ಅಥವಾ

ಒಟ್ಟು 498 ಕಡೆಗಳಲ್ಲಿ , 71 ವಚನಕಾರರು , 445 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಂಡಲಿಗನೊಂದು ಕೀಡೆಯ ತಂದು ತನ್ನಂತೆ ಮಾಡಿತಲ್ಲಾ, ಎಲೆ ಮಾನವಾ, ಕೇಳಿ ನಂಬಯ್ಯಾ, ನೋಡಿ ನಂಬಯ್ಯಾ, ಎಲೆ ಮಾನವಾ. ತ್ವಚ್ಚಿಂತಯಾ ಮಹಾದೇವ ತ್ವಾಮೇವೈತಿ ನ ಸಂಶಯಃ ಭ್ರಮದ್‍ಭ್ರಮರಚಿಂತಾಯಾಂ ಕೀಟೋಡಿಪಿ ಭ್ರಮರಾಯತೇ ಕೂಡಲಸಂಗನ ಶರಣರ ಅನುಭಾವ ಇದರಿಂದ ಕಿರುಕುಳವೆ, ಎಲೆ ಮಾನವಾ
--------------
ಬಸವಣ್ಣ
ಅಡವಿಯಲೊಬ್ಬ ಕಡು ನೀರಡಿಸಿ, ಎಡೆಯಲ್ಲಿ ನೀರ ಕಂಡಂತಾುತ್ತಯ್ಯಾ. ಕುರುಡ ಕಣ್ಣ ಪಡೆದಂತೆ, ಬಡವ ನಿಧಾನವ ಹಡೆದಂತಾುತ್ತಯ್ಯಾ. ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ. 376
--------------
ಬಸವಣ್ಣ
ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ, ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ. ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ ! ಕುಂದು-ಹೆಚ್ಚ ನುಡಿವೆ. ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ, ಕೂಡಲಸಂಗನ ಶರಣರ ಎನ್ನಾಳ್ದರೆಂಬೆ. 256
--------------
ಬಸವಣ್ಣ
ಸಕಲ-ನಿಷ್ಕಲ, ರೂಪು-ನಿರೂಪು ಮಾಯಾ-ನಿರ್ಮಾಯ, ಕಾರಣ-ಅಕಾರಣ, ದೇಹ-ನಿರ್ದೇಹದಲ್ಲಿ ಅವಧಾನಿಯಾಗಿ, ಸವಾಯ-ನಿರ್ವಾಯ. ಸಂಕಲ್ಪ-ವಿಕಲ್ಪ, ಸಂಯೋಗ-ವಿಯೋಗ, ಪುಣ್ಯ-ಪಾಪ, ಧರ್ಮ-ಅಧರ್ಮಂಗಳೆಂಬ ಕಾಲ-ವೇಳೆಯಿಂದ ನಿರತನಾಗಿ, ಇಂತೀ ದ್ವಯ ಸಂಪಾದನೆಗಳ ಸಂಪಾದಿಸದೆ ಕೂಡಲಚೆನ್ನಸಂಗಯ್ಯನ ಶರಣರ ಕಾರುಣ್ಯಮಂ ಪಡೆವುದು
--------------
ಚನ್ನಬಸವಣ್ಣ
ಆಡಿ ಅಳುಪದಿರಾ, ಲೇಸಮಾಡಿ ಮರುಗದಿರಾ, ಎಲೆ ಮನವೆ. ಕೂಡಿ ತಪ್ಪದಿರಾ, ಬೇಡಿದವರಿಗಿಲ್ಲೆನ್ನದಿರು ಕಂಡಾ. ನಾಡ ಮಾತು ಬೇಡ, ಸೆರಗೊಡ್ಡಿ ಬೇಡು ಕೂಡಲಸಂಗನ ಶರಣರ. 279
--------------
ಬಸವಣ್ಣ
ಬಸವಣ್ಣನ ಪ್ರಸಾದದಿಂದ ಭಕ್ತಿಜ್ಞಾನ ವೈರಾಗ್ಯ ಸಂಪನ್ನನಾದೆನಯ್ಯ. ಚೆನ್ನಬಸವಣ್ಣನ ಪ್ರಸಾದದಿಂದ ಷಟ್‍ಸ್ಥಲಜ್ಞಾನಸಂಪನ್ನನಾದೆನಯ್ಯ. ಪ್ರಭುದೇವರ ಪ್ರಸಾದದಿಂದ ಪರಶಿವತತ್ವಸ್ವರೂಪವೇ ಎನ್ನ ಸ್ವರೂಪವೆಂದರಿದು ಸಮಸ್ತ ಸಂಸಾರಪ್ರಪಂಚ ಕೊಡಹಿದೆನು ನೋಡಾ. ನೀಲಲೋಚನೆಯಮ್ಮನ ಪ್ರಸಾದದಿಂದ ನಿಜಲಿಂಗೈಕ್ಯನಾದೆನಯ್ಯ. ಮಹಾದೇವಿಯಕ್ಕಗಳ ಪ್ರಸಾದದಿಂದ ಸುತ್ತಿದ ಮಾಯಾಪಾಶವ ಹರಿದು ನಿರ್ಮಾಯನಾಗಿ ನಿರ್ವಾಣಪದದಲ್ಲಿ ನಿಂದೆನಯ್ಯ. ಸಿದ್ಧರಾಮಯ್ಯನ ಪ್ರಸಾದದಿಂದ ಶುದ್ಧ ಶಿವತತ್ವವ ಹಡೆದೆನಯ್ಯ. ಮೋಳಿಗೆಯ ಮಾರಿತಂದೆಗಳ ಪ್ರಸಾದದಿಂದ ಕಾಯದ ಕಳವಳನಳಿದು ಕರ್ಮನಿರ್ಮಲನಾಗಿ ವೀರಮಾಹೇಶ್ವರನಾದೆನು ನೋಡಾ. ಇವರು ಮುಖ್ಯವಾದ ಏಳುನೂರೆಪ್ಪತ್ತುಮರಗಣಂಗಳ ಪರಮಪ್ರಸಾದದಿಂದ ಎನ್ನ ಕರಣಂಗಳೆಲ್ಲವು ಲಿಂಗಕರಣಂಗಳಾಗಿ ಕರಣೇಂದ್ರಿಯಂಗಳ ಕಳೆದುಳಿದು ಇಂದ್ರಿಯಂಗಳಿಗೆ ನಿಲುಕದ ಸ್ಥಾನದಲ್ಲಿರ್ದು ಪರಮಾನಂದ ಪ್ರಭಾಮಯನಾಗಿರ್ದೆನು ನೋಡಾ. ನಿಮ್ಮ ಶರಣರ ಪ್ರಸಾದದಿಂದ ನಾನು ಪ್ರಸಾದಿಯಾಗಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುನ್ನೂರು ಮುನ್ನೂರು ಮುನ್ನೂರು ವಾಸನೆಯನಳಿದುಳಿದ ವಾಸನೆಯ ಲತೆಗಳೊಳ್ಬೆಳೆದ ಅತಿಶಯಾನಂದರೂಪವನರಿಯಲಾರಳವಲ್ಲ ನೋಡಾ. ಭೂಚರರರಿಯರು ಖೇಚರರರಿಯರು ಪೆರ್ಚಲದಾಶ್ರಯವಗೊಂಡಾಯಸವನುಂಬ ಅರೆಮರುಳರಂತಿರಲಿ ಧರೆಯೊಳಿಪ್ಪ ನರರೆತ್ತ ಬಲ್ಲರು ಹೇಳಾ ! ನಿಮ್ಮ ಶರಣರ ಘನವ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ನಿಮ್ಮ ಶರಣರ ಚರಣದ ಭಕ್ತಿಯೇ ಎನಗೆ ಸಾಲೋಕ್ಯಪದವಯ್ಯಾ. ನಿಮ್ಮ ಶರಣರ ಅರ್ಚನೆ ಪೂಜೆಯೇ ಎನಗೆ ಸಾಮೀಪ್ಯಪದವಯ್ಯಾ. ಅಯ್ಯಾ, ನಿಮ್ಮ ಗಣಂಗಳ ಧ್ಯಾನವೇ ಎನಗೆ ಸಾರೂಪ್ಯಪದವಯ್ಯಾ. ಅಯ್ಯಾ, ನಿಮ್ಮ ಪುರಾತನರ ಜ್ಞಾನಾನುಭಾವ ಸಮರಸಾನಂದವೇ ಎನಗೆ ಸಾಯುಜ್ಯಪದವಯ್ಯಾ. ಇಂತೀ ಚತುರ್ವಿಧಪದಂಗಳನಲ್ಲದೆ ಅನ್ಯವ ನಾನರಿಯೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು, ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಂಡಿಹೆ ಕೇಳಿಹೆನೆಂದು ಮುಂದುಗಾಣದೆ ಸಂದೇಹದಲ್ಲಿ ಮುಳುಗಿ. ಕಳವಳಿಸಿ ಕಾತರಿಸುವ ಅಣ್ಣಗಳಿರಾ, ನೀವು ಕೇಳಿರೆ, ಹೇಳಿಹೆನು. ಕಾಣಬಾರದ ಘನವ ಹೇಳಬಾರದಾಗಿ, ಹೇಳುವುದಕ್ಕೆ ನುಡಿಯಿಲ್ಲ, ನೋಡುವುದಕ್ಕೆ ರೂಪಿಲ್ಲ. ಇಂತಪ್ಪ ನಿರೂಪದ ಮಹಾಘನವು ಶರಣರ ಹೃದಯದಲ್ಲಿ ನೆಲೆಗೊಂಬುದಲ್ಲದೆ, ಈ ಜನನ ಮರಣಕ್ಕೊಳಗಾಗುವ ಮನುಜರೆತ್ತ ಬಲ್ಲರು ಆ ಮಹಾಘನದ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಭಕ್ತಿಯೆಂಬ ನಿಧಾನವ ಸಾದ್ಥಿಸುವಡೆ ಶಿವಪ್ರೇಮವೆಂಬ ಅನಂಜನವನೆಚ್ಚಿಕೊಂಬುದು, ಭಕ್ತನಾದವಂಗೆ ಇದೇ ಪಥವಾಗಿರಬೇಕು. ನಮ್ಮ ಕೂಡಲಸಂಗನ ಶರಣರ ಅನುಭಾವ ಗಜವೈದ್ಯ. 243
--------------
ಬಸವಣ್ಣ
ಸೂರ್ಯನ ಉದಯ ತಾವರೆಗೆ ಜೀವಾಳ, ಚಂದ್ರಮನುದಯ ನೆ್ದುಲೆಗೆ ಜೀವಾಳ. ಕೂಪರಠಾವಿನಲ್ಲಿ ಕೂಟ ಜೀವಾಳವಯ್ಯಾ, ಒಲಿದ ರಾವಿನಲ್ಲಿ ನೋಟ ಜೀವಾಳವಯ್ಯಾ. ಕೂಡಲಸಂಗನ ಶರಣರ ಬರವೆನಗೆ ಪ್ರಾಣ ಜೀವಾಳವಯ್ಯಾ. 367
--------------
ಬಸವಣ್ಣ
ಇನ್ನಷ್ಟು ... -->