ಅಥವಾ

ಒಟ್ಟು 572 ಕಡೆಗಳಲ್ಲಿ , 1 ವಚನಕಾರರು , 572 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಥ ಬ್ರಹ್ಮಾಂಡವ ಅರವತ್ತೊಂಬತ್ತು ಸಾವಿರದ ಆರುನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಬ್ರಾಹ್ಮಣವೆಂಬ ಭುವನ. ಆ ಭುವನದೊಳು ಬ್ರಹ್ಮಾದ್ಥಿಪತಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರಾ ನಲವತ್ತೈದುಕೋಟಿ ದೇವರ್ಕಳು ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ಇಹರು ನೋಡಾ. ಮೂನ್ನೂರಾ ನಲವತ್ತೈದುಕೋಟಿ ನಾರಾಯಣರು-ಬ್ರಹ್ಮ-ರುದ್ರಾದಿಗಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಶರಣನಲ್ಲಿಯ ಷಡ್ವಿಧ ಷಡುಸ್ಥಲಲಿಂಗ ಮಿಶ್ರಾರ್ಪಣ ಭೇದವೆಂತೆಂದಡೆ : ಆಕಾಶವೆ ಅಂಗವಾದ ಶರಣನ ಸುಜ್ಞಾನವೆಂಬ ಹಸ್ತದಲ್ಲಿ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಪಾತ್ರದಲ್ಲಿ ಹುಟ್ಟಿದ ಸುನಾದಾಳಾಪನೆಯ ಶಬ್ದದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಸಹಸ್ರದಳ ಪದ್ಮವ ಪೊಕ್ಕು ನೋಡಿ ಸಾದ್ಥಿಸಿ, ``ಸಹಸ್ರಶಿರ್ಷಾಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ | ಸ ಭೂಮಿಂ ವಿಶ್ವತೋವೃತ್ವಾ ಅತ್ಯತಿಷ್ಠದ್ದಶಾಂಗುಲಂ ||'' ಎಂಬ ಪರಮಪುರುಷನ ಕಂಡು ನಮೋ ನಮೋ ಎನುತಿರ್ದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನವಮಾಸಕ್ಕೆ ಶ್ರೋತ್ರಾದಿಗಳೈದು, ಶಬ್ದಾದಿಗಳೈದು, ಮಂಡಲಮೂರು, ಗುಣಮೂರು, ವ್ಯಾದ್ಥಿಮೂರು, ಈಷಣಮೂರು, ನಾಡಿಹತ್ತು, ವಾಯುಹದಿನಾಲ್ಕು, ಕ್ಲೇಷಂಗಳೈದು, ಧಾತುಗಳೇಳು, ಮದವೆಂಟು, ಸುಖದುಃಖಂಗಳೆರಡು, ಎಪ್ಪತ್ತೆರಡುಸಾವಿರ ನಾಡಿಗಳು, ಎಂಬತ್ತೆಂಟುಕೋಟಿ ರೋಮದ್ವಾರಂಗಳು, ಎಂಬತ್ನಾಲ್ಕುನೂರುಸಾವಿರ ಸಂದುಗಳು, ಇಪ್ಪತ್ತೊಂದುಸಾವಿರದಾರುನೂರು ಶ್ವಾಸಂಗಳು, ಮೂವತ್ತೆರಡು ಲಕ್ಷಣಂಗಳು, ಐವತ್ತಾರಕ್ಷರಂಗಳು, ಅರುವತ್ನಾಲ್ಕು ಕಲೆ, ಜ್ಞಾನಂಗಳು ಕೂಡಿ ಸುಜ್ಞಾನಸಂಪನ್ನನಾಗಿ ಪೂರ್ವಜನ್ಮದಲ್ಲಿ ಎಂಬತ್ನಾಲ್ಕುನೂರುಸಾವಿರ ಜನ್ಮದಲ್ಲಿ ಬಂದ ಜನ್ಮವ ವಿವೇಕಿಸುತ್ತಿಹುದು ನೋಡಾ. ಅದೆಂತೆಂದಡೆ: ಮಾನವಜನ್ಮ ಒಂಬತ್ತುಸಾವಿರ ಜನ್ಮ. ಉರುವ ಜೀವಜನ್ಮ ಹನ್ನೊಂದುಸಾವಿರಜನ್ಮ. ಜಲಚರ ಜೀವಜನ್ಮದಲ್ಲಿ ಎಂಬತ್ನಾಲ್ಕುನೂರುಸಾವಿರಜನ್ಮದಲ್ಲಿ ಹತ್ತುಸಾವಿರ ಜನ್ಮ. ಹಾರುವ ಪಕ್ಷಿಗಳ ಜೀವಜನ್ಮದಲ್ಲಿ ಹತ್ತುಸಾವಿರಜನ್ಮ. ಚತುಷ್ಪಾದಜೀವರಾಶಿಗಳ ಜನ್ಮದಲ್ಲಿ ಹತ್ತುಸಾವಿರಜನ್ಮ. ದೈತ್ಯ ಜೀವಜನ್ಮದಲ್ಲಿ ಹದಿನಾರುಸಾವಿರಜನ್ಮ. ಸ್ಥಾವರಂಗಳ ಜನ್ಮದಲ್ಲಿ ಹದಿನೆಂಟುಸಾವಿರಜನ್ಮ. ಇಂತು ಎಂಬತ್ನಾಲ್ಕುನೂರುಜನ್ಮ ಅಂಡಜ ಸ್ವೇದಜ ಉದ್ಬಿಜ ಜರಾಯುಜವೆಂಬ ನಾಲ್ಕು ಯೋನಿಯಲ್ಲಿ ಜನಿಸಿದನು. ಇನ್ನು ಹುಟ್ಟಿದಾಕ್ಷಣದಲ್ಲಿಯೆ ಮರಣ, ಮರಣದಾಕ್ಷಣದಲ್ಲಿಯೇ ಜನನವೆಂದರಿದು ಸ್ಮರಿಸುತ್ತಿಹುದು ನೋಡಾ. ಇದಕ್ಕೆ ಈಶ್ವರ ಉವಾಚ : ``ಮಾಸೇಕಂ ನವಮೇ ಪ್ರಾಪ್ತೇ ಗರ್ಭೇತ ತತ್‍ಸ್ಮರತಿ ಸ್ವಯಂ | ಮೃತಸ್ಯಾಹಂ ಪುನರ್ಜಾತಃ ಜಾತಸ್ಯಾಹಂ ಮೃತಃ ಪುನಃ | ನಾನಾಯೋನಿಸಹಸ್ರೇಷು ಮಯಾ ದೃಷ್ಟಮನೇಕಶಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಮೂವತ್ತಾರುಲಕ್ಷದ ಮೇಲೆ ಸಾವಿರದ ಮುನ್ನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಉದಂಬರೀಶವೆಂಬ ಭುವನ. ಆ ಭುವನದೊಳು ಉಮಾರಹಿತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಆರುನೂರೆಪ್ಪತ್ತೈದುಕೋಟಿ ನಾರಾಯಣರು ಬ್ರಹ್ಮ ರುದ್ರಾದಿಗಳಿಹರು ನೋಡಾ. ಆರುನೂರೆಪ್ಪತ್ತೈದುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ನಿರ್ಮಲಾವಸ್ಥೆಯ ದರ್ಶನವ ಮಾಡುವಾಗ ಪಂಚಲಿಂಗಗಳನು ದರ್ಶನವ ಮಾಡುವುದು. ಅದೆಂತೆಂದಡೆ : ಅಣವ, ಮಾಯೆ, ಕಾರ್ಮಿಕ, ಮಹಾಮಾಯೆ, ತಿರೋಧಾನಮಲ. ಆಣವಮಲವಾವುದು ? ಶಿವನ ನೆನೆಯಲೀಸದಿಹುದು. ಮಾಯೆಯಾವುದು ? ತನು ಕರಣ ಭುವನಭೋಗಂಗಳ ಬಯಸುತ್ತಿಹುದು, ಕಾರ್ಮಿಕವಾವುದು ? ಪುಣ್ಯಪಾಪಂಗಳೆಂದು ಹೆಸರಾಗಿ ಸುಖದುಃಖಂಗಳಾಗಿಹುದು. ಮಹಾಮಾಯೆ ಯಾವುದು ? ಪಂಚಕರ್ತನು ರೂಪಾದಿ ದೇಹಾಗಿ ಪ್ರಪಂಚಗಳ ಪ್ರೇರಿಸಿಕೊಂಡಿಹುದು. ತಿರೋಧಾನಮಲವಾವುದು ? ಮರಳಿ ಮಾಯಾಭೋಗದಲ್ಲಿ ಬಿದ್ದು