ಅಥವಾ

ಒಟ್ಟು 37 ಕಡೆಗಳಲ್ಲಿ , 2 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾದ ಬಿಂದು ಕಲೆಗಳು ಇಲ್ಲದ ಮುನ್ನ, ಅತ್ತತ್ತಲೆ ಓಂಕಾರನೆಂಬ ಗಣೇಶ್ವರನಿರ್ಪ ನೋಡಾ. ಆ ಓಂಕಾರಗಣೇಶ್ವರಂಗೆ ಒಬ್ಬ ಸತಿಯಳು ಇರ್ಪಳು ನೋಡಾ. ಆ ಸತಿಯಳ ಅಂಗದಲ್ಲಿ ಐವರು ಮಕ್ಕಳು ಇರ್ಪರು ನೋಡಾ. ಐವರು ಮಕ್ಕಳು ಇಪ್ಪತ್ತೈದು ಕೇರಿಗಳಲ್ಲಿ ಸುಳಿದಾಡುತಿರ್ಪರು ನೋಡಾ. ಆ ಇಪ್ಪತ್ತೈದು ಕೇರಿಗಳ ಒಂದು ಇರುವೆ ನುಂಗಿತು ನೋಡಾ. ಆ ಇರುವೆಯ ಒಬ್ಬ ಸತಿಯಳು ನುಂಗಿದಳು ನೋಡಾ. ಆ ಸತಿಯಳ ಓಂಕಾರಗಣೇಶ್ವರನು ನುಂಗಿದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆತ್ಮನೆಂಬ ಪ್ರಭೆಯಲ್ಲಿ ನಿಂದು ನಿತ್ಯವಾದ ಲಿಂಗವ ಹಿಡಿದು ಅತ್ತತ್ತಲೆ ಪರಕೆ ಪರವನಾಚರಿಸಿ ನಿರ್ಮುಕ್ತನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮನಿಲ್ಲದಂದು, ವಿಷ್ಣುವಿಲ್ಲದಂದು, ರುದ್ರನಿಲ್ಲದಂದು, ಈಶ್ವರನಿಲ್ಲದಂದು, ಸದಾಶಿವನಿಲ್ಲದಂದು, ಪರಶಿವನಿಲ್ಲದಂದು, ಅತ್ತತ್ತಲೆ ಪರಿಪೂರ್ಣಲಿಂಗವು ತಾನೇ ನೋಡಾ. ಆ ಲಿಂಗವ ನೋಡಹೋಗದ ಮುನ್ನ, ಅದು ಎನ್ನ ನುಂಗಿತ್ತು. ಅದಕ್ಕೆ ನಯನ ಒಂದು, ವದನ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು. ಒಂ¨ತ್ತು ಬಾಗಿಲಮನೆಯೊಳಗೆ ಸುಳಿದಾಡುತಿಪ್ಪನು ನೋಡಾ. ಆ ಸುಳುವಿನ ಸುಳುವ ಒಬ್ಬ ಸತಿಯಳು ಕಂಡು ನಿರ್ಗತವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದಶನಾದಗಳು ಇಲ್ಲದಂದು, ಸುನಾದಗಳು ನೆಲೆಗೊಳ್ಳದಂದು, ಝೇಂಕಾರವು ಮೊನೆದೋರದಂದು, ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿದ್ದನಯ್ಯ. ತನ್ನ ನೆನವಿನ ಮಂತ್ರದಲ್ಲಿ ಓಂಕಾರನೆಂಬ ಮೂರ್ತಿಯಾದನಯ್ಯ. ಆ ಓಂಕಾರನೆಂಬ ಮೂರ್ತಿಂಗೆ ಚಿಚ್ಫಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಪರಶಿವನಾದ. ಆ ಪರಮಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಸದಾಶಿವನಾದ, ಆ ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಈಶ್ವರನಾದ, ಆ ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ರುದ್ರನಾದ, ಆ ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ವಿಷ್ಣುವಾದ, ಆ ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಬ್ರಹ್ಮನಾದ, ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ನರಲೋಕಾದಿ ಲೋಕಂಗಳು ಆದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾನೆಂಬ ನಾದಗಳು ಇಲ್ಲದಂದು, ನೀನೆಂಬ ನಿನಾದಗಳಿಲ್ಲದಂದು, ತಾನು ತಾನೆಂಬ ಅವಸ್ಥೆಗಳು ಇಲ್ಲದಂದು, ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿರ್ದೆಯಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಕಲ್ಪಿತ ಲಿಂಗವು ಕಲ್ಪಿತಕ್ಕೆ ಬಂದು ತ್ರಿವಿಧಭೇದದಿಂದನ್ಯವಿಲ್ಲೆನಿಸಿ, ತ್ರಿಗುಣವೆಂಬ ತ್ರಿಪಾದಮಯನಾಗಿ ತ್ರಿಪಾದದಲ್ಲಿ ಹೊಂದದೆ ತ್ರಿವಿಧಕ್ಕತೀತವಾಗಿಹುದೆಂಬುದಕ್ಕೆ ಶ್ರುತಿ: `ತ್ರಿಪಾದಸ್ಯಾಮೃತಂ ದಿವಿ ತ್ರಿಪಾದೂಧ್ರ್ವಮಕಲ್ಪಯೇತ್ ಎಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗವು ಕಲ್ಪಿತಕ್ಕೆ ಅತ್ತತ್ತಲೆ.
