ಅಥವಾ

ಒಟ್ಟು 27 ಕಡೆಗಳಲ್ಲಿ , 9 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಹರೆಯದ ರೂಹಿನ ಚೆಲುವಿನ, ನುಡಿಯ ಜಾಣಿನ, ಸಿರಿಯ ಸಂತೋಷದ, ಕರಿ ತುರಗ ರಥ ಪದಾತಿಯ ನೆರವಿಯ, ಸತಿ ಸುತರ ಬಂಧುಗಳ ಸಮೂಹದ, ನಿನ್ನ ಕುಲದಭಿಮಾನದ ಗರ್ವವ ಬಿಡು, ಮರುಳಾಗದಿರು. ಅಕಟಕಟಾ ರೋಮಜನಿಂದ ಹಿರಿಯನೆ? ಮದನನಿಂ ಚೆಲುವನೆ? ಸುರಪತಿಯಿಂದ ಸಂಪನ್ನನೆ? ವಾಮದೇವ ವಶಿಷ್ಟರಿಂದ ಕುಲಜನೆ? ಅಂತಕನ ದೂತರು ಬಂದು ಕೈವಿಡಿದೆಳದೊಯ್ಯುವಾಗ ನುಡಿ ತಡವಿಲ್ಲ ಕೇಳೋ ನರನೆ! ಎನ್ನ ಮಾಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ.
--------------
ಕಿನ್ನರಿ ಬ್ರಹ್ಮಯ್ಯ
ಉಳ್ಳುದೊಂದು ತನು, ಉಳ್ಳುದೊಂದು ಮನ. ನಾನಿನ್ನಾವ ಮನದಲ್ಲಿ ಧ್ಯಾನವ ಮಾಡುವೆನಯ್ಯಾ ? ಸಂಸಾರವನಾವ ಮನದಲ್ಲಿ ತಲ್ಲೀಯವಾಹೆನಯ್ಯಾ ? ಅಕಟಕಟಾ, ಕೆಟ್ಟೆ ಕೆಟ್ಟೆ ? ಸಂಸಾರಕ್ಕಲ್ಲಾ, ಪರಮಾರ್ಥಕ್ಕಲ್ಲಾ ? ಎರಡಕ್ಕೆ ಬಿಟ್ಟ ಕರುವಿನಂತೆ ? ಬಿಲ್ವ ಬೆಳವಲಕಾಯನೊಂದಾಗಿ ಹಿಡಿಯಬಹುದೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ನಾನಾರಿದೆಲ್ಲಿಯ ಪಾಶವಿದೆತ್ತಣ ಮರವೆ ಅಕಟಕಟಾ ತಾಮಸಕ್ಕೆ ಗುರಿಮಾಡಿದೆಯಲ್ಲಾ. ಎಲೆ ಕರುಣಾಂಬುನಿಧಿಯೆ, ದಯಾಪಾರಿಯೆ, ನೀನು ವಿಚಾರಿಸದಿರ್ದಡಾನೆಂತುಳಿವೆನಯ್ಯಾ. ನಿಮ್ಮ ಕೃಪಾದೃಷ್ಟಿಯಿಂ ನಿರೀಕ್ಷಿಸಿ ನಿಮ್ಮತ್ತ ಸಾರುವಂತೆ ಮಾಡಾ ಕೂಡಲಸಂಗಮದೇವಾ.
--------------
ಬಸವಣ್ಣ
ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ, ಹೆಸರಿಟ್ಟು ಕರೆದವರಾರೊ ? ಅಕಟಕಟಾ ಶಬ್ಧದ ಲಜ್ಜೆ[ಯ] ನೋಡಾ ! ಗುಹೇಶ್ವರನರಿಯದ ಅನುಭಾವಿಗಳೆಲ್ಲರ ತರಕಟ ಕಾಡಿತ್ತು.
