ಅಥವಾ

ಒಟ್ಟು 101 ಕಡೆಗಳಲ್ಲಿ , 1 ವಚನಕಾರರು , 101 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಿನೊಳಗಣ ಕವಲು ಮೂವರು ಅಣ್ಣಂದಿರು ಮನೆಯಾಯಿತ್ತು. ಮನೆಯ ಮರುಳು ನುಂಗಿ ಕವಡಿಕೆಯ ಕವಲು ಹಿಸಿದು ಕಣ್ಣು ಕಂಡಲ್ಲಿಯೇ ಅಡಗಿತ್ತು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಬಸವಣ್ಣನ ಪ್ರಸಾದವ ಕೊಂಡ ಕಾರಣ ಎನಗೆ ಭಕ್ತಿ ಸಾಧ್ಯವಾಯಿತ್ತು. ಚೆನ್ನಬಸವಣ್ಣನ ಪ್ರಸಾದವ ಕೊಂಡ ಕಾರಣ ಎನಗೆ ಜ್ಞಾನ ಸಾಧ್ಯವಾಯಿತ್ತು. ಪ್ರಭುದೇವರ ಪ್ರಸಾದವ ಕೊಂಡ ಕಾರಣ ಎನಗೆ ವೈರಾಗ್ಯ ಸಾಧ್ಯವಾಯಿತ್ತು. ಇಂತೀ ಮೂವರು ಒಂದೊಂದು ಕೊಟ್ಟ ಕಾರಣ ಎನಗೆ ಸರ್ವವೂ ಸಾಧ್ಯವಾಯಿತ್ತು. ಏಣಾಂಕಧರ ಸೋಮೇಶ್ವರಾ, ನಿಮ್ಮ ಶರಣರೆನ್ನ ಮಾತಾಪಿತರು.
--------------
ಬಿಬ್ಬಿ ಬಾಚಯ್ಯ
ತಾನರಿದಲ್ಲಿ ಸಕಲವೆಲ್ಲ ತನ್ನೊಳಗಡಗಿತ್ತು. ತಾ ಮರೆದಲ್ಲಿ ಸಕಲವ್ಯಾಪಾರ ತನ್ನಿರವಾಯಿತ್ತು. ನಿಂದ ವಾರಿಯಲ್ಲಿ ಹಾವಸೆ ತನ್ನಿಂದ ಒದಗಿದಂತೆ, ಚರಿಸೆ ಹಾವಸೆ ಹರಿದು ನಿರ್ಮಲವಾದಂತೆ, ಅರಿವು ಮರವೆ ಬೇರೊಂದೆಡೆಯಿಲ್ಲ. ಎಲೆ ಗಿಡು ಮುಳ್ಳಿನಂತೆ, ಉರಿ ಮಥನ ಕಾಷ*ದಂತೆ, ಶಿಲೆ ಕುರುಹು ರೂಪಿನಂತೆ, ಫಲ ಖಲದಂತೆ, ನಿರುತ ನಿಳಯದಂತೆ, ಭರತ ಶಬ್ದದಂತೆ, ಜೀವ ನಾದದಂತೆ ಉಭಯ ಭಿನ್ನವಿಲ್ಲ. ಏಣಾಂಕಧರ ಸೋಮೇಶ್ವರಲಿಂಗವೆಂಬುದು ಅಲ್ಲಿಯೇ ಭಾವವಿರಹಿತವಾಯಿತ್ತು.
--------------
ಬಿಬ್ಬಿ ಬಾಚಯ್ಯ
ನಾನಾ ರಸಂಗಳಲ್ಲಿ ಅರಿದ ಕಿಸಲಯ ಒಂದರಲ್ಲಿ ನಿಂದುದಿಲ್ಲ. ಸಂದಿಲ್ಲದ ಸವಿಯನರಿವುದು. ಅದೊಂದೆ ಭೇದ ಸಂದಿತ್ತು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಸ್ಥಲ ಏಕೀಕರವಾಯಿತ್ತು.
--------------
ಬಿಬ್ಬಿ ಬಾಚಯ್ಯ
ತಾರಕ ನುಂಗಿದ ಜಲವ, ಬೇರೆ ಶೋಧಿಸಲುಂಟೆ ಅಯ್ಯಾ ? ಉರಿಯುಂಡ ಘೃತವ ಅಳೆವುದಕ್ಕೆ ಈಡುಂಟೆ ಅಯ್ಯಾ ? ನಿಶ್ಚಯ ನಿಜವ ಗೊತ್ತಿಂಗೆ ತರಬಹುದೆ ಅಯ್ಯಾ ? ಇಷ್ಟ ವಸ್ತುವಿನಲ್ಲಿ ಲೇಪವಾಗಿ ಮತ್ತೊಂದು ಕುರುಹಿಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ಮತ್ಸ್ಯದ ಕಣ್ಣು, ಸರ್ಪನ ವಿಷ, ಹುಲಿಯ ಕಾಲುಗುರು ನಡೆವಲ್ಲಿ ಅಡಗುವಂತೆ, ಕೊಲುವಲ್ಲಿ ಬಿಡುವಂತೆ ಇಂತೀ ವಿಗಡತ್ರಯವ ಅರಿ, ಅಸುವಿನ ಭೇದವ ಏಣಾಂಕಧರ ಸೋಮೇಶ್ವರಲಿಂಗವ ಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಒಂದು ಎರಡ ನುಂಗಿ, ಮೂರು ಐದ ನುಂಗಿ, ಐದರೆಯಾಗಿ ಒರೆದಲ್ಲದೆ ಏಣಾಂಕಧರ ಸೋಮೇಶ್ವರಲಿಂಗವನರಿಯಬಾರದು.
