ಅಥವಾ

ಒಟ್ಟು 160 ಕಡೆಗಳಲ್ಲಿ , 37 ವಚನಕಾರರು , 111 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ. ವಿಚಾರಿಸುವನ್ನಕ್ಕರ ನೀನಾರೆಂಬುದನೆತ್ತ ಬಲ್ಲೆ ? ಮರುಳೆ ವಾಙ್ಮನೋತೀತವಾದ ಘನವು ವಿಚಾರಕ್ಕೆ ನಿಲುಕುವುದೆ ? ಗುಹೇಶ್ವರನೆಂಬ ಲಿಂಗವು ತನ್ನ ತಿಳಿದು ನೋಡಿಹೆನೆಂಬವರ[ನು] ವಿಚಾರವೆಂಬ ಬಲೆಯಲ್ಲಿ ಕೆಡಹಿದನು.
--------------
ಅಲ್ಲಮಪ್ರಭುದೇವರು
ನಿಮ್ಮಿಂದಲಾದೆ ನಾನು. ಎನಗೆ ದೇಹೇಂದ್ರಿಯ ಮನಃಪ್ರಾಣಾದಿಗಳಾದುವು. ಎನ್ನ ದೇಹೇಂದ್ರಿಯ ಮನಃಪ್ರಾಣಾದಿಗಳ ಕರ್ತ ನೀನೆ. ಅವರ ಆಗುಚೇಗೆ ಸುಖದುಃಖ ನಿನ್ನವು. ಒಳಗೂ ನೀನೆ, ಹೊರಗೂ ನೀನೆ. ನಾನೆಂಬುದು ನಡುವಣ ಭ್ರಾಂತು. ಎಲ್ಲ ವಿನೋದ ನೀನೆ ಬಲ್ಲೆ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಅನುನೇಹದ ಅನುರಚಿಯ ತೋರಲಿಕಾರಿಗೆಯೂ ಬಾರದು. ಅದು ಸಕ್ಕರೆಯಂತುಟಲ್ಲ, ಅದು ತವರಾಜದಂತುಟಲ್ಲ. ಭಾವದ ಸುಖ ಭವಗೆಡಿಸಿತ್ತು. ಮಹಾಲಿಂಗ ಕಲ್ಲೇಶ್ವರದೇವಾ, ನೀನೆ ಬಲ್ಲೆ.
--------------
ಹಾವಿನಹಾಳ ಕಲ್ಲಯ್ಯ
ವಾರಿ ಬಲಿದು ವಾರಿಕಲ್ಲಾದಂತೆ ಶೂನ್ಯವೆ ಸ್ವಯಂಭುವಾಯಿತ್ತು. ಆ ಸ್ವಯಂಭುಲಿಂಗದಿಂದಾಯಿತ್ತು ಮೂರ್ತಿವತ್ತು, ಆ ಮೂರ್ತಿಯಿಂದಾಯಿತ್ತು ವಿಶ್ವೋತ್ಪತ್ತಿ, ಆ ವಿಶ್ವೋತ್ಪತ್ತಿಯಿಂದಾಯಿತ್ತು ಸಂಸಾರ, ಆ ಸಂಸಾರದಿಂದಾಯಿತ್ತು ಮರವೆ. ಆ ಮರವೆಯೆಂಬ ಮಹಾಮಾಯೆ ವಿಶ್ವವ ಮುಸುಕಿದಲ್ಲಿ ನಾ ಬಲ್ಲೆ, ಬಲ್ಲಿದರೆಂಬ ಅರುಹಿರಿಯರೆಲ್ಲಾ ತಾಮಸಕ್ಕೊಳಗಾಗಿ ಮೀನಕೇತನನ ಬಲೆಗೆ ಸಿಲುಕಿ ಮಾಯೆಯ ಬಾಯ ತುತ್ತಾದರಲ್ಲಾ ! ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು, ಅಲ್ಲಿಂದ ಆಚೆ ಮಧ್ಯಭೂಮಿ. ಮೂರು ನೆಲದ ಭೂಮಿಯ ಆರೈದು ಬೆಳೆದೆಹೆನೆಂದಡೆ, ಇದಾರ ವಶವೂ ಅಲ್ಲ, ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
--------------
ಒಕ್ಕಲಿಗ ಮುದ್ದಣ್ಣ
ನೀರ ನೆಳಲಿನಲ್ಲಿ ಒಂದು ಆರವೆ ಹುಟ್ಟಿತ್ತು: ಅದು ಬೇರಿಲ್ಲದೆ, ಆ ಮರನ ಮೀರುವ ಕೊಂಬಿಲ್ಲದೆ, ಕೊಂಬ ಮೀರುವ ಎಲೆಯಿಲ್ಲದೆ, ಎಲೆಯ ಮೀರುವ ಹೂವಿಲ್ಲದೆ, ಹೂವ ಮೀರುವ ಕಾಯಿಯಿಲ್ಲದೆ, ಇದು ಚೆನ್ನಾಗಿ ತಿಳಿದು ನೋಡಿ. ಆ ನೀರು ಬೇರ ನುಂಗಿ, ಬೇರು ವೃಕ್ಷವ ನುಂಗಿ, ಪರ್ಣ ಕುಸುಮವ ಕೊಂಡು, ಕುಸುಮ ಕಾಯವ ಕೊಂಡು, ಕಾಯಿ ಹಣ್ಣನು ಮೆದ್ದಲ್ಲಿ ಭಾವವಳಿಯಿತ್ತು. ಇದನಾರು ಬಲ್ಲರು ? ನಿಃಕಳಂಕ ಮಲ್ಲಿಕಾರ್ಜುನಾ, ನೀನೆ ಬಲ್ಲೆ.
