ಅಥವಾ

ಒಟ್ಟು 162 ಕಡೆಗಳಲ್ಲಿ , 40 ವಚನಕಾರರು , 123 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಶಿಷ್ಯರಿಬ್ಬರೂ ಸಹಪಂಕ್ತಿಯಲ್ಲಿ ಲಿಂಗಾರ್ಚನೆ ಮಾಡಿಹೆವೆಂಬರಯ್ಯಾ! ಹೋ! ಹೋ! ಬಾಲಭಾಷೆಯ ಕೇಳಲಾಗದು. ಅಲ್ಲಲ್ಲ, ಮಾಡಬಹುದು. ಅದೇನು ಕಾರಣ? ಗುರುವಿನ ಅರಿವಿನ ಹರಿವನರಿಯಬಲ್ಲಡೆ ಮಾಡಬಹುದು, ಮಾಡಬಹುದು. ಶಿಷ್ಯ ಪ್ರಸಾದವೆಂಬುಭಯಸಂದೇಹ ಹಿಂದುಳಿಯಬಲ್ಲಡೆ, ಮಾಡಬಹುದು, ಮಾಡಬಹುದು. ಇದಲ್ಲದೆ ಲಿಂಗಪ್ರಸಾದದ ಮೇಲೆ ಗುರುಪ್ರಸಾದವನಿಕ್ಕಿಹೆನೆಂಬ ಶಿವದ್ರೋಹಿಗಳನೇನೆಂಬೆ! ಕೊಂಡೆಹೆನೆಂಬ ಗುರುದ್ರೋಹಿಗಳನೇನೆಂಬೆ! ಇದು ಕಾರಣ, ಮಹಾಘನಸೋಮೇಶ್ವರಾ, ನಿಮ್ಮಲ್ಲಿ, ಇವರಿಬ್ಬರ ಗುರು ಶಿಷ್ಯರೆಂದೆನಾದಡೆ, ಎನ್ನನದ್ದಿ ನೀನೆದ್ದು ಹೋಗಯ್ಯಾ?
--------------
ಅಜಗಣ್ಣ ತಂದೆ
ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ. ಪರರ ಬೋಧಿಸಿಕೊಂಡುಂಬಾತ ಜಂಗಮವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ. ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ, ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ. ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ. ಆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಿಡಿದು ಮಾಡುವಾತ ಭಕ್ತ_ ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು ವೇಷಧಾರಿಗಳೆತ್ತ ಬಲ್ಲರು ಬಸವಣ್ಣನೊಬ್ಬನೆ ಬಲ್ಲನಲ್ಲದೆ.
--------------
ಅಲ್ಲಮಪ್ರಭುದೇವರು
ಅಂಧಕನು ಓಡ ಹಿಡಿದು ಸ್ವರೂಪವ ತಾ ನೋಡುವಂತೆ, ಶೈವ ಗುರುವಿನಲ್ಲಿ ಲಿಂಗ ಸಾಹಿತ್ಯವಾದ ಶಿಷ್ಯನ ವಿಧಿಯ ನೋಡಿರೆ ! ಗುರುವಿಂಗೆ ದೂರಾರ್ಚನೆ ಶಿಷ್ಯಂಗೆ ಇಷ್ಟಲಿಂಗಾರ್ಚನೆ, ಗುರು ವಾಯುಪ್ರಾಣಿ, ಶಿಷ್ಯ ಲಿಂಗಪ್ರಾಣಿ, ಗುರು ಭೂತದೇಹಿ, ಶಿಷ್ಯ ಲಿಂಗದೇಹಿ, ಗುರು ಅನರ್ಪಿತಭುಂಜಕ, ಶಿಷ್ಯ ಲಿಂಗಾರ್ಪಿತಭುಂಜಕ, ಗುರು ಅಗ್ನಿದಹನಸಂಪತ್ತು, ಶಿಷ್ಯ ಸಿದ್ಧಸಮಾಧಿಸಂಪತ್ತು, ಎಂತುಂಟು ಹೇಳಿರಣ್ಣಾ ? ``ಜ್ಞಾನಹೀನಗುgõ್ಞ ಪ್ರಾಪ್ತೇ ಶಿಷ್ಯಜ್ಞಾನಂ ನ ಸಿಧ್ಯತಿ ಮೂಲಚ್ಛಿನ್ನೇ ಯಥಾ ವೃಕ್ಷೇ ಕಥಂ ಪುಷ್ಪಂ ಫಲಂ ಭವೇತ್ ಎಂದುದಾಗಿ ಇವರಿಬ್ಬರ ಗುರುಶಿಷ್ಯಸಂಬಂಧಕ್ಕೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಬಹುಜನ್ಮಭಾರಿಗಳ ಕರತಂದು ಹಿರಿಯತನದಾಸೆಗೆ ಹರಿದು ಉಪದೇಶವ ಕೊಟ್ಟರೆ ಗುರುಶಿಷ್ಯಭಾವ ಸರಿಯಪ್ಪುದೆ ? ಕಣ್ಣಿಲ್ಲದ ಗುರು, ಕುರುಡ ಶಿಷ್ಯ, ಅವರಿಗಾಚಾರ ವಿಚಾರ ಸಮಯಾಚಾರಸಂಬಂಧವೆಂತಪ್ಪುದಯ್ಯಾ, ಭೂತ ಅದ್ಭೂತ ಅವಿಚಾರ ಘಟಿತರಿಗೆ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಪುರುಷನಿಂದ ಸತಿ ಹಿರಿಯಳಾದರೂ ಆಗಲಿ, ಹಸೆಹಂದರವನಿಕ್ಕಿ ಮದುವೆಯ ಮಾಡಿದ ಮೇಲೆ ಪುರುಷನಿಂದ ಕಿರಿಯಳು ನೋಡಾ. ಗುರುವಿಗಿಂದ ಶಿಷ್ಯ ಅರುಹುಳ್ಳಾತನಾದರೂ ಆಗಲಿ, ಶಿಷ್ಯನ ಭಾವಕ್ಕೆ ಗುರು ಅದ್ಥಿಕ ನೋಡಾ. ನಾನರುಹುಳ್ಳಾತ, ಗುರುವಿಗರುಹುವಿಲ್ಲೆಂದು ಜರೆದು ನುಡಿವ ನುಡಿ ಅಂಗದೊಳು ಹೊಳೆದರೆ ಕುಂಬ್ಥಿನಿಯ ಪಾಪದೊಳಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುವಿಲ್ಲದ ಲಿಂಗ, ಲಿಂಗವಿಲ್ಲದ ಗುರು ಗುರು_ಲಿಂಗವಿಲ್ಲದ ಶಿಷ್ಯ. ಶಿಷ್ಯನಿಲ್ಲದ ಸೀಮೆ, ಸೀಮೆಯಿಲ್ಲದ ನಿಸ್ಸೀಮ ಕೂಡಲಚೆನ್ನಸಂಗಾ ನಿಮ್ಮ ಶರಣ
--------------
ಚನ್ನಬಸವಣ್ಣ
ಉಣ್ಣದೆ ತೃಪ್ತನಾದ ಗುರು. ಆ ಗುರುವು ಪೆಸರ್ಗೊಳ್ಳದೆ ಮುನ್ನವಾದ ಶಿಷ್ಯ. ಇದು ಅನ್ಯರಿಗೆ ಕಾಣಬಾರದು. ತನ್ನೊಳಗಿರ್ದ ಲಿಂಗೈಕ್ಯದ ಭಕ್ತಿಯನು, ಪಸಾರಕಿಕ್ಕುವ ಅಜ್ಞಾನಿಗಳೆತ್ತ ಬಲ್ಲರು ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ? ಅವಾಙ್ಮನಸಗೋಚರ ಲಿಂಗವ, ಬೊಬ್ಬಿಡಲು ಎಡೆದೆರಹಿಲ್ಲದ ಪರಿಪೂರ್ಣಲಿಂಗವ, ಪರಾಪರಲಿಂಗವ, ಈ ಗುರು ಕೊಟ್ಟ, ಶಿಷ್ಯ ಕೊಂಡನೆಂಬ ರಚ್ಚೆಯ ಭಂಡರ ನೋಡಾ ಕೂಡಲಚೆನ್ನಸಂಗದೇವಾ
--------------
ಚನ್ನಬಸವಣ್ಣ
ಭವಿಯ ತಂದು ಪೂವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ, ಪೂರ್ವವನ್ನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು. ಲಿಂಗವೆ ಗುರು, ಗುರುವೇ ಲಿಂಗವೆಂದು, ಹೆಸರಿಟ್ಟು ಕರೆವ ಗುರುದ್ರೋಹಿಯ ಮಾತ ಕೇಳಲಾಗದು. ಹೆಸರಿಲ್ಲದ ಅಪ್ರಮಾಣ ಮಹಿಮನನು ಹೆಸರಿಟ್ಟು ಕರೆವ ಲಿಂಗದ್ರೋಹಿಯ ಮಾತ ಕೇಳಲಾಗದು. ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು, ಹೆಸರಿಲ್ಲದ ಲಿಂಗ ಈ ತ್ರಿವಿಧವನರಿಯದೆ ಕೆಟ್ಟು ಹೋದರು, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಗುರುಸ್ಥಲವುಳ್ಳನ್ನಕ್ಕರ ಶಿಷ್ಯ, ಲಿಂಗಸ್ಥಲವುಳ್ಳನ್ನಕ್ಕರ ಭಕ್ತ, ಜಂಗಮಸ್ಥಲವುಳ್ಳನ್ನಕ್ಕರ ಶರಣ, ಇಂತು ಗುರುಲಿಂಗಜಂಗಮವನರಿದು ಮರೆದಲ್ಲಿ ಲಿಂಗೈಕ್ಯ ತಾನೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿಷ್ಯನ ಪೂರ್ವಾಶ್ರಯವ ಗುರು ಕಳೆದನೆಂಬರು, ಆ ನುಡಿಯ ಕೇಳಲಾಗದು. ಗುರುವಿನ ಪೂರ್ವಾಶ್ರಯವ ಶಿಷ್ಯ ಕಳೆವನಲ್ಲದೆ, ಶಿಷ್ಯನ ಪೂರ್ವಾಶ್ರಯವ ಗುರು ಕಳೆಯಲರಿಯ. ಶರಣನ ಪೂರ್ವಾಶ್ರಯವ ಲಿಂಗ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಲಿಂಗದ ಪೂರ್ವಾಶ್ರಯವ ಶರಣ ಕಳೆವನಲ್ಲದೆ, ಆ ಶರಣನ ಪೂರ್ವಾಶ್ರಯವ ಲಿಂಗವು ಕಳೆಯಲರಿಯದು. ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಜಂಗಮದ ಪೂರ್ವಾಶ್ರಯವ ಭಕ್ತ ಕಳೆವನಲ್ಲದೆ, ಆ ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಲರಿಯ. ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಪ್ರಸಾದದ ಪೂರ್ವಾಶ್ರಯವ ಪ್ರಸಾದಿ ಕಳೆವನಲ್ಲದೆ ಆ ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಲರಿಯದು. ಆ ಪ್ರಸಾದದ ಪೂರ್ವಾಶ್ರಯವ ಕಳೆಯಲಿಕಾಗಿ ಮಹಾಪ್ರಸಾದಿಯಾದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಇದ್ದೆಸೆಯನರಿದಾತ ತತ್ವವಾದನು ತನ್ನ ಸಪ್ತ ಧಾತುವನು ಗುರುವಿಗಿತ್ತು. ಮತ್ತೆ ಕಳೆಯೆಂದಡೆ ತತ್ವಪದ ಮೀರಿದನು ಸತ್ಯಶುದ್ಧನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ? ವಾಙ್ಮನಕ್ಕಗೋಚರ ಲಿಂಗ, ಬೊಟ್ಟಿಡಲೆಡೆದೆರಹಿಲ್ಲದ ಲಿಂಗ ! ಪರಾತ್ಪರಗುರು ಕೊಟ್ಟ, ಶಿಷ್ಯ ತೆಗೆದುಕೊಂಡ ಎಂಬ ರಚ್ಚೆಯ ಭಂಡರ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುವಿನ ಗುರುವಿನ ಕೈಯ ಶಿಷ್ಯರ ಶಿಷ್ಯ ಪಾದಾರ್ಚನೆಯ ಮಾಡಿಕೊಂಬುದ ಕಂಡು ಎನ್ನ ಮನ ಬೆರಗಾಯಿತ್ತು ! ಮುಂದು ಹಿಂದಾಯಿತ್ತು, ಹಿಂದು ಮುಂದಾಯಿತ್ತು ! ಕೂಡಲಚೆನ್ನಸಂಗಮದೇವಾ, ನಿಮ್ಮ ಗುರುಶಿಷ್ಯರ ಸಂಬಂಧ ಎನಗೆ ವಿಪರೀತವಾಯಿತ್ತು.
--------------
ಚನ್ನಬಸವಣ್ಣ
ಕಾಲಜ್ಞಾನಿ, ಕರ್ಮವಿದೂರ, ನಿತ್ಯತೃಪ್ತನೆ, ನಿಮ್ಮಭೇದಿಸುವರಾರು ಹೇಳಾ ಎಲೆ ಅಯ್ಯಾ. ಎನ್ನ ಭವಕರ್ಮವು ಕಳೆಯಲಿಕೆ ಏಕರೂಪವಾಗಿ ಬಂದೆಯಯ್ಯಾ. ನಿಮ್ಮ ಪದಂಗಳೆ ಲಿಂಗವಾಗಿ, ನಿಮ್ಮ ಕರಣಂಗಳೆ ಶ್ರೀಗುರುವಾಗಿ, ನಿಮ್ಮುರುತರಮಪ್ಪ ಜಿಹ್ವೆಯ ಜಂಗಮವಾಗಿ ಬಂದೆಯಯ್ಯಾ. ನೀನು ಶಿಷ್ಯ ಕಾರಣ ಪರಶಿವಮೂರ್ತಿಯಾದುದನು ನಾನಿಂದು ಕಂಡೆ ಕಾಣಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->