ಅಥವಾ

ಒಟ್ಟು 88 ಕಡೆಗಳಲ್ಲಿ , 15 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಯತ ಸ್ವಾಯತ ಲಿಂಗಾನುಗ್ರಹ ಕಾರಣ ಶಿವಧ್ಯಾನ, ಲಿಂಗ ಜಂಗಮ ಪ್‍ಸಾದ ತೃಪ್ತಿ. ಬಹುಲಿಂಗ ಪ್ರಸಾದವೆ ಕಿಲ್ಬಿಷ, ಇಂತೆಂದುದು ಕೂಡಲಚೆನ್ನಸಂಗನ ವಚನ.
--------------
ಚನ್ನಬಸವಣ್ಣ
ಕುಲಗೆಟ್ಟಡೆ ಕೆಡಬಹುದಲ್ಲದೆ ಛಲಗೆಡಬಾರದು, ಛಲಗೆಟ್ಟಡೆ ಕೆಡಬಹುದಲ್ಲದೆ ಭಕ್ತಿಯ ಅನು ಕೆಡಬಾರದು, ಭಕ್ತಿಯ ಅನು ಕೆಟ್ಟಡೆ ಕೆಡಬಹುದಲ್ಲದೆ ಆಯತ ಕೆಡಬಾರದಯ್ಯಾ, ಆಯತ ಕೆಟ್ಟಡೆ ಕೆಡಬಹುದಲ್ಲದೆ ಸ್ವಾಯತ ಕೆಡಬಾರದಯ್ಯಾ. ಎಲೆ ಕೂಡಲಸಂಗಮದೇವಯ್ಯಾ, ಮುನ್ನ ಮುಟ್ಟಿತ್ತೆ ಮುಟ್ಟಿತ್ತು, ಇನ್ನು ಮುಟ್ಟಿದೆನಾದಡೆ ನಿಮ್ಮ ರಾಣಿವಾಸದಾಣೆ.
--------------
ಬಸವಣ್ಣ
ಭಕ್ತಂಗೆ ತ್ರಿವಿಧಮಲ ನಾಸ್ತಿಯಾಗಿರಬೇಕು. ಮಾಹೇಶ್ವರಂಗೆ ಬಂಧ ಜಪ ನೇಮ ಕರ್ಮಂಗಳು ಹಿಂಗಿರಬೇಕು. ಪ್ರಸಾದಿಗೆ ಆಯತ ಸ್ವಾಯತ ಸನ್ನಹಿತವೆಂಬುದ ಸಂದೇಹಕ್ಕಿಕ್ಕದೆ ಸ್ವಯಸನ್ನದ್ಧವಾಗಿರಬೇಕು. ಪ್ರಾಣಲಿಂಗಿಯಾದಡೆ ಬಂದು ಸೋಂಕುವ ಸುಗುಣ ನಿಂದು ಸೋಂಕುವ ದುರ್ಗುಣ ಉಭಯ ಸೋಂಕುವುದಕ್ಕೆ ಮುನ್ನವೆ ಹಿಡಿವುದ ಹಿಡಿದು, ಬಿಡುವುದ ಬಿಟ್ಟು ಅರ್ಪಿಸಬೇಕು. ಶರಣನಾದಲ್ಲಿ ಆಗುಚೇಗೆಯೆಂಬುದನರಿಯದೆ ಸ್ತುತಿನಿಂದ್ಯಾದಿಗಳಿಗೆ ಮೈಗೊಡದೆ ರಾಗವಿರಾಗವೆಂಬುದಕ್ಕೆ ಮನವಿಕ್ಕದೆ ಜಿಹ್ವೆ ಗುಹ್ಯೇಂದ್ರಿಯಕ್ಕೆ ನಿಲುಕದೆ ಮದಗಜದಂತೆ ಇದಿರನರಿಯದಿಪ್ಪುದು. ಐಕ್ಯನಾದಲ್ಲಿ ಸುಗಂಧದ ಸುಳುಹಿನಂತೆ ಪಳುಕಿನ ರಾಜತೆಯಂತೆ, ಶುಕ್ತಿಯ ಅಪ್ಪುವಿನಂತೆ ಅಣೋರಣಿಯಲ್ಲಿ ಆವರಿಸಿ ತಿರುಗುವ ನಿಶ್ಚಯತನದಂತೆ ಬಿಂಬದೊಳಗಣ ತರಂಗದ ವಿಸ್ತರದಂಗದಂತೆ ಇಂತೀ ಷಟ್‍ಸ್ಥಲಕ್ಕೆ ನಿರ್ವಾಹಕವಾಗಿ ವಿಶ್ವಾಸದಿಂದ ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದೆ ಸಾಧ್ಯವಲ್ಲ.
