ಅಥವಾ
(17) (3) (0) (0) (3) (0) (0) (0) (7) (0) (0) (1) (0) (0) ಅಂ (4) ಅಃ (4) (4) (0) (2) (0) (0) (1) (0) (1) (0) (0) (0) (0) (0) (0) (0) (3) (0) (5) (0) (6) (2) (0) (4) (4) (5) (1) (1) (0) (3) (5) (9) (1) (4) (7) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ ಹಳೆಯ ಹುತ್ತದೊಳಗೊಂದು ಎಳೆಯ ಸರ್ಪನ ಕಂಡೆ. ಆ ಎಳೆಯ ಸರ್ಪ ಹೊರಟು, ಬೆಳಗು ಕತ್ತಲೆಯೆರಡೂ ನುಂಗಿತ್ತು. ಆ ಎಳೆಯ ಸರ್ಪನ ಕಂಡು, ಅಲ್ಲಿದ್ದ ತಳಿರ ಮರ ನುಂಗಿತ್ತು. ಆ ತಳಿರ ಮರನ ಕಂಡು ಮಹಾಬೆಳಗು ನುಂಗಿತ್ತು. ಆ ಮಹಾಬೆಳಗ ಕಂಡು, ನಾನೊಳಹೊಕ್ಕು ನೋಡಿದಡೆ, ಒಳಹೊರಗೆ ತೊಳತೊಳಗಿ ಬೆಳಗುತ್ತಿದ್ದಿತಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವ.
--------------
ಸಂಗಮೇಶ್ವರದ ಅಪ್ಪಣ್ಣ
ಅಂದಂದಿಗೆ ನೂರು ತುಂಬಿತ್ತೆಂಬ ದಿಟವಿರಬೇಕು. ಸಂದ ಪುರಾತನರ ನೆನೆಯುತ್ತಿರಬೇಕು. ಜಂಗಮ ಮಠಕ್ಕೆ ಬಂದಡೆ, ವಂಚನೆಯಿಲ್ಲದೆ ಮಾಡಬೇಕು. ಎನಗಿದೇ ವರವನೀವುದು, ಬಸವಪ್ರಿಯ ಕೂಡಲಚನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಂಗದ ಕಳೆ ಲಿಂಗದಲ್ಲಿ ಲೀಯವಾಗದು. ಲಿಂಗದ ಕಳೆ ಅಂಗದಲ್ಲಿ ಲೀಯವಾಗದು. ಮಾತಿನಮಾಲೆಯ ಬೊಮ್ಮವೇತರದೊ ? ಕಾಯ ಭಕ್ತನಾದರೆ ಭೃತ್ಯಾಚಾರವಿರಬೇಕು. ಪ್ರಾಣ ಜಂಗಮವಾದಡೆ ಅರಿದಿರಬೇಕು. ಇಂತು ಭಕ್ತಿಜ್ಞಾನವುಳ್ಳವರಲ್ಲದೆ ಭಕ್ತರಲ್ಲ, ಶರಣರಲ್ಲ. ಹಿರಿಯರು ಬಂದಡೆ ಇದಿರೆದ್ದು ಬಾರದವರ ಮನೆಗೆ ಅಡಿಯ ಇಡೆವೆಂದು, ಬಸವಪ್ರಿಯ ಕೂಡಲಚನ್ನಸಂಗನ ಶರಣರು ಕಾಡಿಹರು ಕಾಣಾ, ಸಂಗನಬಸವಣ್ಣಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಂಗ ಲಿಂಗವೆಂದರಿದಾತಂಗೆ, ಅಂಗದಲೆ ಐಕ್ಯ. ಕಂಗಳು ಲಿಂಗವೆಂದರಿದಾತಂಗೆ, ಕಂಗಳಲೆ ಐಕ್ಯ. ಕರವೆ ಲಿಂಗವೆಂದರಿದಾತಂಗೆ, ಕರದಲೆ ಐಕ್ಯ. ಈ ತ್ರಿವಿಧದ ನೆಲೆಯ, ಶ್ರುತಿ ಸ್ಮೃತಿಗಳರಿಯವು. ಎಮ್ಮ ಬಸವಪ್ರಿಯ ಕೂಡಲಚನ್ನಸಂಗಮದೇವನಲ್ಲಿ ಈ ಇರವ ಶರಣರೆ ಬಲ್ಲರು.