--------------
ಅಲ್ಲಮಪ್ರಭುದೇವರು
ಲಿಂಗಾರ್ಪಿತವ ಮಾಡಿ ಪ್ರಸಾದವನಲ್ಲದೆ ಭೋಗಿಸೆನೆಂಬ ಪ್ರಸಾದಿಗಳಿಗೆ ಇನ್ನೆಂತಯ್ಯಾ ? ಅನರ್ಪಿತ ಭೋಗವು ಸಂಭವಿಸಿ ದೋಷವೇ ಪ್ರಾಪ್ತಿಯಾದ ಪರಿಯ ನೋಡಾ. ಅದೆಂತೋ ಅನರ್ಪಿತವ ಮನದಲ್ಲಿ ನೆನೆಯಬಹುದು ? ಅದೆಂತೋ ಅನರ್ಪಿತವ ಪಂಚೇಂದ್ರಿಯಗಳಲ್ಲಿ ಮುಟ್ಟಬಹುದು ? ಅಕಟಕಟಾ, ಅರ್ಪಿತವಿಲ್ಲದೆ ಸರ್ವವಸ್ತುವ ಅಂಗವಿಸಿ ಭೋಗಿಸಬಹುದೆ? ಅಂಗ ಲಿಂಗವಾಗಿ ಲಿಂಗ ಪ್ರಾಣವಾಗಿ ಪ್ರಾಣ ಮನವಾಗಿ ಮನವು ಲಿಂಗಸ್ವಾಯತವಾಗಿ ಭಾವಶುದ್ಧವಾನಗೆಫ ಮನವೇ ಲಿಂಗವು. ಲಿಂಗ ಮುಂದು ಮನ ಹಿಂದಾಗಿ ಸರ್ವಕ್ರೀಯ ವರ್ತಿಸುವುದು, ಈ ಕ್ರೀ ಸರ್ವಾರ್ಪಿತ. ಇದು ತಾತ್ಪರ್ಯ ಕಳೆ, ಇದೇ ಅರ್ಪಿತಕ್ಕೆ ಜೀವ ಕಳೆ, ಇಂತಹ ಮಹಿಮೆಗೆ ಸರ್ವಪ್ರಸಾದ, ಅದು: ಪಂಚೇಂದ್ರಿಯವೆಲ್ಲವು ಲಿಂಗಾರ್ಪಿತ, ಆತನ ಭೋಗವೆಲ್ಲವೂ ಪ್ರಸಾದಭೋಗ, ಆತನು ಸದ್ಯೋನ್ಮುಕ್ತನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮುನಿದೆಯಾದಡೆ ಒಮ್ಮೆ ಜರೆದಡೆ ಸಾಲದೆ ಅಕಟಕಟಾ, ಮದನಂಗೆ ಮಾರುಗೊಡುವರೆ ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ಕೂಡಲಸಂಗಮದೇವಾ 44
--------------
ಬಸವಣ್ಣ
ಅರಿದಿಹೆನೆಂಬ ಅವಸ್ಥೆಯಿದ್ದಡೇನು? ಮತ್ತೆ ಮರವೆಗೆ ಕಾರಣವಾದ ಸಂಸಾರದ ಕಾಯ ಕಳವಳಕ್ಕೊಳಗಾದಡೆ ಮಾಯೆ ಮನವನೆಡೆಗೊಂಡಿತ್ತು. ಮಾಯೆ ಮನವನೆಡೆಗೊಂಡಲ್ಲಿ ಅರಿವು ಜಾರಿತ್ತು. ಮರಹು ಘನವಾಯಿತ್ತು. ಅರಿವುದಿನ್ನೇನು ಹೇಳಾ?. ಕೈಯ ತುತ್ತು ಬಾಯ್ಗೆ ಬಾರದಂತಾಯ್ತು. ಇನ್ನೆಲ್ಲಿಯದು ಲಿಂಗ? ಇನ್ನೆಲ್ಲಿಯದು ಜಂಗಮ? ಇನ್ನೆಲ್ಲಿಯದು ಪ್ರಸಾದ? ಅಕಟಕಟಾ ಹಾನಿಯ ಹಿಡಿದು ಹೀನವಾದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ ! ಓಂ ನಮಃ ಶಿವಾಯ ಎಂಬುದೇ ಮಂತ್ರ, ಓಂ ನಮಃ ಶಿವಾಯ ಎಂಬುದೇ ತಂತ್ರ, ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ. 77
--------------
ಬಸವಣ್ಣ
-->