ಅಥವಾ

ಒಟ್ಟು 66 ಕಡೆಗಳಲ್ಲಿ , 4 ವಚನಕಾರರು , 66 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೋಮವಾರ, ಹುಣ್ಣಿಮೆ, ಅಮವಾಸ್ಯೆ ಎಂದು ಉಪವಾಸವಿರ್ದು ಶಿವನಿಗೆ ಅರ್ಪಿತ ಎಂದು ನುಡಿವರು. ಕಾಮ ಕ್ರೋಧ [ಲೋಭ] ಮೋಹ ಮದ ಮತ್ಸರವನಳಿಯರು. ಶಿವನ ನೆಲೆಯನರಿಯದೆ, ಎನಗೆ ಗತಿಕೊಡುವ ಲಿಂಗವಿದೇ ಎಂದು ತಿಳಿಯದೆ, ಗ್ರಾಮದ ಹೊರತಾಯದಲ್ಲಿರುವ ದೇವರುಗಳು ಅದ್ಥಿಕವೆಂದು ಪೂಜಿಸಿ, ಅವಕಿಕ್ಕಿದ ಕೂಳ ತಾ ತಿಂಬುವನು. ಇನ್ನು ಸೋಮಧರಗರ್ಪಿತವೆಂದು ಭುಂಜಿಸುವವರ ತೆರನಂತೆ ದೊಡ್ಡ ಗ್ರಾಮದ ಸೂಕರನು ಗಂಗೆಯಲ್ಲಿ ಮಿಂದು ಬಂದು ಅಮೇಧ್ಯವ ಭುಂಜಿಸಿದ ತೆರನಾಯಿತೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕೂಡಿದ ಧನವೆಲ್ಲವನು ಗುರುಲಿಂಗಜಂಗಮಕ್ಕೆ ವಂಚನೆಯ ಮಾಡಿ ಒಳಗಿಟ್ಟುಕೊಂಡು, ನೆಲನ ತೋಡಿ ಬಚ್ಚಿಟ್ಟುಕೊಂಡು. ಹಲವು ತೆರದ ಆಭರಣಂಗಳ ಮಾಡಿಸಿ, ಕರ ಚರಣ ಉರ ಕರ್ಣಂಗಳೊಳಗಿಟ್ಟುಕೊಂಡು, ಮತ್ತಿಷ್ಟು ಬದುಕಾಗಲೆಂದು ತನ್ನ ಕೈಯೊಳಗಿನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡುವ ಲಿಂಗಪೂಜಕನ ಪರಿ ಎಂತೆಂದೊಡೆ; ಆ ಭಕ್ತನು ಪಂಚಾಬ್ಥಿಷೇಕದಿಂದ ಲಿಂಗಕ್ಕೆ ಮಜ್ಜನವ ನೀಡಿದಡೆ ಲಿಂಗದ ಚಿತ್ತದಲ್ಲಿ ಸುಣ್ಣ ನೀರನೆತ್ತಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ವಿಭೂತಿಯ ಧರಿಸಿದಡೆ ಲಿಂಗದ ಚಿತ್ತದಲ್ಲಿ ಬೂದಿಯ ಬೊಕ್ಕಣವ ಕಟ್ಟಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಗಂಧವ ಧರಿಸಿದರೆ ಲಿಂಗದ ಚಿತ್ತದಲ್ಲಿ ಚಂಡಿಟ್ಟು ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಅಕ್ಷತೆಯನೇರಿಸಿದರೆ ಲಿಂಗದ ಚಿತ್ತದಲ್ಲಿ ಕಲ್ಲು ಹೊರಿಸಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ಪುಷ್ಪವ ಧರಿಸಿದರೆ ಲಿಂಗದ ಚಿತ್ತದಲ್ಲಿ ಬೆನ್ನ ಮೇಲೆ ಹೇರು ಹೊರಿಸಿದಂತಾಯಿತ್ತಯ್ಯಾ ! ಆ ಭಕ್ತನು ಧೂಪವ ಬೀಸಿದರೆ ಲಿಂಗದ ಚಿತ್ತದಲ್ಲಿ ಅರವನಿಕ್ಕಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ದೀಪಾರತಿಯನೆತ್ತಿದರೆ ಲಿಂಗದ ಚಿತ್ತದಲ್ಲಿ ಪಂಜುಗಳ್ಳರು ಬಂದು ಮೋರೆಯ ಸುಟ್ಟು ಬಾ[ದ್ಥಿ]ಸಿದಂತಾಯಿತ್ತಯ್ಯಾ ! ಆ ಭಕ್ತನು ಸ್ತೋತ್ರಮಂತ್ರವ ನುಡಿದರೆ ಲಿಂಗದ ಚಿತ್ತದಲ್ಲಿ ಕರ್ಣದೊಳಗೆ ತೊಣಚಿ ಹೊಕ್ಕು ಗೋಳಿಟ್ಟು ಬಾದ್ಥಿಸಿದಂತಾಯಿತ್ತಯ್ಯಾ ! ಇಂತಪ್ಪ ಲಿಂಗಬಾಧಕರನು ಲಿಂಗಪೂಜಕರೆನಬಹುದೆ ? ಆತನ ಅಂಗಳವ ಮೆಟ್ಟಬಹುದೆ ? ಇದರ ಇಂಗಿತವ ನಿಜಭಾವವುಳ್ಳ ಶರಣರು ನೀವೇ ತಿಳಿದು ನೋಡಿರೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಂಗವ ಅಂದ ಮಾಡಿಕೊಂಡು ತಿರುಗುವ ಭಂಗಗೇಡಿಗಳು ನೀವು ಕೇಳಿರೋ. ಅಂಗಕ್ಕೆ ಅಂದವಾವುದೆಂದರೆ: ಗುರುವಿಗೆ ತನುವ ಕೊಟ್ಟಿರುವುದೆ ಚೆಂದ, ಲಿಂಗಕ್ಕೆ ಮನವ ಕೊಟ್ಟಿರುವುದೆ ಚೆಂದ, ಜಂಗಮಕ್ಕೆ ಧನವ ಕೊಟ್ಟಿರುವುದೆ ಚೆಂದ. ಅಷ್ಟಾವರಣದಲ್ಲಿ ನಿಬ್ಬೆರಗಿನಿಂದ ಕೂಡಿ ಭಕ್ತಿಯೆಂಬ ಸಮುದ್ರದಲ್ಲಿ ಈಸಾಡುವುದೆ ಚೆಂದ. ಶಿವನ ಪಾದವ ಹೊಂದುವುದೆ ಚೆಂದ. ಈ ಮಾರ್ಗವ ಬಿಟ್ಟು, ಸಂಸಾರವೇ ಅಧಿಕವೆಂದು ತನ್ನ ಹೆಂಡಿರು ಮಕ್ಕಳು ಸಂಪತ್ತು ಇವು [ತ]ನಗೆ ಶಾಶ್ವತವೆಂದು ತಿಳಿದು, ಒಂದು ಕಾಸನಾದರೂ ಪರರಿಗೆ ಕೊಡದೆ, ತಾನೇ ತಿಂದು, ನೆಲದಲ್ಲಿ ಮಡಗಿ, ಕಡೆಗೆ ಯಮನ ಕೈಯಲಿ ಸಿಲ್ಕಿ ನರಕ ಕೊಂಡದಲ್ಲಿ ಮುಳುಗೇಳುವುದೇ ನಿಶ್ಚಯ. ಇಂತಹ ಅಂದಗೇಡಿಗಳ ಮುಖವ ನೋಡಲಾಗದೆಂದಾತ, ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕಂಥೆ ತೊಟ್ಟವ ಗುರುವಲ್ಲ, ಕಾವಿ ಹೊತ್ತವ ಜಂಗಮವಲ್ಲ, ಶೀಲ ಕಟ್ಟಿದವ ಶಿವಭಕ್ತನಲ್ಲ, ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ. ಹೌದೆಂಬವನ ಬಾಯ ಮೇಲೆ ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಲಿಂಗ ಬಿತ್ತು ಎತ್ತು ಎಂಬಿರಿ, ಆ ಲಿಂಗ ಬಿದ್ದರೆ ಈ ಭೂಮಿ ತಾಳಬಲ್ಲುದೆ ? ಲಿಂಗವಿರುವುದು ಹರಗುರು ಪಾರಾಯಣ, ಲಿಂಗವಿರುವುದು ತೆಂಗಿನ ಮರದಲ್ಲಿ, ಲಿಂಗವಿರುವುದು ಜಂಗಮನ ಅಂಗುಷ*ದಲ್ಲಿ, ಲಿಂ ಗವಿರುವುದು ಊರ ಹಿರೇ ಬಾಗಿಲಲ್ಲಿ. ಇಂತಿಪ್ಪ ಲಿಂಗ ಬಿಟ್ಟು, ಸಂತೆಗೆ ಹೋಗಿ ಮೂರು ಪಾಕಿ ಲಿಂಗವ, ಆರು ಪಾಕಿ ವಸ್ತ್ರವ ತಂದುದೋದಕವಿಲ್ಲ,ಪ್ರಸಾದವಿಲ್ಲ,ಮಂತ್ರವಿಲ್ಲ,ವಿಭೂತಿಯಿಲ್ಲ,ರುದ್ರಾಕ್ಷಿಯಿಲ್ಲ. ಇಂತಪ್ಪ ಲಿಂಗ ಕಟ್ಟಿದವನೊಬ್ಬ ಕಳ್ಳನಾಯಿ, ಕಟ್ಟಿಸಿಕೊಂಡವನೊಬ್ಬ ಕಳ್ಳನಾಯಿ. ಇಂತಪ್ಪ ನಾಯಿಗಳನು ಹಿಡಿತಂದು ಮೂಗನೆ ಕೊಯ್ದು, ನಮ್ಮ ಕುಂಬಾರ ಗುಂಡಯ್ಯನ ಮನೆಯ ಕರಿ ಕತ್ತೆಯನು ತಂದು ಊರಲ್ಲೆಲ್ಲ ಮೆರೆಯಿಸಿ ನಮ್ಮ ಮಾದಾರ ಹರಳಯ್ಯನ ಮನೆಯ ಹನ್ನೆರಡು ಜೋಡು ಹಳೆಯ ಪಾದರಕ್ಷೆಗಳನು ತಂದು ಮುದ್ದುಮುಖದ ಮೇಲೆ ಶುದ್ಧವಾಗಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪರಧನ-ಪರಸತಿ-ಪರನಿಂದೆಗಳಿರೆ ಮುಂದೆ ನರಕವು ಎಂದು ಗುರುವಾಕ್ಯ ಸಾರುತ್ತಿದೆ. ಪರಧನ-ಪರಸತಿ-ಪರಭೂಮಿಗಳುಪಿ ಹತವಾಗಿ ಹೋದ ದುರ್ಯೋಧನ. ಹರಿವ ನದಿಯ ಮಿಂದು ಗೋದಾನ ಮಾಡುವ ನರಕಿಗಳ ನುಡಿಯ ಕೇಳಲಾಗದು. ಹದಿನಾಲ್ಕು ಲೋಕಕ್ಕೆ ಕರ್ತೃ ಶಿವನೊಬ್ಬನೇ ಎಂದು ಶ್ರುತಿಗಳು ಪೊಗಳುತ್ತಿಹವು. ಅರತ ದೇವರ ಪೂಜೆಯ ಮಾಡಿ, ಇಷ್ಟಲಿಂಗವ ಮರೆವ ಮೂಳ ಹೊಲೆಯರಿಗೆ ಮುಕ್ತಿ ಆಗದೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ನೀರೊಳಗೆ ಚಿತ್ರವ ಬರೆದಡೆ ಅದಾರ ಕಣ್ಣಿಗೆ ಕಾಣಬಹುದು ? ಒಡಲು ಬರಿಯ ಬಯಲು ಬೊಮ್ಮವ ನುಡಿವಲ್ಲಿ ಆ ಬೊಮ್ಮದ ಮಾತದೆಲ್ಲಿ ಬಿದ್ದಿತ್ತು ? ಅದು ಸಾಕಾರದೊಡಲುಗೊಂಡು ನುಡಿಯಿತ್ತು. ಆ ಉಭಯವನರಿದು ಅಡಗುವನ್ನಕ್ಕ ನಮ್ಮ ಗುಹೇಶ್ವರಲಿಂಗವೆಂಬ ಕುರುಹು ಬೇಕು ಕಾಣಾ ಎಲೆ ಅಂಬಿಗರ Zõ್ಞಡಯ್ಯ.