--------------
ಆದಯ್ಯ
ರೇಚಕ ಪೂರಕಂಗಳಿಲ್ಲದಂದು, ನೋಟ ಬೇಟಂಗಳಿಲ್ಲದಂದು, ಮಾಟ ಕೂಟಂಗಳಿಲ್ಲದಂದು, ಶಬ್ದ ನಿಃಶಬ್ದಂಗಳಿಲ್ಲದಂದು, ಭಾವ ನಿರ್ಭಾವಗಳಿಲ್ಲದಂದು, ತತ್ವ ಪರತತ್ವಂಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಸ್ವಯಂಭೂ ಅಖಂಡತೇಜೋಮಯ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಲಿಂಗಸಂಬಂಧವ ಗರ್ಭೀಕರಿಸಿಕೊಂಡು ಜೀವಾತ್ಮ ಅಂತರಾತ್ಮ ಪರಮಾತ್ಮವೆಂಬ ಭೇದವನರಿತು ಅತ್ತತ್ತಲೆ ನಿಶ್ಚಿಂತ ನಿರಾಕುಳಲಿಂಗದಲ್ಲಿ ನಿರ್ವಿಕಾರನಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿ ಅನಾದಿಗಳಿಲ್ಲದಂದು, ಸುರಾಳ ನಿರಾಳಗಳಿಲ್ಲದಂದು, ಶೂನ್ಯ ನಿಃಶೂನ್ಯಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ನಾಮರೂಪಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಅಪರಂಪರ ನಿಷ್ಕಲಲಿಂಗ ತಾನೇ ನೋಡಾ! ಆ ಲಿಂಗದ ಚಿದ್ವಿಲಾಸದಿಂದ ಉದಯವಾದ ಜಂಗಮಕ್ಕೆ ಆದಿ ಅನಾದಿಯೆ ಹಾವುಗೆ, ಶುದ್ಧಸಿದ್ಧವೆ ಪಾದದ ಜಂಗು, ಪ್ರಸಿದ್ಧವೆ ಗಮನ, ಮನೋಹರವೆ ಕಟಿ, ಸದಾಸನ್ನಹಿತವೆ ಕೌಪ, ನಿಶ್ಚಿಂತವೆ ಯೋಗವಟ್ಟಿಗೆ, ನಿರಾಕುಳವೆ ಜೋಳಿಗೆ, ನಿರ್ಭರಿತವೆ ದಂಡಕೋಲು, ಅಖಿಳಕೋಟಿ ಬ್ರಹ್ಮಾಂಡವೆ ಬಟ್ಟಲು, ಪರಮಶಾಂತಿಯೆ ವಿಭೂತಿ, ನಿರಂಜನವೇ ರುದ್ರಾಕ್ಷಿ, ಸುರಾಳ ನಿರಾಳವೆ ಕರ್ಣಕುಂಡಲ, ನಿಃಶೂನ್ಯವೆ ಕರಪಾತ್ರೆ, ನಿರಪೇಕ್ಷವೇ ಭಿಕ್ಷ, ನಿರವಯವೆಂಬ ಮಠದಲ್ಲಿ ನಟಿಸಿಪ್ಪ ಜಂಗಮಕೆ ಓಂ ನಮಃ ಓಂ ನಮಃ ಓಂ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದ ಬೆಳಗಿನೊಳು ಸದಮಲಜ್ಞಾನವನರಿತು, ನಿತ್ಯವಿಡಿದು, ಆನಂದಪ್ರಭೆಯೊಳು ಕೂಡಿ, ಚಿತ್ತದಿಂದ ಸ್ವಾನುಭವದೊಳು ಮೈಮರೆದು ಅತ್ತತ್ತಲೆ ಘನಕ್ಕೆ ಘನವನಾಚರಿಸಿ ನಿರ್ಮುಕ್ತನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವಸ್ತು