ಅಥವಾ

ಒಟ್ಟು 109 ಕಡೆಗಳಲ್ಲಿ , 30 ವಚನಕಾರರು , 97 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚವರ್ಣದ ನಗರದಲ್ಲಿ, ಕಾಲು ತಲೆಗಳಿಲ್ಲದ ದೊರೆಗಳು. ಕಣ್ಣು ಕೈಗಳಿಲ್ಲದ ಕಾರಭಾರಿಗಳು. ಗೌಡ, ಶ್ಯಾನಭೋಗರಿಂದುತ್ಪತ್ಯ, ಪರಿಚಾರಕರಿಂದ ಬಂಧನ. ಇಂತಿವರೆಲ್ಲರಿಗೆ ಒಡತಿ ಮೂರುಮುಖದ ಕುಂಪಣಿ. ಪರದೇಶಕ್ಕೈದಬೇಕಾದರೆ ಪಂಚವರ್ಣದ ಸಂಚಾರವ ಕೆಡಿಸಿ, ಕಾಲು, ತಲೆ ದೊರೆಗೆ ಬಂದಲ್ಲದೆ, ಕಣ್ಣು, ಕೈ ಕಾರಭಾರಿಗೆ ಬಂದಲ್ಲದೆ, ಗೌಡ, ಶ್ಯಾನಭೋಗ, ಪರಿಚಾರಕರ ಕೊಂದಲ್ಲದೆ, ಮೂರುಮುಖದ ಕುಂಪಣಿಯ ತಲೆಹೊಡೆದಲ್ಲದೆ ಮುನ್ನಿನ ಬಟ್ಟೆಯನರಿಯಬಾರದು. ಅರಿಯದಕಾರಣ ಅಸುಲಿಂಗಸಂಬಂಧಿಗಳಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಊರ ಬಾರಿಕನ ಬಾಗಿಲಲ್ಲಿ ತಲೆ ಕೆಳಗಾಗಿ ಕಾಲು ಮೇಲಾಗಿ ಚರಿಸ್ಯಾಡುವ ಮೃಗವ ಎಡಪಾದ ಮುಂದಿಟ್ಟು, ಬಲಪಾದ ಹಿಂದಿಟ್ಟು, ವೀರಮಂಡಿಯ ಹೂಡಿ, ಒಳಬಾಗಿಲೊಳಗೆ ಕೂತು ಒಂದೇ ಬಾಣದೊಳಗೆ ಹತಮಾಡಿ ನೀರು ಬೆಂಕಿಯಿಲ್ಲದೆ ಪಾಕವ ಮಾಡಿ, ಬಾಲಹನುಮಗರ್ಪಿಸಿ ಕಾಯಕವ ಮಾಡುವೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಮವಿಲ್ಲದ ಸ್ತ್ರೀಗೆ ನಪುಂಸಕನೆಂಬ ಪುರುಷನು. ಹುಟ್ಟಬಂಜಿಗೆ ಗಂಡಸ್ತನಯಿಲ್ಲದ ಗಂಡನು. ಇಬ್ಬರ ಸಂಗದಿಂದ ಅಂಗವಿಲ್ಲದೊಂದು ಉರಿಮಾರಿ ಶಿಶು ಹುಟ್ಟಿತ್ತು. ಆ ಶಿಶುವು ತಾಮಸಪುರವೆಂಬ ರಾಜನ ಕಣ್ಣು ಕಳದು ಮಂತ್ರಿಯ ತಲೆ ಚಂಡಾಡಿ, ಆನೆ, ಕುದುರಿ, ನಾಯಿಗಳ ಕೊಂದು, ರಥ ಮುರಿದು, ಬಾರಿಕ ತಳವಾರಕುಲವ ಸವರಿ, ಸರ್ವಮಾರ್ಬಲವೆಲ್ಲ ಹೊಡೆದು ತಾಮಸಪುರವೆಂಬ ಪಟ್ಟಣವ ಸುಟ್ಟು, ಬೂದಿಯ ಧರಿಸಿ ಮಾತಾಪಿತರುಗಳ ಹತ ಮಾಡಿ ಕಾಶಿ ವಿಶ್ವನಾಥನ ಚರಣಕ್ಕೆರಗಿ ಸತ್ತು ಕಾಯಕವ ಮಾಡುತಿರ್ದಿತ್ತು ಆ ಶಿಶುವು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಬರದ ಪಕ್ಷಿಗೆ ಕಾಲಾರು, ತಲೆ ಮೂರು, ಬಾಲೆರಡು, ಕಣ್ಣೊಂದು, ಕೈ ಆರಾಗಿ, ನಡೆದರೆ ಹೆಜ್ಜೆಯಿಲ್ಲ, ನುಡಿದರೆ ಶಬ್ದವಿಲ್ಲ. ಅನ್ನ ಉದಕವನೊಲ್ಲದೆ ಅಗ್ನಿಯ ಸೇವಿಸುವದು. ಆ ಮೃಗವ ಕಣ್ಣಿಲ್ಲದೆ ನೋಡಿ, ಕಾಲಿಲ್ಲದೆ ನಡೆದು, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ನುಂಗಿ ಬೇಟೆಯನಾಡುವೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಚಂದ್ರಮನೊಳಗಣ ಎರಳೆಯ ನುಂಗಿದ ರಾಹುವಿನ ನೋಟವು, ಅಂದಂದಿಗೆ ಬಂದು ಕಾಡಿತ್ತು ನೋಡಾ. ಒಂದರ ತಲೆ, ಒಂದರ ಬಸುರು_ಅಂದಂದಿಗೆ ಬಂದು ಕಾಡಿತ್ತು ನೋಡಾ. ನಂದಿ ನಂದಿಯ ನುಂಗಿ ಬಂದುದು ಮಹೀತಳಕ್ಕಾಗಿ, ಇಂದು, ರವಿಗಡಣವ ನಾನೇನೆಂಬೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಕಣ್ಣು ಇಲ್ಲದವ ಕಂಡನಯ್ಯ ಒಂದು ಲಿಂಗವ. ಆ ಲಿಂಗಕ್ಕೆ ತಲೆ ಒಂದು, ಮುಖ ಮೂರು, ಆರು ಹಸ್ತ, ಮೂವತ್ತಾರು ಪಾದಂಗಳು. ಐವತ್ತೆರಡು ಎಸಳಿನ ಶಿವಾಲಯದೊಳಗೆ ಪೂಜೆಗೊಂಬ ಲಿಂಗವನು ಏಕೋಮನೋಹರನೆಂಬ ಪೂಜಾರಿಯು ಕಂಡು ನವರತ್ನ ತೊಂಡಲಂಗಳ ಕಟ್ಟಿ ಆ ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನವಖಂಡಮಂಡಲದೊಳಗೊಂದು ಅದ್ಭುತವಾದ ಪಟ್ಟಣವಿಪ್ಪುದು. ಆ ಪಟ್ಟಣಕ್ಕೆ ಮೂರಾರು ಕೊತ್ತಲ, ಎರಡೆಂಟು ಬುರುಜು, ಸಪ್ತ ಅಗಳತ, ಎಂಟೊಂದು ದರವಾಜ, ಉಭಯ ಕವಾಟ, ಷಡ್ವಿಧನಾಯಕರು, ಐವರು ತಳವಾರರು, ಮೂರುಮಂದಿ ಹುದ್ದೇದಾರರು, ನಾಲ್ಕುಮಂದಿ ಕರಣಿಕರು, ತಲೆಯಿಲ್ಲದ ಮಂತ್ರಿ, ಕಣ್ಣಿಲ್ಲದ ರಾಜನಾಗಿಹ, ಮೂರಾರು ಕೆಡಿಸಿ, ಎರಡೆಂಟು ಹಿಟ್ಟಗುಟ್ಟಿ, ಸಪ್ತ ಎಂಟೊಂದ ಮುಚ್ಚಿ, ಎರಡು ಕಿತ್ತು, ಆರು ಆಯಿದು ಹರಿಗಡಿದು, ಮೂರುನಾಲ್ಕು ಮುರಿಗಡಿದು, ಮಂತ್ರಿಗೆ ತಲೆ ರಾಜನಿಗೆ ಕಣ್ಣು ಬಂದಲ್ಲದೆ, ಆ ಪಟ್ಟಣ ಆರಿಗೂ ಸೌಖ್ಯವೇ? ಸೌಖ್ಯವಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತಲೆ ಇಲ್ಲದ ತಲೆಯಾತಂಗೆ ಕರುಳಿಲ್ಲದ ಒಡಲು ನೋಡಾ! ಆ ನಲ್ಲಂಗೆ ಅಂಗವಿಲ್ಲದ ಅಂಗನೆ ಸತಿಯಾಗಿಪ್ಪಳು! ಇವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ, ನಾ ಹುಟ್ಟಿ, ತಾಯ ಕೈವಿಡಿದು ಸಂಗವ ಮಾಡಿ ನಿರ್ದೋಷಿಯಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಿಚ್ಚಿಲ್ಲದುರಿವ [ದೇವನು] ಮತ್ತೊಬ್ಬರಿಗಂಜುವನಲ್ಲ. ಕೌತುಕದ ದೇವ ಕಾಣಿಭೋ ನಮ್ಮ ಶಿವನು. ಬಿರುದರ ಬಿಂಕದ ಬಿಂಕವ ಮುರಿದು, ಉಬ್ಬಿದವರ ಗರ್ಭವ ಕಲಂಕುವ, ಬಲ್ಲಿದನ ತಲೆ ಕೈಯಲ್ಲಿ . ಮೆಲ್ಲಿದನ ನಯನ ಚರಣದಲ್ಲಿ. ಅಯ್ಯಯ್ಯಾ, ಮಝ ಭಾಪುರೆ ರಾವುರಾವು ಸೊಡ್ಡಳಾ.
