ಅಥವಾ

ಒಟ್ಟು 205 ಕಡೆಗಳಲ್ಲಿ , 45 ವಚನಕಾರರು , 146 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಟಾ ಎನಗೆ - ನಿನಗೆ ನೆರೆಗೆ - ಹೊರಗೆ ಹೇಳುವನಲ್ಲ ಕಂಡಯ್ಯ! ಅಯ್ಯ! ಹಾ! ಅಯ್ಯ! ಹೇಳಿದರಲ್ಲದೆ ತೋರಿದಲ್ಲದೆ ಕಾಬವನಲ್ಲ ಕಂಡಯ್ಯ. ಹಾ! ಅಯ್ಯ! ಎನ್ನ ಕಾಣದ ಕೇಳದ ಪ್ರಾಣಿಗೆ ಅನುಮಿಷನಾಗಿರಿಸೆನ್ನ ಕಪಿಲಸಿದ್ಧಮಲ್ಲಿನಾಥಯ್ಯ
--------------
ಸಿದ್ಧರಾಮೇಶ್ವರ
ಎನ್ನ ಮನದಲ್ಲಿ ನೀ ಹುಟ್ಟಿ, ನಿನ್ನ ಕರದಲ್ಲಿ ನಾ ಹುಟ್ಟಿ, ಉಭಯರು ಕೂಡಲಿಕ್ಕೆ ಎನಗೊಂದು, ನಿನಗೆ ಮೂರು ಮಕ್ಕಳು ಹುಟ್ಟಿ, ನಾ ಬರುವಾಗ ನಿನ್ನ ಮಕ್ಕಳ ಮೂವರನು ಒಬ್ಬನ ಮತ್ರ್ಯಲೋಕದಲ್ಲಿಟ್ಟೆ, ಒಬ್ಬನ ಪಾತಾಳಲೋಕದಲ್ಲಿಟ್ಟೆ, ಒಬ್ಬನ ಸ್ವರ್ಗಲೋಕದಲ್ಲಿಟ್ಟೆ. ಇಂತೀ ಮೂವರನು ಮೂರುಲೋಕದಲ್ಲಿಟ್ಟು ನಾ ನನ್ನ ಮಗನ ಸಂಗವ ಮಾಡಿ, ಸತ್ತು ಮುತ್ತೈದೆಯಾಗಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪರಿಭವಕ್ಕೆ ಬಪ್ಪ ಪರಮಾಣು ನೀನಲ್ಲ. ಕುರುಹಿಂಗೆ ಬಂದ ಸೀಮ ನೀನಲ್ಲ. ಏಕಯ್ಯ ನಿನಗೆ ಪ್ರಾಪಂಚಿಕವು? ಆನಂದಮಧ್ಯದ ಅಪರವಾಗಿ, ಅಪರಮಧ್ಯದಲಿ ಪೂರ್ವನಾಗಿ ಆ ಪೂರ್ವಕ್ಕೆ ಒಡೆಯ ನೀನೆಯಾಗಿಪ್ಪೆ. ಆರಯ್ಯಾ ಬಲ್ಲರು ನಿನ್ನ ಪರಿಯ? ಶರಣಸತಿ ಲಿಂಗಪತಿಯಾಗಿದ್ದವರು ಬಲ್ಲರು. ಏಕಂಗನಿಷ್ಠಾಪರರು ಅವರು ಬಲ್ಲರು. ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ ಏಕಯ್ಯಾ, ಓಡಿದೆಯೆಂದು ನಂಬುಗೆಗೊಡುವಂತೆ ಕರಂಗೊಟ್ಟರು.
