ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಜಾತನು ಜಾತನ ಜಾತಕನೆಂಬೆನು. ಅಜಾತಂಗೆ ಜಾತಂಗೆ ಕುಲಹೊಲೆಯಿಲ್ಲೆಂಬೆನು. ಹಿರಿಯಮಾಹೇಶ್ವರನೆಂಬೆನು. ಸಮಯಾಚಾರವ ಬೆರಸಲಮ್ಮೆನು. ನಿಚ್ಚ ಪೂಜಿಸುವ ಪೂಜಕ ನಾನು. ಸಕಳೇಶ್ವವರದೇವಾ, ಎನ್ನ ನಾಚಿಸಬೇಡ.
--------------
ಸಕಳೇಶ ಮಾದರಸ
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂದು ನಿಚ್ಚನಿಚ್ಚ ಹುಸಿವರು ನೋಡಾ. ವಾಯು ಬೀಸುವಲ್ಲಿ, ಬಯಲು ಬೆರಸುವಲ್ಲಿ, ಭಾಜನ ಸಹಿತ ಭೋಜನವುಂಟೆ ? ಅಂಗಕ್ಕೆ ಬಂದ ಸುಖವು, ಲಿಂಗವಿರಹಿತವಾದಡೆ ಸ್ವಯವಚನ ವಿರೋಧ. ಸಕಳೇಶ್ವರದೇವನು ಆಳಿಗೊಂಡು ಕಾಡುವ.
--------------
ಸಕಳೇಶ ಮಾದರಸ
ಅರ್ಥಸನ್ಯಾಸಿ, ಬ್ರಹ್ಮಚಾರಿ ಆನಯ್ಯ. ದೊರಕೊಳ್ಳದಿರ್ದಡೆ ಒಲ್ಲೆನೆಂಬೆನು. ದಿಟಕ್ಕೆ ಬಂದಡೆ ಪರಿಹರಿಸಲರಿಯೆನು. ಎನಗೆ ನಿಸ್ಪøಹದ ದೆಸೆಯನೆಂದಿಂಗೀವೆಯಯ್ಯಾ. ಸಕಳೇಶ್ವರದೇವಾ !
--------------
ಸಕಳೇಶ ಮಾದರಸ
ಅಯ್ಯಾ ನಿಮ್ಮಲ್ಲಿ ಸಾರೂಪ್ಯವರವ ಬೇಡುವೆನೆ ? ಬ್ರಹ್ಮನ ಶಿರಸ್ಸುವ ಹೋಗಾಡಿದೆ. ಅಯ್ಯಾ ನಿಮ್ಮಲ್ಲಿ ಸಾಮೀಪ್ಯವರವ ಬೇಡುವೆನೆ ? ವಿಷ್ಣು ದಶಾವತಾರಕ್ಕೆ ಬಂದ. ಅಯ್ಯಾ ನಿಮ್ಮಲ್ಲಿ ಸಾಯುಜ್ಯವರವ ಬೇಡುವೆನೆ ? ರುದ್ರ ಜಡೆಯ ಹೊತ್ತು ತಪಸ್ಸಿರುತ್ತೈದಾನೆ. ಅಯ್ಯಾ ನಿಮ್ಮಲ್ಲಿ ಶ್ರೀಸಂಪತ್ತೆಂಬ ವರವ ಬೇಡುವೆನೆ ? ಲಕ್ಷಿ ್ಮೀ ಪರಾಂಗನೆ ಪರಸ್ತ್ರೀ ಸಕಳೇಶ್ವರಯ್ಯಾ ಆವ ವರವನೂ ಒಲ್ಲೆನು. ಚೆನ್ನಬಸವಣ್ಣನ ಶ್ರೀಪಾದದ ಹತ್ತೆ ಇಪ್ಪಂಥ ವರವಕೊಡು.
