ಅಥವಾ

ಒಟ್ಟು 40 ಕಡೆಗಳಲ್ಲಿ , 4 ವಚನಕಾರರು , 40 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನ್ಯದೈವ ಭವಿನಾಸ್ತಿಯಾದಲ್ಲಿ, ಪಾದತೀರ್ಥಪ್ರಸಾದವಿಲ್ಲದೆ ಬಾಯಿದೆರೆದಲ್ಲಿ, ಲಿಂಗಕ್ಕೆ ಕೊಡದೆ ಕೊಂಡಲ್ಲಿ, ಆ ವ್ರತಕ್ಕೆ ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗ ದೂರಸ್ಥನಾಗಿಪ್ಪನು
--------------
ಅಕ್ಕಮ್ಮ
ಭರಿತಾರ್ಪಣ ಸಹಭೋಜನ ನೈವೇದ್ಯ ಸಹ ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ, ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ, ಒಂದನೂ ಹೊದ್ದದ ಬಹುವರ್ಣದಂತೆ, ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ ಈ ತ್ರಿವಿಧ ವ್ರತ ಪ್ರಸಾದವಿಲ್ಲ. ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ. ಕ್ರೀ ತಪ್ಪದೆ ಎನ್ನ ಕೂಡಿಕೊ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ. ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ. ಇಂತೀ ಸರ್ವಗುಣ ಸಂಪನ್ನನಾಗಿ ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ. ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ, ನಿರಂಗಕ್ಕೆ ಸಂಗ ನೀನೇ. ಹಿಂಗೂದಕ್ಕೆ ನಿನ್ನಂಗ ಅನ್ಯ ಬ್ಥಿನ್ನವಲ್ಲ. ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು, ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು, ಇಂತಿವ ಹೇಳುವಡೆ ವಾಙ್ಮನಕ್ಕತೀತ ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನಪೂಜಿತ ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ.
--------------
ಗುಪ್ತ ಮಂಚಣ್ಣ
ಕುರುಹಿಟ್ಟಲ್ಲಿ ಅರಿವು ನಷ್ಟವಾಯಿತ್ತು. ಅರಿವ ನುಂಗಿದ ಕುರುಹು, ಇದಿರಭಾವಕ್ಕೊಡಲಾಯಿತ್ತು. ತನ್ಮಯ ನಷ್ಟವಾಗಿ, ಉಭಯದೋರದೆ ನಿಂದಲ್ಲಿ, ಆ ನಿಲವು ತಾನೆ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ತಾನರಿದು ಮತ್ತೇನುವ ಮುಟ್ಟೆನೆಂಬುದು ಭರಿತಾರ್ಪಣದ ಕಟ್ಟು. ಇಂತೀ ಗುಣ, ಭರಿತಾರ್ಪಣವಲ್ಲವೆ ? ಅಶನದಾಸೆಯ ಬಿಡು, ಎಲೆ ದೆಸೆಗೆಟ್ಟ ಜೀವವೆ. ನಿನ್ನ ನೀನರಿ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗವಾಗಬಲ್ಲಡೆ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಕಾಣಬೇಕೆಂದು ಮುಂದೆ ನಿಂದು, ಕೇಳಬೇಕೆಂದು ಕೂಗಿ ಕರೆದು, ಈ ಕೇಣಸರದ ಜಾಣತನದ ಗುರುವೇಕೆ ? ಸುಡು ಒಡಲ, ಬಿಡು ಅಸುವ, ನಿನಗೆ ಒಡೆಯತನವೇಕೆ ? ಸುಖದಡಗಿಂಗೆ ಸಿಕ್ಕಿ, ಹಿಡಿಮೊಲಕ್ಕೆ ಗಿಡುವಿನ ಹಂಗಿಲ್ಲ. ಬಿಡುವನವರ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಅಂಬುಜಾತ ದ್ವಾರವಳಿವೆಳವಾದಡೆ, ನಾದಕ್ಕೆ ಸಿಕ್ಕುಂಟೆ ಅಯ್ಯಾ? ಶರೀರ ಸಂಪದದಲ್ಲಿದ್ದಡೆ, ಅರಿವು ಮಹದಲ್ಲಿ ನಿಂದು, ನೆರೆ ವಸ್ತು ತಾನಾದಲ್ಲಿ, ಬೇರೊಂದೆಡೆಯುಂಟೆ? ಕರಣಂಗಳ ಹಿಂಡಿಗೆ ಉರಿಯೆದ್ದ ನೆಲೆ, ನಷ್ಟವಾಗಿಯಲ್ಲದೆ ಬೇರೊಂದ ಹಿಡಿಯಲಿಲ್ಲ. ಅದು ಘಟಿಸಿ ನಿಂದಲ್ಲಿ, ಐಘಟದೂರ ರಾಮೇಶ್ವರಲಿಂಗ ತಾನೆ.