--------------
ಸಿದ್ಧರಾಮೇಶ್ವರ
ನಾನು ನಿನಗೆ ತಂಗಿಯ ಕೊಟ್ಟು ನೀನೆನೆಗೆ ಮೈದುನನಾದೆ. ನಾನು ನಿನಗೆ ಅಕ್ಕನ ಕೊಟ್ಟು ನೀನೆನಗೆ ಭಾವನಾದೆ. ನಾನು ನೀನೂ ಏನಹರೆಂಬುದ ತಿಳಿದು ಅಣ್ಣನಿಗೆ ತಂಗಿ, ಅಕ್ಕನಿಗೆ ತಮ್ಮ ಇವರಿಬ್ಬರೂ ದೃಷ್ಟದಲ್ಲಿ ಒಡಹುಟ್ಟಿದರಾದ ಮತ್ತೆ ತಂಗಿಯ ಮಗಳು ಸೊಸೆಯಾಗಿ, ಅಕ್ಕನ ಮಗ ಅಳಿಯನಾದ ಚಿತ್ರವ ನೋಡಾ! ಒಂದು ಯೋನಿಯಲ್ಲಿ ಬಂದುದನರಿಯದೆ, ನಿನ್ನ ಒಡಹುಟ್ಟಿದ [ವ]ಳಿಗೆ ನೀ ಗಂಡನಾಗಿ, ಎನಗೆ ನೀ ಭಾವನಾದ ಪರಿಯ ನೋಡಿ ನಾಚಿಸಬಂದೆ. ಕಲಕೇತನಲ್ಲಿ ಕೊಳುಕೊಡೆ ಬೇಡ ಮೇಖಲೇಶ್ವರಲಿಂಗದ ಹೊಲಬ ತಿಳಿಯಬಲ್ಲಡೆ.
--------------
ಕಲಕೇತಯ್ಯ
ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ? ಮುನ್ನ [ನೀ] ಬಾಯ ಮುಚ್ಚಿಕೊಂಡಿರ್ದೆ ಎಂಬುದ, ನಾ ನಿನ್ನ ಕಣ್ಣಿಂದ ಕಂಡೆನು, ಎನ್ನ ನಾನರಿದ ಬಳಿಕ ಇನ್ನು ನೀ ಬಾಯಿದೆರೆದು ಮಾತನಾಡಿದಡೆ ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ. ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ, ಸಂಬಂಧ ಒಂದೇ ನೋಡಾ! ಗುಹೇಶ್ವರಾ ನಿನ್ನ ಬೆಡಗಿನ ಬಿನ್ನಾಣವ ನಾನರಿದೆ ನೋಡಾ.
--------------
ಅಲ್ಲಮಪ್ರಭುದೇವರು
ಅಯ್ಯಾ, ಎನಗೆ ಬರುವ ಗಂಧದ್ರವ್ಯ, ನಿನ್ನನುಭಾವಿಸಿ ಬಂದ ಬರವಯ್ಯಾ. ಎನಗೆ ಬರುವ ರಸದ್ರವ್ಯ ನಿನ್ನ ಸುಖಿಸಿ ಬಂದ ಬರವಯ್ಯಾ. ಎನಗೆ ಬರುವ ರೂಪುದ್ರವ್ಯ ನಿನ್ನ ಪರಿಣಾಮಿಸಿ ಬಂದ ಬರವಯ್ಯಾ. ಎನಗೆ ಬರುವ ಸ್ಪರ್ಶದ್ರವ್ಯ ನಿನ್ನ ಆನಂದಿಸಿ ಬಂದ ಬರವಯ್ಯಾ. ಎನಗೆ ಬರುವ ಶಬ್ದದ್ರವ್ಯ ನಿನಗೆ ಸೊಗಸನಿಟ್ಟು ಬಂದ ಬರವಯ್ಯಾ. ಎನಗೆ ಬರುವ ತೃಪ್ತಿದ್ರವ್ಯ ನಿನ್ನ ತೃಪ್ತಿಯಪಡಿಸಿ ಬಂದ ಬರವಯ್ಯಾ. ಎನಗೆ ಬರುವ ಸಕಲವು ಗುರುನಿರಂಜನ ಚನ್ನಬಸವಲಿಂಗ ಸಹಿತವಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿನಗೆ ಮಜ್ಜನಕ್ಕೆರೆವುದಕ್ಕೆ ಮೂಚುಟಾಗಿ ಶ್ರೀಗುರುವಿನ ಪಾದೋದಕವ ಕೊಂಬೆ, ನಿನಗಾರೋಗಣೆಯ ಮಾಡಿಸುವುದಕ್ಕೆ ಮೂಚುಟಾಗಿ ಶ್ರೀಗುರುವಿನ ಪ್ರಸಾದವ ಕೊಂಬೆ. ಎನಗೆಯೂ ನಿನಗೆಯೂ ಸಹಭೋಜನ, ಎನಗೆಯೂ ನಿನಗೆಯೂ ಏಕಾರ್ಥಶಯನ, ನೀನೆನಗೆ ಚಿಕ್ಕ ತಮ್ಮ, ಕೂಡಲಸಂಗಮದೇವಾ.
--------------
ಬಸವಣ್ಣ
ಸಕಲ ಲೋಕಾದಿಲೋಕಂಗಳು ಉದಯ, ಮಧ್ಯಾಹ್ನ, ಸಾಯಂಕಾಲ ಪರಿಯಂತರವು ಒಡಲೋಪಾಧಿಯ ಚಿಂತೆಯಿಂದ ತಾಪತ್ರಯಾಗ್ನಿಯಲ್ಲಿ ಬೇಯುತ್ತಿರ್ಪರು ನೋಡಾ. ಅದೆಂತೆಂದೊಡೆ: ಉದಯಕಾಲಕ್ಕೆ ಹೋರಾಟದ ಚಿಂತೆ, ಮಧ್ಯಾಹ್ನಕಾಲಕ್ಕೆ ಅಶನದ ಚಿಂತೆ, ಸಾಯಂಕಾಲಕ್ಕೆ ವ್ಯಸನದ ಚಿಂತೆ, ಇಂತೀ ತ್ರಿವಿಧ ವ್ಯಸನದಲ್ಲಿ ಮನಮಗ್ನವಾದ ಪ್ರಾಣಿಗಳಿಗೆ ಶಿವಜ್ಞಾನವೆಲ್ಲಿಯದಯ್ಯಾ? ಇಂದಿನ ಚಿಂತೆಯ ಮಾಡುವರೆಲ್ಲ ಹಂದಿಗಳು. ನಾಳಿನ ಚಿಂತೆಯ ಮಾಡುವರೆಲ್ಲ ನಾಯಿಗಳು. ಅದೆಂತೆಂದೊಡೆ: ನೀ ಹುಟ್ಟದ ಮುನ್ನವೆ ತಾಯಿಗರ್ಭದಲ್ಲಿ ನವಮಾಸ ಪರಿಯಂತರವು ನಿನಗೆ ಆಹಾರವ ಕೊಟ್ಟವರಾರು ಹೇಳಾ ಮರುಳೆ? ಅಖಂಡತಂಡ ಶಿಲೆಯೊಳಗಿನ ಮಂಡೂಕಕ್ಕೆ ಆಹಾರವ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಕಟ್ಟಿಗಿಯೊಳಗಿನ ಭೃಂಗಕ್ಕೆ ಮಲೆಗಳ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಇರುವೆ ಮೊದಲು ಆನೆ ಕಡೆ ಎಂಬತ್ತು ನಾಲ್ಕುಲಕ್ಷ ಜೀವರಾಶಿಯ ಗರ್ಭದಲ್ಲಿ ಹುಟ್ಟಿ ಹುಟ್ಟಿ ಬರುವಲ್ಲಿ ನಿನಗೆ ಆಹಾರವ ಕೊಟ್ಟು ರಕ್ಷಣವ ಮಾಡಿದವರಾರು ಹೇಳಾ ಮರುಳೆ? ಇಂತೀ ಸರ್ವಲೋಕಾದಿಲೋಕಂಗಳಿಗೆ ಶಿವನೇ ಕರ್ತನೆಂದು ತಿಳಿದು ನೋಡಾ ಮರುಳೆ! ಇಂತಪ್ಪ ಯುಕ್ತಿವಿಚಾರದ ಸುಜ್ಞಾನವಿಲ್ಲದೆ ಬರಿಯ ಒಡಲ ಚಿಂತೆಯಲ್ಲಿ ಹೊತ್ತುಗಳೆದು ಸತ್ತು ಹೋಗುವ ಹೇಸಿ ಮೂಳರ ಕಂಡು ನಾಚಿದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ||4
--------------
ಕಾಡಸಿದ್ಧೇಶ್ವರ
