ಅಥವಾ

ಒಟ್ಟು 92 ಕಡೆಗಳಲ್ಲಿ , 20 ವಚನಕಾರರು , 92 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಾರ್ಚನೆಯಿಂದ ಜಂಗಮಾರ್ಚನೆಯದ್ಥಿಕ ನೋಡಾ. ಅದೆಂತೆಂದೊಡೆ : ಆದಿಯಲ್ಲಿ ಲಿಂಗಾರ್ಚನೆಯಮಾಡಿದ ತಾರಜ ತಂಡಜ ರೋಮಜರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ನವಕೋಟಿಬ್ರಹ್ಮರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಶತಕೋಟಿ ನಾರಾಯಣರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಅನಂತಕೋಟಿ ರುದ್ರರಿಗೆ ಪ್ರಳಯವಾಯಿತ್ತು. ಇದು ಕಾರಣ ಲಿಂಗಾರ್ಚನೆ ಪ್ರಳಯಕ್ಕೊಳಗು, ಜಂಗಮಾರ್ಚನೆ ಪ್ರಳಯಾತೀತವೆಂದರಿದು ಜಂಗಮವೇ ಪ್ರಾಣವೆಂದು ನಂಬಿ, ಅನಂತಕೋಟಿ ಪ್ರಳಯಂಗಳ ಮೀರಿ, ಪರಬ್ರಹ್ಮವನೊಡಗೂಡಿದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಾನಾ ಭೇದಂಗಳಲ್ಲಿ ಷಡ್ದರುಶನವ ಹೊಕ್ಕು ತಿಳಿದಡೂ ಶ್ರುತಿ ವೇದ ಶಾಸ್ತ್ರ ಪುರಾಣ ಆಗಮಂಗಳ ಕಲಿತಡೂ ಮೂರುಮಲದ ಭೇದವನರಿತು ಬಿಡುಮುಡಿಯಲ್ಲಿ ಕಳೆದುಳಿಯಬೇಕು. ಇದು ಪ್ರಸಿದ್ಧವಪ್ಪ ತೆರ. ಇದು ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಕೂಡಬೇಕು.
--------------
ಬಾಹೂರ ಬೊಮ್ಮಣ್ಣ
ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು. ಬಸವಣ್ಣನ ನೆನೆದೆನ್ನ ಮನ ಬಯಲಾಯಿತ್ತು. ಬಸವಣ್ಣನ ನೆನೆದೆನ್ನ ಭಾವ ಬಯಲಾಯಿತ್ತು. ಕಲಿದೇವಯ್ಯ ನಿಮ್ಮ ಶರಣ, ಮಹಾಮಹಿಮ ಸಂಗನಬಸವಣ್ಣನ ನೆನೆನೆನೆದು, ಎನ್ನ ಸರ್ವಾಂಗ ಲಿಂಗವಾಯಿತ್ತೆಂದರಿದೆನಯ್ಯಾ.
--------------
ಮಡಿವಾಳ ಮಾಚಿದೇವ
ಅಯ್ಯ ! ಕಾರ್ಯನಲ್ಲ ಕಾರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಭೇದಕನಲ್ಲ ಸಾಧಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಪಾತಕನಲ್ಲ ಸೂತಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದ್ವೈತನಲ್ಲ ಅದ್ವೈತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕಾಟಕನಲ್ಲ ಕೀಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಎನ್ನವನಲ್ಲ ನಿನ್ನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಸಂಕಲ್ಪನಲ್ಲ ವಿಕಲ್ಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಒಮ್ಮೆ ಆಚಾರದವನಲ್ಲ ಒಮ್ಮೆ ಅನಾಚಾರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕುಂಟಣಿಯಲ್ಲ ನೆಂಟಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದುಶ್ಶೀಲನಲ್ಲ ದುರ್ಮಾರ್ಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಜಾತಿಯವನಲ್ಲ ಅಜಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಇಂದು ಉಭಯವಳಿದು ಬೆಳಗುವ ಸಂಗನಬಸವಣ್ಣನ ಉನ್ಮನಾಗ್ರದಲಿ ಹೊಳೆವಾತ ತಾನೆ ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಭಕ್ತಂಗೆ ತ್ರಿವಿಧಮಲ ನಾಸ್ತಿಯಾಗಿರಬೇಕು. ಮಾಹೇಶ್ವರಂಗೆ ಬಂಧ ಜಪ ನೇಮ ಕರ್ಮಂಗಳು ಹಿಂಗಿರಬೇಕು. ಪ್ರಸಾದಿಗೆ ಆಯತ ಸ್ವಾಯತ ಸನ್ನಹಿತವೆಂಬುದ ಸಂದೇಹಕ್ಕಿಕ್ಕದೆ ಸ್ವಯಸನ್ನದ್ಧವಾಗಿರಬೇಕು. ಪ್ರಾಣಲಿಂಗಿಯಾದಡೆ ಬಂದು ಸೋಂಕುವ ಸುಗುಣ ನಿಂದು ಸೋಂಕುವ ದುರ್ಗುಣ ಉಭಯ ಸೋಂಕುವುದಕ್ಕೆ ಮುನ್ನವೆ ಹಿಡಿವುದ ಹಿಡಿದು, ಬಿಡುವುದ ಬಿಟ್ಟು ಅರ್ಪಿಸಬೇಕು. ಶರಣನಾದಲ್ಲಿ ಆಗುಚೇಗೆಯೆಂಬುದನರಿಯದೆ ಸ್ತುತಿನಿಂದ್ಯಾದಿಗಳಿಗೆ ಮೈಗೊಡದೆ ರಾಗವಿರಾಗವೆಂಬುದಕ್ಕೆ ಮನವಿಕ್ಕದೆ ಜಿಹ್ವೆ ಗುಹ್ಯೇಂದ್ರಿಯಕ್ಕೆ ನಿಲುಕದೆ ಮದಗಜದಂತೆ ಇದಿರನರಿಯದಿಪ್ಪುದು. ಐಕ್ಯನಾದಲ್ಲಿ ಸುಗಂಧದ ಸುಳುಹಿನಂತೆ ಪಳುಕಿನ ರಾಜತೆಯಂತೆ, ಶುಕ್ತಿಯ ಅಪ್ಪುವಿನಂತೆ ಅಣೋರಣಿಯಲ್ಲಿ ಆವರಿಸಿ ತಿರುಗುವ ನಿಶ್ಚಯತನದಂತೆ ಬಿಂಬದೊಳಗಣ ತರಂಗದ ವಿಸ್ತರದಂಗದಂತೆ ಇಂತೀ ಷಟ್‍ಸ್ಥಲಕ್ಕೆ ನಿರ್ವಾಹಕವಾಗಿ ವಿಶ್ವಾಸದಿಂದ ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದೆ ಸಾಧ್ಯವಲ್ಲ.
--------------
ಬಾಹೂರ ಬೊಮ್ಮಣ್ಣ
ಕೃಷಿಯಿಂದ ಮುಂದಣ ಫಲವ ಕಾಬಂತೆ ಅಸಿಕಲಿಯಿಂದ ಮುಂದಣ ಅರಿಬಲವ ಗೆಲುವಂತೆ ಸತ್ಕ್ರೀಮಾರ್ಗ ಮರ್ಮ ಧರ್ಮಂಗಳನರಿದು ಮುಂದಣ ಆಸುರ ಕರ್ಮಂಗಳ ತಮ ಬಂಧಂಗಳನೀಸಿ ಗೆಲುವುದಕ್ಕೆ ಇಷ್ಟಲ್ಲದಿಲ್ಲ. ಇದು ವಸ್ತುಪೂಜಕನ ವಿಶ್ವಾಸ, ಸಂಗನಬಸವಣ್ಣನ ಸಂಬಂಧ. ಬ್ರಹ್ಮೇಶ್ವರಲಿಂಗವನರಿವುದಕ್ಕೆ ವಿಶ್ವಾಸಬ್ಥಿತ್ತಿ.
--------------
ಬಾಹೂರ ಬೊಮ್ಮಣ್ಣ
ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ. ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಪೂರ್ವಾಚಾರ್ಯ ಸಂಗನಬಸವಣ್ಣನ ಕಂಡು ಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ !
--------------
ಅಲ್ಲಮಪ್ರಭುದೇವರು
ಲಿಂಗಪ್ರೇಮಿಗಳನಂತರುಂಟು ಜಗದೊಳಗೆ, ಜಂಗಮಪ್ರೇಮಿಗಳಾರನೂ ಕಾಣೆನಯ್ಯ. ಲಿಂಗಪೂಜಕರನಂತರುಂಟು ಜಗದೊಳಗೆ, ಜಂಗಮಪೂಜಕರಾರನೂ ಕಾಣೆನಯ್ಯ. ಲಿಂಗಪ್ರಾಣಿಗಳನಂತರುಂಟು ಜಗದೊಳಗೆ, ಜಂಗಮಪ್ರಾಣಿಗಳಾರನೂ ಕಾಣೆನಯ್ಯ. ಲಿಂಗದ ಬಾಯಿ ಜಂಗಮವೆಂದರಿದು ಮಾಡಿ ಮನವಳಿದು ಘನವಾದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಗ್ನಿಯ ಅಡಕವ, ನೀರಿನಲ್ಲಿ[ಯ] ಸಾರವ ನಿರವಯದ ಹೊರೆಯ ಭೇದಿಸಿ ಕಾಬಂತೆ ಅಗ್ನಿಗೆ ಮಥನದಿಂದ, ನೀರಿನ ಸಾರಕ್ಕೆ ಮಧುರದಿಂದ ನಿರವಯದ ಹೊರೆಯಕ್ಕೆ ತನ್ನರಿವಿನ ಭೇದದಿಂದ ಕಾಣಿಸಿಕೊಂಬುದು ತ್ರಿವಿಧಲಿಂಗಭೇದ, ಪ್ರಾಣಲಿಂಗಿಯ ಸಂಗ. ಈ ಗುಣ ಸಂಗನಬಸವಣ್ಣನ ಸುಸಂಗ. ಬ್ರಹ್ಮೇಶ್ವರಲಿಂಗವ ಕೂಡುವ ಕುರುಹಿನ ನಿರಂಗ.
--------------
ಬಾಹೂರ ಬೊಮ್ಮಣ್ಣ
ಎನಗೆ ಶಿವ ತಾನೀತ ಬಸವಣ್ಣನು ಮತ್ರ್ಯಲೋಕವನು ಪಾವನವ ಮಾಡುವಲ್ಲಿ. ಎನಗೆ ಗುರು ತಾನೀತ ಬಸವಣ್ಣನು ಎನ್ನ ಭವರೋಗವ bs್ಞೀದಿಸಿ ಭಕ್ತನೆನಿಸುವಲ್ಲಿ. ಎನಗೆ ಲಿಂಗ ತಾನೀತ ಬಸವಣ್ಣನು ಘನವಿಸ್ತಾರವಪ್ಪ ನಿಜಮಹಿಮೆಯುಳ್ಳಲ್ಲಿ. ಎನಗೆ ಜಂಗಮ ತಾನೀತ ಬಸವಣ್ಣನು ಅನಾದಿಸಂಸಿದ್ಧ ಘನಪ್ರಸಾದರೂಪನಾದಲ್ಲಿ. ಎನ್ನ ನಿಂದ ನಿಲುಕಡೆಯೀತ ಬಸವಣ್ಣನು ಎನ್ನ ಸರ್ವಸ್ವಾಯತವ ಮಾಡಿ ಸಲಹುವಲ್ಲಿ. ಇದು ಕಾರಣ, ಕಲಿದೇವರದೇವರು ಸಾಕ್ಷಿಯಾಗಿ ಎನ್ನ ಪೂರ್ವಾಚಾರಿ ಸಂಗನಬಸವಣ್ಣನ ಕರುಣದಿಂದಲಾನು ಬದುಕಿದೆನು.