--------------
ಬಿಬ್ಬಿ ಬಾಚಯ್ಯ
ಇಷ್ಟಲಿಂಗಕ್ಕೆ ದೃಷ್ಟಾರ್ಪಿತ, ಪ್ರಾಣಲಿಂಗಕ್ಕೆ ತೃಪ್ತಿ ಅರ್ಪಿತ, ಮಹಾಜ್ಞಾನ ಘನಲಿಂಗಕ್ಕೆ ಪರಮ ಪರಿಣಾಮವೆ ಅರ್ಪಿತ. ಇಂತೀ ತ್ರಿವಿಧ ಅರ್ಪಣದಲ್ಲಿ ಸುಚಿತ್ತನಾಗಿರಬೇಕು, ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ.
--------------
ಬಿಬ್ಬಿ ಬಾಚಯ್ಯ
ಅಂಗಕ್ಕೆ ಲಿಂಗ, ಮನಕ್ಕೆ ಅರಿವಾಗಬೇಕೆಂಬ ಸಂದೇಹವೆಂತುಟೊ ? ಜೀವನವ ಹಿಂಗಿದ ಘಟ ಜೀವಿಸಬಲ್ಲುದೆ ? ಭಾವಕ್ಕೆ ಇದಿರಿಟ್ಟು, ಕುರುಹು ಅಭಿಮುಖವಾಗಿ ಅರಿವುದಕ್ಕೆ ತೆರನಿಲ್ಲ, ಏಣಾಂಕಧರ ಸೋಮೇಶ್ವರಲಿಂಗ ತಾನಾಗಿ.
--------------
ಬಿಬ್ಬಿ ಬಾಚಯ್ಯ
ಅರಿದು ಅರುಹಿಸಿಕೊಂಬುದಾದ ಕಾರಣ ಉಭಯನಾಮವಾಯಿತ್ತು. ಅದರ ಭೇದದಿಂದ ತಿಳಿಯೆ ಮೂರಾಯಿತ್ತು. ಮೂರು ಮುಮ್ಮೊಖದಲ್ಲಿ ತಿಳಿಯೆ ಆರಾಯಿತ್ತು. ಇವೆಲ್ಲವು ಒಡಗೂಡಿ ನೋಡೆ ನೂರೊಂದಾಯಿತ್ತು. ಭಿನ್ನಭಾವಿಯ ಭೇದದಿಂದ ಸೂತ್ರದ ದಾರ ನಾಳವೊಂದರಲ್ಲಿ ಅಡಗಿಪ್ಪಂತೆ ಸ್ಥಲ ಕುಳಂಗಳು ವಸ್ತುವಿನಲ್ಲಿ ಅಡಗಿ ತೋರುವವು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಉಭಯನಾಮ ನಷ್ಟವಾದವಂಗೆ.
--------------
ಬಿಬ್ಬಿ ಬಾಚಯ್ಯ
ಇಷ್ಟಲಿಂಗ ಪ್ರಾಣಲಿಂಗವೆಂದು ಭಿನ್ನಭಾವದಿಂದ ಹಿಂಗಿಸುವ ಪರಿಯಿನ್ನೆಂತೊ ? ಕಾಯದಲ್ಲಿ ನೋವಾದಡೆ ಜೀವಕ್ಕೆ ಭಿನ್ನವೆ ? ಜೀವ ಹೋದಲ್ಲಿ ಕಾಯ ಉಳಿಯಬಲ್ಲುದೆ ? ಈ ಉಭಯದ ಭೇದವನರಿ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಪಟುಭಟಂಗೆ ಪ್ರಳಯ ಒಂದೆಯೆಂದು ಪ್ರಮಾಣಿಸಿದಲ್ಲಿ ಅಂಗದಾಸೆ ಮರೆಯಿತ್ತು. ಸರ್ವಗುಣಸಂಪದ ಭೇದವ ಒಂದುಮಾಡಿ ದ್ವಯಗುಣವ ಹಿಂಗಿದಲ್ಲಿ ಸ್ಥಲ ಅಲ್ಲಿಯೇ ಲೇಪವಾಯಿತ್ತು ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ತನುವಿನ ಇಷ್ಟವ ಬಿಟ್ಟಾಗ ಅರಿದು, ಕಟ್ಟಿದಾಗ ಮರೆದು ಮತ್ತೆ ಸೋಂಕಿದ ಸುಖವ ಅರ್ಪಿಸುವ ಪರಿಯಿನ್ನೆಂತೊ ? ಒರೆಯ ಮರೆಯ ಕೈದಿನಲ್ಲಿ ಕಡಿದಡೆ ಹರಿದುದುಂಟೆ ? ಕುರುಹಿನ ಮರೆಯಲ್ಲಿದ್ದಾತನ, ಎರಡಳಿದು ಅವಧಿಯಿಲ್ಲದಿರಬೇಕು ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಘಟ ಬಯಲಂತೆ, ಪಟ ವಾಯುವಂತೆ ಸ್ಫುಟಿತ ಸುಟಿಯಂತೆ ಘಟಿತವಾಗಿರಬೇಕು, ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಉರಿಯ ಮೊನೆಯ ಮೇಲೆ ಅರಗಿನ ಬೊಂಬೆ ತಿರುಗಾಡುತ್ತದೆ. ಉರಿ ಕರಗಿ ಬೊಂಬೆ ಉಳಿಯಿತ್ತು, ಏಣಾಂಕಧರ ಸೋಮೇಶ್ವರಲಿಂಗವ ಇದಿರಿಟ್ಟುಕೊಂಡು.
--------------
ಬಿಬ್ಬಿ ಬಾಚಯ್ಯ
ಇನ್ನಷ್ಟು ... -->