ಅಥವಾ

ಒಟ್ಟು 51 ಕಡೆಗಳಲ್ಲಿ , 26 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ವರ್ಣದ ಬೇರು ಮೂರು ವರ್ಣದ ಉದಕ, ರವೆ ತೋರಬಾರದ ಕಲ್ಲು, ಇಂತಿವ ಮೀರಬಾರದ ಗುಂಡು. ಇಂತಿವ ಭೇದಿಸಿ ಅರೆಯಲಾಗಿ ಸವೆಯಿತ್ತು ಮದ್ದು , ವಿಶ್ವಾಸವೆಂಬ ತಟ್ಟೆಯಲ್ಲಿ. ಭಕ್ತಂಗೆ ಮೂರು, ಮಾಹೇಶ್ವರಂಗೆ ನಾಲ್ಕು, ಪ್ರಸಾದಿಗೆ ಐದು, ಪ್ರಾಣಲಿಂಗಿಗೆ ಆರು, ಶರಣಂಗೆ ಎಂಟು, ಐಕ್ಯಂಗೆ ಹತ್ತು ಇಂತೀ ಕ್ರಮದಲ್ಲಿ ಕೊಂಡ ಮತ್ತೆ , ಮೂರು ನಾಲ್ಕುಗೂಡಿ, ಆರು ಎಂಟುಗೂಡಿ, ಎಂಟುಹತ್ತುಗೂಡಿ ನಷ್ಟವಾದ ಮತ್ತೆ , ರೋಗದ ಕಟ್ಟು ತೊಟ್ಟು ಬಿಟ್ಟಿತು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ.
--------------
ವೈದ್ಯ ಸಂಗಣ್ಣ
ಉರಿಯ ಮಡುವಿನಲ್ಲಿ ಒಂದು ಜಲದ ಕುಸುಮ ಹುಟ್ಟಿ, ಹರಿಹರbಜಿಡಿಹ್ಮಾದಿಗಳಿಗೆ ವಶವಲ್ಲ ನೋಡಾ. ಕುಸುಮದ ಎಸಳಿನ ಕೂಟಸ್ಥಲದಲ್ಲಿ ಕಪ್ಪು, ನಡುಮಧ್ಯದಲ್ಲಿ ತಮ ಕಪೋತವರ್ಣ, ಅದರ ತುದಿಯಲ್ಲಿ ನಾನಾ ವರ್ಣದ ಛಾಯೆ ಕೂಡಿ ಅಳಿವುತ್ತಿಹುದು. ಆ ಹೂವ ಒಂದೆ ಭೇದದಲ್ಲಿ ಕಿತ್ತು ಸದಾಶಿವಲಿಂಗದ ಪಾದದಲ್ಲಿರಿಸಲಾಗಿ, ಪದಕ್ಕೆ ಹೊರಗೆಂದು ಮಕುಟದ ಮೇಲೇರಿತ್ತು. ಇದು ಬಲ್ಲವರಾರು ಚೋದ್ಯವ ಹೇಳಿರಣ್ಣಾ!