--------------
ಸಕಳೇಶ ಮಾದರಸ
ಅಡವಿಗೆ ಹೋಗಿ ಏವೆನು ? ಮನದ ರಜ ತಮ ಬಿಡದು. ಆಡ ಕಾವನ ತೋರಿ, ಗಿಡುವ ಕಡಿವನ ಬಡಿದೆ. ಆಶ್ರಮವ ಕೆಡಿಸಿತ್ತಲ್ಲಾ. ಸಕಳೇಶ್ವರದೇವಾ, ನಿನ್ನ ಮಾಯೆ ಎತ್ತಹೋದಡೂ ಬೆನ್ನಬಿಡದು.
--------------
ಸಕಳೇಶ ಮಾದರಸ
ಅಂಗದ ಗುಣವಳಿದು ಲಿಂಗಾಗಿಯಾದ ನಿಜಶರಣನು, ಜಗದ ಠಕ್ಕರಾದ ಜಂಗುಳಿಗಳ ಬಾಗಿಲುಗಳಿಗೆ ಹೋಗನು ನೋಡ. ಹೋದಡೆ ಗುರುವಾಕ್ಯವಿಡಿದು ಹೋಗಿ, `ಲಿಂಗಾರ್ಪಿತ ಭಿಕ್ಷಾ' ಎಂದು ಭಿಕ್ಷವ ಬೇಡಿ, ಲಿಂಗಾಣತಿಯಿಂದ ಬಂದ ಭಿಕ್ಷವ, ಲಿಂಗ ನೆನಹಿನಿಂದ ಲಿಂಗನೈವೇದ್ಯವಾಗಿ ಕೈಕೊಂಡು, ಬಂದಬಂದ ಸ್ಥಲವನರಿದು, ಲಿಂಗಾರ್ಪಿತವ ಮಾಡಬೇಕು. ಅದೆಂತೆಂದಡೆ : ರಾಜಾನ್ನಂ ನರಕಶ್ಚೈವ ಸೂತಕಾನ್ನಂ ತಥೈವ ಚ | ಮೃತಾನ್ನಂ ವರ್ಜಯೇತ್ ಜ್ಞಾನೀ ಭಕ್ತಾನ್ನಂ ಭುಂಜತೇ ಸದಾ || ಇಂತೆಂದುದಾಗಿ, ಲಿಂಗಾಂಗಿಗೆ, ಲಿಂಗಾಭಿಮಾನಿಗೆ, ಲಿಂಗಪ್ರಾಣಿಗೆ ಇದೇ ಪಥವಯ್ಯಾ, ಸಕಳೇಶ್ವರದೇವಾ ನಿಮ್ಮಾಣೆ.
--------------
ಸಕಳೇಶ ಮಾದರಸ
ಅದು ಬೇಕು, ಇದು ಬೇಕುಯೆಂಬರು. ಎದೆಗುದಿಹಬೇಡ, ಸುದೈವನಾದಡೆ ಸಾಕು. ಪಡಿಪದಾರ್ಥ ತಾನಿದೆಡೆಗೆ ಬಹುದು. ನಿಧಿ ನಿಕ್ಷೇಪಂಗಳಿದ್ದೆಡೆಗೆ ಬಹವಯ್ಯಾ. ಹೃದಯಶುದ್ಧವಾಗಿ, ಸಕಳೇಶ್ವರಾ ಶರಣೆಂದಡೆ, ನಿಜಪದವನೀವ.
--------------
ಸಕಳೇಶ ಮಾದರಸ
ಅಂಗದ ಮೇಲಕ್ಕೆ ಶ್ರೀಗುರು ಲಿಂಗವಂ ಬಿಜಯಂಗೈಸಿದ ಬಳಿಕ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಆಲಸ್ಯವಿಲ್ಲದೆ ಭಯಭಕ್ತಿಯಿಂದ ಮಾಡೂದು ಭಕ್ತಂಗೆ ಲಕ್ಷಣ. ಇಂತಲ್ಲದೆ ಲಿಂಗಾರ್ಚನೆಯ ಬಿಟ್ಟು, ಕಾಯದಿಚ್ಛೆಗೆ ಹರಿದು, ಅದ್ವೈತದಿಂದ ಉದರವ ಹೊರೆದಡೆ, ಭವಭವದಲ್ಲಿ ನರಕ ತಪ್ಪದಯ್ಯ, ಸಕಳೇಶ್ವರಾ.