ಅಂಗೈಯ ಲಿಂಗವ ಕಂಗಳು ತುಂಬಿ ನೋಡಿ ಮನ ಹಾರೈಸಿದಲ್ಲಿ ಅಂಗೇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾದವು. ಅಂಜದಿರು ಮನವೇ, ಲಿಂಗವು ನಿನಗೆ ದೂರನೆಂದು. ಮನೋಮಧ್ಯದೊಳಿಪ್ಪ, ಅಂಗದ ಕಂಗಳಲಿಪ್ಪ, ಭಾವದ ಪ್ರಾಣದಲ್ಲಿಪ್ಪ. ಅಂಗಪ್ರಾಣಭಾವ ಸರ್ವಾಂಗಲಿಂಗವಾದ ಬಳಿಕ, ಲಿಂಗಮಧ್ಯಪ್ರಾಣ, ಪ್ರಾಣಮಧ್ಯಲಿಂಗ. ಇದು ಕಾರಣ ಉತ್ಪತ್ತಿಸ್ಥಿತಿಲಯವುಂಟೆಂದು ಅಂಜದಿರು. ಅಂಜಿಕೆ ಇಲ್ಲ, ಅಳುಕಿಲ್ಲ, ಬಂದುದೇ ಲಿಂಗದ ಲೀಲೆ, ಇದ್ದುದೇ ಲಿಂಗದಾನಂದ, ಭಾವಲೀಯವಾದುದೇ ಲಿಂಗನಿರವಯವು. ಇದು ಸತ್ಯ, ಶಿವ ಬಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗಂಡ ನೀನು ಹೆಂಡತಿಯಾನು ಮತ್ತೊಬ್ಬರಿಲ್ಲಯ್ಯಾ. ನಿನ್ನ ಬೆಂಬಳಿಯಲಾನು ಮೆಚ್ಚಿಬಂದೆ. ಕಂಡಕಂಡವರೆಲ್ಲ ಬಲುಹಿಂದ ಕೈಹಿಡಿದರೆ, ಗಂಡಾ, ನಿನಗೆ ಸೈರಣೆಯೆಂತಾಯಿತ್ತು ಹೇಳಾ ? ಚೆನ್ನಮಲ್ಲಿಕಾರ್ಜುನಯ್ಯಾ, ನಿನ್ನ ತೋಳ ಮೇಲಣವಳನನ್ಯರೆಳದೊಯ್ಯುವರೆ ನೋಡುತಿಹುದುಚಿತವೆ ಕರುಣಿಗಳರಸಾ ?
--------------
ಅಕ್ಕಮಹಾದೇವಿ
ಆದಿಯನಾದಿಯಿಂದತ್ತತ್ತ ಮುನ್ನ ಲಿಂಗಜಂಗಮವೆಂಬುದನಾರು ಬಲ್ಲವರಿಲ್ಲವೆಂದು, ಇದರ ಸಕೀಲಸಂಬಂಧವ ತಿಳುಹಲೆಂದು, ಮತ್ರ್ಯಕ್ಕೆ ಕಳುಹಿದನು ಶಶಿಧರನು. ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನಲ್ಲದೆ ಮತ್ತಾರನೂ ಕಾಣೆ. ಶಿಷ್ಯಂಗೆ ಗುರು ಉಪದೇಶವ ಮಾಡಬೇಕಲ್ಲದೆ, ಗುರುವಿಂಗೆ ಶಿಷ್ಯನನುಗ್ರಹವ ಮಾಡಿದಠಾವುಂಟೆ ? ಎನ್ನ ಅರಿವಿನ ಆದಿಗೆ ನೀನೆ ಕರ್ತನೆಂದು ನಾನಿರುತಿರಲು ನಿನಗೆ ನಾನಿನ್ನು ಅನುಗ್ರಹವ ಮಾಡುವ ಪರಿ ಎಂತಯ್ಯಾ ? ಕೂಡಲಸಂಗಮದೇವರ ಸ್ವರೂಪವೆಂದು ನಿನ್ನ ಕಂಡಿಪ್ಪೆನು ಕಾಣಾ ಚೆನ್ನಬಸವಣ್ಣಾ.
