮಗ ಬಿಂದು, ಬಿಂದುವಿನ ಮಗ ಲವಲ, ಲವಲನ ಮಗ ಪರಿತಾಪಿ, ಪರಿತಾಪಿಯ ಮಗ ಸಿಳ್ಳಗೋಪಾಲ, ಸಿಳ್ಳಗೋಪಾಲನ ಮಗ ನಂದಗೋಪಾಲ, ನಂದಗೋಪಾಲನ ಮಗ ವಸುದೇವ, ವಸುದೇವನ ಮಗ ಶ್ರೀಕೃಷ್ಣ, ಶ್ರೀಕೃಷ್ಣನ ಮಗ ಸಿಳಪ್ಪ, ಸಿಳಪ್ಪನ ಮಗ ದಿಗು, ದಿಗುವಿನ ಮಗ ರಘು, ರಘುವಿನ ಮಗ ಅರಣ್ಯ, ಅರಣ್ಯನ ಮಗ ಮೃಗರಾಜ, ಮೃಗರಾಜನ ಮಗ ದಶರಥ, ದಶರಥನ ಮಗ ರಾಮ. ಇಂತಿವರೆಲ್ಲರೂ ಪ್ರಳಯಕ್ಕೊ?ಗಾದರು ನೋಡಿರೆ ! ಪ್ರ?ಯರಹಿತ ನಮ್ಮ ಸಂಗನಬಸವಣ್ಣ ಕೂಡಲಚೆನ್ನಸಂಗಮದೇವರು ತಾನು ತಾನಾಗಿರ್ದರು.
--------------
ಚನ್ನಬಸವಣ್ಣ
ಧರೆಯೊಳಗೆ ಹುಟ್ಟಿದವರೆಲ್ಲ ಬಲ್ಲೆನೆಂದು ಬಲ್ಲತನಕ್ಕೆ ಗೆಲ್ಲಸೋಲಕ್ಕೆ ಹೋರಿ, ಸಲ್ಲದೆ ಹೋದರು ನಮ್ಮ ಶರಣರಿಗೆ. ಅದೇನು ಕಾರಣವೆಂದರೆ, ಇವರೆಲ್ಲ ಪುರಾಣದ ಪುಂಡರು, ಶಾಸ್ತ್ರದ ಸಟೆಯರು, ಆಗಮದ ತರ್ಕಿಗಳು, ವೇದದ ಹಾದರಿಗರು, ಬೀದಿಯ ಪಸರದ, ಸಂತೆಯ ಸುದ್ದಿಯ ಗೊತ್ತಿಗರು. ಇಂತಿವರಾರೂ ಲಿಂಗದ ನೆಲೆಯನರಿಯರು. ಹಿಂದೆ ಹೋದ ಯುಗಂಗಳಲ್ಲಿ ಹರಿಬ್ರಹ್ಮರು ವಾದಿಸಿ, ನಮ್ಮ ದೇವನ ಕಾಣದೆ ಹೋದರು. ಇದಕ್ಕೆ ಶ್ರುತಿ ಸಾರುತ್ತಿದೆ. ದೇವ ದಾನವ ಮಾನವರು ಕಾಲ ಕಾಮಾದಿಗಳ ಆರಾಧಿಸಿ, ನಮ್ಮ ದೇವರ ಕಾಣದೆ ಹೋದರು. ನಿಮ್ಮ ಪಾಡೇನು ? ಅರಿಮರುಳುಗಳಿರಾ ? ನಮ್ಮ ದೇವನ ಕಂಡೆನೆಂದರೆ ನೋಟಕಿಲ್ಲ, ನೆನಹಿಗಿಲ್ಲ. ತನುವಿಗಿಲ್ಲ, ಸಾಧಕರಿಗಿಲ್ಲ, ಭಾವನೆಗಿಲ್ಲ. ಇಂತಪ್ಪ ದೇವನ ಒಡಲ ಹಿಡಿವರ ಕಂಡೆನೆಂದರೆ ಆಗದು. ಇದರ ಬಿಡುಮುಡಿಯನರಿದು ಅಂಗೈಸುವ ಶರಣರ ಸಂಗದೊಳಗೆ ಎನ್ನ ಕಂಗಳು ಲಿಂಗವಾಗಿ, ಕರವೆ ಜಂಗಮವಾಗಿ, ಇಹಪರದೊಳಗೆ ಪರಿಪೂರ್ಣವಾದೆನಯ್ಯಾ. ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ವೇದ ಶಾಸ್ತ್ರ ಆಗಮ ಪುರಾಣಗಳಲ್ಲಿ ಶ್ರುತಿ ಸ್ಮೃತಿಗಳಲ್ಲಿ ನುಡಿವುದು ಪುಸಿ. ಪುರಾತನರ ವಚನಂಗಳಲ್ಲಿ ಇಷ್ಟಲಿಂಗ ಭಿನ್ನವಾಗಲು ಮತ್ತೊಂದು ಲಿಂಗವ ಧರಿಸಿಕೊಳ್ಳಬೇಕೆಂಬುದು ಇಲ್ಲ. ವೀರಶೈವವುಳ್ಳವರಿಗೆ ಇಷ್ಟಲಿಂಗ ಸಹಸ್ರಭಿನ್ನವಾಗಲು ಧರಿಸುವುದೆಂದು ಚಿತ್ಪಿಂಡಾಗಮ ವಾತುಲಾಗಮದಲ್ಲಿ ಸಂದೇಹವಿಲ್ಲವೆಂಬವರಿಗೆ ಏಳುಕೋಟಿ ಯುಗಂಗಳಲ್ಲಿ ನಾಯಕನರಕ ತಪ್ಪದು. ಕಟ್ಟಿದವರು ಚಂದ್ರಸೂರ್ಯರು ಪೃಥ್ವಿ ಅಪ್ಪುವುಳ್ಳ ಪರಿಯಂತರವು ನಾಯಕನರಕದಲ್ಲಿಪ್ಪರು ಕಾಣಾ, ಅಮುಗೇಶ್ವರಲಿಂಗವೆ; ನಿಮ್ಮ ಶರಣರು ಲಿಂಗಭಿನ್ನವಾಗಲು ಲಿಂಗದೊಡನೆ ಅಂಗವ ಬಯಲು ಮಾಡುವರಯ್ಯಾ.
--------------
ಅಮುಗೆ ರಾಯಮ್ಮ
ಕೃತಯುಗದಲ್ಲಿ ದೇವಾದಿದೇವರ್ಕಳಿಗೆ ಯುದ್ಧವಾಯಿತ್ತು. ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು. ದ್ವಾಪರದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು. ಕಲಿಯುಗದಲ್ಲಿ ಮೌರ್ಯ ಕದಂಬರಿಗೆ ಯುದ್ಧವಾಯಿತ್ತು. ಇಂತು ಅನಂತ ಯುಗಂಗಳಲ್ಲಿ ಅನಂತರಿಗೆ ಯುದ್ಧವಾಗುತ್ತಿಹ ಕಾರಣ ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣರಿಗೆಯೂ ನಮಗೆಯೂ ಅಂದು ಇಂದು ಮುಂದು ಯುದ್ಧವಿಲ್ಲಾ
--------------
ಚನ್ನಬಸವಣ್ಣ
ನಾನಾ ಯುಗಂಗಳಲ್ಲಿ ಬಂದಲ್ಲಿ ಇಂತಪ್ಪ ನಿಲವ ಕಂಡುದಿಲ್ಲವಯ್ಯಾ. ಅಂಗಮನಭಾವಕರಣಂಗಳು ಮಾದು ಕೂಡಲಸಂಗಮದೇವರ ನಿಲವನೊಳಕೊಂಡ ಮರುಳುಶಂಕರದೇವರ ನಿಲವ ನಿಮ್ಮಿಂದ ಕಂಡು ಬದುಕಿದೆನು ಕಾಣಾ, ಕಿನ್ನರಿ ಬ್ರಹ್ಮಯ್ಯಾ.
--------------
ಬಸವಣ್ಣ
ಕೃತಯುಗದಲ್ಲಿ ಕುಂಜರನೆಂಬ ಆನೆಯ ತಿಂದರು ವಿಪ್ರರು. ತ್ರೇತಾಯುಗದಲ್ಲಿ ಅಶ್ವನೆಂಬ ಕುದುರೆಯ ತಿಂದರು ವಿಪ್ರರು. ದ್ವಾಪಾರದಲ್ಲಿ ಮಹಿಷನೆಂಬ ಕೋಣನಂ ತಿಂದರು ವಿಪ್ರರು. ಕಲಿಯುಗದಲ್ಲಿ ಅಜನೆಂಬ ಹೋತ ತಿಂದರು ವಿಪ್ರರು. ಇಂತು ಅನಂತ ಯುಗಂಗಳಲ್ಲಿ ಅನಂತ ಪ್ರಾಣಿ ವಧೆಯಂ ಮಾಡಿದರು. ಇದಕ್ಕೆ ಕೊಟ್ಟು, ಸೆರಗು ಹಾಕಿದ ಮುಂಡಿಗೆಯು ಇದು ಯಥಾರ್ಥ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->