--------------
ಅರಿವಿನ ಮಾರಿತಂದೆ
ಉದಕ ನಾನಾ ವರ್ಣದ ರೂಪಿನಲ್ಲಿ ಬೆರಸಿ ಅವರ ಛಾಯಕ್ಕೆ ಭಿನ್ನಭಾವವಿಲ್ಲದೆ, ಆ ರೂಪಿಂಗೆ ತಾ ದ್ರವವೊಡಲಾಗಿ ತೋರುವಂತೆ ಎನ್ನ ಸರ್ವಾಂಗದಲ್ಲಿ ತೋರುವ ಕೋರಿಕೆ ನೀನಾಗಿ, ಮುಕುರವ ನೋಡುವ ನೋಟದಂತೆ ಒಳಗೆ ತೋರುವ ಇರವು, ಹೊರಗಳವನ ಪ್ರತಿರೂಪಿನಂತೆ ಎಲ್ಲಿಯೂ ನೀನಾಗಿ ನಾನರಿದು ಮರೆವುದಕ್ಕೆ ತೆರಪಿಲ್ಲ. ಹಾಗೆಂದಲ್ಲಿಯೆ ನಿನ್ನ ಉಳುಮೆ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಆರು ವರ್ಣದ ಪಕ್ಷಿ, ಮೂರು ಬಾಗಿಲವ ಪೊಕ್ಕು, ಸಾವಿರೆಸಳ ಮಂಟಪದೊಳು ನಿಲ್ಲಲು, ಅಲ್ಲಿ ಒಬ್ಬ ಚಿದಂಗನೆಯ ಕಂಡೆನಯ್ಯ. ಆ ಚಿಂದಗನೆಯು ಆ ಪಕ್ಷಿಯ ಹಿಡಿದು ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹರಿಹರ ಬ್ರಹ್ಮಾದಿಗಳು ಸರಿಯಿಲ್ಲವೆಂದು ಹೇಳುವ ಅಣ್ಣಗಳು ನೀವು ಕೇಳಿರೊ. ಹರಿಹರ ಬ್ರಹ್ಮಾದಿಗಳೊಳಗೆ ಸರಿಯಾಗಿ ಬಂದು, ನಿಮ್ಮ ಅಂತರಂಗದೊಳಗೆ ನಿಂತ ಕಾರಣದಿಂದಾಗಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಸ್ವರ್ಗ ಮತ್ರ್ಯ ಪಾತಾಳ ಈರೇಳು ಭುವನ ಹದಿನಾಲ್ಕು ಲೋಕ, ನಾಲ್ಕು ವರ್ಣ, ಹದಿನೆಂಟು ಜಾತಿ, ನೂರೊಂದು ಕುಲದವರಾದರು. ಭಕ್ತರ ಆಧಾರದಲಿ ನಾವು ಆದಿವಿ, ನೀವು ಆದಿರಿ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬ ವಿಪ್ರನ ಗರ್ಭದಲ್ಲಿ ಹುಟ್ಟಿದ ನಕಾರ ಬ್ರಹ್ಮನೆ ಪೃಥ್ವಿತತ್ವವಾದ, ಮಕಾರ ವಷ್ಣುವೆ ಅಪ್ಪುತತ್ವವಾದ. ಶಿಕಾರ ರುದ್ರನೆ ತೇಜತತ್ವವಾದ, ವಕಾರ ಈಶ್ವರನೆ ವಾಯುತತ್ವವಾದ. ಯಕಾರ ಸದಾಶಿವನೆ ಆಕಾಶ ತತ್ವವಾದ ಅದು ಎಂತೆಂದರೆ : ನಕಾರ ಬ್ರಹ್ಮ , ಮಕಾರ ವಿಷ್ಣು , ಶಿಕಾರ ರುದ್ರ. ಮೂವರು ತ್ರಿಮೂರ್ತಿಗಳು ಕೂಡಲಿಕೆ ಈಶ್ವರನೆಂಬುದೊಂದು ವಿಪ್ರವರ್ಣವಾಯಿತು ಕಾಣಿರೊ. ಆತನ ಸದ್ಯೋಜಾತಮುಖದಲ್ಲಿ ಬ್ರಾಹ್ಮಣ ಹುಟ್ಟಿದ. ಅವರ ಅಂಗದಲ್ಲಿ ಪ್ರಸಾದಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಸ್ಫಟಿಕ ವರ್ಣದ ಪಟ್ಟಿಕೇಶ್ವರನೆಂಬ ಲಿಂಗವಾದ. ಆತನ ಭುಜದಲ್ಲಿ ಕ್ಷತ್ರಿಯ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ವೇತವರ್ಣದ ರಾಮನಾಥಲಿಂಗವಾದ, ಆತನ ಉದರದಲ್ಲಿ ವೈಶ್ಯ ಹುಟ್ಟಿದ ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ಯಾಮವರ್ಣದ ನಗರೇಶ್ವರಲಿಂಗವಾದ. ಆತನ ಪಾದದಲ್ಲಿ ಶೂದ್ರ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ನೀಲವರ್ಣದ ಕಲ್ಲಿನಾಥಲಿಂಗವಾದ. ಇಂತೀ ನಾಲ್ಕುವರ್ಣ ಹದಿನೆಂಟುಜಾತಿ ನೂರೊಂದು ಕುಲದವರು ಅಂತರಂಗದ ಒಳಹೊರಗೆ ಹರಿಹರ ಬ್ರಹ್ಮಾದಿಗಳು ಪೂಜೆಗೊಂಬುವ ದೇವರು ತಾವೆ ಆದರು, ಪೂಜೆ ಮಾಡುವ ಭಕ್ತರು ತಾವೆ ಆದರು. ಅದು ಎಂತೆಂದರೆ : ನಿಮ್ಮ ತಾಯಿಗರ್ಭದಲ್ಲಿ ಶುಕ್ಲ ಶೋಣಿತಗಳು ಎರಡು ಕೂಡಿ ಅಕ್ಷಮೂರ್ತಿಯಾದ. ಆತ್ಮದೊಳಗೆ ಒಂಕಾರ ಪರಬ್ರಹ್ಮವೆಂಬ .....(ಒಂದು ಹಾಳೆ ಕಳೆದಿದೆ) ನರರು ಸುರರು ತೆತ್ತೀಸಕೋಟಿ ದೇವತೆಗಳಿಗೆಲ್ಲ ಪೂಜೆ ಮಾಡುವ ಲಿಂಗ ಒಂದೆಯೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರುಂಟೇನು, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ನಾನಾ ವರ್ಣದ ಕಾಷ*ವ ಸುಟ್ಟಲ್ಲಿ ಏಕವರ್ಣದ ಬೂದಿಯಪ್ಪುದಲ್ಲದೆ ಅಲ್ಲಿ ಕಾಷ*ದ ಕುಲ ಉಂಟೇ ಅಯ್ಯ ? ತೊಟ್ಟು ಬಿಟ್ಟ ಹಣ್ಣು ಮರಳಿ ತೊಟ್ಟ ಹತ್ತಬಲ್ಲುದೇ ಅಯ್ಯ ? ಕಷ್ಟಜನ್ಮದಲ್ಲಿ ಹುಟ್ಟಿದಾತನಾದಡಾಗಲಿ ನೆಟ್ಟನೆ ಶ್ರೀಗುರುಕಾರುಣ್ಯವ ಪಡೆದು ಇಷ್ಟಲಿಂಗಸಂಬಂಧಿಯಾಗಿ, ಆಚಾರ ಕ್ರಿಯಾಸಂಪನ್ನನಾದ ಶರಣನ ಜಾತಿಪೂರ್ವವ ಎತ್ತಿ ದೂಷಿಸುವ ಪಾತಕರ ಬಾಯಲ್ಲಿ ಬಾಲಹುಳುಗಳು ಸುರಿಯದೆ ಮಾಣ್ಬವೆ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಸೂರ್ಯವರ್ಣದ ಚಾಪಿ ಬ್ರಹ್ಮಲೋಕವ ನುಂಗಿತ್ತು. ಚಂದ್ರವರ್ಣದ ಚಾಪಿ ವಿಷ್ಣುಲೋಕವ ನುಂಗಿತ್ತು. ಅಗ್ನಿವರ್ಣದ ಚಾಪಿ ರುದ್ರಲೋಕವ ನುಂಗಿತ್ತು. ಉಳಿದ ವರ್ಣದ ಚಾಪಿ ಹಲವು ಲೋಕ ಬ್ರಹ್ಮಾಂಡವ ನುಂಗಿತ್ತು. ನುಂಗದೆ ಹಿಂಗದಿರಬಲ್ಲಡೆ ಕಾಯಕದಲ್ಲಿರಬೇಕು. ಹಿಂಗಿದಡೆ ಭಂಗ, ಅಂತಕನವರ ಮನೆವಾಸ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರೂ ಇಲ್ಲದ ಅರಣ್ಯಕ್ಕೆ ಪೋಗಿ, ನಾನಾ ವರ್ಣದ ಕಟ್ಟಿಗೆಯ ತಂದು, ಸೂರ್ಯವರ್ಣದ ಕಟ್ಟಿಗೆಯಿಂದ ಗಳಿಗೆಯ ಬಂಧಿಸಿ, ಚಂದ್ರವರ್ಣದ ಕಟ್ಟಿಗೆಯಿಂದ ಗುಮ್ಮಿಯ ಬಂಧಿಸಿ, ಅಗ್ನಿವರ್ಣದ ಕಟ್ಟಿಗೆಯಿಂದ ಬುಟ್ಟಿಯ ಬಂಧಿಸಿ, ಉಳಿದ ವರ್ಣದ ಕಟ್ಟಿಗೆಯಿಂದ ತಟ್ಟಿ, ಹೆಡಗಿಯ ಬಂಧಿಸಿ, ಜ್ಯೋತಿವರ್ಣದ ಕಟ್ಟಿಗೆಯಿಂದ ಊರೆಲ್ಲವ ಬಂಧಿಸಿ, ಇಂತೀ ಪದಾರ್ಥವ ಮಾರಿ, ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೃದಯಕಮಲದೊಳಗೊಂದು ಮರಿದುಂಬಿ ಹುಟ್ಟಿತ್ತು, ಹಾರಿಹೋಗಿ ಆಕಾಶವ ನುಂಗಿತ್ತಯ್ಯಾ ! ಆ ತುಂಬಿಯ ಗರಿಯ ಗಾಳಿಯಲ್ಲಿ, ಮೂರು ಲೋಕವೆಲ್ಲವೂ ತಲೆಕೆಳಗಾಯಿತ್ತು ! ಪಂಚ ವರ್ಣದ ಹಂಸೆಯ ಪಂಜರವ ಖಂಡಿಸಿದಡೆ, ಗರಿ ಮುರಿದು, ತುಂಬಿ ನೆಲಕ್ಕುರುಳಿತ್ತು! ನಿಜದುದಯದ ಬೆಡಗಿನ ಕೀಲ , ಗುಹೇಶ್ವರಾ, ನಿಮ್ಮ ಶರಣರ ಅನುಭವಸಂಗದಲ್ಲಿರ್ದು ಕಂಡೆನಯ್ಯಾ.
--------------
ಅಲ್ಲಮಪ್ರಭುದೇವರು
ಊರ ಮುಂದಳ ಕೇರಿಯಲ್ಲಿ ಐದು ಬೇರಿನ ಮರನ ಕಂಡೆನಯ್ಯ. ಆ ಮರಕ್ಕೆ ಏಳೆಂಟು ಎಲೆಗಳು ಇಪ್ಪವು ನೋಡಾ. ಹತ್ತು ವರ್ಣದ ಹಣ್ಣ ಸವಿದು, ಮೇರುವೆಯ ಪಟಕ ತೆಗೆದು, ಮಹಾಲಿಂಗದೊಳು ಬೆರೆದಿದ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕರಿಯಬಣ್ಣದ ನೂಲು ಉತ್ಪತ್ಯದವನ ನುಂಗಿತ್ತು. ಬಿಳಿಯಬಣ್ಣದ ನೂಲು ಸ್ಥಿತಿಯುಳ್ಳವನ ನುಂಗಿತ್ತು. ಅಗ್ನಿ ಬಣ್ಣದ ನೂಲು ಲಯವುಳ್ಳವನ ನುಂಗಿತ್ತು. ಉಳಿದ ವರ್ಣದ ನೂಲು ಬ್ರಹ್ಮಾಂಡವ ನುಂಗಿತ್ತು. ಇಂತೀ ಬಣ್ಣದ ನೂಲು ಕಮಲ ನುಂಗಿದವರು ಹಿಂಗಿ ಕಾಣದೆ ಪೋದರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->