--------------
ಬಾಹೂರ ಬೊಮ್ಮಣ್ಣ
ಆಯತ ಸ್ವಾಯತ ಸನ್ನಿಹಿತವೆಂದು ನುಡಿವ ಅನಾಯತದ ಹೇಸಿಕೆಯನೇನಂಬೆನಯ್ಯಾ? ತನುಗುಣಂಗಳನೊರಸದೆ, ಭೋಗಭೂಷಣಂಗಳನತಿಗಳೆಯದೆ, ಅನೃತ ಅಸತ್ಯ ಅಸಹ್ಯ ಋಣಸಂಚವಂಚನೆ ಪರಧನಕ್ಕಳುಪದ ಆಯತ ಅಂಗಕ್ಕಿಲ್ಲ ಮತ್ತೆಂತಯ್ಯಾ? ಆಯತವು ಮನೋವಿಕಾರವಳಿದು, ಸರ್ವೇಂದ್ರಿಯಂಗಳಲ್ಲಿ ಸಾವಧಾನಿಯಾಗಿ ಅನ್ಯವಿಷಯ ಬ್ಥಿನ್ನರುಚಿಯ ಮರೆದು ಸಕಲಭ್ರಮೆ ನಷ್ಟವಾದ ಸ್ವಾಯತ ಮನಕ್ಕಿಲ್ಲ. ಮತ್ತೆಂತಯ್ಯಾ ಸ್ವಾಯತವು? ತನ್ನರಿವಿನ ಕುರುಹನರಿತು ನಿಜಸಾಧ್ಯವಾದ ಸನ್ನಹಿತ, ಸದ್ಭಾವದಲ್ಲಿ ಅಳವಟ್ಟುದಿಲ್ಲದೆ ಭಾಜನಕ್ಕೆ ಬರಿಯ ಮುಸುಕಿಟ್ಟು ಆಯತವೆಂದು ನುಡಿವ ಅನಾಯತದ ನಾಚಿಕೆಯನೇನೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ?
--------------
ಆದಯ್ಯ
ಘನವ ಕಂಡೆ, ಅನುವ ಕಂಡೆ, ಆಯತ ಸ್ವಾಯತ ಸನ್ನಿಹಿತ ಸುಖವ ಕಂಡೆ. ಅರಿವರಿದು ಮರಹ ಮರೆದೆ. ಕುರುಹಿನ ಮೋಹ ಮೊರೆಗೆಡದೆ ಚೆನ್ನಮಲ್ಲಿಕಾರ್ಜುನಾ, ನಿಮ್ಮನರಿದು ಸೀಮೆಗೆಟ್ಟೆನು.
--------------
ಅಕ್ಕಮಹಾದೇವಿ
ಎನ್ನ ಆಯತ ಅವಧಾನಗೆಟ್ಟಿತ್ತಯ್ಯಾ. ಎನ್ನ ಸ್ವಾಯತ ಸಂದಳಿಯಿತ್ತಯ್ಯಾ. ಎನ್ನ ಸಮಾಧಾನ ತರಹವಾಯಿತ್ತಯ್ಯಾ. ಎನ್ನ ಅರಿವು ನಿಜದಲ್ಲಿ ನಿಃಪತಿಯಾಯಿತ್ತಯ್ಯಾ. ಕಲಿದೇವರದೇವಾ, ನಿಮ್ಮಲ್ಲಿ ಶಬ್ದಮುಗ್ಧವಾದೆನು.
--------------
ಮಡಿವಾಳ ಮಾಚಿದೇವ
ಆಯತ ಸ್ವಾಯತ ಸನ್ನಹಿತವ ಅನಾಯತಗಳು ಮುಟ್ಟಲಮ್ಮವು ನೋಡಾ. ಕಂಗಳ ಕೈಗಳಲರ್ಪಿಸುವ, ಶ್ರೋತ್ರದ ಕೈಗಳಲರ್ಪಿಸುವ ನಾಸಿಕದ ಕೈಗಳಲರ್ಪಿಸುವ ಜಿಹ್ವೆಯ ಕೈಗಳಲರ್ಪಿಸುವ, ತನುವಿನ ಕೈಗಳಲರ್ಪಿಸುವ, ಮನದ ಕೈಗಳಲರ್ಪಿಸುವ, ಕೈಗಳ ಕೈಯಲರ್ಪಿಸುವ. ಅಲ್ಲಲ್ಲಿ ತಾಗಿದ ಸುಖವನಲ್ಲಲ್ಲಿ ಲಿಂಗಾರ್ಪಿತವ ಮಾಡುವನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಆತ ಮಹಾಪ್ರಸಾದಿ.
--------------
ಚನ್ನಬಸವಣ್ಣ
ಆಧಾರದಲ್ಲಿ ಅಭವನು ಸ್ವಾಯತ, ಸ್ವಾದಿಷ್ಠಾನದಲ್ಲಿ ರುದ್ರನು ಸ್ವಾಯತ, ಮಣಿಪೂರಕದಲ್ಲಿ ಮೃಡನು ಸ್ವಾಯತ, ವಿಶುದ್ಧಿಯಲ್ಲಿ ಸದಾಶಿವನು ಸ್ವಾಯತ. ಆಜ್ಞಾಚಕ್ರದಲ್ಲಿ ಶಾಂತ್ಯಾತೀತನು ಸ್ವಾಯತ. ಗುಹೇಶ್ವರಲಿಂಗವು, ವ್ಯೋಮ ವ್ಯೋಮವ ಕೂಡಿದಂತೆ !