ಹೊರಳಾಡಿಸುತ್ತಿಹುದು. ಈ ಪ್ರಕಾರದಲ್ಲಿ ಪಂಚಮಲಂಗಳನು ಅರಿವುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಆ ಆತ್ಮನು ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಂಗಳಂ ಪಂಚಭೂತಾಂಶಿಕಮಂ ಕೂಡಿಕೊಂಡು ದೇಹವಾಗಿ ಬೆಳೆದು, ಆಧ್ಯಾತ್ಮಿಕ, ಆದ್ಥಿದೈವಿಕ, ಆದ್ಥಿಭೌತಿಕವೆಂಬ ತಾಪತ್ರಯಂಗಳಿಂದ ನೊಂದು ಬೆಂದು ಪುಣ್ಯಪಾಪ ವಶದಿಂದ ಜೀವನಾಗಿ, ಅಂಡಜ, ಸ್ವೇದಜ, ಉದ್ಬಿಜ, ಜರಾಯುಜವೆಂಬ ಚೌರಾಶಿಲಕ್ಷ ಜೀವಜಂತುಗಳ ಯೋನಿಯಲ್ಲಿ ಬಂದು, ಹುಟ್ಟದ ಯೋನಿಯಿಲ್ಲ, ಮೆಟ್ಟದ ಭೂಮಿಯಿಲ್ಲ, ಉಣ್ಣದ ಆಹಾರವಿಲ್ಲ, ಕಾಣದ ಸುಖದುಃಖವಿಲ್ಲ. ಇದಕ್ಕೆ ಈಶ್ವರ ಉವಾಚ : ``ನಾನಾಯೋನಿಸಹಸ್ರಾಣಿ ಗತ್ವಾ ಚೈವಂತು ಮಾಯಯಾ | ಆಹಾರಂ ವಿವಿಧಂ ಭುಕ್ತ್ವಾ ಪೀತ್ವಾ ಚ ವಿವಿಧಸ್ತನಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಂಸಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಲು ಕೈ ನಡುವೆಲ್ಲ ತಾವರೆಯ ತಂತಿನಂತೆ ಎಂಬತ್ತುನಾಲ್ಕುನೂರುಸಾವಿರ ಸಂದುಗಳ ಬಂದ್ಥಿಸಿಕೊಂಡಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಲಕ್ಷದ ಮೇಲೆ ಒಂಬೈನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಿಧುವೇಶ್ವರವೆಂಬ ಭುವನ. ಆ ಭುವನದೊಳು ವಿಶ್ವೇಶ್ವರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಐನೂರುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆ ಎಂಬ ಪಂಚ ವಿಭೂತಿ ಉತ್ಪತ್ಯವೆಂತೆಂದಡೆ : ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಮುಖದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಉತ್ಪತ್ಯವಾಯಿತ್ತು. ಆ ಪೃಥ್ವಿಯಪ್ಪುತೇಜವಾಯುವಾಕಾಶದಿಂದಲ್ಲಿ ನಿವೃತ್ತಿ ಪ್ರತಿಷ್ಠೆ ವಿದ್ಯಾ ಶಾಂತಿ ಶಾಂತ್ಯಾತೀತಯೆಂಬ ಪಂಚಕಲೆಗಳುತ್ಪತ್ಯವಾಯಿತ್ತು. ಆ ಪಂಚಕಲೆಗಳಿಂದ ನಂದೆ ಭದ್ರೆ ಸುರಬ್ಥಿ ಸುಶೀಲೆ ಸುಮನೆಯೆಂಬ ಪಂಚಗೋವುಗಳುತ್ಪತ್ಯವಾಯಿತ್ತು. ಆ ಪಂಚಗೋವುಗಳ ಗೋಮಯದಲ್ಲಿ ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆಯೆಂಬ ಪಂಚವಿಭೂತಿ ಉತ್ಪತ್ಯವಾಯಿತ್ತು. ಇದಕ್ಕೆ ಜಾಬಾಲೋಪನಿಷತ್ : ``ಸದ್ಯೋಜಾತಾತ್ ಪೃಥಿವೀ ತಸ್ಯಾ ನಿವೃತ್ತಿಃ ತಸ್ಯಾಃ ಕಪಿಲವರ್ಣಾ ನಂದಾ ತಸ್ಯಾಃ ಗೋಮಯೇನ ವಿಭೂತಿರ್ಜಾತಾ || ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ ತಸ್ಯಾಃ ಕೃಷ್ಣವರ್ಣಾ ಭದ್ರಾ ತಸ್ಯಾಃ ಗೋಮಯೇನ ಭಸಿತಂ ಜಾತಂ || ಅಘೋರಾದ್ವಹ್ನಿಃ ತಸ್ಮಾತ್ ವಿದ್ಯಾ ತಸ್ಯಾಃ ರಕ್ತವರ್ಣಾ ಸುರಬ್ಥೀ ತಸ್ಯಾಃ ಗೋಮಯೇನ ಭಸ್ಮ ಜಾತಂ || ತತ್ಪುರುಷಾತ್ ವಾಯುಃ ತಸ್ಮಾತ್ ಶಾಂತಿ ಃ ತಸ್ಯಾಃ ಶ್ವೇತವರ್ಣಾ ಸುಶೀಲಾ ತಸ್ಯಾಃ ಗೋಮಯೇನ ಕ್ಷಾರಂ ಜಾತಂ || ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ ತಸ್ಯಾಃ ಚಿತ್ರವರ್ಣಾ ಸುಮನಾಃ ತಸ್ಯಾಃ ಗೋಮಯೇನ ರಕ್ಷಾ ಜಾತಾ ||'' ``ಐಶ್ವರ್ಯಕಾರಣಾತ್ ಭೂತಿಃ, ಭಾಸನಾತ್ ಭಸಿತಂ, ಸರ್ವಾಘಭಕ್ಷಣಾತ್ ಭಸ್ಮಂ, ಅಪದಾಂ ಕ್ಷರಣಾತ್ ಕ್ಷಾರಂ, ಭೂತಪ್ರೇತಪಿಶಾಚಬ್ರಹ್ಮರಾಕ್ಷಸಾಪಸ್ಮಾರ ಭವಬ್ಥೀತಿಭ್ಯೋsಬ್ಥಿರಕ್ಷಣಾತ್ ರಕ್ಷೇತಿ ||'' ಇಂತೆಂದುದು ಶ್ರುತಿ. ಇದಕ್ಕೆ ಕ್ರಿಯಾಸಾರೇ : ``ವಿಭೂತಿರ್ಭಸಿತಂ ಭಸ್ಮ ಕ್ಷಾರಂ ರಕ್ಷೇತಿ ಭಸ್ಮನಃ | ಭವಂತಿ ಪಂಚ ನಾಮಾನಿ ಹೇತು ರಕ್ಷಣಾದ್ರಕ್ಷೇತಿ ||'' ಇಂತೆಂದುದು ಶ್ರುತಿ. ``ಪಂಚಬ್ಥಿಃಬೃಷಂ ಐಶ್ವರ್ಯಕಾರಣಾದ್ಭೂತಿ, ಭಸ್ಮ ಸರ್ವಾಘಭಕ್ಷಣಾತ್, ಭಾಸನಾತ್ ಭಸಿತಂ, ತತ್ವಾ ಕ್ಷರಣಾತ್‍ಕ್ಷಾರಮಾಪದಂ, ಭೂತಪ್ರೇತಪಿಶಾಚೇಭ್ಯೋ ಸ್ವರ್ಗಹೇತುಭ್ಯೋಬ್ಥಿರಕ್ಷಣಾತ್ ರಕ್ಷಾ ಸ್ಯಾತ್ ಕ್ರೂರಸರ್ಪೇಭ್ಯೋ ವ್ಯಾಘ್ರಾದಿಭ್ಯಶ್ಚ ಸರ್ವದಾ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಮಹಾಸದಾಶಿವ ತತ್ವದ ಪಂಚಮುಖದಲ್ಲಿ ಉತ್ಪತ್ಯವಾದ ಪಂಚಮಹಾಭೂತಬ್ರಹ್ಮಾಂಡಕಪಾಲದೊಳು ಪಂಚಭೂತ ಬ್ರಹ್ಮಾಂಡಕಪಾಲ ಉತ್ಪತ್ಯವದೆಂತೆಂದೊಡೆ : ಆ ಮಹಾಶಿವತತ್ವದ ನಿರ್ಭಾವ ಮುಖದಲ್ಲಿ ಆತ್ಮನುತ್ಪತ್ಯವಾದನು. ಆ ಆತ್ಮನಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಆಕಾಶದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ವಾಯುವಿನಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಅಗ್ನಿಯಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಅಪ್ಪುವಿನಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಇದಕ್ಕೆ ಈಶ್ವರ ಉವಾಚ : ``ಆತ್ಮನ್ಯಾಕಾಶಸಂಭೂತಿರಾಕಾಶಾದ್ವಾಯು ಸಂಭವಃ | ವಾಯೋರಗ್ನಿಃ ಸಮುತ್ಪತ್ತಿರಗ್ನೇರಾಪ ಉದಾಹೃತಂ | ಅಪ್ ಪೃಥ್ವೀಚ ಸಂಭೂತಿರ್ಲಕ್ಷಣೈಕಪ್ರಭಾವತಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜೀವನೆಂಬ ಶಿವಾಲಯದೊಳು ಶಿವನೆಂಬ ಲಿಂಗವ ನೆಲೆಗೊಳಿಸಿ ಅಜ್ಞಾನವೆಂಬ ನಿರ್ಮಾಲ್ಯವಂ ಕಳೆದು ಸೋಹಂಭಾವದಲ್ಲಿ ಪೂಜಿಸುತ್ತಿರಲು ಎನ್ನ ಭವರೋಗಂಗಳು ಬಯಲಾಗಿ ಭವರಹಿತನಾದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಹದಿಮೂರುಲಕ್ಷದ ಮೇಲೆ ಸಾವಿರದ ನೂರಿಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅಕುಲಿಶವೆಂಬ ಭುವನ. ಆ ಭುವನದೊಳು ಅಚಲನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರರವತ್ತುಕೋಟಿ ಬ್ರಹ್ಮ-ವಿಷ್ಣು-ಇಂದ್ರ-ಚಂದ್ರಾದಿತ್ಯರಿಹರು. ಐನೂರರವತ್ತುಕೋಟಿ ರುದ್ರರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಷಟ್ಸ್ಥಲದ ಭೇದವೆಂತೆಂದಡೆ : ಸದಾಚಾರದಲ್ಲಿ ನಡಹ, ಶಿವನಲ್ಲಿ ಭಕ್ತಿಯಾಗಿಹ, ಲಿಂಗಜಂಗಮ ಒಂದೆಯೆಂಬ ಬುದ್ಧಿಯಾಗಿಹ, ಲಾಂಛನಧಾರಿಗಳ ಕಂಡಡೆ ಒಂದಿಸುವುದೀಗ ಭಕ್ತಸ್ಥಲ ನೋಡಾ. ಇದಕ್ಕೆ ಈಶ್ವರ್ದೋವಾಚ : ``ಸದಾಚಾರಂ ಶಿವೇ ಭಕ್ತಿಃ ಲಿಂಗಜಂಗಮೇ ರತಿಃ | ಲಾಂಛನಂ ಚ ಶರಣ್ಯಂ ಚ ಭಕ್ತಿಸ್ಥಲಸುಬುದ್ಧಿಮಾನ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪರತತ್ತ್ವದ ಪೃಥ್ವಿಯೆಂದು, ಪರತತ್ತ್ವದ ಅಪ್ಪುವೆಂದು, ಪರತತ್ತ್ವದ ತೇಜವೆಂದು, ಪರತತ್ತ್ವದ ವಾಯುವೆಂದು, ಪರತತ್ತ್ವದ ಆಕಾಶವೆಂದು, ಪರತತ್ತ್ವದ ಹೃದಯವೆಂದು ಆರು ಪ್ರಕಾರವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->