--------------
ಮೋಳಿಗೆ ಮಾರಯ್ಯ
ಒಡವೆ ಭಂಡಾರ ಕಡವರ ದ್ರವ್ಯವ ಬಡ್ಡಿ ಬೆವಹಾರಕ್ಕೆ ಕೊಟ್ಟು ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ. ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ, ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು ಅವರ ಮಗನ ಬೇಡುವಂತಲ್ಲ. ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ. ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ ಬಾಣಸವ ಮಾಡುವಲ್ಲಿ, ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಇಂತೀ ತ್ರಿವಿಧವೂ ಹೊರಗಣವು. ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ. ಇನ್ನು ನಾನಿದೇನೆ, ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ, ನೀನು ಜಂಗಮರೂಪಾಗಿ ಬಂದು ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು, ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು, ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು, ನವಖಂಡವ ಮಾಡಿ ಕಡಿಕಡಿದು ನೋಡು, ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು. ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ ಲಿಂಗಾರ್ಚನೆಯ ಮಾಡುವುದ ಬಿಡೆ, ಜಂಗಮದಾಸೋಹವ ಮಾಡುವುದ ಬಿಡೆ, ಪಾದತೀರ್ಥಪ್ರಸಾದವ ಕೊಂಬುದ ಬಿಡೆ. ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲಸಂಗಮದೇವಾ. ಬಡ್ಡಿ ಬೆವಹಾರಕ್ಕೆ ಕೊಟ್ಟು ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ. ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ, ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ. ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ, ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು ಎನ್ನ ಮುಂದೆ ಸಂಗವ ಮಾಡುತ್ತಿರಲು ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು ಅವರ ಮಗನ ಬೇಡುವಂತಲ್ಲ. ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ. ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ ಬಾಣಸವ ಮಾಡುವಲ್ಲಿ, ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ. ಇಂತೀ ತ್ರಿವಿಧವೂ ಹೊರಗಣವು. ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ. ಇನ್ನು ನಾನಿದೇನೆ, ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ, ನೀನು ಜಂಗಮರೂಪಾಗಿ ಬಂದು ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು, ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು, ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು, ನವಖಂಡವ ಮಾಡಿ ಕಡಿಕಡಿದು ನೋಡು, ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು. ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ ಲಿಂಗಾರ್ಚನೆಯ ಮಾಡುವುದ ಬಿಡೆ, ಜಂಗಮದಾಸೋಹವ ಮಾಡುವುದ ಬಿಡೆ, ಪಾದತೀರ್ಥಪ್ರಸಾದವ ಕೊಂಬುದ ಬಿಡೆ. ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ, ಕೂಡಲಸಂಗಮದೇವಾ.
