ಅಥವಾ

ಒಟ್ಟು 58 ಕಡೆಗಳಲ್ಲಿ , 22 ವಚನಕಾರರು , 54 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯ ಉಭಯಭೇದವಾಗಿ, ಆತ್ಮನೇಕವಾಗಿ; ಕಾಯ ಭಕ್ತನಾಗಿ, ಪ್ರಾಣ ಜಂಗಮವಾಗಿ; ನಾ ಹಿಡಿದ ರೂಪು ಬಸವಣ್ಣನಾಗಿ; ಅರಿದರಿದು ಗುಹೇಶ್ವರಲಿಂಗವಾಗಿ ನೆನೆವುತ್ತಿದ್ದೆನು.
--------------
ಅಲ್ಲಮಪ್ರಭುದೇವರು
ಭಕ್ತನಾಗಿ ಮಲತ್ರಯಂಗಳೊಳಾಳುವುದು ಲೇಸು ಕಂಡೆಯಾ, ಮನವೆ; ಜಂಗಮವಾಗಿ ಮಲತ್ರಯಂಗಳಳಿವುದು ದುರ್ಲಭ ಕಂಡೆಯಾ, ಮನವೆ; ಭಕ್ತ ಮಹೇಶ ಪ್ರಸಾದಿಸ್ಥಲತ್ರಯಂಗಳ ಮೀರಿ, ಪ್ರಾಣಲಿಂಗಿಸ್ಥಲದಲ್ಲಿ ನಿಂದೆಯಲ್ಲಾ, ಮನವೆ. ಇನ್ನು ಮೈದೆಗೆದು ತಿರಿದುಂಡಡೆ, ಬೆನ್ನ ಬಾರನೆತ್ತುವ ನೋಡಾ, ಮನವೆ; ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಭೂಪಾಲನು.
--------------
ಸಿದ್ಧರಾಮೇಶ್ವರ
ಗಂಡ ಭಕ್ತನಾಗಿ, ಹೆಂಡತಿ ಭವಿಯಾದಡೆ ಉಂಡ ಊಟ ಇಬ್ಬರಿಗೂ ಸರಿಭಾಗ! ಸತ್ತ ನಾಯ ತಂದು ಅಟ್ಟದ ಮೇಲಿಳುಹಿ ಒಬ್ಬರೊಪ್ಪಚ್ಚಿಯ ಹಂಚಿಕೊಂಡು ತಿಂಬಂತೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಅತ್ತತ್ತಲಾದ ಅನುಪಮಲಿಂಗ ತನ್ನ ವಿನೋದಕ್ಕೆ ತಾನೇ ಶರಣನಾಗಿ ಜಂಗಮವಾಗಿ ಭಕ್ತನಾಗಿ ಲಿಂಗವಾಗಿ ಶಿಷ್ಯನಾಗಿ ಗುರುವಾಗಿ ಕ್ರಿಯಾಜ್ಞಾನ ಭಾವಾಚಾರವಿಡಿದು, ಪರಿಪೂರ್ಣಾಚಾರದೊಳು ನಿಂದು ವರ್ತಿಸುವ ಪರಮಾನಂದಸುಖಭೋಕ್ತನೆಂಬ ಭೇದವನರಿಯದೆ, ಭಿನ್ನವಿಟ್ಟು ನುಡಿವ ಮರುಳು ಕುನ್ನಿ ಮಾನವರ ಎನ್ನ ಗತಿಮತಿಯತ್ತ ತಾರದಿರಾ, ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸ್ಥಲವಿಡಿದಾಚರಿಸಬೇಕೆಂಬನ ಭಾಷೆ ಬಾಲಭಾಷೆ. ಭಕ್ತನಾಗಿ, ಭಕ್ತಸ್ಥಲವಾವರಿಸುವುದದು ಯೋಗ್ಯವಯ್ಯಾ. ಭಕ್ತನಾಗಿ, ಮಹೇಶಸ್ಥಲ ಅಳವಡಬಾರದೇನಯ್ಯಾ? ಭಕ್ತನಾಗಿ, ಮಹೇಶ ಪ್ರಸಾ ಪ್ರಾಣಂಗಿ ಶರಣ ಐಕ್ಯಸ್ಥಲ ಅಳವಡಬಾರದೇನಯ್ಯಾ? ಮನೆಯ್ಲದ್ದ ಲೆತ್ತಗಳು ಮನೆಯ ಮೀರಿ ಮೀರಿ ಹಾರಬಾರದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನಿರಿಂದ್ರಿಯನಾದ ಶಿವನು ತಾನೇ ದೇವದೇಹಿಕ ಭಕ್ತನಾಗಿ `ಅನ್ಯಪೂಜಾವಿನಿರ್ಮುಕ್ತೋ ಭಕ್ತೋ ಜಂಗಮಪೂಜಕಃ' ಅನ್ಯಪೂಜೆಯಂ ಬಿಟ್ಟು ಜಂಗಮಲಿಂಗವನೆ ಪೂಜಿಸುವಂಥ ಭಕ್ತ ಲಿಂಗೇಂದ್ರಿಯ ಮುಖದಿಂದವೇ ಸಕಲಭೋಗಂಗಳ ಭೋಗಿಸುವನು. ಅದೆಂತೆಂದಡೆ: ಜ್ಯೋತಿಯ ಮುಖದಲ್ಲಿ ರಜ್ಜು ತೈಲವನವಗ್ರಹಿಸುವಂತೆ, ಸಕಲದ್ರವ್ಯಂಗಳ ಅಗ್ನಿಯ ಮುಖದಲ್ಲಿ ನಿರ್ಜರರು ತೃಪ್ತಿಯನೆಯ್ದುವಂತೆ, ಸದ್ಬಕ್ತರ ಹೃದಯದಲ್ಲಿ ತೃಪ್ತಿಯನೆಯ್ದಿಪ್ಪನು ಶಿವನು. ಇದು ಕಾರಣ ಶಿವಭಕ್ತನಿರ್ದುದೆ ಅವಿಮುಕ್ತಕ್ಷೇತ್ರ. ಆತನ ಶಿರವೆ ಶ್ರೀಪರ್ವತ, ಭಾಳವೇ ಕೇತಾರ, ಭ್ರೂಮಧ್ಯವೇ ವಾರಣಾಸಿ, ನೇತ್ರವೇ ಪ್ರಯಾಗ, ಸರ್ವೇಂದ್ರಿಯಂಗಳೇ ಸರ್ವತೀರ್ಥಂಗಳು, ಪಾದವೇ ಅಷ್ಟಾಷಷಿ* ಕ್ಷೇತ್ರಂಗಳು, ಇಂತಪ್ಪ ಪವಿತ್ರಗಾತ್ರನ ಕಾಯವೇ ಕೈಲಾಸ. ಇಂತಪ್ಪ ಸದ್ಭಕ್ತನನೆನಗೆ ತೋರಿಸಿ ಬದುಕಿಸಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಲಿಂಗಲೀಲೆ ಹೇಳುವಡೆನಗಸಾಧ್ಯ ನೋಡಾ, ಅಯ್ಯಾ. ಭಕ್ತನ ಹಸ್ತದಲ್ಲಿ ಜಂಗಮವಾಗಿ ನೆಲೆಸಿದನಯ್ಯಾ ಲಿಂಗಮೂರ್ತಿ; ಜಂಗಮದ ಹಸ್ತದಲ್ಲಿ ಭಕ್ತನಾಗಿ ನೆಲೆಸಿದನಯ್ಯಾ ಲಿಂಗಮೂರ್ತಿ. ಜಂಗಮ ಪೂಜಿಸಿದ ಫಲ ಸಂಪದಾ ಮೋಕ್ಷ ಕೊಟ್ಟಿತ್ತು ಭಕ್ತಂಗೆ; ಭಕ್ತ ಪೂಜಿಸಿದ ಫಲ ಜ್ಞಾನಸಂಪದಾ ವೈರಾಗ್ಯ ಕೊಟ್ಟಿತ್ತು ಜಂಗಮಂಗೆ. ಇಂತಪ್ಪ ಲಿಂಗಮೂರ್ತಿಯ ನೋಡಿ ನೋಡಿ, ರೋಮಂಗಳೆಲ್ಲ ನಯನಂಗಳಾದವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮರೆದು ಮಾಡಿ ನಡೆವೆನಯ್ಯಾ ನಿಮ್ಮ ಶಿಷ್ಯನಾಗಿ ಬಂದುದಕ್ಕೆ. ಕಳೆದು ಮಾಡಿ ನಡೆವೆನಯ್ಯಾ ನಿಮ್ಮ ಭಕ್ತನಾಗಿ ಬಂದುದಕ್ಕೆ. ಕಡಿದು ಮಾಡಿ ನಡೆವೆನಯ್ಯಾ ನಿಮ್ಮ ಶರಣನಾಗಿ ಬಂದುದಕ್ಕೆ. ಇಂತು ಶಿಷ್ಯ ಭಕ್ತ ಶರಣನಾಗಿ ನಿಂದಲ್ಲಿ ನಿಮ್ಮ ಸಗುಣದ ಸೌಖ್ಯ. ನಿಲ್ಲುವರತ್ತಲ್ಲಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಈ ಲೋಕದೊಳಗೆ ಶೀಲವಂತರೆಂದು ಪಾದೋದಕ ಪ್ರಸಾದವ ಕೊಂಬರಯ್ಯ. ಬ್ರಹ್ಮನನಳಿದು ಭಕ್ತನಾಗಿ ಆಚಾರಲಿಂಗವ ನೆಲೆಯಂಗೊಂಡರೆ ಪಾದಪೂಜೆಯೆಂದೆಂಬೆನಯ್ಯ. ವಿಷ್ಣುವನಳಿದು ಮಹೇಶ್ವರನಾಗಿ ಗುರುಲಿಂಗವ ನೆಲೆಯಂಗೊಂಡರೆ ಪಾದೋದಕವೆಂದೆಂಬೆನಯ್ಯ. ರುದ್ರನನಳಿದು ಪ್ರಸಾದಿಯಾಗಿ ಶಿವಲಿಂಗವ ನೆಲೆಯಂಗೊಂಡರೆ ಮಹಾಪ್ರಸಾದಿಯೆಂದೆಂಬೆನಯ್ಯ. ಇಂತೀ ಪಾದೋದಕ ಪ್ರಸಾದವನರಿತು, ಆ ಪಾದೋದಕ ಪ್ರಸಾದವ ಕೊಳ್ಳಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿಯಲ್ಲಿಯು ನೀನೇ ದೇವನು ನಾನೇ ಭಕ್ತನಯ್ಯ ; ಅನಾದಿಯಲ್ಲಿಯು ನೀನೇ ದೇವನು ನಾನೇ ಭಕ್ತನಯ್ಯ ; ಆದಿಯನಾದಿಯಿಂದತ್ತಲು ನೀನೇ ದೇವನು ನಾನೇ ಭಕ್ತನಾಗಿ ನಿಮ್ಮೊಳಗೆ ಅಡಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸ್ಥಳ ಕುಳವನರಿಯಬೇಕೆಂಬರು, ಭಕ್ತನಾಗಿ ಮಾಹೇಶ್ವರನಾಗಬೇಕೆಂಬರು. ಮಾಹೇಶ್ವರನಾಗಿ ಪ್ರಸಾದಿಯಾಗಬೇಕೆಂಬರು. ಪ್ರಸಾದಿಯಾಗಿ ಪ್ರಾಣಲಿಂಗಿಯಾಗಬೇಕೆಂಬರು. ಪ್ರಾಣಲಿಂಗಿಯಾಗಿ ಶರಣಾಗಬೇಕೆಂಬರು. ಶರಣನಾಗಿ ಐಕ್ಯನಾಗಬೇಕೆಂಬರು. ಐಕ್ಯ ಏತರಿಂದ ಕೂಟ ? ನಾನರಿಯೆ. ಒಳಗಣ ಮಾತು, ಹೊರಹೊಮ್ಮಿಯಲ್ಲದೆ ಎನಗೆ ಅರಿಯಬಾರದು. ಎನಗೆ ಐಕ್ಯನಾಗಿ ಶರಣಾಗಬೇಕು, ಶರಣನಾಗಿ ಪ್ರಾಣಲಿಂಗಿಯಾಗಬೇಕು. ಪ್ರಾಣಲಿಂಗಿಯಾಗಿ ಪ್ರಸಾದಿಯಾಗಬೇಕು, ಪ್ರಸಾದಿಯಾಗಿ ಮಾಹೇಶ್ವರನಾಗಬೇಕು. ಮಾಹೇಶ್ವರನಾಗಿ ಭಕ್ತನಾಗಬೇಕು, ಭಕ್ತನಾಗಿ ಸಕಲಯುಕ್ತಿಯಾಗಬೇಕು. ಯುಕ್ತಿ ನಿಶ್ಚಯವಾದಲ್ಲಿಯೆ, ಐಕ್ಯಸ್ಥಲ ಒಳಹೊರಗಾಯಿತ್ತು. ಅಲೇಖ ಲೇಖವಾಯಿತ್ತು, ಎನಗೆ ಕಾಣಬಂದಿತ್ತು. ಅಲೇಖನಾದ ಶೂನ್ಯ ಶಿಲೆಯ ಹೊರಹೊಮ್ಮಿ ಕಂಡೆ ನಿನ್ನನ್ನು.