--------------
ಸಂಗಮೇಶ್ವರದ ಅಪ್ಪಣ್ಣ
ಅಲ್ಲಿಂದತ್ತ ಪಶ್ಚಿಮಚಕ್ರಕ್ಕೆ ಏಕದಳ ಪದ್ಮ, ಹವಣಿಸಬಾರದ ತೇಜ, ಏಕಾಕ್ಷರ, ಕುರುಹಿಡಬಾರದ ನಾದ, ಅಪ್ರದರ್ಶನ ವರ್ಣ, ನಿರ್ಭಿನ್ನ ಶಕ್ತಿ, ಸರ್ವಾತ್ಮನೆಂಬ ಜಂಗಮವೆ ಅಧಿದೇವತೆ. ಪರಿಪೂರ್ಣ ಜಂಗಮಲಿಂಗ, ಅಕ್ಷರಾಕ್ಷ[ರ]ತೀತ, ನಿಶ್ಶಬವಾಗಿಪ್ಪುದು. ಇಂತಪ್ಪ ಲಿಂಗಾಂಗವೆ ತಾನಾಗಿ, ಅವಿರಳ ಜಂಗಮಭಕ್ತಿಯ ಮಾಡಬಲ್ಲಾತನೆ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಸಂಗನಬಸವಣ್ಣನಯ್ಯಾ, ಪ್ರಭುವೆ.
--------------
ಸಂಗಮೇಶ್ವರದ ಅಪ್ಪಣ್ಣ
ಅಂಗದ ಪ್ರಕೃತಿ ಲಿಂಗದಲ್ಲಿ ಅಳಿದು, ಮನದ ಪ್ರಕೃತಿ ಅರಿವಿನಲ್ಲಿ ಅಳಿದು, ಜೀವಭ್ರಾಂತಿ ನಿಶ್ಚಿಂತಪದದಲ್ಲಿ ಅಳಿದು, ನಿಶ್ಶೂನ್ಯ ನಿರಾಮಯವಾದ ನಿವಾಸಕ್ಕೆ ಸದಾಚಾರವೆಂಬ ಕೆಸರುಗಲ್ಲನಿಕ್ಕಿ, ಸರ್ವಾಚಾರಸಂಪತ್ತೆಂಬ ಹೂಗಲ್ಲ ಮುಚ್ಚಿ, ಅಂತಃಕರಣಚತುಷ್ಟಯವೆಂಬ ನಾಲ್ಕು ಕಂಬಗಳಂ ನಿಲಿಸಿ, ಜ್ಞಾತೃವೆಂಬ ಭಿತ್ತಿಯ ಮೇಲೆ ಜ್ಞಾನವೆಂಬ ಶಿಖರಿಯನನುಗೊಳಿಸಿ, ಜ್ಞೇಯವೆಂಬ ಹೊನ್ನಕಳಶಮಂ ಶೃಂಗಾರಮಂ ಮಾಡಿ, ಬ್ರಹ್ಮರಂಧ್ರದ ಊಧ್ರ್ವದ್ವಾರವೆಂಬ ನಿಜದ್ವಾರಮಂ ಮಾಡಿ, ನಿರ್ವಯಲಲ್ಲಿ ನೆಲೆಗೊಳಿಸಿ, ಬಸವಪ್ರಿಯ ಕೂಡಲಚನ್ನಸಂಗನ ಶರಣ ಪ್ರಭುದೇವರ ಬರವಿಂಗೆ ಶೂನ್ಯಸಿಂಹಾಸನವಂ ರಚಿಸಿ, ಬರವ ಹಾರುತ್ತಿದನೆನ್ನ ಪರಮಗುರು ಬಸವಣ್ಣನು.