--------------
ಮಡಿವಾಳ ಮಾಚಿದೇವ
ಯುಗದ ಉತ್ಸಾಹವ (ಉತ್ಸವವ?) ನೋಡಿರೆ ! ಪಂಚಶಕ್ತಿಗಳಿಗೆ ಪಂಚಪ್ರಧಾನರು. ಅವರ ಆಗುಹೋಗನು ಆ ಶರಣನೆ ಬಲ್ಲ. ಆ ಶರಣನು ತಾನು ತಾನಾಗಿ ಆರು ದರುಶನಕ್ಕೆ ಯಾಚಕನಲ್ಲ ! ಮೂರು ದರುಶನಕ್ಕೆ ಮುಯ್ಯಾನುವನಲ್ಲ, ವೇದ ಶಾಸ್ತ್ರಾಗಮ ಪುರಾಣ ಛಂದಸ್ಸು, ನಿಘಂಟುಗಳೆಂಬುವಕ್ಕೆ ಭೇದಕನಲ್ಲ, ಅದೆಂತೆಂದಡೆ:ಅವರ ಅಂಗದ ಮೇಲೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪ್ರಸಾದವಿಲ್ಲ ಪಾದೋದಕವಿಲ್ಲದ ಭಾಷೆ. ಆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಏಕಾರ್ಥವಾದ ಕಾರಣ ಪ್ರಾಣಿಗಳೆಲ್ಲವು ಪ್ರಣಾಮಂಗೆಯ್ಯುತ್ತಿದ್ದವು, ಜೀವಿಗಳೆಲ್ಲವು ಜಯ ಜೀಯಾ ಎನುತ್ತಿದ್ದುವು. ಆತ್ಮಂಗಳೆಲ್ಲ ಅನುವ ಬೇಡುತ್ತಿದ್ದವು. ಗುಹೇಶ್ವರಾ ಸಂಗನಬಸವಣ್ಣನ ಪಾದಕ್ಕೆ ಈರೇಳುಭುವನವೆಲ್ಲವೂ ಜಯ ಜೀಯಾ ಎನುತ್ತಿದ್ದವು.
--------------
ಅಲ್ಲಮಪ್ರಭುದೇವರು
ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ ಸಂಗನಬಸವಣ್ಣನ ಒಕ್ಕುದ ಕೊಂಡೆನಾಗಿ. ಎನ್ನ ಮನದ ಕಪಟ ಹಿಂಗಿತ್ತಯ್ಯಾ ಚೆನ್ನಬಸವಣ್ಣನ ಕರುಣವ ಪಡೆದೆನಾಗಿ. ಎನ್ನಂತರಂಗದ ಸಂದುಸಂಶಯ ತೊಲಗಿತ್ತಿಂದು ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ಎನ್ನ ಪರಮಗುರು ಅಲ್ಲಮಪ್ರಭುದೇವರ ಶ್ರೀ ಚರಣವ ಕಂಡೆನಾಗಿ.
--------------
ನಾಗಲಾಂಬಿಕೆ
ದೇವ ದೇವ ಮಹಾಪ್ರಸಾದ. ತನ್ನ ರೂಪವ ತಿಳಿದು ನೋಡಬೇಕೆಂದು ಕನ್ನಡಿಯನುಪಾಸ್ತಿ ಮಾಡಲು ಆ ಕನ್ನಡಿ ಬೇಕು ಬೇಡೆಂಬುದೆ ಅಯ್ಯಾ ? ಪತಿಯಾಜ್ಞೆಯಂತೆ ಸತಿಪತಿಭಾವವ ಧರಿಸಿದಡೆ ಸಂಯೋಗಕಾಲದಲ್ಲಿ ಅಲ್ಲವೆಂದೆನಬಹುದೆ ? ನೀವೆ ಮಾಡಿದಡೆ ನೀವೆ ಮಾಡಿದುದು ನಾನೆ ಮಹಾಪ್ರಸಾದವೆಂದು ಸ್ವೀಕರಿಸಿದಡೂ ನೀವೆ ಮಾಡಿದುದು. ಅಂಗೈಯ ಲಿಂಗದ ಲಕ್ಷಣವ ನೋಡಿ ಎಂದು ಕೈಯಲ್ಲಿ ಕೊಟ್ಟಡೆ, ಲಿಂಗದಲ್ಲಿ ಲಕ್ಷಣವನರಸಲಾಗದೆಂದು ಚೆನ್ನಸಂಗಮನಾಥನ `ಕೋ' ಎಂದು ಕೊಟ್ಟಡೆ ಮಹಾಪ್ರಸಾದವೆಂದು ಕೈಕೊಂಡೆನು ಗುರುವೆ. ಬೆದರಿ ಅಂಜಿದಡೆ ಮನವ ಸಂತೈಸಿ ಏಕಾರ್ಥದ ಭೇದದ ತೋರಿ ಬಿನ್ನಹವ ಮಾಡಿದೆನು. ಕೂಡಲಚೆನ್ನಸಂಗಮದೇವರ ಮಹಾಮನೆಯ ಗಣಂಗಳು ಮೆಚ್ಚಲು, ಸಂಗನಬಸವಣ್ಣನ ಕರುಣದ ಶಿಶುವೆಂಬುದ ಮೂರುಲೋಕವೆಲ್ಲವು ಅಂದು ಜಯ ಜಯ ಎನುತಿರ್ದುದು.
--------------
ಚನ್ನಬಸವಣ್ಣ
ಇಂತೀ ಮರ್ತ್ಯಲೋಕದ ಮಹಾಗಣಂಗಳು ಅನಂತ ಪರೀಕ್ಷಣೆಯಿಂದ ಲಕ್ಷಣಾಲಕ್ಷಣಂಗಳಿಂದ ವಿಚಾರಿಸಿ ಮಾರ್ಗಕ್ರಿಯೆವಿಡಿದು ಭಕ್ತಗಣ ಮಧ್ಯದಲ್ಲಿ ಸಾಕಾರಕಂಥೆಯ ನಡೆನುಡಿಗಳ, ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮಾರ್ಗಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯವಾದರು ನೋಡ ! ಇಂತು ಮಾರ್ಗಾಚರಣೆಯನರಿದು ಅದರಲ್ಲಿ ಸಂತೃಪ್ತರಾಗಿ ಅದರಿಂದ ಮೀರಿತೋರುವ ಮೀರಿದ ಕ್ರಿಯಾಚರಣೆಯನರಿದು ಇದ್ಧು ಇಲ್ಲದಂತೆ, ಹೊದ್ದಿ ಹೊದ್ದದಂತೆ ನಿರಾಕಾರಕಂಥೆಯ ಪರಿಮಳ ನಡೆನುಡಿಗಳ ನಿರಾಕಾರ ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮೀರಿದ ಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯ ನಿರಂಜನರಾದರು ನೋಡ ! ಇಂತು ಮಾರ್ಗಕ್ರಿ[ಯೆ]ಯ ಮೀರಿದ ಕಿ[ಯೆ]ಯ ನಡೆ_ನುಡಿ_ಪರಿಣಾಮ_ತೃಪ್ತಿಯಲ್ಲಿ ತಾವೆ ತಾವಾಗಿರ್ಪರು ನೋಡ ! ಗುಹೇಶ್ವರಲಿಂಗಪ್ರಭುವೆಂಬ ನಾಮರೂಪುಕ್ರಿಯವಳಿದು ಸಂಗನಬಸವಣ್ಣನ ಬೆಳಗಿನೊಳಗೆ ಮಹಾಬಯಲಾದರು ನೋಡ !
--------------
ಅಲ್ಲಮಪ್ರಭುದೇವರು
ಉಪಾಧಿಕಂಗೆ ಆವ ವ್ರತ, ತ್ರಿವಿಧ ಭಕ್ತಿ ಏನೂ ಇಲ್ಲ. ನಿರುಪಾಧಿಕಂಗೆ ಅವಾವ ವ್ರತ, ತ್ರಿವಿಧಭಕ್ತಿ ಉಂಟು. ಸ್ವಯಾನುಭಾವಿಗೆ ಇದಿರ ದಯೆ ದಾಕ್ಷಿಣ್ಯ ತನ್ನಯ ಅರಿವಿನ ವಿಲಾಸಿತದ ಲಕ್ಷ. ಸರ್ವಗುಣದಲ್ಲಿ ಸನ್ನದ್ಧನಾಗಿಪ್ಪುದು ಸ್ವಯಾನುಭಾವದ ಸಂಬಂಧ. ಇಂತೀ ಖಂಡಿತ ಅಖಂಡಿತ ಪರಿಪೂರ್ಣತ್ವ ವಿಭೇದವಿಲ್ಲದೆ ಪೂರ್ಣತ್ವವಾಗಿ ಇಪ್ಪುದು ಸಂಗನಬಸವಣ್ಣನ ಸತ್ಕ್ರೀಮಾರ್ಗ, ಬ್ರಹ್ಮೇಶ್ವರಲಿಂಗವನರಿದೆಹೆನೆಂದು ಉಪಾಧಿಕೆ ನಿರುಪಾಧಿಕೆಯೆಂಬುದನರಿದು ಸ್ವಯವ ಕೂಡಿಹೆನೆಂದು.
--------------
ಬಾಹೂರ ಬೊಮ್ಮಣ್ಣ
ಇನ್ನಷ್ಟು ... -->