ಅಥವಾ

ಒಟ್ಟು 166 ಕಡೆಗಳಲ್ಲಿ , 1 ವಚನಕಾರರು , 166 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು. ಮನ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು. ಭಾವ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು. ಸರ್ವಾಂಗ ದಣಿವರಿಯದು ಮಾಡಿ ಮಾಡಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನೆಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವಿನಲ್ಲಿ ಗುಣವನರಸಿ ಕಡಿದುಹಾಕಿದಲ್ಲಿ ಎನಗೆ ಶುದ್ಧಪ್ರಸಾದ ಸಾಧ್ಯವಾಯಿತ್ತು. ಲಿಂಗದಲ್ಲಿ ಶಿಲೆಯನರಸಿ ಸುಟ್ಟು ಬಿಸಾಟಿದಲ್ಲಿ ಎನಗೆ ಸಿದ್ಧಪ್ರಸಾದ ಸಾಧ್ಯವಾಯಿತ್ತು. ಜಂಗಮದಲ್ಲಿ ಕುಲವನರಸಿ ಕೊಂದು ಹಾಕಿದಲ್ಲಿ ಎನಗೆ ಪ್ರಸಿದ್ಧಪ್ರಸಾದ ಸಾಧ್ಯವಾಯಿತ್ತು. ಇಂತು ಇವರ ದುರ್ಗುಣ ಕಠಿಣ ಅಕುಲವನರಸದೆ ಕೊಡುಕೊಳ್ಳೆ ಸಮರಸದೊಳಿರ್ದೆನಾದಡೆ ಕಡೆಯಿಲ್ಲದ ನರಕವೆಂಬ ಶ್ರುತಿ ಗುರುಸ್ವಾನುಭಾವದಿಂದರಿದು ನೂಂಕಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸಪ್ರಸಾದಿಯಾಗಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಚ್ಚಭಕ್ತನ ಭಾವಕ್ಕೆ ಗುರುಲಿಂಗಜಂಗಮವು ಬಂದ ಬರವು- ವೃದ್ಧಂಗೆ ಯೌವ್ವನ, ಮೂರ್ಖಂಗೆ ವಿದ್ಯೆ, ಸುಖಿಗೆ ಆಯುಷ್ಯ, ಯಾಚಕಂಗರ್ಥ, ಮರಣವನೈದುವಂಗೆ ಮರುಜೀವಣಿ ಬಂದಂತೆ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಬ್ಥಿನ್ನವಾದ ಕಾರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರಿಯಲಿಲ್ಲದ ಅರಿವಿಂಗೆ ಬರಸೆಳೆದು ಕೊಟ್ಟನೊಂದು ಲಕ್ಷವನು. ಹಿರಿಯ ಮಾರ್ಗದಲ್ಲಿ ನಿಂದು ಹಗಲಿರುಳು ವ್ಯಾಪಾರ ನಡೆವಲ್ಲಿ, ಸುಂಕಿಗರೈತಂದು ನೋಡಲು ಕಾಡದ ಮುನ್ನ ಲೆಕ್ಕವ ಕೊಟ್ಟು ಕೌಲು ಕೊಂಡಲ್ಲಿ ಮೂಲದ್ರವ್ಯ ಮುಳುಗಿತ್ತು. ಹೇಳಲಿಲ್ಲ ಕೇಳಲಿಲ್ಲ, ಗುರುನಿರಂಜನ ಚನ್ನಬಸವಲಿಂಗದಲ್ಲಿ ಗಂಭೀರ ನಿಮ್ಮ ಮಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೊಂಡು ಕೊಟ್ಟವರೊಡವೆಯ ಬಂಡಿಗಿಟ್ಟು ಪ್ರಕೃತಿಸಂಯುಕ್ತನಾಗಿ ಮಾಯಾಮೋಹ ವಿಷಯಸುಖ ತಲೆಗೇರಿ, ತಾ ನಿತ್ಯನೆಂದರಿಯದೆ ಅನಿತ್ಯವನುಂಡು, ಅತ್ತಿತ್ತ ಬೀಳುವ ಅನುಚಿತವಾದ ಮನುಜರು ನಿಮ್ಮ ನಂಟುಗಂಟಿನ ಕೂಟವನವರೆತ್ತಬಲ್ಲರು ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸಾನಂದಸುಖಿಬಲ್ಲನಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗತಿಮತಿಯೊಳೊಡವೆರೆದ ಪರಮಾನಂದ ಶರಣ ಪುತ್ರ ಮಿತ್ರ ಕಳತ್ರಾದಿಗಳನರಿಯ ನೋಡಾ. ಜಾತಿ ಗೋತ್ರ ಕುಲ ಆಶ್ರಮ ನಾಮ ವರ್ಣಂಗಳಿಲ್ಲದೆ ಭಕ್ತಾಂಗನೆ ಮುಕ್ತಾಂಗನೆಯ ನೆರೆದು ಯುಕ್ತಿಯನಳಿದುಳಿದು ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನು ತಾನಾದ ಭಾವಶೂನ್ಯನ ಏನೆಂದುಪಮಿಸಬಹುದು ಹೇಳಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ನವಭಕ್ತಿರಸವಕೊಂಡು ಶಿವಪ್ರಸಾದವನಿತ್ತ ಬಳಿಕ ಆ ಪ್ರಸಾದವನೊಂದೆರಡು ಮೂರಾರು ಮತ್ತೆ ಮುಖಮುಖವರಿದು ವೇದ್ಥಿಸಿದಲ್ಲಿ ಕಿರಿಕುಳವಲ್ಲುಂಟೆ ? ಬರಿಕುಳವಿಲ್ಲುಂಟೆ ? ಕುಳಂಗಳ ನಿಲಿಸಿ ಕೂರ್ಪರೊಳು ಬೆರೆದು ಕೂಡಬಾರದು. ಅದು ಕಾರಣ ಸೂತ್ರದ ಸುಳುಹು ಕಳಚಲಾಗದು ಕನಸಿನಲ್ಲಿ. ಕಾರಣಮೂರ್ತಿಯ ಕಲ್ಪಿತಕ್ಕೆ ಇದೇ ಕುರುಹು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿತ್ತವನಡಗಿಸಿ ಬಂದವರು ಭಕ್ತೈಕ್ಯಪದಸ್ಥರಹರೆ ? ಬುದ್ಭಿಯನಡಗಿಸಿಬಂದವರು ಮಹೇಶ್ವರೈಕ್ಯಪದಸ್ಥರಹರೆ ? ಅಹಂತೆಯನಡಗಿಸಿ ಬಂದವರು ಪ್ರಸಾದಿಯೈಕ್ಯಪದಸ್ಥರಹರೆ ? ಮನವನಡಗಿಸಿ ಬಂದವರು ಪ್ರಾಣಲಿಂಗಿಯೈಕ್ಯಪದಸ್ಥರಹರೆ ? ಜ್ಞಾನವನಡಗಿಸಿ ಬಂದವರು ಶರಣೈಕ್ಯಪದಸ್ಥರಹರೆ ? ಭಾವವನಡಗಿಸಿ ಬಂದವರು ನಿಜೈಕ್ಯಪದಸ್ಥರಹರೆ ? ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಎನ್ನ ನಡೆಯಲ್ಲಿ ಶರಣೆಂಬ ಭಾವದ ಪರಿಮಳದೊಳಡಗಿರ್ದೆ ಕಾಣಾ. ಅಯ್ಯಾ, ಎನ್ನ ನುಡಿಯಲ್ಲಿ ಶರಣೆಂಬ ಭಾವದ ಪರಿಮಳದೊಳು ಮುಳುಗಿರ್ದೆ ಕಾಣಾ. ಅಯ್ಯಾ, ಎನ್ನ ಕೊಡುಕೊಳ್ಳೆಯಲ್ಲಿ ಶರಣೆಂಬ ಭಾವದ ಪರಿಮಳದೊಳು ಎರಕವಾಗಿರ್ದೆ ಕಾಣಾ. ಅಯ್ಯಾ, ಎನ್ನ ಸಕಲಸುಖದುಃಖಾದಿ ಮತ್ತೆಲ್ಲಾದರೆಯೂ ಶರಣೆಂಬ ಭಾವದ ಸುವಾಸನೆಯೊಳು ಸಮರಸವಾಗಿರ್ದೆ ಕಾಣಾ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಕಲ ದ್ವಂದ್ವವಾಸನೆಗೆ ಮಾರುತನ ಬಲವೇ ತೋರಿಕೆಯಯ್ಯಾ. ಮಾರುತ ಮಾರಾರಿಯಾದಲ್ಲಿ ತೋರಲಿಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಮುಖದಿಂದೊಗೆದ ನಿರವಯಾನಂದ ಪ್ರಸಾದಮೂರ್ತಿಗೆ ಪರಿಯಿಂದೆಸೆವ ತನು ಮನ ಭಾವಾದಿ ಸಚ್ಚಿತ್ಪದಾರ್ಥವನು ಸಂಚಲವಿಲ್ಲದೆ ಸಾವಧಾನಿಯಾಗಿ, ಭಿನ್ನವಳಿದರ್ಪಿಸಿಯಾನಂದಿಸಬಲ್ಲಾತನೆ ಪ್ರಸಾದಿಯಯ್ಯಾ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಶಿವನಾಮಾಮೃತವೆಂಬ ಪಂಚಾಕ್ಷರವನು ಅವ್ಯಕ್ತಮುಖದಿಂದೆ ಸ್ವೀಕರಿಸಿದೆನಾಗಿ, ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ತೋರುತಿರ್ಪುದು. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ತೋರುತಿರ್ಪುದು. ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ತೋರುತಿರ್ಪುದು. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ತೋರುತಿರ್ಪುದು. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ತೋರುತಿರ್ಪುದು. ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ತೋರುತಿರ್ಪುದು. ಎನ್ನ ಬ್ರಹ್ಮಸ್ಥಾನದಲ್ಲಿ ನಿಷ್ಕಲಲಿಂಗವಾಗಿ ತೋರುತಿರ್ಪುದು. ಎನ್ನ ಶಿಖಾಗ್ರದಲ್ಲಿ ನಿಶ್ಶೂನ್ಯಲಿಂಗವಾಗಿ ತೋರುತಿರ್ಪುದು. ಎನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ತೋರುತಿರ್ಪುದು. ಎನ್ನ ಸರ್ವಾಂಗದಲ್ಲಿ ತೋರಿ ತನ್ನಂತೆ ಮಾಡಿಕೊಂಡಿರ್ಪುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನುಪಮಲಿಂಗದಂಗ ಶರಣಂಗೆ ಅನುಸರಣೆಯೇನೂ ಇಲ್ಲವಯ್ಯ. ಅವಿರಳ ಕ್ರಿಯೆಯಲ್ಲಿ ಜಡಮಿಶ್ರವಿರಹಿತನಾಗಿ ಕಡುಗಲಿವೀರಪ್ರಸಾದಿಯಯ್ಯಾ. ವಿಪರೀತ ಜ್ಞಾನವಳಿದು ಸುಜ್ಞಾನಸಮೇತ ಸಾರಾಯ ಸಂಗಸುಖಿಯಯ್ಯಾ. ಅಭಿನ್ನ ಪ್ರಸಾದಿ ತನ್ನ ಅಪ್ರತಿಮಾಚಾರದಲ್ಲಿ ದ್ವೈತಾದ್ವೈತಚರಿಯ ಸುಳಿಯಲೆಸೆದರ್ಪಿತ ಅಸಮಘನಮಹಿಮನಯ್ಯಾ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಗಮ್ಯಪ್ರಸಾದಿಯಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗ ಮನ ಪ್ರಾಣ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ಗುಣವರ್ಗ ಊರ್ಮಿ ಭೂತೇಂದ್ರಿಯ ಕರಣವಿಷಯಾದಿ ಸಕಲನಿಃಕಲವೆಲ್ಲ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ತನುತ್ರಯ ಮಲತ್ರಯ ಈಷಣತ್ರಯ ಜೀವತ್ರಯ ಅವಸ್ಥಾತ್ರಯವೆಂಬ ಪಂಚಾದಶ ಮಾಯಾಪಟಲಾದಿ ತಾಮಸವೆಲ್ಲ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ಕಂಡೆ ಕಾಣೆ ಬೇಕು ಬೇಡ ನಾನು ನೀನೆಂಬ ದ್ವಂದ್ವಕರ್ಮದ ಕತ್ತಲೆ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ಇಂತಿವೆಲ್ಲ ಕಂಡ ಕಾಣಿಕೆ ನಿಶ್ಚಯವಾದಲ್ಲಿ ನಿಜ ನಿರ್ವಾಣದ ನಿಲವು ನೀನೆಂಬೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುಖದುಃಖವನುಂಡು ಕೊಡುವರು ಸಕಲಸಂಪನ್ನರು. ಸುಖದುಃಖವ ಕೊಟ್ಟು ಕೊಂಬುವರು ಸಕಲನಿಃಕಲರು. ಸುಖದುಃಖಸಹಿತ ಸುಖಿಸುವರು ಪ್ರಸಾದಿಗಳು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->