--------------
ಅಲ್ಲಮಪ್ರಭುದೇವರು
ಮದ್ದ ತಿನ್ನಬೇಕಾದರೆ ವೈದ್ಯನಿದ್ದೆಡೆಗೆ ಹೋಗಿ, ಹಣ ಹೊನ್ನು ಕೊಟ್ಟು, ದೈನ್ಯಂಬಟ್ಟು, ಮದ್ದ ತಿಂಬರು ನೋಡಯ್ಯ. ಇದು ಶುದ್ಧಸಿದ್ಧಪ್ರಸಿದ್ಧಪ್ರಸಾದಕ್ಕೆ ಎಂದು ಬಿನ್ನಹವ ಮಾಡದೆ, ಅಹಂಕಾರದಲ್ಲಿ ತರಿಸಿಕೊಂಡುಂಬ ಗೊಡ್ಡಮೂಳನ ಕಂಡಡೆ ಒದ್ದೊದ್ದು ಕೊಲ್ಲೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಟ್ಟಿದ ಲಿಂಗವ ಕಿರಿದು ಮಾಡಿ, ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ! ಇಂತಪ್ಪ ಲೊಟ್ಟಿಮೂಳರ ಕಂಡರೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಿಚ್ಚು ಬಯಲೆಂದಡದು ನಿರವಯವಕೆ ಹತ್ತಿ ಹೊತ್ತಿದುದುಂಟೆ ? ಅರಿವು ನಿಜವೆಂದಡೆ ಅಡಗುವುದಕ್ಕೊಂದು ನಾಮ ಉಂಟು. ಅಗ್ನಿರೂಪಿನಲ್ಲಿ ಹುಟ್ಟಿ ಆ ರೂಪ ದಗ್ಧವ ಮಾಡಿದಲ್ಲದೆ ತನ್ನ ಹೊದ್ದಿಗೆ ಕೆಡದು. ಆ ಉಭಯವನರಿವನ್ನಬರ ಕೈಯ ಕುರುಹು, ಅರಿವನ ಜ್ಞಾನ ಪರಿಪೂರ್ಣವಾಗಿರಬೇಕು. ನಮ್ಮ ಗುಹೇಶ್ವರಲಿಂಗದಲ್ಲಿ ಆ ಉಭಯವ ತಿಳಿವನ್ನಬರ ತನ್ನ ಹಿಂಗಿರಬೇಕು ಕಾಣಾ, ಎಲೆ ಅಂಬಿಗರ ಚೌಡಯ್ಯ.