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯಾ, ವೈಷ್ಣವರಾದವರು ತಮ್ಮ ವಿಷ್ಣುವ ಬಿಟ್ಟು ಕಳೆದು, ಲಿಂಗಭಕ್ತರಾದರನೇಕರು. ಅಯ್ಯಾ, ಜೈನರಾದವರು ತಮ್ಮ ಜಿನನ ಬಿಟ್ಟು ಕಳೆದು, ಲಿಂಗಭಕ್ತರಾದರನೇಕರು. ಅಯ್ಯಾ, ದ್ವಿಜರಾದವರು ತಮ್ಮ ಕರ್ಮಂಗಳ ಬಿಟ್ಟು ಕಳೆದು, ಲಿಂಗಭಕ್ತರಾದರನೇಕರು. ಲಿಂಗವ ಬಿಟ್ಟು, ಇತರವ ಹಿಡಿದವರುಳ್ಳರೆ ಹೇಳಿರಯ್ಯಾ ? ಉಳ್ಳಡೆಯೂ ಅವರು ವ್ರತಗೇಡಿಗಳೆನಿಸಿಕೊಂಬರು. ಇದು ಕಾರಣ, ಋಷಿ ಕೃತಕದಿಂದಲಾದ ಕುಟಿಲದೈವಂಗಳ ದಿಟವೆಂದು ಬಗೆವರೆ, ಬುದ್ಧಿವಂತರು ? ಸಟೆಯ ಬಿಡಲಾರದೆ, ದಿಟವ ನಂಬಲಾರದೆ, ನಷ್ಟವಾಗಿ ಹೋಯಿತ್ತೀ ಜಗವು ನೋಡಾ. ಸಕಲದೈವಂಗಳಿಗೆ, ಸಕಲಸಮಯಂಗಳಿಗೆ ನೀವೇ ಘನವಾಗಿ, ನಿಮಗೆ ಶರಣುವೊಕ್ಕೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅನಿಮಿಷನಾದ ನಿಬ್ಬೆರಗಿನ ಲಿಂಗೈಕ್ಯನು, ಭಾವ ನಿರ್ಭಾವವನೆಯ್ದಿ, ಜ್ಞಾನವೆ ಪರಮಾಶ್ರಯವಾಗಿಪ್ಪ ಲಿಂಗೈಕ್ಯನು, ಮಹವನೊಳಕೊಂಡ ಮಹಿಮ ಲಿಂಗೈಕ್ಯನು, ಬಸವಪ್ರಿಯ ಕೂಡಲ ಚನ್ನಸಂಗಯ್ಯಾ ನಿಮ್ಮ ಶರಣ ಪ್ರಭುದೇವರು.
--------------
ಸಂಗಮೇಶ್ವರದ ಅಪ್ಪಣ್ಣ
ಅತಕ್ರ್ಯನ ತರ್ಕಮುಖದಲ್ಲಿ ಸಾಧಿಸಿದೆನೆಂದಡೆ, ನಿಮ್ಮ ತರ್ಕಶಾಸ್ತ್ರಕೊಂಬುದೆ ಎಲೆ ತರ್ಕಿಗರಿರಾ. ಅಪ್ರಮಾಣನನ ಪ್ರಮಾಣಿಸಿದೆನೆಂದಡೆ ನಿಮ್ಮ ಪ್ರಮಾಣೆಲ್ಲಿಗೆ ಬಹವೆಲೆ ಅಪ್ರಮಾಣಕರಿರಾ. ವೇದ ವೇಧಿಸಲರಿಯದೆ `ಚಕಿತಮಭಿದತ್ತೇ' ಎನಲು, ಅಂತ್ಯನಾಸ್ತಿಯಾದ ಮಹಾಂತಂಗೆ ನಿಮ್ಮ ವೇದಾಂತವೇಗುವವು ಎಲೆ ವೇದಾಂತಿಗಳಿರಾ. ಕರ್ಮಾದಿರಹಿತ ನಿರ್ಮಾಯ ಶಿವಂಗೆ ನಿಮ್ಮ ಕರ್ಮಂಗಳೆಲ್ಲಿಗೆ ನಿಲುಕವವು ಎಲೆ ಪ್ರಭಾತರಿರಾ. ಕಾಲಂಗೆ ಕಾಲ ಮಹಾಕಾಲ ಕಾಲಾತೀತ ಮಹಾದೇವಂಗೆ ನಿಮ್ಮ ಕಾಲವೇದವೇಗುವವು ಎಲೆ ಭ್ರಾಂತರಿರಾ. ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಂ | ಅನಿಂದಿತಮನೌಪಮ್ಯಂ ಅಪ್ರಮೇಯಮನಾಮಯಂ ಶುದ್ಧತ್ವಂ ಶಿವಮುದಿಷ್ಟಂ ಪರಾದೂಧ್ರ್ವಂ ಪರಾತ್ಪರಂ || ಇಂತೆಂದುದಾಗಿ, ದರುಶನವಾದಿಗಳೆಲ್ಲ ದರುಷನ ಭ್ರಮೆಯ ಬಿಟ್ಟು ಹರುಷದಿಂದ ಭಜಿಸಿ ಬದುಕಿರೆ, ಬಸವಪ್ರಿಯ ಕೂಡಲಚನ್ನ ಸಂಗಯ್ಯನ.
--------------
ಸಂಗಮೇಶ್ವರದ ಅಪ್ಪಣ್ಣ
ಅಗ್ಗದ ಹರಿಬ್ರಹ್ಮರ ಮರೆದೊಮ್ಮೆ ಹರಂಗೆ ಸಮವೆಂದಡೆ, ಅವನು ಚಾಂಡಾಲನು. ಅವನ ಮುಖವ ನೋಡಲಾಗದು. ಅದೆಂತೆಂದಡೆ: ಯೋ ಮಹಾದೇವಮನ್ಯೇನ ಹೀನದೇವೇನ ದುರ್ಮತಿಃ | ಸಕೃತ್ಸಾಧಾರಣಂ ಬ್ರೂಯಾದಂತ್ಯಜಾನಾಂತ್ಯಜೋsಂತಜಃ || ಇಂತೆಂದುದಾಗಿ, ನಿಮಗೆ ಕಿರುಕುಳದೈವಂಗಳ ಸಮವೆಂದು ಬಗಳುವನ ಬಾಯಿ ಪಾಕುಳತಪ್ಪದು, ಬಸವಪ್ರಿಯ ಕೂಡಲಚನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಜಹರಿಸುರರೆಲ್ಲರು ಅಳಿದವರಲ್ಲದೆ, ಉಳಿದವರಿಲ್ಲ. ಶಿವನೆ ನಿತ್ಯನೆಂದು ಹೊಡೆವಡುತ್ತಿವೆ ವೇದ. ಉತೈನಂ ವಿಶ್ವಾಭೂತಾನಿ ಸದೃಷ್ಟೋ ಮೃಡಯಾತಿನಃ | ನಮೋಸ್ತು ನೀಲಗ್ರೀವಾಯ ಸಹಸ್ರಾಕ್ಷಾಯ ಮೀಡುಷೇ || ಎಂಬ ಶ್ರುತಿ, ಬಸವಪ್ರಿಯ ಕೂಡಲಚನ್ನಸಂಗಯ್ಯನೊರ್ವನೆ ನಿತ್ಯನೆಂದು ಹೊಗಳುತ್ತಲಿದೆ.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯಾ ಎನ್ನ ಹಲ್ಲ ಮರೆಯಲ್ಲಿಪ್ಪ ಬೆಲ್ಲವ ಕಂಡು, ಎಲ್ಲರೂ ಮೆಲಬಂದರು. ಬೆಲ್ಲಗಳಿದ್ದಡೆ ನಿಲಲೀಸದೆ ಎನ್ನ ಕಾಡುತ್ತಿದಾರೆಯೆಂದು, ಆ ಬೆಲ್ಲವನಲ್ಲಿಯೆ ನುಂಗಿದಡೆ, ಹಲ್ಲು ಮುರಿದವು. ಮೆಲಬಂದವರೆಲ್ಲ ಅಲ್ಲಿಯೆ ಬಯಲಾದರು. ನಾ ನಿಮ್ಮಲ್ಲಿ ಕೂಡಿ ಸುಖಿಯಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯಾ ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯಾ. ಮರ ಬೆಂದು ನಿಂದುರಿಯಿತ್ತು , ಮಣ್ಣು ಜರಿದು ಬಿದ್ದಿತ್ತು. ಉರಿ ಹೊಗೆ ನಂದಿತ್ತು , ಸ್ವಯಂಪ್ರಕಾಶವಾಗಿಪ್ಪ ಉರಿ ಉಳಿಯಿತ್ತು. ಆ ಉರಿ ಬಂದು ಎನ್ನ ಕರಸ್ಥಲದಲ್ಲಡಗಿತ್ತು . ಇದ ಕಂಡು, ನಾ ಬೆರಗಾಗಿ ನೋಡುತ್ತಿದ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಷ್ಟತನುವಿನೊಳಗೊಂದು ತನುವಾಗಿ, ಜೀವಾತ್ಮನು ಪಾಶಬದ್ಧನು ಪಶುಪಾಗತಂತ್ರನು ಸ್ವತಂತ್ರವೆಲ್ಲಿಯದೊ ? ಸ್ವತಂತ್ರ ಶಿವನೊಬ್ಬನೆ ತನ್ನ ಇಚ್ಛಾಲೀಲೆಯಿಂದಾಡಿಸುವ ಘೋರಸಂಸಾರ ಭವವಾರಿಧಿಯೊಳಗೆ ರಾಟಾಳದ ಗುಂಡಿಗೆಯೊಳಗಣ ಜಲದ ತೆರದಿ ತುಂಬುತ್ತ ಕೆಡಹುತ್ತವಿರುಹವೈಸಲ್ಲದೆ ತೆರಹಿಲ್ಲ. ಪುಣ್ಯಪಾಪಂಗಳ ಮಾಡಿ ಸ್ವರ್ಗನರಕಂಗಳ ಭೋಗಿಸಿ ಪರತಂತ್ರವಲ್ಲದೆ ಸ್ವತಂತ್ರವೆಲ್ಲಿಯದೊ ? ಪುನರ್ಜನ್ಮ ಪುನರ್ಮೃತ್ಯುಃ ಪುನಃ ಕ್ಲೇಶಃ ಪುನಃ ಪುನಃ | ಸಗರಸ್ಥಘಟನ್ಯಾಯೋ ನ ಕದಾಚಿದವೈದೃಶಃ || ಎಂದುದಾಗಿ, ಜೀವಾತ್ಮಂಗೆ ಪರಮಾತ್ಮತ್ವ ಸಲ್ಲದಾಗಿ, ಅಷ್ಟತನುವಿನೊಳಗೊಂದು ತನು ಕಾಣಿಭೋ, ಎಲೆ ಅದ್ವೈತಿಗಳಿರಾ. ಹುಟ್ಟುಕುರುಡನು ತನ್ನ ಹಿರಿಯಯ್ಯ ಹೆತ್ತಪ್ಪಂಗೆ ಮುಖವೆಲ್ಲ ಕಣ್ಣೆಂದಡೆ, ತನಗಾದ ಸಿದ್ಧಿ ಯಾವುದು ? ಆದಿ ಸಿದ್ಧಾಂತ ವೇದಾಂತ ಶಾಸ್ತ್ರವನೋದಿ ಕೇಳಿ ಹೇಳಿದಡೆ, ತನಗೇನು ಸಿದ್ಧಿಯಾದುದೆಲೆ ಆತ್ಮತತ್ತ್ವವಾದಿಗಳಿರಾ ಹೇಳಿರೆ ? ಅಷ್ಟತನುಗಳೆಲ್ಲ ಪರತಂತ್ರವೆಂಬುದ ಶ್ರುತದೃಷ್ಟಾನುಮಾನಂಗಳಿಂ ನಿಮ್ಮ ತಿಳುಪುವದೆ ? ಆತ್ಮಾಂತರಾಣಿ ಪಶವಃ ಪರತಂತ್ರಭಾವಾತ್ಸತಸ್ವತಂತ್ರಃ ಪಶುಪತೇ ಪಸುಧೇಶ್ವರಸ್ವಂ | ಆತ್ಮಾನಮಾಷನಿಷದಾ ಪ್ರವದಂತ್ಯನೀಶ ಈಶಂ ಭವಂತ ಮುಖಯೋರುಭಯಂ ಸ್ವಭಾವಃ || ಇಂತೆಂದುದಾಗಿ, ಆತ್ಮಂಗೆ ಪಶುತ್ವವೆ ಸ್ವಭಾವ, ಶಿವಂಗೆ ಪತಿತ್ವವೆ ಸ್ವಭಾವ, ಇದು ಶ್ರುತ. ಇನ್ನು ದೃಷ್ಟವೆಂತೆನಲು, `ಜೀವಶ್ಶಿವಶಿವೋ ಜೀವಸ್ಯ ಜೀವಃ', ಜೀವನೆ ಶಿವನು, ಶಿವನೆ ಜೀವನು. ಬರಿದೆ ಶಿವನೆಂದು ನುಡಿವರು, ಮೇಲಣ ಪದಾರ್ಥವ ನುಡಿಯರು. `ಪಾಶಬದ್ಧೋ ಪಶುಪ್ರೋಕ್ತಃ ಪಾಶಮುಕ್ತಃ ಪರಶ್ಶಿವಃ' ಎಂಬ ಪದಾರ್ಥವ ನುಡಿಯರು. ಪಾಶಬದ್ಧ ಜೀವನರಾಗಿ ಪಶುವೆನಿಸುವನು ಪಾಶಮುಕ್ತನು. ಶಿವನಾಗಿ ಆ ಪಶುವಿಂಗೆ ಪರನಾದ ಶಿವನು ಪತಿಯೆನಿಸುವನು. `ಬ್ರಹ್ಮದ ಸರ್ವದೇವಃ ವೇಷವಃ'ಯೆಂಬ ಶ್ರುತ್ಯಾರ್ಥವನು ಪ್ರಮಾಣಿಸಿ, ಪಶುವೆ ಪತಿಯೆಂದು ನುಡಿವರು ಅನಭಿಜ್ಞರು. || ಶ್ರುತಿ || `ರುದ್ರಃ ಪಶುನಾಮಧಿಪತಿರಿತಃ' ಪಶುಗಳಿಗೆ ಶಿವನೆ ಒಡೆತನವುಳ್ಳ ತನ್ನಾಧೀನವುಳ್ಳ ಮಾಯಾಪಾಶದಿಂ ಕಟ್ಟಲು ಬಿಡಲು, ಶಿವನೆ ಪತಿಯೆಂಬ ತಾತ್ಪರ್ಯಾರ್ಥವ ನುಡಿಯರು. ಇದು ದೃಷ್ಟಾಂತ, ಇನ್ನು ಅನುಮಾನವೆಂತೆನಲು ಕೇಳಿರೆ. ಮಾನುಷಂಗೆ ಪ್ರಸನ್ನಭಕ್ತಿ ಪ್ರಸಾದವ ಕೃಪೆ ಮಾಡಲು, ಮಾನುಷ್ಯಂಗೆ ಕಾಮಿತ ನಿಃಕಾಮಿತ ಭಕ್ತಿಯಿಂದ ಭೋಗಮೋಕ್ಷವನೀವನಾ ಶಿವನು. ನರನೊಳಗಾಗಿ ನರಪತಿಯ ಸೇವೆಯ ಮಾಡುವಲ್ಲಿ, ನಿರುಪಾಧಿಕಸೇವೆಯಿಂದ ಅತಿಶಯ ಪದವನೀವನು. ಉಪಾಧಿಕಸೇವೆಯಿಂದ ಸಾಧಾರಣಪದವನೀವನು. ಇದೀಗ ಅನುಮಾನ ಕಂಡಿರೆ. ಇಂತೀ ಅಷ್ಟತನುಗಳೊಳಗಾದ ಸಮಸ್ತರು ಪಶುಗಳು. ಇವಕ್ಕೆ ಪತಿ ಶಿವನೆಂಬುದಕ್ಕೆ ಕೇಳಿರೆ. ಪೃಥಿವ್ಯಾಭವ ಅಪಾಂ ಶರ್ವ ಆಜ್ಞೇ ರುದ್ರಃ ವಾಯೋರ್ಭೀಮಃ | ಆಕಾಶ್ಶಾತ್ಯ ಮಹಾದೇವ ಸೂರ್ಯಸ್ಯೋಗ್ರಃ ಚಂದ್ರಸ್ಯ ಸೋಮಃ | ಆತ್ಮನಃ ಪಶುಪತಿರಿತಃ | ಎಂದೆನಲು, ಅಷ್ಟತನುಗಳು ಪಶುಗಳು, ಪತಿ ಶಿವನು ಕೇಳಿರೆ. ಇಂತೀ ಅಷ್ಟತನುಗಳು ಶಿವನಾಜ್ಞೆಯ ಮೀರಲರಿಯವೆಂಬುದಕ್ಕೆ ದೃಷ್ಟಾವಾರುಣಿಚೋಪನಿಷತ್ಸುಭೀಸ್ಮಾದ್ವಾತಃ ಪವತೇಶ್ಚಾಗ್ನಿಶ್ಚಭಿಷೋದೇತಿ ಸೂರ್ಯಃ ಭೀಷಾಂದ್ರರ ಮೃತ್ಯುರ್ಧಾವತಿ ಪಂಚಮಃ | ಇಂತಾಗಿ, ಆಕಾಶಃ ಪರಪರಮೇಶಸ್ಯ ಶಾಸನಾದೇವ ಸರ್ವದಾ ಪ್ರಾಣಾಪಾನಾದಿಭಿಶ್ಚಯ ಭೇದ್ಯದಂತಯಿರ್ಲಹಿರ್ಜಗತ್ ಭಿಬರ್ತಿ ಸರ್ವರೀ ಸರ್ವರೀ ಸರ್ವಸ್ಯ ಶಾಸನೇವ ಪ್ರಭಾಜನಾ || ಎಂದುದಾಗಿ, ಹವ್ಯಂ ವಹತಿ ದೇವಾನಾಂ ತವ್ಯಂ ತವ್ಯಾಶ ತಾಮಪಿ | ಪಾಕಾದ್ಯಂ ಚ ಕರೋತ್ಯಗ್ನಿಃ ಪರಮೇಶ್ವರ ಶಾಸನಾತ್ || ಸಂಜೀವನಾದ್ಯಂ ಸರ್ವಸ್ಯ ಕುರ್ವಂತ್ಯಾಪಸ್ತದಾಜ್ಞಯಾ | ವಿಶ್ವಂ ವಿಶ್ವಂಭರಾನ್ನಿತಂ ದತ್ತೇ ವಿಶ್ವೇಶ್ವರಾಜ್ಞಯಾ | ತ್ರಿಭಿಕಿ ತ್ರೈಜಗಭಿಬ್ರತೇಜೋಬಿರ್ವಿಷಮಾದದೇ | ವಿವಿಸ್ಸರ್ವಸ್ಯ ಸಭಾನು ದೇವದೇವಸ್ಯ ಶಾಸನಾತ್ | ಪುಷ್ಯತ್ಯೇಷದಿಜತಾನಿ ಭೂತಾ ನಿಹ್ಲಾದಯಂತ್ಯಪಿ | ದೇವೈಶ್ಯಪಿಯತೇ ಚಂದ್ರಶ್ಚಂದ್ರ ಭೂಷಣಂ ಶಾಸನಾತ್ | ತೇಸ್ಯಾಜ್ಞಾಂ ವಿನಾ ತೃಣಾಗ್ರಮಪಿ ನಚಲತಿ || ಇಂತೆಂದುದಾಗಿ, ಇದು ಕಾರಣ, ಆತ್ಮಸ್ವರ ಬಸವಪ್ರಿಯ ಕೂಡಲಚೆನ್ನಸಂಗಯ್ಯನೆಂದರಿಯರೆಲ್ಲರು. ಪಶುಗಳು ಪಾಶಬದ್ಧರೆಂದು ಎತ್ತಿ ತರ್ಜನಿಯವ ಉತ್ತರ ಕೊಡುವರುಳ್ಳರೆ ನುಡಿ ಭೋ.