--------------
ಸಕಳೇಶ ಮಾದರಸ
ಅರಿವನಾಹಾರಗೊಂಬುದೆ ಪರಮಸುಖ. ಮರವೆಯ ತೆರಹುಂಟೆ ? ಶಿವೈಕ್ಯಂಗೆ ಇತರ ಸುಖವೆ ವ್ಯವಹಾರ. ಅರುಹಿರಿಯರ ಸಂಗಸುಖವೆ ಆಹಾರ. ಶ್ರುತಿಯಿಂದತಿಶಯ ಆ ಚರಿತನ ಮನವ, ಮಹಂತ ಸಕಳೇಶ್ವರದೇವ, ತಾನೆ ಬಲ್ಲ.
--------------
ಸಕಳೇಶ ಮಾದರಸ
ಅಶನ ವ್ಯಸನಾದಿಗಳನಂತನಂತ. ಕಾಶಾಂಬರಧಾರಿಗಳನಂತನಂತ. ಸಕಳೇಶ್ವರದೇವಾ, ನೀನಲ್ಲದೆ ಪೆರತನರಿಯದವರು ಎತ್ತಾನು ಒಬ್ಬರು
--------------
ಸಕಳೇಶ ಮಾದರಸ
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವ ಮಿಟ್ಟೆಯಭಂಡರ ಕಂಡು, ನಾಚಿತ್ತೆನ್ನ ಮನ. ಉಪಚಾರವೇಕೊ ಶಿವಲಿಂಗದ ಕೂಡೆ ಶ್ವಪಚರಿಗಲ್ಲದೆ ? ಸಕಳೇಶ್ವರಯ್ಯಾ, ಇಂತಪ್ಪ ಮಾದಿಗ ವಿದ್ಯಾಭ್ಯಾಸದವರನೊಲಿಯಬಲ್ಲನೆ ?
--------------
ಸಕಳೇಶ ಮಾದರಸ
ಅಂಕುರ ಪಲ್ಲವ ತರು ಕುಸುಮಫಲರಸಸಾರಾಯ ಇನಿತಿನಿತೆಲ್ಲಿದುದೊ, ಬೀಜ ಮೊಳೆದೋರದಂದು ? ನಾಭಿಗಳೆಯದ ಪಶುವಿನ ಅಮೃತವೆಲ್ಲಿದ್ದುದೊ, ವೃಷಭ ಮುಟ್ಟದಂದು ? ಘನಕುಚ ಯೌವನೆಯರ ರಜಪ್ರಶ್ನೆಯಲ್ಲಿ ಒದಗಿದ ಹಸುಗೂಸು ಎಲ್ಲಿದ್ದುದೂ, ಕೊಡಗೂಸು ಕನ್ಯೆಯಳಿಯದಂದು ? ತ್ರಿಜಗದ ಉತ್ಪತ್ಯ, ಸಚರಾಚರದ ಗಂಭೀರವೆಲ್ಲಿದ್ದುದೊ, ಶಿವನ ಅಷ್ಟತನುಮೂರ್ತಿಗಳಿಲ್ಲದಂದು ? ಸಪ್ತಸ್ವರ ಬಾವನ್ನಕ್ಷರವೆಲ್ಲಿದ್ದುದೊ, ಜ್ಞಾನ ಉದಯಿಸದಂದು? ಶರಧಿಯೊಳಗಣ ರತ್ನವೆಲ್ಲಿದ್ದುದೊ, ಸ್ವಾತಿಯ ಸಲಿಲವೆರಗದಂದು ? ಶರಣಪಥ ಲಿಂಗೈಕ್ಯವೆಲ್ಲಿದ್ದುದೊ, ಆರಾಧ್ಯ ಸಕಳೇಶ್ವರದೇವರು ಕರುಣಿಸಿ ಕಣ್ದೆರೆದು ತೋರದಂದು ?
--------------
ಸಕಳೇಶ ಮಾದರಸ