--------------
ಸೊಡ್ಡಳ ಬಾಚರಸ
ತ್ರಿಭುವನದಗ್ರದಲ್ಲಿ ಮೂವತ್ತಾರು ಲೋಕ. ಅದರ ಮಧ್ಯದಲ್ಲಿ ಇಪ್ಪತ್ತೈದು ಮಹಾಮೇರುವೆ. ಹದಿನಾರು ವರ್ತನದ ಕೊಂಡಿಗರು. ಲಘುವೆಂಬ ತಾರುಗದ, ಅದಕ್ಕೆ ಅಗುಳಿ ದಿವಾರಾತ್ರಿಯೆಂಬವೆರಡು. ಅಗುಳಿಯ ಸನ್ನರ್ಧವಾಗಿ ಬಲಿದವನ ನೋಡಾ. ಅವನ ನಖದ ಕೊನೆಯಲ್ಲಿ ಲಕ್ಷ ಅಲಕ್ಷವೆಂಬ ಭೇದ. ಆ ಭೇದವೆಂಬ, ಜರನಿರ್ಜರವೆಂಬ, ಅಹುದಲ್ಲವೆಂಬ, ಆಗುಚೇಗೆಯೆಂಬ, ಶಂಕೆ ಸಂತೋಷವೆಂಬ, ಕಾಂಕ್ಷೆ ನಿಃಕಾಂಕ್ಷೆಯೆಂಬ, ಜೀವ ಪರಮವೆಂಬ ಇಂತೀ ದ್ವಂದ್ವಂಗಳೆಲ್ಲ ದ್ವಾರಸಂಚಾರಕ್ಕವಧಿಯಾದವು. ಇದಕ್ಕಿಂದ ಮುನ್ನವೆ ಭುವನ ಕೆಟ್ಟಿತ್ತು. ಕೋಟೆ ಕೋಳು ಹೋಯಿತ್ತು, ಹಿರಿಯರಸು ಸಿಕ್ಕಿದ, ಪ್ರಧಾನನ ತಲೆ ಹೋಯಿತ್ತು, ತಳವಾರನ ಕಣ್ಣು ಕಳೆಯಿತ್ತು. ಎಕ್ಕಟಿಗನ ಮಕ್ಕಳೆಲ್ಲರೂ ನಷ್ಟಸಂತಾನವಾದರು. ಸೃಷ್ಟಿಯೊಳಗೆಲ್ಲ ರಣಮಯವಾಯಿತ್ತು. ರಣಮಧ್ಯದಲ್ಲೊಂದು ವೃಕ್ಷವ ಕಂಡೆ, ಸತ್ತವನಿರ್ದ, ಇರ್ದವಸತ್ತ. ಇವರಿಬ್ಬರ ಮಧ್ಯದಲ್ಲೊಂದು ವೃಕ್ಷವ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಲಬರ ನುಂಗಿದ ಹಾವಿಂಗೆ ತಲೆ ಬಾಲವಿಲ್ಲ ನೋಡಾ; ಕೊಲುವುದು ತ್ರೈಜಗವೆಲ್ಲವ, ತನಗೆ ಬೇರೆ ಪ್ರಳಯವಿಲ್ಲ. ನಾಕಡಿಯನೈದೂದು, ಲೋಕದ ಕಡೆಯನೆ ಕಾಬುದು, ಸೂಕ್ಷ್ಮಪಥದಲ್ಲಿ ನಡೆವುದು, ತನಗೆ ಬೇರೆ ಒಡಲಿಲ್ಲ. ಅಹಮೆಂಬ ಗಾರುಡಿಗನ ನುಂಗಿತ್ತು ಕೂಡಲಸಂಗನ ಶರಣರಲ್ಲದುಳಿದವರ.
--------------
ಬಸವಣ್ಣ
ಅಕ್ಕನಪುರುಷನ ಬಲದಿಂದ ಬ್ರಹ್ಮನ ತಲೆ ಹೊಡೆದು, ತಂಗಿಯಪುರುಷನ ಬಲದಿಂದ ವಿಷ್ಣುವಿನ ಹಸ್ತವ ಕಡಿದು, ತಾಯಿಯ ಗಂಡನ ಬಲದಿಂದ ರುದ್ರನ ಎದೆಯ ಹೊಡೆದು ಇರ್ಪಾತನೆ ಚಿಲ್ಲಿಂಗಸಂಬಂಧಿ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಏಳು ಸುತ್ತಿನ ಐದು ವರ್ಣದ ಪಟ್ಟಣಕ್ಕೆ ಒಂಭತ್ತು ಬಾಗಿಲು. ಹೊರವೊಳಯದಲೆರಡಗುಸೆಯ ಬಾಗಿಲು. ಮಂದೇಳು ದ್ವಾರ, ತುಂಬಿದ ವ್ಯಾಪಾರ, ಸರಕ ಕೊಳುಕೊಡೆಗಳುಂಟು. ಅದೆಂತೆಂದೊಡೆ : ಎರಡು ಬಾಗಿಲಲ್ಲಿ ತಳವಾರನ ವಾಸನೆಯನರಿದು ಮಾರುವದು. ಮತ್ತೆರಡು ಬಾಗಿಲಲ್ಲಿ ರಮ್ಯವಾದಖಿಳಜೀನಸು ಮಾರುವದು ಕೊತವಾಲನ ಮುಂದಿಟ್ಟು. ಮತ್ತೆರಡು ಬಾಗಿಲಲ್ಲಿ ಊರಹಿರಿಯನ ಮಾತಕೇಳಿ ಸಕಲವ ಮಾರುವದು. ಮತ್ತೊಂದು ಬಾಗಿಲಲ್ಲಿ ಶೆಟ್ಟಿ ಮುಂತಾಗಿ ಬೇಕಾದಂತೆ ಮಾರುವದು. ಇಂತು ಹೊರಗೊಳಗಿರ್ದ ಜನರು ಲೆಕ್ಕವಿಲ್ಲದೆ ಪಟ್ಟಣಶೆಟ್ಟಿಯ ಮಾತಿನೊಳಗಿರ್ದರು. ಎಂಟು ಕೊತ್ತಲ ಸುತ್ತಿ ವ್ಯಾಪಾರ ಮಾಡುವಲ್ಲಿ ಕಂಟಕ ಬಂದುದನೇನೆಂಬೆನಯ್ಯಾ! ಅಂಗೈಯೊಳರಳಿದ ಬೆಂಕಿ ಪಟುವಾಗಿ ಅಂಗಳದಲ್ಲಿ ಉರಿಯಿತ್ತು. ಪಟ್ಟಣ ಬೆಂದು, ಮಳಿಗೆಗಳು ಸುಟ್ಟು ಜನರೆಲ್ಲ ಉರಿದು ಕೊತ್ತಲೆಂಟಕ್ಕಾವರಿಸಲು ಶೆಟ್ಟಿ ಮಧ್ಯಬುರುಜನೇರಲು, ಬೆಂದ ತಲೆ ಉರಿದು ನಿಂದು ನೋಡಲು ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧವದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಮಾತು ನಿಮಗೆ ಅನ್ಯವೆ? ರಂಭದ ಸಂಚಾರ ರಂಭಕ್ಕೆ ಕೇಡು. ಕುರುಂಬದ ಸಂಚಾರ ರಂಭದ ಕೇಡು. ಎನ್ನಿಂದ ನಿಮ್ಮಿಂದ ಬಂದ ಕೊರತೆ ಪ್ರಮಥ ಸಮೂಹಕ್ಕೆ ಭಂಗ. ಹುಲಿಯ ಪ್ರಾಣ ಕಳ್ಳನ ತಲೆ ಹಗೆಯ ಮರಣವೆಲ್ಲಕ್ಕೂ ಲೇಸು. ಇಂದು ಎನಗೆ ಅಗೂಢವಿಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಣ್ಣಿನ ಮನೆಯಲ್ಲಿ ಗನ್ನದ ಗರತಿ ಹಡದುಂಬುತ್ತೈದಾಳೆ. ಅವಳ ಕೂಟವ ಕೂಡುವುದಕ್ಕೆ, ತಲೆ ಕೆಳಗಾಗಿ, ಕಾಲು ಮೇಲಾಗಿ, ಕೈ ಅಪ್ರದಕ್ಷಿಣವಾಗಿ ತಕ್ಕೈಸಿಕೊಂಡು, ಹಿಂದುಮುಂದಾಗಿ ಮುತ್ತನಿಕ್ಕೆ, ಶಕ್ತಿಯ ಸುಖ ಲೇಸಾಯಿತ್ತು. ಸದಾಶಿವಮೂರ್ತಿಲಿಂಗ ಬಚ್ಚಬಯಲು.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->