ಅಥವಾ

ಒಟ್ಟು 60 ಕಡೆಗಳಲ್ಲಿ , 21 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಪ್ರಸಾದಿಗಳೆಂಬರು ಬಲ್ಲರೆ ನೀವು ಹೇಳರೋ! ಸಜ್ಜನಶುದ್ಧಶಿವಾಚಾರಸಂಪನ್ನರಪ್ಪ ಸದ್ಭಕ್ತರು ತಮ್ಮ ಲಿಂಗಕ್ಕೆ ಗುರುಮಂತ್ರೋಪದೇಶದಿಂದ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಸಕಲ ಪದಾರ್ಥವೆಲ್ಲವ ಪ್ರಮಾಣಿನಲ್ಲಿ ಭರಿತವಾಗಿ ಗಡಣಿಸಿ, ತನು ಕರಗಿ ಮನ ಕರಗಿ ನಿರ್ವಾಹ ನಿಷ್ಪತ್ತಿಯಲಿ ಗಟ್ಟಿಗೊಂಡು ತಟ್ಟುವ ಮುಟ್ಟುವ ಭೇದದಲ್ಲಿಯೇ ಚಿತ್ತವಾಗಿ ಲಿಂಗಾರ್ಪಿತವ ಮಾಡೂದು ಆ ಪ್ರಸಾದವ ತನ್ನ ಪಂಚೇಂದ್ರಿಯ ಸಪ್ತಧಾತು ತೃಪ್ತವಾಗಿ ಭೋಗಿಸೂದು. ಲಿಂಗಪ್ರಸಾದ ಗ್ರಾಹಕನ ಪರಿಯಿದು, ಕೊಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು; ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು ! ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
>ದಶವಿಧ ಉದಕ, ಏಕಾದಶ ಪ್ರಸಾದ, ಎಲ್ಲಾ ಎಡೆಯಲ್ಲಿ ಉಂಟು. ಮತ್ತೊಂದ ಬಲ್ಲವರ ತೋರಾ ಎನಗೆ. ಲಿಂಗವ ನೆನೆಯದೆ, ಲಿಂಗಾರ್ಪಿತವ ಮಾಡದೆ, ಅನರ್ಪಿತವ ಕೊಳ್ಳದ ಅಚ್ಚಪ್ರಸಾದಿಯ ತೋರಿ ಬದುಕಿಸಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು. ಅದೆಂತೆಂದಡೆ: 'ಭಿಕ್ಷಲಿಂಗಾರ್ಪಿತಂ ಗತ್ವಾ | ಭಕ್ತಸ್ಯ ಮಂದಿರಂ ತಥಾ | ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ || ' ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ. ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ ಕುಂಭೇಶ್ವರಲಿಂಗವೆಂಬೆನು.
--------------
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ
ಆಯತ ಸ್ವಾಯತ ಸನ್ನಹಿತವ ಅನಾಯತಗಳು ಮುಟ್ಟಲಮ್ಮವು ನೋಡಾ. ಕಂಗಳ ಕೈಗಳಲರ್ಪಿಸುವ, ಶ್ರೋತ್ರದ ಕೈಗಳಲರ್ಪಿಸುವ ನಾಸಿಕದ ಕೈಗಳಲರ್ಪಿಸುವ ಜಿಹ್ವೆಯ ಕೈಗಳಲರ್ಪಿಸುವ, ತನುವಿನ ಕೈಗಳಲರ್ಪಿಸುವ, ಮನದ ಕೈಗಳಲರ್ಪಿಸುವ, ಕೈಗಳ ಕೈಯಲರ್ಪಿಸುವ. ಅಲ್ಲಲ್ಲಿ ತಾಗಿದ ಸುಖವನಲ್ಲಲ್ಲಿ ಲಿಂಗಾರ್ಪಿತವ ಮಾಡುವನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಆತ ಮಹಾಪ್ರಸಾದಿ.