ವಸ್ತುವೆಂದು ಹೆಸರಿಟ್ಟು ನುಡಿವ ಅಣ್ಣಗಳು ನೀವು ಕೇಳಿರಯ್ಯ. ಆ ವಸ್ತುವು ಪೃಥ್ವಿಯೆಂತೆಂಬೆನೆ ? ಪೃಥ್ವಿಯಂತಲ್ಲ ಕಾಣಿರಯ್ಯ. ಅಪ್ಪುವಿನಂತೆಂಬೆನೆ ? ಅಪ್ಪುವಿನಂತಲ್ಲ ಕಾಣಿರಯ್ಯ. ತೇಜದಂತೆಂಬೆನೆ ? ತೇಜದಂತಲ್ಲ ಕಾಣಿರಯ್ಯ. ವಾಯುವಿನಂತೆಂಬೆನೆ ? ವಾಯುವಿನಂತಲ್ಲ ಕಾಣಿರಯ್ಯ. ಆಕಾಶದಂತೆಂಬೆನೆ ? ಆಕಾಶದಂತಲ್ಲ ಕಾಣಿರಯ್ಯ. ಆತ್ಮನಂತೆಂಬೆನೆ ? ಆತ್ಮನಂತಲ್ಲ ಕಾಣಿರಯ್ಯ. ನಾದಬಿಂದುಕಲೆಯಿಲ್ಲದ ಮುನ್ನ ಅತ್ತತ್ತಲೆ ನಿರಾಲಂಬಲಿಂಗವುಂಟು. ಆ ಲಿಂಗದಲ್ಲಿ ತನ್ನ ನೆನವನಡಗಿಸಿ ಮುಂದೆ ಕಾಣಬಲ್ಲಾತನೆ ನಿಮ್ಮ ಪರಮ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರು ಲಿಂಗ ಜಂಗಮವಿಲ್ಲದಂದು, ಪಾದೋದಕ ಪ್ರಸಾದವಿಲ್ಲದಂದು, ವಿಭೂತಿ ರುದ್ರಾಕ್ಷಿಗಳಿಲ್ಲದಂದು, ಓಂ ನಮಃ ಶಿವಾಯವೆಂಬ ಮಂತ್ರಗಳಿಲ್ಲದಂದು, ಅತ್ತತ್ತಲೆ, ತಾನೇ ನಿಃಶೂನ್ಯನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ ವಿಷ್ಣು ಆದಿಗಳಿಲ್ಲದಂದು, ರುದ್ರ ಈಶ್ವರರು ಇಲ್ಲದಂದು, ಸದಾಶಿವ ಪರಶಿವರಿಲ್ಲದಂದು, ಅತ್ತತ್ತಲೆ, ತಾನೇ ನಿಃಶೂನ್ಯನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವಿಲ್ಲದಂದು, ತಾರಕಾಕೃತಿ ದಂಡಕಾಕೃತಿ ಕುಂಡಲಾಕೃತಿ ಅರ್ಧಚಂದ್ರಾಕೃತಿ ಬಿಂದ್ವಾಕೃತಿಯೆಂಬ ಪಂಚಕೃತಿಗಳಿಲ್ಲದಂದು, ಮನಜ್ಞಾನ ಸುಜ್ಞಾನ ಪರಮಜ್ಞಾನ ಮಹಾಜ್ಞಾನ ಸ್ವಯಜ್ಞಾನವೆಂಬ ಪಂಚಜ್ಞಾನವಿಲ್ಲದಂದು ಅತ್ತತ್ತಲೆ, ನಿಃಶೂನ್ಯ ನಿರಾಮಯ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಾತು-ಮಥನಗಳಿಲ್ಲದೆ, ಜಾತಿ-ಜನನವಿಲ್ಲದೆ, ಭ್ರಾಂತಿ-ಸೂತಕವಿಲ್ಲದೆ, ನೀತಿ-ನಿರ್ಮಲದಿಂದ ಸುಖಿಸಿ, ಅತ್ತತ್ತಲೆ ನಿಶ್ಚಿಂತ ನಿರಾಕುಳಲಿಂಗದಲ್ಲಿ ತಾನು ತಾನಾಗಿಪ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->