ಅಥವಾ

ಒಟ್ಟು 66 ಕಡೆಗಳಲ್ಲಿ , 4 ವಚನಕಾರರು , 66 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಾ ದೇವರಿಗೆ ಮಸ್ತಕದ ಪೂಜೆ, ನಮ್ಮ ಗುರುಲಿಂಗಜಂಗಮದೇವರಿಗೆ ಪಾದಾಂಗುಷ್ಟದ ಪೂಜೆಯೆಂಬುದು ಸಕಲ ವೇದಶಾಸ್ತ್ರಪುರಾಣಾಗಮಂಗಳು, ಶ್ರುತಿಸ್ಮೃತಿಗಳು ಸಾರುತ್ತಿರಲು, ಅದನರಿತು ಓದುತ್ತ ಓದುತ್ತ ಹಾಡುತ್ತ ಹಾಡುತ್ತ ಅದಕ್ಕೆ ಅಪಖ್ಯಾತಿಯ ತರುವವನೆಂತು ಜಂಗಮವೊ ? ಅವನೆಂತು ಭಕ್ತನೊ ? ತಾನೊಡೆಯ[ನ]ಂತೆ, ತಾ ಭಕ್ತನಂತೆ, ತನ್ನೆಡೆಯ ಗುಡಿಯ ಲಿಂಗದ ಮುಂದಿಟ್ಟು ತನ್ನಿಷ್ಟಲಿಂಗಕ್ಕೆ ಕೊಟ್ಟುಕೊಂಬ ತುಡುಗುಣಿ ನಾಯ ಮೂಳಹೊಲೆಯರ ಕಂಡಡೆ ನಡುವಿನ ಮೇಲೆ ಒದೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ, ಕೆಡವಿ ಹಾಕಿ ಮೂಗನೆ ಕೊಯ್ಧು ಇಟ್ಟಂಗಿಯ ಕಲ್ಲಿಲೆ ತಿಕ್ಕಿ ಸಾಸಿವೆಯ ಹಿಟ್ಟನೆ ತಳಿದು ಮೇಲೆ ಲಿಂಬಿಯ ಹುಳಿಯನೆ ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಯ್ಯಾ, ನಾವು ಪರಮವಿರಕ್ತರು, ಪಟ್ಟದ ಅಯ್ಯನವರು, ಚರಮೂರ್ತಿಗಳು, ಪರದೇಶಿಗಳು ಎಂದು ಶಂಖ ಗಿಳಿಲು ದಂಡಾಗ್ರ ಎಂಬ ಬಿರುದು ಪಿಡಿದು, ಕಾವಿ ಕಾಷಾಯಾಂಬರವ ಹೊತ್ತು, ಸರ್ವಕಾರ್ಯದಲ್ಲಿ ಶ್ರೇೀಷ*ರೆಂದು ಗರ್ವದಲ್ಲಿ ಕೊಬ್ಬಿ, ಕಾಮನಾಟದಲ್ಲಿ ಕಲಕಿ, ಮನಸ್ಸಿನಲ್ಲಿ ದುರ್ಗುಣವನ್ನಿಟ್ಟುಕೊಂಡು ಮಾತಿನಲ್ಲಿ ನೀತಿಯ ಸೇರಿಸುತ್ತ ಕಪಟದಲ್ಲಿ ಚರಿಸುವಂತಹ ತೊನ್ನ ಹೊಲೆಮಾದಿಗರ ಸಂಗಮಾಡಲಾಗದು, ಅವರ ಪ್ರಸಂಗವ ಕೇಳಲಾಗದು. ಅದೇನು ಕಾರಣವೆಂದಡೆ: ಗುರುಲಿಂಗಜಂಗಮವಾದ ಬಳಿಕ ಅಷ್ಟಾವರಣದಲ್ಲಿ ನಿಷಾ*ಪರವಾಗಿರಬೇಕು. ಪರಧನ ಪರಸತಿಯರ ಹಿಡಿಯೆನೆಂಬ ನೇಮದಲ್ಲಿ ಬಲ್ಲಿದರಾಗಿರಬೇಕು. ಶಿವಭಕ್ತರಾದವರ ಭವವ ಗೆಲಿಸಿ ಮೋಕ್ಷವ ಹೊಂದಿಸಬೇಕು. ಶಿವಲಾಂಛನವ ಹೊತ್ತ ಬಳಿಕ ಶಿವನಂತಿರಬೇಕು ಬರಿದೆ, ನಾನು ಮಾಹೇಶ್ವರನೆಂದು, ನಾನು ಶಿವಭಕ್ತನೆಂದು ತನ್ನ ಹೃನ್ಮಂದಿರದಲ್ಲಿ ನೆಲಸಿದ ಚಿನ್ಮಯಜಂಗಮಲಿಂಗಕ್ಕೆ ತನು-ಮನ-ಧನವೆಂಬ ತ್ರಿವಿಧಪದಾರ್ಥವನರ್ಪಿಸಿ, ತ್ರಿವಿಧಪ್ರಸಾದವ ಗರ್ಭೀಕರಿಸಿಕೊಂಡು, ಪ್ರಸನ್ನಪ್ರಸಾದವ ಸ್ವೀಕರಿಸಿ ಪರತತ್ವಪ್ರಸಾದದಲ್ಲಿ ತಾನು ತಾನಾಗಲರಿಯದೆ ಉಚ್ಚಂಗಿದುರ್ಗಿಗೆ ಬಿಟ್ಟ ಪೋತರಾಜನಂತೆ ಮೂರು ಮೂರು ಜಡೆಗಳ ಬಿಟ್ಟು, ಆಡಿನೊಳಗಿರುವ ಹಿರಿಯ ಹೋತಿನಂತೆ ಮೊಳ ಮೊಳ ಗಡ್ಡವ ಬಿಟ್ಟು, [ಡಂ]ಬ ಜಾತಿಗಾರನಂತೆ ವೇಷವ ತೊಟ್ಟು, ಮೀಸೆಯ ಬೋಳಿಸಿಕೊಂಡು, ಕೈಪವ ಧರಿಸಿ, ಸಂಸ್ಕೃತ ಗೀರ್ವಾಣಭಾಷೆಯ ಕಲಿತು, ಕಾಕ ಕುಟಿಲ ಕುಹಕದ ಗಾಳಿಪೂಜೆಯಿಂದ ಬಂದ ಸುಡಗಾಡು ಸಿದ್ಧಯ್ಯಗಳಂತೆ, ಗಿಡಮೂಲಿಕೆಗಳು ತಂತ್ರ ಮಂತ್ರ ಯಂತ್ರದ ಭಾಷೆಗಳ ಕಲಿತುಕೊಂಡು ಪುರಜನರ ಮೆಚ್ಚಿಸಬೇಕೆಂದು ಅಯ್ಯಾ, ನಾವು ಕೆರೆ ಭಾವಿಯನಗೆಸಬೇಕೆಂದು, ಮಠ ಗುಡಿಯ ಕಟ್ಟಿಸಬೇಕೆಂದು, ಮಾನ್ಯದಲಿ ಬಿಲ್ವಗಿಡಗಳ ಹಚ್ಚಬೇಕೆಂದು, ಮದುವೆ ಅಯ್ಯಾಚಾರವ ಮಾಡಬೇಕೆಂದು, ಅನ್ನಕ್ಷೇತ್ರ ಅರವಟ್ಟಿಗೆಯ ಇಡಿಸಬೇಕೆಂದು, ಪುರಾಣಗಳ ಹಚ್ಚಿಸಬೇಕೆಂದು, ಇಂತಪ್ಪ ದುರಾಸೆಯ ಮುಂದುಗೊಂಡು ನಾನಾ ದೇಶವ ತಿರುಗಿ, ಅರಸರ ಮದದಂತೆ ಗರ್ವದಿಂದ ಹೆಚ್ಚಿ, ಹೇಸಿ ಹೊಲೆ ಮಾದಿಗರ ಕಾಡಿ ಬೇಡಿ, ಹುಸಿಯನೆ ಬೊಗಳಿ ಒಬ್ಬನ ಒಲವ ಮಾಡಿ[ಕೊಂ]ಡು, ವ್ಯಾಪಾರ ಮರ್ಯಾದೆಯಲ್ಲಿ ಪೇಟೆಯಲ್ಲಿ ಕುಳಿತು ಅನಂತ ಮಾತುಗಳನಾಡುತ್ತ, ಸೆಟ್ಟಿ ಮುಂತಾದ ಅನಂತ ಕಳ್ಳ ಹಾದರಗಿತ್ತಿಯ ಮಕ್ಕಳ ಮಾತಿನಿಂದೊಲಿಸಿ, ಅವರು ಕೊಟ್ಟಡೆ ಹೊಗಳಿ, ಕೊಡದಿರ್ದಡೆ ಬೊಗಳಿ, ಆ ಭ್ರಷ್ಟ ಹೊಲೆಮಾದಿಗರು ಕೊಟ್ಟ ದ್ರವ್ಯಗಳ ತೆಗೆದುಕೊಂಡು ಬಂದು ಕಡೆಗೆ ಚೋರರು ಒಯ್ದರೆಂದು ಮಠದೊಳಗೆ ಮಡಗಿಕೊಂಡು ಪರಸ್ತ್ರೀಯರ ಹಡಕಿ ಯೋನಿಯೊಳಗೆ ಇಂದ್ರಿಯ ಬಿಟ್ಟು, ಕಾಮಕ್ರೋಧದಲ್ಲಿ ಮುಳುಗಿ ಮತಿಗೆಟ್ಟು, ಶಿವಪಥಕ್ಕೆ ದೂರಾಗಿ, ದುರಾಚಾರವ ಆಚರಿಸಿ, ನಡೆನುಡಿಗಳ ಹೊರತಾಗಿ, ವ್ಯರ್ಥ ಹೊತ್ತುಗಳೆದು, ಸತ್ತುಹೋಗುವ ಜಡದೇಹಿ ಕಡುಪಾತಕ ಕತ್ತೆ ಹಡಿಕರಿಗೆ ಪರಮ ನಿರಂಜನ ಜಂಗಮಲಿಂಗದೇವರೆಂದು ಕರೆತಂದು, ಪಾದತೀರ್ಥ ಪ್ರಸಾದವ ತೆಗೆದುಕೊಂಬುವರಿಗೆ ಇಪ್ಪತ್ತೊಂದು ಯುಗಪರಿಯಂತರ ನರಕಕೊಂಡದಲ್ಲಿಕ್ಕುವ. ಇಂತಪ್ಪ ಜಂಗಮವನು ಪೂಜೆ ಮಾಡುವಂತಹ ಶಿವಭಕ್ತನ ಉಭಯತರ ಮೂಗ ಸೀಳಿ ಮೆಣಸಿನ ಹಿಟ್ಟು ತುಪ್ಪವ ತುಂಬಿ, ಪಡಿಹಾರಿ [ಉತ್ತಣ]ಗಳೆಡದ ಪಾದುಕೆಯಿಂದ ಪಡಪಡನೆ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಆದಿ ಅನಾದಿಯಿಂದತ್ತಣ ಶರಣನ ಷಡಾಧಾರಚಕ್ರದೊಳಗೆ ಷಡುಲಿಂಗವು, ಷಡುಮಂತ್ರವು, ಷಡುಭಕ್ತರು, ಷಡುಶಕ್ತಿಗಳು ಇದ್ದುವಯ್ಯ. ಆ ಶರಣನ ಜ್ಞಾನಕ್ರೀ ಅರವತ್ತುನಾಲ್ಕು ಭೇದವಾಯಿತ್ತಯ್ಯ, ಒಬ್ಬ ಶರಣನು ಅನಂತ ಶರಣರಾದುದ ಕಂಡೆನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಾಲ್ಕೈದು ಹದಿನೆಂಟು ಪುರಾಣ ಇಪ್ಪತ್ತೆಂಟು ದೇವತಾಗಮಂಗಳು Zõ್ಞಷಷ್ಟಿ ಅಖಿಳ ವಿದ್ಯಂಗಳ ಸಾಧಿಸಿ ನನಗಾರು ಸರಿ ಎಂಬ ಹೊಲೆಮಾದಿಗರ ಎನಗೊಮ್ಮೆ ತೋರದಿರಯ್ಯಾ. ಅದೇನು ಕಾರಣವೆಂದಡೆ: ಸಕಲಶಾಸ್ತ್ರಂಗಳಿಗೆ Zõ್ಞಷಷ್ಟಿ ಕಳಾವಿದ್ಯಕ್ಕೆ ನಿಲುಕದ ಪರಶಿವನ ಕಾಯ ಜೀವ ಪ್ರಸಾದದಲ್ಲಿ ನೆಲೆಗೊಳಿಸಲರಿಯದೆ ಒಡಲ ಹೊರೆವ ಹೊಲೆ ಮಾದಿಗರಾದಂತಾಯಿತ್ತೆಂದಡೆ ಶುಕನುಡಿದಂತಾಯಿತ್ತೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸತ್ತರೆ ಸಂಗಾತ ಹೂಳಿಸಿಕೊಂಬ ಇಷ್ಟಲಿಂಗವ ಸಟೆಮಾಡಿ, ಮತ್ತೆ ಅನ್ಯದೈವಕ್ಕೆರಗುವ ಕತ್ತೆ ಹೊಲೆಯರು ನೀವು ಕೇಳಿರೊ, ತನ್ನ ಪುರುಷನಿರಲು ಅನ್ಯಪುರುಷನ ಕೂಡಿಹ ಸ್ತ್ರೀಗೆ ನರಕವಲ್ಲವೆ ? ಮೋಕ್ಷಾ[ರ್ಥ] ಎಂದು ಗುರುವು ಕೊಟ್ಟ ಇಷ್ಟಲಿಂಗವು ಅಂಗಕ್ಕೆ ಸಂಬಂಧಿಸಿದ ಬಳಿಕ ಹಲವು ದೇವರೆಂದು ಭಾವಿಸಿ ಪೂಜೆಯ ಮಾಡುವ ಭ್ರಷ್ಟರು ನೀವು ಕೇಳಿರೊ. ನೀವು ಮಾಡಿದ ಪೂಜೆಯು ಹಾದರಿಯ ಸ್ತ್ರೀಯಳಂತೆ ಕಾಣಿರೊ. ಕಡೆಗೆ ಅದೇ ಲಿಂಗವೆ ಮುಂದೆ ಮಾರಿಯಾಗಿ ಮೋಕ್ಷಕ್ಕೆ ದೂರಮಾಡುವದೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಶಿವಭಕ್ತನಾದ ಬಳಿಕ ಅನ್ಯಭಜನೆಯ ಮಾಡದಿರಬೇಕು. ಶಿವಭಕ್ತನಾದ ಬಳಿಕ ಪರಸತಿ, ಪರನಿಂದೆ, ಪರಧನವ ಹಿಡಿಯದಿರಬೇಕು. ಶಿವಭಕ್ತನಾದ ಬಳಿಕ ಲಿಂಗಕ್ಕೆ ತೋರದೆ ಪ್ರಸಾದವ ಮುಟ್ಟದಿರಬೇಕು. ಅಂಗಲಿಂಗವು ಸಮರಸವಾಗಿರಬೇಕು. ದಾರಿದ್ರ್ಯವು ಬಂದರೆ ಅಂಗವೇ ನಿನ್ನದೆಂದರಿಯಬೇಕು. ಸಂಪತ್ತು ಬಂದರೆ ನಿನ್ನದೆಂದು ಭಾವಿಸಬೇಕು. ಲಿಂಗಬಾಹ್ಯರಿಗೆ ನರಕ ತಪ್ಪದು. ಇಷ್ಟಲಿಂಗಮವಿಶ್ವಸ್ಯ ಅನ್ಯಲಿಂಗಮುಪಾಸತೇ ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾಚರೇತ್ ಇದು ಕಾರಣ, ಪ್ರಾಣಲಿಂಗದ ಭಕ್ತಿಯ ಮರೆದು ಯಮಪಟ್ಟಣಕ್ಕೆ ಹೋಹರೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಶಿವಭಕ್ತಿ ಶಿವಾಚಾರ ಬೇಕಾದ ಭಕ್ತನು ತನ್ನ ಮಠಕ್ಕೆ ಬಂದ ಲಿಂಗಜಂಗಮದ ಸಮಯಾಚಾರ ಸಮಯಭಕ್ತಿಯ ನಡೆಸಬೇಕಯ್ಯ. ಬಂದ ಲಿಂಗಜಂಗಮದ ಸಮಯಭಕ್ತಿಯ ತಪ್ಪಿಸಿ ಮುಂದೆ ಶಿವಪೂಜೆಯ ಮಾಡಿ ಫಲಪದವ ಪಡೆವೆನೆಂಬ ಹಂದಿಗಳೆತ್ತ ಬಲ್ಲರಯ್ಯಾ ಸತ್ಯರ ನೆಲೆಯ. ಮುಂದಿರ್ದ ನಿಧಾನವ ಕಾಣಲರಿಯದೆ ಸಂದಿಗೊಂದಿಯ ಹೊಕ್ಕು ಅರಸಿ ಬಳಲುವ ಅಂಧಕನಂತೆ, ಎಂದಾದರೂ ತನ್ನ ವ್ಯಸನವೆತ್ತಿದಾಗ ಒಂದೊಂದು ಪರಿಯಲ್ಲಿ ಸಿದ್ಧಾನ್ನಂಗಳು ಮಾಡಿ ಚೆಂದ ಚೆಂದದಲಿ ಬೋನ ಪದಾರ್ಥಂಗಳಂ ಮಾಡಿ ತಮ್ಮ ಹಿಂದಣ ಮುಂದಣ ಹರಕೆಯನೊಡಗೂಡಿ ಬಂಧುಬಳಗವ, ಮುಯ್ಯೂಟವ ಕೂಡಿ ಆ ದಿನದಲ್ಲಿ ಚಂದ್ರಶೇಖರನ ಭಕ್ತರಿಗೆ ದಣಿ[ಯೆ] ಉಣಲಿಕ್ಕಿದೆನೆಂಬ ಅಂಧಕ ಮೂಳಹೊಲೆಯರಿಗೆ ಎಂದೆಂದಿಗೂ ಮುಕ್ತಿಯಿಲ್ಲವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೇಳು ನೀನೆಲೊ ಮಾನವಾ, ಸೋಮವಾರ ಅಮಾವಾಸ್ಯೆ ಹುಣ್ಣಿಮೆ ಎಂಬ ದೊಡ್ಡ ಹಬ್ಬಗಳು ಬಂದಿಹವೆಂದು ಮನೆಯ ಸಾರಿಸಿ, ರಂಗವೋಲೆಯನಿಕ್ಕಿ, ಆಸನವ ಬಲಿದು, ಪತ್ರೆ ಪುಷ್ಪ ಮೊದಲಾದ ಅನಂತ ¸õ್ಞರಂಭವ ಸವರಿಸಿ ವಿರಕ್ತನ ಕರೆತಂದು ಪೂಜೆಯ ಮಾಡುವುದಕ್ಕಿಂತಲೂ ಹೊರೆಯಲ್ಲಿ ಚರಿಸಾಡುವ ಕಾಳ ಶುನಕನ ತಂದು ಆ ಗದ್ದುಗೆಯಲ್ಲಿ ಪೂಜೆ ಮಾಡುವುದು ಮಹಾ ಲೇಸಯ್ಯಾ. ಅದೇನು ಕಾರಣವೆಂದರೆ, ಆಣವಮಲ ಮಾಯಾಮಲ ಕಾರ್ಮಿಕಮಲಕ್ಕೆ ಹೊರತೆಂದು, ಅಷ್ಟಮದ ವಿರಹಿತನೆಂದು, ಷಡ್ಗುಣವ ಸಂಹರಿಸಿದವನೆಂದು, ಶಾಸ್ತ್ರದಲ್ಲಿ ಸಂಪನ್ನನೆಂದು, ಕ್ರಿಯೆಯಲ್ಲಿ ವೀರಶೈವನೆಂದು, ನಿರಾಭಾರಿಯೆಂದು, ಬಾಯಿಲೆ ಬೊಗಳಿ ಲೌಕಿಕದಲ್ಲಿ ಮಠವ ಮಾಡಿಕೊಂಡು, ಮಾನ್ಯವ ಸಂಪಾದಿಸಿಕೊಂಡು, ಅಶನಕ್ಕಾಶ್ರಯನಾಗಿ, ವ್ಯಸನಕ್ಕೆ ಹರಿದಾಡಿ, ವಿಷಯದಲ್ಲಿ ಕೂಡಿ, ಸರ್ವವು ಎನಗೆ ಬೇಕೆಂದು ತಮೋಗುಣದಿಂದ ದ್ರವ್ಯವ ಕೂಡಿಸಿ ವಿರತಿಸ್ಥಲವು ಹೆಚ್ಚೆಂದು ಕಾವಿಯ ಹೊದೆದು, Põ್ಞಪೀನವ ಕಟ್ಟಿ, ವೇಷ ಡಂಭಕದಿಂದ ತಿರುಗುವ ಭ್ರಷ್ಟರ ಮುಖವ ನೋಡಲಾಗದು. ಇಂತಪ್ಪ ವಿರತರ ಪೂಜೆಯ ಮಾಡುವುದಕ್ಕಿಂತಲೂ ಕರೇನಾಯಿಯ ತಂದು ಪೂಜೆಯ ಮಾಡುವುದು ಮಹ ಲೇಸು ಕಂಡಯ್ಯ. ಪಂಚಾಮೃತವ ಮುಂದಿಟ್ಟರೆ ಕಣ್ಣು ನೋಡುವುದು, ದ್ರವ್ಯ ಮುಂದಿಟ್ಟರೆ ಕೈಯು ಮುಟ್ಟುವುದು, ಎಂದು ಪೇಳುವ ವಿರತರ ನಾಲಗೆಯು ಆ ನಾಯ ಬಾಲಕ್ಕಿಂತಲು ಕರ ಕಷ್ಟವು. ಇಂತಹ ವಿರತರ ಪೂಜೆಯ ಮಾಡುವಾತನು, ಆ ಜಂಗಮವು ಉಭಯತರ ಮೂಗು ಸವರಿ ಕತ್ತೆಯನೇರಿಸಿ ಪಡಿಹಾರಿಕೆಗಳ ಪಾದುಕೆಯಿಂದ ಪಡಪಡ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ರವಿಕಾಂತಿಯ ಪ್ರಭೆ ಪಾಷಾಣವ ಕೂಡಿ ರತ್ನವೆನಿಸಿಕೊಂಬಂತೆ ಅರಿವ ಜ್ಞಾನ ಮಾಡುವ ಸತ್ಕ್ರೀಯಿಂದಲ್ಲದೆ ಆ ಸಾಕಾರದ ಪಟಲವು ಹರಿಯದು. ಈ ರವಿಕಾಂತಿಯ ಪ್ರಭೆಯಿಲ್ಲದಿದ್ದಡೆ ಆ ಪಾಷಾಣಕ್ಕೆ ರತ್ನವೆಂಬ ಕುಲ ಮುನ್ನವೇ ಇಲ್ಲ. ರವಿಕಾಂತಿಯ ಪ್ರಭೆಯಡಗೂದಕ್ಕೆ ಪಾಷಾಣ ಹೇಂಗೆ ಅರಿವಡಗೂದಕ್ಕೆ ಕುರುಹೆಂಬ ನಾಮ ಹಾಂಗೆ. ಆ ಉಭಯವಡಗಿ ಕುರುಹಿಲ್ಲದಿದ್ದಡೆ ಮತ್ತೆ ನಮ್ಮ ಗುಹೇಶ್ವರನೆಂಬ ಮಾತಿನ ಕುರುಹಿಲ್ಲದಿರಬೇಕು. ಕಾಣಾ ಎಲೆ ಅಂಬಿಗರ Zõ್ಞಡಯ್ಯ.