--------------
ಬಸವಣ್ಣ
ಅಯ್ಯಾ, ನೀನು ತತ್ತ್ವಂಗಳ ಮರೆಗೊಂಡಿರ್ಪನ್ನಕ್ಕ, ನಾನು ಕಾಯವ ಮರೆಗೊಂಡಿರ್ದೆನಯ್ಯಾ. ಅಯ್ಯಾ, ನೀನು ಶಕ್ತಿಯ ಮರೆಗೊಂಡಿರ್ಪನ್ನಕ್ಕ, ನಾನು ಆಸೆಯ ಮರೆಯಲ್ಲಿರ್ದೆನಯ್ಯಾ. ನಿನ್ನ ಬೆಡಗು ಬಿನ್ನಾಣವ ನಾ ಬಲ್ಲೆ, ನನ್ನ ಬೆಡಗು ಬಿನ್ನಾಣವ ನೀ ಬಲ್ಲೆ. ಮರೆಗೆ ಮರೆಯನೊಡ್ಡಿ ಜಾರಿ ಹೋದೆಯಲ್ಲಾ. ಈ ಬಿನ್ನಾಣದ ಮರೆಯನು ತೆರೆದು ದರ್ಶನಂ ಮಾಡಿ, ನಿನ್ನೊಳಗೆ ಎನ್ನನಿರಿಸಿ, ಎನ್ನೊಳಗೆ ನಿನ್ನನಿರಿಸಿ, ಪ್ರಾಣ ಪ್ರಾಣವ ಸಂಯೋಗವ ಮಾಡಿದೆನು ಶ್ರೀಗುರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಯದಿಂದ ಕಾಬುದು ಕುರುಹಿನ ಮೂರ್ತಿಯ. ಆತ್ಮದಿಂದ ಕಾಬುದು ಅರಿವಿನ ಮೂರ್ತಿಯ. ಅರಿವ ಕುರುಹ ಮರೆದಲ್ಲಿ ಪರಮ ದಾಸೋಹದಿಂದ ಪರಶಿವಮೂರ್ತಿಯ ಕಾಣಬಂದಿತ್ತು. ಚನ್ನಬಸವಣ್ಣಪ್ರಿಯ ಚಂದೇಶ್ವರ ನೀನೆ ಬಲ್ಲೆ.
--------------
ನುಲಿಯ ಚಂದಯ್ಯ
ನೇತ್ರದಲ್ಲಿ ಷಡುವರ್ಣಸಂಬಂಧವಹ ಪವಿತ್ರ ಅಪವಿತ್ರವ ನೋಡಿ ಅರಿದು ಮಹಾಪವಿತ್ರವ ಮಾಡಿ ನೇತ್ರದ ಕೈಯಲೂ ಲಿಂಗನೇತ್ರಕ್ಕೆ ಅರ್ಪಿಸುವಲ್ಲಿ ನೇತ್ರೋದಕವು. ಶ್ರೋತ್ರದಲ್ಲು ಶಬ್ದ ಕುಶಬ್ದವನರಿದು ಮಹಾಶಬ್ದದಲ್ಲು ವರ್ತಿಸಿ ಶ್ರೋತ್ರದ ಕೈಯಲೂ ಲಿಂಗಶ್ರೋತ್ರಕ್ಕೆ ಅರ್ಪಿಸುವಲ್ಲಿ ಶ್ರೋತ್ರೋದಕವು. ಘ್ರಾಣದಿಂ ಸುಗಂಧ ದುರ್ಗಂಧವನರಿದು ಮಹಾಗಂಧದಲೂ ವರ್ತಿಸಿ ಘ್ರಾಣದ ಕೈಯಲೂ ಲಿಂಗಘ್ರಾಣಕ್ಕೆ ಅರ್ಪಿಸುವಲ್ಲಿ ಘ್ರಾಣೋದಕವು. ಜಿಹ್ವೆಯಿಂ ಮಧುರ ಆಮ್ಲ ಲವಣ ತಿಕ್ತ ಕಟು ಕಷಾಯವೆಂಬ ಷಡುರುಚಿಯನರಿದು ಮಹಾರುಚಿಯನರಿದು ರುಚಿಮಾಡಿ ಲಿಂಗಜಿಹ್ವೆಗೆ ಜಿಹ್ವೆಯ ಕೈಯಲೂ ಅರ್ಪಿಸುವಲ್ಲಿ ಜಿಹ್ವೋದಕವು. ಪರುಷನದಿಂ ಶೀತೋಷ್ಣವನರಿದು ಇಚ್ಚೆಯ ಕಾಲವನರಿದು ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡುವಲ್ಲಿ ಸ್ಪರ್ಶನೋದಕವು. ಸದ್ಭಕ್ತಿಯಿಂ ಪಾದಾರ್ಚನೆಯ ಮಾಡುವಲ್ಲಿ ಪಾದೋದಕವು. ಮಜ್ಜನಕ್ಕೆರೆವಲ್ಲಿ ಮಜ್ಜನೋದಕವು. ಆರೋಗಣೆಯಲ್ಲಿ ಆರೋಗಿಸಲಿತ್ತುದು ಅರ್ಪಿತೋದಕವು. ಆರೋಗಣೆಯಲ್ಲಿ ಮೇಲೆ ಹಸ್ತಕ್ಕೆರೆದುದು ಹಸ್ತೋದಕವು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಒಂದೆಂದರಿದು ಸರ್ವಕ್ರಿಯಾಕರ್ಮಕ್ಕೆ ಲಿಂಗಸಂಬಂಧವ ಮಾಡಿ ಪ್ರಯೋಗಿಸುವುದು ಲಿಂಗೋದಕವು. ಈ ದಶೋದಕ ಕ್ರೀಯನರಿದು ವರ್ತಿಸುವುದು ಆಗಮಾಚಾರ ಕ್ರಿಯಾಸಂಪತ್ತು. ಅಯ್ವತೊಂದಕ್ಷರದಿಂ ಪುಟ್ಟಿದಂತಹ ವೇದಾದಿವಿದ್ಯಂಗಳು ಮೊದಲಾದ ಸರ್ವಕ್ರೀ ಕುಶಲಶಬ್ದಂಗಳನೂ ಶ್ರೋತ್ರದಿಂ ಲಿಂಗಶ್ರೋತ್ರಕ್ಕೆ ಅರ್ಪಿತವ ಮಾಡಿ ಶಬ್ದಭೋಗವ ಭೋಗಿಸುವರಲ್ಲಿ ಶಬ್ದಪ್ರಸಾದ. ಮೃದು ಕಠಿಣ ಶೀತೋಷ್ಣಂಗಳನೂ ಅಷ್ಟತನು ನೆಳಲು ಬಿಸಿಲು ಮೊದಲಾದ ವಸ್ತುಗಳನೂ ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡಿ ಪರುಷನ ಭೋಗವ ಭೋಗಿಸುವಲ್ಲಿ ಪರುಷನ ಪ್ರಸಾದ. ಶ್ವೇತ ಪೀತ ಹರೀತ ಮಾಂಜಿಷ* ಕೃಷ್ಣ ಕಪೋತ ಷಡುವರ್ಣ ಮೊದಲಾದ ಚಿತ್ರವಿಚಿತ್ರವರ್ಣಂಗಳನೆಲ್ಲವನೂ ನೇತ್ರದಿಂ ಲಿಂಗನೇತ್ರಕ್ಕೆ ಅರ್ಪಿಸಿ ನಿರೀಕ್ಷಿಸಿ ಅರ್ಪಿಸುವಲ್ಲಿ ರೂಪಪ್ರಸಾದ. ಸಫಲ ಪಾಕಾದಿಗಳನೂ ಸರ್ವದ್ರವ್ಯಂಗಳನೂ ಷಡುರುಚಿ ಭಿನ್ನರುಚಿ ಮೂವತ್ತಾರನರಿದು ಜಿಹ್ವೆಯ ಕೈಯಲೂ ಲಿಂಗಜಿಹ್ವೆಗೆ ಅರ್ಪಿಸಲು ರಸಪ್ರಸಾದ. ಪುಷ್ಪಧೂಪ ನಾನಾ ಸರ್ವಸುಗಂಧವಸ್ತುಗಳನೂ ಘ್ರಾಣದಿಂ ಲಿಂಗಘ್ರಾಣಕ್ಕೆ ಅರ್ಪಿಸುವುದು ಸುಗಂಧಭೋಗವ ಭೋಗಿಸುವುದು ಗಂಧಪ್ರಸಾದ. ಈ ಪಂಚೇಂದ್ರಿಯದ ಕೈಯಲೂ ಪಂಚವಿಷಯಂಗಳ ಗುಣಂಗಳವಗುಣಂಗಳರಿದು ಅವಧಾನದಿಂದಪ್ರ್ಪಿಸಿ ಸರ್ವಭೋಗವ ಭೋಗಿಸುವಲ್ಲಿ ಸನ್ನಹಿತಪ್ರಸಾದ. ಗುರುವಿಗೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಶುದ್ಧಪ್ರಸಾದ. ಲಿಂಗಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಸಿದ್ಧಪ್ರಸಾದ. ಜಂಗಮಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಪ್ರಸಿದ್ಧಪ್ರಸಾದ. ಗುರು