--------------
ಅಲ್ಲಮಪ್ರಭುದೇವರು
ಆಧಾರಚಕ್ರದಲ್ಲಿ ನಕಾರ ಸ್ವಾಯತ. ಸ್ವಾಧಿಷಾ*ನಚಕ್ರದಲ್ಲಿ ಮಃಕಾರ ಸ್ವಾಯತ. ಮಣಿಪೂರಕಚಕ್ರದಲ್ಲಿ ಶಿಕಾರ ಸ್ವಾಯತ. ಅನಾಹತಚಕ್ರದಲ್ಲಿ ವಾಕಾರ ಸ್ವಾಯತ. ವಿಶುದ್ಧಿಚಕ್ರದಲ್ಲಿ ಯಕಾರ ಸ್ವಾಯತ. ಆಜ್ಞಾಚಕ್ರದಲ್ಲಿ ಓಂಕಾರ ಸ್ವಾಯತ. ಇದು ಕಾರಣ, ಶರಣನ ಕಾಯವೇ ಷಡಕ್ಷರಮಂತ್ರಶರೀರವಾಗಿ, ಸರ್ವಾಂಗವೆಲ್ಲವು ಜ್ಞಾನ ಕಾಯ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸರ್ವಾಂಗ ಲಿಂಗಸ್ವಾಯತವಾದ ಶರಣಂಗೆ, ದೇಹ ದಹನವಾಗಲಾಗದು, ನಿಕ್ಷೇಪಿಸದೆ ಇರಲಾಗದು ಸಂಸಾರಸಂಗದ ಕಷ್ಟವ ನೋಡಾ ! ಅನಾಹತದಲ್ಲಿ ನಿರೂಪ ಸ್ವಾಯತ, ಗುಹೇಶ್ವರಾ, ನಿಮ್ಮ ಶರಣರಂತಹರಿಂತಹರೆಂದಡೆ, ನಾಯಕನರಕ.
--------------
ಅಲ್ಲಮಪ್ರಭುದೇವರು
ಭಾವ ದುರ್ಭಾವ ಅಳಿದು, ಸ್ವಭಾವಿಯಾದ ಸದ್ಭಾವಿಗೆ ಅಂಗದಲ್ಲಿ ಆಯತ, ಪ್ರಾಣದಲ್ಲಿ ಸ್ವಾಯತ. ಉಭಯವೈಕ್ಯವಾದಲ್ಲಿ ನಿರ್ಭಾವಿ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಕಾಯವೆ ಸಕಲ, ಪ್ರಾಣವೆ ಸಕಲ_ನಿಷ್ಕಲ, ಭಾವವೆ ನಿಷ್ಕಲಲಿಂಗವಾಗಿದ್ದ ಮತ್ತೆ ಬೇರೆ ಆಯತ ಸ್ವಾಯತ ಸನ್ನಹಿತವೆಂಬುದಿಲ್ಲ ನೋಡಾ. ಶಿವ_ಶಕ್ತಿ (ಭಕ್ತಿ_ಶಕ್ತಿ ?) ಸಂಬಂಧವೆ ದೇಹದೇಹಿಗಳಾಗಿದ್ದ ಬಳಿಕ ಗುಹೇಶ್ವರಲಿಂಗದಲ್ಲಿ, ಬೇರೊಂದು ಕುರುಹುವಿಡಿದು ಅರಿಯಲೇಕಯ್ಯಾ ಚನ್ನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಆಯತ ಸ್ವಾಯತ ಸನ್ನಹಿತನಾಗಿ, ಆರಾಧ್ಯಲಿಂಗದಲ್ಲಿ ಅನುಭಾವಿಯಾಗಿಪ್ಪನು ಬಸವಣ್ಣನು. ಜಂಗಮಲಿಂಗ ಪ್ರಾಣಿಯಾಗಿ ನಿಷ್ಪ್ರಾಣವಾಗಿಪ್ಪನು ಬಸವಣ್ಣನು. ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣನ ಆಚಾರದ ಪರಿ ನಿನಗಲ್ಲದೆ ಅರಿಯಬಾರದು. ಎನಗೊಮ್ಮೆ ತಿಳುಹಿಕೊಡಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಆದಿಯ ಕಂಡೆ, ಅನಾದಿಯ ಕಂಡೆ ಘನವ ಕಂಡೆ, ಮನವ ಕಂಡೆ, ಅನುವ ಕಂಡೆ ಆಯತ ಸ್ವಾಯತ ಸನ್ನಹಿತವ ಕಂಡೆ. ಗುಹೇಶ್ವರಲಿಂಗದಲ್ಲಿ ಬಸವಣ್ಣನ ಕೃಪೆಯಿಂದ, ನಿನ್ನ ಕಂಡೆ ಕಾಣಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->