ಅಥವಾ

ಒಟ್ಟು 37 ಕಡೆಗಳಲ್ಲಿ , 2 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾದಮೂರ್ತಿಗಳು ತಮ್ಮ ನಿಲವು ಕಾಣಬಾರದಂದಿಗೆ, ಬಿಂದುಮೂರ್ತಿಗಳು ನೆಲೆಗೊಳ್ಳದಂದಿಗೆ, ಕಲಾಮೂರ್ತಿಗಳು ತಮ್ಮ ಪ್ರಕಾಶದೋರದಂದಿಗೆ, ಅತ್ತತ್ತಲೆ ತಾನೇ ಲಿಂಗವಾಗಿರ್ದನಯ್ಯ. ತನ್ನ ನೆನವಿನಿಂದ ಒಬ್ಬ ಸತಿಯಳು ಪುಟ್ಟಿದಳು ನೋಡಾ ! ಆಕೆಯ ಸಂಗದಲ್ಲಿ ಐವರು ಕನ್ನೆಯರ ಕಂಡೆನಯ್ಯ. ಆ ಐವರು ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಪಂಚದೀಪವ ರಚಿಸಿ, ಆ ಲಿಂಗಕ್ಕೆ ಓಂ ನಮೋ ಓಂ ನಮೋ ಓಂ ನಮೋಯೆಂದು ಮಂಗಳಾರ್ತಿಯನೆತ್ತಿ ಬೆಳಗುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವಿಲ್ಲದಂದು, ರವಿ-ಶಶಿ-ಆತ್ಮರಿಲ್ಲದಂದು, ನಾದ-ಬಿಂದು-ಕಲೆಗಳಿಲ್ಲದಂದು, ಸಾಕ್ಷಿ-ಸಭೆಗಳಿಲ್ಲದಂದು, ಶೂನ್ಯ-ನಿಃಶೂನ್ಯವಿಲ್ಲದಂದು, ಏನೇನೂ ಇಲ್ಲದಂದು ಅತ್ತತ್ತಲೆ, ಅಪರಂಪರ ನಿರಾಳ ತಾನೇ ನೋಡಾ. ಆ ನಿರಾಳನ ಚಿದ್ವಿಲಾಸದಿಂದ ಪರಬ್ರಹ್ಮನಾದನಯ್ಯ. ಆ ಪರಬ್ರಹ್ಮನ ಭಾವದಿಂದ ಪರಶಿವನಾದ. ಆ ಪರಶಿವನ ಭಾವದಿಂದ ಸದಾಶಿವನಾದ. ಆ ಸದಾಶಿವನ ಭಾವದಿಂದ ಈಶ್ವರನಾದ. ಆ ಈಶ್ವರನ ಭಾವದಿಂದ ರುದ್ರನಾದ. ಆ ರುದ್ರನ ಭಾವದಿಂದ ವಿಷ್ಣುವಾದ. ಆ ವಿಷ್ಣುವಿನ ಭಾವದಿಂದ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರು. ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರು. ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಪರಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಪರಬ್ರಹ್ಮಕೆ ಚಿತ್‍ಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಇಂತೀ ಭೇದವನರಿತು ಇರಬಲ್ಲರೆ ಅವರೇ ಪ್ರಾಣಲಿಂಗಸಂಬಂಧಿಗಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜ್ಞಾನಶಕ್ತಿಯ ಸಂಗದಿಂದ ಅವಿರಳಸ್ವಾನುಭಾವಸಿದ್ಧಾಂತವನರಿತು ಅತ್ತತ್ತಲೆ ಪರಕ್ಕೆ ಪರವಶನಾಗಿರ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿ ಅನಾದಿ ಇಲ್ಲದಂದು, ಸುರಾಳ ನಿರಾಳ ಇಲ್ಲದಂದು, ಶೂನ್ಯ ನಿಃಶೂನ್ಯ ಇಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ನಾಮ ರೂಪ ಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿರವಯಲಿಂಗವು ತಾನೇ ನೋಡಾ. ಆ ಲಿಂಗದ ಚಿದ್ವಿಲಾಸದಿಂದ ನಿರಂಜನನಾದ. ಆ ನಿರಂಜನನ ಸಂಗದಿಂದ ನಿರಾಕುಳನಾದ. ಆ ನಿರಾಕುಳವೆ ಚಿದ್ಬ್ರಹ್ಮವೆನಿಸಿತ್ತು. ಆ ಚಿದ್ಬ್ರಹ್ಮ ಒಂದೇ ಮೂರು ತೆರನಾಯಿತ್ತು. ಆ ಮೂರೇ ಆರು ತೆರನಾಯಿತ್ತು. ಆರೇ ಮೂವತ್ತಾರು ತೆರನಾಯಿತ್ತು. ಚಿದ್ಬ್ರಹ್ಮವೆ ಚಿತ್ತವೆನಿಸಿತ್ತು. ಆ ಚಿತ್ತವೆ ಸತ್ತು ಚಿತ್ತಾನಂದನಿತ್ಯಪರಿಪೂರ್ಣವೆಂಬ ಐದಂಗವನಂಗೀಕರಿಸಿಕೊಂಡು ಪರವಶದಲ್ಲಿ ನಿಂದು, ಪರಕೆ ಪರವನೆಯ್ದಿದ ಮಹಾಬ್ರಹ್ಮವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬದ್ಧಜ್ಞಾನಿಗಳು ಇಲ್ಲದಂದು, ಶುದ್ಧಜ್ಞಾನಿಗಳು ಇಲ್ಲದಂದು, ನಿರ್ಮಳಜ್ಞಾನಿಗಳು ಇಲ್ಲದಂದು, ಮನಜ್ಞಾನಿಗಳು ಇಲ್ಲದಂದು, ಸುಜ್ಞಾನಿಗಳಿಲ್ಲದಂದು, ಪರಮಜ್ಞಾನಿಗಳಿಲ್ಲದಂದು, ಮಹಾಜ್ಞಾನಿಗಳಿಲ್ಲದಂದು, ಸ್ವಯಜ್ಞಾನಿಗಳಿಲ್ಲದಂದು, ಅತ್ತತ್ತಲೆ. ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ನಿರಾಮಯ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->