ಅಥವಾ

ಒಟ್ಟು 91 ಕಡೆಗಳಲ್ಲಿ , 23 ವಚನಕಾರರು , 81 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣದಠಾವಿನಲಿ ಜರೆದರೆಂದಡೆ ಕೇಳಿ ಪರಿಣಾಮಿಸಬೇಕು. ಅದೇನು ಕಾರಣ ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ ! ಎನ್ನ ಮನದ ತದ್‍ದ್ವೇಷವಳಿದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವಾ. 250
--------------
ಬಸವಣ್ಣ
ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ ಶಿವಲೆಂಕಮಂಚಣ್ಣಗೆ ಶಿವರಾತ್ರಿಯಯ್ಯಗಳಿಗೆ ಸಿದ್ಧರಾಮಯ್ಯಗಳಿಗೆ ಚಿಮ್ಮುಲಿಗೆಯ ಚಂದಯ್ಯ ಚಿಕ್ಕಯ್ಯ ಡೋಹರ ಕಕ್ಕಯ್ಯ ಒಕ್ಕುಮಿಕ್ಕ ಪ್ರಸಾದವಯಿಕ್ಕೆಯ್ಯಲ್ಲಿ ಕೊಂಬ ಅಕ್ಕನಾಗಾಯಿಗೆ ಹರಳಯ್ಯ ಮಧುವಯ್ಯ ಬಳ್ಳೇಶ್ವರಯ್ಯಗಳಿಗೆ ಹಾವಿನಾಳ ಕಲ್ಲಯ್ಯಗಳಿಗೆ ಸರವೂರ ಬಂಕಯ್ಯಗೆ ಸುರಗಿಯ ಚೌಡಯ್ಯಗೆ ಪರಿಪರಿಯ ಶರಣರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ವೀರಂಗೆ ರಣಾಗ್ರದ ಕದನ ಭೋರೆಂದು ಕಟ್ಟಿದಲ್ಲಿ ದೂರದಲ್ಲಿರ್ದೆಸೆವನೊಂದಂಬಿನಲ್ಲಿ. ಸೇರಿಬಂದರೆ ಹೊಯಿವ ಬಿಲ್ಲಿನಲ್ಲಿ. ಅವು ಮೀರಿ ಬಂದಲಿ ಇರಿವ ಕಠಾರಿಯಲ್ಲಿ. ಅದು ತಪ್ಪಿದಲ್ಲಿ ತೆಕ್ಕೆಯಲ್ಲಿ ಪಿಡಿವ, ಯುದ್ಧದಲ್ಲಿ ಬಿದ್ದಲ್ಲಿ ಕಡಿವ ಬಾಯಲ್ಲಿ. ಇಂತಿ ಅವರ ಪ್ರಾಣಕ್ಕೆ ಬಂದಲ್ಲಿ ಅವ ತನ್ನ ಧೈರ್ಯ, ವ್ರತವರತುದಿಲ್ಲ. ಹೀಂಗಿರಲಿಲ್ಲವೆ ಸದ್ಭಕ್ತನ ಗುಣ? ಹೊನ್ನು ಹೆಣ್ಣು ಮಣ್ಣುಳ್ಳ ಕಾಲದಲ್ಲಿಯೇ ಪನ್ನಗಧರನ ಶರಣರಿಗೆ ಅನ್ನೋದಕ ವಸ್ತ್ರಂಗಳಿಂದುಪಚಾರವ ಮಾಡುವುದು. ನೀಡಿ ಮಾಡುವ ಭಕ್ತರ ಮಠದ ಒಡಗೊಂಡು ಹೋಗಿ ತೋರುವುದು ಅದಕ್ಕಾಗದಿರ್ದಡೆ ಹರಶರಣರ ಕಮಂಡಲ ಕೊಂಡುಹೋಗಿ ಮಡುವಿನಲ್ಲಿ ಅಗ್ಘವಣಿಯ ತಂದು, ಪಾದವ ತೊಳುವುದು. ಅದಕ್ಕಾಗದಿರ್ದಡೆ ಶಿವಶರಣ ಕಂಡು, ಇದಿರೆದ್ದು ನಮಸ್ಕರಿಸುವುದು. ಇಷ್ಟರೊಳಗೊಂದು ಗುಣವಿಲ್ಲದಿರ್ದರೆ ಅವ ಭಕ್ತನಲ್ಲ, ಅವ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎಂದಡಾ ಮಾಯೆಯನು ಕರದಿಂ ತಂದೆ ಇಕ್ಕೆ ಜಾರಿ ಕೆಡುಹುವುದು. ಮಾಯೆ ಆರೂಢವೆಂಬವರ ಏಡಿಸುವುದು. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಶರಣರಿಗೆ ಅಂಜಿ ನಿಂದಿತು ಮಾಯೆ.
--------------
ಸಿದ್ಧರಾಮೇಶ್ವರ
ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲಾ ಕೇಳಿರಣ್ಣಾ: ಹಾಗದ ಕೆರಹ ಹೊರಗೆ ಕಳೆದು, ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ. ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪುದು. ಕೂಡಸಂಗನ ಶರಣರಿಗೆ ಸವೆಸಲೇಬೇಕು. 199
--------------
ಬಸವಣ್ಣ
ಸದ್ಭಕ್ತರ ಬಸುರಲ್ಲಿ ಹುಟ್ಟಿದ ಮಕ್ಕಳು ಭವಿಯನಾಚರಿಸಿದಡೆ ಪಂಚಮಹಾಪಾತಕವೆಂದುದು ವಚನ. ತಿಲಷೋಡಶಭಾಗಂ ಚ ತೃಣಾಗ್ರಾಂಬುಕಣೋಪಮಂ ಪಾದೋದಕಂ ಪ್ರಸಾದಾನ್ನಂ ನಾಶನಾನ್ನರಕಂ ವ್ರಜೇತ್ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರಿಗೆ ಸಂತಾನ ಅಭಿವೃದ್ಧಿಯಾಗದಿರಲಿ.
--------------
ಚನ್ನಬಸವಣ್ಣ
ತಿರಿದುಕೊಂಡು ಬಂದಾದರೆಯೂ ನಿಮ್ಮ ಭಕ್ತರಿಗೆ ಆನು ಬೆಸಕೆಯ್ವ ಭಾಗ್ಯವನು, ಮಾಡು ಕಂಡಯ್ಯಾ. ಮನ ವಚನ ಕಾಯದಲ್ಲಿ ನಿಮ್ಮ ಶರಣರಿಗೆ ಆನು ತೊತ್ತಾಗಿಪ್ಪುದು, ಮಾಡು ಕಂಡಯ್ಯಾ. ಹಲವು ಮಾತೇನು ಲಿಂಗಜಂಗಮಕ್ಕೆ ಈವುದನೆ ಮಾಡು ಕಂಡಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಾ.
--------------
ಸಂಗಮೇಶ್ವರದ ಅಪ್ಪಣ್ಣ
ಗುರುಹಿರಿಯರ ಪಾದಸೇವೆಯ ನೆರೆ ಮಾಡುವ ಪರಿಯ ಕೇಳಿರೊ ಭಕ್ತರು. ಮಾಡಿ ನೀಡುವಲ್ಲಿ ಸೊರಗಿ ಸೊಕ್ಕಿ ಕೆಕ್ಕಸಗೆಲವುತ್ತ ಮಾಡಲಾಗದು. ಸಲೆ ಪಂಕ್ತಿಯಲ್ಲಿ ಸಂಚು ವಂಚನೆ ಸನ್ನೆ ಸಟೆ ಮೈಸಂಜ್ಞೆಯಲುಂಬುದ ಬಿಟ್ಟು ಪನ್ನಗಧರನ ಶರಣರಿಗೆ ಬಿನ್ನಹವಮಾಡಿ ಬಿಜಯಂಗೆಯಿಸಿ ತಂದು ಪರಮಾನ್ನ ಪರಿಮಳದಗ್ಘಣಿಯ ನೀಡುವ ಭಕ್ತರಿಗೆ ಮುಕ್ತಿ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಅಗ್ಗಣಿತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ. ಪುಷ್ಪತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ. ಲಿಂಗಾರ್ಚನೆ ಘನಲಿಂಗಕ್ಕೆಡೆಯಿಲ್ಲ ! ಗುಹೇಶ್ವರಾ ಸಿದ್ಧರಾಮಯ್ಯದೇವರಿಗೆ ಆರೋಗಣೆಯಿಲ್ಲ, ಶರಣರಿಗೆ ಪ್ರಸಾದವಿಲ್ಲ.
--------------
ಅಲ್ಲಮಪ್ರಭುದೇವರು
ಹರಿ ಹತ್ತು ಭವ ಬಂದ; ಸಿರಿಯಾಗಿ ತೊಳಲಿತೈ ಉರಗ ಖೇಚರರನ್ನು ಒರಸಿತಯ್ಯಾ! ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಶರಣರಿಗೆ ಅಂಜಿ ಓಡಿದುದು ಮಾಯೆ.
--------------
ಸಿದ್ಧರಾಮೇಶ್ವರ
ಚಿನ್ನದಿಂದಾದ ಬಂಗಾರ ಚಿನ್ನದ ರೂಪಲ್ಲದೆ ಮತ್ತೊಂದು ರೂಪಾಗಬಲ್ಲುದೆ ಹೇಳಾ? ಲಿಂಗಮುಖದಿಂದ ಉದಯವಾದ ಶರಣರು ಲಿಂಗದ ರೂಪಲ್ಲದೆ, ಮತ್ತೊಂದು ರೂಪೆಂದೆನಬಹುದೇ? ಎನಲಾಗದು ನೋಡ. ಶಿವನ ಅಂಶವಾದ ಶರಣರಿಗೆ ಮಲಿನಭಾವ ಕಲ್ಪಿಸುವ ಮಹಾಪಾತಕರಿಗೆ ನಾಯಕನರಕ ತಪ್ಪದು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮನವೆ ಮಾರುತನ ಒಡಗೂಡಿರ್ದು, ತನುವೆ ವಿಕಾರದೊಳಗಿರ್ದು, ಮನವೆಂತು ಕಂಡಿತ್ತೆಂಬಿರಿ ? ಎಲೆ ಅಣ್ಣಗಳಿರಾ, ಘನವೆಂತಿಪ್ಪುದೆಂದರೆ, ಈ ತನುವ ಮರೆದು, ಹರಿವ ಮನವ ಲಿಂಗದಲಿ ನಿಲಿಸಿ, ಈ ಜನಿತಕ್ಕೆ ನಾನಿನ್ನಾರೆಂದು ತ್ರಿಕಾಲದಲ್ಲಿಯೂ ಎಮ್ಮ ಶರಣರಿಗೆ ನೆನೆವನೆ ನಿತ್ಯನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಂದು ಮೊದಲಾಗಿ ಇಂದು ಕಡೆಯಾಗಿ ಆ ಪರಾಪರದಲ್ಲಿ ಲೀಯವಾದ ಶರಣರಿಗೆ ಅಂಥಾದಿಂಥಾದೆಂದು ಹೇಳಬಾರದು. ಉಪಮಾತೀತವ ಹೇಂಗಿದ್ದುದೆಂದಡೆ, ಹಾಂಗೆ ಇದ್ದುದು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬ್ರಹ್ಮಸೃಷ್ಟಿ ಪಂಚಭೂತ ಸಮ್ಮಿಶ್ರದಿಂದಾದ ಕಾಯವು ಭೂತಕಾಯವು. ವಾಯುಪ್ರಾಣಿಗೆ ಉತ್ಪತ್ತಿಸ್ಥಿತಿಲಯ ಕಾರಣಕಾಯವು. ಈ ಪರಿಯ ಉತ್ಪತ್ತಿಯು ದೇವದಾನವ ಮಾನವರಿಗೆಯೂ ಒಂದೇ ಪರಿ. ಶ್ರೀಗುರುವಿನ ಸೃಷ್ಟಿಯಿಂದಲೂ, ಮಹಾಪ್ರಸಾದದಿಂದಲೂ ಮಹಾಮಂತ್ರಸಮ್ಮಿಶ್ರದಿಂದಾದ ಕಾಯವು ಪ್ರಸಾದಕಾಯವು. ಮಹಾಮಂತ್ರಪಿಂಡವು ಭಕ್ತಿಕಾಯವು. ಲಿಂಗಪ್ರಾಣಿಗೆ ಉತ್ಪತ್ತಿಸ್ಥಿತಿಲಯವಿಲ್ಲ. ಸತ್ಯನು ಸದ್ಯೋನ್ಮುಕ್ತನು. ಈ ಪರಿಯ ಶ್ರೀಗುರುಕಾರುಣ್ಯವ ಪಡೆದ ಮಹಾತ್ಮರಿಗೆ ಒಂದೇ ಪರಿ. ಶ್ರೀಗುರುವಿನ ಕಾರುಣ್ಯದ ಪರಿ ಶಿವಭಕ್ತನ ಇರವಿನ ಪರಿ ಇಂತುಟಯ್ಯಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ನಿಮ್ಮ ಶರಣರಿಗೆ ಲೋಕದ ಮಾನವರು ಸರಿ ಎಂದಡೆ ನಾಯಕನರಕ ತಪ್ಪದು.
--------------
ಉರಿಲಿಂಗಪೆದ್ದಿ
ಶರಣರಿಗೆ ಭವವುಂಟೆಂದು ಮತ್ರ್ಯದಲ್ಲಿ ಹುಟ್ಟಿದ ಭವಭಾರಿಗಳು ನುಡಿದಾಡುವರು. ತಮ್ಮ ಹುಟ್ಟ ತಾವರಿಯರು, ತಾವು ಮುಂದೆ ಹೊಂದುವದನರಿಯರು. ಇವರು ಬಂದ ಬಂದ ಭವಕ್ಕೆ ಕಡೆಮೊದಲಿಲ್ಲ . ಇಂತಪ್ಪ ಸಂದೇಹಿಗಳು ನಮ್ಮ ಶರಣರ ಹುಟ್ಟ ಬಲ್ಲೆನೆನಬಹುದೆ ? ತನ್ನ ನರಿದವನಲ್ಲದೆ ಇದಿರನರಿಯರು. ಈ ಉದರಪೋಷಕರೆಲ್ಲರೂ ಇದ ಬಲ್ಲೆನೆಂಬುದು ಹುಸಿ. ಇದ ಬಲ್ಲವರು ಬಲ್ಲರಲ್ಲದೆ, ಸೊಲ್ಲಿಗಭೇದ್ಯನ ನಾನೆತ್ತ ಬಲ್ಲೆ ? ಎನ್ನ ಗುರು ಚೆನ್ನಮಲ್ಲೇಶ್ವರನೇ ಬಲ್ಲ . ಇನ್ನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ .
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->