--------------
ಬಸವಣ್ಣ
ತನುತ್ರಯದಲ್ಲಿ ಘನಂಗ ಪ್ರಾಣಸಂಬಂಧಿಯಾದವರ ತೋರಯ್ಯಾ, ನಿಮ್ಮ ಧರ್ಮ. ಅವಯವಂಗಳೆ ನಿಮ್ಮ ವದನಂಗಳಾಗಿ, ಅರ್ಪಿತವಲ್ಲದ ಅನರ್ಪಿತವ ಕೊಳ್ಳರಾಗಿ, ಐದಾರು ಪ್ರಸಾದದಲ್ಲಿ ಅನುಮಾನವಿಲ್ಲದೆ ನಿತ್ಯರಪ್ಪವರ, ಈರೈದು ಪಾದೋದಕದಲ್ಲಿ ವಿರಳವಿಲ್ಲದೆ ವಿಮಲರಪ್ಪವರ, ನೋಡಿ ಕಂಡೆಹೆನೆಂದಡೆ, ಎನಗೆ ಕಾಣಬಾರದು. ಅವರಿಚ್ಛಾಮಾತ್ರದಲ್ಲಿ ನೀನಿಪ್ಪೆಯಾದಂತೆ, ನಿನಗೆ ಕಾಣಬಹುದು. ಅಲ್ಲದ್ದಡೆ ನಿನಗೆಯೂ ಅಭೇದ್ಯ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ದೇವಾ, ನಿನ್ನ ಭಕ್ತನು ಶ್ರೋತ್ರಮುಖದಲ್ಲಿ ಶಬ್ದ ಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ಶಬ್ದಪ್ರಸಾದವ ಕೊಡುವೆ. ತನ್ನ ತ್ವಕ್ಕಿನ ಮುಖದಲ್ಲಿ ಸ್ಪರ್ಶನಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ಸ್ಪರ್ಶನ ಪ್ರಸಾದವ ಕೊಡುವೆ. ನೇತ್ರಮುಖದಲ್ಲಿ ರೂಪುಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ರೂಪುಪ್ರಸಾದವ ಕೊಡುವೆ. ಜಿಹ್ವೆಯ ಮುಖದಲ್ಲಿ ರಸಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ರುಚಿಪ್ರಸಾದವ ಕೊಡುವೆ. ಘ್ರಾಣಮುಖದಲ್ಲಿ ಗಂಧಪದಾರ್ಥವ ನಿನಗೆ ಕೊಡುವನು. ಆತಂಗೆ ನೀನು ಗಂಧಪ್ರಸಾದವ ಕೊಡುವೆ. ಇಂತು ಭಕ್ತ ನಿನಗೆ ಸರ್ವಪದಾರ್ಥವ ಕೊಟ್ಟರೆ ನೀನು ಪ್ರಸಾದವ ಕೊಡುವೆ. ``ಭಕ್ತಕಾಯ ಮಮಕಾಯಃ' ವೆಂಬ ನಿನ್ನ ವಚನ ದಿಟವಾಗೆ, ನೀನು ಪ್ರಸಾದಿಯನರಿದು ಸಲಹುತ್ತಿಪ್ಪೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಎಸೆಯದಿರು ಎಸೆಯದಿರು ಕಾಮಾ, ನಿನ್ನ ಬಾಣ ಹುಸಿಯಲೇಕೊ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ_ಇವು ಸಾಲದೆ ನಿನಗೆ ? ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ, ಮರಳಿ ಸುಡಲುಂಟೆ ಮರುಳು ಕಾಮಾ ?
--------------
ಅಲ್ಲಮಪ್ರಭುದೇವರು
ಮೊಮ್ಮಗನಾಗಿ ಮೊಮ್ಮಗಳಾಗಿ ಮೊಮ್ಮಗನಾಗಿ ನಿಂದೆ ನೋಡವ್ವಾ, ಮಗನ ಕರುಣದಿಂದೆ. ಮಗನಾಗಿ ಮಗನಾದೆ ನೋಡವ್ವಾ, ಮಗನ ಕರುಣದಿಂದೆ. ಮಗನು ಹೋಗಿ ಮಹಾಲಿಂಗನಾದ ನೋಡವ್ವಾ ನಿನಗೆ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->