--------------
ಅಲ್ಲಮಪ್ರಭುದೇವರು
ಎಲೆ ಕರುಣಿ, ಜನನಿಯ ಜಠರಕ್ಕೆ ತರಬೇಡವಯ್ಯ. ತಂದರೆ ಮುಂದೆ ತಾಪತ್ರಯಕ್ಕೊಳಗಾದ ತರಳೆಯ ದುಃಖದ ಬಿನ್ನಪವ ಕೇಳಯ್ಯ. ಆಚಾರಲಿಂಗಸ್ವರೂಪವಾದ ಘ್ರಾಣ, ಗುರುಲಿಂಗಸ್ವರೂಪವಾದ ಜಿಹ್ವೆ, ಶಿವಲಿಂಗಸ್ವರೂಪವಾದ ನೇತ್ರ, ಜಂಗಮಲಿಂಗಸ್ವರೂಪವಾದ ತ್ವಕ್ಕು, ಪ್ರಸಾದಲಿಂಗಸ್ವರೂಪವಾದ ಶ್ರೋತ್ರ, ಮಹಾಲಿಂಗಸ್ವರೂಪವಾದ ಪ್ರಾಣ, ಪಂಚಬ್ರಹ್ಮ ಸ್ವರೂಪವಾದ ತನು, ಇಂತಿವೆಲ್ಲವು ಕೂಡಿ ಪರಬ್ರಹ್ಮಸ್ವರೂಪ ತಾನೆಯಾಗಿ, ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ, ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ, ಎಂತು ನುಸುಳುವೆನಯ್ಯ?. ಹೇಸಿ ಹೇಡಿಗೊಂಡೆನಯ್ಯ, ನೊಂದೆನಯ್ಯ, ಬೆಂದೆನಯ್ಯ. ಬೇಗೆವರಿದು ನಿಂದುರಿದೆನಯ್ಯ. ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ. ಎನ್ನ ಭವಕ್ಕೆ ನೂಂಕಬೇಡಯ್ಯ. ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ, ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು, ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ. ಎನಗೆ ಹೊನ್ನು ಬೇಡ, ಹೆಣ್ಣು ಬೇಡ, ಮಣ್ಣು ಬೇಡ, ಫಲವು ಬೇಡ, ಪದವು ಬೇಡ ನಿಮ್ಮ ಶ್ರೀಪಾದವನೊಡಗೂಡಲೂಬೇಡ, ಎನಗೆ ಪುರುಷಾಕಾರವೂ ಬೇಡವಯ್ಯ. ಎನ್ನ ಮನ ಒಪ್ಪಿ, ಪಂಚೈವರು ಸಾಕ್ಷಿಯಾಗಿ, ನುಡಿಯುತ್ತಿಪ್ಪೆನಯ್ಯಾ. ನಿಮ್ಮಾಣೆ, ಎನಗೊಂದ ಕರುಣಿಸಯ್ಯ ತಂದೆ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ ಎನ್ನ ನೀ ನಿಲಿಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ತಟ್ಟು ಗೋಣಿಸೊಪ್ಪು ಸಕಲಾತಿ ಅಲ್ಲ[ವು], ತೊತ್ತಿನ ಮಗ ಭಕ್ತನಲ್ಲವಯ್ಯಾ, ಹಿರಿಯ ದೇವತೆಗೆ ಬಿಟ್ಟ ಕೋಣ ಗೂಳಿಯಲ್ಲವಯ್ಯಾ. ಕಂಡ ತೊತ್ತಿಗೆ ಹುಟ್ಟಿದವ ಜಂಗಮವಲ್ಲವಯ್ಯಾ. ಹಣತಿ ನೆಕ್ಕುವ ಮಠಪತಿ ಪಂಚಮಠಕ್ಕೆ ಸಲ್ಲ. ಈ ಮೂ[ಳ]ರಿಗೆ ಆದಿಯಲ್ಲಿ ಗುರುಉಪದೇಶ[ವ] ತುಂಬಿಲ್ಲ. ಈ ಮೂ[ಳ]ರ ಮೂಗು ಕೊಯ್ದು ಉಪ್ಪು ಸಾರು ತುಂಬಿ, ನೆತ್ತಿಯ ಬೋಳಿಸಿ ಕತ್ತೆಯನೇರಿಸಿ, ಮೇಲೆ ನಿಂಬೆಯ ಹುಳಿಯ ಬಿಟ್ಟು, ಪಡುವ ದಾರಿಗೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ
--------------
ಅಂಬಿಗರ ಚೌಡಯ್ಯ
ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗ ಮಾಡುವ [ಬೋಸ] ರಿತೊತ್ತಿಗೆಲ್ಲಿಯದೊ ನಿಜಮುತ್ತೈದೆತನ? ತ್ರಿಜಗವಂದಿತ ಲಿಂಗವ ಕರಕಮಲದಲ್ಲಿ ಹಿಡಿದುಕೊಂಡಿರ್ದ ಬಳಿಕ ಅಲ್ಲಿ ನಂಬಿ ಪೂಜಿಸಿ ಮುಕ್ತಿಯ ಪಡೆಯಲರಿಯದೆ ಲೋಕದ ಗಜಿಬಿಜಿ ದೈವಂಗಳಿಗೆರಗುವ ಕುನ್ನಿ ಮಾನವರ ಕಂಡರೆ ಯಮನು ಜಿಗಿದೆಳೆದೊಯ್ದು ಕೊಲ್ಲದಿಪ್ಪನೆ? ಹಾಗೆ ಸಾಯಲೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ? ಹೊಲೆಯ ಹೊರಕೇರಿಯಲ್ಲಿರುವನು, ಊರೊಳಗಿಲ್ಲವೆ ಅಯ್ಯಾ, ಹೊಲೆಯರು? ತಾಯಿಗೆ ಬೈದವನೇ ಹೊಲೆಯ, ತಂದೆಗೆ ಉತ್ತರ ಕೊಟ್ಟವನೆ ಹೊಲೆಯ, ತಂದೆಗೆ ಬೈದವನೇ ಹೊಲೆಯ, ಕೊಡುವ ದಾನಕ್ಕೆ ಅಡ್ಡ ಬಂದವನೆ ಹೊಲೆಯ, ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ, ಬ್ರಾಹ್ಮಣನ ಕುತ್ತಿಗೆಯ ಕೊಯ್ದವನೇ ಹೊಲೆಯ, ಹತ್ತು ಆಡಿದರೆ ಒಂದು ನಿಜವಿಲ್ಲದವನೇ ಹೊಲೆಯ, ಚಿತ್ತದಲ್ಲಿ ಪರಸತಿಯ ಬಯಸಿದವನೇ ಹೊಲೆಯ, ಲಿಂಗಮುದ್ರೆಯ ಕಿತ್ತಿದವನೇ ಹೊಲೆಯ, ಲಿಂಗವ ಬಿಟ್ಟು ತಿರುಗುವವನೇ ಹೊಲೆಯ, ಧರ್ಮವ ಮಾಡದವನೇ ಹೊಲೆಯ, ಬಸವನ ಕೊಂದವನೇ ಹೊಲೆಯ, ಬಸವನ ಇರಿದವನೇ ಹೊಲೆಯ, ಲಿಂಗಪೂಜೆಯ ಮಾಡದವನೇ ಹೊಲೆಯ. ಇಂತಪ್ಪ ಹೊಲೆಯರು