ಲಿಂಗ ಜಂಗಮಕ್ಕೆ ಸರ್ವಪದಾರ್ಥ ಸರ್ವಭೋಗಂಗಳ ಭೋಗಿಸಲಿತ್ತು ಶೇಷಪ್ರಸಾದವ ಭೋಗಿಸುವುದು ಪದಾರ್ಥಪ್ರಸಾದ. ಕಾಮಾದಿಸರ್ವಭೋಗಂಗಳನೂ ಮನ ಬುದ್ಧಿ ಚಿತ್ತ ಅಹಂಕಾರವ ಏಕೀಭವಿಸಿ ಭಾವಲಿಂಗಕ್ಕೆ ಅರ್ಪಿಸಿ ಭೋಗಿಸುವುದು ಭಾವಪ್ರಸಾದ. ಪ್ರಾಣಲಿಂಗಕ್ಕೆ ಕಾಯವೆಂಬ ಭಕ್ತನು ಭಿನ್ನದೋರದೆ ಅವಿನಾಭಾವದಿಂ ಸರ್ವಕ್ರಿಯೆ ಲಿಂಗಕ್ರೀಯಾಗಿ ಏಕಾದಶಮುಖವರಿದು ಅರ್ಪಿಸಿ ಲಿಂಗಭೋಗೋಪಭೋಗಿಯಾಗಿಹುದೆ ಏಕಾದಶಪ್ರಸಾದ. ಇಂತೀ ಏಕಾದಶಪ್ರಸಾದವರಿದು ವರ್ತಿಸುವುದು ಸಹಜಶಿವಾಗಮಾಚಾರಕ್ರಿಯಾಸಂಪತ್ತು. ಇವೆಲ್ಲವನು ಮೀರಿ ಅತ್ಯಶಿಷ್ಟದ್ಧಶಾಂಗುಲಲಿಂಗಕ್ಕೆ ಕಾಯವಾಗಿ ಆ ಲಿಂಗವೇ ಪ್ರಾಣವಾಗಿಪ್ಪ ಶರಣನು ವೇದ ಶಾಸ್ತ್ರಾಗಮ ಪುರಾಣಕ್ಕೆ, ದೇವ ದಾನವ ಮಾನವರಿಗೆ ಅತ್ಯತಿಷ್ಟದ್ಧಶಾಂಗುಲವೆನಿಸಿ `ಲಿಂಗಮಧ್ಯೇ ಶರಣಃ ಶರಣಮಧ್ಯೇ ಲಿಂಗಂ' ಎಂದೆನಿಸಿಪ್ಪ ಅವಿನಾಭಾವಸರ್ವಾಂಗಲಿಂಗಕ್ರೀಯ ನೀನೇ ಬಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು, ಸದಾಚಾರಿಗಳೆಲ್ಲಾ ಬನ್ನಿರಿಂದು, ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ ದ್ರವ್ಯದ ಮುಖದಿಂದ ಸರ್ವರ ಕೂಡಿ ತಪ್ಪನೊಪ್ಪಗೊಳ್ಳಿಯೆಂದು ದಿಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು ಕೀಲಿಗೆ ದೇವಾಲಯವ ನೋಡುವವನಂತೆ, ಕಂಬಳಕ್ಕೆ ಅಮಂಗಲವ ತಿಂಬವನಂತೆ, ಇವನ ದಂದುಗವ ನೋಡಾ ? ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಕುಂಭದ ಮಳೆ ಹೊಯ್ಯಿತ್ತು. ಮೂರಂಗದ ನೇಗಿಲ ತರಿಯಬೇಕು. ಆರಂಗದ ಭೂಮಿಯಲ್ಲಿ ಅರಸಲಾಗಿ ಒಂದೆ ಮರ ಹುಟ್ಟಿತ್ತು. ಹುಟ್ಟುವಾಗ ಮರ ಮೂರು ಕವೆ, ಅಲ್ಲಿಂದತ್ತಾರು ಕವೆಯಾಯಿತ್ತು. ಆ ಆರರ ಮಧ್ಯದಲ್ಲಿ ಮೂವತ್ತಾರು ಕವೆಯಾಯಿತ್ತು. ಆ ಮೂವತ್ತಾರರ ಮಧ್ಯದಲ್ಲಿ ನೂರೊಂದು ಕೊಂಬೆ ಶಾಖೆಗೂಡಿತ್ತು. ಆ ಮರನನೇರಿ ಹಿಂದುಮುಂದಣ ಕೊಂಬೆ ಕಳೆದು ಕೊಡಲಿಯಾಡೋದಕ್ಕೆ ತೆರಪಮಾಡಿ, ನಡುವಣ ಕೊಂಬೆ ಕಡೆವುತ್ತಿರಲಾಗಿ, ಒಂದು ಹೊಯಿಲಿಗೆ ಇದರಂಗದ ತೊಪ್ಪೆ ಹರಿದು, ಉಭಯಕ್ಕೆ ದಿಂಡು ಹರಿದು, ತ್ರಿವಿಧಕ್ಕೆ ಗರ್ಭಗೆಚ್ಚು ಖಂಡಿತವಾಯಿತ್ತು. ಮರ ತಟ್ಟಾರಬೇಕೆಂದು ಇರಿಸಿ ಬಂದೆ, ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
--------------
ಒಕ್ಕಲಿಗ ಮುದ್ದಣ್ಣ
ನಾ ಬಲ್ಲೆ ತಾಬಲ್ಲೆನೆಂಬುವರೆಲ್ಲ ಅಲ್ಲ ಅಹುದೆಂಬ ಗೆಲ್ಲ ಸೋಲದ ಮಾತ ಕಲಿತು ಆಡುವರಲ್ಲದೆ ಅದನಾರು ಮೆಚ್ಚುವರು? ಕಾಲೂರಿ ಒಂದೆರಡು ಯೋಜನ ನಡೆಯಬಹುದಲ್ಲದೆ ತಲೆಯೂರಿ ನಡೆಯಬಹುದೆ? ನೆಲೆಯರಿಯದ ಮಾತ ಹಲವ ನುಡಿದಡೇನು ಫಲ? ನೆಲಯರಿದ ಮಾತೊಂದೆ ಸಾಲದೆ? ಹಲವು ದೇವರೆಂದು ಹೊಲಬುಗೆಟ್ಟು ನುಡಿವರು. ಕುಲಸ್ವಾಮಿ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಬ್ಬನೆ, ದೇವರೆಂದರಿದೆಡೆ ಸಾಲದೆ?
--------------
ಸ್ವತಂತ್ರ ಸಿದ್ಧಲಿಂಗ
ಬಾಣತಿ ರಕ್ಕಸಿಯಾದಡೆ ಮಕ್ಕಳ ಕಾಯುವರಿನ್ನಾರಯ್ಯಾ ? ಸೋಜಿಗದ ಮಾಯೆ ಸಟೆಯಪ್ಪ ಜಗವ ಪಿಡಿದಿರಲು ಆ ಜಗವನಾ ಮಾಯಾಹಸ್ತದಿಂ ತೊಲಗಿಸುವರಿನ್ನಾರಯ್ಯಾ ? ನಾ ಬಲ್ಲೆ, ನಾ ಹಿರಿಯನೆಂಬವರೆಲ್ಲರು ಮಾಯೆಯ ಅಣಲೊಳಗೆ ಸಿಕ್ಕಿದರು. ಹರಿಹರಬ್ರಹ್ಮಾದಿಗಳೆಲ್ಲರೂ ಮಾಯೆಯ ಕೈಯ ಶಿಶುವಾದರಯ್ಯಾ. ಸೌರಾಷ್ಟ್ರ ಸೋಮೇಶ್ವರಾ, ನಿನ್ನ ಮಾಯೆ ಅಖಿಳಕ್ಕೆ ತಾನರಸಾದಳಯ್ಯಾ.
--------------
ಆದಯ್ಯ
ಇಂದ್ರನಂತೆ ಮಾಡುವೆ, ಚಂದ್ರನಂತೆ ಮಾಡುವೆ, ಮಾಣಿಕ್ಯದ ಹೊಳಹಿನಂತೆ ಮಾಡುವೆನಯ್ಯಾ. ನೀ ನೋಡದಿರಯ್ಯಾ. ಮಾಡುವೆನು ಸೂರ್ಯನ ಪ್ರಭೆಯಂತೆ, ನೀ ನೋಡಿ ಮತ್ತಡಗುವ ಕೃತಕವ ನಾನು ಬಲ್ಲೆ. ಬೆಡಗು ನಿರಾಳ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->