--------------
ಮೆರೆಮಿಂಡಯ್ಯ
ಇಷ್ಟಪ್ರಾಣಸಂಬಂಧಯೋಗ ಭೇದದ ಪರಿ ಯಾವುದೆಂದಡೆ : ಅಕ್ಷಿಯ ಮುಚ್ಚಿದಲ್ಲಿ ನಿರೂಪಾಯಿತ್ತು, ತೆರೆದಲ್ಲಿ ರೂಪಾಯಿತ್ತು. ತನ್ನಯ ಅರಿವು ಮರವೆಯಿಂದ ಕ್ರೀ, ನಿಃಕ್ರೀಯೆಂಬ ಸಂದೇಹವಾಯಿತ್ತು. ನಿಂದ ನೀರ ನೆಳಲು, ಚರಿಸಿದಲ್ಲಿ ಅಡಗಿತ್ತು. ಆ ತೆರದ ದೃಷ್ಟವನರಿ, ಐಘಟದೂರ ರಾಮೇಶ್ವರಲಿಂಗ ಏಕಸ್ವರೂಪು.
--------------
ಮೆರೆಮಿಂಡಯ್ಯ
ಅಂಗಲಿಂಗಸಂಬಂಧದಿರವು, ಬೀಜವೊಡೆದು, ಮೊಳೆದೋರುವಂತೆ, ಕುಸುಮ ಬಲಿದು, ದೆಸೆಗೆ ವಾಸನೆ ಪಸರಿಸುವಂತೆ, ಘನಲಿಂಗ ಘಟ, ಕುರುಹಿನಲ್ಲಿ ನಿಜದೋರುತ್ತದೆ. ಐಘಟದೂರ ರಾಮೇಶ್ವರಲಿಂಗ ಮೂರ್ತಿ, ಅಮೂರ್ತಿ ಆಗುತ್ತದೆ.
--------------
ಮೆರೆಮಿಂಡಯ್ಯ
ಅಸಿಯಾಗಲಿ ಕೃಷಿಯಾಗಲಿ, ವಾಚಕ ವಾಣಿಜ್ಯ ಮಸಿಯಾಗಲಿ, ಮಾಡುವಲ್ಲಿ ಹುಸಿಯಿಲ್ಲದಿರಬೇಕು. ಅದು ಅಸಮಾಕ್ಷನ ಬರವು, ಪಶುಪತಿಯ ಇರವು, ಐಘಟದೂರ ರಾಮೇಶ್ವರಲಿಂಗ ತಾನೆ.
--------------
ಮೆರೆಮಿಂಡಯ್ಯ
ಭಕ್ತರಾಗಿದ್ದವರು ಭಕ್ತರ ವಿರಕ್ತರ ಮಿಥ್ಯದಿಂದ ನುಡಿವುದು ಸತ್ಯವಲ್ಲ. ಮಿಥ್ಯವನಳಿದು ಸತ್ಯವ ಕುರಿತು ಭಕ್ತ ಜಂಗಮಕ್ಕೆ ತತ್ತ್ವದ ಬಟ್ಟೆಯ ಹೇಳಿದಲ್ಲಿ ನಿತ್ಯ ಅನಿತ್ಯವ ತಿಳಿಯಬೇಕು. ಇದು ಸುಚಿತ್ತದ ಭಾವ. ತನ್ನ ವಂಶ ಕೆಟ್ಟಡೆ ತನಗಲ್ಲದೆ ಅನ್ಯರಿಗಿಲ್ಲ. ಇದು ಕಾರಣದಲ್ಲಿ ತನ್ನಂಗದ ಗಾಯದ ನೋವು ತನಗೆ ಅನ್ಯ ಬ್ಥಿನ್ನವಿಲ್ಲದೆ ತೋರುವವೊಲು ಇದು ನನ್ನಿಯ ನುಡಿದೆ ನೈಸಲ್ಲದೆ ಸಮರಸದ ಸನ್ನರ್ಧನಲ್ಲ. ನೀವಾಡಿಸುವ ಯಂತ್ರದ ತಂತ್ರವಲ್ಲದೆ ಸ್ವತಂತ್ರಿಯಲ್ಲ. ಎನಗೆ ಇದಿರನಾಡೆ ನಾ ಮಾಡುವ ಭಕ್ತಿ ಸತ್ಯ ಸುಚಿತ್ತದ ನಿತ್ಯವಲ್ಲ. ಮೊತ್ತದ ಕರಣಂಗಳ ನಡುವೆ ಸಿಕ್ಕಿ ಮತ್ತನಾಗಿ ಬಿದ್ದವಂಗೆ ವಸ್ತುವಿನ ಬಟ್ಟೆಯ ತೋರಿ ಮುಕ್ತಿಪಥದಲ್ಲಿ ನಿಲುವ ನಿಚ್ಚಣಿಕೆಯನಿಕ್ಕಿ ತೋರಿದ ಭಕ್ತ ದೇಹಿಕ ನಿಜಪದ ತತ್ವ ಸ್ವರೂಪ. ಸಕಲ ಜೀವದ ಆಧಾರ, ಸಕಲಮಯ ಅಖಿಳ ಬ್ರಹ್ಮಾಂಡ ಕರಂಡ ತಮರಿಪು ಕೋದಂಡ, ಶಕ್ತಿಮಯ ಚಂಡಿಕಾ ಕಿರಣದಶ ಉದಕಭರಿತ, ಭಕ್ತಿಭಂಡಾರಿ ಬಸವೇಶ್ವರನ ನಿಜತತ್ವದ್ವಯ ಪಾದಂಗಳಿಗೆ ಮಂಡಿತಮಯನಾಗೆರಗಿದೆ ಸಂದೇಹವೆಂಬ ಕರಂಡವ ಬಂದ ಪ್ರಮಥರ ಸತಿ ಸಂದ ಪ್ರಮಥರ ಡಿಂಗರಿಗ ಗುಪ್ತಮಂಚನ ನಿತ್ಯನೇಮ ಸಂದಿತ್ತು. ವೀರದಾಸನ ದಾಸೋಹ ಸೋಹಂ ಎನುತಿದ್ದಿತ್ತು. ನಾರಾಯಣ ನಯನ ಪೂಜಿತಪದಾಂಬುಜ ವಿಮಲ ಕಮಲ ಸುಲಲಿತ ರಾಮೇಶ್ವರಲಿಂಗ ಎನ್ನೊಳಗಾದಾ.
--------------
ಗುಪ್ತ ಮಂಚಣ್ಣ
ಲಕ್ಷವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಕೃತ್ಯವಿಲ್ಲದ ನಿತ್ಯ ಎಷ್ಟಾದಡುಂಟು, ಕಟ್ಟಳೆಗೊಳಗಾದವು ಅರುವತ್ತಾರು ಶೀಲ, ಅರುವತ್ತುನಾಲ್ಕು ನೇಮ, ಅಯಿವತ್ತುಮೂರು ನೇಮ, ಮೂವತ್ತೆರಡು ನಿತ್ಯ. ಇಂತಿವರ ಗೊತ್ತಿಗೊಳಗಾಗಿ ಕಟ್ಟಳೆಯಾಗಿ ನಡೆವಲ್ಲಿ ಅರ್ಥ ಪ್ರಾಣ ಅಭಿಮಾನಂಗಳಲ್ಲಿ, ತಥ್ಯಮಿಥ್ಯ ರಾಗದ್ವೇಷಂಗಳಲ್ಲಿ, ಭಕ್ತಿ ಜ್ಞಾನ ವೈರಾಗ್ಯಂಗಳಲ್ಲಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳಲ್ಲಿ, ಜರ ನಿರ್ಜರ ಸಮನ ಸುಮನಂಗಳಲ್ಲಿ, ಸರ್ವೇಂದ್ರಿಯ ಭಾವಭ್ರಮೆಗಳಲ್ಲಿ, ಐದು ತತ್ವದೊಳಗಾದ ಇಪ್ಪತ್ತಾರು ಕೂಟದಲ್ಲಿ, ಆತ್ಮವಾಯು ಒಳಗಾದವನ ವಾಯುವ ಬೆರಸುವಲ್ಲಿ, ಜಿಹ್ವೆದ್ವಾರದೊಳಗಾದ ಅಷ್ಟದ್ವಾರಂಗಳಲ್ಲಿ, ಇಂತೀ ಘಟದೊಳಗಾದ ಸಂಕಲ್ಪವೆಲ್ಲಕ್ಕೂ ಬಾಹ್ಯದಲ್ಲಿ ತೋರುವ ತೋರಿಕೆಗಳೆಲ್ಲಕ್ಕೂ ಹೊರಗೆ ಕ್ರೀ, ಆತ್ಮಂಗೆ ವ್ರತ. ಅವರವರ ತದ್ಭಾವಕ್ಕೆ ವ್ರತಾಚಾರವ ಮಾಡದೆ ಕಾಮಿಸಿ ಕಲ್ಪಿಸಿದೆನಾಯಿತ್ತಾದಡೆ, ಎನ್ನರಿವಿಂಗೆ ಅದೆ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿಯೆ ಮಾಡುವೆನು