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯಾ, ಎನಗೆ ಭಕ್ತಿಯುಂಟೆಂಬ ಮಾತೇ ಡಂಬು ನೋಡಯ್ಯಾ. ಎನಗಾ ಮಾತಿಂಗಧಿಕಾರವೆಲ್ಲಿಯದಯ್ಯಾ. ತಲೆಹುಳಿತ ನಾಯಿಗೆ ಉಚ್ಛಿಷ್ಟಾನ್ನ ಬಂದುದೆ ಭಾಗ್ಯವು. ಒಂದರೊಳಗೊಂದನರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನ ಸಂಗಯ್ಯಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಜನಂದು ಸಾರಿ ಹೇಳಿದ ಸುರಮುನಿಗಳೆಲ್ಲರಿಗೂ : ಶಿವನನೆ ಧ್ಯಾನಿಸಿ, ಶಿವನನೆ ಪೂಜಿಸಿ, ಶಿವಭಕ್ತಿಯೆ ನಿಮಗೆ ಪರಮಸಾಧನವೆಂದು ಬೊಬ್ಬಿಟ್ಟು, ಬೆರಳನೆತ್ತಿ ಸಾರಿದನು. ವಿಷ್ಣುಭಕ್ತಿಯಿಂದವೂ ತನ್ನ ಭಕ್ತಿಯಿಂದವೂ ನಿಮಗೆ ಸದ್ಗತಿ ಇಲ್ಲವೆಂದನು. ಅದೆಂತೆಂದಡೆ : ವಿಷ್ಣುಭಕ್ತ್ಯ ಚ ಮದ್ಭಕ್ತ ನಾಸ್ತಿ ನಾಸ್ತಿ ಪರಾಗತಿಃ | ಶಂಭು ಭಕ್ತೈವ ಸರ್ವೇಷಾಂ ಸತ್ಯಮೇವಮಯೋದಿತಂ || ಎಂದುದಾಗಿ, ದ್ವಿಜರಿಗೆ ಉಪದೇಶ ಬೇರಿನ್ನು ಮತ್ತಿಲ್ಲ , ಬಸವಪ್ರಿಯ ಕೂಡಲಚನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅನೇಕ ಪರಿಯ ಭಕ್ತಿಯ ವೇಷವನಳವಡಿಸಿಕೊಂಡು, ಮನೆಮನೆದಪ್ಪದೆ ತಿರುಗುವೆನು. ಅವರ ಇಚ್ಛಿಗೆ ಅನುಮಾನವಿಡಿದು ನುಡಿವೆನು. ಅವರ ಮನಧರ್ಮವನರಿಯದೆ ನುಡಿದೆನಾದಡೆ, ಅನೇಕ ಪರಿಯಲ್ಲಿ ಭಂಗಬಡುವೆನು. ದಿಟದ ಭಕುತನಂತೆ, ಪುರಾತರ ವಚನಂಗಳ ಉದರ ನಿಮಿತ್ತವಾಗಿ ಬಳಸುವೆನು. [ಕಡು] ಪಾಪಿಗಿನ್ನೇನು ಹದನಯ್ಯ, ಬಸವಪ್ರಿಯ ಕೂಡಲಚೆನ್ನ ಸಂಗಮದೇವಾ ?
--------------
ಸಂಗಮೇಶ್ವರದ ಅಪ್ಪಣ್ಣ