--------------
ಅಲ್ಲಮಪ್ರಭುದೇವರು
[ನಂಬಿಯಣ್ಣ] ಮಾಡುವ ಭಕ್ತಿ ನಾಡೆಲ್ಲ ಮಾಡಬಹುದಯ್ಯಾ, ಕುಂಬಾರ ಗುಂಡಯ್ಯ ಮಾಡುವ ಭಕ್ತಿ ಊರೆಲ್ಲ ಮಾಡಬಹುದಯ್ಯಾ, ಬಸವಣ್ಣ ಮಾಡುವ ಭಕ್ತಿ ಶಿಶುವೆಲ್ಲ ಮಾಡಬಹುದಯ್ಯಾ, ಇದೇನು ದೊಡ್ಡಿತ್ತೆಂಬರು. ಸರ್ವರಿಗೆ ವಶವಾಗದ ಭಕ್ತಿ ಅವರ ಮನ-ಜ್ಞಾನದಂತೆ ಇರಲಿ ಶರಣಾರ್ಥಿ. ಈ ಸುಧೆಯೊಳಗೆ ಶುದ್ಧಭಕ್ತಿಯನರಿತು ನಡೆದುದು ಬಟ್ಟೆಯಾಗದೆ? ನುಡಿದುದು ಸಿದ್ಧಿಯಾಗದೆ? ದೇಹಕ್ಕೆ ಕಷ್ಟ-ನಷ್ಟ, ರೋಗ-ರುಜೆಗಳು ಬಂದು ಅಟ್ಟಿ ಮುಟ್ಟಿದವಾಗಿ, ದೃಢವಾಗಿದ್ದು ಶರಣನ ಮನವು ನಿಶ್ಚಯಿಸಿ, ದೃಢಶೀಲಂಗಳಂ ಬಿಡದೆ ನಡೆವಾತ ದೊಡ್ಡ ಭಕ್ತನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜನನ ಸೂತಕ ಮರಣ ಸೂತಕಂಗಳ ಕಳೆದು ಶುದ್ಧವಾದೆನೆಂಬ ಅಜ್ಞಾನಿ ಜಡಜೀವಿಗಳು ನೀವು ಕೇಳಿರೋ! ಪೃಥ್ವಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಪ್ಪು ಶುದ್ಧವಲ್ಲ. ಅಗ್ನಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಗ್ನಿ ಶುದ್ಧವಲ್ಲ. ಅಪ್ಪು ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಪೃಥ್ವಿ ಶುದ್ಧವಲ್ಲ. ಅಪ್ಪು ಶುದ್ಧವೆಂಬರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ವಾಯು ಶುದ್ಧವಲ್ಲ. ಆಕಾಶ ಶುದ್ಧವೆಂಬಿರಿ, ಈ ಚತುರ್ವಿಧ ತತ್ವಂಗಳ ಒಳಗಿಟ್ಟುಕೊಂಡು ಈ ಪ್ರಕಾರವಾದ ಕಾರಣ ಆಕಾಶ ಶುದ್ಧವಲ್ಲ. ಇವು ಶುದ್ಧವಹ ಪರಿ ಎಂತೆಂದೊಡೆ: ಈ ಪಂಚತತ್ವಂಗಳು ಹುಟ್ಟಿದವು ನಮ್ಮ ಸದಾಶಿವನ ಸಿರಿಯಪ್ಪದೊಂದು ಇಷ್ಟಲಿಂಗದಲ್ಲಿ. ಆ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ ಸರ್ವ ರುಚಿಪದಾರ್ಥವನು ತಂದು ಆ ಲಿಂಗಕ್ಕೆ ಕೊಟ್ಟಲ್ಲಿ, ಲಿಂಗಪ್ರಸಾದವದು ಅಂಗಕ್ಕೆ ಲೇಸಾಗಲೆಂದು, ಕೊಂಬಾತನ ಸರ್ವಾಂಗವೆಲ್ಲ ಶುದ್ಧವಯ್ಯಾ. ಆತನಿಪ್ಪ ಗೃಹವೇ ಪುಣ್ಯಕ್ಷೇತ್ರವು, ಅಂತಹವರ ಪಾದಕ್ಕೆ ಶರಣಾರ್ಥಿ. ಈ ವಿವರವನರಿಯದೆ ತನ್ನ ಕರದ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡದೆ, ಭೋಜನ ಪದಾರ್ಥ ನೀರು ರೊಟ್ಟಿ ಮುಟ್ಟಿಗೆ ಗುಗ್ಗರಿ ಸೀತೆನಿ ಬೆಳಸಿ ಕಾಯಿ ಕಸಿಕು ಹಣ್ಣು ಹಂಪಲ ಹಾಲು ಮೊಸರು ಮಜ್ಜಿಗೆ ತುಪ್ಪ ಸಕ್ಕರೆ ಹೋಳು ವೀಳೆಯ -ಇವನೆಲ್ಲವನು ತನ್ನ ಲಿಂಗಕ್ಕೆ ಕೊಡದೆ, ಅಂಗಕ್ಕೆ ಲೇಸಾಗಲೆಂದು ತಿಂಬುವನು ಅವನೀಗ ತಾನೇ ಶುದ್ಧ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವೇದವನೋದಿದವರು ವಿಧಿಗೊಳಗಾದರಲ್ಲದೆ ದೇವರಿಹರವಾವನರಿದಿಪ್ಪುದಿಲ್ಲ. ಶಾಸ್ತ್ರವನೋದಿದವರು ಸಂಶಯಕ್ಕೊಳಗಾದವರಲ್ಲದೆ ಸದ್ಗುರುವನರಿದುದಿಲ್ಲ. ಆಗಮವನೋದಿದವರೆಲ್ಲರು ಆಗುಚೇಗಿಗೆ ಒಳಗಾದರಲ್ಲದೆ ಆದಿ ಅನಾದಿಯಿಂದತ್ತಣ ಶರಣ-ಲಿಂಗ ಸಂಬಂಧವನರಿದುದಿಲ್ಲ. ಪುರಾಣವನೋದಿದವರೆಲ್ಲರು ಪೂರ್ವದ ಬಟ್ಟೆಗೊಳಗಾದವರಲ್ಲದೆ ಪೂರ್ವದ ಕರ್ಮವ ಹರಿದು ಪುರಾತನರನರಿದುದಿಲ್ಲ. ಇಂತಿವರೆಲ್ಲರು ಚರಶೇಷವ ಲಿಂಗಕ್ಕರ್ಪಿಸಲರಿಯರಾಗಿ ಇವರಿಗೆ ಲಿಂಗವು ಕಾಣಿಸದೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಐಶ್ವರ್ಯ ದುಃಖದಲ್ಲಿ ಬೇಯುವ ಹೊಲೆ ಸಂಸಾರವನೆ ಕಚ್ಚಿ ಕೊಲೆಗೀಡಾಗದೆ, ಸಲೆ ಸತ್ಯ ಸದಾಚಾರದಲ್ಲಿ ನಡೆ. ಸಟೆಯನು ಬಿಡು, ದಿಟವನೆ ಹಿಡಿ. ಈ ಘಟವುಳ್ಳನಕ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಾಯಿ ಬಲ್ಲುದೆ ದೇವರ ಬೋನವ? ದ್ರೋಹಿ ಬಲ್ಲನೆ ಗುರು-ಲಿಂಗ-ಜಂಗಮದ ನೆಲೆಯ? ಅಜ್ಞಾನಿ ಬಲ್ಲನೆ ಸುಜ್ಞಾನಿಯ ನೆಲೆಯ? ಕುಕ್ಕುರ ಬಲ್ಲುದೆ ಸುಭಿಕ್ಷದ ಸವಿಯ? ಇಂತಪ್ಪ ಆಚಾರಭ್ರಷ್ಟರ ಕಡೆಗೆ ನೋಡೆ[ನೆಂ]ದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->