--------------
ಚನ್ನಬಸವಣ್ಣ
ಉದಯಮುಖದಲ್ಲಿ ಹುಟ್ಟಿದ ಬಿಸಿಲ ಲಿಂಗಾರ್ಪಿತವ ಮಾಡಬೇಕು. ಅಸ್ತಮಾನ ಮುಖದಲ್ಲಿ ಹುಟ್ಟಿದ ನೆಳಲ ಲಿಂಗಾರ್ಪಿತವ ಮಾಡಬೇಕು. ಅಧ ಊಧ್ರ್ವ ಮಧ್ಯವನು ಲಿಂಗಾರ್ಪಿತವ ಮಾಡಬೇಕು. ಅಂಬರಮುಖದಲ್ಲಿ ಹುಟ್ಟಿದ ನಿರ್ಮಳೋದಕವನು ಲಿಂಗಾರ್ಪಿತವ ಮಾಡಬೇಕು. ಬಯಲಮುಖದಲ್ಲಿ ಹುಟ್ಟಿದ ವಾಯುವನು ಲಿಂಗಾರ್ಪಿತವ ಮಾಡಬೇಕು. ಆವ ಪದಾರ್ಥವಾದರೇನು ಲಿಂಗಾರ್ಪಿತವ ಮಾಡಬೇಕು. ಕೂಡಲಚೆನ್ನಸಂಗಯ್ಯಾ ಲಿಂಗಾರ್ಪಿತವಲ್ಲದೆ ಕೊಂಡರೆ ಕಿಲ್ಬಿಷವೆಂಬುದು.
--------------
ಚನ್ನಬಸವಣ್ಣ
ಅರಮನೆಯ ಕೂಳನಾದರೆಯೂ ತಂದು, ಒಡಲ ಕುದಿಹಕ್ಕೆ ಲಿಂಗಾರ್ಪಿತವ ಮಾಡಿದರೆ ಅದು ಲಿಂಗಾರ್ಪಿತವಹುದೆಳ ಅಲ್ಲ, ಅದು ಅನರ್ಪಿತ. ಅರ್ಪಿತಂ ಚ ಗುರೋರ್ವಾಕ್ಯಾತ್ಕಿಲ್ಬಿಷಂ ಸ್ಯಾದನರ್ಪಿತಂ ಯದ್ಯನರ್ಪಿತಂ ಭುಂಜೀಯಾತ್ ಕೌರವಂ ನರಕಂ ವ್ರಜೇತ್ ತನುಸಾಹಿತ್ಯ ಮನಸಾಹಿತ್ಯ ಧನಸಾಹಿತ್ಯ ಲಿಂಗಸಾಹಿತ್ಯ ಪ್ರಸಾದಸಾಹಿತ್ಯವಾದ ಕಾರಣ, ಕೂಡಲಚೆನ್ನಸಂಗಮದೇವರಲ್ಲಿ ಈ ಅನುವ ಬಸವಣ್ಣ ತೋರಿದನಾಗಿ, ಅನು ಬದುಕಿದೆನು.
--------------
ಚನ್ನಬಸವಣ್ಣ
ಪದವು ಪದಾರ್ಥವು ಎಂಬರು, ಪದವಾವುದೆಂದರಿಯರು, ಪದಾರ್ಥವಾವುದೆಂದರಿಯರು. ಪದವೇ ಲಿಂಗ, ಪದಾರ್ಥವೇ ಭಕ್ತ. ಇದನರಿದು ಪದಾರ್ಥವ ತಂದು ಲಿಂಗಾರ್ಪಿತವ ಮಾಡಬಲ್ಲರೆ ಕೂಡಿಕೊಂಡಿಪ್ಪ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ತನುವಿನಲ್ಲಿ ಗುರು ಭರಿತವಾದುದೇ ಭರಿತಬೋನ. ಮನದಲ್ಲಿ ಲಿಂಗ ಭರಿತವಾದುದೇ ಭರಿತಬೋನ. ಧನದಲ್ಲಿ ಜಂಗಮ ಭರಿತವಾದುದೇ ಭರಿಬೋನ. ಪ್ರಾಣದಲ್ಲಿ ಪ್ರಸಾದ ಭರಿತವಾದುದೇ ಭರಿತಬೋನ. ಅಂತರಂಗ ಬಹಿರಂಗದಲ್ಲಿ ಪರಿಪೂರ್ಣವಸ್ತು ಭರಿತವಾಗಿ ಎಡೆ ಕಡೆಯಿಲ್ಲದ ವಸ್ತುವಿನಲ್ಲಿ ತಾ ಭರಿತವಾದುದೇ ಭರಿತಬೋನ. ಹೀಂಗಲ್ಲದೆ: ಪುರುಷಾಹಾರಪ್ರಮಾಣಿನಿಂದ ಓಗರವ ಗಡಣಿಸಿಕೊಂಡು ಲಿಂಗಾರ್ಪಿತಮಾಡಿ ಪ್ರಸಾದವೆಂದು ಕೊಂಡು ಎಂಜಲುಯೆಂದು ಕಳೆದು ಬಂದ ಪದಾರ್ಥವ ಮುಟ್ಟಿ ಲಿಂಗಾರ್ಪಿತವ ಮಾಡಲಮ್ಮದವರಿಗೆ ಲಿಂಗಾರ್ಪಿತವಿಲ್ಲ. ಲಿಂಗಾರ್ಪಿತವಿಲ್ಲವಾಗಿ ಪ್ರಸಾದವಿಲ್ಲ. ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಇಲ್ಲ. ಇವರ ಲಿಂಗಾಂಗಸಂಬಂಧಿಗಳೆಂತೆಂಬೆನಯ್ಯ? ಲಿಂಗಾಂಗಿಯ ಅಂಗದಲ್ಲಿ ಸಂದೇಹ ಸೂತಕ ಉಂಟೇ? ಈ ಭಂಗಿತರ ಮುಖವ ನೋಡಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸೃಷ್ಟಿಯೊಳಗಾದ ತೀರ್ಥಂಗಳ ಮೆಟ್ಟಿ ಬಂದಡೂ ದೃಷ್ಟಿಮತಿ, ನಿಮುಷಮತಿ, ಭೇದಮತಿ[ವೇ]ದ್ಯಮತಿ ಅಭೇದ್ಯಭೇದಕಮತಿ ಉಚಿತಮತಿ ಸಾಮಮತಿ ದಾನಮತಿ ದಂಡಮತಿ ಆತ್ಮಚಿಂತನಮತಿಗಳಲ್ಲಿ ನುಡಿದಡೂ ಪಂಡಿತನಪ್ಪನಲ್ಲದೆ ವಸ್ತುವ ಮುಟ್ಟ. ಇದಕ್ಕೆ ದೃಷ್ಟ ಮತ್ತರಿಗೆ ಹಾಕಿದ ಮುಂಡಿಗೆ. ವಸ್ತುವನರಿದುದಕ್ಕೆ ಲಕ್ಷಣವೇನೆಂದಡೆ: ತಥ್ಯಮಿಥ್ಯವಳಿದು ರಾಗದ್ವೇಷ ನಿಂದು ಆವಾವ ಗುಣದಲ್ಲಿಯೂ ನಿರ್ಭಾವಿತನಾಗಿ ಸರ್ವಗುಣಸಂಪನ್ನನಾಗಿ ತತ್ಪ್ರಾಣ ಸಾವಧಾನವನರಿತು ಬಂದ ಬಂದ ಮುಖದಲ್ಲಿ ಲಿಂಗಾರ್ಪಿತವ ಮಾಡಿ ನಿಂದುದೆ ನಿಜಲಿಂಗಾಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನೆ.
--------------
ಪ್ರಸಾದಿ ಭೋಗಣ್ಣ
ಅಧರ ತಾಗುವ ರುಚಿಯನು, ಉದರ ತಾಗುವ ಸುಖವನು, ಲಿಂಗಾರ್ಪಿತವ ಮಾಡದಿದ್ದರೆ ಕೃತಕಿಲ್ಬಿಷ ನೋಡಾ. ಶ್ರೋತ್ರ ನೇತ್ರ ಭುಂಜನೆಯ ಮಾಡಲಾಗದು. ತಟ್ಟಿತ್ತು ಮುಟ್ಟಿತ್ತು ಲಿಂಗಾರ್ಪಿತವೆಂದರೆ, ಅವನಂದೇ ವ್ರತಗೇಡಿ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಭಕ್ತಿ ಜ್ಞಾನವೈರಾಗ್ಯವು ಅಲ್ಲಮಪ್ರಭುವಿನ ವರ್ಗಕ್ಕಲ್ಲದೆ ಅಳವಡದೆಂದು ಉತ್ತರಜ್ಞಾನಿಗಳು ನುಡಿವುತ್ತಿಪ್ಪರು. ಪಂಚೇಂದ್ರಿಯಂಗಳ ರತಿವಿರತಿಯಾದ ಪರಮವಿರಕ್ತರೇ ನೀವಾಚರಿಸುವ ಭಕ್ತಿ ಜ್ಞಾನ ವೈರಾಗ್ಯದ ಬಗೆಯ ಬಣ್ಣಿಸಿರಯ್ಯ. ಗುರು ಲಿಂಗ ಜಂಗಮ ತೀರ್ಥ ಪ್ರಸಾದ ಇಂತಿಪ್ಪ ಪಂಚಾಚಾರವೇ ಪಂಚಬ್ರಹ್ಮವೆಂದು ಭಯ ಭಕ್ತಿಯಿಂದ ನಮಿಸಿ ಅಂಗೀಕರಿಸುವುದೇ ಎನ್ನ ಭಕ್ತಿ. ಪೂರ್ವಾಶ್ರಯ ಬಂಧುಭ್ರಮೆ ಆತ್ಮತೇಜ ಲೋಕದ ನಚ್ಚು ಮಚ್ಚು ಇಂತಿವ ಸುಟ್ಟು ಮಲತ್ರಯಂಗಳ ಹಿಟ್ಟುಗುಟ್ಟಿ ತೂರಿ ಬಿಡುವುದೇ ಎನ್ನ ಜ್ಞಾನ. ಕ್ಷತ್ತು ಮೈದೋರಿ ಭಿಕ್ಷಕ್ಕೆ ಹೋದಲ್ಲಿ ಭಾಂಡವ ತೊಳೆದ ದ್ರವ್ಯಪದಾರ್ಥಮಂ ತರಲೊಡನೆ ಹರುಷದಿಂದ ಲಿಂಗಾರ್ಪಿತವ ಮಾಡಿ ಸಾಕೆಂದ ಬಳಿಕ ಮತ್ತೊಂದು ಗೃಹವನಾಶೆಮಾಡಿ ಹೋದೆನಾದರೆ ಎನ್ನ ವೈರಾಗ್ಯಕ್ಕೆ ಕುಂದು ನೋಡಾ. ಅದೇನು ಕಾರಣವೆಂದೊಡೆ ಗಂಡನಿಕ್ಕಿದ ಪಡಿಯನುಂಡು ಮನೆಗಡೆಯದಿಪ್ಪವಳು ಪತಿವ್ರತೆಯಲ್ಲದೆ ಗಂಡನಿಕ್ಕಿದ ಪಡಿಯನೊಲ್ಲದೆ ನೆಲ್ಲಗೂಳಿಗಾಸೆಮಾಡಿ ನೆರಮನೆಗೆ ಹೋಗುವ ಬಲ್ಲಾಳಗಿತ್ತಿಗೆ ಪತಿಭಕ್ತಿ ಅಳವಡುವುದೇ ಅಯ್ಯ? ಲಿಂಗಾಣತಿಯಿಂದ ಬಂದ ಪದಾರ್ಥವ ಕೈಕೊಂಡಾತ ಶರಣಸತಿ ಲಿಂಗಪತಿಯಲ್ಲದೆ ಲಿಂಗಾಣತಿಯಿಂದ ಬಂದ ಪದಾರ್ಥವ ಸಟೆಗೆ ಉಂಡು ಕೊಂಡಂತೆ ಮಾಡಿ ಸಾಕೆಂದು ನೂಕಿ ಅಂಗದಿಚ್ಚೆಗೆ ಹರಿದು ಮತ್ತೊಂದು ಮನೆಗೆ ಆಶೆಮಾಡಿ ಹೋಗುವ ಜೀವಗಳ್ಳರಿಗೆ `ಶರಣಸತಿ ಲಿಂಗಪತಿ' ಭಾವ ಅಳವಡುವುದೇ ಅಯ್ಯ. ಭಕ್ತಿ ಜ್ಞಾನ ವೈರಾಗ್ಯ ರಹಿತರಾಗಿ ನಿಜಮುಕ್ತಿಯನರಸುವ ಅಣ್ಣಗಳಿರವು ಬಂಜೆ ಮಕ್ಕಳ ಬಯಸಿ ಬಟ್ಟೆಯ ಬೊಮ್ಮಂಗೆ ಹರಸಿಕೊಂಡಂತಾಯಿತ್ತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಲಿಂಗಕ್ಷೇತ್ರವೆಂಬ ಪವಿತ್ರಸ್ಥಲದಲ್ಲಿ, ಪ್ರಸಾದಿ ಭಕ್ತಿ ಬೀಜದ ಬಿತ್ತಿ ಶುದ್ಧ ಪದಾರ್ಥವ ಬೆಳೆದು, ಆ ಪದಾರ್ಥವ ಲಿಂಗಾರ್ಪಿತವ ಮಾಡಿ ಆ ಪ್ರಸಾದವ ತಾನಿಲ್ಲದೆ ಭೋಗಿಸಿ ನಿತ್ಯಸುಖಿಯಾದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ.