ಊರ ತುಂಬ ಇರಲಾಗಿ ಹೊರಕೇರಿಯವರಿಗೆ ಹೊಲೆಯರೆನಬಹುದೆರಿ ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು, ಹಿಪ್ಪೆಯನುಂಡ ತೊಗಲು ಹರಿಗೋಲವಾಯಿತ್ತು. ಗುರುಗಳಿಗೆ ಚಮ್ಮಾವುಗೆಯಾಯಿತ್ತು ಹೂಡಲಿಕ್ಕೆ ಮಿಣಿಯಾಯಿತ್ತು. ಹೊಡೆಯಲಿಕ್ಕೆ ಬಾರುಕೋಲವಾಯಿತ್ತು. ಬಂಡಿಗೆ ಮಿಣಿಯಾಯಿತ್ತು. ಅರಸರಿಗೆ ಮೃದಂಗವಾಯಿತ್ತು. ತೋಲು ನಗಾರಿಯಾಯಿತ್ತು. ತುಪ್ಪ ತುಂಬಲಿಕ್ಕೆ ಸಿದ್ದಲಿಕೆ, ಎಣ್ಣೆ ತುಂಬಲಿಕೆ ಬುದ್ದಲಿಕೆನಯಾಯಿತ್ತುಫ. ಸಿದ್ದಲಿಕೇನ ತುಪ್ಪ, ಬುದ್ದಲಿಕೇನ ಎಣ್ಣೆ ಕಲ್ಲಿಶೆಟ್ಟಿ ಮಲ್ಲಿಶೆಟ್ಟಿಗಳು ಕೂಡಿ ನಾ ಶೀಲವಂತ ತಾ ಶೀಲವಂತ ಎಂದು ಶುದ್ದೈಸಿಕೊಂಡು ತಿಂದು ಬಂದು, ಜಗಳ ಬಂದಾಗ ನನ್ನ ಕುಲ ಹೆಚ್ಚು, ನಿನ್ನ ಕುಲ ಹೆಚ್ಚು ಕಡಿಮೆ ಎಂದು ಬಡಿದಾಡುವ ಕುನ್ನಿ ನಾಯಿಗಳ ಮೋರೆ ಮೋರೆಯ ಮೇಲೆ ನಮ್ಮ ಪಡಿಹಾರಿ ಉತ್ತಣ್ಣಗಳ ವಾಮಪಾದುಕೆಯ ಕೊಂಡು ಅವರ ಅಂಗುಳ ಮೆಟ್ಟಿ ಫಡಫಡನೆ ಹೊಡಿ ಎಂದಾತ ನಮ್ಮ ದಿಟ್ಟ ಅಂಬಿಗರ Zõ್ಞಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಮಹಾಘನಲಿಂಗದ ನಿಜಘನವೆಂಬ ಚಿದ್ಘನಾತ್ಮಕ ಶರಣನ ಲೀಲೆಯಿಂದ ಮಹಾಜ್ಯೋತಿ ಹುಟ್ಟಿತ್ತು, ಆ ಜ್ಯೋತಿಯ ಬೆಳಗಿನಲ್ಲಿ ಅರಿವು ಮರವೆಂಬ ಭೂತಾತ್ಮ ಮಹಾತ್ಮಂಗಳು ಹುಟ್ಟಿದವು. ಆತ್ಮಂಗಳಿಂದ ಜ್ಞಾನಾತ್ಮಕ, ಶುದ್ಧಾತ್ಮಕ, ನಿರ್ಮಲಾತ್ಮಕ, ಪರಮಾತ್ಮ, ಅಂತರಾತ್ಮ, ಜೀವಾತ್ಮಂಗಳು ಹುಟ್ಟಿದವು. ಆ ಜ್ಞಾನಾತ್ಮಕನಲ್ಲಿ ಮಹಾನುಭಾವಜ್ಞಾನಂಗಳು ಹುಟ್ಟಿ ತ್ರಿಯಕ್ಷರಾದವು. ಆ ತ್ರಿಯಕ್ಷರಂಗಳಲ್ಲಿ ಓಂಕಾರ ಹುಟ್ಟಿತ್ತು. ಆ ಓಂಕಾರದಲ್ಲಿ ಪಂಚಾಕ್ಷರಂಗಳು ಹುಟ್ಟಿದವು. ಆ ಪಂಚಾಕ್ಷರಂಗಳಲ್ಲಿ ಅಯಿವತ್ತೆರಡು ಅಕ್ಷರಂಗಳು ಹುಟ್ಟಿದವು. ಇಂತೀ ಅಕ್ಷರಂಗಳೆಲ್ಲವನು ಷಡಾತ್ಮಕರ ಪ್ರಾಣವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->