--------------
ಅಕ್ಕಮ್ಮ
ಒಮ್ಮೆಗೆ ಸುರಿದು, ಮತ್ತೊಮ್ಮೆಗೆ ಬೇಡದಿಪ್ಪುದೆ ಭರಿತಾರ್ಪಣವೆ ? ಮುಟ್ಟಿ ಮುಟ್ಟಿ ಅರ್ಪಿಸಲಾರದೆ ಗುಪ್ಪೆಯಾಗಿ ಸುರಿಯಿಸಿ ಕೊಂಡು ಕೊಂಬುದು ಇದು ಕೃತ್ಯದ ನೇಮ, ಭರಿತಾರ್ಪಣವೆ? ಭರಿತಾರ್ಪಣವಾವುದೆಂದಡೆ: ಪರಸ್ತ್ರಿ ಒಲಿದು ಬಂದಲ್ಲಿ, ನೇಮಕಲ್ಲದ ದ್ಯವ್ಯನೆರೆದು, ನಿಕ್ಷೇಪ ಕೈಲೆಡೆಯ ಕಡವರ ವಿಶ್ವಾಸಿಸಿದಲ್ಲಿ, ಘಾತಕತನವ ಬಿಟ್ಟು ಇಂತೀ ಅವಗುಣದಲ್ಲಿ ಮಲಿನನಲ್ಲದೆ ಸ್ವಾನುಭಾವಸಿದ್ಧಾನಾಗಿ ಕಾಯಕರ್ಮಕ್ಕೊಳಗಲ್ಲದೆ, ಜೀವ ನಾನಾ ಜೀವಂಗಳಲ್ಲಿ ಹುಟ್ಟಿ ಹೊಂದದೆ, ಆತ್ಮನ ವಸ್ತುವಲ್ಲದೆ ಮತ್ತೇನನೂ ಅರಿಯದೆ, ಪರಿಭ್ರಮವ ಹರಿದುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ವ್ರತಭ್ರಷ್ಟನ, ಗುರುಘಾತಕನ ವಂದಿಸಿ, ನಿಂದಿಸುವವನ ದ್ರವ್ಯದಾಸೆಗೆ ಅವನ ಮಂದಿರವ ಹೊಕ್ಕುಂಡಡೆ, ಜಂಬುಕ ತಿಂದ ಹಡಿಕವ, ಮಿಕ್ಕು ಹುಳಿತವ ತಾ ತಿಂದಂತೆ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಪಂಚಾಚಾರವ ಧರಿಸಿದ ಶರೀರಕ್ಕೆ ಅಷ್ಟೋತ್ತರಶತವ್ಯಾಧಿ ಬಂದಿತ್ತೆಂದು ಕಲ್ಪಿಸಬಹುದೆ ? ಪಾದತೀರ್ಥ ಪ್ರಸಾದವೆಂದು ನೈಷ್ಠಿಕದಲ್ಲಿ ಕೊಂಬ ಜಿಹ್ವೆ, ಔಷಧಿ ಕಷಾಯ ಕೊಂಡಡೆ ಪಂಚಾಚಾರಕ್ಕೆ ದೂರ ಪಾದೋದಕ ಪ್ರಸಾದವಿಲ್ಲ ಇಹಪರಕ್ಕೆ ಸಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಅವರನೊಲ್ಲ.
--------------
ಅಕ್ಕಮ್ಮ
ಇನ್ನಷ್ಟು ... -->