--------------
ಸ್ವತಂತ್ರ ಸಿದ್ಧಲಿಂಗ
ಆರುವನೊಲ್ಲೆನೆಂದು ಅರಣ್ಯವ ಹೊಗುವದು, ಕಾರ್ಯವಲ್ಲ, ದುರುಳತನ. ಊರೊಳಗಿದ್ದಡೆ ನರರ ಹಂಗು. ಅರಣ್ಯದಲ್ಲಿದ್ದಡೆ ತರುಗಳ ಹಂಗು. ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿಕೊಂಬ ಶರಣನೆ ಜಾಣ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಈಶ್ವರಗಂಗೆ ಗುಹೇಶ್ವರದೇವರು ಹೇಳುತಿರ್ದ, ಸಾಕ್ಷಿ : ಶ್ಲೋಕ-ಏಕವೃಕ್ಷ ತವೇವರ್ಣಥೌ ನವೇಫಲ ಸೇವಿತಂ | ಮುಖ ಪದ್ಮದೃಷ್ಟಂ ದೇವ ಸರ್ವಪಾಪಂ ವಿನಶ್ಯತಿ (?) || ಇನ್ನು ಈಶ್ವರ ಲಿಂಗಾರ್ಪಿತವಂ ಮಾಡಬೇಕೆಂದು ಕೇಳಲು ಹೇಳಿದ ಪ್ರಸ್ತಾವದ ವಚನ : ಷಡುವರ್ಗವೆಂಬ ಸಮ್ಮಾರ್ಜನೆಯಂ ಮಾಡಿ, ಅಷ್ಟಮದಂಗಳ ಹಿಟ್ಟುಗುಟ್ಟಿ ರಂಗವಾಲಿಯನಿಕ್ಕಿ, ಸಪ್ತವ್ಯಸಗಳೆಂಬ ಉಪಕರಣಂಗಳ ಲಿಂಗಸೋಹಕ್ಕೆ ತಂದು, ತನುವೆಂಬ ಅಟ್ಟಣೆಯಲ್ಲಿ ಮನವೆಂಬ ಹಸ್ತದಿಂದ ಮಜ್ಜನಕ್ಕೆರೆದು ಮೂಲಗುಂಡಿಗೆಯೊಳಗಣ ಜ್ಯೋತಿಯನೆಬ್ಬಿಸಿ ಸಗುಣವೆಂಬ ಶ್ರೀಗÀಂಧವನಿಟ್ಟು, ಪ್ರಣಮಮೂಲವೆಂಬ ಅಕ್ಷತೆಯ ಧರಿಸಿ ಅಷ್ಟದಳದಲ್ಲಿ ಪೂಜೆಯ ಮಾಡಿ, ಸುಖಸದ್ವ್ಯಸನವೆಂಬ ಧೂಪವನ್ನು ಅಳವಡಿಸಿ ಪಂಚತತ್ವಗಳೆಂಬ ಪಂಚಾರತಿಯ ಬೆಳಗಿ ಸುಷುಮ್ನವೆಂಬ ಹರಿವಾಣದಲ್ಲಿ ಪರಮಭೋಜನವೆಂಬ ಬೋನವಂ ಗಡಣಿಸಿ, ಸರ್ವಶುದ್ಧವೆಂಬ ತುಪ್ಪವಂ ನೀಡಿ, ನಿರ್ಮಳಾತ್ಮಕವೆಂಬ ಬೆಳ್ಳಿಯ ನಿರ್ಮಿಸಿ, ಶುಚಿರ್ಭೂತವೆಂಬ ಹಸ್ತದಲ್ಲಿ ಮಹಾಲಿಂಗಕ್ಕೆ ನೈವೇದ್ಯವಂ ಕೊಟ್ಟು ಅರಿವು ಮರವೆಂಬ ಅಡಕೆಯನೊಡದು, ಶತಶಾಂತವೆಂಬ ಎಲೆಯಂ ಕೊಯಿದು, ನಿರ್ಗುಣವೆಂಬ ಸುಣ್ಣವಂ ನೀಡಿ, ಲಿಂಗಾರ್ಪಿತವಂ ಮಾಡಿ, ಪ್ರಸಾದವ ಸವಿವ ಲಿಂಗಾರ್ಚಕರ ಚರಣವ ತೋರಿ ಎನ್ನ ಸಲಹಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಇನ್ನಷ್ಟು ... -->