--------------
ವಚನಭಂಡಾರಿ ಶಾಂತರಸ
ಆದಿಯನರಿತು ಭಕ್ತನಾಗಿ, ಆಚಾರಲಿಂಗವ ನೆಲೆಗೊಂಡುದೆ ಸದ್ಭಕ್ತಿಯೆಂಬೆನಯ್ಯ. ಮಂತ್ರವನರಿತು ಮಹೇಶ್ವರನಾಗಿ, ಗುರುಲಿಂಗವ ನೆಲೆಯಂಗೊಂಡುದೆ ನೈಷಿ*ಕಭಕ್ತಿಯೆಂಬೆನಯ್ಯ. ಕ್ರೀಯವನರಿತು ಪ್ರಸಾದಿಯಾಗಿ, ಶಿವಲಿಂಗವ ನೆಲೆಯಂಗೊಂಡುದೆ ಸಾವಧಾನಭಕ್ತಿಯೆಂಬೆನಯ್ಯ. ಇಚ್ಫೆಯನರಿತು ಪ್ರಾಣಲಿಂಗಿಯಾಗಿ, ಜಂಗಮಲಿಂಗವ ನೆಲೆಯಂಗೊಂಡುದೆ ಅನುಭಾವಭಕ್ತಿಯೆಂಬೆನಯ್ಯ. ಜ್ಞಾನವನರಿತು ಶರಣನಾಗಿ, ಪ್ರಸಾದಲಿಂಗವ ನೆಲೆಯಂಗೊಂಡುದೆ ಅನುಪಮಭಕ್ತಿಯೆಂಬೆನಯ್ಯ. ಪರವನರಿತು ಐಕ್ಯನಾಗಿ, ಮಹಾಲಿಂಗವ ನೆಲೆಯಂಗೊಂಡುದೆ ಸಮರಸಭಕ್ತಿಯೆಂಬೆನಯ್ಯ. ಚಿತ್ತವನರಿತು ನಿಜಲಿಂಗವಾಗಿ, ಪರಬ್ರಹ್ಮವು ನೆಲೆಯಂಗೊಂಡುದೆ ನಿಷ್ಪತಿಭಕ್ತಿಯೆಂಬೆನಯ್ಯ. ಇದು ಕಾಣಾ, ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನ ಆಚರಣೆಯು.
--------------
ಜಕ್ಕಣಯ್ಯ
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ, ಆ ಬೆವಸಾಯದ ಘೋರವೇತಕ್ಕಯ್ಯಾ ? ಕ್ರಯವಿಕ್ರಯವ ಮಾಡಿ ಮನೆಯ ಸಂಚ ನಡೆಯದನ್ನಕ್ಕ ಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ ? ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆ ಆ ಓಲಗದ ಘೋರವೇತಕ್ಕಯ್ಯಾ ? ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ; ಆ ಉಪದೇಶವ ಕೊಟ್ಟ ಗುರು, ಕೊಂಡ ಶಿಷ್ಯ,_ ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ, ಗುಹೇಶ್ವರನೆಂಬವನತ್ತಲೆ ಹೋಗಲಿ.
--------------
ಅಲ್ಲಮಪ್ರಭುದೇವರು
ಮಹಾಘನ ಪರಮಜ್ಯೋತಿರ್ಲಿಂಗವೆನ್ನಲ್ಲಿಗೆ ಬಂದು ಬಂದುದ ಬೇರ್ಪಡಿಸಿದೆ ನೋಡಾ ! ಬಂದು ಚಿಂತೆಯಕೆಡಿಸಿ ನಿಶ್ಚಿಂತನ ಮಾಡಿದೆ ನೋಡಾ ! ಬಂದು ನಿಂದು ಎನ್ನ ಒಳಹೊರಗೆ ತಾನೆಯಾಗಿ ಸಂದು ಭೇದವಿಲ್ಲದ ಗತಿಮತಿಯೊಳೊಪ್ಪಿ ಅತಿಶಯದ ಭೋಗಸಮರಸದೊಳಿರ್ದಿತು ನೋಡಾ. ಮತ್ತೆ ನಾನೆಂದರೆ ನಾಚಿಕೊಂಡಿತ್ತೆನ್ನ ಲಿಂಗಕಾಯ, ಅಭಿಮಾನಿಸಿಕೊಂಡಿತ್ತೆನ್ನ ಲಿಂಗಮನ, ಅಚಲಾನಂದಸುಖಿಯಾಗಿತ್ತೆನ್ನ ಲಿಂಗಭಾವ. ಈ ತ್ರಿವಿಧವೊಂದಾಗಿ ಗುರುನಿರಂಜನ ಚನ್ನಬಸವಲಿಂಗಾ ನಾ ನಿನ್ನನರಿಯದಿರ್ದೆ ಭಕ್ತನಾಗಿ ನಿಮ್ಮೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಳಗದಲ್ಲಿ ಹೋದ ಮತ್ತೆ ಆಳುತನವೆನಗಿಲ್ಲ ಎಂದಡೆ, ಅವರು ಸೀಳದಿಪ್ಪರೆ ತನ್ನುದರವ? ಭಾಳಾಂಬಕನ ಭಕ್ತನಾಗಿ ಭಕ್ತಿಯ ತಾರಲಾರೆನೆಂದಡೆ, ಅದು ಬಾಲರ ಚಿತ್ತದ ಲೀಲೆಯಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->